ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಫಲತೆಯ ರುದ್ರಭೂಮಿ

Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕಿಟ್ಟಣ್ಣ ಮೊನ್ನೆ ಮನೆಗೆ ಬಂದಿದ್ದ. ಪ್ರತಿಬಾರಿಯೂ ಅವನದ್ದೊಂದು ವಿಶೇಷ ವಾದ ಗೋಳು ಇದ್ದೇ ಇರುತ್ತದೆ. ಈ ಸಲ ತನ್ನ ಮಗನ ಬಗ್ಗೆ ಹೇಳುತ್ತಿದ್ದ. ಆ ಹುಡುಗನಿಗೆ ಪ್ಯಾಡ್, ಬ್ಯಾಟ್ ಕೊಡಿಸಿದ ದಿನವೇ ಅವನೇ ಮುಂದಿನ ತೆಂಡೂಲ್ಕರ್ ಎಂದು ತೀರ್ಮಾನ ಮಾಡಿಬಿಟ್ಟಿದ್ದ. ಅವನ ತರಬೇತಿಗೆ ಕಿಟ್ಟಣ್ಣ ರಜೆ ಹಾಕಿ ಹೋಗಿದ್ದೇ ಹೋಗಿದ್ದು. ಮ್ಯಾಚ್ ಇದ್ದಾಗಲಂತೂ ಆಟದ ಸಕಲ ಸಾಮಗ್ರಿಗಳನ್ನು ತನ್ನ ಸ್ಕೂಟರಿನಲ್ಲಿ ಹೊತ್ತುಕೊಂಡು ಇಡೀ ದಿನ ಓಡಾಡುತ್ತಿದ್ದ.

ಆದರೆ, ದುರ್ದೈವವೆಂದರೆ ಮೊನ್ನೆ ರಾಜ್ಯದ ಕಿರಿಯರ ತಂಡದ ಆಯ್ಕೆಗೆ ಹೋದ ಮಗ ಆಯ್ಕೆಯಾಗಿರಲಿಲ್ಲ. ಅದೇ ಕಿಟ್ಟಣ್ಣನ ಕೋಪದ ಕಾರಣ. ಕೋಪ, ಸಂಕಟಗಳಿಂದ ಕುದಿದು ಹೋದ ಕಿಟ್ಟಣ್ಣ ಹೇಳಿದ, ‘ಈಗ ನಿಜವಾದ ಪ್ರತಿಭೆಗೆ ಬೆಲೆ ಇಲ್ಲಪ್ಪ. ಆಯ್ಕೆದಾರರು ತಮ್ಮ ತಮ್ಮ ಕ್ಲಬ್‌ಗಳಿಂದ ಬಂದ ಹುಡುಗರನ್ನು ಮೊದಲೇ ಆಯ್ಕೆ ಮಾಡಿರುತ್ತಾರೆ. ಈ ಆಯ್ಕೆ ಎಲ್ಲ ಬರೀ ನಾಟಕ. ನನ್ನ ಮಗನ ಹಾಗೆ ಆಡುವ ಒಬ್ಬ ಆಟಗಾರನೂ ಅಲ್ಲಿರಲಿಲ್ಲ. ಏನು ಮಾಡುವುದು? ನನಗೆ ವಶೀಲಿ ಇಲ್ಲ’. ‘ಮುಂದೆ ಏನು ಮಾಡುತ್ತೀ ಕಿಟ್ಟಣ್ಣ?’ ಎಂದು ಕೇಳಿದೆ.

ಆತ ಹೇಳಿದ, ‘ಸಾಕಿನ್ನು ಕ್ರಿಕೆಟ್ಟಿಗೆ ಮಣ್ಣು ಹೊತ್ತಿದ್ದು, ಇನ್ನು ಸರಿಯಾಗಿ ಓದಿ ಮುಂದೆ ಬಾ ಎಂದು ಹೇಳುತ್ತೇನೆ ಮಗನಿಗೆ’. ಮುಂದೆ ಕಿಟ್ಟಣ್ಣನ ಮಗ ಕ್ರಿಕೆಟ್ ಆಡಲೇ ಇಲ್ಲ, ತೆಂಡೂಲ್ಕರ್ ಆಗುವ ಕನಸು ಕರಗಿ ಹೋಯಿತು. ಈ ವಿಷಯ ನನ್ನನ್ನು ಬಹಳ ಚಿಂತೆಗೀಡು ಮಾಡಿತು. ತೆಂಡೂಲ್ಕರ್ ಆಗಬೇಕೆಂದು ಹೊರಟ ಲಕ್ಷಾಂತರ ಬಾಲಕರಲ್ಲಿ ಸಾವಿರ ಜನ ರಾಜ್ಯಮಟ್ಟವನ್ನು ತಲುಪುತ್ತಾರೆ, ಅವರಲ್ಲಿ ನೂರು ಜನ ರಾಷ್ಟ್ರಮಟ್ಟದಲ್ಲಿ ಆಡುವ ಅವಕಾಶ ಪಡೆಯುತ್ತಾರೆ. ಅದರಲ್ಲಿ ಹದಿನೈದು ಜನ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶ ಪಡೆಯುತ್ತಾರೆ.

ಅವರಲ್ಲೂ ಬಹಳಷ್ಟು ಜನ ನಾಲ್ಕಾರು ಪಂದ್ಯವಾಡಿ ಮರೆಯಾಗುತ್ತಾರೆ. ಆದರೆ, ಧ್ರುವತಾರೆ­ಗಳಾಗಿ ಉಳಿಯುವವರು ಒಬ್ಬರೋ, ಇಬ್ಬರೋ! ಅಂದರೆ ನೂರಕ್ಕೆ ತೊಂಬ­ತ್ತೊಂಬತ್ತರಷ್ಟು ಕನಸುಗಳು ಅಸಫ­ಲತೆಯ ರುದ್ರಭೂಮಿ ಸೇರುತ್ತವೆ. ಟಿ.ವಿಯಲ್ಲಿ ಬರುವ ರಿಯಾಲಿಟಿ­ಯಲ್ಲದ ರಿಯಾಲಿಟಿ ಶೋಗಳನ್ನು ಬೇಕಾದಷ್ಟು ನೋಡಿದ್ದೇವೆ. ಪುಟ್ಟ ಪುಟ್ಟ ಮಕ್ಕಳು ಅಷ್ಟೊಂದು ಪ್ರಬುದ್ಧವಾಗಿ ಹಾಡುವುದನ್ನು ಕೇಳಿ ಬೆರಗಾಗಿದ್ದೇವೆ. ಈ ಬಾಲದೈತ್ಯಪ್ರತಿಭೆಗಳು ಮುಂದೆ ದೊಡ್ಡ ತಾರೆಗಳಾಗಬಹು­ದೆಂದುಕೊ­ಳ್ಳುತ್ತೇವೆ.

ಆದರೆ, ಅವೆಲ್ಲ ಎಲ್ಲಿ ಹೋದವು? ಒಂದೆರಡು ಅಪರೂಪದ ಉದಾಹರಣೆಗಳನ್ನು ಬಿಟ್ಟರೆ ಅವರು ಯಾರೂ ಮಿಂಚಲೇ ಇಲ್ಲ. ಒಬ್ಬ ಲತಾ ಮಂಗೇಶ್ಕರ್, ಒಬ್ಬ ಶ್ರೇಯಾ ಗೋಶಾಲ್, ಒಬ್ಬ ಮಹಮದ್ ರಫಿಯ ಹಿಂದೆ ತಾರೆಗಳಾಗದೇ ಮುರುಟಿ­ಹೋದ ಲಕ್ಷಾಂತರ ಹುಡುಗ ಹುಡುಗಿಯರಿದ್ದಾರೆ. ಇದೇ ರೀತಿ ಅತ್ಯಂತ ಯಶಸ್ವೀ ಲೇಖಕನ ಹಿಂದೆ, ಬರೆದ ಪುಸ್ತಕ ಮಾರಲಾರದ ನೂರು ಜನ ಬರಹಗಾ­ರರಿದ್ದಾರೆ. ಅವರ ಹಿಂದೆ ಹಸ್ತಪ್ರತಿ­ಯನ್ನು ಬರೆದೂ ಪ್ರಕಾಶಕರು ಸಿಗದ ನೂರು ಜನರಿದ್ದಾರೆ.

ಅವರ ಹಿಂದೆ ನೂರು ಜನ ದೂಳು ತಿನ್ನುತ್ತಿರುವ ಅರ್ಧಮರ್ಧ ಹಸ್ತ ಪ್ರತಿಯನ್ನು ಬರೆದು ಕುಳಿತವರಿದ್ದಾರೆ. ಅವರ ಹಿಂದೆಯೂ ಒಂದಲ್ಲ ಒಂದು ದಿನ ಮಹಾನ್ ಕೃತಿ ರಚನೆ ಮಾಡಬೇಕೆಂದು ಕನಸುಕಾಣುವ ನೂರು ಜನರಿದ್ದಾರೆ. ಆದರೆ, ಪ್ರಪಂಚ ನೋಡುವುದು ಅತ್ಯಂತ ಯಶಸ್ವಿಗಳಾದ, ಲಕ್ಷಾಂತರ ಪ್ರತಿಗಳನ್ನು ಮಾರಾಟ ಮಾಡಿದ ಲೇಖಕರನ್ನು ಮಾತ್ರ. ಆದ್ದರಿಂದ ನಾವೂ ಹಾಗೆ ಆಗಬಹು­ದೆನ್ನುವ ಆಸೆ ಚಿಗುರುತ್ತದೆ. ಇದರಂತೆ ಅತ್ಯಂತ ಯಶಸ್ವೀ ಮೇರಿ ಕ್ಯೂರಿಯ ಹಿಂದೆ ಲಕ್ಷಾಂತರ ಜನ ಮರೆಯಾದ ವಿಜ್ಞಾನಿಗಳಿದ್ದಾರೆ.

ನಾರಾಯಣ ಮೂರ್ತಿ, ಪ್ರೇಮ್‌ಜೀ ಅವರಂತೆ ವ್ಯವಹಾರದಲ್ಲಿ ಅತೀವ ಸಾಧನೆ ಮಾಡಬಯಸುವ ಲಕ್ಷಾಂತರ ಹೃದಯಗಳಿವೆ. ಆದರೆ, ಅವೆಲ್ಲ ಅವರಂತಾಗುತ್ತವೆ ಎಂಬುದು ಭ್ರಮೆ. ಯಶಸ್ಸಿನ ಸೂತ್ರಗಳು ಎಂದು ಯಾವುದನ್ನು ಪುಸ್ತಕಗಳು ಬರೆಯುತ್ತ­ವೆಯೋ ಅವುಗಳನ್ನು ಗಮನಿಸಿ. ಅಸಫಲರಾದ ಅನೇಕರಲ್ಲಿ ಈ ಎಲ್ಲ ಸೂತ್ರಗಳೂ ಇದ್ದವು. ಆದರೂ ಸಫಲತೆ ದೊರೆಯಲಿಲ್ಲ. ಅಯಶಸ್ವಿಯಾದವರ ಬಗ್ಗೆ ಜನ ಪುಸ್ತಕ ಬರೆಯುವುದಿಲ್ಲ. ಸಣ್ಣ, ಯಶಸ್ವಿಯಾಗದ ಉದ್ಯಮಗಳ ಬಗ್ಗೆ, ಖ್ಯಾತರಾಗದ ಹಾಡುಗಾರರ ಬಗ್ಗೆ ಯಾವ ಚಾನೆಲ್ಲೂ ಕಾರ್ಯಕ್ರಮ ಮಾಡುವುದಿಲ್ಲ.

ಇಷ್ಟು ಹೇಳುವು­ದರ ಹಿಂದಿನ ಉದ್ದೇಶ ಪ್ರಯತ್ನ ಮಾಡಲೇ­ಬಾರದೆಂದಲ್ಲ. ಅತ್ಯಂತಿಕ ಪ್ರಯತ್ನವ­ಲ್ಲದೇ ಯಾವುದೂ ಸಾಧ್ಯವಿಲ್ಲ. ಆದರೆ, ಸಾಧನೆಯ ಪಥಕ್ಕೆ ಹೋಗುವ ಮೊದಲು ಅಸಫಲತೆಯ ರುದ್ರಭೂಮಿ­ಯಲ್ಲಿ ತಿರುಗಾಡಿ ಬರುವುದು ಒಳ್ಳೆಯದು. ಅದೊಂದು ದುಃಖಕರ­ವಾದ ತಿರುಗಾಟ. ಆದರೆ ಅದು ಮನಸ್ಸನ್ನು ತಿಳಿಗೊಳಿಸುತ್ತದೆ, ಆತ್ಮವಿಶ್ವಾಸಬೇಕು. ಆದರೆ ಅತೀವ ಆಸೆ ಬೇಡ ಎಂಬುದನ್ನು ತಿಳಿಸುತ್ತದೆ. ಯಶಸ್ಸು ಸುಲಭವಲ್ಲ ಜ್ಞಾನ, ಸತತ ಪ್ರಯತ್ನ, ಸೋತರೂ ಹಿಂದೆಗೆಯದ ಛಲ. ಇವೆಲ್ಲರೊಂದಿಗೆ ಅದೃಷ್ಟವೂ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT