ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ದಾಸೋಹ ಮತ್ತು ಅಪೂರ್ವಳ ಸಾವು

Last Updated 19 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಹೆಗ್ಗಡದೇವನ ಕೋಟೆ ತಾಲ್ಲೂಕಿನ ಪ್ರಾಥಮಿಕ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟದ ಸಮಯದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಅಮಾಯಕ ಮಗುವೊಂದು ಸಾವನ್ನಪ್ಪಿರುವುದು ಈಗಾಗಲೇ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದೆ. ಶಾಲೆಗಳಲ್ಲಿ ಆಗಿಂದಾಗ್ಗೆ ಇಂಥ ಅಚಾತುರ್ಯಗಳು ನಡೆಯುತ್ತಲೇ ಇದ್ದು ಯಾರೋ ಮಾಡಿದ ತಪ್ಪಿಗೆ ತಮ್ಮ ಪ್ರಾಣವನ್ನೇ ಮಕ್ಕಳು ತೆರಬೇಕಾದ ಪರಿಸ್ಥಿತಿ ಸೃಷ್ಟಿಯಾದಾಗ ಆಡಳಿತಾತ್ಮಕ ವ್ಯವಸ್ಥೆ ತೋರುವಂಥ ಅಸೂಕ್ಷ್ಮ ಪ್ರತಿಕ್ರಿಯೆಗಳೇ ಈ ಬಾರಿಯೂ ಮೂಡಿ ಬಂದಿರುವುದು ನಮಗೆ ಆಶ್ಚರ್ಯವನ್ನೇನೂ ಉಂಟುಮಾಡಿಲ್ಲ. ಏಕೆಂದರೆ ಸಮಸ್ಯೆಗಳ ಆಳಕ್ಕಿಳಿದು ಇಂಥ ಘಟನೆಗಳು ಮರುಕಳಿಸದಂಥ ಎಚ್ಚರಗಳನ್ನು ವಹಿಸುವ ಅಭ್ಯಾಸಗಳನ್ನು ನಾವು ಬೆಳೆಸಿಕೊಂಡೇ ಇಲ್ಲವಲ್ಲ!

ಪ್ರತಿ ಬಾರಿಯೂ ಶಾಲೆಗಳಲ್ಲಿ ಅಪಘಾತಗಳು ಸಂಭವಿಸಿದಾಗ ಘಟನೆಗೆ ಕೆಲವರನ್ನು ಹೊಣೆ ಮಾಡಿ ಅವರನ್ನು ಅಮಾನತ್ತಿನಲ್ಲಿಡುವುದು, ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಧನ ಸಹಾಯ ಘೋಷಿಸುವುದು (ಅದು ಅವರಿಗೆ ತಲುಪುತ್ತದೆಂಬುದಕ್ಕೆ ಖಾತ್ರಿಯೇನಿಲ್ಲ), ಅವರ ಸಂಬಂಧಿಕರಿಗೆ ನೌಕರಿಯನ್ನು ತಾತ್ಕಾಲಿಕವಾಗಿ ಕೊಡುವುದು ಅಥವಾ ಕೊಡುವ ಆಶ್ವಾಸನೆಯನ್ನು ನೀಡುವುದು, ಘಟನೆಯ ತನಿಖೆಗಾಗಿ ಸಮಿತಿಯೊಂದನ್ನು ರಚಿಸುವುದು ಇವೇ ಮುಂತಾದ ಪರಿಹಾರೋಪಾಯಗಳನ್ನು ಪ್ರಕಟಿಸಿ ತನ್ನ ಜವಾಬ್ದಾರಿಯಿಂದ ಆಡಳಿತಾರೂಢ ವ್ಯವಸ್ಥೆ ನುಣುಚಿಕೊಳ್ಳುವುದು ನಮ್ಮಲ್ಲಿ ಒಂದು ವಾಡಿಕೆಯಾಗಿ ಬಿಟ್ಟಿದೆ. ಮೊನ್ನೆ ಮೊನ್ನೆ ನಡೆದು ಹೋದ ಅಕ್ಷರದಾಸೋಹದ ಅವಘಡದ ವಿಚಾರದಲ್ಲೂ ಆಗಿರುವುದು ಹೀಗೆಯೇ.

ಪರಿಹಾರಗಳಿಂದ ಹೋದ ಪ್ರಾಣವಂತೂ ಮರಳಿ ಬರುವುದಿಲ್ಲ. ತಮ್ಮವರನ್ನು ಕಳೆದುಕೊಂಡವರಿಗೆ ಹಣ-ಕೆಲಸ ಮುಂತಾದುವು ಪರ್ಯಾಯವಲ್ಲ ಎಂದು ತಿಳಿದಿದ್ದರೂ ಪದೇ ಪದೇ ಇದೇ ಮಾರ್ಗವನ್ನು ಅನುಸರಿಸುವುದೇತಕ್ಕೆ? ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಸುಮಾರು ಒಂದು ದಶಕದ ಇತಿಹಾಸವೇ ಇದ್ದರೂ, ಆಗಿಂದಾಗ್ಗೆ ರಾಜ್ಯದ ವಿವಿಧ ಭಾಗಗಳಿಂದ ಬಿಸಿಯೂಟವನ್ನು ವಿತರಣೆ ಮಾಡುವ ಸಮಯದಲ್ಲಿ ಉಂಟಾಗುವ ಅವ್ಯವಸ್ಥೆಯ ಬಗ್ಗೆ ವರದಿಗಳು ಬರುತ್ತಲೇ ಇದ್ದರೂ ಈಗ ಮುಂಜಾಗ್ರತೆಯನ್ನು ವಹಿಸಲು ಸುತ್ತೋಲೆಗಳನ್ನು ಹೊರಡಿಸುವುದು ಎಷ್ಟು ಪ್ರಸ್ತುತ? ಮಧ್ಯಾಹ್ನದ ವೇಳೆ ಮಕ್ಕಳಿಗೆ ಬಿಸಿಯೂಟವನ್ನು ನೀಡುವಂಥ ಒಂದು ಒಳ್ಳೆಯ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಲು ಅವಶ್ಯವಾದಂಥ ಮೂಲಸೌಕರ್ಯಗಳು ಮತ್ತು ಮಾನವ ಸಂಪನ್ಮೂಲವನ್ನು ಒದಗಿಸುವುದಕ್ಕೆ ಪ್ರಾಧಾನ್ಯತೆಯನ್ನು ನೀಡದೆ ಪರಿಸ್ಥಿತಿ ಕೈಮೀರಿದಾಗ ಶಿಕ್ಷಕರ ಅಥವಾ ಶಾಲಾ ಸಿಬ್ಬಂದಿಯ ಕರ್ತವ್ಯಲೋಪದ ಬಗ್ಗೆ ಟೀಕೆಗಳನ್ನು ಮಾಡುವುದು ಎಷ್ಟು ಸೂಕ್ತ? ನಮ್ಮ ದೇಶದಲ್ಲೇ ಎಂಬತ್ತಾರು ವರ್ಷಗಳ ಇತಿಹಾಸವಿರುವ ಮಧ್ಯಾಹ್ನದ ಊಟದ ಯೋಜನೆಯ ಅನುಭವಗಳಿಂದ ಇದುವರೆಗೂ ಪಾಠಗಳನ್ನು ಕಲಿಯಲು ನಮಗೆ ಸಾಧ್ಯವಿರಲಿಲ್ಲವೇ?

ಮಧ್ಯಾಹ್ನದ ವೇಳೆ ಶಾಲೆಯಲ್ಲೇ ಮಕ್ಕಳಿಗೆ ಊಟವನ್ನು ನೀಡಬೇಕೆಂಬ ಕಲ್ಪನೆ ಇಂದು ನಿನ್ನೆಯದಲ್ಲ. ಭಾರತದಲ್ಲಿ ಪ್ರಪ್ರಥಮವಾಗಿ 1925ರಲ್ಲಿ ಮಧ್ಯಾಹ್ನದ ಊಟವನ್ನು 500 ಪ್ರಾಥಮಿಕ ಶಾಲಾ ಮಕ್ಕಳಿಗೆ ನೀಡುವ ವ್ಯವಸ್ಥೆಯನ್ನು ಕಲ್ಪಿಸುವುದರ ಮೂಲಕ ಮದರಾಸ್ ಕಾರ್ಪೊರೇಷನ್ ಶಾಲಾ ಊಟದ ಕಾರ್ಯಕ್ರಮಕ್ಕೆ ನಾಂದಿ ಹಾಡಿತ್ತು.

1956ರಲ್ಲಿ `ಪೂರ್ ಫೀಡಿಂಗ್ ಪ್ರೊಗ್ರಾಮ್~ ಎಂಬ ಹೆಸರಿನಿಂದ ತಮಿಳುನಾಡಿನ ಸರ್ಕಾರ ಈ ಕಾರ್ಯಕ್ರಮವನ್ನು ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮವೆಂದು ಘೋಷಿಸಿತು.

ಆನಂತರದಲ್ಲಿ ಮಧ್ಯಾಹ್ನದ ಊಟದ ಕಾರ್ಯಕ್ರಮವನ್ನು ರಾಜ್ಯದ ಮಕ್ಕಳ ಕಲ್ಯಾಣ ಕೇಂದ್ರಗಳೂ ಸೇರಿದಂತೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಶಾಲೆಗಳಿಗೆ ವಿಸ್ತರಿಸಲಾಗಿ, ಇಡೀ ದೇಶಕ್ಕೆ ತಮಿಳುನಾಡಿನ ಈ ಪ್ರಯತ್ನ ಒಂದು ಮಾದರಿಯಾಯಿತು.

ಕರ್ನಾಟಕಕ್ಕೆ ಭಾರತದಲ್ಲಿ ಮಧ್ಯಾಹ್ನದ ಊಟದ ಯೋಜನೆಯನ್ನು ಜಾರಿಗೆ ತಂದ ರಾಜ್ಯಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನವಿದೆ. ಅಕ್ಷರ ದಾಸೋಹ ಕಾರ್ಯಕ್ರಮ ಅಸ್ತಿತ್ವಕ್ಕೆ ಬರುವ ಮುನ್ನವೇ, ಎಂದರೆ, 1995ರ ವೇಳೆಗೆ ಬೇಯಿಸದ ಆಹಾರ ಧಾನ್ಯಗಳನ್ನು ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಯೋಜನೆಯೊಂದು ಜಾರಿಯಲ್ಲಿದ್ದು, ಈ ವ್ಯವಸ್ಥೆಯಲ್ಲಿ ಅನೇಕ ನ್ಯೂನತೆಗಳು ಕಂಡು ಬಂದಿದ್ದರಿಂದ ಇದನ್ನು ಕೈ ಬಿಡಬೇಕಾಯ್ತು.

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಸ್ಥೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯ ಪ್ರಕರಣದಲ್ಲಿ 2001ರಲ್ಲೇ ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ಪೌಷ್ಠಿಕ ಆಹಾರವನ್ನು ಶಾಲಾ ಮಕ್ಕಳಿಗೆ ಎಲ್ಲ ರಾಜ್ಯಗಳೂ ನೀಡಬೇಕು ಎಂಬ ನಿರ್ದೇಶನವನ್ನು ಹೊರಡಿಸಲಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾದ ರಾಜ್ಯಗಳಲ್ಲಿ ಕರ್ನಾಟಕ ಎಂಟನೇ ಸ್ಥಾನದಲ್ಲಿದ್ದುದು ಗಮನಾರ್ಹ.

2002-03ರಲ್ಲಿ ಪ್ರಾರಂಭವಾದಾಗ ರಾಜ್ಯದ ಈಶಾನ್ಯ ಭಾಗದ ಶೈಕ್ಷಣಿಕವಾಗಿ ಹಿಂದುಳಿದಿದ್ದ ಏಳು ಜಿಲ್ಲೆಗಳಲ್ಲಿ ಜಾರಿಗೆ ಬಂದಿದ್ದ ಶಾಲಾ ಬಿಸಿಯೂಟದ 2003ರ ಯೋಜನೆ ವೇಳೆಗೆ ಉಳಿದ ಜಿಲ್ಲೆಗಳಿಗೂ ವಿಸ್ತೃತವಾಯಿತು. ಮೊದಮೊದಲಿಗೆ ಒಂದರಿಂದ ಐದನೇ ತರಗತಿಗಳ ಮಕ್ಕಳಿಗೆ ಮಾತ್ರ ಬಿಸಿಯೂಟವನ್ನು ನೀಡುವ ವ್ಯವಸ್ಥೆ ಇದ್ದು, ನಂತರದ ದಿನಗಳಲ್ಲಿ ಆರು ಮತ್ತು ಏಳನೇ ತರಗತಿಗಳ ಮಕ್ಕಳನ್ನೂ ಈ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಯ್ತು. ಈ ಹೊತ್ತು ಪ್ರೌಢಶಾಲಾ ಮಕ್ಕಳಿಗೂ ಬಿಸಿಯೂಟದ ಪ್ರಯೋಜನವನ್ನು ಪಡೆಯುವ ಅವಕಾಶವನ್ನು ಕರ್ನಾಟಕದಲ್ಲಿ ಕಲ್ಪಿಸಲಾಗಿರುವುದು ಒಂದು ಸಕಾರಾತ್ಮಕ ಹೆಜ್ಜೆಯೇ ಸರಿ.

ಇಡೀ ವಿಶ್ವದಲ್ಲೇ ಆಹಾರದ ಕೊರತೆಯನ್ನು ಎದುರಿಸುತ್ತಿರುವ ಜನಸಂಖ್ಯೆಯನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ದೇಶ ಎಂದು ಗುರುತಿಸಲ್ಪಟ್ಟಿರುವ ಭಾರತದಲ್ಲಿ, ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಒದಗಿಸುವುದು ಅನೇಕ ಕುಟುಂಬಗಳಿಗೆ ಇಂದಿಗೂ ಸಾಧ್ಯವಾಗಿಲ್ಲ.
 
ಯೂನಿಸೆಫ್‌ನ ಒಂದು ವರದಿಯ ಪ್ರಕಾರ ಜಗತ್ತಿನ ಪ್ರತಿ ಮೂರು ಅಪೌಷ್ಠಿಕ ಮಕ್ಕಳಲ್ಲಿ ಒಂದು ಮಗು ಭಾರತದಲ್ಲಿದೆ. ಸಹಜವಾಗಿಯೇ ಈ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಿ ಈ ಮಕ್ಕಳ ಶಾಲಾ ದಾಖಲಾತಿ ಹಾಗೂ ಹಾಜರಾತಿಗಳಲ್ಲಿ ಹಿಂಬೀಳಿಕೆ ಉಂಟಾಗುತ್ತಿದ್ದು, ಈ ಕೊರತೆಯನ್ನು ನಿವಾರಿಸಿ ಮಕ್ಕಳನ್ನು ಶಾಲೆಗಳಿಗೆ `ಕರೆತಂದು~ ಅವರನ್ನು ಅಲ್ಲಿ `ಉಳಿಸಿಕೊಳ್ಳು~ವುದೇ ಅಕ್ಷರ ದಾಸೋಹ ಕಾರ್ಯಕ್ರಮದ ಪ್ರಧಾನ ಉದ್ದೇಶವಾಗಿದ್ದರಿಂದ ಅನೇಕ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಶಾಲೆಯ ಪ್ರಮುಖ ಆಕರ್ಷಣೆಯಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಅಕ್ಷರ ದಾಸೋಹ ಕಾರ್ಯಕ್ರಮದ ಪರಿಣಾಮದ ಬಗ್ಗೆ ಕೈಗೊಂಡಿರುವ ಕೆಲ ಸಂಶೋಧನಾ ಅಧ್ಯಯನಗಳ ಪ್ರಕಾರ ಅನೇಕ ಮಕ್ಕಳಿಗೆ ಶಾಲೆಯಲ್ಲಿ ಸೇವಿಸುವ ಬಿಸಿಯೂಟವೇ ದಿನದಲ್ಲಿ ಅವರಿಗೆ ದೊರೆಯುವ ಏಕೈಕ ಊಟವಾಗಿದೆ. ವಿಶೇಷವಾಗಿ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ಕುಟುಂಬಗಳ ಮಕ್ಕಳನ್ನು ದುಡಿಮೆಯತ್ತ ತಳ್ಳದೆ ಶಾಲೆಗಳಲ್ಲಿ ಉಳಿಸಿಕೊಳ್ಳುವುದರಲ್ಲಿ ಮಧ್ಯಾಹ್ನದ ಬಿಸಿಯೂಟ ಪ್ರಮುಖ ಪಾತ್ರ ವಹಿಸಿದೆ.

ಇತ್ತೀಚೆಗಷ್ಟೇ ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಕೈಗೊಂಡ ಒಂದು ಸಂಶೋಧನಾ ಅಧ್ಯಯನದ ಪ್ರಕಾರ ಮಕ್ಕಳ ಶಾಲಾ ಹಾಜರಾತಿಯಲ್ಲಿ ಶೇಕಡ 60ರಷ್ಟು ಹೆಚ್ಚಳ ಈ ಯೋಜನೆ ಜಾರಿಗೆ ಬಂದ ಮೇಲೆ ಕಂಡು ಬಂದಿದ್ದು, ವಿಶೇಷವಾಗಿ ಹೆಣ್ಣು ಮಕ್ಕಳ ಹಾಜರಾತಿಯಲ್ಲಿ ಶೇಕಡ 58ರಷ್ಟು ಏರಿಕೆಯಾಗಿದೆ.

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಒಂದು ವರದಿಯ ಪ್ರಕಾರ ಕಳೆದ ಶೈಕ್ಷಣಿಕ ವರ್ಷದಲ್ಲೇ ಇಡೀ ದೇಶದಲ್ಲಿ ಮಧ್ಯಾಹ್ನದ ಬಿಸಿಯೂಟದ ಯೋಜನೆ ಕಿರಿಯ ಪ್ರಾಥಮಿಕ ಹಂತದಲ್ಲಿ 8.41 ಕೋಟಿ ಹಾಗೂ ಹಿರಿಯ ಪ್ರಾಥಮಿಕ ಹಂತದಲ್ಲಿ 3.36 ಕೋಟಿ ಮಕ್ಕಳನ್ನು ಒಳಗೊಂಡಿದ್ದು ವರ್ಷದಿಂದ ವರ್ಷಕ್ಕೆ ಈ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಗಮನಾರ್ಹ. 

ಬಡತನದಿಂದ ಉಂಟಾದ ಹಸಿವು ಸಹಜವಾಗಿಯೇ ಮಕ್ಕಳನ್ನು ದುಡಿಮೆಯತ್ತ ತಳ್ಳುವುದರಿಂದ ಭಾರತದಲ್ಲಿ ಕೋಟ್ಯಂತರ ಮಕ್ಕಳು ಶಾಲೆಯಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಗ್ರಾಮೀಣ ಹಾಗೂ ನಗರ ಬಡ ಕುಟುಂಬಗಳೆರಡರಲ್ಲೂ ಮಕ್ಕಳನ್ನು ಒಂದು `ಸಿದ್ಧ ಕಾರ್ಮಿಕ ವರ್ಗ~ವಾಗಿ ಪರಿಗಣಿಸಲ್ಪಡುವುದರಿಂದ ಅವರು ಕುಟುಂಬ ಆಧರಿತ ಅಥವಾ ಇತರ ಅಸಂಘಟಿತ ಉದ್ದಿಮೆಗಳಲ್ಲಿ ದುಡಿಮೆಯಲ್ಲಿ ತೊಡಗಬೇಕಾಗಿದ್ದು, ಶಾಲೆ ಅವರ ಪಾಲಿಗೆ ಮರೀಚಿಕೆಯಾಗಿಯೇ ಉಳಿಯುತ್ತದೆ. ಮುಖ್ಯವಾಗಿ ಈ ಕಾರಣದಿಂದಲೇ ಭಾರತದಲ್ಲಿ ಇಂದಿಗೂ ಎರಡು ಕೋಟಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಜಗತ್ತಿನಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಹೊಂದಿರುವ ದೇಶ ಎಂದು ನಮ್ಮ ದೇಶವನ್ನು ಗುರುತಿಸಲಾಗುತ್ತಿರುವುದು.

ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಆಹಾರವನ್ನೊದಗಿಸಲು ಮಕ್ಕಳು ದುಡಿಯಬೇಕಾದಂಥ ಪರಿಸ್ಥಿತಿಯಿಂದ ಅವರನ್ನು ಹೊರತಂದು ಶಾಲೆಗಳಲ್ಲಿಯೇ ಅವರನ್ನು ಉಳಿಸಿಕೊಳ್ಳುವ ಹಾಗೂ ಆಹಾರದ ಅನ್ವೇಷಣೆಯಲ್ಲಿ ಅವರ ಬದುಕು ನಿರರ್ಥಕವಾಗಬಾರದೆನ್ನುವ ಗುರಿಗಳನ್ನು ಹೊಂದಿಯೇ ಅಕ್ಷರ ದಾಸೋಹ ಕಾರ್ಯಕ್ರಮ ಜಾರಿಗೆ ಬಂದದ್ದು. ಬೃಹತ್ ಪ್ರಮಾಣದಲ್ಲಿ ಕೋಟ್ಯಂತರ ಸಂಖ್ಯೆಯ ಮಕ್ಕಳು ಹಾಗೂ ಹಣಕಾಸು ವ್ಯವಹಾರವನ್ನು ಒಳಗೊಂಡ ಒಂದು ಯೋಜನೆಯ ಅನುಷ್ಠಾನದ ಪ್ರಾರಂಭಿಕ ಹಂತಗಳಲ್ಲಿ ಕೆಲವು ಅಡಚಣೆಗಳು ಉಂಟಾಗುವುದು ಸಹಜವೇ. ಕರ್ನಾಟಕ ರಾಜ್ಯದ ವಿಚಾರದಲ್ಲೂ ಇದು ನಿಜ. ಆದರೆ ವರ್ಷಗಳು ಉರುಳಿದ ಹಾಗೆ ಬಿಸಿಯೂಟ ಕಾರ್ಯಕ್ರಮದ ನಿರ್ವಹಣೆಗೆ ನಮ್ಮಲ್ಲಿ ಒಂದು ವ್ಯವಸ್ಥೆಯೇ ಸೃಷ್ಟಿಯಾಗಿದ್ದು, ರಾಜ್ಯಮಟ್ಟದಿಂದ ಶಾಲಾ ಮಟ್ಟದವರೆಗೆ ಜವಾಬ್ದಾರಿಯ ವಿಕೇಂದ್ರೀಕರಣವೂ ಆಗಿದೆ.

ಸಾರ್ವಜನಿಕ ಸಂಸ್ಥೆಗಳೇ ಅಲ್ಲದೆ, ನಾಗರಿಕ ಸಮಾಜವೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಸಮರ್ಥ ನಿರ್ವಹಣೆಯಲ್ಲಿ ಕೈ ಜೋಡಿಸುವುದಕ್ಕೂ ಅವಕಾಶವನ್ನು ಕಲ್ಪಿಸಲಾಗಿದೆ.

ಅಡುಗೆಯವರನ್ನು ನೇಮಿಸುವುದರಿಂದ ಹಿಡಿದು ಪ್ರತ್ಯೇಕ ಪಾಕ ಶಾಲೆಗಳ ನಿರ್ಮಾಣ, ಅಡುಗೆ ಮಾಡಲು ಹಾಗೂ ಮಕ್ಕಳನ್ನು ಕುಳ್ಳಿರಿಸಿ ಊಟವನ್ನು ಬಡಿಸಲು ಬೇರೆ ಬೇರೆ ಪಾತ್ರೆ-ಪರಿಕರಗಳ ಒದಗಿಸುವಿಕೆ, ಪರಿಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಊಟವನ್ನು ಬಡಿಸುವಾಗ ಅನುಸರಿಸಬೇಕಾದ ಶಿಸ್ತು-ಇವೇ ಮುಂತಾದ ವಿಷಯಗಳನ್ನು ಕುರಿತಂತೆ ಈಗಾಗಲೇ ಸ್ಪಷ್ಟವಾದ ಮಾರ್ಗದರ್ಶಕ ಸೂಚಿಯನ್ನು ತಯಾರಿಸಲಾಗಿದ್ದು, ಹೊಸದಾಗಿ ತಿಳಿಯಪಡಿಸಬೇಕಾದ್ದು ಏನೂ ಇಲ್ಲವೆಂದೇ ನನ್ನ ಭಾವನೆ. ಅಗತ್ಯವಿರುವುದು ಸಂಬಂಧಿಸಿದವರ ನಡುವೆ ಸಮನ್ವಯ ಹಾಗೂ ಕರ್ತವ್ಯ ಪ್ರಜ್ಞೆಗಳಷ್ಟೆ.

ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮವನ್ನು ಕುರಿತಂತೆ ಆಗಾಗ್ಗೆ ಅಪಸ್ವರದ ಧ್ವನಿಗಳು ಏಳುತ್ತಲೇ ಇವೆ. ಜಾತಿಯ ಆಚರಣೆ, ಕಳಪೆ ಆಹಾರ ಪದಾರ್ಥಗಳ ಬಳಕೆ, ಅಶುದ್ಧ ಪರಿಸರದಲ್ಲಿ ಅಡುಗೆ ಮಾಡುವುದರಿಂದ ಸಿದ್ಧವಾದ ಆಹಾರದಲ್ಲಿ ವಿಷಪೂರಿತವಾದ ಪದಾರ್ಥಗಳ ಬೆರಕೆ, ಊಟ ವಿತರಣಾ ಸಮಯದಲ್ಲಿ ನಡೆಯುವ ನೂಕಲಾಟ, ಬೆಂಕಿ ಆಕಸ್ಮಿಕಗಳು-ಆರ್ಥಿಕ ಅವ್ಯವಹಾರಗಳು ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಯ ನಡುವೆ ಹೊಂದಾಣಿಕೆಯ ಕೊರತೆ-ಇವೇ ಮುಂತಾದ ದೂರುಗಳು ಅನೇಕ ಕಡೆಗಳಲ್ಲಿ ಕೇಳಿ ಬರುತ್ತಿದ್ದರೂ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳು, ಅಧಿಕಾರ ವರ್ಗ, ಜನ ಪ್ರತಿನಿಧಿಗಳು ಹಾಗೂ ಪೋಷಕರು, ಅನೇಕ ಕಡೆಗಳಲ್ಲಿ ಆಸಕ್ತಿಯನ್ನು ವಹಿಸುತ್ತಿಲ್ಲ. ಈ ಕಾರಣಕ್ಕಾಗಿಯೇ ಆಡಳಿತಾತ್ಮಕ ಯಂತ್ರವನ್ನು ಸಚೇತನಗೊಳಿಸಲು ಅಮಾಯಕ ಜೀವವೊಂದು ಬಲಿಯಾಗಬೇಕಾದಂಥ ಪರಿಸ್ಥಿತಿ ಸೃಷ್ಟಿಯಾಗಿರುವುದು.
(ನಿಮ್ಮ ಅನಿಸಿಕೆ ತಿಳಿಸಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT