ಪೇಟೆಯಲ್ಲಿ ತೈಲ ದರ, ಡಾಲರ್‌ ಒತ್ತಡ

7

ಪೇಟೆಯಲ್ಲಿ ತೈಲ ದರ, ಡಾಲರ್‌ ಒತ್ತಡ

Published:
Updated:
Deccan Herald

ಷೇರುಪೇಟೆಯ ಸಂವೇದಿ ಸೂಚ್ಯಂಕವು ಹಿಂದಿನ ವಾರದಲ್ಲಿ ಸುಮಾರು 255 ಅಂಶ ಕುಸಿತಕ್ಕೊಳಗಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿರುವ ಕಚ್ಚಾ ತೈಲ ದರ ಮತ್ತು ಅಮೆರಿಕದ ಡಾಲರ್ ಬೆಲೆ ಪೇಟೆಗಳ ಮೇಲೆ ಒತ್ತಡ ಹೆಚ್ಚಿಸುತ್ತಿವೆ. ಪೆಟ್ರೋಲ್ ಬೆಲೆ ಕೆಲವು ನಗರಗಳಲ್ಲಿ ₹90 ರ ಸಮೀಪಕ್ಕೆ ತಲುಪಿರುವುದು ಆತಂಕಕಾರಿ ಸಂಗತಿಯಾಗಿದೆ. ಆದರೂ ಸಹ ಷೇರುಪೇಟೆಯಲ್ಲಿ ತೈಲ ಮಾರಾಟ ಸಂಸ್ಥೆಗಳ ಷೇರಿನ ಬೆಲೆಗಳು ಶುಕ್ರವಾರ ಅಲ್ಪ ಚೇತರಿಕೆ ಕಂಡಿವೆ.

ಎಲ್ ಆ್ಯಂಡ್‌ ಟಿ ಇನ್ಫೊಟೆಕ್‌ ಕಂಪನಿಯ ಆಫರ್ ಫಾರ್ ಸೇಲ್ ಪ್ರಕ್ರಿಯೆಗೆ ಉತ್ತಮ ಸ್ಪಂದನ ದೊರೆತಿದ್ದು, ಅದು ಮೂರು ಪಟ್ಟು ಹೆಚ್ಚಿನ ಬೇಡಿಕೆ ಪ್ರದರ್ಶಿಸಿದೆ. ಹೀಗಾಗಿ ವಿತರಣೆಯ ಕನಿಷ್ಠ ಬೆಲೆ ₹1,700 ಎಂದು ಪ್ರಕಟಿಸಿದ್ದರು ಸಹ ಬೇಡಿಕೆ ಹೆಚ್ಚಿದ್ದರಿಂದ ₹1,751 ಕ್ಕೆ ನಿಗದಿ ಪಡಿಸಿ ವಿತರಿಸಲಾಗಿದೆ.  ಈ ಬೆಳವಣಿಗೆಯು ಷೇರಿನ ಬೆಲೆಯನ್ನು ₹1,730 ರ ಸಮೀಪದಿಂದ ₹1,985 ರವರೆಗೂ ಏರಿಕೆ ಕಾಣುವಂತೆ ಮಾಡಿ ₹1,963 ರ ಸಮೀಪ ವಾರಾಂತ್ಯ ಕಂಡಿತು.

ಬಾಲಕೃಷ್ಣ ಇಂಡಸ್ಟ್ರೀಸ್ ಕಂಪನಿ ಷೇರಿನ ಬೆಲೆ ಕಳೆದ ಒಂದು ವಾರದಲ್ಲಿ ತೀವ್ರ ಕುಸಿತ ಕಂಡಿತು. ಕಂಪನಿಯ ಸಾಧನೆ ಉತ್ತಮವಾಗಿದ್ದರೂ  ₹1,360  ರ ಸಮೀಪದಿಂದ ₹1,117ರ ವರೆಗೂ ಏಕಮುಖವಾಗಿ ಹೆಚ್ಚಿನ ಮಾರಾಟದ ಒತ್ತಡದಿಂದ ಕುಸಿಯಿತು. ಈ ಒತ್ತಡಕ್ಕೆ ಕಾರಣ,  ಕಂಪನಿಯ ಚಟುವಟಿಕೆ ಅಭಿವೃದ್ಧಿ ಪಡಿಸುವ ಯೋಜನೆಯು ಪ್ರೋತ್ಸಾಹದಾಯಕವಲ್ಲ ಎಂಬ ಎಚ್‌ಎಸ್‌ಬಿಸಿ ಸಂಸ್ಥೆಯ ಕೆಳದರ್ಜೆಯ ರೇಟಿಂಗ್ ಆಗಿದೆ. ಈ ಕಂಪನಿಯ ಷೇರಿನ ಬೆಲೆಯು ಹಿಂದಿನ ಮಾರ್ಚ್ ತಿಂಗಳಲ್ಲಿ ₹1,002 ರಲ್ಲಿದ್ದು ಆಗಸ್ಟ್ ಅಂತ್ಯದಲ್ಲಿ ₹1,467 ರ ವಾರ್ಷಿಕ ಗರಿಷ್ಠ ತಲುಪಿತ್ತು. 

ಕಂಪನಿಯ ಸಾಧನೆಯು ಉತ್ತಮವಾಗಿದ್ದು ಷೇರಿನ ಬೆಲೆ ಹೆಚ್ಚಾಗಿದ್ದ ಕಾರಣ ಎಫ್‌ಐಐಗಳು ಸುಮಾರು  ಶೇ 1.87 ರ ಭಾಗಿತ್ವದ ಷೇರುಗಳನ್ನು ಮಾರಾಟ ಮಾಡಿವೆ. ಷೇರಿನ ಬೆಲೆ ಗರಿಷ್ಠಕ್ಕೆ ತಲುಪಿದಾಗ ಕೆಳದರ್ಜೆಯ ರೇಟಿಂಗ್ ನೀಡಲಾಗಿರುವುದು ಗಮನಿಸಬೇಕಾದ ಅಂಶ.  ಕೇವಲ ನಾಲ್ಕೈದು ದಿನಗಳಲ್ಲಿ ಸುಮಾರು ₹250 ರಷ್ಟು ಕುಸಿತಕ್ಕೊಳಗಾಗಿರುವುದು ಉತ್ತಮ ವ್ಯಾಲ್ಯೂ ಪಿಕ್‌ಗೆ ಅವಕಾಶ ಎಂಬುದನ್ನು ಶುಕ್ರವಾರ ಈ ಷೇರಿನ ಬೆಲೆ ₹1,200 ಕ್ಕೆ ಪುಟಿದೆದ್ದಿರುವುದು ಸಾಬೀತುಪಡಿಸಿದೆ.

ಷೇರುಪೇಟೆಯಲ್ಲಿ ಚಿಂತನೆಗಳು, ವಿಶ್ಲೇಷಣೆಗಳು ಬಹಳ ಬೇಗ ಬದಲಾಗುತ್ತವೆ. ಅದಕ್ಕನುಗುಣವಾಗಿ ಷೇರಿನ ಬೆಲೆಗಳಲ್ಲಿ ಏರಿಳಿತವಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಸರ್ಕಾರಿ ವಲಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್. ಈ ಕಂಪನಿಯು ಈ ವರ್ಷದ ಫೆಬ್ರವರಿಯಲ್ಲಿ ಎರಡು ಕೋಟಿಯಷ್ಟು ಷೇರುಗಳನ್ನು ಪ್ರತಿ ಷೇರಿಗೆ ₹182.50 ರಂತೆ ಬೈಬ್ಯಾಕ್  ಮಾಡಿದೆ. ಅಂದರೆ ಆ ಮಟ್ಟದ ಮೀಸಲು ನಿಧಿ ಹೊಂದಿತ್ತು. ತದನಂತರದಲ್ಲಿ ಷೇರಿನ ಬೆಲೆ ಏಕಮುಖವಾಗಿ ಇಳಿಯುತ್ತಿದೆ. ಹಿಂದಿನ ಬುಧವಾರ ಷೇರಿನ ಬೆಲೆ ₹ 89 ರ ಸಮೀಪಕ್ಕೆ, ವಾರ್ಷಿಕ ಕನಿಷ್ಠಕ್ಕೆ  ಕುಸಿದಿದೆ.

ಈ ಕಂಪನಿಯು ಹಿಂದಿನ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ಮಾಡಿದೆ. ಆದರೂ ಕಂಪನಿಯ ರಕ್ಷಣಾ ವಲಯದ ಯೋಜನೆಗಳಿಗೆ ನೀಡುತ್ತಿದ್ದ  ಲಾಭದ ಅಂಶವನ್ನು ಕಡಿತಗೊಳಿಸಲಾದ ಕಾರಣ ಮತ್ತು ಕಂಪನಿಯಲ್ಲಿ ಬಂಡವಾಳ ಹಿಂತೆಗೆತದ ಯೋಜನೆಯು ಪರಿಶೀಲನೆಯಲ್ಲಿರುವ ಅಂಶವು ಷೇರಿನ ಬೆಲೆಯಲ್ಲಿ ಭಾರಿ ಕುಸಿತ ಕಾಣುವಂತೆ ಮಾಡಿದೆ. ಷೇರಿನ ಬೆಲೆ ವಾರ್ಷಿಕ ಕನಿಷ್ಠದಲ್ಲಿರುವಾಗ ನಕಾರಾತ್ಮಕ ಅಂಶಗಳು ಹೊರಬಂದಿರುವುದು, ದೀರ್ಘಕಾಲಿಕ ಹೂಡಿಕೆಗೆ ಉತ್ತಮ ಅವಕಾಶವೆನ್ನಬಹುದು.

ಇತ್ತೀಚಿಗೆ ಫಾರ್ಮಾ ವಲಯದ ಕಂಪನಿ ಕ್ಯಾಡಿಲ್ಲ ಹೆಲ್ತ್ ಕೇರ್, ವಿಂಡ್ಲಾಸ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಶೇ 51 ರಷ್ಟು ಭಾಗಿತ್ವವನ್ನು ಪಡೆದುಕೊಳ್ಳುವ ಸುದ್ದಿಯಿಂದ ಷೇರಿನ ಬೆಲೆ ವಾರ್ಷಿಕ ಕನಿಷ್ಠಕ್ಕೆ ಕುಸಿಯುವಂತೆ ಮಾಡಿತು. ಅಲ್ಲಿಂದ ಷೇರಿನ ಬೆಲೆ ಕೆಲವೇ ದಿನಗಳಲ್ಲಿ ₹430 ರ ಸಮೀಪಕ್ಕೆ ಚೇತರಿಕೆ ಕಂಡಿದೆ.  ಆದರೆ, ಷೇರಿನ ಬೆಲೆ ಕುಸಿತ ಕಂಡಿದ್ದಂತಹ ಅರವಿಂದೊ ಫಾರ್ಮಾ ಕಂಪನಿ ನೊವಾರ್ಟಿಸ್ ಕಂಪನಿಯ ಸ್ಯಾಂಡೋಜ್ ಘಟಕದೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಂಡ ಸುದ್ದಿಯು ಷೇರಿನ ಬೆಲೆಯನ್ನು ₹674 ರ ಸಮೀಪದಿಂದ ₹826 ರ ವಾರ್ಷಿಕ ಗರಿಷ್ಠಕ್ಕೆ ಹೆಚ್ಚಿಸಿದೆ. ಅಂದರೆ ಷೇರುಪೇಟೆಯ ಚಟುವಟಿಕೆಯಲ್ಲಿ  ಏರಿಳಿತಗಳಿಗೆ ನಿಖರವಾದ ಸರಳವಾದ ಸಮೀಕರಣವಿಲ್ಲ. ಸಂದರ್ಭಾನುಸಾರ ಲಾಭದ ನಗದೀಕರಣ, ಮೌಲ್ಯಾಧಾರಿತ ಖರೀದಿ ಪದ್ಧತಿ ಮಾತ್ರ ಹೂಡಿಕೆಯನ್ನು ಅಲ್ಪ ಮಟ್ಟಿನ ಸುರಕ್ಷತೆಯೊಂದಿಗೆ ಬೆಳೆಸಲು ಸಹಕಾರಿಯಾಗುವುದು ಖಾತ್ರಿಯಾಗಿದೆ.

ಹೊಸ ಷೇರು: ಇರ್ಕಾನ್ ಇಂಟರ್ ನ್ಯಾಷನಲ್ ಲಿಮಿಟೆಡ್ ಇದೇ 17 ರಿಂದ 19 ರವರೆಗೂ ಆರಂಭಿಕ ಷೇರು ವಿತರಣೆ ಮೂಲಕ ಸಾರ್ವಜನಿಕರಿಗೆ ಮಾರಾಟಮಾಡಲಿದೆ.

ಪ್ರತಿ ಷೇರಿಗೆ ₹470 ರಿಂದ ₹475 ರಂತಿದ್ದು,  30 ಮತ್ತು ಅದರ ಗುಣಕಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ರಿಟೇಲ್ ಷೇರುದಾರರಿಗೆ ಮತ್ತು ನೌಕರರಿಗೆ ಪ್ರತಿ ಷೇರಿಗೆ ₹10 ರ ರಿಯಾಯ್ತಿ ಪ್ರಕಟಿಸಲಾಗಿದೆ.

ಬೋನಸ್ ಷೇರು: ಗ್ಲ್ಯಾಕ್ಸೊ ಸ್ಮಿತ್ ಕ್ಲೈನ್ ಫಾರ್ಮಾಸುಟಿಕಲ್ಸ್‌ ಲಿ ಕಂಪನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 13 ನಿಗದಿತ ದಿನ.

ಗೋದ್ರೇಜ್‌ ಕನ್ಸೂಮರ್ ಪ್ರಾಡಕ್ಟ್ಸ್ ಕಂಪನಿ ವಿತರಿಸಲಿರುವ 1:2 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 14 ನಿಗದಿತ ದಿನ. ಮದರ್ಸನ್ ಸುಮಿ  ಸಿಸ್ಟಮ್ಸ್ ಲಿಮಿಟೆಡ್ ಕಂಪನಿ 1:2 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಅಲ್ಪೇನ್ ಹೌಸಿಂಗ್ ಆ್ಯಂಡ್ ಡೆವಲಪ್‌ಮೆಂಟ್‌  ಕಾರ್ಪೊರೇಷನ್ ಲಿಮಿಟೆಡ್  1:3  ರ ಅನುಪಾತದ ಬೋನಸ್ ಪ್ರಕಟಿಸಿದೆ.

ವಿಭಾಗ ಬೇರ್ಪಡಿಸುವಿಕೆ: ಅದಾನಿ ಎಂಟರ್‌ ಪ್ರೈಸಸ್ ಕಂಪನಿಯ ಅನಿಲ ಸಂಗ್ರಹಣೆ ಮತ್ತು ವಿತರಣೆಯನ್ನು 1:1 ರ ಅನುಪಾತದಲ್ಲಿ  ಬೇರ್ಪಡಿಸಿ ಅದಾನಿ ಗ್ಯಾಸ್ ಲಿಮಿಟೆಡ್  ಹೆಸರಿನಲ್ಲಿ ಕಾರ್ಯ ನಿರ್ವಹಿಸಲು ಸೆಪ್ಟೆಂಬರ್‌ 7 ನಿಗದಿತ ದಿನವಾಗಿತ್ತು. 

ಮರು ಖರೀದಿ: ಟಿಸಿಎಸ್ ಕಂಪನಿ ತನ್ನ ₹1 ರ ಮುಖಬೆಲೆ ಷೇರುಗಳನ್ನು ಪ್ರತಿ ಷೇರಿಗೆ ₹2 ಸಾವಿರದಂತೆ ಮರು ಖರೀದಿ ಯೋಜನೆ ಈ ತಿಂಗಳ 6 ರಿಂದ  ಆರಂಭವಾಗಿದೆ.

ಈ ಯೋಜನೆ ಈ ತಿಂಗಳ 21 ರವರೆಗೂ ತೆರೆದಿದ್ದು, ವಿನಿಮಯ ಕೇಂದ್ರಗಳ ಮೂಲಕ ಷೇರು ಮರುಖರೀದಿ ಮಾಡಲಾಗುವುದು. ಜೆ ಬಿ ಕೆಮಿಕಲ್ಸ್ ಆ್ಯಂಡ್‌ ಫಾರ್ಮಾಸೂಟಿಕಲ್ಸ್‌ ಲಿಮಿಟೆಡ್‌ ಪ್ರತಿ ಷೇರಿಗೆ ₹390 ರವರೆಗೂ ಮರುಖರೀದಿಸಲು ಈ ತಿಂಗಳ 12 ನಿಗದಿತ ದಿನ.

(ಮೊ:9886313380, ಸಂಜೆ 4.30 ರನಂತರ)

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !