ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವಲಸೆಯ ಸುತ್ತ-ಮುತ್ತ

Last Updated 10 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಕಳೆದ ವಾರವಷ್ಟೇ ಲಂಡನ್ನಿನ ಮೆಟ್ರೊಪಾಲಿಟನ್ ವಿಶ್ವವಿದ್ಯಾಲಯಕ್ಕೆ ಯೂರೋಪಿಯನ್ ಯೂನಿಯನ್ (27 ದೇಶಗಳ ಒಕ್ಕೂಟ)ಗೆ ಸೇರದ ದೇಶಗಳ ವಿದ್ಯಾರ್ಥಿಗಳಿಗೆ ಪ್ರವೇಶ ಮತ್ತು ಪ್ರಾಯೋಜಕತ್ವವನ್ನು ನೀಡಲು, ತಾನೇ ನೀಡಿದ್ದ ಅನುಮತಿಯನ್ನು ಬ್ರಿಟಿಷ್ ಸರ್ಕಾರ ಹಿಂದೆ ಪಡೆದಿದೆ.
 
ಭಾರತದ 350 ವಿದ್ಯಾರ್ಥಿಗಳೂ ಸೇರಿದಂತೆ, ಈ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 2000 ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಈ ನಿರ್ಧಾರದಿಂದ ಕಂಗಾಲಾಗಿದ್ದು, ಬೇರೊಂದು ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಬೇಕು, ಇಲ್ಲವೇ ಸ್ವದೇಶಕ್ಕೆ ಮರಳಬೇಕು ಎಂಬ ಸ್ಥಿತಿ ತಲುಪಿದ್ದಾರೆ.

ವಿಶೇಷವಾಗಿ ಭಾರತ, ಆಫ್ರಿಕಾ ಮತ್ತು ಕೆರಿಬಿಯನ್ ರಾಷ್ಟ್ರಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವಂತಹ ಮೆಟ್ರೊಪಾಲಿಟನ್ ವಿಶ್ವವಿದ್ಯಾಲಯ, ವೀಸಾ ನಿಯಮಗಳು ಹಾಗೂ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಅಸಮರ್ಥವಾಗಿರುವುದರಿಂದ ಇಂಥ ಕಠಿಣಕ್ರಮವನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಉದ್ಭವಾಯಿತು ಎಂದು ಯುನೈಟೆಡ್ ಕಿಂಗ್‌ಡಮ್ ಬಾರ್ಡರ್ ಏಜೆನ್ಸಿ (ಯು.ಕೆ.ಬಿ.ಎ) ಎಂಬ ಸಂಸ್ಥೆ ತಿಳಿಸಿದೆ.

ಈ ನಿರ್ಧಾರ ಕೇವಲ ಒಂದು ವಿಶ್ವವಿದ್ಯಾಲಯದ ಸಮಸ್ಯೆಯಾಗಿರದೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿರುವ ಭಾರತೀಯ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಿಗೂ ಎಚ್ಚರಿಕೆಯ ಕರೆಗಂಟೆಯನ್ನು ಬಾರಿಸಿದೆ.
ವಿಶ್ವದ ಉನ್ನತ ಶಿಕ್ಷಣ ಭೂಪಟದಲ್ಲಿ ಬ್ರಿಟನ್ನಿನ ವಿಶ್ವವಿದ್ಯಾಲಯಗಳಿಗೆ ವಿಶೇಷ ಸ್ಥಾನವಿದ್ದು ಉನ್ನತ ಶಿಕ್ಷಣಾವಕಾಶಗಳನ್ನರಸಿ ಈ ದೇಶಕ್ಕೆ ವಲಸೆ ಬರುತ್ತಿರುವ ಹೊರದೇಶಗಳ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಒಂದು ದಶಕದಲ್ಲಿ ಅತ್ಯಂತ ಹೆಚ್ಚಿದೆ.
 
ಬ್ರಿಟನ್ನಿನ ಉನ್ನತ ಶಿಕ್ಷಣ ಸಂಖ್ಯಾಶಾಸ್ತ್ರೀಯ ಸಂಸ್ಥೆಯ ಅಂಕಿ-ಅಂಶಗಳ ಅನ್ವಯ ಕಳೆದ ಐದು ವರುಷಗಳಲ್ಲಿ ಆ ದೇಶಕ್ಕೆ ಬಂದಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪ್ರಮಾಣದಲ್ಲಿ ಶೇಕಡ 35ರಷ್ಟು ಹೆಚ್ಚಳವಾಗಿದ್ದು, 2000-01ರ ಶೈಕ್ಷಣಿಕ ವರ್ಷದಿಂದೀಚೆಗೆ ಈ ಸಂಖ್ಯೆ ದ್ವಿಗುಣವಾಗಿದೆ.

ಬ್ರಿಟನ್ನಿನ ವಲಸೆ ನಿಯಮಗಳ ಪ್ರಕಾರ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ದೇಶದಲ್ಲಿ ವಾಸಿಸುತ್ತಿರುವ ಎಲ್ಲ ವಿದೇಶಿಯರನ್ನೂ ವಲಸಿಗರು  ಎಂದು ಪರಿಗಣಿಸಲಾಗುತ್ತದೆ. ಈ ಗುಂಪಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವವರು ಬ್ರಿಟನ್ನಿನ ವಿಶ್ವವಿದ್ಯಾಲಯಗಳು ಅಥವಾ ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನವನ್ನು ಕೈಗೊಳ್ಳಲು ವೀಸಾಗಳನ್ನು ಪಡೆದು ದೇಶವನ್ನು ಪ್ರವೇಶಿಸಿರುವಂಥ ವಿದ್ಯಾರ್ಥಿಗಳು.
 
ಕಳೆದ ವರ್ಷದ ಆರಂಭದಲ್ಲೇ ಇವರ ಸಂಖ್ಯೆ ಸುಮಾರು 4,30,000 ಇದ್ದದ್ದು, ಈ ವರ್ಷದ ಜೂನ್ ತಿಂಗಳಿನವರೆಗೆ 2,82,000 ವಿದ್ಯಾರ್ಥಿ ವೀಸಾಗಳನ್ನು ನೀಡಲಾಗಿದೆ ಎಂದು  ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಸಹಜವಾಗಿಯೇ ಈ ಗುಂಪಿನ ಮೇಲೆ ಅಂತರರಾಷ್ಟ್ರೀಯ ವಲಸೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿರುವ ಯು.ಕೆ.ಬಿ.ಎ. ಸಂಸ್ಥೆಯ ನಿಯಂತ್ರಣ ಹೆಚ್ಚುತ್ತಿರುವುದು.

ತನ್ನ ವಿಶ್ವವಿದ್ಯಾಲಯಗಳಿಗೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸಬೇಕೆಂಬ ಭಾವನೆಗೆ ಬ್ರಿಟನ್ನಿನ ಸರ್ಕಾರದ ಬದ್ಧತೆಯಿದೆ. ಏಕೆಂದರೆ ಈ ವಿದ್ಯಾರ್ಥಿಗಳಿಂದ ಸಂದಾಯವಾಗುವ ಶುಲ್ಕ ವಿಶ್ವವಿದ್ಯಾಲಯಗಳಿಗೆ ಒಂದು ಪ್ರಮುಖ ಆದಾಯ ಮೂಲ.

ಹೊರದೇಶಗಳಿಂದ ಬ್ರಿಟನ್ನಿನ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾಕಾಂಕ್ಷಿಗಳಾಗಿ ಬಂದಿರುವ ವಿದ್ಯಾರ್ಥಿಗಳಿಂದ ಸೃಷ್ಟಿಯಾಗುತ್ತಿರುವ ಆರ್ಥಿಕ ಸಂಪನ್ಮೂಲ 8.4 ಬಿಲಿಯನ್ ಪೌಂಡು (ಒಂದು ಪೌಂಡಿಗೆ 73.59 ರೂಪಾಯಿಗಳು)ಗಳಾಗಿದ್ದು, 2025ರ ವೇಳೆಗೆ ಇದು ಹೆಚ್ಚು ಕಡಿಮೆ 17 ಬಿಲಿಯನ್ ಪೌಂಡುಗಳಾಗುವ ಸಾಧ್ಯತೆಯಿದೆ ಎಂದು ಅಂದಾಜು ಮಾಡಲಾಗಿದೆ.

ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ವಿಶ್ವವಿದ್ಯಾಲಯಗಳಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಸ್ಥಳೀಯರು ಅಥವಾ ಸ್ವದೇಶಿ ವಿದ್ಯಾರ್ಥಿಗಳಿಗಿಂತ ಅಧಿಕವಾದ ಶೈಕ್ಷಣಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರಿ ಮೂಲಗಳಿಂದ ಧನಸಹಾಯ ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ, ವಿದೇಶಿ ವಿದ್ಯಾರ್ಥಿಗಳು ಪಾವತಿಸುವ ಶುಲ್ಕ ಒಂದು ಪ್ರಮುಖ ಆದಾಯ ಮೂಲ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾದ ಒಂದು  ಕಟು ಸತ್ಯ.
 
ಆದರೆ ಹಣಗಳಿಕೆಯಷ್ಟೇ ಮುಖ್ಯವಲ್ಲ, ವಿದ್ಯಾರ್ಥಿಗಳಾಗಿ ದೇಶವನ್ನು ಪ್ರವೇಶಿಸುವ ವ್ಯಕ್ತಿಗಳು 2 ಬಗೆಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೊದಲನೆಯದು, ಕನಿಷ್ಠ ಮಟ್ಟದ ಶೈಕ್ಷಣಿಕ ಅಗತ್ಯಗಳಾನ್ನಾದರೂ ಪೂರೈಸಬೇಕಾದದ್ದು ಮತ್ತು ಎರಡನೆಯದು, ವಲಸೆಗೆ ಸಂಬಂಧಿಸಿದ ನಿಯಮಗಳನ್ನು ಗೌರವಿಸಬೇಕಾದ್ದು.

ವಿಶ್ವದಾದ್ಯಂತ ಇಂದು ಅಂತರರಾಷ್ಟ್ರೀಯ ವಿದ್ಯಾರ್ಥಿ ಸಂಚಲನ ವ್ಯಾಪಕವಾಗಿ ಸಂಭವಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಭಾಗಿಗಳಾಗಿರುವ ಬಹುತೇಕ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಒಂದು ಪ್ರಮುಖ ಸವಾಲೆಂದರೆ ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದ್ದು.

ತಾವು ದಾಖಲಾಗುವ ಶಿಕ್ಷಣ ಸಂಸ್ಥೆಯಲ್ಲಿ ತರಗತಿಗಳಲ್ಲಿ ಬಳಸಲಾಗುವ ಭಾಷೆಯನ್ನು ಅರ್ಥ ಮಾಡಿಕೊಳ್ಳುವ, ಅದರಲ್ಲಿ ಓದುವ, ಬರೆಯುವ ಮತ್ತು ಸಂಭಾಷಣೆಯಲ್ಲಿ ತೊಡಗುವ ಶಕ್ತಿಯನ್ನು ವಿದ್ಯಾರ್ಥಿಗಳು ಪಡೆಯಲೇಬೇಕೆಂಬ ನಿಯಮವೇನೋ ಇದೆ. ಆದರೆ ವಾಸ್ತವದಲ್ಲಿ ಈ ನಿಯಮದ ಪಾಲನೆ ಎಲ್ಲೆಡೆಯಾಗುತ್ತಿಲ್ಲ.

ವಸಾಹತುಶಾಹಿ ಆಳ್ವಿಕೆಗೆ ಒಳಪಟ್ಟಿದ್ದ ಅನೇಕ ದೇಶಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಲಭ್ಯವಿದ್ದ ಆಧುನಿಕ ಶಿಕ್ಷಣವನ್ನು ಪಡೆಯಲು ಸಾಧ್ಯವಾದಂಥ ಸ್ಥಿತಿಯಲ್ಲಿ ಒಂದು ವರ್ಗವಿದ್ದರೆ, ಮತ್ತೊಂದು ವರ್ಗ ಅದನ್ನು ಪಡೆಯಲಾಗಲಿಲ್ಲ ಎನ್ನುವುದು ಶೈಕ್ಷಣಿಕ ಇತಿಹಾಸದ ಪುಟಗಳಲ್ಲಿ ಸೇರಿಹೋಗಿರುವಂಥ ಒಂದು ಸತ್ಯ ಸಂಗತಿ.

ಆದರೆ ಸಮಾಜಗಳು ಸ್ವಾತಂತ್ರ್ಯ ಹಾಗೂ ಸಮಾನತೆಗಳತ್ತ ಚಲಿಸುತ್ತಾ ಹೋದಹಾಗೆಲ್ಲ ಆಧುನಿಕ ಶಿಕ್ಷಣ ಹಾಗೂ ಅದು ತರುವಂತಹ ಅನುಕೂಲಗಳನ್ನು, ಸ್ವದೇಶ ಅಥವಾ ವಿದೇಶದಲ್ಲಿ ಪಡೆಯಬೇಕೆಂಬ ಹಂಬಲ ಅದರಿಂದ ವಂಚಿತವಾದ ವರ್ಗಗಳಲ್ಲಿ ಹೆಚ್ಚುತ್ತಾ ಹೋಯಿತು. ವಿಶೇಷವಾಗಿ ಕಳೆದ ಶತಮಾನದಲ್ಲಿ  ಸ್ವಾತಂತ್ರ್ಯವನ್ನು ಪಡೆದ ಅನೇಕ ದೇಶಗಳಲ್ಲಿ ಈ ಭಾವನೆ ಹೆಚ್ಚು ಜಾಗೃತವಾಗುತ್ತಾ ಹೋಯಿತು.

ಮಾತೃಭಾಷಾ ಮಾಧ್ಯಮದಲ್ಲೇ ತಮ್ಮ ಶಾಲಾ ಶಿಕ್ಷಣವನ್ನು ಪಡೆದಿರುವಂಥ ವಿದ್ಯಾರ್ಥಿಗಳಿಗೆ ಇದ್ದಕ್ಕಿದ್ದ ಹಾಗೆ ಆಂಗ್ಲಭಾಷಾ ಮಾಧ್ಯಮ ಎದುರಾದಾಗ ಅದನ್ನು ನಿಭಾಯಿಸುವುದು ಕಷ್ಟವೇ. ಆದರೆ ಬೇರೊಂದು ದೇಶಕ್ಕೆ ಹೊರಟಾಗ ಅಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಚಾಲ್ತಿಯಲ್ಲಿರುವ ಸಂದರ್ಭಗಳಿಗೆ ಈ ವಿದ್ಯಾರ್ಥಿಗಳು ತಮ್ಮನ್ನು ಅಳವಡಿಸಿಕೊಳ್ಳಲೇಬೇಕು.

ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳುವಾಗ ಈ ವಿಷಯದತ್ತ ಗಮನ ಹರಿಸುವುದು ವಿಶ್ವವಿದ್ಯಾಲಯಗಳ ಜವಾಬ್ದಾರಿ. ಮೆಟ್ರೊಪಾಲಿಟನ್ ವಿಶ್ವವಿದ್ಯಾನಿಲಯ ಭಾಷಾ ಕೌಶಲ್ಯಗಳನ್ನು ಪಡೆಯದಿರುವ ಅನೇಕ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದೆ ಎನ್ನುವುದು ಅದಕ್ಕೆ ನೀಡಿದ್ದ ಮಾನ್ಯತೆಯನ್ನು ಹಿಂಪಡೆಯಲು ಒಂದು ಮುಖ್ಯ ಕಾರಣ.

ಶೇಕಡ 56.80ರಷ್ಟು ವಿದ್ಯಾರ್ಥಿಗಳು ಹಾಜರಾತಿ ನಿಯಮಗಳನ್ನು ಉಲ್ಲಂಘಿಸಿರುವುದು ಕೂಡ ಅವರ ಪ್ರವೇಶಾತಿಯನ್ನು ರದ್ದು ಮಾಡುವ ನಿರ್ಧಾರಕ್ಕೆ ತಮ್ಮನ್ನು ಪ್ರೇರೇಪಿಸಿದಂಥ ಒಂದು ಅಂಶ ಎಂದು ಯು.ಕೆ.ಬಿ.ಎ. ತಿಳಿಸಿದೆ.

ಹೊರದೇಶವೊಂದಕ್ಕೆ ಶಿಕ್ಷಣಾವಕಾಶಗಳನ್ನು ಅರಸಿ ಹೊರಟಾಗ, ಅಲ್ಲಿನ ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗುವಂಥ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಪಡೆಯುವುದು ಎಷ್ಟು ಮುಖ್ಯವೋ ಅಂತರರಾಷ್ಟ್ರೀಯ ವಲಸೆಯ ನಿಬಂಧನೆಗಳಿಗೆ ಒಳಪಡುವುದು ಅದಕ್ಕಿಂತ ಮುಖ್ಯವಾದುದು.

ವಿದ್ಯಾರ್ಥಿಗಳಾಗಿ ಪ್ರವೇಶ ಪಡೆಯಲು ಅಗತ್ಯವಾದ ವಿದ್ಯಾರ್ಥಿ ವೀಸಾಗಳನ್ನು ಪಡೆಯದೆ ಅಥವಾ ವೀಸಾದ ಅವಧಿ ಮುಗಿದುಹೋದ ಮೇಲೂ ಅದನ್ನು ನವೀಕರಿಸದೆ ಅನಧಿಕೃತವಾಗಿ ಒಂದು ದೇಶದಲ್ಲಿ ವಾಸಿಸುವುದು ಕಾನೂನುಬಾಹಿರವಾದ ಕ್ರಿಯೆ.

ಮೆಟ್ರೊಪಾಲಿಟನ್ ವಿಶ್ವವಿದ್ಯಾನಿಲಯ ತನ್ನ ಶೇಕಡ 26ರಷ್ಟು ವಿದ್ಯಾರ್ಥಿಗಳು ಸೂಕ್ತ ವೀಸಾಗಳನ್ನು ಹೊಂದದಿರುವುದನ್ನು ಗಂಭೀರವಾಗಿ ಪರಿಗಣಿಸದೆ, ಅವರಿಗೆ ಆಶ್ರಯತಾಣದಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಗಂಭೀರ ಆಪಾದನೆಯನ್ನು ಮಾಡಿರುವ ಯು.ಕೆ.ಬಿ.ಎ, ಈ ವಿಶ್ವವಿದ್ಯಾನಿಲಯ ವಿದೇಶಿ ವಿದ್ಯಾರ್ಥಿಗಳನ್ನು ಪ್ರಾಯೋಜಿಸುವ ಅರ್ಹತೆಯನ್ನು ಕಳೆದುಕೊಂಡಿದೆ ಎಂಬ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದೆ.

ಲಂಡನ್ನಿನ ವಿಶ್ವವಿದ್ಯಾಲಯವೊಂದರಲ್ಲಿ ಉದ್ಭವಿಸಿರುವ ಪರಿಸ್ಥಿತಿಯನ್ನು ಒಂದು ಪ್ರತ್ಯೇಕಿತ ಘಟನೆಯೆಂದು ಪರಿಗಣಿಸದೆ, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್, ಅಮೆರಿಕ ಮುಂತಾದ ದೇಶಗಳು ಇದನ್ನು ಒಂದು ಜಾಗತಿಕ ಸವಾಲೆಂದು ಪರಿಗಣಿಸುವಂಥ ಸ್ಥಿತಿ ಇಂದು ಬಂದಿದೆ.
 
ಕೆಲ ವಿದೇಶಿ ವಿದ್ಯಾರ್ಥಿಗಳಿಂದ ವೀಸಾ ನಿಯಮಗಳ ಉಲ್ಲಂಘನೆ, ಇಂದು ಭಾರತವೂ ಸೇರಿದಂತೆ ಅನೇಕ ದೇಶಗಳು ಎದುರಿಸುತ್ತಿರುವಂಥ ಒಂದು ವಾಸ್ತವ. ವಿದ್ಯಾರ್ಥಿ ದಿಸೆಯನ್ನು ಪೂರೈಸಿ, ಪರೀಕ್ಷೆಗಳು ಮುಗಿದು, ಫಲಿತಾಂಶಗಳು ಪ್ರಕಟವಾದ ನಂತರವೂ ಸ್ವದೇಶಕ್ಕೆ ಹಿಂದಿರುಗಲಿಚ್ಛಿಸದೆ ಏನಾದರೊಂದು ಕಾರಣವನ್ನು ಹುಡುಕಿ ವಲಸೆಯ ದೇಶದಲ್ಲೆೀ ಮುಂದುವರೆಯಲು ಪ್ರಯತ್ನ ಪಡುವಂಥವರ ಸಂಖ್ಯೆ ಇಂದು ಕ್ರಮೇಣ ಹೆಚ್ಚುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ.

ಅಂತರರಾಷ್ಟ್ರೀಯ ವಿದ್ಯಾರ್ಥಿ ವಲಸೆ ಹೆಚ್ಚಾಗಿರುವ ದೇಶಗಳಲ್ಲಿ ಇತ್ತೀಚೆಗಷ್ಟೇ ಕಾನೂನು ಪಾಲನಾ ವ್ಯವಸ್ಥೆಯಿಂದ ಹೊರಹೊಮ್ಮಿರುವ ಒಂದು ಸೂಚನೆಯೆಂದರೆ, ವಿದ್ಯಾರ್ಥಿಗಳ ಸೋಗಿನಲ್ಲಿ ಕೆಲ ವ್ಯಕ್ತಿಗಳು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗುವ ಉದ್ದೇಶದಿಂದ ಪ್ರವೇಶ ಪಡೆಯುತ್ತಿದ್ದಾರೆ ಎನ್ನುವುದು.

ಯಾವುದೇ ಸಂದರ್ಭದಲ್ಲಿಯೂ ಇದನ್ನು ಸಾಮಾನ್ಯೀಕರಣಗೊಳಿಸುವುದು ಸರಿಯಲ್ಲವಾದರೂ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಈ ಸೂಚನೆಯನ್ನು ಗಂಭೀರವಾಗಿ ಸ್ವೀಕರಿಸಿ, ತಮ್ಮ ಆಂತರಿಕ ನಿಯಂತ್ರಣಾ ವ್ಯವಸ್ಥೆಯನ್ನು ಭದ್ರ ಮಾಡಿಕೊಳ್ಳಬೇಕು.

ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿಗೆ ಸಂಬಂಧಿಸಿದ ಹಾಗೆ ಸ್ಪಷ್ಟ ನಿಯಮಗಳನ್ನು ರೂಪಿಸಿ, ಅವುಗಳನ್ನು ಪೂರೈಸದ ವ್ಯಕ್ತಿಗಳಿಗೆ ಪ್ರವೇಶವನ್ನು ನಿರಾಕರಿಸುವಂಥ ಬಿಗಿ ನಿಲುವುಗಳನ್ನು ಈ ಸಂಸ್ಥೆಗಳು ತಳೆಯಬೇಕಾಗುತ್ತದೆ. ಹಾಗಾಗದಿದ್ದಲ್ಲಿ ಅರ್ಹ, ಆಸಕ್ತ ಮತ್ತು ನಿಯಮಗಳನ್ನು ಪಾಲಿಸುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತದೆ.

ಈಗ ಮೆಟ್ರೊಪಾಲಿಟನ್ ವಿಶ್ವವಿದ್ಯಾಲಯದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಪರಿಸ್ಥಿತಿಯನ್ನೇ ತೆಗೆದುಕೊಳ್ಳೋಣ.ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿ ಸ್ಥಾನವನ್ನು ಕಳೆದುಕೊಂಡು ಅತಂತ್ರ ಪರಿಸ್ಥಿತಿಗೆ ತಳ್ಳಲ್ಪಟ್ಟಿರುವ ವಿದ್ಯಾರ್ಥಿಗಳ ನೆರವಿಗೆ ಬರುವವರಾರು?

ಹೊರದೇಶದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ರದ್ದಾದರೆ ತಾವೇನೂ ಮಾಡಲು ಸಾಧ್ಯವಿಲ್ಲ, ಅವರ ಭವಿಷ್ಯಕ್ಕೆ ಭಾರತೀಯ ವಿದ್ಯಾರ್ಥಿಗಳೇ ಜವಾಬ್ದಾರರು ಎಂದು ಕೇಂದ್ರ ಮಾನವ ಸಂಪನ್ಮೂಲ ಮಂತ್ರಿಗಳು ಹೇಳಿ ತಮ್ಮ ಜವಾಬ್ದಾರಿಯಿಂದ

ನುಣುಚಿಕೊಂಡಿದ್ದಾರೆ. ಆದರೆ ಈ ಪರಿಸ್ಥಿತಿ ನಮ್ಮ ದೇಶದಲ್ಲೆೀ ಸೃಷ್ಟಿಯಾಗುವ ದಿನ ದೂರವಿಲ್ಲ ಎಂಬುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಮನಗಂಡರೆ ಒಳಿತು.

ಉನ್ನತ ಶಿಕ್ಷಣವನ್ನು ಪಡೆಯಲು ಏಷಿಯಾ ಮತ್ತು ಆಫ್ರಿಕಾ ಖಂಡಗಳ ದೇಶಗಳಿಂದ ನಮ್ಮ ದೇಶಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಇದರಲ್ಲಿ ಕೆಲವರಿಗೆ ಭಾರತ ಸರ್ಕಾರದ ಪ್ರಾಯೋಜಕತ್ವವೂ ಇದೆ. ಆದರೆ ಭಾರತಕ್ಕೆ ಬರುತ್ತಿರುವ ಅಧಿಕ ಸಂಖ್ಯೆಯ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಸ್ವಂತ ಸಂಪನ್ಮೂಲಗಳನ್ನು ವ್ಯಯಮಾಡಿ ಬರುವಂಥವರು.
 
ಈ ವಿದ್ಯಾರ್ಥಿಗಳು ತಮ್ಮ ದೇಶಗಳಲ್ಲಿ ದೊರೆಯದ ಜ್ಞಾನ ಅಥವಾ ಅವಕಾಶಗಳನ್ನರಸಿ ನಮ್ಮ ದೇಶಕ್ಕೆ ಬಂದಾಗ, ಅವರ ಆಸೆಗಳಿಗೆ ಸ್ಪಂದಿಸಬೇಕಾದ್ದು ಸರಿಯೇ. ಆದರೆ ಎಂದಿಗೂ ಈ  ಭಾರತೀಯ ಸತ್ಕಾರ  ನಿಯಮಗಳ ಚೌಕಟ್ಟಿನ ಹೊರಗೆ ನಡೆಯುವಂತಹುದಲ್ಲ ಎಂಬ ಸ್ಪಷ್ಟ ಸಂದೇಶ ಶಿಕ್ಷಣ ಸಂಸ್ಥೆಗಳಿಂದ ಮೂಡಿ ಬರಬೇಕು.

ಅಂತರರಾಷ್ಟ್ರೀಯ ವಿದ್ಯಾರ್ಥಿ ಸಮುದಾಯದ ಆಗಮನದಿಂದ ಆರ್ಥಿಕ ಸಂಪನ್ಮೂಲಗಳು ವೃದ್ಧಿಸಬಹುದು. ಆದರೆ ಅವರು ಪಾಲಿಸಬೇಕಾದ ಶೈಕ್ಷಣಿಕ ಶಿಷ್ಟಾಚಾರಗಳು ಹಾಗೂ ಗೌರವಿಸಬೇಕಾದ ವೀಸಾ ಮತ್ತು ಇದರ ಸಂಬಂಧಿ ಕಾನೂನುಗಳನ್ನು ಮೀರಿ ನಡೆದಾಗ ನಮ್ಮ ಸಂಸ್ಥೆಗಳು ಬಿಗಿಯಾದ ನಿಲುವುಗಳನ್ನು ತಾಳಬೇಕು.
 
ಹಾಗಾಗದಿದ್ದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿ ಸಂಚಲನ ಜಗತ್ತಿನ ಇತರ ಕೆಲವು ದೇಶಗಳಲ್ಲಿ ತಂದೊಡ್ಡಿರುವ ಸವಾಲುಗಳನ್ನು ಭಾರತವೂ ಎದುರಿಸುವ ದಿನ ದೂರವಿಲ್ಲ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT