ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಬೇಗುದಿ ಶೀಘ್ರವೇ ಕೊನೆಗೊಳ್ಳುವುದೇ?

Last Updated 19 ಜೂನ್ 2012, 19:30 IST
ಅಕ್ಷರ ಗಾತ್ರ

`ಒಂದೊಮ್ಮೆ ಮಳೆ ಬರಲು ಆರಂಭಿಸಿದರೆ ಸತತವಾಗಿ  ಸುರಿತಾನೇ ಇರುತ್ತದೆ~ ಎನ್ನುವ ಲೋಕರೂಢಿ ಮಾತೊಂದಿದೆ. ಈ ಮಾತನ್ನು ಆರ್ಥಿಕ ಸಂಕಷ್ಟಗಳಿಗೂ ಅನ್ವಯಿಸಿ ಹೇಳುವುದಾದರೆ,  ನಿರಾಶಾದಾಯಕ ವಿದ್ಯಮಾನಗಳಿಗೆ ಕೊನೆಮೊದಲೇ ಇಲ್ಲವೇನೊ ಎನ್ನುವ ಭಾವನೆ ಎಲ್ಲರಲ್ಲಿ ಕಂಡು ಬರುತ್ತಿದೆ. ತ್ರೈಮಾಸಿಕ ಆರ್ಥಿಕ ವೃದ್ಧಿ ದರ, ಮಾಸಿಕ ಸರಕು ತಯಾರಿಕೆ ಸಂಖ್ಯೆ, ಹಣದುಬ್ಬರ, ರಫ್ತು, ಕರೆನ್ಸಿ ವಿನಿಮಯ ದರ, ಖರೀದಿ ಸೂಚ್ಯಂಕ, ಮುಂಬೈ ಷೇರುಪೇಟೆ, ಜಾಗತಿಕ ಮೌಲ್ಯಮಾಪನ ಸಂಸ್ಥೆಗಳಿಂದ ಅರ್ಥವ್ಯವಸ್ಥೆಯ ಮಾನದಂಡ ಕುಸಿತ... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಅರ್ಥ ವ್ಯವಸ್ಥೆಯಲ್ಲಿನ ಉತ್ಸಾಹ ಶೂನ್ಯ ವಾತಾವರಣ ಅದೆಷ್ಟರ ಮಟ್ಟಿಗೆ ರೇಜಿಗೆ ಹುಟ್ಟಿಸಿದೆ ಎಂದರೆ, ಸಾಮಾನ್ಯವಾಗಿ ಮೌನಕ್ಕೆ ಶರಣಾಗುವ ಉದ್ಯಮ ದಿಗ್ಗಜರೂ ಆರ್ಥಿಕತೆಯ ನಕಾರಾತ್ಮಕ ಪರಿಸ್ಥಿತಿ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಕೆಲ ರಾಜಕೀಯೇತರ ಸಂಘಟನೆಗಳೂ ಸರ್ಕಾರದ ವಿರುದ್ಧ ಧಾಷ್ಟ್ಯದಿಂದ ವಾಗ್ದಾಳಿ ಆರಂಭಿಸಿವೆ. ಪ್ರಧಾನಿ ಮನಮೋಹನ್ ಸಿಂಗ್ ಅವರನ್ನೂ ಗುರಿಯಾಗಿರಿಸಿಕೊಂಡು ಟೀಕಾಸ್ತ್ರ ಪ್ರಯೋಗಿಸುತ್ತಿವೆ.

ಮಾಧ್ಯಮಗಳ ಅಂಕಣಕಾರರ ಟೀಕಾವೈಖರಿ ಗಮನಿಸಿದರೆ, ಅರ್ಥವ್ಯವಸ್ಥೆಯ ಚೇತರಿಕೆ ಬಗ್ಗೆ ಯಾವುದೇ ಆಶಾಭಾವ ತಳೆಯುವುದು ಮೂರ್ಖತನವೇ ಸರಿ ಎನ್ನುವ ನಿಲುವಿಗೆ ಬರಬೇಕಾಗುತ್ತದೆ.

ಆದರೆ, ಕೆಲ ದಿನಗಳಿಂದ ದೇಶದ ರಾಜಕೀಯ ರಂಗದಲ್ಲಿ ಕಂಡು ಬಂದ ಬೆಳವಣಿಗೆಗಳಲ್ಲಿ ಮಾತ್ರ ಆಶಾವಾದ ಕಾಣಬಹುದಾಗಿದೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಕೇಂದ್ರದಲ್ಲಿನ ಆಡಳಿತಾರೂಢ ಯುಪಿಎ ಸರ್ಕಾರದ ನೇತೃತ್ವವಹಿಸಿರುವ ಕಾಂಗ್ರೆಸ್‌ನ ದ್ವೇಷ ಕಟ್ಟಿಕೊಂಡರೆ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಕಾಂಗ್ರೆಸ್ ಪರ ತಳೆದ ನಿಲುವು ಹಿತಾನುಭವ ನೀಡುವಂತಿದೆ.

ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಯುಪಿಎ ಸರ್ಕಾರ ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಮತ್ತು ಅದರ ಪರಿಣಾಮವಾಗಿ ಕೇಂದ್ರ ಸಂಪುಟದಲ್ಲಿ ಪ್ರಮುಖ ಸಚಿವರ ಖಾತೆಗಳಲ್ಲಿ  ಬದಲಾವಣೆಗಳು ಆಗುವ ಸಾಧ್ಯತೆಗಳು ಹೊಸ ಭರವಸೆ ಮೂಡಿಸಿವೆ.

ಆಶಾವಾದಿಗಳು ಅದರಲ್ಲೂ ವಿಶೇಷವಾಗಿ ಉದ್ಯಮಿಗಳು, ಹಣಕಾಸು, ಕೈಗಾರಿಕೆ ರಂಗ ಮತ್ತು ಅರ್ಥ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ನಡೆಯಲಿವೆ ಎಂದು ನಿರೀಕ್ಷಿಸಿದ್ದು, ಹಲವಾರು ಲೆಕ್ಕಾಚಾರಗಳನ್ನೂ ಹಾಕುತ್ತಿದ್ದಾರೆ.

ಹೊಸ ಹಣಕಾಸು ಸಚಿವರು ಯಾರಾಗುವರು ಎನ್ನುವ ಬಗ್ಗೆ ಉದ್ಯಮ ವಲಯದಲ್ಲಿ ಕುತೂಹಲ ಮೂಡಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಗಾಳಿಸುದ್ದಿಗಳೂ ಹರಿದಾಡುತ್ತಿವೆ. `ಹೊಸ ಪೊರಕೆ ಎಲ್ಲವನ್ನೂ ಚೆನ್ನಾಗಿ ಗುಡಿಸಿ ಹಾಕುವಂತೆ~, ಹೊಸದಾಗಿ ಅಧಿಕಾರಕ್ಕೆ ಬರುವವರು ತಮ್ಮಿಂದ ಸಾಧ್ಯವಿರುವಷ್ಟು ಬದಲಾವಣೆಗಳನ್ನು ತರಲು ಅವಸರಿಸುತ್ತಾರೆ. ಹಿಂದೆ ಅಧಿಕಾರದಲ್ಲಿ ಇರುವವರು ಬಿಟ್ಟು ಹೋದ ಸಮಸ್ಯೆಗಳ ಭಾರದಿಂದ ಅವರು ಬಸವಳಿಯುವ ಅಗತ್ಯ ಇರುವುದಿಲ್ಲ.  ಹೊಸಬರು ತ್ವರಿತವಾಗಿ ನಿರ್ಧಾರಗಳನ್ನು ಕಾರ್ಯಗತಗೊಳಿಸಲು ಮುಂದಾಗುತ್ತಾರೆ. ಅವರಿಂದ ಸಹಜವಾಗಿಯೇ ಹೆಚ್ಚಿನದನ್ನು ನಿರೀಕ್ಷಿಸಬಹುದಾಗಿದೆ.

ಹೊಸ ಹಣಕಾಸು ಸಚಿವರು ಯಾರೇ ಇರಲಿ, ಅವರು `10 ಜನಪಥ್~ ರಸ್ತೆಯಲ್ಲಿನ ಮನೆಗೆ (ಸೋನಿಯಾ ಗಾಂಧಿ ಅವರಿಗೆ) ಎಷ್ಟು ಆಪ್ತರಾಗಿರುತ್ತಾರೆ ಎನ್ನವುದರ ಮೇಲೆ ಎಲ್ಲವೂ ಅವಲಂಬಿಸಿರುತ್ತದೆ. ಈ ಅರ್ಹತೆ ಒಂದೇ ಇಲ್ಲಿ ಪ್ರಮುಖ ಮಾನದಂಡವಾಗಿರುತ್ತದೆ. ಹಣಕಾಸು ಸಚಿವ ಹುದ್ದೆ ತುಂಬ ಪ್ರಭಾವಶಾಲಿಯಾಗಿದ್ದು, ದೇಶ - ವಿದೇಶಗಳಲ್ಲಿನ ಬಂಡವಾಳ ಹೂಡಿಕೆದಾರರು ಈ ಹುದ್ದೆ ನಿಭಾಯಿಸುವವರ ನೀತಿ - ನಿರ್ಧಾರಗಳನ್ನು ನಿರಂತರವಾಗಿ ಗಮನಿಸುತ್ತಿರುತ್ತಾರೆ.

ರಾಜಕೀಯ ಸಮೀಕರಣ ಬದಲಾಗುತ್ತಿದ್ದಂತೆ, ಆರ್ಥಿಕ ಸುಧಾರಣೆ ಹಾದಿಯಲ್ಲಿನ ಅಡಚಣೆಗಳು ಕಡಿಮೆಯಾಗಲಿವೆ ಎಂದೂ ನಿರೀಕ್ಷಿಸಬಹುದಾಗಿದೆ. ಅದರಲ್ಲೂ ಅಲ್ಪಾವಧಿಯಲ್ಲಿ, ರಾಜಕೀಯ ಪಕ್ಷಗಳಲ್ಲಿನ ಯಥಾಸ್ಥಿತಿ ಮರು ಹೊಂದಾಣಿಕೆಗೆ ಕೆಲ ಸಮಯ ಹಿಡಿಯುವುದರಿಂದ ಇಂತಹ ಸಾಧ್ಯತೆಗಳು ಗರಿಷ್ಠ ಪ್ರಮಾಣದಲ್ಲಿ ಇರುತ್ತವೆ.

ಕಾಂಗ್ರೆಸ್ ಪಕ್ಷವು ರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿ ಬಿಂಬಿಸುವಲ್ಲಿ ಯಶಸ್ವಿಯಾಗಿರುವುದು ಹಲವಾರು ಸಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗಬಹುದು. ಪಕ್ಷಕ್ಕೆ ಅಗತ್ಯವಾದ ಚೇತರಿಕೆಯ ಆಮ್ಲಜನಕ ನೀಡುವಲ್ಲಿಯೂ ಈ ನಿರ್ಧಾರ ಪ್ರಮುಖ ಪಾತ್ರ ನಿರ್ವಹಿಸಲಿದೆ. 
ಒಂದು ವರ್ಷದ ಅವಧಿಯಲ್ಲಿ ಪಕ್ಷವು ಎಲ್ಲ ವಲಯಗಳಿಂದ ಕಟುಟೀಕೆಗೆ ಗುರಿಯಾಗುತ್ತಿದೆ.

ತೀವ್ರವಾಗಿ ತೇಜೊವಧೆಗೆ ಗುರಿಯಾಗಿರುವ ಪಕ್ಷದ ವರ್ಚಸ್ಸನ್ನು ಮರಳಿ ಕಟ್ಟಲು ಕಾಂಗ್ರೆಸ್ ಹೆಣಗುತ್ತಿದೆ. ಈಗ ಪಕ್ಷಕ್ಕೆ ಮರಳಿರುವ ಆತ್ಮವಿಶ್ವಾಸವು, ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಉತ್ತೇಜನ ನೀಡಲಿದೆ. ಹೊಸದಾಗಿ ಸೃಷ್ಟಿಯಾಗಿರುವ ಅನುಕೂಲಕರ ವಾತಾವರಣದಲ್ಲಿ ಕಾಂಗ್ರೆಸ್ ಕಳೆದುಕೊಳ್ಳುವುದು ಏನೂ ಇಲ್ಲ.

ಆರ್ಥಿಕ ಸುಧಾರಣೆಗಳಿಗೆ ಬದ್ಧವಾಗಿರುವ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವೇ ಇದೆ. ಅದರ ಸೈದ್ಧಾಂತಿಕ ಧೋರಣೆ ಯಾವಾಗಲೂ ಕ್ರಿಯಾಶೀಲವಾಗಿದೆ. ಅದರ ಎಲ್ಲ ಅನೀತಿಗಳ ಹೊರತಾಗಿಯೂ, 20 ವರ್ಷಗಳ ಅವಧಿಯಲ್ಲಿ  ಸಾಧ್ಯವಾಗಿರುವ ಬದಲಾವಣೆಯ ಗೌರವ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಾಂಗ್ರೆಸ್, ಅವಕಾಶಗಳ ಹುಡುಕಾಟದಲ್ಲಿ ಇದೆ ಎಂದು ಊಹಿಸುವುದು ನ್ಯಾಯೋಚಿತವಾಗಿದೆ. ದೇಶದಲ್ಲಿನ ಎಲ್ಲ ಆಗುಹೋಗುಗಳ ಮೇಲೆ ತನಗೆ ಸಂಪೂರ್ಣ ಹಿಡಿತ ಇದೆ. ತನ್ನ ಯಜಮಾನಿಕೆಗೆ ಈಗ ಯಾರ ಹಂಗೂ ಇಲ್ಲ ಎನ್ನುವುದನ್ನು ಕಾಂಗ್ರೆಸ್ ಸಾಬೀತುಪಡಿಸಲು ಬಯಸುತ್ತಿದೆ ಎಂದೂ ನನಗೆ ಭಾಸವಾಗುತ್ತದೆ. ಈ ಪರಿಸ್ಥಿತಿಯು ಅನೇಕ ಉದ್ಯಮಿಗಳ ಪಾಲಿಗೆ ಕರ್ಣಾನಂದಕರವಾಗಿ ಕೇಳಿಸುತ್ತಿದೆ ಎನ್ನುವುದು ನನಗೂ ಗೊತ್ತು. ದೇಶದ ಅರ್ಥ ವ್ಯವಸ್ಥೆ ಬಗ್ಗೆ ಪ್ರತಿಯೊಬ್ಬರೂ ಆಶಾವಾದಿ ಆಗಿರುವುದು ಮತ್ತು ಉತ್ತಮ ದಿನಗಳು ಬರಲಿವೆ ಎಂದು ನಿರೀಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ.

ಕಠಿಣ ಬಡ್ಡಿ ದರ ಮತ್ತು ವಿನಿಮಯ ದರಗಳು ನಿಜವಾಗಿಯೂ  ಫಲ ನೀಡಿಲ್ಲ ಎನ್ನುವುದು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕೊನೆಗೂ ಮನವರಿಕೆಯಾಗಿರುವಂತಿದೆ. ಗರಿಷ್ಠ ಮಟ್ಟದ ಬ್ಯಾಂಕ್ ಬಡ್ಡಿ ದರಗಳು   ತಮ್ಮ ಉದ್ದೇಶ ಸಾಧನೆಯಲ್ಲಿ ಸೋತಿವೆ. ಹಣದುಬ್ಬರ ನಿಗ್ರಹಿಸುವಲ್ಲಿ ಸಫಲವಾಗಿಲ್ಲ. ಆರ್‌ಬಿಐ ನಿರೀಕ್ಷೆಗೆ ವ್ಯತಿರಿಕ್ತವಾಗಿ, ಬಡ್ಡಿ ದರಗಳು ಆರ್ಥಿಕ ವೃದ್ಧಿ ದರದ ಮೇಲೆ ಗಣನೀಯವಾಗಿ ಪ್ರತಿಕೂಲ ಪರಿಣಾಮವನ್ನೇ ಬೀರಿವೆ.

ದೇಶದಲ್ಲಿನ ಹಣದುಬ್ಬರವು, ಸರಕುಗಳ ಪೂರೈಕೆಯಲ್ಲಿನ ಕೊರತೆಯಿಂದಾಗಿ ಉದ್ಭವಿಸಿದೆಯೇ ಹೊರತು ಬೇಡಿಕೆ ಕಾರಣಕ್ಕೆ ಅಲ್ಲ ಎನ್ನುವುದು ಇನ್ನೊಮ್ಮೆ ಸಾಬೀತಾಗಿದೆ. ಈ ಮಾತು ಕರೆನ್ಸಿ ವಿನಿಮಯ ದರಕ್ಕೂ ಅನ್ವಯಿಸುತ್ತದೆ.  ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುವುದನ್ನು ತಡೆಯುವುದು ತನಗೆ ಬೇಕಾಗಿಲ್ಲ ಎಂದು ಆರಂಭದಲ್ಲಿ `ಆರ್‌ಬಿಐ~ ತಳೆದಿದ್ದ ನಿಲುವು ಕ್ಷುಲ್ಲಕ ಎನಿಸುತ್ತದೆ. ಸದ್ಯದ ವಿನಿಮಯ ದರ ಸೂಕ್ತ ಮಟ್ಟದಲ್ಲಿ ಇದೆ ಎನ್ನುವ ಧೋರಣೆಯನ್ನೇ ಕೇಂದ್ರೀಯ ಬ್ಯಾಂಕ್ ತಳೆದಿತ್ತು ಎನ್ನುವ ಭಾವನೆಯನ್ನೂ ಮೂಡಿಸಿತ್ತು. ಕೆಲ ನೀತಿ ನಿರೂಪಣಾ ಕ್ರಮಗಳಲ್ಲಿನ ಬದಲಾವಣೆ ಮೂಲಕ ವಿನಿಮಯ  ಮಾರುಕಟ್ಟೆಯಲ್ಲಿ ಸ್ಥಿರತೆ ಸಾಧಿಸಬೇಕಾಗಿತ್ತು.

ವಿನಿಮಯ ದರ ಬಿಕ್ಕಟ್ಟಿನಿಂದ `ಆರ್‌ಬಿಐ~ ಸಾಕಷ್ಟು ಪಾಠ ಕಲಿತು ಜಾಣತನ ಮೈಗೂಡಿಸಿಕೊಂಡಿದೆ ಎಂದೂ  ಈಗ ಊಹಿಸಬಹುದು. ಅಲ್ಪಾವಧಿಯಲ್ಲಿ ಬ್ಯಾಂಕ್ ಬಡ್ಡಿ ದರಗಳು ಕಡಿಮೆಯಾಗಿ, ಕೆಲ ಕಾಲ ಅದೇ ಪ್ರವೃತ್ತಿ ಮುಂದುವರಿಯಬೇಕಾಗಿದೆ. ಇದರಿಂದ ಕರೆನ್ಸಿ ವಿನಿಮಯ ದರಗಳು  ಏರಿಳಿತ ಕಾಣದೇ ವಹಿವಾಟುದಾರರಲ್ಲಿ ಸುರಕ್ಷಿತ ಮತ್ತು ನೆಮ್ಮದಿಯ ಭಾವ ಮೂಡಬಹುದು.

ನಾನು ಹಿಂದೆಯೂ ಈ ಬಗ್ಗೆ ಉಲ್ಲೇಖಿಸಿರುವ ಮಾತನ್ನು ಮತ್ತೆ ಈ ಸಂದರ್ಭದಲ್ಲಿ ಪ್ರಸ್ತಾಪಿಸಲು ಬಯಸುತ್ತೇನೆ. ಅಂಕಿ ಸಂಖ್ಯೆಗಳೇನೇ ಇರಲಿ, ಭಾವನೆಗಳೇ ಉದ್ಯಮವನ್ನು ಮುಂದಕ್ಕೆ ಕೊಂಡೊಯ್ಯುತ್ತವೆ. ಇಂತಹ ಉತ್ಸಾಹದ ಮನೋಭಾವ ಅದೆಷ್ಟರ ಮಟ್ಟಿಗೆ ಸಾಂಕ್ರಾಮಿಕ ಆಗಿರುತ್ತದೆ ಎಂದರೆ, ಅದು ಕಾಳ್ಗಿಚ್ಚಿನಂತೆ ಹಬ್ಬುತ್ತದೆ. ಅಷ್ಟೇ ಅಲ್ಲದೇ, ಪ್ರತಿಯೊಬ್ಬರೂ ಅದರಿಂದ ಕಿಡಿ ಹತ್ತಿಸಿಕೊಳ್ಳಲೂ ಇಚ್ಛಿಸುತ್ತಾರೆ. ಕೇಂದ್ರ ಸಚಿವ ಸಂಪುಟದಲ್ಲಿನ ಪ್ರಮುಖ ಖಾತೆಗಳಲ್ಲಿನ ಸಂಭವನೀಯ ಬದಲಾವಣೆಗಳ ಫಲವಾಗಿ ದೇಶದ ಕೈಗಾರಿಕಾ ವಲಯದಲ್ಲಿ ಸದ್ಯಕ್ಕೆ ಮನೆ ಮಾಡಿರುವ ನಿರಾಶಾದಾಯಕ ಭಾವನೆಯು ಆಶಾದಾಯಕವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳೂ ಇವೆ.

ನಾನು ನನ್ನ ಈ ಲೇಖನವನ್ನು ಎಚ್ಚರಿಕೆಯ ಮಾತುಗಳೊಂದಿಗೆ ಕೊನೆಗೊಳಿಸಲು ಇಷ್ಟಪಡುವುದಿಲ್ಲ. ದೇಶದ ಅರ್ಥ ವ್ಯವಸ್ಥೆಯಲ್ಲಿನ ಎಲ್ಲ ಸಕಾರಾತ್ಮಕ ಸಂಭವನೀಯ ಬದಲಾವಣೆಗಳಿಗೆ ಒಂದು ಪ್ರಮುಖ ಅಡಚಣೆಯೊಂದು ಎದುರಾಗಿದೆ. ಅರ್ಥ ವ್ಯವಸ್ಥೆಯ ಚೇತರಿಕೆಗೆ ಐರೋಪ್ಯ ಒಕ್ಕೂಟದಲ್ಲಿನ ಬಿಕ್ಕಟ್ಟು ಮುಖ್ಯ ಅಡ್ಡಿಯಾಗಿದೆ. ಈ ಲೇಖನ ಪ್ರಕಟವಾಗುವ ಹೊತ್ತಿಗೆ, ಗ್ರೀಸ್‌ನಲ್ಲಿನ ಚುನಾವಣಾ ಫಲಿತಾಂಶದ ಹಣೆಬರಹ ಗೊತ್ತಾಗಿರುತ್ತದೆ. ಈ ಫಲಿತಾಂಶ ಮತ್ತು  ಹೊಸದಾಗಿ ಅಧಿಕಾರಕ್ಕೆ ಬರಲಿರುವ ಪಕ್ಷ ಕೈಗೊಳ್ಳುವ ನಿರ್ಧಾರವು ಐರೋಪ್ಯ ಒಕ್ಕೂಟದ ಭವಿಷ್ಯ ನಿರ್ಧರಿಸಲಿದೆ.

ಐರೋಪ್ಯ ಒಕ್ಕೂಟದ ಉಳಿದೆಲ್ಲ ಸದಸ್ಯ ದೇಶಗಳು  ತಮ್ಮ ಸಂಘಟನೆಯನ್ನು ಈಗಿರುವಂತೆಯೇ ಕಾಯ್ದುಕೊಳ್ಳಲು ಹೆಣಗುತ್ತಿವೆ. ಸದ್ಯಕ್ಕೆ ಎದುರಾಗಿರುವ ಬಿಕ್ಕಟ್ಟು ಈ ಹಿಂದೆಂದೂ ಉದ್ಭವಿಸಿರಲಿಲ್ಲ. ಯೂರೋಪ್ ದೇಶಗಳಲ್ಲಿನ ಸಾಲದ ಸುಳಿಯ ಬಿಕ್ಕಟ್ಟಿನ ದೂರಗಾಮಿ ಪರಿಣಾಮಗಳನ್ನು ಊಹಿಸುವುದು ಸಾಧ್ಯವಿಲ್ಲ.

ಗ್ರೀಸ್‌ನಲ್ಲಿನ ಹೊಸ ನಾಯಕತ್ವವು, ಐರೋಪ್ಯ ಒಕ್ಕೂಟದ ಮೇಲೆ ಯಾವುದೇ ದುಷ್ಪರಿಣಾಮ ಬೀರದಿರಲಿ ಎಂದೇ ಆಶಿಸೋಣ. ಇಲ್ಲದಿದ್ದರೆ ಭಾರತದಲ್ಲಿನ ಆರ್ಥಿಕ ಸಂಕಷ್ಟದ ದಿನಗಳು ಇನ್ನಷ್ಟು ದಿನಗಳ ಕಾಲ ಮುಂದುವರೆದು ಆಶಾಭಂಗವಾಗಲಿದೆ. ಹಾಗಾಗದಿರಲಿ ಎಂದೇ ಆಶಿಸೋಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT