ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿಗಳಿಗೆ ನೇಮಕ ಏಕೆ ತಡವಾಗುತ್ತಿದೆ ಎಂದರೆ...

Last Updated 20 ಮೇ 2017, 20:41 IST
ಅಕ್ಷರ ಗಾತ್ರ

ಇದೆಲ್ಲ ಇಷ್ಟು ಎಳೆದಾಡುವ ಸಂಗತಿಯಲ್ಲ. ಮನಸ್ಸು ಮಾಡಿದರೆ ಒಂದು ದಿನದಲ್ಲಿ ಎಲ್ಲವನ್ನೂ ಮಾಡಿ ಮುಗಿಸಬಹುದು. ಆದರೆ, ಏಕೆ ಇದೆಲ್ಲ ಒಂದು ಆದ್ಯತೆ ಮತ್ತು ಮಾಡಿ ಮುಗಿಸಲೇ ಬೇಕಾದ ಕೆಲಸ ಎಂದು ಅನಿಸುವುದಿಲ್ಲ ಎಂಬುದಕ್ಕೆ ಕಾರಣಗಳು ಇವೆ.

ಇದು ಹೀಗೆ ಆಗುತ್ತಿರುವುದು ಇದೇ ಮೊದಲು ಅಲ್ಲ, ಅಥವಾ ಈ ಸರ್ಕಾರವೇ ಇದರಲ್ಲಿ ಮೊದಲ ದೋಷಿ ಎಂದೂ ಅಲ್ಲ. ಕಳೆದ ಅನೇಕ ವರ್ಷಗಳಿಂದ ಇದು ನಡೆದುಕೊಂಡು ಬಂದಿರುವುದೇ ಹೀಗೆ.

ಬಹುತೇಕ ಅಕಾಡೆಮಿಗಳು ಖಾಲಿ ಬಿದ್ದು ಮೂರು ತಿಂಗಳಾಗುತ್ತ ಬಂತು. ಈ ಸರ್ಕಾರದ ಅವಧಿ ಸರಿಸುಮಾರು ಇನ್ನೂ ಒಂದು ವರ್ಷ ಇದೆ. ಅದು ಇಚ್ಛಿಸಿದರೆ ಖಾಲಿ ಇರುವ ಎಲ್ಲ ಅಕಾಡೆಮಿಗಳಿಗೆ ತಕ್ಷಣ  ನೇಮಕ ಮಾಡಬಹುದು.

ಮುಂದಿನ ಸರ್ಕಾರ ಬೇರೆ ಪಕ್ಷದ್ದು ಬಂದರೆ ಮಾತ್ರ ಇವರ ಅಧಿಕಾರಕ್ಕೆ ಸಂಚಕಾರ ಬರಬಹುದು.  ಇದೇ ಸರ್ಕಾರ ಮರಳಿ ಅಧಿಕಾರಕ್ಕೆ ಬಂದರೆ ಇವರೇ ಮುಂದುವರಿಯುತ್ತಾರೆ. ನೇಮಕ ಮಾಡುವುದರಿಂದ ಅಕಾಡೆಮಿಗಳ ಕಾರ್ಯ ಚಟುವಟಿಕೆಗಳಿಗೆ ಒಂದು ನಿರಂತರತೆ ಸಿಕ್ಕಂತೆ ಆಗುತ್ತದೆ.

ಈಗ ಏನಾಗಿದೆ ಎಂದರೆ ಖಾಲಿ ಇರುವ ಅಕಾಡೆಮಿಗಳಿಗೆ  ನೇಮಕ ಮಾಡಬೇಕೇ ಬೇಡವೇ ಎಂಬ ಕುರಿತು ಸರ್ಕಾರದ ಮಟ್ಟದಲ್ಲಿ ಒಂದು ನಿರ್ದಿಷ್ಟ ನಿಲುವು ಇರುವಂತೆ ಕಾಣುವುದಿಲ್ಲ. ಒಂದು ವರ್ಷದ ಮಟ್ಟಿಗೆ ಏಕೆ ಮಾಡುವುದು ಎಂದು ಅನಿಸಿದ್ದರೆ ಅದನ್ನಾದರೂ ಹೇಳಿ ಬಿಟ್ಟರೆ ಅಲ್ಲಿಗೆ  ಅನಿಶ್ಚಿತತೆ ಮುಗಿಯುತ್ತದೆ. ನಾನು ಇದನ್ನು ಯಾರಾದರೂ ಆಕಾಂಕ್ಷಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹೇಳುತ್ತಿಲ್ಲ.

ಇಂಥ ಸಂಸ್ಥೆಗಳ ನೇಮಕಕ್ಕೆ ಒಂದು ಖಚಿತ ನೀತಿ ನಿರೂಪಣೆ ಇರಬೇಕು ಮತ್ತು ಅದು ಚಾಚೂ ತಪ್ಪದಂತೆ ಪಾಲನೆ ಆಗಬೇಕು ಎಂಬ ದೃಷ್ಟಿಯಿಂದ ಹೇಳುತ್ತಿರುವೆ. ಇಂಥ ಒಂದು ನೀತಿ ನಿರೂಪಣೆಯ ಅಗತ್ಯವನ್ನು ಬರಗೂರು ರಾಮಚಂದ್ರಪ್ಪ ನೇತೃತ್ವದ ‘ಸಾಂಸ್ಕೃತಿಕ ನೀತಿ’ ಒತ್ತಿ ಹೇಳಿದೆ. ಆ ನೀತಿಗೆ ಸರ್ಕಾರ ಇನ್ನೂ ಅಧಿಕೃತ ಮಾನ್ಯತೆ ನೀಡಿಲ್ಲವಾದರೂ ಅದಕ್ಕೆ ತನ್ನ ತಾತ್ವಿಕ ಒಪ್ಪಿಗೆಯನ್ನು ನೀಡಿದೆ.

ಈ ಸರ್ಕಾರ ಅಧಿಕಾರಕ್ಕೆ ಬಂದುದು 2013ರ ಮೇ 13ರಂದು. 2014ರ ಫೆಬ್ರುವರಿ ವರೆಗೆ ಅಕಾಡೆಮಿಗಳಿಗೆ ಯಾವುದೇ ನೇಮಕ ಆಗಲಿಲ್ಲ. ಹಾಗೆ ನೋಡಿದರೆ ಹೊಸ ಸರ್ಕಾರ ಬಂದ ಹುರುಪಿನಲ್ಲಿ ಬೇಗನೇ ನೇಮಕಗಳು ಆಗಬೇಕಿತ್ತು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ನೇಮಕವಾಗಿದ್ದ ಎಲ್ಲ ಅಕಾಡೆಮಿಗಳ ಅಧ್ಯಕ್ಷರ ರಾಜೀನಾಮೆ ಕೇಳಿದ ಕಾಂಗ್ರೆಸ್‌ ಸರ್ಕಾರ ಮರು ನೇಮಕಕ್ಕೆ ಅದೇ ತರಾತುರಿ ತೋರಿಸಲಿಲ್ಲ.

ಎಲ್ಲ ಅಕಾಡೆಮಿಗಳು ಖಾಲಿ ಬಿದ್ದು ಒಂಬತ್ತು ತಿಂಗಳು ಕಳೆದ ನಂತರ ಹೊಸ ನೇಮಕ ಆಗಿತ್ತು. ಅದರಲ್ಲಿಯೂ ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಚಿ.ಸು.ಕೃಷ್ಣಸೆಟ್ಟಿ ಮತ್ತು ಇನ್ನಿಬ್ಬರು ರಾಜೀನಾಮೆ ಕೊಡಲು ನಿರಾಕರಿಸಿದ್ದಲ್ಲದೇ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟಿನ ಮೆಟ್ಟಿಲು ಏರಿದ್ದರು. 1990ರ ದಶಕದಲ್ಲಿ ಆಗ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಜಿ.ಎಸ್‌. ಶಿವರುದ್ರಪ್ಪನವರು ಕೂಡ ರಾಜೀನಾಮೆ ಕೊಡಲು ನಿರಾಕರಿಸಿದ್ದರು.

‘ಇದು ಸ್ವಾಯತ್ತ ಸಂಸ್ಥೆ’ ಎಂದು ಅವರು ಪ್ರತಿಪಾದಿಸಿದ್ದರು. ಆದರೆ, ಅದಕ್ಕಿಂತ ಸ್ವಲ್ಪ ಮುಂಚೆ ಬಿ.ವಿ.ವೈಕುಂಠರಾಜು ಅವರು ಮತ್ತು ಸ್ವಲ್ಪ ಕಾಲದ ನಂತರ ಬರಗೂರು ರಾಮಚಂದ್ರಪ್ಪ ಅವರು ಅದೇ ಪಕ್ಷದ ಸರ್ಕಾರಗಳು ಇದ್ದರೂ, ನಾಯಕತ್ವ ಬದಲಾಯಿತು ಎಂಬ ಕಾರಣಕ್ಕಾಗಿ, ರಾಜೀನಾಮೆ ನೀಡಿದ್ದರು. ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ವೈಕುಂಠರಾಜು ಅವರು ರಾಮಕೃಷ್ಣ ಹೆಗಡೆಯವರು ರಾಜೀನಾಮೆ ನೀಡಿದ ನಂತರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಬಂಗಾರಪ್ಪನವರ ರಾಜೀನಾಮೆ ನಂತರ ರಾಮಚಂದ್ರಪ್ಪನವರು ಸಾಹಿತ್ಯ ಅಕಾಡೆಮಿಗೆ ರಾಜೀನಾಮೆ ನೀಡಿದ್ದರು.

ಅದು ಇತಿಹಾಸ. ಆದರೆ, ಸರ್ಕಾರಕ್ಕೆ ತನ್ನ ಕಾಲದಲ್ಲಿ ತನಗೆ ಬೇಕಾದವರನ್ನು ನೇಮಕ ಮಾಡುವ ಅಧಿಕಾರ ಇದೆ. ಜಾತಿ, ಪ್ರದೇಶ ಮತ್ತು ಅರ್ಹತೆ ನೋಡಿ ನೇಮಕ ಮಾಡುವುದು ಯಾವಾಗಲೂ ನಡೆದುಕೊಂಡು ಬಂದ ದಾರಿಯಾಗಿದೆ. ಈ ಸರ್ಕಾರ ಇದ್ದರೂ ಅಷ್ಟೇ, ಬೇರೆ ಪಕ್ಷದ ಸರ್ಕಾರ ಇದ್ದರೂ ಅಷ್ಟೇ; ಒಂದು ಸಾರಿ ಅದು ಸರ್ಕಾರದ ನೇಮಕ ಅಂದ ಮೇಲೆ ಅಲ್ಲಿ ಅರ್ಹತೆ ಜೊತೆಗೆ ಪ್ರಭಾವ, ಪ್ರದೇಶ, ವಶೀಲಿ ಮುಂತಾದುದು ಇದ್ದೇ ಇರುತ್ತದೆ.

ಸಮಸ್ಯೆ ಏನು ಎಂದರೆ ನಿರ್ಧಾರ ತೆಗೆದುಕೊಳ್ಳುವುದನ್ನು ವಿಳಂಬ ಮಾಡಿದಷ್ಟೂ ಒತ್ತಡಗಳು ಹೆಚ್ಚುತ್ತ ಹೋಗುತ್ತವೆ. ಒತ್ತಡ ಹೆಚ್ಚಿದಷ್ಟೂ ಸರ್ಕಾರಕ್ಕೆ ನಿರ್ಣಯ ತೆಗೆದುಕೊಳ್ಳುವುದು ಕಷ್ಟವಾಗುತ್ತ ಹೋಗುತ್ತದೆ. ಎಲ್ಲ ನಿರ್ಣಯಗಳಿಗೆ ಒಂದಿಷ್ಟು ಅತೃಪ್ತಿ, ಅಸಮಾಧಾನ ಎನ್ನುವುದು ಇದ್ದೇ ಇರುತ್ತದೆಯಾದ ಕಾರಣ ಅದು ನಿರ್ಣಯ ತೆಗೆದುಕೊಳ್ಳುವುದಕ್ಕೆ ಅಡ್ಡಿಯಾಗಬಾರದು.

ಈಗ ಏನಾಗಿದೆ ಎಂದರೆ  ಕಳೆದ ಫೆಬ್ರುವರಿಯಲ್ಲಿ ಖಾಲಿಯಾಗಿರುವ ಅಕಾಡೆಮಿಗಳಿಗೆ ನೇಮಕ ಮಾಡುವ ಕುರಿತಂತೆ ಇನ್ನೂ ಯಾವ ಪ್ರಕ್ರಿಯೆಯೂ ಆರಂಭವಾಗಿಲ್ಲ. ಹಾಗೆ ನೋಡಿದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನೇಮಕಕ್ಕೆ ಸಂಬಂಧಿಸಿದಂತೆ ಒಂದು ಪಟ್ಟಿಯನ್ನೇ ಇನ್ನೂ ತಯಾರು ಮಾಡಿದಂತಿಲ್ಲ. ಮಾಡಬೇಕು ಎಂದು ಸಂಬಂಧಪಟ್ಟ ಸಚಿವರಿಂದ ಸೂಚನೆಯೂ ಬಂದಂತಿಲ್ಲ. ಅಂದರೆ ಸರ್ಕಾರದ ಮಟ್ಟದಲ್ಲಿ ಈ ಕುರಿತು ಯಾವ ತರಾತುರಿಯೂ ಇದ್ದಂತೆಯೂ ಇಲ್ಲ.

ಇದರಿಂದ ಎಲ್ಲ ಅಕಾಡೆಮಿಗಳ ಹಣ ಮತ್ತು ಅಧಿಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗವಾಗುತ್ತದೆ. ಅಕಾಡೆಮಿಗಳು ಮಾಡುವ ಕಾರ್ಯಕ್ರಮಗಳನ್ನಾಗಲೀ, ವಿಚಾರ ಸಂಕಿರಣಗಳನ್ನಾಗಲೀ  ಇಲಾಖೆ ಮಾಡುವುದಿಲ್ಲ. ಗೌರವ ಪ್ರಶಸ್ತಿ ಪ್ರದಾನ, ಪುಸ್ತಕ ಪ್ರಶಸ್ತಿ ಪ್ರದಾನದಂಥ ಕೆಲಸಗಳನ್ನೂ ಅಕಾಡೆಮಿ ಮಾಡುವುದಿಲ್ಲ.

ಅಕಾಡೆಮಿಗಳಿಗೆ ನೇಮಕ ಮಾಡುವಲ್ಲಿ ಒಂದು ಕ್ರಮವನ್ನು ಅನುಸರಿಸಿಕೊಂಡು ಬರದೇ ಇರುವುದರಿಂದ ಒಂದು ಅವಧಿಯಲ್ಲಿ ಮೂರು ವರ್ಷಗಳ ಪ್ರಶಸ್ತಿಗಳನ್ನು ಕೊಡಬೇಕಾದ ಅಕಾಡೆಮಿಗಳು ಐದು, ಆರು ವರ್ಷಗಳ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿವೆ. ಕಳೆದ ಸಾರಿ ಹೀಗೆಯೇ ಆಯಿತು. ಅದರಿಂದ ಅಕಾಡೆಮಿಗಳ ಮೇಲೆ ಅನಗತ್ಯ ಒತ್ತಡ ನಿರ್ಮಾಣವಾಗುತ್ತ ಹೋಯಿತು.

ಇವೆಲ್ಲ ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಸ್ವಾಯತ್ತವಾಗಿ ಕೆಲಸ ಮಾಡಿಕೊಂಡು ಹೋಗಬೇಕಾದ ಸಂಸ್ಥೆಗಳು. ಅವು ಅಸ್ತಿತ್ವದಲ್ಲಿ ಇದ್ದರೆ ಅವುಗಳ ಇತಿಮಿತಿಯಲ್ಲಿ ಏನೋ ಒಂದು ಕೆಲಸ ಆಗುತ್ತ ಇರುತ್ತದೆ. ಅವು ಅಸ್ತಿತ್ವದಲ್ಲಿ ಇಲ್ಲ ಎಂದರೆ ಅಷ್ಟರಮಟ್ಟಿಗೆ ಸಾಂಸ್ಕೃತಿಕ ಲೋಕ ಬಡವಾಗುತ್ತದೆ. ಈ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಸಂಪುಟದಲ್ಲಿ ಇರುವ ಏಕೈಕ ಮಹಿಳೆ ನಿಭಾಯಿಸುತ್ತಿದ್ದಾರೆ ಮತ್ತು ವಿಶೇಷವಾಗಿ ಅವರು ಕೂಡ ರಂಗಭೂಮಿಯಿಂದ ಬಂದವರು.

ಇಂಥ ಸಾಂಸ್ಕೃತಿಕ ಸಂಸ್ಥೆಗಳ ಮಹತ್ವವನ್ನು ಅವರಿಗೆ ವಿವರಿಸಿ ಹೇಳಬೇಕಾದ ಅಗತ್ಯವೇನೂ ಇರುವಂತೆ ಕಾಣುವುದಿಲ್ಲ. ಆದರೆ, ಹಿಂದಿನ ಸಾರಿ ಅಕಾಡೆಮಿಗಳಿಗೆ ನೇಮಕ ಮಾಡುವಾಗಲೂ ಅವರೇ ಸಚಿವರಾಗಿದ್ದರು. ಆಗಲೂ ಅವರು ಇದೇ ರೀತಿ ವಿಳಂಬ ಮಾಡಿದ್ದರು. ಈಗಲೂ ಅವರು ಅದರ ಕಡೆಗೆ ಅಂಥ ಗಮನ ಕೊಟ್ಟಂತೆ ಕಾಣುವುದಿಲ್ಲ. ಸ್ವತಃ ನಟಿಯಾಗಿರುವ ಸಚಿವೆ ರಂಗ ಸಮಾಜದ ಸಲಹೆಯನ್ನೂ ಧಿಕ್ಕರಿಸಿ ರಂಗಾಯಣಗಳ ನಿರ್ದೇಶಕರನ್ನು ನೇಮಕ ಮಾಡದೇ ಇರುವುದು ಏನನ್ನು ಸೂಚಿಸುತ್ತ ಇರಬಹುದು?

ಹಿಂದಿನ ಸಾರಿ ಒಂಬತ್ತು ತಿಂಗಳುಗಟ್ಟಲೆ ನೇಮಕ ವಿಳಂಬವಾದಾಗ ಕವಿ ನಿಸಾರ್‌ ಅಹ್ಮದ್‌ ಅವರು ‘ಈ ಸರ್ಕಾರಕ್ಕೆ ಬೆಂಕಿ ಹಾಕ’ ಎಂದು ಕಿಡಿ ಕಾರಿದ್ದರು. ಅವರೂ ಒಂದು ಅವಧಿಗೆ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದವರು. ಇನ್ನು ಮೇಲೆ ನೇಮಕಕ್ಕೆ ವಿಳಂಬ ವ್ಯಾಧಿ ಸಾಮಾನ್ಯ ಎಂದು ಅನಿಸಿರುವುದರಿಂದಲೋ, ಎಷ್ಟು ಹೇಳಿದರೂ ಅಷ್ಟೇ ಎಂದು ಗೊತ್ತಾಗಿರುವುದರಿಂದಲೋ ಈ ಸಾರಿ ನಿಸಾರ್‌ ಅವರೂ ಸೇರಿದಂತೆ ಯಾರೂ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ.

ಒಂದು ವ್ಯವಸ್ಥೆ ಎನ್ನುವುದು ಇಲ್ಲದೇ ಇದ್ದರೆ  ಹೀಗೆಯೇ ಆಗುತ್ತದೆ. ಕೇಂದ್ರದಲ್ಲಿ ಕೂಡ ಹಲವು ಅಕಾಡೆಮಿಗಳು ಇವೆ. ಅವು ಎಂಥ ಪ್ರತಿಷ್ಠೆ ಉಳಿಸಿಕೊಂಡಿವೆ ಎಂದರೆ ಅವುಗಳ ನಿತ್ಯದ ಕಾರ್ಯ ಚಟುವಟಿಕೆಯಲ್ಲಿ ಕೇಂದ್ರ ಸರ್ಕಾರ ಕೈ ಹಾಕಿದ್ದು ಬಹಳ ಕಡಿಮೆ. ಕೇಂದ್ರ ಸಾಹಿತ್ಯ ಅಕಾಡೆಮಿಯಂತೂ ತನ್ನ ಅಸೀಮ ಸ್ವಾಯತ್ತತೆಗೆ ಹೆಸರು ಮಾಡಿದೆ. ಆರಂಭದ ಹಲವು ವರ್ಷಗಳಲ್ಲಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರೇ ಈ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಈಗ ಅದಕ್ಕೆ ಚುನಾವಣೆ ನಡೆಯುತ್ತದೆ ಮತ್ತು ಅದರ ಅವಧಿ ಐದು ವರ್ಷಗಳದ್ದಾಗಿರುತ್ತದೆ.

ಪಕ್ಕದ ಕೇರಳ ರಾಜ್ಯದಲ್ಲಿ ಕೂಡ ಅಕಾಡೆಮಿಗಳ ನೇಮಕದಲ್ಲಿ ರಾಜಕೀಯ ಹಸ್ತಕ್ಷೇಪ ಬಹಳ ಕಡಿಮೆ ಇದೆ ಮತ್ತು ಅಲ್ಲಿ ಒಂದು ನಿರಂತರತೆ ಇದೆ. ಅಲ್ಲಿ ಯುಡಿಎಫ್ ಸರ್ಕಾರವೇ ಇರಲಿ, ಎಲ್ ಡಿಎಫ್‌ ಸರ್ಕಾರವೇ ಇರಲಿ ಹೊಸ ಸರ್ಕಾರ ಬಂದ ಕೂಡಲೇ ಹಿಂದಿನ ಸರ್ಕಾರದಿಂದ ನೇಮಕವಾದವರ ರಾಜೀನಾಮೆ ಕೇಳುವುದಿಲ್ಲ. ಅವರೂ ಕೊಡುವುದಿಲ್ಲ. ಒಂದು ಸಾರಿ ನೇಮಕವಾದವರ ಅವಧಿ ಮುಗಿದ ನಂತರವೇ ಇನ್ನೊಂದು ಅವಧಿಗೆ ನೇಮಕಗಳು ಆಗುತ್ತವೆ. ಪಶ್ಚಿಮ ಬಂಗಾಲದಲ್ಲಿಯೂ ಇದೇ ಮಾದರಿ ಇದೆ ಎಂದು ನಾನು ಕೇಳಿ ತಿಳಿದೆ.

ಇಂಥ ಸತ್‌ ಪರಂಪರೆಗೆ  ತದ್ವಿರುದ್ಧ ಎನ್ನುವಂತೆ,  ಕರ್ನಾಟಕದಲ್ಲಿ   ಅಕಾಡೆಮಿಗಳ ಅಧ್ಯಕ್ಷರಾಗಿ ನೇಮಕವಾಗುವುದು ಒಂದು ಧನ್ಯ ಕ್ಷಣ ಎಂದು ಆಕಾಂಕ್ಷಿಗಳು ಭಾವಿಸುತ್ತಿದ್ದಾರೆ. ಮತ್ತು ಅವರು ತಮ್ಮ ಎಲ್ಲ ಅಧಿಕಾರವನ್ನು ಕನ್ನಡ ಸಂಸ್ಕೃತಿ ಇಲಾಖೆಗೆ ಅಡ ಇಡುತ್ತಿದ್ದಾರೆ. ಇದು ಎಲ್ಲ ಅಧ್ಯಕ್ಷರಿಗೆ ಅನ್ವಯವಾಗುವುದಿಲ್ಲ ಎಂದು ನಾನು ಇಲ್ಲಿ ಸ್ಪಷ್ಟಪಡಿಸಬೇಕು.

ವಾರ್ತಾ ಇಲಾಖೆಯಡಿ ಬರುವ ಮಾಧ್ಯಮ ಅಕಾಡೆಮಿಯಲ್ಲಿಯೂ ಈ ಸಮಸ್ಯೆ ಆಗೀಗ ಕಾಣಿಸಿಕೊಂಡಿದೆ. ಇದೆಲ್ಲದರ ನಡುವೆಯೂ ಕಳೆದ ಅವಧಿಯಲ್ಲಿ ಮತ್ತು ಹಿಂದಿನ ವರ್ಷಗಳಲ್ಲಿ ಕೆಲವು ಅಕಾಡೆಮಿಗಳು ಹಾಗೂ ಕೆಲವರು ಅಧ್ಯಕ್ಷರು ಅನನ್ಯ ಎನ್ನುವಂಥ ಕೆಲಸ ಮಾಡಿ ತಮ್ಮ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಮಾದರಿಗಳನ್ನು ಹಾಕಿದ್ದಾರೆ.

ಕನ್ನಡ ಸಂಸ್ಕೃತಿ ಇಲಾಖೆ ಎಲ್ಲ ಅಕಾಡೆಮಿಗಳ ದೊಡ್ಡಣ್ಣನಂತೆ ವರ್ತಿಸುತ್ತದೆ ಮತ್ತು ಅದನ್ನು ಬಹುತೇಕ ಅಕಾಡೆಮಿಗಳ ಅಧ್ಯಕ್ಷರು ಒಪ್ಪಿಕೊಳ್ಳುವಂತೆ ಕಾಣುತ್ತದೆ. ಅಕಾಡೆಮಿಗಳ ಕ್ರಿಯಾ ಯೋಜನೆಯನ್ನು ಮತ್ತು ಬಜೆಟ್‌ ಅನ್ನು ಸಿದ್ಧಪಡಿಸಿ ಸರ್ಕಾರದಿಂದ ಅನುಮೋದನೆ ಪಡೆಯಬೇಕು ಮತ್ತು ಆ ಪ್ರಕಾರವೇ ಅನುಷ್ಠಾನಗೊಳಿಸಬೇಕು ಎಂಬ ನಿರ್ಬಂಧವನ್ನು  ಕನ್ನಡ ಸಂಸ್ಕೃತಿ ಇಲಾಖೆ ಈಗಲೂ ಮುಂದುವರಿಸಿಕೊಂಡು ಬಂದಿದೆ. ಅಂದರೆ ಇಲಾಖೆಯ ಕಾರ್ಯದರ್ಶಿಗೆ ಅದು ಹೋಗಿಯೇ ವಾಪಸು ಬರಬೇಕು. ಅದು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮ.

ಎಲ್ಲ ಅಕಾಡೆಮಿಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಅಥವಾ ಅವರ ಪ್ರತಿನಿಧಿ ಹಾಗೂ ಸರ್ಕಾರದಿಂದ ನಾಮ ನಿರ್ದೇಶಿತರಾದ ಹಣಕಾಸು ಸದಸ್ಯರು ಪದನಿಮಿತ್ತ ಸದಸ್ಯರಾಗಿ ಇದ್ದೇ ಇರುವಾಗ ಹಾಗೂ ಅವರ ಸಮ್ಮುಖದಲ್ಲಿಯೇ ರೂಪಿತವಾದ ಕ್ರಿಯಾ ಯೋಜನೆಗೆ ಮತ್ತೆ ‘ಸರ್ಕಾರ’ದ ಅನುಮತಿ ಏಕೆ ಬೇಕು?

ಹೀಗೆ ಕಡ್ಡಾಯ ಮಾಡುವುದು ಸಾಂಸ್ಕೃತಿಕ ಸ್ವಾಯತ್ತತೆಗೆ ಧಕ್ಕೆ ತಂದ ಹಾಗೆ ಎಂದು ಅನೇಕರು ವಿರೋಧ ಮಾಡಿದಾಗಲೂ ಸರ್ಕಾರ ಅದಕ್ಕೆ ಮಣಿದಿಲ್ಲ. ಕಾಲಕ್ರಮೇಣ ಆ ವಿರೋಧವೂ ಕ್ಷೀಣವಾದಂತೆ ಕಾಣುತ್ತದೆ ಅಂದರೆ ಸರ್ಕಾರದ ಹಸ್ತಕ್ಷೇಪವನ್ನು ಬಹುತೇಕ ಎಲ್ಲರೂ ಒಪ್ಪಿಕೊಂಡಂತೆಯೂ ಅನಿಸುತ್ತದೆ.

ಇದು ಏಕೆ ಹೀಗೆ ಆಗುತ್ತದೆ ಎಂದರೆ  ಇಂಥ ಅಕಾಡೆಮಿಗಳ ಅಧ್ಯಕ್ಷರು ತಮ್ಮ ಅಧಿಕಾರವನ್ನು ಮರೆತಿರುವುದು. ಅಥವಾ ಅವರು ಸರ್ಕಾರದ ಜೊತೆಗೆ ಎಲ್ಲಿಯ ಸಂಘರ್ಷ ಎಂದು ಹೊಂದಾಣಿಕೆ ಮಾಡಿಕೊಂಡಿರುವುದು. ವಾಸ್ತವದಲ್ಲಿ, ಒಂದು ಸಾರಿ ತಮ್ಮನ್ನು ನೇಮಕ ಮಾಡಿದ ಮೇಲೆ ಸರ್ಕಾರ ತಮ್ಮ ಕೆಲಸದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ಹೇಳುವ ನೈತಿಕ ಧೈರ್ಯವನ್ನು ಅವರು ಪ್ರದರ್ಶಿಸಬೇಕಿತ್ತು.

ಸಾಹಿತಿಗಳು ಮತ್ತು ಕಲಾವಿದರು ನೈಜ ಕಾರಣಗಳಿಗಾಗಿ ಗುಟುರು ಹಾಕಿದರೆ ಸರ್ಕಾರದಲ್ಲಿ ಇದ್ದವರು ಸುಮ್ಮನೇ ಇರುತ್ತಾರೆ. ಈಗ ಏನಾಗಿದೆ ಎಂದರೆ ದೀನತೆ ಮತ್ತು ಧನ್ಯತೆಯ ಸುಳಿಯಲ್ಲಿ ಆಕಾಂಕ್ಷಿಗಳು ಸಿಲುಕಿದ್ದಾರೆ. ಅವರು ಅಧಿಕಾರ ಹಿಡಿಯಲು ದೀನರಾಗುತ್ತಾರೆ. ಒಂದು ಸಾರಿ ಅಧಿಕಾರ ಸಿಕ್ಕರೆ ಧನ್ಯರಂತೆ ವರ್ತಿಸುತ್ತಾರೆ.

ಇದು ಅಕಾಡೆಮಿಗಳಿಗೆ ನೇಮಕವಾಗಬೇಕು ಎಂದು ಬಯಸುವವರ ದೌರ್ಬಲ್ಯ. ಸರ್ಕಾರಕ್ಕೆ ಇದು ಗೊತ್ತಾಗಿದೆ. ಅದಕ್ಕೆ ಅಹಂಕಾರ, ತಾನು ಕೊಡುವ ಸ್ಥಾನದಲ್ಲಿ ಇದ್ದೇನೆ; ಸಾಹಿತಿಗಳು ಮತ್ತು ಕಲಾವಿದರು ತೆಗೆದುಕೊಳ್ಳುವ ಸ್ಥಾನದಲ್ಲಿ ಇದ್ದಾರೆ ಎಂದು. ಅಕಾಡೆಮಿಗಳ ನೇಮಕಕ್ಕೆ ವಿಳಂಬ ಏಕೆ ಆಗುತ್ತದೆ ಎಂದು ಅರ್ಥವಾಯಿತಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT