ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರ್ಕವನ್ನು ಮೀರಿದ ಸೂಕ್ಷ್ಮ

Last Updated 12 ಏಪ್ರಿಲ್ 2019, 20:10 IST
ಅಕ್ಷರ ಗಾತ್ರ

ರವಿಮಾತ್ರದಿಂದಲ್ಲ ಭುವಿಮಾತ್ರದಿಂದಲ್ಲ |
ಭುವನಪೋಷಣೆಯುಭಯ ಸಹಕಾರದಿಂದ ||
ವಿವಿಧ ಶಕ್ತಿರಸಂಗಳೇಕೀಭವಿಸೆ ಜೀವ |
ಅವಿತಕ್ರ್ಯ ಸೂಕ್ಷ್ಮವದು – ಮಂಕುತಿಮ್ಮ || 118 ||

ಪದ-ಅರ್ಥ: ರವಿಮಾತ್ರದಿಂದಲ್ಲ=ರವಿ(ಸೂರ್ಯ) ಮಾತ್ರದಿಂದ+ಅಲ್ಲ, ಭುವಿಮಾತ್ರದಿಂದಲ್ಲ+ಭುವಿ(ನೆಲ, ಭೂಮಿ)ಮಾತ್ರದಿಂದ +ಅಲ್ಲ, ಭುವನಪೋಷಣೆಯುಭಯ=ಭುವನ(ಪ್ರಪಂಚದ)+ಪೋಷಣೆ+ಉಭಯ, ಶಕ್ತಿರಪಸಂಗಳೇಕೀಭವಿಸೆ=ಶಕ್ತಿ+ರಸಗಳು+ಏಕೀಭವಿಸೆ(ಒಂದುಗೂಡಿದಾಗ), ಅವಿತಕ್ರ್ಯ=ತರ್ಕಕ್ಕೆ ಸಿಗದ.

ವಾಚ್ಯಾರ್ಥ: ಕೇವಲ ಸೂರ್ಯನಿಂದ ಮಾತ್ರವಲ್ಲ, ಕೇವಲ ಭೂಮಿಯಿಂದ ಮಾತ್ರವಲ್ಲ, ಈ ಜಗತ್ತಿನ ಪೋಷಣೆಯಾಗುವುದು ಇವರಿಬ್ಬರ ಸಹಕಾರದಿಂದ. ವಿಧವಿಧವಾದ ಶಕ್ತಿಗಳು, ರಸಗಳು ಏಕೀಭವಿಸಿದಾಗ ಜೀವ ಸೃಷ್ಟಿಯಾಗುತ್ತದೆ. ಇದೊಂದು ತರ್ಕಕ್ಕೆ ಸಿಗದ ಅತ್ಯಂತ ಸೂಕ್ಷ್ಮವಾಗಿದೆ.

ವಿವರಣೆ: ಪ್ರಪಂಚದ ಪೋಷಣೆ ಯಾವುದರಿಂದ ಆಗುತ್ತದೆ? ಸೂರ್ಯನಿಂದಲೇ? ಹೌದು, ಸೂರ್ಯನಿಲ್ಲದಾದರೆ ಪ್ರಪಂಚ ಉಳಿಯುವುದು ಅಸಾಧ್ಯ. ಸೂರ್ಯನ ಬೆಳಕಿನ ಕಿರಣಗಳಿಂದಲೇ ಭೂಮಿಗೆ ಚೈತನ್ಯ, ಕಾವು. ಆರು ತಿಂಗಳುಗಳ ಕಾಲ ಸೂರ್ಯ ಮರೆಯಾದರೆ ಭೂಮಿ ಮರಗಟ್ಟಿ ಹೋಗುತ್ತದೆ, ಜೀವನಾಶವಾಗುತ್ತದೆ. ಹಾಗಾದರೆ ಸೂರ್ಯನಿಂದ ಮಾತ್ರವೇ ಪೋಷಣೆ ಎನ್ನೋಣವೆ? ಆಕಾಶದಲ್ಲಿ ಎಲ್ಲೆಲ್ಲೂ ಸೂರ್ಯಕಿರಣಗಳಿವೆ ಆದರೆ ಜೀವದ ಲಕ್ಷಣವೇ ಇಲ್ಲ! ಜೀವ ಹುಟ್ಟಿ ಬೆಳೆಯುವುದು ಭೂಮಿಯ ಮೇಲೆ. ಅಂದರೆ, ಭೂಮಿಯಿಲ್ಲದೆ ಜೀವವಿಲ್ಲ. ನಮ್ಮ ಭೂಮಿಗಿಂತ ಸೂರ್ಯನಿಗೆ ಹತ್ತಿರವಾದ. ವೀನಸ್, ಮಕ್ರ್ಯುರಿ ಗ್ರಹಗಳಿವೆಯಲ್ಲ, ಅಲ್ಲಿ ನೆಲವೂ ಇದೆ ಮತ್ತು ಸೂರ್ಯನ ಕಿರಣಗಳು ಬೇಕಾದ ಹಾಗೆ ಇವೆ. ಅಲ್ಲಿ ಜೀವದ ಹುಟ್ಟೇ ಆಗಲಿಲ್ಲ. ಅದಕ್ಕೆ ಕಾರಣ ಸೂರ್ಯಕಿರಣಗಳ ಪ್ರಖರತೆ. ಅಲ್ಲಿ ತಾಪಮಾನ ತುಂಬ ಹೆಚ್ಚು. ಜೀವಿಗಳು ಬದುಕುವುದು ಸಾಧ್ಯವಿಲ್ಲ. ದೂರದ ಮಂಗಳಗ್ರಹದಲ್ಲಿ ಜೀವಿಗಳಿಲ್ಲ. ಅಲ್ಲಿ ಪರಿಸ್ಥಿತಿ ವಿರುದ್ಧ. ಸೂರ್ಯ ತುಂಬ ದೂರ ಇರುವುದರಿಂದ ವಿಪರೀತ ಚಳಿ ಇದ್ದೂ, ಎಲ್ಲವೂ ಮರಗಟ್ಟಿದೆ. ಇದರ ಅರ್ಥ, ಸೂರ್ಯನಿಗೆ ಹತ್ತಿರವಾಗಿದ್ದರೂ ಕಷ್ಟ, ದೂರವಾಗಿದ್ದರೂ ಕಷ್ಟ, ಜೀವ ಬದುಕಿ ಉಳಿಯುವುದಕ್ಕೆ. ನಮ್ಮ ಭೂಮಿ ಒಂದು ಅತ್ಯಂತ ಸರಿಯಾದ ಅಂತರದಲ್ಲಿರುವುದರಿಂದ, ತಾಪಮಾನ ಸರಿಯಾಗಿದ್ದು ಜೀವ ಉಳಿಯುತ್ತದೆ.

ಇದರರ್ಥ, ಸೂರ್ಯ, ಭೂಮಿಗಳು ಎರಡೂ ಬೇಕು ಜೀವ ಪೋಷಣೆಗೆ, ಅಷ್ಟೇ ಅಲ್ಲ, ಅವು ಸರಿಯಾದ ದೂರದಲ್ಲೂ ಇರಬೇಕು. ಅದನ್ನೇ ಕಗ್ಗ ಹೇಳುತ್ತದೆ, ಕೇವಲ ಸೂರ್ಯನಿಂದ ಅಥವಾ ಕೇವಲ ಭೂಮಿಯಿಂದ ಜೀವಪೋಷಣೆ ಸಾಧ್ಯವಿಲ್ಲ. ಅವುಗಳ ಸಹಕಾರದಿಂದ ಮಾತ್ರ ಸಾಧ್ಯ.

ಈ ಜೀವ ಸೃಷ್ಟಿಗೆ ಅನೇಕ ಶಕ್ತಿಗಳು, ರಸಗಳು ಏಕೀಭವಿಸಬೇಕು. ಮಾವಿನಮರದ ಬೆಳವಣಿಗೆಗೆ ನೀರು, ಗೊಬ್ಬರ, ಮಣ್ಣು, ಸೂರ್ಯನ ಬಿಸಿಲು ಮುಂತಾದ ಪಂಚಮಹಾಭೂತಗಳ ಸಂಯೋಜನೆಯೇ ಕಾರಣ. ಆದರೆ ಮಾವಿನ ಹಣ್ಣು ತಿನ್ನುವಾಗ ಅದರಲ್ಲಿ ಮಣ್ಣಿನ ವಾಸನೆಯಿಲ್ಲ, ನೀರಿನ ರುಚಿಯಿಲ್ಲ, ಗೊಬ್ಬರದ ಕಟುತೆಯಿಲ್ಲ, ಸೂರ್ಯನ ಕಾವಿಲ್ಲ. ಅವೆಲ್ಲ ಸೇರಿ ಏಕೀಭವಿಸಿದಾಗ ಹೊಸದೇ ಲಕ್ಷಣಗಳನ್ನುಳ್ಳ ಮಾವಿನ ಹಣ್ಣು ಆಗುತ್ತದೆ. ಮಾವಿನ ಮರದ ಪಕ್ಕದಲ್ಲೇ ಬೆಳೆದ ಮಲ್ಲಿಗೆ ಬಳ್ಳಿಯಲ್ಲಿ ಕಾಯಿ ಆಗುವುದೇ ಇಲ್ಲ! ಅದಕ್ಕೂ ಅದೇ ನೀರು, ಮಣ್ಣು, ಗೊಬ್ಬರ, ಸೂರ್ಯನ ಕಿರಣ ದೊರೆತಿದೆ. ಅದು ಕೇವಲ ಸುಗಂಧವಾದ ಮಲ್ಲಿಗೆ ಹೂವುಗಳನ್ನು ಕೊಡುತ್ತದೆಯೇ ವಿನ: ಹಣ್ಣು ಕೊಡುವುದಿಲ್ಲ. ಹೀಗಾಗಿ ಶಬ್ದ, ರಸಗಳ ವಿವಿಧ ಹೊಂದಾಣಿಕೆಯಿಂದ ವೈವಿಧ್ಯತೆಯ ಜೀವರಾಶಿ ಬೆಳೆಯುತ್ತದೆ. ಇದು ತರ್ಕವನ್ನು ಮೀರಿದ ಸೂಕ್ಷ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT