ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಮಧುರ ನೆನಪುಗಳನ್ನುಕೆದಕಿದಾಗ...

Last Updated 6 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನಾನು ಬಿಷನ್ ಸಿಂಗ್ ಬೇಡಿ ಅವರನ್ನು ಭೇಟಿಯಾಗಿದ್ದು 20 ವರ್ಷಗಳ ಹಿಂದೆ. ಭಾರತ ಕಂಡ ಅತ್ಯುತ್ತಮ ಎಡಗೈ ಸ್ಪಿನ್ನರ್ ಬಿಷನ್ ಸಿಂಗ್ ಅವರನ್ನು ಪರಿಚಯಿಸಿದ್ದು ಹಿರಿಯ ಕ್ರೀಡಾ ಪತ್ರಕರ್ತ ಆರ್. ಶ್ರೀಮಾನ್.

ನವದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪಂದ್ಯವೊಂದರ ವರದಿಗೆ ಹೋಗಿದ್ದಾಗ ಅವರ ಪರಿಚಯವಾಯಿತು. ಆಗ `ಪ್ರಜಾವಾಣಿ~ಯಲ್ಲಿ ಅವರ ಮತ್ತು ಸುನೀಲ್ ಗಾವಸ್ಕರ್ ಅಂಕಣಗಳು ಪ್ರಕಟವಾಗುತ್ತಿದ್ದವು. `ನಿಮ್ಮ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸುವವನು ನಾನೇ~ ಎಂದಾಗ ಅವರಿಗೆ ಬಹಳ ಖುಷಿಯಾಗಿತ್ತು.
 
ಬಿಷನ್ ತಮ್ಮ ಅಂಕಣವನ್ನು ತಾವೇ ಬರೆಯುತ್ತಿದ್ದರು. (ಹಲವು ಮಂದಿ ಕ್ರಿಕೆಟ್ ಆಟಗಾರರು ಅಂಕಣಕಾರರಾದರೂ ಅವರಿಗೆ ಲೇಖನಗಳನ್ನು ಕೆಲವು ಪತ್ರಕರ್ತರೇ ಬರೆದುಕೊಡುತ್ತಿದ್ದರು ಎಂಬುದು ಗುಟ್ಟಾಗೇನಿರಲಿಲ್ಲ.) ಮುಕ್ತ ಮನಸ್ಸಿನಿಂದ ಮಾತನಾಡಿದ್ದ ಅವರು ಕರ್ನಾಟಕದ ಕ್ರಿಕೆಟ್ ಬಗ್ಗೆ ಕೇಳಿದ್ದರು. ಸರದಾರಜೀಗಳ ಹೃದಯ ಬಹಳ ದೊಡ್ಡದು ಎಂಬುದು ನನಗೆ ಮತ್ತೊಮ್ಮೆ ಮನದಟ್ಟಾಗಿತ್ತು. `ಲೆಟ್ ಅಸ್ ಮೀಟ್ ಅಗೇನ್, ಯಂಗ್ ಮ್ಯಾನ್~ ಎಂದು ಅವರು ಕೈಕುಲುಕಿದ್ದರು. ಆದರೆ ಆಮೇಲೆ ಅವರನ್ನು ಭೇಟಿಯಾಗುವ ಅವಕಾಶ ಸಿಗಲೇ ಇಲ್ಲ.

ಕಳೆದ ವಾರ ಬೇಡಿ ನೆನಪು ಮೂಡಿಬಂತು. ನನ್ನ 29 ವರ್ಷಗಳ ಹಿಂದಿನ ಸ್ನೇಹಿತ, ಡೆಕ್ಕನ್ ಹೆರಾಲ್ಡ್‌ನಲ್ಲಿ ಕ್ರೀಡಾ ವರದಿಗಾರನಾಗಿದ್ದ ಸುರೇಶ್ ಮೆನನ್ ಅವರಿಂದಾಗಿ ಬೇಡಿ ನೆನಪಿನ ಜೊತೆ ಸ್ಪಿನ್ ತ್ರಿವಳಿಗಳಲ್ಲಿ ಇನ್ನಿಬ್ಬರಾಗಿದ್ದ ಬಿ.ಎಸ್. ಚಂದ್ರಶೇಖರ್ ಮತ್ತು ಇ.ಎ.ಎಸ್. ಪ್ರಸನ್ನ ಅವರನ್ನು ಮುಖತಃ ಭೇಟಿಯಾಗುವಂತಾಯಿತು.

ಸಂದರ್ಭ: ಸುರೇಶ್ ಮೆನನ್ ಬರೆದಿರುವ `ಬಿಷನ್, ಪೋಟ್ರೇಟ್ ಆಫ್ ಎ ಕ್ರಿಕೆಟರ್~ ಪುಸ್ತಕದ ಬಿಡುಗಡೆ ಸಮಾರಂಭ. ಕ್ರಿಕೆಟ್‌ಪ್ರೇಮಿ ಹಾಗೂ ಸಂಸದ ಶಶಿ ತರೂರ್ ಪುಸ್ತಕ ಬಿಡುಗಡೆ ಮಾಡಿ, ಬೇಡಿ, ಚಂದ್ರ, ಪ್ರಸನ್ನ ಅವರ ಬಗ್ಗೆ ಬಹಳ ಸೊಗಸಾಗಿ ಮಾತನಾಡಿದರು.
 
ಶಾಲಾ ಬಾಲಕನಾಗಿದ್ದಾಗ ನೋಡಿದ್ದ ಕ್ರಿಕೆಟ್ ಪಂದ್ಯಗಳ ಬಗ್ಗೆ ನಿನ್ನೆ, ಮೊನ್ನೆ ನೋಡಿದಂತೆ ಮಾತನಾಡಿದರು. ಕೋಲ್ಕತ್ತ ಟೆಸ್ಟ್ ಒಂದರಲ್ಲಿ ಬೇಡಿ ಬೌಲ್ ಮಾಡುವಾಗ, 12 ಗಂಟೆಯಾಗುತ್ತಿದ್ದಂತೆಯೇ `ಬಾರಾ ಬಜಗಯಾ~ ಎಂದು ಪ್ರೇಕ್ಷಕರು ಛೇಡಿಸಿದ ಕೂಡಲೇ ಅವರು ವಿಕೆಟ್ ಉರುಳಿಸಿ ಸಂಭ್ರಮಿಸುತ್ತಿದ್ದರು ಎಂದು ತರೂರ್ ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು. ಪ್ರಸನ್ನ ಕೂಡ ತಮ್ಮ ಮಾತುಗಳಿಂದ ಎಲ್ಲರೂ `ಕಾಟ್ ಅಂಡ್ ಬೌಲ್ಡ್~ ಆಗುವಂತೆ ಮಾಡಿದರು.

ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ (ಬಿಐಸಿ)ಗೆ ನಾನು ಹೋದಾಗ ಚಂದ್ರ ಮತ್ತು ಪ್ರಸನ್ನ ಮಾತನಾಡುತ್ತ ಕುಳಿತಿದ್ದರು. ಪ್ರಸನ್ನ ತಮ್ಮ ಎಂದಿನ ಗಂಭೀರ ಧ್ವನಿಯಲ್ಲಿ, `ಏನ್ರೀ ಬಹಳ ದಿನ ಆಯ್ತಲ್ರಿ~ ಎಂದರೆ, ಚಂದ್ರ ಅದೇ ಹಿಂದಿನ ಮೃದು ದನಿಯಿಂದ ಮುಗುಳ್ನಗುತ್ತ, `ಅರೆ, ಗೋಪಾಲ್, ಹುಬ್ಬಳ್ಳಿಯಿಂದ ವಾಪಸ್ ಬಂದ್ರೇನ್ರೀ~ ಎಂದು ಕೇಳಿದರು. ಬಹಳ ವರ್ಷಗಳ ನಂತರ ಇಬ್ಬರನ್ನೂ ಭೇಟಿಯಾಗಿದ್ದೆ.

ಗೆಳೆಯ ಪಿ.ಆರ್. ವಿಶ್ವನಾಥನ್  ಅವರ ಆರೋಗ್ಯದ ಬಗ್ಗೆ ಚಂದ್ರ ಕೇಳಿದರು. ದಿ. ಹಿಂದು ಪತ್ರಿಕೆಯ ಕ್ರೀಡಾ ವರದಿಗಾರರಾಗಿದ್ದ ಪಿ.ಆರ್.ವಿ. ಮತ್ತು ಚಂದ್ರ ಆತ್ಮೀಯ ಗೆಳೆಯರು. ಮೂರು ದಶಕಗಳ ಹಿಂದೆ ಇವರಿಬ್ಬರ ನಡುವೆ ನಾನೂ ಸೇರಿಕೊಂಡಾಗ ರೋಚಕ ಕ್ರಿಕೆಟ್ ಜಗತ್ತು ತೆರೆದುಕೊಂಡಿತ್ತು.

`ಬಿಐಸಿ~ಯಲ್ಲೂ ಅದೇ ಅನುಭವ ಆಯಿತು. ಚಿಕ್ಕ ಆದರೆ ಚೊಕ್ಕ ಹಾಲ್ ಒಂದು ರೀತಿಯಲ್ಲಿ ಕ್ರಿಕೆಟ್ ಕ್ರೀಡಾಂಗಣವಾಗಿ ಮಾರ್ಪಟ್ಟಿತ್ತು. ಕ್ರಿಕೆಟ್ ಬಿಟ್ಟರೆ ಬೇರೆ ಮಾತೇ ಕೇಳಿಬರಲಿಲ್ಲ. ಮೊದಲು ಪ್ರಸನ್ನ ನಮ್ಮನ್ನೆಲ್ಲ ಅರವತ್ತು ಮತ್ತು ಎಪ್ಪತ್ತರ ದಶಕಕ್ಕೆ ಕೊಂಡೊಯ್ದರು.

ಇತ್ತೀಚೆಗಷ್ಟೇ ತಮ್ಮ ಜೀವನದ ಇನಿಂಗ್ಸ್ ಮುಗಿಸಿದ ಮನ್ಸೂರ್ ಅಲಿಖಾನ್ ಪಟೌಡಿ ನಾಯಕತ್ವದಲ್ಲಿ ಸ್ಪಿನ್ನರುಗಳ ಯುಗ ಹೇಗೆ ಆರಂಭವಾಯಿತು ಎಂಬುದನ್ನು ನೆನಪಿಸಿಕೊಂಡ ಅವರು ಬೇಡಿ ಅವರ ವರ್ಣರಂಜಿತ ವ್ಯಕ್ತಿತ್ವವನ್ನು ನೇರ ಮಾತುಗಳಿಂದ ವರ್ಣಿಸಿದರು.

“ಒಮ್ಮೆ, ಟೆಸ್ಟ್ ಪಂದ್ಯದ ಹಿಂದಿನ ದಿನ ಟೈಗರ್ ಪಟೌಡಿ ಬೌಲಿಂಗ್ ತಂತ್ರಗಳ ಬಗ್ಗೆ ನನ್ನೊಡನೆ ಚರ್ಚಿಸುತ್ತ, `ಬಿಷನ್‌ಗೆ ಯಾವ ರೀತಿ ಬೌಲ್ ಮಾಡಬೇಕು ಎಂಬುದನ್ನು ಹೇಳಿ~ ಎಂದು ನನ್ನನ್ನು ಕೋರಿದರು. ಆಗ ನಾನು, `ಬುದ್ಧಿವಂತನಾದ ಬಿಷನ್‌ಗೆ ನೀವೇ ಹೇಳಬಹುದಲ್ಲ~ ಎಂದಾಗ, `ಅದೇನೋ ಸರಿ, ಆದರೆ ಆತನ ಬುದ್ಧಿವಂತಿಕೆ ಬೇರೆ ಜಾಗದಲ್ಲಿದೆಯಲ್ಲ~ ಎಂದು ತುಂಟನಗು ಬೀರಿದ್ದರು” ಎಂದು ಪ್ರಸನ್ನ ಹೇಳಿದಾಗ ಸಭಿಕರೂ ನಗುವಂತಾಗಿತ್ತು.
 
ಟೈಗರ್ ನಾಯಕತ್ವದಲ್ಲಿಯೇ ಎಲ್ಲ ಆಟಗಾರರು `ಭಾರತ ತಂಡ~ವಾಗಿ ಆಡಿದ್ದು ಎಂದು ಬೇಡಿ ಹೇಳುತ್ತಾರೆ. ಭಾರತದ ಕ್ರಿಕೆಟ್ ವ್ಯವಸ್ಥೆಯ ವಿರುದ್ಧ ಬಂಡೆದ್ದಿದ್ದ ಬೇಡಿ ಅವರ ಆ ಮಾತುಗಳಲ್ಲೇ ತಂಡ ಹೇಗೆ ಪ್ರಾದೇಶಿಕ ಮನೋಭಾವದಲ್ಲಿ ಮುಳುಗಿಹೋಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ಭಾರತದ ಕ್ರಿಕೆಟ್‌ನಲ್ಲಿ ರಾಜಕೀಯ ಸಿ.ಕೆ. ನಾಯ್ಡು ಕಾಲದಿಂದಲೂ ಇತ್ತು. ಆಟಗಾರರ ಬಗ್ಗೆ  ಕ್ರಿಕೆಟ್ ಮಂಡಳಿಗಿದ್ದ ನಿರ್ಲಕ್ಷ್ಯ ಧೋರಣೆ, ಆಯ್ಕೆಗಾರರ ಪಕ್ಷಪಾತತನದ ವಿರುದ್ಧ ಲಾಲಾ ಅಮರನಾಥ್ ನಂತರ ಸಿಡಿದೆದ್ದ ಆಟಗಾರನೆಂದರೆ ಬೇಡಿ. ನಿಷ್ಠುರವಾದಿಯಾಗಿದ್ದ ಅವರು ಆಟಗಾರರ ಸಂಸ್ಥೆಯೊಂದನ್ನೂ ಕಟ್ಟಿದ್ದರು. ಆದರೆ ಆಟಗಾರರಲ್ಲೂ ಒಗ್ಗಟ್ಟಿರಲಿಲ್ಲ.

ಸ್ನೇಹಿತನಿಗೆ ಸ್ನೇಹಿತ, ವೈರಿಗೆ ವೈರಿಯಂತೆಯೇ ಇದ್ದ ಬೇಡಿ ಅವರ ಸಮಗ್ರ ವ್ಯಕ್ತಿತ್ವವನ್ನು ಸುರೇಶ್ ಮೆನನ್ ಸೊಗಸಾಗಿ ಬರೆದಿದ್ದಾರೆ. ಅವರೊಬ್ಬ ಪ್ರತಿಭಾವಂತ ಕ್ರೀಡಾ    ವರದಿಗಾರ, ಲೇಖಕ. ಸರಳ ಭಾಷೆಯಲ್ಲಿ ಪರಿಣಾಮಕಾರಿಯಾಗಿ ಹೇಳುವ ಧೈರ್ಯ ಅವರಿಗಿದೆ.

ಎಂಬತ್ತರ ದಶಕದಲ್ಲಿ, ಟೆಸ್ಟ್ ಆಟಗಾರ ಸಂದೀಪ್ ಪಾಟೀಲ್ `ಸ್ಯಾಂಡಿ ಸ್ಟಾರ್ಮ್ಸ~ ಎಂಬ ಪುಸ್ತಕ ಬರೆದಿದ್ದರು. ಅದರ ವಿಮರ್ಶೆ ಮಾಡಿದ್ದ ಸುರೇಶ್, `ಈ ಪುಸ್ತಕ ಸಾರ್ವಜನಿಕ ಸ್ಥಳದಲ್ಲಿ ಸುಡಲು ಲಾಯಕ್~ ಎಂದು ಬರೆದಿದ್ದರು. ಯಾವ ಕ್ರೀಡಾ ಪುಸ್ತಕವನ್ನೂ ಈ ರೀತಿ ಟೀಕಿಸಿದ ವಿಮರ್ಶಕನನ್ನು ನಾನು ನೋಡಿರಲಿಲ್ಲ.

ಅಂದಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಇನ್ನೊಂದು ಮಾತು ಕೇಳಿಬಂತು. ಭಾರತದ ಕ್ರಿಕೆಟ್‌ಗೆ ಹೆಸರು ಮತ್ತು ಶಕ್ತಿ ತಂದುಕೊಟ್ಟ ನಾಲ್ವರೂ ಸ್ಪಿನ್ನರುಗಳ (ಪ್ರಸನ್ನ, ಚಂದ್ರಶೇಖರ್, ಬೇಡಿ ಮತ್ತು ವೆಂಕಟರಾಘವನ್) ಅವರ ಬಗ್ಗೆ ಪುಸ್ತಕಗಳು ಬರಬೇಕು ಎಂಬುದು. ಪ್ರಸನ್ನ ಮತ್ತು ಚಂದ್ರ ಅವರ ಬಗ್ಗೆ ಪುಸ್ತಕಗಳು ಬಂದಿವೆ.

ಆದರೆ ಇಂದಿನ ಆಧುನಿಕ ಕ್ರಿಕೆಟ್ ಸಂದರ್ಭದಲ್ಲಿ ಹಿಂದಿನ ಖ್ಯಾತ ಆಟಗಾರರ ಬಗ್ಗೆ ಬರೆಯುವ ಅಗತ್ಯ ಇದೆ ಎಂಬ ಅಭಿಪ್ರಾಯ ಮೂಡಿಬಂತು. ಇಂದಿನ ಬ್ಯಾಂಗ್ ಬ್ಯಾಂಗ್ ಕ್ರಿಕೆಟ್‌ನ ದಿಢೀರ್ ಪ್ರೇಕ್ಷಕ ಹಿಂದಿನವರ ಬಗ್ಗೆ ಅರಿಯಬೇಕೆಂಬುದು ಎಲ್ಲರೂ ಒಪ್ಪತಕ್ಕ ಮಾತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT