ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋವಾದಲ್ಲಿ ನನಸಾಗಲಿ ಕನ್ನಡ ಪೀಠದ ಕನಸು

Last Updated 21 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಬಹು ಸಂಸ್ಕೃತಿ ಅಧ್ಯಯನಗಳನ್ನು ಉತ್ತೇಜಿಸುವಂಥ ಒಂದು ವಿಶಿಷ್ಟ ಪರಂಪರೆಯಿದೆ. ವಿಶ್ವದ ನಾನಾ ದೇಶಗಳ ಐತಿಹಾಸಿಕ ನೆಲೆಗಳು, ಭಾಷೆಗಳು, ಕಲಾ ಪ್ರಕಾರಗಳು ಹಾಗೂ ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆಗಳನ್ನು ಕುರಿತಂತೆ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಆಸಕ್ತಿಯನ್ನು ಕೆರಳಿಸಿ ಅದನ್ನು ಪೋಷಿಸಲು ಈ ವಿಶ್ವವಿದ್ಯಾನಿಲಯದಲ್ಲಿ ವಿಪುಲವಾದ ಅವಕಾಶಗಳಿವೆ.

ವೈವಿಧ್ಯತೆಯನ್ನು ಗೌರವಿಸುವ ಒಂದು ಪರಂಪರೆ ಅಯೋವಾ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಪರಿಸರದಲ್ಲೇ ಹಾಸು ಹೊಕ್ಕಾಗಿರುವುದರಿಂದ ಇಲ್ಲಿನ ಹಲವಾರು ಅಧ್ಯಾಪಕರು ಅಮೆರಿಕಾದ ಭೌತಿಕ-ಸಾಮಾಜಿಕ ಎಲ್ಲೆಗಳನ್ನು ಮೀಟಿ ತಮ್ಮ ಬೋಧನೆ ಹಾಗೂ ಸಂಶೋಧನೆಗಳ ವ್ಯಾಪ್ತಿಯನ್ನು ಬೇರೆ ಬೇರೆ ಖಂಡಗಳವರೆಗೂ ವಿಸ್ತರಿಸಿರುವುದು, ಇಂದಿಗೂ ಆ ನಿಟ್ಟಿನಲ್ಲಿ ಕ್ರಿಯಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವುದು ವಿಶೇಷವಾಗಿ ಉಲ್ಲೇಖಾರ್ಹ.

ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಭಾರತವೂ ಸೇರಿದಂತೆ ಏಷಿಯಾ ಖಂಡದ ದೇಶಗಳ ಅಧ್ಯಯನಕ್ಕೆ  ಮೂರು ದಶಕಗಳಿಗೂ ಮೇಲ್ಪಟ್ಟ ಇತಿಹಾಸವೇ ಇದೆ. ಆಯಾ ದೇಶಗಳ ನಾಗರಿಕತೆ, ಭಾಷೆಗಳು, ಸಾಹಿತ್ಯ, ಧರ್ಮಗಳು, ರಂಗಭೂಮಿ, ಸಾಮಾಜಿಕ ವ್ಯವಸ್ಥೆ ಮುಂತಾದ ವಿಷಯಗಳನ್ನು ಕುರಿತು ಪದವಿ ಅಥವಾ ಸ್ನಾತಕೋತ್ತರ ಮಟ್ಟದಲ್ಲಿ ಶಿಕ್ಷಣವನ್ನು ಪಡೆಯಲು ಹಾಗೂ ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳಲು ಈ ವಿಶ್ವವಿದ್ಯಾನಿಲಯದಲ್ಲಿ ಅವಕಾಶಗಳನ್ನು ಕಲ್ಪಿಸಲಾಗಿದೆ.

ವಿಶೇಷವಾಗಿ ಏಷಿಯನ್ ಮತ್ತು ಸ್ಲಾವಿಕ್ ಭಾಷೆಗಳು ಮತ್ತು ಸಾಹಿತ್ಯಗಳ ವಿಭಾಗ, ಏಷಿಯಾ ಮತ್ತು ಪೆಸಿಫಿಕ್ ಅಮೆರಿಕನ್ ಕೇಂದ್ರ ಹಾಗೂ ದಕ್ಷಿಣ ಏಷಿಯಾ ಅಧ್ಯಯನ ಕೇಂದ್ರಗಳು ಏಷಿಯಾ ಖಂಡದ ದೇಶಗಳನ್ನು ಕುರಿತ ಜ್ಞಾನ ಪ್ರಸರಣದಲ್ಲಿ ಕಾರ್ಯ ಪ್ರವೃತ್ತವಾಗಿವೆ.

ಏಷಿಯಾ ಎಂದೊಡನೆ ನಮ್ಮ ಮನಸ್ಸಿನ ಮುಂದೆ ಬಂದು ನಿಲ್ಲುವುದು `ಭಾರತ~ ಹಾಗೂ ಭಾರತದ ಪ್ರಸ್ತಾಪ ಬಂದಾಗ ನಮ್ಮ ಆಸಕ್ತಿ ಸರಿಯುವುದು ಕನ್ನಡ ನಾಡಿನತ್ತ. ಅಯೋವಾ ವಿಶ್ವವಿದ್ಯಾನಿಲಯ ನಮ್ಮ ರಾಷ್ಟ್ರ ಹಾಗೂ ರಾಜ್ಯಗಳೆರಡರ ಜೊತೆಯೂ ಒಂದು ಅವಿನಾಭಾವ ಸಂಬಂಧ ಹೊಂದಿದೆ.
 
ನಾನು ಇಲ್ಲಿಗೆ ಬಂದ ಹೊಸದರಲ್ಲಿ ಬರೆದ ಅಂಕಣದಲ್ಲಿ (ಆಗಸ್ಟ್ 30) ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಅಸ್ತಿತ್ವದಲ್ಲಿರುವ ಭಾರತ ಕೇಂದ್ರಿತ ಕೋರ್ಸುಗಳ ಬಗ್ಗೆ ಪ್ರಸ್ತಾಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಂತೆಯೇ ಕರ್ನಾಟಕ ಮತ್ತು ಅಯೋವಾ ವಿಶ್ವವಿದ್ಯಾನಿಲಯಗಳ ನಡುವೆಯೂ ನಮ್ಮ ಸಾಹಿತಿಗಳು, ಅಧ್ಯಾಪಕರು, ಕಲಾವಿದರು, ಅಮೆರಿಕಾದ ಕನ್ನಡ ಅಭಿಮಾನಿಗಳು ಹಾಗೂ ಈ ವಿಶ್ವವಿದ್ಯಾನಿಲಯದ ಕೆಲವರು ಕನ್ನಡಾಸಕ್ತ ಅಧ್ಯಾಪಕರು ಒಂದು ಸಂಪರ್ಕ ಸೇತುವೆಯನ್ನು ಈಗಾಗಲೇ ನಿರ್ಮಾಣ ಮಾಡಿದ್ದಾರೆ.
 
ಇನ್ನು ಮುಂದೆ ಕನ್ನಡ ನಾಡು-ನುಡಿ ಸಂಸ್ಕೃತಿಗಳ ಬಗೆಗಿನ ಆಸಕ್ತಿಗೆ ಅಧ್ಯಯನಗಳಿಗೆ ಒಂದು ಔಪಚಾರಿಕ ಸ್ವರೂಪವನ್ನು ನೀಡಿ ನಿರಂತರವಾಗಿ ಕನ್ನಡ ಕೇಂದ್ರಿತ ಕೆಲಸಗಳು ಈ ವಿಶ್ವವಿದ್ಯಾನಿಲಯದಲ್ಲಿ ನಡೆಯುವಂಥ ವ್ಯವಸ್ಥೆಯೊಂದು ನಿರ್ಮಾಣವಾಗಬೇಕಿದೆಯಷ್ಟೆ.

ಅಯೋವಾ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕಗಳ ನಡುವಣ ಸಂಬಂಧ ಇಂದು-ನಿನ್ನೆಯದಲ್ಲ. ಕಳೆದ ಶತಮಾನದ ಎಂಬತ್ತರ ದಶಕದಲ್ಲಿಯೇ ಬೆಂಗಳೂರಿನ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕೆಲವರು ಅಧ್ಯಾಪಕರು ಈ ವಿಶ್ವವಿದ್ಯಾನಿಲಯದ ಸಹೋದ್ಯೋಗಿಗಳೊಡಗೂಡಿ ಜಂಟಿ ಸಂಶೋಧನಾ ಸಂಯೋಜನೆಗಳನ್ನು ಕೈಗೊಂಡಿದ್ದರು.
 
ವಿಶ್ವದಾದ್ಯಂತ ಶೈಕ್ಷಣಿಕ ಹಾಗೂ ಸಾಹಿತ್ಯ ಲೋಕಗಳಲ್ಲಿ ವಿಶಿಷ್ಟ ಗೌರವಕ್ಕೆ ಪಾತ್ರವಾಗಿರುವ ಅಯೋವಾ ವಿಶ್ವವಿದ್ಯಾನಿಲಯದ ಅಂತರರಾಷ್ಟ್ರೀಯ ಬರಹಗಾರರ ಕಾರ್ಯಕ್ರಮದಲ್ಲಿ ಬಹು ಕಾಲದಿಂದ ಕನ್ನಡ ನಾಡಿನ ಅನೇಕ ಲೇಖಕರು ಭಾಗವಹಿಸಿದ್ದಾರೆ.
 
ಇಂದಿಗೂ ಭಾಗವಹಿಸುತ್ತಲೇ ಇದ್ದಾರೆ. ಸುಮಾರು ಒಂದೂವರೆ ದಶಕದಿಂದ ಇಲ್ಲಿನ ವಿದ್ಯಾರ್ಥಿಗಳು `ಸ್ಟಡಿ ಇಂಡಿಯಾ~ ಕಾರ್ಯಕ್ರಮದ ಆಶ್ರಯದಲ್ಲಿ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿದ್ದು ಅದರಲ್ಲಿ ಅನೇಕರು ಕ್ಷೇತ್ರಾಧ್ಯಯನ ಆಧರಿತ ಅಧ್ಯಯನಗಳನ್ನೂ ಕೈಗೊಂಡಿದ್ದಾರೆ. ಕರ್ನಾಟಕ ಕೇಂದ್ರಿತ ಚಟುವಟಿಕೆಗಳಿಗೆ ಈ ವಿಶ್ವವಿದ್ಯಾನಿಲಯದಲ್ಲಿ ಪ್ರಶಸ್ತ ಪರಿಸರವಿರುವುದು ಸ್ಪಷ್ಟವಾಗುತ್ತದೆ.

ಎಂಬತ್ತರ ದಶಕದಲ್ಲಿ ಈ ವಿಶ್ವವಿದ್ಯಾನಿಲಯದಲ್ಲಿ ನಡೆದ ಅತ್ಯಂತ ಮಹತ್ವಪೂರ್ಣ ಬೆಳವಣಿಗೆಯೆಂದರೆ ಇಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಪೀಠವನ್ನು ಸ್ಥಾಪಿಸಲು ಕೈಗೊಂಡ ಕ್ರಮಗಳು.
 
ಅಯೋವಾ ವಿಶ್ವವಿದ್ಯಾನಿಲಯದ ಏಷಿಯನ್ ಭಾಷೆಗಳು ಹಾಗೂ ಸಾಹಿತ್ಯ ವಿಭಾಗದ ಡಾ ಷೆಲ್ಡನ್ ಪೊಲಾಕ್, 1986ರಲ್ಲಿ ಈ ವಿಶ್ವವಿದ್ಯಾನಿಲಯಕ್ಕೆ ಫುಲ್‌ಬ್ರೈಟ್ ಫೆಲೊ ಆಗಿ ಬಂದಿದ್ದ ಡಾ. ಯು.ಆರ್.ಅನಂತಮೂರ್ತಿ ಮತ್ತು ಶಿಕಾಗೋ ವಿಶ್ವವಿದ್ಯಾನಿಲಯದ ಡಾ. ಎ.ಕೆ. ರಾಮಾನುಜನ್ ಅವರ ಪ್ರಯತ್ನದ ಫಲವಾಗಿ ಕನ್ನಡ ಪೀಠದ ಸ್ಥಾಪನೆಗೆ ಚಾಲನೆ ದೊರೆಯಿತು.

ಅಮೆರಿಕಾದ ವಿವಿಧ ಭಾಗಗಳಲ್ಲಿದ್ದ ಕನ್ನಡಿಗರೊಡನೆ ಸಮಾಲೋಚನೆಯನ್ನು ನಡೆಸಿ ಈ ಪೀಠದ ಚಟುವಟಿಕೆಗಳನ್ನು ಕೈಗೊಳ್ಳಲು ನಿಧಿಯೊಂದನ್ನು ಸಂಗ್ರಹಿಸಲು ಒಂದು ರಾಷ್ಟ್ರಮಟ್ಟದ ಸಮಿತಿಯನ್ನು ರಚಿಸಲಾಯಿತು. ಆಗಿನ ಕಾಲಕ್ಕೆ 1.25 ಮಿಲಿಯನ್ ಡಾಲರ್‌ಗಳನ್ನು ಈ ಪೀಠದ ಹೆಸರಿನಲ್ಲಿ ಇಡಲು ನಿರ್ಧರಿಸಲಾಯಿತು.

ನಿಧಿ ಸಂಗ್ರಹಣೆಗಾಗಿ ಕನ್ನಡ ಕೂಟಗಳನ್ನೂ ಕನ್ನಡಿಗರನ್ನೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಯು. ಆರ್. ಅನಂತಮೂರ್ತಿ ಮತ್ತು  ಗಿರೀಶ್ ಕಾರ್ನಾಡ್ ಅವರು ಭೇಟಿ ಮಾಡಿದ್ದು, ಹತ್ತು ವರ್ಷಗಳಿಗೂ ಹೆಚ್ಚು ಕಾಲ ನಡೆದ ನಿಧಿ ಸಂಗ್ರಹಣಾ ಕಾರ್ಯಕ್ಕೆ ಅಮೆರಿಕಾ ಮತ್ತು ಕೆನಡಾ ದೇಶಗಳ ನೂರಾರು ಕನ್ನಡಿಗರು ಹಾಗೂ ಕೆಲ ಕನ್ನಡ ಸಂಘಟನೆಗಳು ಕೈ ಜೋಡಿಸಿದ್ದವು. 1998ರ ವೇಳೆಗೆ 74,000 ಡಾಲರ್‌ಗಳಷ್ಟು ಹಣ ಸಂದಾಯವಾಗಿದ್ದರೆ 83,000 ಡಾಲರ್‌ಗಳನ್ನು ನೀಡುವ ಆಶ್ವಾಸನೆಗಳು ಬಂದಿದ್ದವು.

ಆದರೆ 1998ರ ಜೂನ್ ತಿಂಗಳಿನಲ್ಲಿ ಕನ್ನಡ ಪೀಠದ ಸ್ಥಾಪನೆ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರ ವ್ಯವಹಾರಗಳ ಜವಾಬ್ದಾರಿಯನ್ನು ಹೊತ್ತಿದ್ದ ಅಯೋವಾ ವಿಶ್ವವಿದ್ಯಾನಿಲಯದ ದಕ್ಷಿಣ ಏಷಿಯಾ ಅಧ್ಯಯನಗಳ ವಿಭಾಗ ಹೊರಡಿಸಿದ ಪ್ರಕಟನೆಯೊಂದು, ಕನ್ನಡ ಭಾಷೆ ಮತ್ತು ಸಂಸ್ಕೃತಿ ಪೀಠವನ್ನು ಸ್ಥಾಪಿಸಲು ಹತ್ತು ವರ್ಷಗಳ ಕಾಲ ಚಾಲನೆಯಲ್ಲಿದ್ದ ನಿಧಿ ಸಂಗ್ರಹಣಾ ಕಾರ್ಯಕ್ರಮವನ್ನು ಇನ್ನು ಮುಂದೆ ನಿಲ್ಲಿಸಲಾಗುವದೆಂದು ತಿಳಿಸಿತು.
 
ಇದುವರೆಗೂ ಈ ಪೀಠ ಸ್ಥಾಪನೆಗಾಗಿ ನಿರೀಕ್ಷಿಸಲಾಗಿದ್ದ ಧನ ಸಂಗ್ರಹಣೆ ಆಗದಿದ್ದುದು ಅವರು ಅಯೋಜಿಸಿದ್ದ ಅನೇಕ ಕಾರ್ಯಕ್ರಮಗಳನ್ನು ಕಾರ್ಯ ರೂಪಕ್ಕೆ ತರಲು ಕಷ್ಟವಾಗಬಹುದೆಂಬುದು ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿರಬಹುದು.

ಇದುವರೆಗೂ ಈ ನಿಧಿಗೆ ಸಂದಾಯವಾಗಿದ್ದ ಮೂಲಧನವನ್ನು ಅಯೋವಾ ವಿಶ್ವವಿದ್ಯಾನಿಲಯದ ಫೌಂಡೇಷನ್‌ನಲ್ಲಿಟ್ಟು, ಇದರ ಮೇಲೆ ಬರುವ ಬಡ್ಡಿದರದ ಒಂದು ಭಾಗವನ್ನು `ಯು. ಆರ್. ಅನಂತಮೂರ್ತಿ ಫಂಡ್ ಫಾರ್ ಕನ್ನಡ ಕಲ್ಚರ್~ ಎಂಬ ದತ್ತಿ ಸ್ಥಾಪನೆ ಮಾಡುವುದಾಗಿ ತಿಳಿಸಿದ ಸಂಘಟಕರು ಕನ್ನಡ ಪೀಠದ ಸ್ಥಾಪನೆಗೆ ಇನ್ನು ಮುಂದೆಯೂ ಶ್ರಮಿಸುವುದಾಗಿ ತಿಳಿಸಿದರು.

ಹಾಲಿ ಅಸ್ತಿತ್ವದಲ್ಲಿರುವ ದತ್ತಿಯ ಆಶ್ರಯದಲ್ಲಿ ಅಯೋವಾ ವಿಶ್ವವಿದ್ಯಾನಿಲಯಕ್ಕೆ ಕಳೆದ ಹತ್ತು ಹನ್ನೆರಡು ವರ್ಷಗಳಲ್ಲಿ ಕರ್ನಾಟಕದಿಂದ ಲೇಖಕರು, ಕಲಾವಿದರು ಹಾಗೂ ಅಧ್ಯಾಪಕರು ಬಂದು ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ದರ್ಶನವನ್ನು ಇಲ್ಲಿನ ಶೈಕ್ಷಣಿಕ ಸಮುದಾಯಕ್ಕೆ ನೀಡುತ್ತಾ ಬಂದಿದ್ದಾರೆ. ಪೀಠ ಸ್ಥಾಪನೆಯಾಗಿದ್ದರೆ ಪೂರ್ಣಾವಧಿ ಕನ್ನಡ ಪ್ರಾಧ್ಯಾಪಕರೊಬ್ಬರ ನೇಮಕಾತಿಯೂ ಆಗುತ್ತಿತ್ತೇನೊ.
 
ಆದರೆ ಯಾವುದೇ ಭಾಷೆ ಹಾಗೂ ಸಂಸ್ಕೃತಿಗಳ ಬಗ್ಗೆ ವಿವಿಧ ಹಿನ್ನೆಲೆಗಳಿಂದ ಬಂದಿರುವ ವಿಶ್ವವಿದ್ಯಾನಿಲಯದ ಸಮುದಾಯದಲ್ಲಿ ಆಸಕ್ತಿಯನ್ನು ಬೆಳಸಲು ಕೇವಲ ಒಂದೆರಡು ಕೋರ್ಸುಗಳಿಂದ ಅಥವಾ ಒಂದೆರಡು ವಾರಗಳು ಅಥವಾ ತಿಂಗಳುಗಳ ಅವಧಿಯಲ್ಲಿ ನಡೆಯುವ ಸಂಪೂರ್ಣ ಶೈಕ್ಷಣಿಕ ಸ್ವರೂಪದ ಕಾರ್ಯಕ್ರಮಗಳಿಂದ ಸಾಧ್ಯವಾಗುವುದಿಲ್ಲ.

ನಿರಂತರವಾಗಿ ನಮ್ಮ ಭಾಷೆ, ಸಾಹಿತ್ಯ, ಕಲಾ ಪ್ರಕಾರಗಳು, ರಾಜ್ಯದ ಸಾಧನೆಗಳು ಹಾಗೂ ಅಲ್ಲಿರುವ ಅಧ್ಯಯನ ಅವಕಾಶಗಳು ಇವೇ ಮುಂತಾದ ವಿಷಯಗಳನ್ನು ಕುರಿತಂತೆ ವಿಶ್ವವಿದ್ಯಾನಿಲಯ, ಅಯೋವಾ ನಗರವೇ ಅಲ್ಲದೆ, ಸುತ್ತಮುತ್ತಣ ಪ್ರದೇಶಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತಲೇ ಇರಬೇಕು.

ಅಯೋವಾ ವಿಶ್ವವಿದ್ಯಾನಿಲಯದ ಭಾಗವಾಗಿ ಕಾರ್ಯ ನಿರ್ವಹಿಸತ್ತಿರುವ `ಅಟಾನಮಸ್ ಲಾಂಗ್ವೇಜ್ ಲರ್ನಿಂಗ್ ನೆಟ್‌ವರ್ಕ್~ ಎಂಬ ಸಂಸ್ಥೆ ಕನ್ನಡವೂ ಸೇರಿದಂತೆ ಇತರ ದಕ್ಷಿಣ ಭಾರತೀಯ ಭಾಷೆಗಳನ್ನು ಕಲಿಯಲಿಚ್ಛಿಸುವವರಿಗೆ ಖಾಸಗಿ ಶಿಕ್ಷಕರ ಮೂಲಕ ಆ ವ್ಯವಸ್ಥೆಯನ್ನು ಕಲ್ಪಿಸಲು ಕೂಡ ಅವಕಾಶವನ್ನು ಮಾಡಿಕೊಡುತ್ತದೆ.

ದಕ್ಷಿಣ ಏಷಿಯಾ ಅಧ್ಯಯನ ಕೇಂದ್ರದ ಮೂಲಕ ಈ ವಿದ್ಯಾರ್ಥಿಗಳಿಗೆ ಧನಸಹಾಯವನ್ನು ನೀಡಲು ಕೂಡ ಸಾಧ್ಯತೆಗಳಿವೆ. ಆದರೆ ಕನ್ನಡ ಭಾಷೆಯನ್ನು ಕಲಿಯಲು ಇನ್ನೂ ವಿದ್ಯಾರ್ಥಿಗಳು ಮುಂದೆ ಬರಬೇಕಾಗಿದೆ ಎಂದು ನನಗೆ ತಿಳಿದು ಬಂದಿದೆ.

ಹೊರ ದೇಶದ ವಿಶ್ವವಿದ್ಯಾನಿಲಯವೊಂದರಲ್ಲಿ ನಮ್ಮ ಭಾಷೆಯ ಬಗ್ಗೆ ಆಸಕ್ತಿ-ಅಭಿಮಾನಗಳನ್ನು ಬೆಳಸಿ ಅವುಗಳನ್ನು ಉಳಿಸಿಕೊಂಡು ಬರುವುದು ಸುಲಭ ಸಾಧ್ಯವಾದ ಕೆಲಸವಲ್ಲ. ಈ ಗುರಿ ಸಾಧನೆಯಾಗಬೇಕಾದರೆ ಪೂರ್ಣಾವಧಿಯಾಗಿ ಅದೇ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಸಂಸ್ಥೆಯೊಂದರ ಅವಶ್ಯಕತೆಯಿದೆ.

ನಾನು ಕಂಡ ಹಾಗೆ ಇದೇ ವಿಶ್ವವಿದ್ಯಾನಿಲಯದಲ್ಲಿರುವ ಕನ್‌ಫ್ಯೂಷಿಯಸ್ ಇನ್ಸ್‌ಟಿಟ್ಯೂಟ್ ಚೀನಾ ದೇಶದ ಭಾಷೆ ಮತ್ತು ಸಂಸ್ಕೃತಿಯ ಜ್ಞಾನ ಪ್ರಸರಣಕ್ಕೆಂದೇ ತನ್ನನ್ನು ಮೀಸಲಾಗಿಟ್ಟುಕೊಂಡು ಅಂತರರಾಷ್ಟ್ರೀಯ ಸಮುದಾಯದಲ್ಲಿ ಚೀನಾವನ್ನು ಕುರಿತ ಆಸಕ್ತಿಯನ್ನು ಬೆಳೆಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಲೇ ಇರುತ್ತದೆ.

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಕಾಳಜಿಯಿರುವ ಅಮೆರಿಕಾದಲ್ಲಿರುವ ವ್ಯಕ್ತಿಗಳು ಹಾಗೂ ವ್ಯವಸ್ಥೆಗಳು ಮೊದಲಿಗೆ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಪೀಠದ ಸ್ಥಾಪನೆಗೆ ಹೆಚ್ಚು ಆಸ್ಥೆ ವಹಿಸಬೇಕು.
 
ಮೊನ್ನೆ ಮೊನ್ನೆ ತಾನೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಧ್ಯಕ್ಷರು ಹೊರದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಪೀಠಗಳ ಸ್ಥಾಪನೆಗೆ ತಮ್ಮ ಸಂಸ್ಥೆ ಧನ ಸಹಾಯ ನೀಡುವುದಾಗಿ ಹೇಳಿರುವುದರಿಂದ, ಈಗಾಗಲೇ ಸಾಕಷ್ಟು ಮುಂದೆ ಸರಿದಿರುವ ಅಯೋವಾ ವಿಶ್ವವಿದ್ಯಾನಿಲಯದ ಕನ್ನಡ ಭಾಷೆ ಮತ್ತು ಸಂಸ್ಕೃತಿಪೀಠದ ಕೆಲಸಕ್ಕೆ ಬೆಂಬಲ ನೀಡುವದನ್ನು ಪರಿಗಣಿಸಬಹುದು.

1986ನೇ ಇಸವಿಯಲ್ಲಿಯೇ ಕರ್ನಾಟಕ ಸರ್ಕಾರ ಇಲ್ಲಿನ ಕನ್ನಡ ಪೀಠಕ್ಕೆ ಬೆಂಬಲ ನೀಡುವುದಾಗಿ ಆಶ್ವಾಸನೆಯನ್ನಿತ್ತಿದ್ದು ಇದುವರೆಗೂ ಅದು ಸಾಕಾರವಾಗಿಲ್ಲವಾದ್ದರಿಂದ ಈಗಲಾದರೂ ತನ್ನ ಗಮನವನ್ನು ಇತ್ತ ಹರಿಸಿದರೆ ಕನ್ನಡದ ಕೆಲಸಕ್ಕೆ ಕೈ ಸೇರಿಸಿದಂತಾಗುತ್ತದೆ.
 
ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಸ್ಥಾನವನ್ನು ಕಡಲಾಚೆಯ ಈ ನೆಲದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡುವಂಥ ರೀತಿಯಲ್ಲಿ ಅಯೋವಾ ವಿಶ್ವವಿದ್ಯಾನಿಲಯದ ಕನ್ನಡ ಪೀಠ ಇನ್ನು ಮುಂದಾದರೂ ಮೂಡಿ ಬರಲಿ ಎನ್ನುವುದೇ ನನ್ನ ಆಶಯ.

(ನಿಮ್ಮ ಅನಿಸಿಕೆಗಳನ್ನು ತಿಳಿಸಿ: editpagefeedback@prajavani.co.in)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT