ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಕ್ಷರಸ್ಥನ ಬುದ್ಧಿವಂತಿಕೆ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

 ಬೆಳೆಗೆರೆಯ ಪಕ್ಕದಲ್ಲಿ ನಾಲ್ಕೈದು ಕಿಲೋಮೀಟರ್ ದೂರದಲ್ಲಿ ಗೊರವತ್ತು ಎಂಬ ಹಳ್ಳಿ ಇದೆ. ಆ ಊರಿನಲ್ಲಿ ಬಹಳಷ್ಟು ಜನ ರೈತರು, ಕೂಲಿಕಾರರು, ಕಂಬಳಿ ನೇಕಾರರು.

ಗೊರವತ್ತಿನಲ್ಲಿ ಗತ್ತಿನ ಮನುಷ್ಯ ರಾಮಜ್ಜ. ಅವನೊಬ್ಬ ಗಟ್ಟಿ ಕುಳ. ಅವನಿಗೆ ಸಾಕಷ್ಟು ಜಮೀನಿತ್ತು. ನೂರಾರು ಕುರಿಗಳನ್ನು ಸಾಕಿಕೊಂಡಿದ್ದ. ಕಂಬಳಿ ನೇಯಿಸಿ ಮಾರುತ್ತಿದ್ದ. ಒಂದು ಸ್ವಲ್ಪ ಮಟ್ಟಿನ ಬಡ್ಡಿ ವ್ಯವಹಾರವನ್ನೂ ಮಾಡುತ್ತಿದ್ದ. ಒಟ್ಟಿನಲ್ಲಿ ರಾಮಜ್ಜ ಸ್ಥಿತಿವಂತ.

ಅವನು ಎತ್ತರದ ಆಳು, ತಲೆಗೆ ದೊಡ್ಡ ಪಂಚೆ ಸುತ್ತಿಕೊಂಡಿರುತ್ತಿದ್ದ. ಕೈ ಬೆರಳುಗಳಿಗೆ ಉಂಗುರಗಳು, ಬಲಗೈಗೆ ಕರಿದಾರದ ಕಪ್ಪ. ಕಚ್ಚೆ ಪಂಚೆ, ಹೆಗಲ ಮೇಲೊಂದು ಕಂಬಳಿ, ಕೈಯಲ್ಲಿ ಒಂದು ದಪ್ಪ ಕೋಲು ಹಿಡಿದು ನಡೆದರೆ ಅವನನ್ನು ಗಮನಿಸದೇ ಇರುವುದು ಅಸಾಧ್ಯ.

ಗೊರವತ್ತಿನ ಪಕ್ಕದ ಹಳ್ಳಿಯಲ್ಲಿ ಒಂದು ತಕರಾರು. ಒಂದು ಮನೆಯಲ್ಲಿ ಗಂಡ-ಹೆಂಡತಿಯ ಮಧ್ಯ ಜಗಳ ಬಂದು ವಿಚ್ಛೇದನದ ವರೆಗೂ ಹೋಗಿದೆ. ಈಗಾಗಲೇ ಅವರಿಗೊಂದು ಮಗು ಇದೆ. ಗಂಡ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾನೆ. ಕೇಸು ಶಿವಮೊಗ್ಗೆಯ ಕೋರ್ಟಿನಲ್ಲಿ ಬಂದಿದೆ. ಪಾಪ! ಆ ಹುಡುಗಿಯ ಕಡೆಯವರಿಗೆ ಗಾಬರಿಯಾಗಿದೆ. ಸಮಸ್ಯೆ ಏನೆಂದರೆ ಗಂಡ, ಹುಟ್ಟಿರುವ ಮಗು ತನ್ನದಲ್ಲ ಎನ್ನುತ್ತಿದ್ದಾನೆ. ಹೆಣ್ಣಿಗೆ ಆದ ಮುಜುಗರದ ಅರಿವು ರಾಮಜ್ಜನಿಗೆ ಆಗಿದೆ. ಅವನಿಗೆ ಗೊರವತ್ತಿನ ಸುತ್ತಮುತ್ತಲಿನ ಎಲ್ಲ ಊರಿನವರ ವಿಷಯವೂ ಗೊತ್ತು. ಈ ಕುಟುಂಬದ ಬಗೆಗೂ ಗೊತ್ತು. ಆದ್ದರಿಂದ ಆ ಹುಡುಗಿಯ ಪರವಾಗಿ ಸಾಕ್ಷಿ ಹೇಳಲು ಒಪ್ಪಿಕೊಂಡಿದ್ದಾನೆ.

ಕೋರ್ಟಿನಲ್ಲಿ ರಾಮಜ್ಜ ಕಟಕಟೆಗೆ ಬಂದ. ಗಂಡಿನ ಕಡೆಯ ವಕೀಲರ ಪ್ರಶ್ನೆಗೆ ರಾಮಣ್ಣ ಹೇಳಿದ, `ಈ ಮಗು ನನಗೆ ಹುಟ್ಟಿದ್ದು, ನನಗೆ ಹುಟ್ಟಿದ್ದಲ್ಲ ಎಂದು ಯಾರು ಹೇಳಬೇಕು ಸ್ವಾಮೀ? ಮಗುವಿನ ತಂದೆ-ತಾಯಿ ಹೇಳಬೇಕು. ಬೇರೆಯವರು ಹೇಳಲಿಕ್ಕೆ ಆಗುತ್ತದೆಯೇ ಸ್ವಾಮೀ?~ ಲಾಯರ್ ಕೇಳಿದರು.  `ಈ ಕೇಸಿನ ವಿಚಾರ ನಿಮಗೆ ಏನು ಗೊತ್ತು?~

` ಸ್ವಾಮಿ, ಈ ಊರು ನಮ್ಮ ಪಕ್ಕದ ಹಳ್ಳಿ, ನಾನು ಅಲ್ಲಿ ಆಗಾಗ ಹೋಗುತ್ತಿರುತ್ತೇನೆ. ಇವರ ಕಾಲಕ್ಕಲ್ಲ, ಇವರ ತಂದೆ, ತಾತನ ಕಾಲದಿಂದ ಪರಿಚತವಾದ ಮನೆ ಅದು. ಇವರಿಬ್ಬರೂ ಮದುವೆಯಾದದ್ದು ಗೊತ್ತು. ನಾನೇ ಸ್ವಾಮಿ, ಇವರಿಗೆಲ್ಲ ಜವಳಿ ಕೊಡಿಸಿದ್ದು.~

`ಆ ಹುಡುಗಿ ಗಂಡನ ಮನೆಗೆ ಹೋದದ್ದು ಗೊತ್ತು. ಆಕೆ ಗಂಡನ ಮನೆಯಲ್ಲಿ ವೈನಾಗಿ ಬಾಳುವೆ ಮಾಡುತ್ತಿದ್ದುದೂ ಗೊತ್ತು, ಬಾಣಂತನಕ್ಕೆ ತವರು ಮನೆಗೆ ಬಂದು ಹೋದದ್ದು ಗೊತ್ತು. ಮಗು ಆಗಿದ್ದು ಗೊತ್ತು. ತೊಟ್ಟಿಲ ಶಾಸ್ತ್ರ ಮಾಡಿದ್ದರಲ್ಲ ಸ್ವಾಮಿ, ಅಂದು ನಾನೂ ಅವರ ಮನೆಗೆ ಹೋಗಿದ್ದೆ. ಹಬ್ಬದ ವಾತಾವರಣ.

ಆಕೆಯ ಗಂಡನೇ, ಅದೋ ಅಲ್ಲಿ ಮೋರೆ ಕೆಳಗೆ ಹಾಕಿಕೊಂಡು ನಿಂತ್ದ್ದಿದಾನಲ್ಲ ಅವನೇ ತೊಟ್ಟಿಲಲ್ಲಿ ಮಗುವನ್ನು ತಲೆಯ ಮೇಲೆ ಹೊತ್ತುಕೊಂಡು ಇವರ ಮನೆಗೆ ಬಂದ.

ಮರುದಿನ ಹೋಳಿಗೆ ತುಪ್ಪದ ಔತಣ ಮಾಡಿದ್ರಲ್ಲ, ನಾನೂ ಹೋಗಿದ್ದೆ. ಅವತ್ತು ಅವನೇ ತೊಟ್ಟಿಲು ಸಮೇತ ಮಗುವನ್ನು ತೆಗೆದುಕೊಂಡು ಹೋದನಲ್ಲ? ತನ್ನದಲ್ಲದ ಮಗುವನ್ನು ತಗೊಂಡು ಹೋದನಾ ಅವನು? ಅವತ್ತು ಅವನದಾದ ಮಗು ಕೋರ್ಟಿಗೆ ಬಂದಾಗ ಅವನದಲ್ಲ ಎನ್ನುವಂತಾಯ್ತೋ?~ ಎಂದ ರಾಮಜ್ಜ. ಒಬ್ಬ ಹಳ್ಳಿಯ ಕುರಿಕಾಯುವ ಮುದುಕನ ಧಾಟಿ ಎಷ್ಟು ಬಲವಾಗಿದೆ ಮತ್ತು ಇದು ಗಟ್ಟಿ ಸಾಕ್ಷಿ ಎಂದು ಗಂಡಿನ ಕಡೆಯ ಲಾಯರಿಗೆ ಗೊತ್ತಾಯಿತು. ಈತನನ್ನು ಬುದ್ಧಿವಂತಿಕೆಯಿಂದ ಮಣಿಸಬೇಕೆಂದು ಲಾಯರ್ ಕೇಳಿದ,  `ಅಜ್ಜಾ, ನೀನು ಇಷ್ಟು ಖಚಿತವಾಗಿ ಹೇಳುತ್ತೀಯಲ್ಲ, ತೊಟ್ಟಿಲಿಗೆ ಹಾಕಿದ ದಿವಸ ಯಾವ ವಾರ, ಯಾವ ತಿಂಗಳು, ಯಾವ ವರ್ಷ, ಯಾವ ತಾರೀಖು ಹೇಳು ನೋಡೋಣ.~

ಕೋರ್ಟು ಸ್ತಬ್ಧವಾಯಿತು. ಈ ಅನಕ್ಷರಸ್ಥ ಮುದುಕ ಅದೇನು ಹೇಳಿಯಾನು? ಗೊತ್ತಿಲ್ಲ ಎಂದರೆ ಸಾಕ್ಷಿ ಗಟ್ಟಿಯಾಗದೇ ಹುಡುಗಿಯ ಕೇಸು ಬಿದ್ದುಹೋಗುತ್ತದೆ ಎಂದು ಎಲ್ಲರೂ ಭಾವಿಸಿದರು. ರಾಮಜ್ಜ ನಕ್ಕು ಹೇಳಿದ, `ಅಲ್ಲ ಸ್ವಾಮಿ, ಮುಂದೆ ಇವನು ಹೆಂಡತಿಯನ್ನು ಬಿಡುತ್ತಾನೆ, ಶಿವಮೊಗ್ಗೆಯಲ್ಲಿ ಕೇಸ್ ಹಾಕ್ತಾನೆ, ನಿನ್ನನ್ನೇ ವಕೀಲಿಗೆ ಇಡ್ತಾನೆ, ನನ್ನನ್ನೇ ಸಾಕ್ಷಿಗೆ ಕರೀತಾನೆ ಅಂತ ಗೊತ್ತಾಗಿದ್ರೆ ಅಂದೇ ಬರಿಸಿ ತೂಗು ಹಾಕ್ತಿದ್ದೆ. ನಾನು ಕಣ್ಣಲ್ಲಿ ಕಂಡದ್ದಕ್ಕೆ ಕ್ಯಾಲೆಂಡರ್ ಯಾಕೆ ಬೇಕು?~ ಎಲ್ಲರೂ ನಕ್ಕರು. ಜಡ್ಜ್ ಕೂಡ ಹಲ್ಲು ಉದುರಿಹೋಗುವಂತೆ ನಕ್ಕರು. ಲಾಯರು ಪೆಚ್ಚಾದ. ಕೇಸು ಬಿದ್ದು ಹೋಯಿತು. ಹುಡುಗ ಹುಡುಗಿಯನ್ನು ಮಗುವಿನ ಜೊತೆಗೆ ಕರೆದುಕೊಂಡು ಹೋದ.

ಒಬ್ಬ ಹಳ್ಳಿಯ ಮುದುಕ ಪಟ್ಟಣದ ಲಾಯರನ್ನು ಪೆಚ್ಚು ಮಾಡಿದ ಎನ್ನುವುದು ಊರವರಿಗೆ ಹೆಮ್ಮೆಯ ವಿಷಯವಾಯಿತು. ಶಾಲಾಶಿಕ್ಷಣಕ್ಕೂ, ಸ್ವಾಭಾವಿಕವಾದ ಬುದ್ಧಿವಂತಿಕೆಗೂ ಯಾವುದೇ ಸಂಬಂಧವಿಲ್ಲ. ಶಾಲೆಗೇ ಹೋಗದೆ ಬುದ್ಧಿವಂತ ರಾದವರೂ ಇದ್ದಾರೆ, ಹತ್ತಾರು ಪದವಿಗಳ ಭಾರವನ್ನು ಹೊತ್ತು ವ್ಯವಹಾರ ತಿಳಿಯದವರೂ ಇದ್ದಾರೆ. 
  (ಕೃಪೆ: ಬೆಳೆಗೆರೆ ಕೃಷ್ಣಶಾಸ್ತ್ರಿಗಳ  `ಮರೆಯಲಾದೀತೇ?~ ಗ್ರಂಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT