ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಅಭಿವೃದ್ಧಿಯ ಪ್ರವಾದಿಯ ಮರೆಯದಿರೋಣ!

Last Updated 4 ಜುಲೈ 2018, 19:31 IST
ಅಕ್ಷರ ಗಾತ್ರ

ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಅವರ 97ನೇ ಜನ್ಮದಿನಾಚರಣೆ ಕಳೆದ ವಾರ ನಡೆಯಿತು. ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಅಂದು ಅವರಿಗೆ ಗೌರವ ಸಮರ್ಪಿಸಿದರು.

1991ರ ಆರ್ಥಿಕ ಬಿಕ್ಕಟ್ಟಿನಿಂದ ಭಾರತವನ್ನು ಪಾರು ಮಾಡುವಾಗ, ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಪಂಜಾಬ್‌ನಿಂದ ನಿರ್ಮೂಲಗೊಳಿಸುವಾಗ ರಾವ್‌ ತೋರಿದ್ದ ಎದೆಗಾರಿಕೆ ಹಾಗೂ ಮುತ್ಸದ್ದಿತನವನ್ನು ನೆನಪಿಸಿಕೊಂಡರು. ಇತರ ಎಲ್ಲರಿಗಿಂತ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ರಾವ್‌ ಅವರಿಗೆ ಟ್ವಿಟರ್‌ ಬರಹದ ಮೂಲಕ ಗೌರವ ಅರ್ಪಿಸಿದರು.

‘ನಮ್ಮ ಮಾಜಿ ಪ್ರಧಾನಿ ಶ್ರೀ ಪಿ.ವಿ. ನರಸಿಂಹ ರಾವ್ ಅವರನ್ನು, ಅವರ ಜನ್ಮದಿನಾಚರಣೆಯಂದು ನೆನಪಿಸಿಕೊಳ್ಳುತ್ತಿದ್ದೇನೆ. ಭಾರತದ ಇತಿಹಾಸದ ಮಹತ್ವದ ಕಾಲಘಟ್ಟವೊಂದರಲ್ಲಿ ಮೌಲ್ಯಯುತ ನಾಯಕತ್ವ ನೀಡಿದ ಮುತ್ಸದ್ದಿಯಾಗಿ ಶ್ರೀ ರಾವ್ ಅವರು ವ್ಯಾಪಕ ಗೌರವಕ್ಕೆ ಪಾತ್ರರಾಗಿದ್ದಾರೆ. ಅಪಾರ ಪಾಂಡಿತ್ಯ ಹೊಂದಿದ್ದ ಅವರು ವಿಶಿಷ್ಟ ವಿದ್ವಾಂಸರಾಗಿಯೂ ಗುರುತುಗಳನ್ನು ಉಳಿಸಿದ್ದಾರೆ’ ಎಂದು ಮೋದಿ ಬರೆದಿದ್ದರು.

ತೆಲಂಗಾಣ ರಾಜ್ಯದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಸರ್ಕಾರ ಕೂಡ, ರಾವ್ ಅವರ ನ್ಯಾಯಯುತ ಹಾಗೂ ತಾತ್ವಿಕ ನಾಯಕತ್ವವನ್ನು ಜನರಿಗೆ ನೆನಪಿಸಿಕೊಡುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ಜನ್ಮದಿನ ಆಚರಿಸಿತು. ಅಲ್ಲದೆ, ರಾವ್‌ ಅವರು ತೆಲುಗಿನ ಪುತ್ರ ಮಾತ್ರವೇ ಆಗಿರಲಿಲ್ಲ, ಅವರು ತೆಲಂಗಾಣದ ಪುತ್ರ ಕೂಡ ಆಗಿದ್ದರು ಎಂಬ ವಿಚಾರವಾಗಿ ಹೆಮ್ಮೆ ತಾಳಿತು ಈ ಸರ್ಕಾರ.

ರಾವ್ ಅವರ ಮಹಾನ್‌ ಸೇವೆಯನ್ನು ‘ಜನ ಎಂದಿಗೂ, ಎಂದೆಂದಿಗೂ’ ನೆನಪಿನಲ್ಲಿ ಇರಿಸಿಕೊಳ್ಳುತ್ತಾರೆ ಎಂದು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಹೇಳಿದರು. ನರಸಿಂಹ ರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಚಂದ್ರಶೇಖರ ರಾವ್ ಅವರು ಕೇಂದ್ರ ಸರ್ಕಾರವನ್ನು ಈ ಮೊದಲು ಆಗ್ರಹಿಸಿದ್ದಾರೆ.

ಆದರೆ, ಇನ್ನೊಂದು ಕಡೆ, ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಉತ್ಸಾಹ ಕಾಣುತ್ತಿರಲಿಲ್ಲ. ರಾವ್ ಅವರು ತಮ್ಮ ಜೀವನದುದ್ದಕ್ಕೂ ನಿಷ್ಠೆ ತೋರಿದ್ದು ಕಾಂಗ್ರೆಸ್ ಪಕ್ಷಕ್ಕೆ.

ಬಹುಮತ ಇಲ್ಲದ ಸರ್ಕಾರವನ್ನು ಮುನ್ನಡೆಸುತ್ತಿದ್ದರೂ ಕೆಲವು ಶಾಸನಗಳ ಅಂಗೀಕಾರಕ್ಕೆ ರಾವ್ ಅವರು ಮುಂದಾಗಿದ್ದನ್ನು ನೆನಪಿಸಿಕೊಳ್ಳುವ ಟ್ವೀಟ್‌ ಅನ್ನು ಕಾಂಗ್ರೆಸ್ ಹಲವು ಗಂಟೆಗಳ ನಂತರ ಒಲ್ಲದ ಮನಸ್ಸಿನಿಂದ ಮಾಡಿದಂತೆ ತೋರಿತು.

ರಾವ್‌ ಅವರು ಭಾರತದ ಅರ್ಥವ್ಯವಸ್ಥೆಯನ್ನು ಮುಕ್ತಗೊಳಿಸುವ ಧೈರ್ಯ ತೋರಿದ್ದರು, ಪಂಜಾಬ್‌ ರಾಜ್ಯವನ್ನು ಕಟ್ಟರ್ ಭಯೋತ್ಪಾದಕರ ಹಿಡಿತದಿಂದ ಪಾರು ಮಾಡಿದರು ಮತ್ತು ನವ ಭಾರತಕ್ಕೆ ಅಡಿಪಾಯ ಹಾಕಿದರು ಎಂಬುದಕ್ಕೆ ಕಾಂಗ್ರೆಸ್ ಅಷ್ಟೇನೂ ಮಹತ್ವ ನೀಡಲಿಲ್ಲ. ನೆಹರೂ – ಗಾಂಧಿ ಕುಟುಂಬಕ್ಕೆ ಸೇರಿರದ ತನ್ನ ನಾಯಕರ ಕೊಡುಗೆಗಳಿಗೆ ಮಹತ್ವ ನೀಡದಿರುವ ನಿಲುವಿಗೆ ಅನುಗುಣವಾಗಿಯೇ ಇವೆಲ್ಲವೂ ಇದ್ದವು.

ರಾವ್‌ ಅವರು ದೇಶದ ಪ್ರಧಾನಿಯಾಗಿದ್ದು ಅತ್ಯಂತ ಮಹತ್ವದ ಸಂದರ್ಭವೊಂದರಲ್ಲಿ. ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಮೊತ್ತವು ತೀರಾ ಕನಿಷ್ಠ ಮಟ್ಟಕ್ಕೆ (₹ 2,100 ಕೋಟಿ) ಇಳಿದಿತ್ತು. ಈ ಮೊತ್ತವು ಹದಿನೈದು ದಿನಗಳಿಗೆ ಮಾತ್ರ ಸಾಕಾಗುತ್ತಿತ್ತು.

ಹಿಂದಿನ, ಅಂದರೆ ಚಂದ್ರಶೇಖರ್‌ ನೇತೃತ್ವದ ಸರ್ಕಾರವು ಚಿನ್ನವನ್ನು ಅಡವಾಗಿ ಇಟ್ಟು 20 ಲಕ್ಷ ಅಮೆರಿಕನ್ ಡಾಲರ್‌ ವಿದೇಶಿ ವಿನಿಮಯ ತಂದಿತ್ತು.

ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಅನುಸರಿಸಿದ್ದ ಸಮಾಜವಾದವನ್ನು ಮುಂದುವರಿಸಿಕೊಂಡು ಹೋದರೆ ದೇಶದ ಅರ್ಥವ್ಯವಸ್ಥೆ ನಿಯಂತ್ರಣ ಮೀರಿ ಕುಸಿಯುತ್ತದೆ ಎಂಬುದನ್ನು ರಾವ್ ಅರ್ಥ ಮಾಡಿಕೊಂಡರು. ಲೈಸೆನ್ಸ್‌–ಪರ್ಮಿಟ್‌ ರಾಜ್‌ ವ್ಯವಸ್ಥೆಯನ್ನು ಭಗ್ನಗೊಳಿಸಿದರೆ ಮಾತ್ರ, ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಿದರೆ ಮಾತ್ರ ಭಾರತದ ಅರ್ಥ ವ್ಯವಸ್ಥೆಯನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಸಾಧ್ಯವಿತ್ತು.

ರಾವ್ ಅವರು ಡಾ. ಮನಮೋಹನ್ ಸಿಂಗ್ ಅವರನ್ನು ತಮ್ಮ ಹಣಕಾಸು ಸಚಿವರನ್ನಾಗಿ ಆಯ್ಕೆ ಮಾಡಿಕೊಂಡರು, ಅವರಿಗೆ ಸಂಪೂರ್ಣ ಬೆಂಬಲ ನೀಡಿದರು. ಕಾಂಗ್ರೆಸ್ಸಿನಲ್ಲಿಯೇ ಇದ್ದ ಟೀಕಾಕಾರರಿಂದ ಸಿಂಗ್ ಅವರನ್ನು ರಕ್ಷಿಸಿದರು. ಸಿಂಗ್ ಅವರನ್ನು ಅಮೆರಿಕದ ಗುಲಾಮನಂತೆ ಕಾಣುತ್ತಿದ್ದ ಕಮ್ಯುನಿಸ್ಟರಿಂದಲೂ ರಕ್ಷಿಸಿದರು.

ರಾವ್ – ಸಿಂಗ್ ಜೋಡಿ ದೇಶದ ಅರ್ಥ ವ್ಯವಸ್ಥೆಯನ್ನು ಹಂತಹಂತವಾಗಿ ಮುಕ್ತಗೊಳಿಸಿತು. ಆಗ ಪರಿಸ್ಥಿತಿ ಆಶಾದಾಯಕವಾಗಿ ಕಾಣಲು ಆರಂಭವಾಯಿತು. ತಾವು ವಿಶ್ವದ ಇತರ ದೇಶಗಳ ಜೊತೆ ಸ್ಪರ್ಧಿಸಬಲ್ಲೆವು ಎಂದು ಭಾರತೀಯರಿಗೆ ಅನಿಸಲು ಶುರುವಾಯಿತು. ಚಿಕ್ಕದಾಗಿ ಹೇಳಬೇಕೆಂದರೆ, ನಿರಾಸೆಯ ಸ್ಥಿತಿಯಿಂದ ಆಶಾದಾಯಕ ಸ್ಥಿತಿಗೆ ಹೊರಳಿಕೊಳ್ಳುವುದಕ್ಕೆ ರಾವ್‌ ಅವರು ದೇಶವಾಸಿಗಳಿಗೆ ನೆರವಾದರು.

ಹೀಗಿದ್ದರೂ, ರಾವ್‌ ಅವರಿಗೆ ಅರ್ಹವಾಗಿ ಸಲ್ಲಬೇಕಿರುವ ಗೌರವ ನೀಡಲು ಕಾಂಗ್ರೆಸ್ ಮನಸ್ಸು ಮಾಡುತ್ತಿಲ್ಲ. ನೆಹರೂ– ಗಾಂಧಿ ಕುಟುಂಬಕ್ಕೆ ಸೇರದ ಅಸಾಮಾನ್ಯ ರಾಷ್ಟ್ರೀಯ ನಾಯಕರ ಬಗ್ಗೆ ಪಕ್ಷ ಇದೇ ಧೋರಣೆ ಬೆಳೆಸಿಕೊಂಡಿದೆ. ನೆಹರೂ ಕಾಲದಿಂದಲೂ ಕಾಂಗ್ರೆಸ್ ಪಕ್ಷವು ಸರ್ದಾರ್‌ ವಲ್ಲಭಭಾಯ್‌ ಪಟೇಲ್, ಸುಭಾಷ್ ಚಂದ್ರ ಬೋಸ್‌, ಬಿ.ಆರ್. ಅಂಬೇಡ್ಕರ್, ಶ್ಯಾಮಪ್ರಸಾದ್ ಮುಖರ್ಜಿ ಮತ್ತು ಅನೇಕ ನಾಯಕರ ಹೆಸರನ್ನು ದೇಶದ ಸ್ಮೃತಿಪಟಲದಿಂದ ಅಳಿಸಿಹಾಕುವ ಕೆಲಸ ಮಾಡುತ್ತ ಬಂದಿದೆ.

ಪಕ್ಷದ ಪ್ರತಿ ಹೇಳಿಕೆಯೂ, ಪ್ರತಿ ಕಡತವೂ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಅವರನ್ನು ಅತಿಯಾಗಿ ಪ್ರಶಂಸಿಸಿದೆ. ಇದೇ ವೇಳೆ, ದೇಶ ಕಂಡ ಅತ್ಯುತ್ತಮ ಪ್ರಧಾನಿಗಳಲ್ಲಿ ಒಬ್ಬರಾದ ನರಸಿಂಹ ರಾವ್ ಸೇರಿದಂತೆ ಇತರರ ಕೆಲಸಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸಿದೆ.

ಇದು ಬಹಳ ದುರದೃಷ್ಟಕರ ಸಂಗತಿ. ಏಕೆಂದರೆ, ಈ ನಾಯಕರ ಕೊಡುಗೆಗಳು ಬಹಳ ಮಹತ್ವದ್ದು. ಸರ್ದಾರ್‌ ಪಟೇಲರು ಇಲ್ಲದಿರುತ್ತಿದ್ದರೆ, ಅಂಬೇಡ್ಕರ್‌ ಅವರು ಸಂವಿಧಾನದ ಕರಡನ್ನು ರೂಪಿಸಿಕೊಡದಿರುತ್ತಿದ್ದರೆ ಭಾರತದ ರಾಜಕೀಯ ಭೂಪಟವು ಈಗಿನಂತೆ ಇರುತ್ತಿರಲಿಲ್ಲ ಎಂಬುದು ಗೊತ್ತಿರುವ ಸಂಗತಿ.

ನೆಹರೂ– ಗಾಂಧಿಗಳ ನೀತಿಗಳನ್ನು ಕೈಬಿಡುವ ಹೆಜ್ಜೆಯನ್ನು ರಾವ್‌ ಅವರು ಇರಿಸದೆ ಇದ್ದಿದ್ದರೆ, ದೇಶವನ್ನು ಅಭಿವೃದ್ಧಿಯ ಹೊಸ ಹಳಿಗೆ ತಾರದೆ ಇದ್ದಿದ್ದರೆ ನಾವು ಇಂದು ಕಾಣುತ್ತಿರುವ ನವಭಾರತ ಸಾಕಾರ ಆಗುತ್ತಿರಲಿಲ್ಲ. ರಾವ್ ಅವರು 2004ರಲ್ಲಿ ಮೃತಪಟ್ಟ ಸಮಯದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು 14 ಸಾವಿರ ಕೋಟಿ ಅಮೆರಿಕನ್‌ ಡಾಲರ್‌ನಷ್ಟಿತ್ತು.

ತನ್ನ ನಾಯಕರು ದೇಶಕ್ಕೆ ನೀಡಿದ ಕೊಡುಗೆಯನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಹಿಂದೇಟು ಹಾಕಿದ್ದನ್ನು ಭಾರತೀಯ ಜನತಾ ಪಕ್ಷವು ಬಳಸಿಕೊಂಡಿತು. ಬಿಜೆಪಿಯು ಸರ್ದಾರ್‌ ಪಟೇಲರನ್ನು ಬಹುತೇಕ ತನ್ನವರನ್ನಾಗಿಸಿಕೊಂಡಿದೆ. ತನ್ನವರನ್ನಾಗಿಸಿಕೊಳ್ಳುವ ಈ ಕಾರ್ಯ ಆರಂಭವಾಗಿದ್ದು ತುಸು ಹಿಂದೆ– ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ ಅವರು ಪಕ್ಷದ ಚುಕ್ಕಾಣಿ ಹಿಡಿದಿದ್ದ ಕಾಲದಲ್ಲಿ.

ವಿಶ್ವದಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆ ಸ್ಥಾಪಿಸುವುದನ್ನೂ ಒಳಗೊಂಡ ಪ್ರಮುಖ ಕಾರ್ಯಕ್ರಮವೊಂದನ್ನು ಗುಜರಾತ್‌ನಲ್ಲಿ ಆರಂಭಿಸುವ ಮೂಲಕ ಸರ್ದಾರ್‌ ಪಟೇಲರಿಗೆ ಅರ್ಹ ಗೌರವ ಸಲ್ಲಿಸುವ ಕಾರ್ಯಕ್ಕೆ ಪ್ರಧಾನಿ ಮೋದಿ ಚುರುಕು ನೀಡಿದರು. ತನ್ನ ಅತ್ಯಂತ ಅಮೂಲ್ಯವಾದ ಆಸ್ತಿಯನ್ನು ತನ್ನಲ್ಲಿಯೇ ಉಳಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೆ ಈಗ ಬಹಳ ತ್ರಾಸದಾಯಕ ಕೆಲಸ.

ತನ್ನ ಒಂದು ಐಕಾನ್‌ ನಿಧಾನವಾಗಿಯಾದರೂ ಕೈಜಾರಿಹೋಗುವುದಕ್ಕೆ ಕಾಂಗ್ರೆಸ್‌ ಖಂಡಿತವಾಗಿಯೂ ಅವಕಾಶ ಮಾಡಿಕೊಟ್ಟಿದೆ. ಅಂಬೇಡ್ಕರ್ ಅವರು ಬಹುಜನ ಸಮಾಜ ಪಕ್ಷದ ಐಕಾನ್‌ ಆಗಿದ್ದಾರೆ. ಅಂಬೇಡ್ಕರ್ ಅವರು ಬಿಜೆಪಿಯಲ್ಲಿ ಕೂಡ ಹೆಮ್ಮೆಯ ಸ್ಥಾನ ಪಡೆದಿದ್ದಾರೆ. ಈ ಇಬ್ಬರು ನಾಯಕರನ್ನು ಕಾಂಗ್ರೆಸ್ಸಿನಿಂದ ಕಸಿದುಕೊಳ್ಳಲಾಗಿದೆ. ಒಂದು ಪರಿವಾರಕ್ಕೆ ಮಾತ್ರ ಸೀಮಿತವಾದ ಪಕ್ಷ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವುದು ದೇಶದ ಅತ್ಯಂತ ಹಳೆಯ ಪಕ್ಷದ ಪಾಲಿಗೆ ಕಷ್ಟವಾಗಿ ಪರಿಣಮಿಸಿದೆ.

ಕುಟುಂಬ ಕೇಂದ್ರಿತ ಕಾಂಗ್ರೆಸ್ ಪಕ್ಷವು ಕೈಬಿಟ್ಟಿರುವ ಇನ್ನೊಂದು ಐಕಾನ್ ನರಸಿಂಹ ರಾವ್. ಅವಕಾಶವನ್ನು ಯಾವತ್ತಿಗೂ ಬಿಟ್ಟುಕೊಡಬಾರದು ಎಂಬ ಆಲೋಚನೆಯಿಂದ ಬಿಜೆಪಿಯು, ರಾವ್ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ನೆನಪಿಸಿಕೊಡುವುದನ್ನು ಈಚಿನ ವರ್ಷಗಳಲ್ಲಿ ಮರೆಯುತ್ತಿಲ್ಲ.

ರಾವ್ ಅವರಿಗೆ ಸೂಕ್ತವಾದ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ತೆಲಂಗಾಣ ರಾಜ್ಯದ ವಿಧಾನಸಭೆ ಕೈಗೊಂಡ ನಿರ್ಣಯಕ್ಕೆ ಅನುಸಾರವಾಗಿ ಕ್ರಮ ಕೈಗೊಳ್ಳುವ ತೀರ್ಮಾನವನ್ನು ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡಿದೆ. ರಾವ್ ಅವರ ಜನ್ಮದಿನಾಚರಣೆಯಂದು ಮೋದಿ ಅವರು ತೋರಿಸಿದ ಉತ್ಸಾಹ ಮತ್ತು ರಾವ್‌ ಅವರ ಬಗ್ಗೆ ಮೋದಿ ಅವರು ತೋರಿಸಿದ ಗೌರವ ಗಮನಿಸಿದರೆ, ರಾವ್ ಎನ್ನುವ ಐಕಾನ್ ಕೂಡ ಕಾಂಗ್ರೆಸ್ ಬುಟ್ಟಿಯಿಂದ ಜಾರಿ ಬಿಜೆಪಿ ಬತ್ತಳಿಕೆಗೆ ಕೆಲವೇ ಸಮಯದಲ್ಲಿ ಬೀಳಲಿದೆ ಎಂಬುದು ಗೊತ್ತಾಗುತ್ತದೆ. ಅದೇನೇ ಇರಲಿ, ಕ್ಷಿಪ್ರಗತಿಯ ಆರ್ಥಿಕ ಬೆಳವಣಿಗೆಗೆ ಕಾರಣನಾದ ಈ ಪ್ರವಾದಿಯನ್ನು ಭಾರತ ಎಂದಿಗೂ ಮರೆಯಬಾರದು.

(ಲೇಖಕ ಪ್ರಸಾರ ಭಾರತಿ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT