ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಿಗಳ ಮಿದುಳಿನೊಳಕ್ಕೆ ವಿಜ್ಞಾನಿಗಳ ಶೋಧಯಾತ್ರೆ

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

‘ಇಡೀ ಸ್ವಿತ್ಸರ್ಲೆಂಡಿನ ಜನಸಂಖ್ಯೆಯಷ್ಟು ಎಂಜಿನಿಯರುಗಳನ್ನು ಭಾರತ ಉತ್ಪಾದಿ­ಸು­ತ್ತಿದೆ. ಆದರೆ ಹೊಸ ಕೌಶಲದ ವಿಷಯ ಬಂದಾಗ ಜಗತ್ತಿನಲ್ಲಿ ಭಾರತ ೭೬ನೇ ಸ್ಥಾನದ­ಲ್ಲಿದೆ; ಸ್ವಿತ್ಸರ್ಲೆಂಡ್ ಮೊದಲ ಸ್ಥಾನದಲ್ಲಿದೆ’.

-ಹೀಗೆಂದು ‘ಇಂಡಿಯಾ ಟೈಮ್ಸ್’ ಎಂಬ ಜಾಲತಾಣದಲ್ಲಿ ಪ್ರಕಟವಾಗಿದ್ದನ್ನು ಅಮೆರಿಕ­ದಲ್ಲಿರುವ ಹಿತೈಷಿ ಸಂಜಯ ಹಾವನೂರ ನಿನ್ನೆ ರವಾನಿಸಿದರು. ನಮ್ಮ ದೇಶದ ಇಂಥ ಇನ್ನೂ ೮ ವ್ಯಂಗ್ಯಗಳ ಪಟ್ಟಿ ಈ ವೆಬ್‌ಸೈಟ್‌ನಲ್ಲಿದೆ. ನೀರನ್ನು ಧುಮುಕಿಸುವ (ಫ್ಲಶ್) ಟಾಯ್ಲೆಟ್ಟನ್ನು ೫೦೦೦ ವರ್ಷಗಳ ಹಿಂದೆಯೇ ರೂಪಿಸಿದ ಭಾರತದಲ್ಲಿ ಈಗಲೂ ಶೇಕಡ ೫೩ರಷ್ಟು ಜನರು ಬಯಲಿನಲ್ಲಿ ಶೌಚ ಮಾಡುತ್ತಾರೆ ಎಂಬ ಮಾಹಿತಿಯೂ ಇದೆ. ಇನ್ನುಳಿದ ವ್ಯಂಗ್ಯಗಳೆಲ್ಲ ಭಾರತೀಯ ಸಂಸ್ಕೃತಿಯ ಕುರಿತಾದ್ದರಿಂದ ಅದು ಇಲ್ಲಿ ಬೇಕಿಲ್ಲ ಬಿಡಿ.

ಇಂದಿನ ಅಂಕಣದಲ್ಲಿ ಭಾರತೀಯರ ಕೌಶಲದ ಬಗ್ಗೆ ಬರೆಯುವ ಇರಾದೆ ಇರಲಿಲ್ಲ. ಮೋದಿ­ಯವರ ‘ಮೇಕ್ ಇನ್ ಇಂಡಿಯಾ’ ಘೋಷಣೆ­ಯತ್ತ ಆಕರ್ಷಿತರಾಗಿ ವಿದೇಶೀ ಕಂಪನಿಗಳು ಸಾರಾಸಗಟಾಗಿ ನುಗ್ಗಿ ಬಂದಿದ್ದೇ ಆದರೆ, ಆಗ ನಮ್ಮ ಸಿದ್ಧತೆ ಸರಿಯಾಗಿ ಇಲ್ಲದಿದ್ದರೆ ಏನೇನಾ-­ದೀತೆಂದು ಭೋಪಾಲ್ ಮತ್ತು ಇತರ ಕೆಲವು ಉದಾಹರಣೆಗಳ ಮೂಲಕ ಹೇಳಬೇಕಿತ್ತು. ಆಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಗವ­ರ್ನರ್ ರಘುರಾಮ್ ರಾಜನ್ ಆಡಿದ ಎಚ್ಚರದ ಮಾತುಗಳನ್ನು ಇನ್ನಷ್ಟು ವಿಸ್ತರಿಸ­ಬೇಕಿತ್ತು. ಆದರೆ ಅದನ್ನು ಬರೆಯಲು ಆರಂಭಿ­ಸು­ತ್ತಲೇ ವಿದೇಶೀ­ಯರು ನಮ್ಮನ್ನು ಹೇಗೆ ನೋಡುತ್ತಿ­ದ್ದಾರೆ ಎಂಬು­ದರ ಕುರಿತು ಮೂರು ದಿಕ್ಕುಗಳಿಂದ ಮೂರು ಇ– ಮೇಲ್‌ಗಳು ಬಂದವು.

‘ಪ್ರಾಚೀನ ಭಾರತದ ವಿವೇಕವನ್ನು ಆಧುನಿಕ ವಿಜ್ಞಾನ ತನ್ನದಾಗಿಸಿಕೊಳ್ಳುತ್ತಿರುವ ಐದು ವಿಧಾನ­ಗಳು’ ಎಂಬ ಲೇಖನವನ್ನು ಅಮೆರಿಕದ ಪ್ರಭಾವೀ ಪತ್ರಿಕೆ ಹಫಿಂಗ್ಟನ್ ಪೋಸ್ಟ್ ಇತ್ತೀಚೆಗೆ ಪ್ರಕಟಿಸಿತ್ತು. ಅದರ ಪ್ರತಿಯನ್ನು ಕನ್ನಡದ ಗ್ರಂಥಾ­ಲಯ ತಜ್ಞ ಜೆ. ರಾಮಮೂರ್ತಿ ಕಳಿಸಿ, ‘ಇದನ್ನು ಕನ್ನಡಿಗರಿಗೂ ತಿಳಿಸಿ’ ಎಂದಿದ್ದರು. ಭಾರತದ ಯೋಗ, ಪ್ರಾಣಾಯಾಮ, ಧ್ಯಾನ, ಔಷಧ ಮತ್ತು ಪ್ರಜ್ಞಾಸಿದ್ಧಿ ಈ ಐದು ಪರಂಪರೆಗಳು ಈಗಿನ ಕಾಲದ ಪಶ್ಚಿಮದ ವಿಜ್ಞಾನ, ಔಷಧರಂಗ ಮತ್ತು ಮನೋಚಿಕಿತ್ಸಾ ವಿಧಾನಗಳಲ್ಲಿ ಹೇಗೆ ಹಾಸಿ ಹೋಗುತ್ತಿವೆ ಎಂಬುದರ ಸೂಚಿಗಳು ಅದರಲ್ಲಿದ್ದವು. ‘ಹಿಂದೂಗಳ ಮಟ್ಟಿಗೆ ಹೇಳುವು­ದಾ­ದರೆ ಧಾರ್ಮಿಕ ನಂಬುಗೆಗಳು ಎಂದೂ ವಿಜ್ಞಾನದ ಪರಿಧಿಯನ್ನು ದಾಟಿ ಹೋಗದಂತೆ ನೋಡಿಕೊಳ್ಳಲಾಗಿತ್ತು’ ಎಂದು ಫ್ರೆಂಚ್ ನೊಬೆಲ್ ಪುರಸ್ಕೃತ ರೊಮೇನ್ ರೊಲ್ಯಾಂಡ್ ಹೇಳಿ­ದ್ದನ್ನು ಅದರಲ್ಲಿ ನೆನಪಿಸಿಕೊಳ್ಳಲಾಗಿದೆ. ವೇದ­ಗಳಲ್ಲಿ ಹೇಳಲಾದ ಅದೆಷ್ಟೊ ಸಂಗತಿಗಳು ಪ್ರಯೋಗಾಲಯಗಳಲ್ಲಿ ಒಂದೊಂದಾಗಿ ಖಚಿತ­ವಾಗುತ್ತಿವೆ ಎಂಬುದನ್ನು ಈ ಲೇಖನದಲ್ಲಿ ನೂರಾರು ಕೊಂಡಿಗಳ ಮೂಲಕ ಕೊಡಲಾಗಿದೆ.

ಯೋಗ, ಪ್ರಾಣಾಯಾಮ ಮತ್ತು ಧ್ಯಾನಗಳ ಮಹತ್ವವನ್ನು ನಾವಿಲ್ಲಿ ವಿವರವಾಗಿ ಚರ್ಚಿಸ­ಬೇಕಾ­ಗಿಲ್ಲ. ಧ್ಯಾನ ಮಾಡಲು ಸಮಯ ಮತ್ತು ತಾಳ್ಮೆ ಇಲ್ಲದಿದ್ದರೂ ನಮ್ಮಲ್ಲಿ ಬಹಳಷ್ಟು ಜನರು ಯೋಗ, ಪ್ರಾಣಾಯಾಮ ಮಾಡುತ್ತಾರೆ. ಈಗೀಗ ಯೋಗಾಸನಗಳ ಬದಲು ಏರೊಬಿಕ್ಸ್, ಸೈಕ್ಲಿಂಗ್ ಮತ್ತು ವೇಗನಡಿಗೆಗೆ ಹೆಚ್ಚು ಒತ್ತು ಸಿಗು­ತ್ತಿದೆ. ಇಂಥ ದೈಹಿಕ ಶ್ರಮಗಳ ಬದಲು ‘ಯೋಗಾ­ಸನ ಹಾಕಿದರೂ ಅಷ್ಟೇ ಫಲಕಾರಿ’ ಎಂದು ನಿನ್ನೆ­ಯಷ್ಟೇ ನೆದರ್‌ಲ್ಯಾಂಡ್ಸ್‌ನ ರಾಟರ್ಡಾಮ್ ವಿ.ವಿ ವೈದ್ಯಕೀಯ ಕೇಂದ್ರದ ವಿಜ್ಞಾನಿಗಳು ಘೋಷಿ­ಸಿ­ದ್ದಾರೆ. ಹೊರಾಂಗಣ ವ್ಯಾಯಾಮ­ಗಳಲ್ಲಿ ಅದೆಷ್ಟೇ ತನ್ಮಯರಾಗಿದ್ದರೂ ಒತ್ತಡ ಇದ್ದೇ ಇರು­ತ್ತದೆ. ಯೋಗದಲ್ಲಿ ಹಾಗಿಲ್ಲ. ನಿತ್ಯವೂ ಯೋಗ ಮಾಡು­ತ್ತಿದ್ದರೆ ತೂಕ ಕಡಿಮೆ­ಯಾಗು­ತ್ತದೆ, ರಕ್ತ­ದೊತ್ತಡ ಮತ್ತು ಕೊಲೆಸ್ಟೆರಾಲ್ ಮಟ್ಟ ತಗ್ಗು­ತ್ತದೆ, ಹೃದ್ರೋಗದ ಸಾಧ್ಯತೆಯನ್ನು ತಡೆ­ಗಟ್ಟು­ತ್ತದೆ ಎಂದು ವರದಿ ಮಾಡಿದ್ದಾರೆ. ತಮ್ಮ ಸಂಶೋ­ಧನೆಗೆಂದು ಅವರು ೨,೭೬೮ ಶಿಬಿರಾರ್ಥಿ­ಗಳಿಗೆ ೩೭ ತಂಡಗಳಲ್ಲಿ ಪರೀಕ್ಷೆ ಮಾಡಿ ಈ ತೀರ್ಮಾನಕ್ಕೆ ಬಂದಿದ್ದಾರೆ. ‘ದೈಹಿಕ ವ್ಯಾಯಾಮ ಮಾಡಲಾರದ ಹೃದ್ರೋಗಿಗಳು, ವಾತಪೀಡಿತರು ಮತ್ತು ವೃದ್ಧರಿಗೆ ಯೋಗಾಸನವೇ ಶ್ರೇಷ್ಠ’ ಎಂದು ರಾಟರ್ಡಾಮ್ ತಜ್ಞರು ಹೇಳಿದ್ದಾರೆ.

ಪ್ರಾಣಾಯಾಮ ಮತ್ತು ಧ್ಯಾನ ಕುರಿತ ಸಂಶೋ­ಧನೆಗಳು ಸಾಕಷ್ಟು ಕ್ಲಿಷ್ಟವಾದವು. ಅದಕ್ಕೆ ನರವಿಜ್ಞಾನ ಪರಿಣತರು, ಮನೋವಿಜ್ಞಾನಿಗಳು ಅಷ್ಟೇ ಅಲ್ಲ, ಜೀವಕೋಶಗಳ ನಡವಳಿಕೆಗಳನ್ನು ಅಳೆ­ಯಬಲ್ಲ ಡಿಎನ್‌ಎ ಪರೀಕ್ಷಕರೂ ಒಟ್ಟಾಗಿ ಸೇರಿ ಯೋಗಿಗಳನ್ನು ಪ್ರಯೋಗಕ್ಕೆ ಒಳಪಡಿಸಬೇಕಾಗು­ತ್ತದೆ. ಅಂಥ ಅನೇಕ ಪರೀಕ್ಷೆಗಳು ಕಳೆದ ಕೆಲವು ವರ್ಷಗಳಿಂದ ಯುರೋಪ್, ಅಮೆರಿಕಗಳಲ್ಲಿ ನಡೆಯುತ್ತಿವೆ. ವಿಜ್ಞಾನಿಗಳನ್ನು ಹಾಗಿರಲಿ, ತತ್ವ­ಜ್ಞಾನಿಗಳನ್ನೂ ಬೆರಗುಗೊಳಿಸುವ ಸಂಗತಿಗಳು ಬೆಳಕಿಗೆ ಬರುತ್ತಿವೆ.

೨೦೦೫ರಲ್ಲಿ ಅಮೆರಿಕದ ನರವಿಜ್ಞಾನ ಸಂಘದ ವಾರ್ಷಿಕೋತ್ಸವಕ್ಕೆ ದಲಾಯಿ ಲಾಮಾರನ್ನು ಆಮಂತ್ರಿಸಿದಾಗ ಕೋಲಾಹಲವೇ ಎದ್ದಿತ್ತು. ವಿಜ್ಞಾನ ಸಮಾವೇಶದಲ್ಲಿ ಧರ್ಮಗುರುವನ್ನು ಕರೆಸುವುದು ಸರಿಯಲ್ಲವೆಂದು ಸಂಘದ ೩೫ ಸಾವಿರ ಸದಸ್ಯರಲ್ಲಿ ಅನೇಕರು ಬಂಡೆದ್ದರು. ಅವರಿ­ಗೆಲ್ಲ ಸಮಜಾಯಿಷಿ ನೀಡಿ ದಲಾಯಿ ಲಾಮಾ­ರನ್ನು ಕರೆಸಿದ ನಂತರ ನ್ಯೂರಾಲಜಿ ಕ್ಷೇತ್ರವೇ ಬದ­ಲಾಯಿತು ಎಂಬ ಅರ್ಥದಲ್ಲಿ ಅಲ್ಲಿನ ಸೈಂಟಿಫಿಕ್ ಅಮೆರಿಕನ್ ನಿಯತಕಾಲಿಕ ಹಿಂದೊಮ್ಮೆ ವರದಿ ಮಾಡಿತ್ತು. ಈಗಲ್ಲ, ೧೯೮೦ರಲ್ಲೇ ವಿಜ್ಞಾನಿಗಳಿಗೆ ದಲಾಯಿ ಲಾಮಾ ಸವಾಲು ಹಾಕಿದ್ದರು. ಅವ­ರಿಂದಾಗಿಯೇ ‘ಮೈಂಡ್ ಅಂಡ್ ಲೈಫ್’ ಹೆಸರಿನ ಸಂಶೋಧನ ಸಂಸ್ಥೆ ಆರಂಭವಾಯಿತು; ಬೌದ್ಧ ಯೋಗಿಗಳ ಮಿದುಳನ್ನು ವಿಜ್ಞಾನಿಗಳು ಪರೀಕ್ಷಿಸಿ ನೋಡಬೇಕೆಂದು ಅವರು ಒತ್ತಾಯಿಸಿದ್ದರಿಂದಲೇ ೨೦೦೦ದಲ್ಲಿ ‘ಧ್ಯಾನನಿರತರ ನರವಿಜ್ಞಾನ’ (ಕಂಟೆಂಪ್ಲೇಟಿವ್ ನ್ಯೂರೊಸೈನ್ಸ್) ಎಂಬ ಹೊಸ ಶಾಖೆಯೊಂದು ಉದಯವಾಯಿತು. ಕಠೋರ ಧ್ಯಾನ­ದಲ್ಲಿ ನಿರತರಾದವರ ತಲೆಗೆ ನಾನಾ ಬಗೆಯ ಶೋಧತಂತುಗಳನ್ನು ಅಂಟಿಸಿ, ಎಮ್‌ಆರ್‌­ಐ, ಎಫ್‌ಎಮ್‌ಆರ್‌ಐ ಮುಂತಾದ ಅತ್ಯಾಧುನಿಕ ಶೋಧ ತಂತ್ರಗಳನ್ನು ಬಳಸಿ ಯೋಗಿ­ಗಳ ಮಿದುಳಿನ ಆಳಕ್ಕೆ ಇಣುಕಿ ನೋಡಿ ನರ­ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.

ಈ ವಿಜ್ಞಾನ ಯುಗದಲ್ಲೂ ‘ದೇವರು ಯಾಕೆ ದೂರ ಸರಿಯುತ್ತಿಲ್ಲ?’ ಎಂಬ ಶಿರೋನಾಮೆ­ಯಲ್ಲಿ ನರವಿಜ್ಞಾನಿಗಳಾದ ಆಂಡ್ರೂ ನ್ಯೂಬರ್ಗ್   ಮತ್ತು ಸಂಗಡಿಗರು ಬರೆದ ಗ್ರಂಥವನ್ನು ಈ ಅಂಕಣದಲ್ಲಿ ಹಿಂದೆಯೇ ಪರಿಚಯಿಸಲಾಗಿತ್ತು. ಆಳ ಧ್ಯಾನದಲ್ಲಿ ನಿರತರಾದಾಗ ಯೋಗಿಗಳ ಮಿದುಳಿನ ಕೆಲವು ನರಕೋಶಗಳು ಸ್ಥಗಿತವಾಗು­ತ್ತವೆ. ಜೈವಿಕ ಗಡಿಯಾರ ನಿಂತುಹೋಗುತ್ತದೆ. ಕತ್ತಲು- ಬೆಳಕಿನ ವ್ಯತ್ಯಾಸ ಮಾಯವಾಗುತ್ತದೆ. ಒಂದು ಅಲೌಕಿಕ ಪ್ರಭೆ ನಮ್ಮನ್ನು ಆವರಿಸಿದಂತೆ ಅನ್ನಿಸುತ್ತದೆ. ತ್ವಚೆಯ ಅಂಚಿನಲ್ಲಿರುವ ನರಕೋಶ­ಗಳಿಂದ ಸಂವೇದನೆಗಳು ಮಿದುಳಿಗೆ ತಲುಪುವು­ದಿಲ್ಲ. ಆಗ ದೇಹದ ಅಂಚು ಎಲ್ಲಿದೆ ಎಂಬುದೇ ಗೊತ್ತಾಗದೆ ಇಡೀ ಶರೀರವೇ ವಿಶ್ವಕ್ಕೆಲ್ಲ ವ್ಯಾಪಿಸಿ­ದಂಥ ಅನುಭವ ಉಂಟಾಗುತ್ತದೆ. ವಿಶ್ವಚೇತನ­ದಲ್ಲಿ ಮನುಷ್ಯ ಚೇತನ ಲೀನವಾದಾಗಿನ ಆ ಪ್ರಜ್ಞೆ ಹೇಗಿರುತ್ತದೊ ಯೋಗಿಗಳೇ ಹೇಳಬೇಕು. ಮಾತು­­­ಗಳ ಮೂಲಕ ವಿವರಿಸಲು ಅವರಿಗೂ ಸಾಧ್ಯವಾಗಲಿಕ್ಕಿಲ್ಲ. ‘ಜ್ಞಾನವನ್ನು ಇತರರಿಗೆ ನೀಡ­ಬಹುದು; ಆದರೆ ವಿವೇಕವನ್ನು, ಪ್ರಜ್ಞೆಯನ್ನು ನೀಡಲು ಸಾಧ್ಯವಿಲ್ಲ’ ಎಂದು ಹರ್ಮನ್ ಹೆಸ್ ೧೯೨೨ರಲ್ಲೇ ತನ್ನ ‘ಸಿದ್ಧಾರ್ಥ’ ಹೆಸರಿನ ಕಾದಂಬರಿಯಲ್ಲಿ ಹೇಳಿದ್ದನಲ್ಲ?

ಪ್ರಜ್ಞಾಲೋಕದ ಆ ಆಳದ ಆಗುಹೋಗುಗಳ ಅಚ್ಚರಿಗಳಿಗೆ ಕೊನೆ ಮೊದಲಿಲ್ಲ. ೧೯೬೩ರಲ್ಲಿ ವಿಯೆ­ಟ್ನಾಮಿನ ಬೌದ್ಧ ಭಿಕ್ಷುವೊಬ್ಬ ಅಲ್ಲಿನ ಅಂದಿನ ದಬ್ಬಾಳಿಕೆಯನ್ನು ಪ್ರತಿಭಟಿಸಿ ಆತ್ಮಾಹುತಿ ಮಾಡಿಕೊಂಡ ದೃಶ್ಯವನ್ನು ಈಗಲೂ ಯೂಟ್ಯೂ­ಬ್‌ನಲ್ಲಿ ನೋಡಬಹುದು. ತಮಗೆ ತಾವೇ ಬೆಂಕಿ ಹಚ್ಚಿಕೊಳ್ಳುವವರು ಉರಿ ತಡೆಯಲಾರದೆ ಚೀರುತ್ತ ಅತ್ತಿತ್ತ ಓಡುತ್ತಾರೆ, ಕಂಡವರನ್ನು ತಬ್ಬಿಕೊಳ್ಳಲು ಯತ್ನಿಸುತ್ತಾರೆ. ಮನೆಯೊಳಕ್ಕೆ ಧಾವಿಸಿ ಬಟ್ಟೆರಾಶಿಯ ಮೇಲೆ ಉರುಳಾಡುತ್ತಾರೆ ಇಲ್ಲವೆ ನೀರಿಗೆ ಧುಮುಕುತ್ತಾರೆ. ಆದರೆ ಥಿಚ್ ಕ್ವಾಂಗ್ ಡುಕ್ ಹೆಸರಿನ ಈ ಭಿಕ್ಷು ಅದೇನನ್ನೂ ಮಾಡಲಿಲ್ಲ. ಪದ್ಮಾಸನ ಹಾಕಿ ಕೂತ ಆತನ ಮೇಲೆ ಪೆಟ್ರೋಲು ಸುರಿದು ಕಡ್ಡಿ ಗೀರಲಾಗುತ್ತದೆ. ಆಳೆ­ತ್ತರ ಎದ್ದ ಆ ಜ್ವಾಲೆಯಲ್ಲಿ ತುಸುವೂ ಅಳುಕದೆ, ಮಿಸುಕದೆ, ಕೂಗದೆ ಆತನ ಕಾಯ ನಿಶ್ಚಲವಾಗಿ ಬೆಂದು ನೆಲಕ್ಕುರುಳುತ್ತದೆ. ಧ್ಯಾನಸ್ಥ ಸ್ಥಿತಿಯಲ್ಲಿ ಕೂತಂತೇ ಆತ ನಮ್ಮೆಲ್ಲರ ಪ್ರಜ್ಞಾ ಪ್ರಪಂಚ­ದಾಚೆ ಸಾಗಿಹೋಗಿದ್ದ. 

ಎಚ್ಚರಿರುವ ಸ್ಥಿತಿಗೇ ನಾವೆಲ್ಲ ಪ್ರಜ್ಞೆ ಎನ್ನು­ತ್ತೇವೆ. ನಮ್ಮ ಮಿದುಳಿನಲ್ಲಿ ಆಗುತ್ತಿರುವ ಭೌತಿಕ ರೂಪಾಂತರಗಳೇ ಪ್ರಜ್ಞೆ ಎಂದು ಭೌತ ವಿಜ್ಞಾನಿ­ಗಳು ಹೇಳುತ್ತಾರೆ. ಆದರೆ ವೇದಾಂತದ ಪ್ರಕಾರ, ಅಥವಾ ನಂತರದ ಅನುಭಾವಿಗಳ ಪ್ರಕಾರ ಈ ಬ್ರಹ್ಮಾಂಡದ ಅಣು ರೇಣು ತೃಣ ಕಾಷ್ಠಗಳಲ್ಲೂ ಪ್ರಜ್ಞೆ ಇದೆ ಮತ್ತು ಈ ವಿಶ್ವದಲ್ಲಿ ಎಲ್ಲವೂ ಒಂದ­ಕ್ಕೊಂದು ತಳಕು ಹಾಕಿಕೊಂಡಿವೆ. ಹಾಗೆಂದು ಅದನ್ನು ನಾವು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಕಲ್ಲು, ಕಟ್ಟಿಗೆ, ಮರಳಿನ ಕಣಗಳೆಲ್ಲ ಬಿದ್ದಲ್ಲೇ ಬಿದ್ದಿರುತ್ತವೆ. ಆ ಕಲ್ಲು ಎಂದೋ ಒಮ್ಮೆ ತಾನಿದ್ದ ಸ್ಥಾನದಿಂದ ಹೊರಟು, ಮರಳಿನ ಪುಡಿ­ಯಾಗಿ, ಸಿಲಿಕಾ ಆಗಿ, ಕ್ಯಾಲ್ಸಿಯಂ ಆಗಿ, ಪೊಟ್ಯಾಶ್ ಆಗಿ ಗಾಳಿ ಅಥವಾ ಆಹಾರದ ಮೂಲಕ ನಮ್ಮೊಳಗೆ ಬರುತ್ತದೆ. ನಾವು ಒಮ್ಮೆ ಉಸಿರು ಎಳೆದುಕೊಂಡಾಗ ಅದೆಷ್ಟೊ ಕೋಟಿ ಪರ­ಮಾಣುಗಳು (ಹತ್ತರ ಮುಂದೆ ಇಪ್ಪ­ತ್ತೊಂದು ಸೊನ್ನೆ ಇಟ್ಟಾಗಿನ ಸಂಖ್ಯೆಯಷ್ಟು) ನಮ್ಮೊಳಗೆ ಬಂದು, ಶ್ವಾಸಕೋಶದ ಮೂಲಕ ರಕ್ತನಾಳಕ್ಕೆ ಸೇರಿ ನಮ್ಮ ಶರೀರದ ಒಂದಂಶವೇ ಆಗಿಬಿಡುತ್ತವೆ. ಉಸಿರು ಬಿಗಿ ಹಿಡಿದು ಒಂದರ್ಧ ನಿಮಿಷ ನಿಂತಿದ್ದರೂ ನಮ್ಮ ತ್ವಚೆಯಿಂದ ಹೈಡ್ರೊ­ಜನ್, ಸೋಡಿಯಂ, ಆಕ್ಸಿಜನ್, ಕ್ಲೋರಿನ್ ಪರ­ಮಾಣುಗಳು ನಿರಂತರ ಆಚೆ ಹೋಗುತ್ತಲೇ ಇರು­ತ್ತವೆ. ತುಸು ಮುಂಚೆ ಅವೆಲ್ಲ ನಮ್ಮ ನರಕೋಶ­ಗಳಲ್ಲಿ ಹಾಗೂ ಮಿದುಳಿನ ಪ್ರಜ್ಞಾಸಾಗರದಲ್ಲಿ ಸಂಚಲನ ಮೂಡಿಸಿದ್ದಿರಬಹುದು. ಕ್ವಾಂಟಮ್ ಫಿಸಿಕ್ಸ್‌ನಲ್ಲಿ ಮುಳುಗೇಳುವ ಭೌತ ವಿಜ್ಞಾನಿಗಳು ಈ ಸಾಧ್ಯತೆಯನ್ನು ಅಧ್ಯಯನ ಮಾಡುತ್ತಿದ್ದಾರೆ. ಅಂಥ ವಿಚಾರ ಸರಣಿಗೆ ಭಾರತವೇ ಮೂಲ ವಾ­ದರೂ ಇಂದು ಪಶ್ಚಿಮದ ವಿಜ್ಞಾನಿಗಳು ಅಂಥ ಸಾಧ­ಕರಿಗಾಗಿ ನಾಗಾ ಸಾಧುಗಳನ್ನಲ್ಲ, ಟಿಬೆಟನ್ ಬೌದ್ಧ ಸನ್ಯಾಸಿಗಳನ್ನು ಹುಡುಕಿಕೊಂಡು ಹೋಗು­ತ್ತಾರೆ. 

‘ಹೋಗುತ್ತಾರೆ’ ಅಲ್ಲ, ಬರುತ್ತಾರೆ! ಟಿಬೆಟ್ ಉಳಿದಿರುವುದು ನಮ್ಮಲ್ಲೇ ತಾನೆ? ಎರಡು ವರ್ಷ­ಗಳ ಹಿಂದೆ ಮುಂಡಗೋಡಿನ ಟಿಬೆಟನ್ ಕಾಲೊ­ನಿಯಲ್ಲಿರುವ ಡ್ರೇಪುಂಗ್ ದೇಗುಲದಲ್ಲಿ ಒಂದು ಅಂತಾರಾಷ್ಟ್ರೀಯ ಸಭೆ ನಡೆಯಿತು. ಜಾಗತಿಕ ಖ್ಯಾತಿಯ ಅನೇಕ ನರವಿಜ್ಞಾನಿಗಳು, ತತ್ತ್ವಶಾಸ್ತ್ರ ಚಿಂತಕರು, ಮನೋವೈದ್ಯರು, ಭೌತ ವಿಜ್ಞಾನಿ­ಗಳು, ಮಿದುಳರೋಗ ತಜ್ಞರು ಅಲ್ಲಿದ್ದರು. ಪ್ಯಾರಿ­ಸ್ಸಿನ ಪಾಶ್ಚರ್ ವಿ.ವಿ.ಯಲ್ಲಿ ಕಣಜೀವ ವಿಜ್ಞಾನ­ದಲ್ಲಿ ಡಾಕ್ಟರೇಟ್ ಪಡೆದ ಫ್ರೆಂಚ್ ಸನ್ಯಾಸಿ ಮ್ಯಾಥ್ಯೂ ರಿಕ್ಕಾರ್ಡ್, ಕೇಂಬ್ರಿಜ್‌ನಲ್ಲಿ ತತ್ತ್ವ­ಶಾಸ್ತ್ರ­ದಲ್ಲಿ ಡಾಕ್ಟೊರೇಟ್ ಪಡೆದ ಟಿಬೆಟನ್ ಜಿನ್ಪಾ ಥುಪ್ಟೆನ್ ಕೂಡ ಇದ್ದರು. ಮಿದುಳನ್ನು ಒಳಗಿನಿಂದಲೇ ನೋಡುವ ಬೌದ್ಧ ಯೋಗಿಗಳು ಮಿದುಳಿನ ವ್ಯಾಪಾರಗಳನ್ನು ಹೊರಗಿನಿಂದ ನೋಡುವ (ಸಲಕರಣೆ ಆಧರಿತ) ಆಧುನಿಕ ವಿಜ್ಞಾನದೊಂದಿಗೆ ಸಂವಾದ ನಡೆಸಿದರು. ಆಳ ಧ್ಯಾನಸ್ಥ ಸ್ಥಿತಿಯಲ್ಲಿ ನಮ್ಮ ನರಕೋಶಗಳಲ್ಲಷ್ಟೇ ಅಲ್ಲ, ಡಿಎನ್‌ಎಯಲ್ಲೂ ಜೀನ್‌ಗಳಲ್ಲೂ ಎಂತೆಂಥ ಪಲ್ಲಟಗಳಾಗುತ್ತವೆ ಎಂಬುದನ್ನು ವಿಜ್ಞಾನಿಗಳು ಹೇಳುತ್ತ ಹೋದರೆ ಟಿಬೆಟನ್ ಸನ್ಯಾಸಿಗಳು ವಿಶ್ವ ಚೇತನವನ್ನು ನಮ್ಮೊಳಗೆ ಅಂತಸ್ಥ­ಗೊಳಿಸುವ ತಂತ್ರಗಳ ಬಗ್ಗೆ ಹೇಳುತ್ತ ಹೋದರು.

ಇವೆರಡೂ ನಮಗೆ ಅರ್ಥವಾಗುವುದಿಲ್ಲ; ಧ್ಯಾನಕ್ಕೆ ಕೂತರೂ ಮನಸ್ಸು ಚಂಚಲವಾಗುತ್ತದೆ ಎನ್ನುವವರಿಗೆ ‘ಮಂಡಲ’ ಎಂಬ ಆಟಿಗೆಯನ್ನು ಅಮೆ­ರಿಕದಲ್ಲಿರುವ ಶ್ರೀವತ್ಸ ಜೋಶಿ ನಿನ್ನೆ ಪರಿಚಯಿಸಿದ್ದಾರೆ. ಯೂಟ್ಯೂಬ್‌ನಲ್ಲಿ ‘ಮಂಡಲ ಮೆಡಿಟೇಶನ್ ಟಾಯ್’ ಎಂದು ಟಂಕಿಸಿ ಅದರ ಚಮತ್ಕಾರವನ್ನು ನೋಡಬಹುದು. ಧ್ಯಾನಕ್ಕೆ ಕೂತಾಗ ಮನಸ್ಸನ್ನು ಕೇಂದ್ರೀಕರಿ­ಸ­ಲೆಂದೇ ಎರಡು ಸಾವಿರ ವರ್ಷಗಳ ಹಿಂದೆ ಭಾರ­ತೀಯರು ತಯಾರಿಸಿದ್ದ ಈ ತಂತಿಯ ಚಂಡನ್ನು ವಾಷಿಂಗ್ಟನ್‌ನಲ್ಲಿ ‘ವಾಯುಮಂಡಲ ಮತ್ತು ಬಾಹ್ಯಾಕಾಶ ವಸ್ತು ಸಂಗ್ರಹಾಲಯ’­ದಲ್ಲಿಟ್ಟಿ­ದ್ದಾರಂತೆ. ಈ ಆಟಿಗೆಯನ್ನು ಅತ್ತಿತ್ತ ಬಗ್ಗಿಸಿ ಹೂವಿ­ನಂತೆ, ವಜ್ರದಂತೆ, ಚಕ್ರದಂತೆ, ಸಿಲಿಂಡ­ರಿ­ನಂತೆ, ನವಗ್ರಹಗಳಂತೆ ನಾನಾ ಬಗೆಯ ಆಕಾರ­ಗಳನ್ನು ಕೊಡುತ್ತ ಹೋಗಬಹುದು. ಆಗಿನ ಕಾಲ­ದಲ್ಲಿ ಚಿನ್ನದ ತಂತಿಗಳಿಗೆ ಹರಳುಗಳನ್ನು ಪೋಣಿಸಿ ಧ್ಯಾನಕ್ಕೆಂದೇ ಸಿದ್ಧವಾಗುತ್ತಿದ್ದ ಇದು ಇಂದು ಮಕ್ಕಳ ಆಟಿಗೆಯಾಗಿ ಮಾರಾಟಕ್ಕೆ ಸಿಗುತ್ತಿದೆ.

ಅವೆಲ್ಲ ಸರಿ, ನಮ್ಮವರ ಕೌಶಲವನ್ನು ಸ್ವಿತ್ಸ­ರ್ಲೆಂಡಿನ ಪ್ರಜೆಗಳ ಸಮಕ್ಕೆ ತರುವುದು ಹೇಗೆ? ಸರಿಯಾದ ಗುರುಗಳು ಸಿಕ್ಕರೆ ಜೂನ್ ೨೧ರ ‘ವಿಶ್ವ ಯೋಗ’ ದಿನದಂದಾದರೂ ವಿದ್ಯಾರ್ಥಿಗಳಿಗೆ ಒಂದಿಷ್ಟು ಪ್ರಾಣಾಯಾಮ ಮಾಡಿಸಬೇಕೆಂದು ಸಿಲೆಬಸ್‌ನಲ್ಲಿ ಸೇರಿಸಬಹುದಿತ್ತು. ಆಗ ಇನ್ನೊಂದು ಪ್ರಶ್ನೆ ಎದುರಾಗುತ್ತದೆ: ಯೋಗ್ಯ ಗುರುಗಳನ್ನು ಸೃಷ್ಟಿಸುವುದು ಹೇಗೆ?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT