ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶದ ಹಾದಿಯಲ್ಲಿ ನೂರೆಂಟು ಕನಸು

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಎರಡು ಗೋಡೆಗಳು ಸೇರುವ ಮೂಲೆಯಲ್ಲಿ 45 ಡಿಗ್ರಿ ಕೋನದಲ್ಲಿ ನಿಲ್ಲಬೇಕು. ಎದೆಯೆತ್ತರ ಅಂಗೈ ಇರಬೇಕು. ಮೊಣಕೈಗಳು ಗೋಡೆಯ ಅಂಚಿಗೆ ತಾಕಬೇಕು. ಮುಂದೆ ನೆಲದಲ್ಲೊಂದು ಅಡ್ಡ ಹಾಕಿದ ಬಿಲ್ಲು.

ಹಾಂ... ಕುಣಿ...ತಿತ್ತಿತ್ತೈ ತ್ತಿತ್ತಿತ್ತೈ ತ್ತಿತ್ತಿತ್ತೈ....

ಮೊಣಕೈಗಳು ಒಳಕ್ಕೆ ಬಂದರೆ ಗುರುಗಳ ಮುಖ ಬಿಗುವಾಗುತ್ತಿತ್ತು. ಗೋಡೆಯಂಚಿಗೆ ತಾಗಿದರೆ ಅಬ್ಬಾ ನೋವು! ಕುಣಿಯುತ್ತ ಕುಣಿಯುತ್ತ ಪಾದಗಳು ಅಡ್ಡ ನಿಲ್ಲಿಸಿದ ಬಿಲ್ಲಿಗೇನಾದರೂ ತಾಗಿದರೆ ಅದೇ ಬಿಲ್ಲಿನಲ್ಲಿ ಕಾಲ ಗಂಟಿಗೆ ಏಟು! ಕಣ್ಣುಗಳು ಲಯಬದ್ಧವಾಗಿ ಚಲಿಸದಿದ್ದರೆ ತಲೆಗೊಂದು ಕುಟ್ಟಿ-

`ಯಕ್ಷಗಾನದ ತರಗತಿಯೆಂದರೇನು ಅಷ್ಟೊಂದು ಸರಳವೆ?'

ಗಾಂಧಿ ಟೋಪಿಯನ್ನು ಕೆಳಗಿಟ್ಟು ಹಿಂದಲೆಯ ಜುಟ್ಟನ್ನು ಬಿಗಿದು ಕೈಯಲ್ಲಿ ಬಿಲ್ಲನ್ನು ಬಡಿಗೋಲಿನಂತೆ ಹಿಡಿದ ಮಟಪಾಡಿ ವೀರಭದ್ರ ನಾಯಕರು, ಲಯವೆಂಬುದು ಕೊದಲೆಳೆಯಷ್ಟೂ ಕೊಂಕದಂತೆ ಅಂಗೈಗೆ ಅಂಗೈಯನ್ನು ಘಾತಿಸುತ್ತ ತಾಳ ಹಾಕುತ್ತಿರುವ ನೀಲಾವರ ರಾಮಕೃಷ್ಣಯ್ಯನವರು, ಕಾಲಾಂತರದಿಂದಲೇ ಪಕರ್ವನ ಮುಂದೆ ಸ್ಥಾಯಿಯಾಗಿ ಕುಳಿತು ಬೆರಳ ಲೀಲೆಯಲ್ಲಿ ತಲ್ಲೆನರಾದ ಉಸ್ತಾದರಂತಿದ್ದ ಹಿರಿಯಡಕ ಗೋಪಾಲರಾಯರು...
ಇಷ್ಟು ಹೇಳಿದರೆ, 1973ರಲ್ಲಿ ನಾನು ಸೇರಿದಾಗಿನ ದಿನಗಳ ಉಡುಪಿ ಯಕ್ಷಗಾನ ಕೇಂದ್ರದ ಘನತೆಯ ಚಿತ್ರವೊಂದು ನಿಮ್ಮ ಕಣ್ಣಮುಂದೆ ಮೂಡುತ್ತಿದೆ ಎಂದು ನಂಬಿದ್ದೇನೆ!

1969ರ ನವೆಂಬರ್ ತಿಂಗಳ ಮೊದಲ ವಾರದಲ್ಲಿ, ಕೋಟ ಶಿವರಾಮ ಕಾರಂತರ ನಿರ್ದೇಶನದಲ್ಲಿ, ಉಡುಪಿ ಎಂ.ಜಿ.ಎಂ. ಕಾಲೇಜಿನಲ್ಲಿ ಐದು ದಿನಗಳ ಕಾಲ ಯಕ್ಷಗಾನ ಗೋಷ್ಠಿ ನಡೆದಿತ್ತು. ಕೇಂದ್ರ ಮತ್ತು ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಸಹಕಾರದಲ್ಲಿ ನಡೆದ ಈ ಗೋಷ್ಠಿಯಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ನಿರ್ದೇಶಕರಾದ ಡಾ. ಸುರೇಶ ಆವಸ್ಥಿ ಬಂದಿದ್ದರು. ಮೂರನೇ ದಿನ ನೃತ್ಯಾಭಿನಯ ಪ್ರದರ್ಶನ ನಡೆಯುತ್ತಿದ್ದಾಗ ಅಲ್ಲಿ ಕುಣಿಯುತ್ತಿದ್ದ ಕಲಾವಿದರೊಬ್ಬರನ್ನು ನೋಡಿ ಡಾ. ಸುರೇಶ ಆವಸ್ಥಿಯವರು ಧಿಗ್ಗನೆ ಎದ್ದು `ಈಗ ಕುಣಿಯುತ್ತಿರುವ ಕಲಾವಿದರ ಹೆಸರೇನು?' ಎಂದು ಡಾ. ಕೆ. ಎಸ್. ಉಪಾಧ್ಯಾಯರಲ್ಲಿ ಕೇಳಿದರಂತೆ. `ಅವರು ವೀರಭದ್ರ ನಾಯಕರು' ಎಂದರಂತೆ ಉಪಾಧ್ಯಾಯರು.

ವೀರಭದ್ರ ನಾಯಕರಿಂದ ಯಕ್ಷಗಾನ ಕಲಿಸುವ ಶಾಲೆಯೊಂದನ್ನು ಸ್ಥಾಪಿಸುವ ಯೋಚನೆಗೆ ನಾಂದಿಯಾದ ಕ್ಷಣವದು. ಬಹುಶಃ ಅದೇ ಪ್ರೇರಣೆಯಲ್ಲಿ ಬ್ರಹ್ಮಾವರದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಾರಾಡಿ ಕೃಷ್ಣ ಗಾಣಿಗರ ತರಬೇತಿ ಶಾಲೆ ಆರಂಭವಾಗಿದ್ದಿರಬೇಕು. ಮುಂದೆ, ಮಣಿಪಾಲದ ರೂವಾರಿ ತೋನ್ಸೆ ಮಾಧವ ಅನಂತ ಪೈಗಳ ಆಸರೆಯಲ್ಲಿ ಕೋಟ ಶಿವರಾಮ ಕಾರಂತರ ಮಾರ್ಗದರ್ಶನದಲ್ಲಿ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ.ಕು.ಶಿ. ಹರಿದಾಸ ಭಟ್ಟರ ಕಾಳಜಿಯಲ್ಲಿ ಉಡುಪಿ ಬಳಿಯ ಇಂದ್ರಾಳಿಯ ಪೇಪರ್‌ಮಿಲ್‌ನಲ್ಲಿ ಯಕ್ಷಗಾನ ಕೇಂದ್ರ ಆರಂಭಗೊಂಡದ್ದು ಯಕ್ಷಗಾನ ಇತಿಹಾಸದ ಅವಿಸ್ಮರಣೀಯ ಕ್ಷಣ.

ಗುರು ವೀರಭದ್ರ ನಾಯಕರನ್ನು ವೃತ್ತಿಪರ ಮೇಳದಿಂದ ವಿರಮಿಸುವಂತೆ ಮಾಡಿ, ನಾಟ್ಯಾಭಿನಯದ ಗುರುಗಳಾಗಿ ನೇಮಿಸಲಾಯಿತಂತೆ. ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸ್ಕಾಲರ್‌ಶಿಪ್ ಕೂಡ ದೊರಕಿತು. ಆಗ ಭಾಗವತಿಕೆಯ ಪಾಠ ಗುರು ನೀಲಾವರ ರಾಮಕೃಷ್ಣಯ್ಯನವರದ್ದು. ಮದ್ದಲೆಯ ನುಡಿತಗಳನ್ನು ಹೇಳಿಕೊಡಲು ಗುರು ಹಿರಿಯಡಕ ಗೋಪಾಲರಾಯರು.

ಇವೆಲ್ಲ ನನ್ನ ಅಸ್ಪಷ್ಟ ತಿಳಿವಳಿಕೆಯ ಸಂಗತಿಗಳು. ಯಕ್ಷಗಾನ ಕಲೆಯನ್ನು ಶಿಸ್ತುಬದ್ಧ ಶಿಕ್ಷಣವಾಗಿಸಬೇಕೆಂಬ ಚಿಂತನೆಯನ್ನೂ ಚೆಂಡೆಯ ನುಡಿತವನ್ನು ಕಡಲಿನಾಚೆಗೂ ಕೇಳಿಸಬೇಕೆಂಬ ಮಹತ್ವಾಕಾಂಕ್ಷೆಯನ್ನೂ ಹೊಂದಿರುವ ಪ್ರಜ್ಞಾವಂತರ ಪ್ರಯತ್ನದ ಫಲವಾಗಿ ಯಕ್ಷಗಾನ ಕೇಂದ್ರದ ಕನಸಿಗೆ ಅಡಿಪಾಯವಾಯಿತು ಎಂದಷ್ಟೇ ನಾನು ಹೇಳಬಲ್ಲೆ.

ಭಾಗವತ ನಾರಾಯಣ ಶೆಟ್ಟರ ಮನೆಯಂಗಳದಲ್ಲಿ ಕುಣಿಯುತ್ತಿದ್ದವನಿಗೆ, ಆಸುಪಾಸಿನ ಸಂಘಸಂಸ್ಥೆಗಳಿಗೆ ತೆರಳಿ ವೇಷ ಮಾಡಿ ಹೆಸರು ಪಡೆಯುತ್ತಿದ್ದವನಿಗೆ ಈ ಯಕ್ಷಗಾನ ಕೇಂದ್ರಕ್ಕೆ ಸೇರಲೇಬೇಕೆಂಬ ಆಸೆ ಒಳಗೆ ಗಟ್ಟಿಯಾಗಿ ಬೇರೂರಿತ್ತು. 1971ರಲ್ಲಿ ಕೇಂದ್ರ ಆರಂಭವಾದಾಗ ಅದಕ್ಕೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ.

ಪ್ರವೇಶ ಪಡೆಯದಿರುವುದಕ್ಕೆ ನನ್ನ ಕೌಟುಂಬಿಕ, ಸಾಮಾಜಿಕ ಹಿನ್ನೆಲೆ ಕಾರಣವಾಗಿರಬಹುದು ಎಂದು ನಾನೆಂದಿಗೂ ವಿಪರೀತವಾಗಿ ಭಾವಿಸಲಿಲ್ಲ. ಹಾಗೆ ಭಾವಿಸದೆ ಇದ್ದುದರಿಂದಲೇ ನಿರುತ್ಸಾಹ ಹೊಂದದೆ ನನ್ನ ಹೆಜ್ಜೆಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತ ಹೋಗತೊಡಗಿದೆ. ಯಕ್ಷಗಾನ ಕೇಂದ್ರದಲ್ಲಿ ಸ-ವಸತಿ ಸೌಲಭ್ಯವಿರುವ ವಿದ್ಯಾರ್ಥಿಗಳಲ್ಲದೆ, ಸಂಜೆಯಿಂದ ರಾತ್ರಿಯವರೆಗೆ ಸಾರ್ವಜನಿಕರಿಗಾಗಿ ಯಕ್ಷಗಾನ ತರಗತಿಗಳು ಕೂಡ ನಡೆಯುತ್ತಿದ್ದವು. ಅದಕ್ಕೆ ಉಡುಪಿಯ ಕೆಲವು ಮಂದಿ ಪ್ರತಿಷ್ಠಿತರು ಯಕ್ಷಗಾನ ಕಲಿಯಲು ಬರುತ್ತಿದ್ದರು.

ಯಕ್ಷಗಾನಕ್ಕೆ ವಿದ್ಯಾವಂತರೆನ್ನಿಸಿಕೊಂಡವರು ಪ್ರವೇಶ ಪಡೆಯುತ್ತಿದ್ದ ದಿನಗಳವು. ನಾನು, ಭಾಗವತ ಗುಂಡಿಬೈಲ್ ನಾರಾಯಣ ಶೆಟ್ಟರ ಪ್ರೇರಣೆಯಲ್ಲಿ ಕೇಂದ್ರದ ರಾತ್ರಿ ತರಗತಿಗಳಿಗೆ ಸೇರಿಕೊಂಡೆ. ಎರಡು ವರ್ಷಗಳ ತರಬೇತಿ ನನ್ನನ್ನು ಮತ್ತಷ್ಟು ದೃಢಗೊಳಿಸಿತು.

ಒಮ್ಮೆ ಗುರುಗಳಾಗಿದ್ದ ಗುಂಡಿಬೈಲು ನಾರಾಯಣ ಶೆಟ್ಟರು ಗುರು ವೀರಭದ್ರ ನಾಯಕರನ್ನು ಕಂಡು, `ನಿಮ್ಮ ರಾತ್ರಿ ತರಗತಿಗೆ ಬರುವ ಸಂಜೀವ ಪೂರ್ಣಾವಧಿ ವಿದ್ಯಾರ್ಥಿಯಾಗುವ ಉತ್ಸಾಹದಲ್ಲಿದ್ದಾನೆ. ತುಂಬ ಚುರುಕು ಹುಡುಗ' ಎಂದೆಲ್ಲ ಹೇಳಿ ನನ್ನ ಬಗ್ಗೆ ಶಿಫಾರಸು ಮಾಡಿದ್ದರಂತೆ. ಆ ವರ್ಷದ ಸೇರ್ಪಡೆಯ ಸಂದರ್ಶನದ ದಿನ ಆಯ್ಕೆಯಾದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸವಿದ್ದರೆ, ಆಯ್ಕೆಯಾಗದ ವಿದ್ಯಾರ್ಥಿಗಳು ಮೋರೆಯನ್ನು ಸಣ್ಣದು ಮಾಡಿಕೊಂಡು ಹಿಂತೆರಳುತ್ತಿದ್ದರು. ನಾನು ಕೂಡ ಅವರ ಜೊತೆ ತೆರಳಬೇಕು ಎಂಬಷ್ಟರಲ್ಲಿ ನಾರಾಯಣ ಶೆಟ್ಟರು ಬಂದರು. ನೇರವಾಗಿ ಸಂದರ್ಶನ ಕೊಠಡಿಗೆ ಪ್ರವೇಶಿಸಿದರು. ಸ್ವಲ್ಪ ಹೊತ್ತಿನಲ್ಲಿ ನನಗೆ ಮರು ಕರೆ ಬಂತು. ಸ್ವತಃ ಪ್ರೊ. ಕು.ಶಿ.ಯವರು, ಗುರು ವೃಂದವರು ಅಲ್ಲಿದ್ದರು.

ಆದೇಶದ ಧ್ವನಿ, `ನೀನು ಆಯ್ಕೆಯಾಗಿದ್ದಿ'.
                                                ....................................................

`ಆಯ್ಕೆ ನಿಮಗೆ ಬಿಟ್ಟದ್ದು' ಎಂದು ಹೇಳುವಾಗ ನನಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಅದೂ ಲಂಡನ್‌ನಂಥ ಕಾಂಕ್ರೀಟ್ ಕಗ್ಗಾಡಿನಲ್ಲಿ! ಶಾಲೆಗಳಿಗೆ ಹೋಗಿ ಯಕ್ಷಗಾನ ಕಲಿಸುವುದರಲ್ಲೇನೋ ನನಗೆ ಹಿತವಿತ್ತು. ಆದರೆ, ಅದಷ್ಟೇ ಅಲ್ಲದೆ ಕೇವಲವಾಗಿರುವ ಸಾರ್ವಜನಿಕ ಸ್ಥಳಗಳಲ್ಲಿ, ಬಾರ್‌ಗಳಲ್ಲಿ, ಕ್ಲಬ್‌ಗಳಲ್ಲಿ ರಸಸಂವೇದನೆ ಇಲ್ಲದಿರುವವರ ಮುಂದೆ ಮನರಂಜನೆ ಮಾತ್ರವಾಗಿ ಕಲೆಯನ್ನು ಪ್ರದರ್ಶಿಸುವುದೆಂದರೆ! ಅದೂ ಒಂದು ಪ್ರ-ದರ್ಶನವೆ? ಆ ಕ್ಷಣಕ್ಕೆ ನನ್ನ ಸ್ವದೇಶಕ್ಕೆ ಹೊರಟು ನಿಲ್ಲುವ ಯೋಚನೆ ಮಾಡಿದ್ದೆ. ದೀಪಾವಳಿಯ ದಿನ ಮುಂಜಾನೆ ಬೇಗನೆ ಎಬ್ಬಿಸಿ ಎಣ್ಣೆ ಸ್ನಾನ ಮಾಡಲು ಹೇಳಿ ಬಾಲ್ಯದಲ್ಲಿ ನಾನು ಅನುಭವಿಸದೇ ಇದ್ದ ಅವಕಾಶವನ್ನು ಕೊಟ್ಟು ಅಮ್ಮನಂತೆ ಆಸರೆ ನೀಡಿದ ಜಯಮ್ಮನವರು, ಮಹಾನಗರದ ಒಂಟಿತನವನ್ನು ಮರೆಯಿಸಿದ ರೈಲ್ವೆ ಸ್ಟೇಷನ್‌ನಲ್ಲಿ ಸಿಕ್ಕಿದ ಗುಲ್ಬರ್ಗಾದ ಗೆಳೆಯ, ದಾರಿಯಲ್ಲಿ ಅನಿರೀಕ್ಷಿತವಾಗಿ ಸಿಕ್ಕಿ ಉದಾರಿಯಾಗಿ ಮನಸ್ಸಿನಲ್ಲಿ ನಿಂತುಬಿಟ್ಟ ಪಾಕಿಸ್ತಾನಿ ಹಣ್ಣಿನ ವ್ಯಾಪಾರಿ, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಬದುಕಿನಂತೇ ನನ್ನನ್ನು ಜೋಪಾನ ಮಾಡಿದ ಲೀಡ್ಸ್ ಸ್ಟೇಷನ್‌ನ ರೈಲು, ಯಕ್ಷಗಾನವನ್ನು ಹೊಸ ರೀತಿಯಲ್ಲಿ ಗ್ರಹಿಸುವಂತೆ ಮಾಡಿದ ವ್ಯೆತ್ಸ್‌ಬರ್ಗ್ ಶಾಲೆಯ ಪುಟಾಣಿಗಳು, ಕಲಾವಿದನಾದ ನನ್ನನ್ನು ಲಂಡನ್‌ಗೆ ಕರೆಸಿಕೊಂಡ ಸಹೃದಯರು... ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಹೊರಟುನಿಂತಿದ್ದೆ. ಆದರೆ, ದಿಗ್ಗನೆ ಎದ್ದು ಮರಳುತ್ತೇನೆನ್ನಲು ಅದೇನು ಬನ್ನಂಜೆಯೆ? ಕೊಂಚ ಕಷ್ಟದಲ್ಲಿಯೇ ಇದ್ದೆನೆನ್ನಿ.

ಅಷ್ಟರಲ್ಲಿ ಬಂದೇ ಬಿಟ್ಟಳು. ಕ್ಯಾಥರಿನ್ ಬೈಂಡರ್. ಅವಳು ನನ್ನ ಮಗಳಂತೆ. ನಮ್ಮ ಕೇಂದ್ರದಲ್ಲಿದ್ದು ಕಲೆಯನ್ನೂ ಕನ್ನಡವನ್ನೂ ಕಲಿತು ಜರ್ಮನಿ ವಿ.ವಿ.ಯ ಡಾಕ್ಟರೇಟ್ ಪಡೆದವಳು. ಭಾರತಕ್ಕೆ ಬಂದರೆ ನನ್ನ ಮನೆಯಲ್ಲಿಯೇ ಇರುವವಳು... ಇನ್ನೊಮ್ಮೆ ಹೇಳುತ್ತೇನೆ, ಅವಳ ಬಗ್ಗೆ.

ಮತ್ತೆಲ್ಲವೂ ಸರಳವಾಯಿತು. ಲಂಡನ್ನಿನ ಎರಡೂವರೆ ತಿಂಗಳ ಪ್ರವಾಸ ಮುಗಿಸಿ ನಾನು ತವರಿಗೆ ಹೊರಟುನಿಂತೆ. ವಿಮಾನ ಮೆಲ್ಲನೆ ಮೇಲೇರತೊಡಗಿತ್ತು, ದೇಶ- ದೇಶಗಳ ಗಡಿರೇಖೆಗಳಿಲ್ಲದ ಆಕಾಶಕ್ಕೆ !
                                                 .........................................................................

ಆಕಾಶಕ್ಕೆ ಬೇಧವಿಲ್ಲ. ಎಲ್ಲರ ತಲೆಯ ಮೇಲೂ ಸಮಾನವಾಗಿ ಚಾಚಿಕೊಳ್ಳುತ್ತದೆ. ಆಕಾಶವನ್ನೇ ಮನೆಯ ಛಾವಣಿಯೆಂದು ಭಾವಿಸಿಕೊಂಡವನಿಗೆ ನೆಲೆದಾಣದ ಸಮಸ್ಯೆ ಇಲ್ಲ. ದಿಕ್ಕುಗಳಿಲ್ಲದ ದಾರಿಗಳಿಲ್ಲದ ಆಗಸದಂತೆ ಬದುಕು ನನ್ನ ಮುಂದೆ ಹರಡಿಕೊಂಡಿತ್ತು. ಮನೆಯ ಮೋಹ ಇರಲಿಲ್ಲವೆಂದಲ್ಲ. ಆದರೆ, ಯಕ್ಷಗಾನದ ಹುಚ್ಚು ಮನೆಯನ್ನು ಮನದಿಂದ ಮರೆಸಿಬಿಟ್ಟಿತೋ ಏನೊ! ಉಡುಪಿಯ ಸುತ್ತಮುತ್ತವೇ ಓಡಾಡಿಕೊಂಡಿದ್ದರೂ ಹೆಚ್ಚುಕಡಿಮೆ ಹದಿನೆಂಟು ವರ್ಷ ಮನೆಗೆ ಹೋಗಬೇಕೆಂದು ಅನ್ನಿಸಲೇ ಇಲ್ಲ. ಹೋಗಿದ್ದರೂ ಕೆಲವೇ ಬಾರಿ. ಗುರು ನಾರಾಯಣ ಶೆಟ್ಟರ ಮನೆಯ ಮೊಗಸಾಲೆಯ ಮೂಲೆಯಲ್ಲಿ ನನ್ನದೊಂದು ಮುರುಕು ಚಾಪೆ ಇದ್ದೇ ಇತ್ತು. ಆಮೇಲೆ ಯಕ್ಷಗಾನ ಕೇಂದ್ರದ ಆಸರೆ ಸಿಕ್ಕಿತಲ್ಲ!

ಒಮ್ಮೆ ಹೀಗಾಯಿತು. ಗುರುಗಳಾದ ನಾರಾಯಣ ಶೆಟ್ಟರಿಗೆ ಸಹಮತವಿರದ ಸಂಘವೊಂದಕ್ಕೆ ನಾನು ವೇಷ ಮಾಡಲು ಹೋಗಿ ಅವರಿಗೆ ಸಿಟ್ಟು ಬಂದು ನನಗೂ ಬೇಸರವೆನಿಸಿ ಅವರ ಮನೆಗೆ ಹೋಗುವುದನ್ನೇ ನಿಲ್ಲಿಸಿದ್ದೆ. ಆದರೆ, ಮರಳಿ ಸ್ವಂತ ಮನೆಗೂ ಹೋಗುವಂತಿಲ್ಲ. ದೂರದಲ್ಲಿ ಭೂತಕೋಲವೊ ಅಥವಾ ಅದರ ಅಂಗವಾಗಿ ನಡೆಯುವ ಕೋಳಿ ಅಂಕವೊ... ಇನ್ನೇನೊ. ದಿನವಿಡೀ ಅಲ್ಲಿ ಜನರ ನಡುವೆ ಓಡಾಡಿ ಕತ್ತಲಾವರಿಸತೊಡಗಿದಾಗ ಗದ್ದೆಯ ಹುಣಿಗೆ ತಲೆಕೊಟ್ಟು ಒರಗಿದವನಿಗೆ ಚೆನ್ನಾಗಿ ನಿದ್ದೆ. ಏನೋ ಗಲಾಟೆ ಕೇಳಿ ಎಚ್ಚರವಾಯಿತು. ಕಣ್ಣು ತೆರೆದಾಗ ನನಗೆ ತಾಗಿಕೊಂಡೇ ಓಡುತ್ತಿರುವ ಕಾಲುಗಳು! ಯಾರನ್ನೋ ಪೊಲೀಸರು ಅಟ್ಟಿಸಿಕೊಂಡು ಹೋಗುತ್ತಿದ್ದರು. ಪೊಲೀಸರು!
ಯಾವುದೋ ಹಳೆಯ ಘಟನೆಯನ್ನು ನೆನೆದು ನಡುಕವಾಯಿತು. ಏನೂ ಗೊತ್ತಿಲ್ಲದಂತೆ ಹಾಗೇ ಮಲಗಿಬಿಟ್ಟೆ.

ಮರುದಿನ ಎದ್ದು ಹೊರಟೆ. ಎಲ್ಲಿಗೆ ಹೊರಡುವುದು! ಯಾರಲ್ಲೋ ಕೇಳಿ ಕಲ್ಸಂಕದ ಬಳಿಯ ವಸತಿ ಗೃಹವೊಂದರಲ್ಲಿ ರೂಮ್‌ಬಾಯ್ ಆಗಿ ಸೇರಿದ್ದಾಯಿತು. ಹಗಲು ಕೊಠಡಿ ಸ್ವಚ್ಛಗೊಳಿಸುವ ಕೆಲಸ. ರಾತ್ರಿ, ಅಲ್ಲಿಯೇ ಸಮೀಪವಿದ್ದ ಅವರದೇ ಹೊಟೇಲೊಂದರಲ್ಲಿ ಪಾತ್ರೆ ತೊಳೆಯುವುದು. ಉಣಲು, ಮಲಗಲು ಏನೂ ತೊಂದರೆ ಇಲ್ಲ. `ಸಂಜೀವ ಎಲ್ಲಿ ಹೋಗಿದ್ದಾನೆ?' ಎಂದು ನಾರಾಯಣ ಶೆಟ್ಟರು ಅವರಿವರಲ್ಲಿ ಕೇಳಿದರಂತೆ. ಒಂದು ಸಂಜೆ ನಾನು ಹೊಟೇಲಿನ ಹಿಂಭಾಗದಲ್ಲಿ ಪಾತ್ರೆ ತೊಳೆಯುತ್ತಿದ್ದೆ. ನನ್ನ ಸಮೀಪ ಹಿರಿ ವಯಸ್ಸಿನ ಎರಡು ಪಾದಗಳು ಬಂದು ನಿಂತವು. ತಲೆ ಎತ್ತಿ ನೋಡುತ್ತೇನೆ ; ನಾರಾಯಣ ಶೆಟ್ಟರು! ನಾನು ಅಲ್ಲಿದ್ದೇನೆಂದು ತಿಳಿದು ಲುಂಗಿ, ಬನಿಯನ್‌ನಲ್ಲಿಯೇ ಬಂದಿದ್ದರು. ಎಡಗೈಯ ಸಿಗರೇಟನ್ನು ಎಸೆದವರೇ ನನ್ನ ರಟ್ಟೆ ಹಿಡಿದರು. ಎಳೆದುಕೊಂಡು ಬಂದರು, ಅವರ ಮನೆಯವರೆಗೂ. ಅದು ಸಿಟ್ಟಲ್ಲ, ಪ್ರೀತಿಯೆಂದು ಈಗ ನನಗೆ ಅರಿವಾಗುತ್ತಿದೆ.

ಮತ್ತೆ ಶುರುವಾಯಿತು ನೋಡಿ ಕಲಿಕೆ. ಗುರುಗಳು, `ನೀನು ಅರ್ಥ ಮಾತನಾಡಲು ಕಲಿಯಬೇಕು' ಎಂದು ಹೇಳಿ ಅನುಭವಿಯಾಗಿದ್ದ ವೆಂಕಟಾಚಲ ಭಟ್ಟರ ಮನೆಗೆ ಕಳುಹಿಸಿದರು. ನಾರಾಯಣ ಶೆಟ್ಟರ ಮನೆ ಎಂದರೆ ಕೇಳಬೇಕೆ? ಅಲ್ಲಿಗೆ ಬಾರದ ಕಲಾವಿದರಿಲ್ಲ. ಚೆಂಡೆಯ ಕಲಿ ಎನಿಸಿದ್ದ ಕೆಮ್ಮಣ್ಣು ಆನಂದರವರೂ ಬರುತ್ತಿದ್ದರು. `ನಿನಗೆ ಚೆಂಡೆ ಕಲಿಯಬೇಕೆ?' ಎಂಬುದು ನಾರಾಯಣ ಶೆಟ್ಟರ ಪ್ರಶ್ನೆಯಲ್ಲ, ಆದೇಶ. ಕೆಮ್ಮಣ್ಣು ಆನಂದರಲ್ಲಿ ಚೆಂಡೆಯ ಅ ಆ ಇ ಈ ಪಾಠಗಳಾದವು. ಕಲಿಯುತ್ತ ಕಲಿಯುತ್ತ ಬಡಿತಗಳನ್ನು ನುಡಿತಗಳನ್ನಾಗಿಸಿದೆ. ಹವ್ಯಾಸಿ ಸಂಘಸಂಸ್ಥೆಗಳಿಗೆ ಚೆಂಡೆವಾದಕನಾಗಿಯೂ ನನಗೆ ಆಹ್ವಾನ ಬರತೊಡಗಿತು.

ಸ್ವಾತಂತ್ರ್ಯ ಹೋರಾಟಗಾರರೂ ಪ್ರಸಿದ್ಧ ಅರ್ಥಧಾರಿಗಳೂ ಆಗಿದ್ದ ಮಲ್ಪೆ ಶಂಕರನಾರಾಯಣ ಸಾಮಗರು ನಾರಾಯಣ ಶೆಟ್ಟರಲ್ಲಿಗೆ ಬಂದು ವಿರಮಿಸುವುದಿತ್ತು. ನಾನು ಅಲ್ಲಿ ಅತ್ತಿತ್ತ ಓಡಾಡುತ್ತಿರುವುದನ್ನು ನೋಡಿ, `ಈ ಹುಡುಗ ಯಾರು?' ಎಂದು ಕೇಳಿದರು. `ಯಕ್ಷಗಾನದ ಹುಚ್ಚಿನಲ್ಲಿ ನಮ್ಮ ಮನೆಗೆ ಬಂದವನು. ಬನ್ನಂಜೆಯ ಹುಡುಗ' ಎಂದರು ನಾರಾಯಣ ಶೆಟ್ಟರು. `ಯಕ್ಷಗಾನ ಕಲಿಯುವವನೆ? ನೀನು ಲುಂಗಿ ಉಡುವುದೆ? ಬಿಳಿಯ ಧೋತಿ ಉಡಬೇಕು... ಇದೆಂಥ ಉಡುಪು' ಎಂದು ನಕ್ಕುಬಿಟ್ಟರು. ಬಣ್ಣದ ಲುಂಗಿಗಿಂತ ಶುಭ್ರವಾದ ಧೋತಿಯನ್ನು ಉಡಬೇಕು ಎಂಬ ಬೋಧನೆಯ ಭಾವದಲ್ಲಿ ಸಾಮಗರು ಹಾಗಂದಿದ್ದರು. `ಸಾಮಗರ ಮಾತು ಕೇಳಿತಲ್ಲ...' ಗುರುಗಳೂ ಮಾತು ಸೇರಿಸಿದರು.

ಚಡ್ಡಿ ಧರಿಸಿ ಓಡಾಡುತ್ತಿದ್ದ ನಾನು ಇದ್ದಕ್ಕಿದ್ದಂತೆ ದೊಡ್ಡವನಾದಂತೆ ಅನ್ನಿಸಿ ಬಣ್ಣದ ಲುಂಗಿ ಉಡತೊಡಗಿ ಕೆಲವು ಸಮಯ ಕಳೆದಿತ್ತು. ಎರಡು ಲುಂಗಿಗಳಿದ್ದರೆ ಇಡೀ ಜೀವಮಾನಕ್ಕೆ ಸಾಕು ಎಂಬಂಥ ಆತ್ಮವಿಶ್ವಾಸದ ದಿನಗಳವು! ಆದರೆ, ಈಗ ಬಿಳಿಯ ಧೋತಿ ಉಡುವ ಅನಿವಾರ್ಯತೆ ಬಂತು. ಗುರುಗಳ ಮನೆಯಲ್ಲಿ ಬಿಳಿಯ ಧೋತಿಗೇನು ಕೊರತೆಯೆ?

ಒಂದನ್ನು ಪಡೆದು ಉಟ್ಟುಕೊಂಡೆ. ಬಿಳಿಯ ಮುಂಡಿನಲ್ಲಿ ನನಗೆ ನಾನೇ ಸಂಭಾವಿತನಂತೆ ಭಾಸವಾಗಿ ನಗು ಬಂತು...
                                                           .........................................................

ನಗು ಬಾರದಿರುತ್ತದೆಯೆ, ನನ್ನ ವೇಷವನ್ನು ನೋಡಿ! `ಹೋ... ಇವನಾ ಜರ್ಮನಿಗೆ ಬರುವ ಹುಡುಗ' ಎಂದು ಅವರು ಕೇಳಿದಾಗ ಬಿರ್ತಿ ಬಾಲಕೃಷ್ಣರು, `ಹೌದು' ಎಂದರು. ಕೇಳಿದ್ದು ಪ್ರಸಿದ್ಧ ಕಥಕ್ ವಿದುಷಿ ಮಾಯಾರಾವ್... ಹಾಂ, ಅವರಲ್ಲ ಅವರ ಪತಿ, ನಟರಾಜ್. ಕಾಲಿಗೆ ಚಪ್ಪಲಿಯೂ ಇಲ್ಲದೆ, ಬಿಳಿಯ ಮುಂಡು ಧರಿಸಿ ಬಟ್ಟೆಬರೆಗಳನ್ನು ಸಂಗೀಸಿನ ಚೀಲದೊಳಕ್ಕೆ ತುಂಬಿಸಿ ಜರ್ಮನಿಗೆ ಹೊರಡಲು ಬಂದಿದ್ದ ನನ್ನನ್ನು ನೋಡಿ ಅವರಲ್ಲಿ ಮೂಡಿದ ನಗೆಯಲ್ಲಿ ವಿನೋದವಿರಲಿಲ್ಲ. ವಾತ್ಸಲ್ಯವಿತ್ತು !

(ಸಶೇಷ)
ನಿರೂಪಣೆ: ಹರಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT