ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್: ಮೂವತ್ತು ಮೊಳದ ಮುಂಡಾಸಿನವರ ಹೆಗಲು

Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

‘ಆಧಾರ್’ ಸಂಖ್ಯೆಯನ್ನು ತಾಂತ್ರಿಕವಾಗಿ ‘ವಿಶಿಷ್ಟ ಗುರುತಿನ ಸಂಖ್ಯೆ’ ಎಂದು ಕರೆಯಲಾಗುತ್ತದೆ. ಇದನ್ನು ನೀಡುವ ಸಂಸ್ಥೆಗೆ ‘ಭಾರತೀಯ ವಿಶಿಷ್ಟ ಗುರುತು ಸಂಖ್ಯೆ ಪ್ರಾಧಿಕಾರ’ ಎಂಬ ಹೆಸರಿದೆ. ಒಟ್ಟಾರೆಯಾಗಿ ಇದೊಂದು ‘ವಿಶಿಷ್ಟ’ ವ್ಯವಸ್ಥೆ. ಎಷ್ಟರ ಮಟ್ಟಿಗೆ ಎಂದರೆ ಈ ವ್ಯವಸ್ಥೆಯಲ್ಲಿರುವ ದೌರ್ಬಲ್ಯ ಮತ್ತು ಅದಕ್ಕೆ ಸರ್ಕಾರ ಮತ್ತು ಪ್ರಾಧಿಕಾರಗಳು ನೀಡುವ ಉತ್ತರವನ್ನು ವಿವರಿಸುವುದಕ್ಕೆ ಎರಡೆರಡು ಕನ್ನಡ ಗಾದೆಗಳನ್ನು ಬಳಸಬೇಕಾಗುತ್ತದೆ. ಮೊದಲನೆಯದ್ದು: ಊಟ ಆಯಿತಾ ಎಂದು ಕೇಳಿದರೆ ಮುಂಡಾಸು ಮೂವತ್ತು ಮೊಳ ಅಂದ್ರಂತೆ. ಎರಡನೆಯದ್ದು: ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿಕೊಂಡರು.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ದೊಡ್ಡದಾಗಿ ಸುದ್ದಿ ಮಾಡಿದ ಎರಡು ಆಧಾರ್ ದತ್ತಾಂಶ ಸೋರಿಕೆ ಪ್ರಕರಣಗಳಿವೆ. ಮೊದಲನೆಯದ್ದು ಕಳೆದ ವರ್ಷದ ಪೂರ್ವಾರ್ಧದಲ್ಲಿ ಸಂಭವಿಸಿದ್ದು. ಈ ಪ್ರಕರಣದಲ್ಲಿ ಆಧಾರ್ ದತ್ತ ಸಂಚಯವನ್ನು (Database) ಯಾರೂ ಹ್ಯಾಕ್ ಮಾಡಿರಲಿಲ್ಲ. ಆದರೆ ಸರ್ಕಾರಿ ಇಲಾಖೆಯೊಂದು ಫಲಾನುಭವಿಗಳ ಪಟ್ಟಿ ಪ್ರಕಟಿಸುವ ಪ್ರಕ್ರಿಯೆಯಲ್ಲಿ ಆಧಾರ್ ಸಂಖ್ಯೆಗಳನ್ನೂ ಪ್ರಕಟಿಸಿತ್ತು. ಅದೇನೂ ಒಂದೆರಡಲ್ಲ. ಹದಿಮೂರು ಕೋಟಿ ಜನರ ವಿಶಿಷ್ಟ ಗುರುತಾಗಿರುವ ಆಧಾರ್ ಸಂಖ್ಯೆಗಳು ಸರ್ಕಾರಿ ವೆಬ್‌ಸೈಟಿನಲ್ಲಿ ಸರ್ವರಿಗೂ ಲಭ್ಯವಾಗುವಂತೆ ಇದ್ದವು. ಇದನ್ನು ಬೆಂಗಳೂರು ಮೂಲಕ ಸೆಂಟರ್ ಫಾರ್ ಇಂಟರ್‌ನೆಟ್ ಅಂಡ್ ಸೊಸೈಟಿ ಸಾರ್ವಜನಿಕರ ಗಮನಕ್ಕೆ ತಂದಿತ್ತು.
ಇದೇ ಜನವರಿ 3ರಂದು ‘ಟ್ರಿಬ್ಯೂನ್’ ಪತ್ರಿಕೆ ಒಂದು ವರದಿ ಪ್ರಕಟಿಸಿ ಐದುನೂರು ರೂಪಾಯಿಗಳು ಮತ್ತು ಹತ್ತು ನಿಮಿಷ ಸಮಯ
ವಿದ್ದರೆ 100 ಕೋಟಿ ಆಧಾರ್ ಸಂಖ್ಯೆಗಳನ್ನು ಪಡೆದುಕೊಳ್ಳಬಹುದು ಎಂದು ಬಹಿರಂಗಪಡಿಸಿತ್ತು. ವಾಟ್ಸ್ಆಪ್‌ನಲ್ಲಿ ಸಂಪರ್ಕಿಸಬಹುದಾದ ಮಾರಾಟಗಾರರೊಬ್ಬರಿಂದ ಶತಕೋಟಿ ಆಧಾರ್ ಸಂಖ್ಯೆಗಳ ದತ್ತಸಂಚಯವನ್ನು ಪ್ರವೇಶಿಸುವ ಅವಕಾಶವನ್ನು ಟ್ರಿಬ್ಯೂನ್ ವರದಿಗಾರರು ಪಡೆದುಕೊಂಡಿದ್ದರು.

ಈ ಎರಡೂ ಪ್ರಕರಣಗಳಲ್ಲಿ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಮತ್ತು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದ್ದು ಒಂದೇ ಬಗೆಯಲ್ಲಿ. ‘ಮುಂಡಾಸು ಮೂವತ್ತು ಮೊಳ’ ಬಗೆಯ ಉತ್ತರಗಳು. ಬಹಿರಂಗವಾದ ಮಾಹಿತಿ ಅಷ್ಟೇನೂ ಮುಖ್ಯವಾದುದಲ್ಲ. ಅದು ಬಹಿರಂಗವಾಗಿ ಎಲ್ಲರಿಗೂ ಲಭ್ಯ... ಹೀಗೆ. ಎರಡನೆಯದ್ದು ‘ಹೆಗಲು ಮುಟ್ಟಿಕೊಳ್ಳುವ’ ಉತ್ತರಗಳು. ಸೆಂಟರ್ ಫಾರ್ ಇಂಟರ್‌ನೆಟ್ ಅಂಡ್ ಸೊಸೈಟಿಗೆ ಪತ್ರ ಬರೆದು ‘ಸೋರಿಕೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವ ಅಗತ್ಯವಿದೆ. ಯಾರು ಹ್ಯಾಕ್ ಮಾಡಿದವರು. ಯಾವ ಸರ್ವರ್‌ನಲ್ಲಿ ಈ ದತ್ತಾಂಶ ಸಿಕ್ಕಿತು?’ ಎಂದೆಲ್ಲಾ ಪ್ರಶ್ನಿಸಲಾಗಿತ್ತು. ವಾಸ್ತವದಲ್ಲಿ ದತ್ತಾಂಶವನ್ನು ಯಾರೂ ಹ್ಯಾಕ್ ಮಾಡಿರಲಿಲ್ಲ. ಸರ್ಕಾರಿ ಇಲಾಖೆಯೊಂದು 13 ಕೋಟಿ ಆಧಾರ್ ಸಂಖ್ಯೆಗಳನ್ನು ಬಹಿರಂಗಪಡಿಸಿತ್ತು!
ಐದುನೂರು ರೂಪಾಯಿಗೆ ನೂರುಕೋಟಿ ಆಧಾರ್ ಸಂಖ್ಯೆಗಳಿರುವ ದತ್ತಾಂಶವನ್ನು ಪ್ರವೇಶಿಸಬಹುದು ಎಂದು ಬಹಿರಂಗ ಪಡಿಸಿದ ‘ಟ್ರಿಬ್ಯೂನ್’ ತನಿಖಾ ವರದಿಯ ಪ್ರಕರಣದಲ್ಲಿಯೂ ಇದು ಮರುಕಳಿಸಿದೆ. ಇಲ್ಲಿ ಹೆಗಲು ಮುಟ್ಟಿ ನೋಡಿಕೊಳ್ಳುವ ಕೆಲಸ ಮೊದಲೇ ನಡೆದಿದೆ. ವರದಿ ಪ್ರಕಟವಾದುದರ ಹಿಂದೆಯೇ ತನಿಖಾ ವರದಿ ಮಾಡಿದ ವರದಿಗಾರರ ಮೇಲೆ ಎಫ್ಐಆರ್ ದಾಖಲಾಗಿದೆ. ಆಮೇಲೆ ‘ಮುಂಡಾಸು ಮೂವತ್ತು ಮೊಳ’ ತಂತ್ರ ಪ್ರಯೋಗಿಸಲಾಗುತ್ತಿದೆ. ಹಿಂದಿನಂತೆಯೇ ‘ಈ ಮಾಹಿತಿಯೇನೂ ಮುಖ್ಯವಲ್ಲ’. ‘ಇದೇನೂ ರಹಸ್ಯ ಮಾಹಿತಿಯಲ್ಲ’. ‘ಇದನ್ನು ಪಡೆದುಕೊಂಡವರಿಗೆ ಏನೂ ಲಾಭವಿಲ್ಲ’… ಇತ್ಯಾದಿ.
ಆಧಾರ್ ಪರಿಕಲ್ಪನೆಯ ಮುಖ್ಯ ಉದ್ದೇಶ ಆಡಳಿತಾತ್ಮಕ ಪಾರದರ್ಶಕತೆ. ಅಂದರೆ ಸರ್ಕಾರದ ಸವಲತ್ತುಗಳು ಅರ್ಹ ಫಲಾನುಭವಿಗಳಿಗೇ ತಲುಪಬೇಕು. ಅದಕ್ಕೊಂದು ಸರಿಯಾದ ಗುರುತು ವ್ಯವಸ್ಥೆ ಬೇಕು ಎಂಬ ಉದ್ದೇಶದಿಂದ ಇದನ್ನು ಜಾರಿಗೆ ತರಲಾಯಿತು. ಇದು ಕಾರ್ಯರೂಪಕ್ಕೆ ಬಂದದ್ದು ‘ಮೌನಿ’ ಎಂದು ವಿರೋಧಿಗಳಿಂದ ಸತತ ಟೀಕೆಗೆ ಗುರಿಯಾಗಿದ್ದ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ. ಅದನ್ನು ವ್ಯಾಪಕವಾಗಿ ಬಳಸಬೇಕೆಂದು ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಕಡ್ಡಾಯಗೊಳಿಸುವ ಪ್ರಕ್ರಿಯೆ ಆರಂಭವಾದದ್ದು ಉತ್ತರ ಅಗತ್ಯವಿರುವ ಸಂದರ್ಭದಲ್ಲಿ ಮೌನವಹಿಸುವ ಈಗಿನ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಲ್ಲಿ.

ಅಧಿಕಾರಗಳಿಸುವ ಮುನ್ನ ಈಗಿನ ಪ್ರಧಾನಿ, ಅವರ ಪಕ್ಷ ಮತ್ತು ಅದರ ಬೆಂಬಲಿಗರೆಲ್ಲರೂ ‘ಆಧಾರ್’ ಎಂಬ ವ್ಯವಸ್ಥೆಯನ್ನು ಹಲವು ಕಾರಣಗಳಿಗಾಗಿ ವಿರೋಧಿಸಿದ್ದರು. ‘ಆಧಾರ್’ ಪರಿಕಲ್ಪನೆಯ ರೂವಾರಿ ನಂದನ್ ನಿಲೇಕಣಿಯವರ ವಿರುದ್ಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿದ್ದ ಬಿಜೆಪಿಯ ಅನಂತಕುಮಾರ್ ಅವರು ತಮ್ಮ ಪ್ರಚಾರ ಭಾಷಣಗಳಲ್ಲಿ ಆಧಾರ್ ಅನ್ನು ಇನ್ನಿಲ್ಲದಂತೆ ಟೀಕೆಗೆ ಗುರಿಪಡಿಸಿದ್ದರು. ಅಷ್ಟೇ ಅಲ್ಲ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇದನ್ನು ರದ್ಧು ಪಡಿಸುವುದಾಗಿ ಘೋಷಿಸಿದ್ದರು. ಇನ್ನೊಂದು ವರ್ಷದಲ್ಲಿ ಮತ್ತೊಂದು ಲೋಕಸಭಾ ಚುನಾವಣಾ ಎದುರಾಗಲಿದೆ. ‘ಆಧಾರ್’ ಸಂಖ್ಯೆಯನ್ನು ಕಡ್ಡಾಯಗೊಳಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಮೊಕದ್ದಮೆಗಳಿವೆ. ಈ ಹೊತ್ತಿನಲ್ಲಿ ಮತ್ತೆ ಆಧಾರ್ ದತ್ತಾಂಶ ಸೋರಿಕೆಯ ವಿವರಗಳು ವರದಿಯಾಗುತ್ತಿವೆ. ಮೌನಿ ಪ್ರಧಾನಿಗಳ ಅವಧಿಯಲ್ಲಿ ‘ಆಧಾರ್’ ಅನ್ನು ವಿಮರ್ಶಿಸಿದ್ದರೆ ಸಿಗುತ್ತಿದ್ದದ್ದು ‘ತಂತ್ರಜ್ಞಾನ ವಿರೋಧಿ’ ಮತ್ತು ‘ಅಭಿವೃದ್ಧಿ ವಿರೋಧಿ’ ಪಟ್ಟ ಮಾತ್ರ. ಈಗ ಆಧಾರ್ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡುವವರೆಲ್ಲಾ ಒಂದೋ ‘ಕಪ್ಪು ಹಣದ ಬೆಂಬಲಿಗರು’ ಇಲ್ಲವಾದರೆ ‘ದೇಶದ್ರೋಹಿ’ಗಳು.

ಕಳೆದ ವರ್ಷ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟ್ ಬಯಲಿಗೆಳೆದ ‘ಆಧಾರ್’ ಸೋರಿಕೆಯ ನಂತರ ಆರಂಭವಾದ ಚರ್ಚೆಯ ಸಂದರ್ಭದಲ್ಲಿ ಟ್ವಿಟ್ಟರ್‌ನಲ್ಲಿ ಟ್ರೋಲ್‌ಗಳನ್ನು ಬಳಸಿಕೊಂಡು ‘ಆಧಾರ್’ ವಿಮರ್ಶಿಸುವವರ ಮೇಲೆ ದಾಳಿ ನಡೆಸುವ ವ್ಯವಸ್ಥಿತ ಪ್ರಯತ್ನ ನಡೆದಿತ್ತು. ಇದನ್ನು ವಿಶಿಷ್ಟ ಗುರುತು ಪ್ರಾಧಿಕಾರದೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆ ‘ಐಸ್ಪಿರಿಟ್’ನ ಸಹ ಸ್ಥಾಪಕ ಶರದ್ ಶರ್ಮಾ ಬಹಿರಂಗವಾಗಿ ಒಪ್ಪಿಕೊಂಡು ಕ್ಷಮೆ ಕೇಳಿದ್ದರು. ‘ಆಧಾರ್’ ಬಗ್ಗೆ ಪ್ರಶ್ನೆ ಕೇಳಿದವರನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸವೊಂದು ವ್ಯವಸ್ಥಿತವಾಗಿ ನಡೆಯುತ್ತದೆ. ಅದೇ ಸಂದರ್ಭದಲ್ಲಿ ‘ಆಧಾರ್’ ಕುರಿತ ವಿಮರ್ಶಾತ್ಮಕ ಪ್ರಶ್ನೆಗಳಿಗೆಲ್ಲಾ ‘ಮುಂಡಾಸು ಮೂವತ್ತು ಮೊಳ’ ಬಗೆಯ ಉತ್ತರಗಳನ್ನು ನೀಡಲಾಗುತ್ತದೆ.
ಕೆಲವೇ ತಿಂಗಳುಗಳ ಹಿಂದೆ ಏರ್‌ಟೆಲ್ ಮೊಬೈಲ್ ಸಂಖ್ಯೆಗಳಿಗೆ ‘ಆಧಾರ್’ ಸಂಖ್ಯೆಯನ್ನು ಜೋಡಿಸಿದವರ ಹೆಸರಿನಲ್ಲಿ ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ನ ಖಾತೆಯನ್ನೂ ಅವರ ಒಪ್ಪಿಗೆಯಿಲ್ಲದೆಯೇ ತೆರೆಯಲಾಗಿತ್ತು. ಇದರಿಂದಾಗಿ ನೂರಾರು ಕೋಟಿ ರೂಪಾಯಿಗಳಷ್ಟು ಎಲ್‌ಪಿಜಿ ಸಬ್ಸಿಡಿ ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ ಖಾತೆಗಳಿಗೆ ಸಂದಾಯವಾಗಿತ್ತು. ಈ ಪ್ರಕರಣ ಬಯಲಾಗಿ ಏರ್‌ಟೆಲ್‌ನ ಹಿರಿಯ ಹಿರಿಯ ಉದ್ಯೋಗಿ ರಾಜೀನಾಮೆ ನೀಡಿಯೂ ಆಯಿತು. ಏರ್‌ಟೆಲ್ ಇಲ್ಲಿ ತನ್ನ ಗ್ರಾಹಕರಿಗೆ ವಂಚಿಸಿದೆ ಎಂಬುದು ನಿಜ. ಆದರೆ ಎಲ್‌ಪಿಜಿ ಸಬ್ಸಿಡಿಯನ್ನು ಈವರೆಗೂ ಪಾವತಿಸುತ್ತಿದ್ದ ಖಾತೆಯ ಬದಲಿಗೆ ಮತ್ತೊಂದು ಖಾತೆಗೆ ಪಾವತಿಸಿದ್ದು ಸರ್ಕಾರವೇ ತಾನೇ? ಇದು ಹೇಗಾಯಿತು?

ಇದಕ್ಕೆ ಇರುವ ಉತ್ತರ ಸರಳ. ವಿಶಿಷ್ಟ ಗುರುತು ಪ್ರಾಧಿಕಾರ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ
ಗಳು ಬಳಸುತ್ತಿರುವ ತಂತ್ರಜ್ಞಾನದ ಮಿತಿ. ಖಾತೆ ಸಂಖ್ಯೆಯ ಬದಲಾವಣೆಯ ವ್ಯವಸ್ಥೆಯೊಂದನ್ನು ಅವರು ರೂಪಿಸಿಯೇ ಇರಲಿಲ್ಲ. ಕೊನೆಯದಾಗಿ ‘ಆಧಾರ್’ ಸಂಖ್ಯೆಯನ್ನು ಜೋಡಿಸಿದ ಖಾತೆಗೆ ಹಣ ವರ್ಗಾವಣೆಯಾಗುತ್ತಿತ್ತು. ಲಕ್ಷಾಂತರ ಕೋಟಿ ರೂಪಾಯಿಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ‘ಪಾರದರ್ಶಕ’ ವ್ಯವಸ್ಥೆಯನ್ನು ರೂಪಿಸುವವರು ಮಾಡಿರುವ ತಪ್ಪಿದು. ಏರ್‌ಟೆಲ್ ತನ್ನಿಂದ ನಡೆದ ನೈತಿಕ ತಪ್ಪಿಗೆ ಪೇಮೇಂಟ್ಸ್ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಾಹಕರ ರಾಜೀನಾಮೆ ಪಡೆಯಿತು. ಆದರೆ ಹಣ ಪಾವತಿಸಿ ತಪ್ಪು ಮಾಡಿದ ನ್ಯಾಷನಲ್ ಪೇಮೇಂಟ್ಸ್ ಕಾರ್ಪೋರೇಷನ್ ಅಥವಾ ವಿಶಿಷ್ಟ ಗುರುತು ಪ್ರಾಧಿಕಾರದ ಯಾರೂ ಕೆಲಸ ಕಳೆದುಕೊಂಡಂತೆ ಕಾಣಿಸಲಿಲ್ಲ. ಅಷ್ಟೇಕೆ ಸರ್ಕಾರ ಈ ಬಗ್ಗೆ ಪ್ರಸ್ತಾಪಿಸಲೂ ಇಲ್ಲ.
ಈ ಎಲ್ಲವುಗಳ ಹಿನ್ನೆಲೆಯಲ್ಲೇ ‘ಆಧಾರ್’ ವ್ಯವಸ್ಥೆಯ ದೌರ್ಬಲ್ಯದ ಕುರಿತು ವರದಿ ಮಾಡಿರುವ ‘ಟ್ರಿಬ್ಯೂನ್’ ವರದಿಗಾರರ ಮೇಲೆ ದಾಖಲಿಸಿರುವ ಎಫ್ಐಆರ್‌ ಅನ್ನೂ ನೋಡಬೇಕು. ಸರ್ಕಾರ ಮತ್ತು ವಿಶಿಷ್ಟ ಗುರುತು ಪ್ರಾಧಿಕಾರಗಳೆರಡೂ ಒಮ್ಮುಖ ಪಾರದರ್ಶಕತೆಯನ್ನಷ್ಟೇ ಬಯಸುತ್ತಿವೆ. ಇದನ್ನು ಹೇಳುವುದಕ್ಕೆ ಭಿನ್ನ ತಂತ್ರಗಳನ್ನು ಬಳಸಲಾಗುತ್ತದೆಯಷ್ಟೇ. ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ ಪ್ರಕರಣದಲ್ಲಿ ಬೆದರಿಕೆಯೊಡ್ಡುವಂಥ ‘ಸ್ಪಷ್ಟೀಕರಣ’ಗಳನ್ನು ಕೇಳಲಾಯಿತು. ‘ಆಧಾರ್’ನ ಮಿತಿಗಳನ್ನು ಹೇಳುವ ತಜ್ಞ ವಿದ್ವಾಂಸರನ್ನು ನಿಯಂತ್ರಿಸಲು ‘ಟ್ರೋಲ್’ಗಳು ಅಥವಾ ‘ಆನ್‌ಲೈನ್ ಗೂಂಡಾಗಿರಿ’ ಬಳಸಲಾಯಿತು. ಈಗ ಆಧಾರ್ ದೌರ್ಬಲ್ಯಗಳ ಕುರಿತು ವರದಿ ಮಾಡುವ ಪತ್ರಕರ್ತರನ್ನು ನಿಯಂತ್ರಿಸುವುದಕ್ಕೆ ಪೊಲೀಸ್ ಕೇಸುಗಳನ್ನು ದಾಖಲಿಸಲಾಗುತ್ತಿದೆ. ಇದೆಲ್ಲವೂ ಲೇಖನದ ಆರಂಭದಲ್ಲೇ ಹೇಳಿದ ಎರಡನೇ ಗಾದೆಯನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡುತ್ತಿದೆ. ಸರ್ಕಾರ ಮತ್ತು ವಿಶಿಷ್ಟ ಗುರುತು ಪ್ರಾಧಿಕಾರಗಳೇಕೆ ಆಧಾರ್ ದೌರ್ಬಲ್ಯಗಳನ್ನು ಹೇಳಿದರೆ ಹೆಗಲು ಮುಟ್ಟಿ ನೋಡಿಕೊಳ್ಳುವುದು...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT