ಗುರುವಾರ , ಜೂನ್ 30, 2022
22 °C

ಜಾತಿ ಮತ, ದೇಶಕಾಲ ಮೀರಿದ ಲೈಂಗಿಕ ರಾಜಕೀಯ

ರೇಣುಕಾ ನಿಡಗುಂದಿ Updated:

ಅಕ್ಷರ ಗಾತ್ರ : | |

ಶಾಜೋಳನ್ನು ಕಂಡಾಗೆಲ್ಲ ‘ಬಾಳೆಲೆಯ ಹಾಸುಂಡು ಬೀಸಿ ಒಗೆದ’ ಗಂಡಸು ನೆನಪಾಗಿ ಮೈಯುರಿಯುತ್ತದೆ. ಧರ್ಮಕಾರಣಕ್ಕೂ ರಾಜಕಾರಣಕ್ಕೂ ಹೆಣ್ಣೇ ಬಲಿಪಶು. ಇತರ ಗಂಡಸರಂತೆ ಶಾಜೋಳ ಪತಿಯೂ ಒಂದು ದಿನ ತಲಾಖ್ ಹೇಳಿ ಅವಳನ್ನು ನಡುನೀರಲ್ಲೇ ಕೈಬಿಟ್ಟ. ಇತರ ಹೆಂಗಸರಂತೆ ಅತಂತ್ರಳಾದ ಶಾಜೋ, ಮಕ್ಕಳೊಂದಿಗೆ ತವರಿಗೆ ಮರಳಿದಳು. ತಂದೆ ತಾಯಿಯ ಮಾತಿಗೆ ಕೌಲೆತ್ತಿನಂತೆ ಹೂಗುಟ್ಟಿ ಆತ ಇನ್ನೊಂದು ಮದುವೆಯನ್ನೂ ಮಾಡಿಕೊಂಡ.

ಜೀವನಾಂಶ, ಕಾನೂನು... ಯಾವುದೂ ಗೊತ್ತಿರದ ಆಕೆ ತವರಿನಲ್ಲಿ ಒಂದೆರಡು ವರ್ಷಗಳನ್ನು ಹೇಗೋ ಕಳೆದಳು. ಕಷ್ಟ ಸುಖಕ್ಕೆ ತಾಯಿಯೂ ಇಲ್ಲ. ಬಡವ, ವೃದ್ಧನಾದ ತಂದೆಗೆ ತಾನೊಂದು ಹೊರೆಯಾಗಿರಬಾರದು ಎಂದುಕೊಂಡ ಶಾಜೋ, ಪುಟ್ಟ ಮಗನನ್ನೆತ್ತಿಕೊಂಡು ದುಡಿದಾದರೂ ಬದುಕಬಹುದೆಂದು ಶಹರಕ್ಕೆ ಬಂದಳು. ಬಂಗಾಲದ ತನ್ನ ಹಳ್ಳಿಯಿಂದ ಬಹುದೂರ ಸಾಗಿಬರುವಾಗ ಎಷ್ಟು ತಾಕಲಾಟವಿತ್ತೋ! ಇಲ್ಲಿ ಅವಳ ಅರ್ಧ ಊರೇ ನೆಲೆಸಿದೆ, ಹಾಗಾಗಿ ಕೆಲಸ ಸಿಗಲು ಹೆಚ್ಚು ಕಷ್ಟವಾಗಲಿಲ್ಲ. ಹರಕು ಪರಕು ಹಿಂದಿಯನ್ನೂ ಕಲಿತಳು. ಬದುಕು ಹೇಗೋ ಸಹ್ಯವಾಗತೊಡಗಿದಾಗ ತಲಾಖ್ ಕೊಟ್ಟ ಪತಿ, ‘ನನಗೆ ನೀನೇ ಬೇಕು, ನಿನ್ನ ಮೇಲೆಯೇ ಪ್ರೇಮವುಂಟು’ ಎಂದು ಕಟ್ಟಿಕೊಂಡ ಆ ಇನ್ನೊಬ್ಬಳನ್ನೂ, ಹುಟ್ಟಿಸಿದ್ದ ಹೆಣ್ಣುಮಗುವನ್ನೂ ಬಿಟ್ಟು ಈಗ ಇಲ್ಲಿ ಇವಳೊಡನೆ ವಾಸಿಸುತ್ತಿದ್ದಾನೆ.

ಹದೀಸ್‌ ಪ್ರಕಾರ, ತಲಾಖ್ ಕೊಟ್ಟ ಹೆಂಡತಿಯೊಡನೆ ಮತ್ತೆ ಒಟ್ಟಾಗಿ ಬಾಳಬೇಕು ಎಂದಲ್ಲಿ ಆಕೆ ಇನ್ನೊಬ್ಬ ವ್ಯಕ್ತಿಯ ಜೊತೆ ಮದುವೆಯಾಗಿ, ದೇಹ ಸಂಪರ್ಕ ಹೊಂದಬೇಕು (ನಿಖಾಹ್ ಹಲಾಲ). ಆನಂತರ ಆತ ಇವಳಿಗೆ ತಲಾಖ್ ಹೇಳಿ ತ್ಯಜಿಸಿದಾಗ ಮಾತ್ರ ಆಕೆ ಮೊದಲಿನ ಪತಿಯೊಡನೆ ನಿಖಾಹ್ ಮಾಡಿಕೊಳ್ಳಬಹುದು. ಇದೆಂಥ ಪದ್ಧತಿ? ಹೆಣ್ಣಿಗೆ ಏನೆಲ್ಲ ನಿರ್ಬಂಧಗಳು. ಗಂಡಸಿಗೆ ಖುಲ್ಲಾ ಮೈದಾನ್… ಹೆಣ್ಣಿಗೆ ಸಂಕೋಲೆಗಳ ಸರಮಾಲೆ.

ಈಗವಳು ಅವನ ಪತ್ನಿಯಲ್ಲದ ಪತ್ನಿ. ಅವನು ಪತಿಯಲ್ಲದ ಪತಿ. ಶಾಜೋ ತನ್ನ ಕತೆ ಹೇಳಿದಾಗ, ‘ತಲಾಖ್ ಹೇಳಿದರೂ ನೀನೇ ಬೇಕು ಅನ್ನುವ ಅವನಿಗೆ ಎಷ್ಟು ಪ್ರೀತಿಯಿರಬೇಕು’ ಎಂದಿದ್ದೆ ಭಾವುಕತನದಲ್ಲಿ. ವಾಸ್ತವದಲ್ಲಿ ಅವನಿಗೆ ಅವಳೊಂದು ಸೊತ್ತು, ಆಸ್ತಿ, ಫಿಕ್ಸೆಡ್ ಡೆಪಾಸಿಟ್, ತನಗೆ ಬೇಕಾದಂತೆ ಬಳಸಬಹುದೆಂದುಕೊಂಡ ಅವನೊಬ್ಬ ಮುಖೇಡಿ. ಅವಕಾಶವಾದಿ ಅಷ್ಟೆ!   

ತಲಾಖ್‌ ಕೊಟ್ಟವನೊಡನೆ ಇರಲು ಅವಳ ಸ್ವಾಭಿಮಾನ ಹೆಡೆಯೆತ್ತಿ ಬುಸುಗುಡುತ್ತದೆ. ‘ನಾನೇ ಬೇಕಿದ್ದರೆ ತಲಾಖ್‌ ಯಾಕೆ ಹೇಳಿದ? ಆತ ಧರ್ಮಬಾಹಿರವಾಗಿ ನನ್ನೊಡನಿರುವ ವಾಸನೆ ಬಡಿದರೂ ಸಾಕು, ಸಮಾಜ ನನಗೆ ಬಹಿಷ್ಕಾರ ಹಾಕುತ್ತದೆ. ಗಂಡಸು ತಲಾಖ್‌ ಹೇಳಬಹುದಾದರೆ ಹೆಣ್ಣಿಗೆ ಈ ಅವಕಾಶ ಯಾಕಿಲ್ಲ...?’ ಎಂದೆಲ್ಲ ಆಕೆ ನಿಷ್ಠುರವಾಗಿ ವರ್ತಿಸಲಾರಳು. ಒಬ್ಬಳೇ ದುಡಿದು ಬದುಕುವ ಛಲವಿದೆ. ಆದರೆ ನಿಖಾಹ್‌ ಹಲಾಲ ಅಂಥ ಅವಮಾನಕರ, ಹೇಯ ರಿವಾಜಿಗಿಂತ ಸಾಯುವುದೇ ಸುಖ ಎನ್ನುತ್ತಾಳೆ. ಹೀಗೆಯೇ ತಲಾಖ್ ಪಡೆದವಳೊಬ್ಬಳು ನಿಖಾಹ್ ಹಲಾಲದಂತೆ ಮತ್ತೊಬ್ಬನನ್ನು ಮದುವೆಯಾದಳು. ಮೊದಲ ಪತಿಯು ‘ಇನ್ನು ತಲಾಖ್ ಕೊಡು’ ಎಂದು ಆತನನ್ನು ಒತ್ತಾಯಿಸಿದಾಗ ಆತ– ‘ಯಾಕೆ ತಲಾಖ್‌ ಕೊಡಲಿ? ನನಗೆ ಅವಳಿಷ್ಟ... ಅವಳೊಡನೆಯೇ ಇರ್ತೀನಿ. ಹೋಗು’ ಅಂದನಂತೆ. ನಿಖಾಹ್ ಹಲಾಲ್‌ ಅನ್ನೇ ಹಣ ಗಳಿಕೆಯ ದಂಧೆಯನ್ನಾಗಿಸಿಕೊಂಡ ಮೌಲ್ವಿ, ಇಮಾಮ್‍ರ ಕುಕೃತ್ಯವನ್ನು ಕಳೆದ ವರ್ಷ ‘ಇಂಡಿಯಾ ಟುಡೇ’ ಬಯಲು ಮಾಡಿತ್ತು. ದೆಹಲಿಯ ಜಾಮಿಯಾ ನಗರ, ಉತ್ತರಪ್ರದೇಶದ ಹಾಪುರ್, ಬುಲಂದ ಶಹರಿನ ಕೆಲ ಇಮಾಮರು ಒಂದು ರಾತ್ರಿಯ ದೇಹ ಸಂಪರ್ಕಕ್ಕಾಗಿ ಇಪ್ಪತ್ತು ಸಾವಿರ ರೂಪಾಯಿಯಿಂದ ಲಕ್ಷದ ರಕಮಿನವರೆಗೆ ಬೇಡಿಕೆ ಒಡ್ಡುತ್ತಿದ್ದರಂತೆ. ರಾತ್ರಿ ಕಳೆದು ಮರುದಿನ ತಾವೇ ಮೊದಲ ಪತಿಯೊಡನೆ ನಿಖಾಹ್ ನಾಮಾ ಓದಿಸುತ್ತಿದ್ದರಂತೆ. ಎಲ್ಲದರಲ್ಲೂ ದೈಹಿಕವಾಗಿ, ಮಾನಸಿಕವಾಗಿ ಗಾಸಿಗೊಳ್ಳುವವಳು ಹೆಣ್ಣೇ! ತ್ರಿವಳಿ ತಲಾಖ್ ಪದ್ಧತಿ ಅಸಿಂಧು, ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ನಿಖಾಹ್ ಹಲಾಲ, ಬಹುಪತ್ನಿತ್ವದ ಸಂಕೀರ್ಣತೆ, ಬಗೆಹರಿಯದ ತಕರಾರುಗಳಿನ್ನೂ ಇವೆ.

ಇದೊಂದು ಆತ್ಮವಿಲ್ಲದ ಮಾಯಾನಗರ. ಬೇನಾಮಿ, ಅನಾಮಿಕರ ಊರು. ಇಲ್ಲಿ ಏನು ಮಾಡಿದರೂ ಕೇಳುವವರಿಲ್ಲ. ಕಾನೂನಿಯ ಭಯ ಮೊದಲೇ ಇಲ್ಲ. ಅಪರಾಧ, ಅತ್ಯಾಚಾರಗಳಿಗೆ ಕೊನೆಮೊದಲಿಲ್ಲ. ಇದು ಮುಸ್ಲಿಂ ಸಮುದಾಯದ ಮಹಿಳೆಯ ಕಥೆಯೊಂದೇ ಅಲ್ಲ. ಉತ್ತರಪ್ರದೇಶದಲ್ಲಿ ಜೂಜಿಗೆ ತಮ್ಮ ಹೆಂಡಂದಿರನ್ನು ಒಡ್ಡುವ ಭೂಪರೂ ಇದ್ದಾರೆ. ಹೆಣ್ಣುಗಳನ್ನು ಸರಕಿನಂತೆ ಮಾರುವವರೂ ಇದ್ದಾರೆ. ತಂದೆಯಿಂದಲೇ ಬಲಾತ್ಕಾರಕ್ಕೆ ಒಳಗಾಗಿ, ಗರ್ಭ ಹೊತ್ತು ನರಕ ಅನುಭವಿಸಿದ ಬಾಲೆ ನೆನಪಾಗುತ್ತಾಳೆ. ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ ತವರಿಗೆ ಅಟ್ಟುವವರಿದ್ದಾರೆ. ತಲಾಖ್‌ ಕೊಟ್ಟವರಿದ್ದಾರೆ, ಆರು ತಿಂಗಳ ಮಗು, ಐದು ವರ್ಷದ ಪೋರಿ, ಎಂಬತ್ತರ ವೃದ್ಧೆ... ಯಾರನ್ನೂ ಬಿಟ್ಟಿಲ್ಲ ದುರುಳರು.

ಮೊನ್ನೆ ರಾಜಸ್ಥಾನದ ಬೂಂದಿ ಎಂಬ ಹಳ್ಳಿಯಲ್ಲಿ ಐದು ವರ್ಷದ ಪೋರಿಯ ಕೈಯಿಂದ ಹಕ್ಕಿಯ ಮೊಟ್ಟೆ ಒಡೆದುಹೋಯಿತೆಂಬುದೇ ಅಪರಾಧವಾಗಿ, ಅಲ್ಲಿನ ಖಾಪ್ ಪಂಚಾಯತ್ ಹತ್ತುದಿನ ಕಂದಮ್ಮನನ್ನು ಮನೆಯಿಂದ ಹೊರಗಿಡುವ ಶಿಕ್ಷೆ ನೀಡಿತು. ಖಾಪ್ ಶಾಪಕ್ಕೆ ಹಡೆದವರೂ ಅಸಹಾಯಕರು. ಮನೆಯೊಳಗೆ ಬರುವಂತಿಲ್ಲ ಆ ಪೋರಿ. ಮರದಡಿ ಕೂತಲ್ಲೇ ಆಹಾರ ಕೊಡುತ್ತಿದ್ದರಂತೆ. ಹಕ್ಕಿಯ ಮೊಟ್ಟೆ ಒಡೆದರೆ ಅಶುಭವಂತೆ! ಏನೂ ಅರಿಯದ ಮಗುವನ್ನು ಕ್ರೂರವಾಗಿ ಶಿಕ್ಷಿಸಲು ಯಾವ ಶಾಸ್ತ್ರ ಹೇಳುತ್ತದೆ? ಈಗ ಆ ಪೋರಿಯ ಬಸುರಿ ತಾಯಿಯ ಹೆರಿಗೆಗೆ ಯಾರೂ ಸಹಾಯ ಮಾಡಬಾರದೆಂದು ಕಟ್ಟಾಜ್ಞೆ ಹೊರಡಿಸಿದೆ ಖಾಪ್. ಮನುಷ್ಯರಾ ಇವರು?

ಮಹಿಳೆ ಮತ್ತು ಮಕ್ಕಳ ಹಕ್ಕು ಉಲ್ಲಂಘನೆ, ದೇಹದ ಉಲ್ಲಂಘನೆಯು ಜಾತಿ- ಧರ್ಮ ಮತ್ತು ಮರ್ಯಾದೆಯ ಹೆಸರಿನಲ್ಲಿ ನಡೆಯುತ್ತಲೇ ಇದೆ. ಖಾಪ್ ಪಂಚಾಯತ್ ಎಂಬ ಸಂಸ್ಕೃತಿ ರಕ್ಷಕರು ಹೆಣ್ಣು ಸಂತತಿಯನ್ನೇ ಹುಟ್ಟದಂತೆ ನಿಯಂತ್ರಿಸಬಲ್ಲೆವು ಎಂದು ಅಟ್ಟಹಾಸಗೈಯುತ್ತಾರೆ. ‘ಅಂಗೈ ಹುಣ್ಣಿಗೆ ಕನ್ನಡಿ ಬೇಕೇ’ ಎನ್ನುವಂತೆ ಥಾಮ್ಸನ್ ರಾಯಿಟರ್ಸ್ ಫೌಂಡೇಶನ್, ಜಗತ್ತಿನಾದ್ಯಂತ ಮಹಿಳಾ ಸಮಸ್ಯೆಗಳ ಕುರಿತು 548 ತಜ್ಞರ ಗ್ರಹಿಕೆ ಸಮೀಕ್ಷೆಯ ಆಧಾರದ ಮೇಲೆ ಭಾರತವು ‘ಮಹಿಳೆಯರಿಗೆ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರ’ ಎಂದು ಉಲ್ಲೇಖಿಸಿತು.

ಆರೋಗ್ಯ, ತಾರತಮ್ಯ, ಹಿಂಸೆ, ಸಂಸ್ಕೃತಿ ಮತ್ತು ಧರ್ಮ, ಲೈಂಗಿಕ ಹಿಂಸಾಚಾರ ಮತ್ತು ಮಾನವ ಕಳ್ಳಸಾಗಣೆಗಳಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ. ಅಫ್ಗಾನಿಸ್ತಾನ, ಸಿರಿಯಾ, ಸೊಮಾಲಿಯಾ, ಸೌದಿ ಅರೇಬಿಯಾ ಮತ್ತು ಇತರ ದೇಶಗಳ ನಂತರ ಭಾರತವೇ ಅತ್ಯಂತ ಅಪಾಯಕಾರಿಯಾಗಿದೆ ಎಂಬುದಕ್ಕೆ ತೀವ್ರ ಪರ– ವಿರೋಧ ಪ್ರತಿಕ್ರಿಯೆಗಳು ಬಂದವು.  ‘ಬೇಟಿ ಬಚಾವೋ’ ಎನ್ನುವ ಐವತ್ತಾರಿಂಚಿನ ಸರ್ಕಾರ, ನಿತ್ಯವೂ ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ಹತ್ಯೆ, ಕಳ್ಳ ಸಾಗಾಣಿಕೆ, ದೌರ್ಜನ್ಯಕ್ಕೆ ಯಾಕೆ ಕುರುಡಾಗಿದೆ? ಗೋಮಾತೆಯ ತಂಟೆಗೆ ಬಂದವರ ಚರ್ಮ ಸುಲಿಯುವ ಮತಾಂಧರ ನಾಲಿಗೆಯೇಕೆ ಏಳುವುದಿಲ್ಲ ತಮ್ಮ ಸುತ್ತಲೇ ದಿನಕ್ಕೊಂದು ಹೆಣ್ಣುಜೀವ ಅತ್ಯಾಚಾರಕ್ಕೆ ಬಲಿಯಾಗುವಾಗ?

ಸ್ತ್ರೀವಾದಿ ಚಿಂತನೆಯಲ್ಲಿ ಹೊಸ ಅಲೆ ಉಂಟುಮಾಡಿದ ‘ಸೆಕೆಂಡ್ ಸೆಕ್ಸ್’ ಕೃತಿಕಾರ್ತಿ ಸಿಮೋನ್ ದ ಬುವಾಳ ಪ್ರಕಾರ, ‘ಹೆಣ್ಣು ಮೂಲತಃ ರೂಪಿಸಲ್ಪಟ್ಟವಳು. ಗಂಡಾಳಿಕೆಯ ಪ್ರಕ್ರಿಯೆಗಳಿಂದ ಹೆಣ್ಣು ‘ಆಗುತ್ತಾಳೆ’ಯೇ ಹೊರತು ಆಕೆ ‘ಹೆಣ್ಣಾಗಿಯೇ’ ಹುಟ್ಟುವುದಿಲ್ಲ. ಜೈವಿಕವಾಗಿ ಅವಳು ಪುರುಷನಿಗಿಂತ ಭಿನ್ನ ಹೌದು. ಆದರೆ, ಸಮಾಜ ಅವಳನ್ನು ‘ಹೆಣ್ಣಾಗಿ’ ರೂಪಿಸುತ್ತದೆ. ಹೆಣ್ತನದ ಹೆಣ್ಣಾಗಿ ಅಲ್ಲ. ಪುರುಷಪ್ರಧಾನ ಸಮಾಜ ಅವಳನ್ನು ಸ್ವತಂತ್ರ ವ್ಯಕ್ತಿಯನ್ನಾಗಿ ಕಂಡಿಲ್ಲ. ಸಮಾನಳಂತೂ ಮೊದಲೇ ಅಲ್ಲ. ಗಂಡಿಗೆ ಪೂರಕವಾಗಿ ತಾಯಿ, ಹೆಂಡತಿ, ಮಗಳು, ವೇಶ್ಯೆ... ಇತ್ಯಾದಿ ಪಾತ್ರಗಳಲ್ಲಿ ಅವಳನ್ನು ಗುರ್ತಿಸಿದೆಯೇ ಹೊರತು ಅವಳಿಗೂ ತನ್ನದೇ ಆದ ವ್ಯಕ್ತಿತ್ವವಿದೆ ಎಂಬಂತೆ ಯಾವ ದೇಶ, ಕಾಲದಲ್ಲೂ ಚಿಂತಿಸಿದಂತಿಲ್ಲ’ ಎಂದು ವಾದಿಸುತ್ತಾಳೆ. ಅಮೆರಿಕನ್ ಚಿಂತಕಿ ಕೇಟ್ ಮಿಲೆಟ್, ತನ್ನ ಲೈಂಗಿಕ ರಾಜಕೀಯ (Sexual Politics) ಎಂಬ ಕೃತಿಯಲ್ಲಿ ಹೀಗೆ ಹೇಳುತ್ತಾಳೆ; ‘ಒಂದು ಸಮುದಾಯವು ಮತ್ತೊಂದು ಸಮುದಾಯವನ್ನು ನಿಯಂತ್ರಿಸುವ, ಆಳುವ ಸಂಬಂಧಗಳನ್ನು ಹಾಗೂ ವ್ಯವಸ್ಥೆಗಳನ್ನು ನಾವು ರಾಜಕೀಯವೆನ್ನಬಹುದು’. ಬುವಾ ಹೇಳುವಂತೆ ಎಲ್ಲಿಯವರೆಗೆ ಗಂಡಾಳಿಕೆಯ ವೈಚಾರಿಕ ರಚನೆಗಳನ್ನು ಸ್ತ್ರೀ ನಿರಾಕರಿಸುವುದಿಲ್ಲವೋ ಅಲ್ಲಿಯವರೆಗೆ ಈ ನೆಲದ ಸ್ತ್ರೀ ಸಂಕುಲಕ್ಕೆ  ಸ್ವತಂತ್ರ ಬದುಕು ಸಾಧ್ಯವಿಲ್ಲ. ಹೆಣ್ಣು ದೇಹದ ಉಲ್ಲಂಘನೆ, ಆತ್ಮಬಲವನ್ನು ಮುರಿದುಹಾಕುವುದೇ ಪುರುಷಾಹಂಕಾರದ ವಿಕೃತಿ. ಶತಮಾನದ ಸಾಮಾಜಿಕ ದುರಂತ. ಸ್ತ್ರೀ ಸಮಾನತೆಯೆಂಬ ಹೆಳವನ ಹೆಗಲ ಮೇಲೆ ಗಂಡಾಳಿಕೆಯೆಂಬ ಕುರುಡ ಕೂತಿದ್ದಾನೆ; ದಾರಿ ಸಾಗುವುದೆಂತೊ ನೋಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.