ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಆತ್ಮವಂಚನೆಯಲ್ಲದೆ ಮತ್ತೇನು?

Last Updated 2 ಜುಲೈ 2016, 19:30 IST
ಅಕ್ಷರ ಗಾತ್ರ

ಈ ಪ್ರಶ್ನೆ ನನಗೆ ಮತ್ತೆ ಮತ್ತೆ ಕಾಡುತ್ತದೆ: ಕಾರ್ಯದರ್ಶಿಗಳ, ಜಿಲ್ಲಾಧಿಕಾರಿಗಳ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಎಲ್ಲ ಮುಖ್ಯಮಂತ್ರಿಗಳು ಯಾಕೆ ಒಂದೇ ಬಗೆಯಲ್ಲಿ ಮಾತನಾಡುತ್ತಾರೆ? ತಪ್ಪು ಎಲ್ಲಿದೆ? ಅಧಿಕಾರಿಗಳು ಜಿಡ್ಡುಗಟ್ಟಿ ಹೋಗಿದ್ದಾರೆಯೇ ಅಥವಾ ಆಡಳಿತದ ವಿಧಾನಗಳೇ ಬದಲಾಗಿಲ್ಲವೇ? ಅಧಿಕಾರಿಗಳ ಸಭೆ ನಡೆದ ಮರುದಿನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸಭೆ ನಡೆಯಿತು.

ಅಲ್ಲಿಯೂ ನನಗೆ ಹೊಸ ಮಾತು ಕೇಳಿಸಲಿಲ್ಲ. ‘ಅಧ್ಯಕ್ಷರು, ಉಪಾಧ್ಯಕ್ಷರು ತಮ್ಮ ಅಧೀನ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ಕೊಡಬೇಕು’ ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ನಾನು ವೃತ್ತಿಗೆ ಸೇರಿದ ಮೂವತ್ತು ವರ್ಷಗಳ ಹಿಂದೆಯೂ ಇದೇ ಸಲಹೆ ಕೇಳಿ ಬಂದಿತ್ತು! ಕಾಲ ಬದಲಾದಂತೆ,

ತಂತ್ರಜ್ಞಾನದ ಆವಿಷ್ಕಾರ ಆದಂತೆ ಆಡಳಿತ ವಿಧಾನವೂ ಬದಲಾಗಬೇಕು ಅಲ್ಲವೇ? ಹಾಗೆ ಏಕೆ ಆಗುವುದಿಲ್ಲ? ಕಾರ್ಯಾಂಗದ ಕೆಲಸದಲ್ಲಿ ಶಾಸಕಾಂಗದ ಹಸ್ತಕ್ಷೇಪ ಮೊದಲಿಗಿಂತ ಈಗ ಹೆಚ್ಚು ಇರುವುದು ಸ್ಫಟಿಕದಷ್ಟು ಸ್ಪಷ್ಟ ಇರುವಾಗ ಆಡಳಿತ ಸರಿಯಾಗಿ ನಡೆಯದೇ ಇದ್ದರೆ ಯಾರು ಯಾರನ್ನು ದೂಷಿಸಬೇಕು?

ನನ್ನ ಪರಿಚಯದ ಒಬ್ಬ ಅಧಿಕಾರಿಣಿ ಜೊತೆಗೆ ಕಳೆದ ಎರಡು ದಿನಗಳಿಂದ ಮಾತನಾಡುತ್ತಿರುವೆ. ಆಕೆ ಕೆಎಎಸ್‌ ಮಾಡಿರುವ ಅಧಿಕಾರಿ. ಅವರಿಗೆ ಕೇಳಿದೆ, ಆಡಳಿತ ಎಂದರೆ ಏನು ಎಂದು. ಅವರು ಹೇಳಿದರು: ‘ಅದು ಬಹಳ ಸರಳ; ಆಡಳಿತ ಎಂಬುದು ಕಟ್ಟ ಕಡೆಯ ಮನುಷ್ಯನ ಒಳಿತಿನ ಉದ್ದೇಶದ್ದು. ಆದರೆ, ಇದನ್ನು ಸಾಧಿಸುವುದು ಬಹಳ ಕಷ್ಟ. ಏಕೆಂದರೆ, ಅಧಿಕಾರ ಎಂದರೆ ಸೇವೆ ಎಂದು ನಮಗೆ ಗೊತ್ತಿಲ್ಲ.

ಅಧಿಕಾರ ಎಂದರೆ ಹಣ ಮಾಡುವುದು ಎಂದು ನಾವು ತಿಳಿದುಕೊಂಡಿದ್ದೇವೆ. ನಾವು ಸ್ವಂತಕ್ಕೂ ಹಣ ಮಾಡಿಕೊಳ್ಳಬೇಕು; ನಮ್ಮನ್ನು ನಮಗೆ ಬೇಕಾದ ಜಾಗದಲ್ಲಿ ಹಾಕಿಕೊಡುವ ರಾಜಕಾರಣಿಗಳಿಗೆ ಕೊಡಲೂ ಹಣ ಮಾಡಬೇಕು. ಈಗ ಜುಲೈ ತಿಂಗಳು. ಈ ತಿಂಗಳು 15ರವರೆಗೆ ಅಧಿಕೃತವಾಗಿ ವರ್ಗಾವಣೆ ನಡೆಯುತ್ತದೆ.

ಮತ್ತೆ 15 ದಿನ ಹಿಂದಿನ ದಿನ ಹಾಕಿ ವರ್ಗಾವಣೆ ನಡೆಯುತ್ತದೆ! ಈ ಒಂದು ತಿಂಗಳು ಯಾವ ಕಚೇರಿಯಲ್ಲಿಯೂ ಕೆಲಸ ನಡೆಯುವುದಿಲ್ಲ. ಏಕೆಂದರೆ ನಾವು ಈಗ  ಇರುವ ಸ್ಥಳದಲ್ಲಿಯೇ ಇರಲು ಏನು ಮಾಡಬೇಕು ಎಂದೇ ಯೋಚಿಸುತ್ತ ಇರುತ್ತೇವೆ.

ಮತ್ತು ಪ್ರಯತ್ನ ಮಾಡುತ್ತ ಇರುತ್ತೇವೆ. ನಿಮಗೆ ಗೊತ್ತೇ? ಒಂದು ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಮೂರು ವರ್ಷ ಮಂತ್ರಿಗಳು ತಮಗೆ ಬೇಕಾದ ಅಧಿಕಾರಿಗಳನ್ನು ಆಯ್ಕೆ  ಮಾಡಿಕೊಳ್ಳುತ್ತಾರೆ. ಉಳಿದ ಎರಡು ವರ್ಷ ಅಧಿಕಾರಿಗಳು ತಮಗೆ ಬೇಕಾದ ಮಂತ್ರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಎರಡೂ ಅರ್ಥ ಒಂದೇ..!’ ಪಟಪಟನೇ ಅರಳು ಹುರಿದಂತೆ ಮಾತನಾಡಿದ ಆಕೆ ಇನ್ನೂ ಬಹಳ ಹೊತ್ತು ಮಾತನಾಡುವ ಮೂಡಿನಲ್ಲಿ ಇದ್ದರು. ಆಕೆ ಹೇಳುತ್ತಿದ್ದುದು ಒಂದು ರೀತಿ ಮುಗಿಯದ ಕಥೆ.

ಸರ್ಕಾರದಲ್ಲಿ ನಾಲ್ಕು ಹಂತದ ಸಿಬ್ಬಂದಿ ಇರುತ್ತಾರೆ. ಕೆಳಗಿನ ‘ಸಿ’ ಮತ್ತು ‘ಡಿ’ ಹಂತದ ಸಿಬ್ಬಂದಿಯ ವರ್ಗಾವಣೆಗೆ ನಿರ್ದಿಷ್ಟ ನಿಯಮಗಳು ಇವೆ ಹಾಗೂ ಅವು ಬಹುಪಾಲು ಕಟ್ಟುನಿಟ್ಟಾಗಿ ಜಾರಿ ಆಗುತ್ತವೆ. ಮೇಲಿನ ಎರಡು ಹಂತದ ಅಂದರೆ ಗೆಜೆಟೆಡ್‌ ಅಧಿಕಾರಿಗಳ ವರ್ಗಾವಣೆಗೆ ಏನೆಲ್ಲ ನಿಯಮ ಇದ್ದರೂ ಅದು ಎಂದೂ ಪಾಲನೆಯಾಗುವುದಿಲ್ಲ.

ಈ ದರ್ಜೆಯ ಅಧಿಕಾರಿಗಳು ಒಂದು ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷ ಇರಬೇಕು ಎಂದರೆ ಅವರಿಗೆ ಆಯಾ ಸರ್ಕಾರದ ಜಾತಿಬಲದ ಜೊತೆಗೆ ಹಣದ ಬಲವೂ ಬೇಕಾಗುತ್ತದೆ. ‘ಸರ್ಕಾರದ ಜಾತಿ ಬಲ’ ಎಂದರೆ ಅರ್ಥವಾಗುತ್ತದೆ ಎಂದುಕೊಂಡಿರುವೆ.

ಎಲ್ಲ ಸರ್ಕಾರಗಳಿಗೂ ಒಂದು ಜಾತಿ ಬಲ ಎಂದು ಇರುತ್ತದೆ. ಶಾಸಕರು ಮತ್ತು ಸಚಿವರು ತಮ್ಮ ಮಾತು ಕೇಳುವ, ‘ಜೀ ಹುಜೂರ್‌’ ಎನ್ನುವ ಅಧಿಕಾರಿಗಳನ್ನೇ ತಮ್ಮ ಕ್ಷೇತ್ರ ವ್ಯಾಪ್ತಿಯ ಕಚೇರಿಗಳಿಗೆ ಹಾಕಿಸಿಕೊಳ್ಳುತ್ತಾರೆ.

ಇಂಥ ಅಧಿಕಾರಿಗಳು ಹೇಗೆ ಆತ್ಮಗೌರವ ಇಲ್ಲದವರು ಆಗಿರುತ್ತಾರೆ ಎಂದರೆ ಆ ಸಚಿವರನ್ನು ಮಾತ್ರವಲ್ಲ ಅವರ ಮಕ್ಕಳನ್ನೂ ಹೆಗಲ ಮೇಲೆ ಹೊತ್ತುಕೊಂಡು ಕುಣಿಯುತ್ತಾರೆ.

ಹೀಗೆ ಶಾಸಕರ ಮತ್ತು ಸಚಿವರ ಕೃಪಾಕಟಾಕ್ಷ ಗಳಿಸಿದವರು ಜನರನ್ನು ಕಾಲಕಸವಾಗಿ ಕಾಣುತ್ತಾರೆ. ಆಡಳಿತದ ಸಮಸ್ಯೆ ಇರುವುದು ಇಲ್ಲಿ. ಸರ್ಕಾರಿ ಕಚೇರಿಗೆ ಹೋದರೆ ನಿಮಗೆ ತನ್ನ ಮುಂದಿನ ಕುರ್ಚಿಯನ್ನು ತೋರಿಸಿ, ‘ಕುಳಿತುಕೊಳ್ಳಿ, ನಿಮಗೆ ಏನು ಕೆಲಸ ಆಗಬೇಕು’ ಎಂದು ಹೇಳುವ, ಕೇಳುವ ಎಷ್ಟು ಮಂದಿ ಅಧಿಕಾರಿಗಳನ್ನು ನಾವು ನೋಡಿದ್ದೇವೆ?

ಇದು ಏಕೆ ಸಾಧ್ಯವಾಗುವುದಿಲ್ಲ ಎಂದರೆ ಅಧಿಕಾರಿಗಳು ನಮಗೆ ಏನೋ ಅನುಕೂಲ ಮಾಡಿಕೊಡಲು ಇರುವ ದೇವಾಂಶ ಸಂಭೂತರು ತಾವು ಎಂದು ತಿಳಿದುಕೊಂಡಿರುತ್ತಾರೆ. ಸರ್ಕಾರಿ ಕಚೇರಿ ಕೆಲಸಕ್ಕೆ ಯಾರಾದರೂ ನಗು ನಗುತ್ತ ಹೋಗಿ ನಗು ನಗುತ್ತ ಬಂದುದನ್ನು ನೋಡಿದವರು ಉಂಟೇ? ಆದರೆ, ಅಲ್ಲಿರುವ ಅಧಿಕಾರಿಗಳಿಗೆ ಸಂಬಳ ಎಲ್ಲಿಂದ ಬರುತ್ತದೆ ಎಂದರೆ ಅವರ ಬಳಿ ಹೋಗುವ ಜನರು ಕೊಡುವ ತೆರಿಗೆಯಿಂದಲೇ ಅಲ್ಲವೇ?

ಆಡಳಿತದಲ್ಲಿ ಇರುವ ನಕಾರಾತ್ಮಕತೆಗೆ ಏನು ಕಾರಣ ಇರಬಹುದು? ಸರ್ಕಾರದ ಕಚೇರಿಗೆ ಹೋದರೆ ನಿಮ್ಮ ಕೆಲಸ ಏಕೆ ಆಗುವುದಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಹೇಳುತ್ತಾರೆಯೇ ಹೊರತು ಅದನ್ನು ಎಷ್ಟು ಬೇಗ ಮಾಡಿಕೊಡಬಹುದು ಎಂದು ಹೇಳುವುದಿಲ್ಲ.

ಸರ್ಕಾರದ ಕಚೇರಿಗಳಲ್ಲಿ ಕಡತಗಳು ವಿಲೇವಾರಿಯಾಗದೆ ಉಳಿಯಲು ಬೇರೆ ಇನ್ನೇನು ಕಾರಣ ಇರಲು ಸಾಧ್ಯ? ಒಂದು ಕೆಲಸ ಆಗುತ್ತದೆ ಅಥವಾ ಆಗುವುದಿಲ್ಲ. ಆಗುವುದಕ್ಕೆ ಸಕಾರಣಗಳು ಇರುವ ಹಾಗೆಯೇ ಆಗದೆ  ಇರುವುದಕ್ಕೂ ಕಾರಣಗಳು ಇರುತ್ತವೆ. ಕಾಯ್ದೆಗೆ ವಿರುದ್ಧವಾದುದನ್ನು ಅಧಿಕಾರಿಗಳು ಮಾಡಬೇಕಿಲ್ಲ. ‘ನೋಡಿ, ಇಂಥಿಂಥ ಕಾರಣಗಳಿಗಾಗಿ ನಿಮ್ಮ ಕೆಲಸ ಆಗುವುದಿಲ್ಲ’ ಎಂದು ಹೇಳಿ ಕಳುಹಿಸಿಬಿಡಬಹುದು.ಅವರು ಹಾಗೆ ಮಾಡುವುದಿಲ್ಲ.

ಅದರ ಬದಲು ತನ್ನ ಮೇಲಿನವರ ತಲೆಗೆ ಅದನ್ನು ಕಟ್ಟುತ್ತಾರೆ. ಮೇಲಿನವರು ಅದನ್ನು ತಮ್ಮ ಮೇಲಿನವರ ತಲೆಗೆ ಕಟ್ಟುತ್ತಾರೆ. ಕೆಲಸ ಆಗುವುದು ತಡವಾಗುತ್ತ ಹೋಗುತ್ತದೆ. ಆಡಳಿತಕ್ಕೆ ವಿಳಂಬದ ಗ್ರಹಣ ಹಿಡಿಯುವುದು ಹೀಗೆ.

ಹಾಗೆಂದು ಕಾಯ್ದೆಗೆ ಸಲ್ಲದ ಕೆಲಸಗಳು ಕಚೇರಿಗಳಲ್ಲಿ ಆಗುವುದೇ ಇಲ್ಲವೇ? ಆಗುತ್ತವೆ. ಬಹುಪಾಲು ಅವೇ ಆಗುತ್ತವೆ! ಅಂಥ ಕಡತಗಳು ವಿಲೇವಾರಿಯಾಗಲು ಒಂದು ದರ ನಿಗದಿಯಾಗಿರುತ್ತದೆ.

ಆ ದರವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಅಧಿಕಾರಿಗಳಲ್ಲಿ ಹಂಚಲು ಒಬ್ಬ ದಲ್ಲಾಳಿ ಅಲ್ಲಿ ಇರುತ್ತಾನೆ. ನೀವು ಸಬ್ ರಿಜಿಸ್ಟ್ರಾರ್‌  ಕಚೇರಿಗೆ ಹೋಗಿ. ಅಲ್ಲಿ ದಲ್ಲಾಳಿಯನ್ನು ಹಿಡಿಯದೇ ಕೆಲಸ ಮಾಡಿಸಲು ಸಾಧ್ಯವೇ? ಅವನ ದರ್ಪ ಅಹಂಕಾರ ಎಷ್ಟು ಎಂದು ನೀವು ನೋಡಿ. ನಾನು ನೋಡಿದ್ದೇನೆ.

ಏಕೆಂದರೆ ಅವನಿಗೆ ಆ ಕಚೇರಿಯ ಮುಖ್ಯಸ್ಥರೇ ಬೇಕಾದವರು ಆಗಿರುತ್ತಾರೆ. ಒಬ್ಬೊಬ್ಬ ಸಬ್‌ ರಿಜಿಸ್ಟ್ರಾರ್‌ ಪ್ರತಿ ದಿನ ಮನೆಗೆ ಹೋಗುವಾಗ ಎಷ್ಟು ಗಿಂಬಳದ ಹಣವನ್ನು ತೆಗೆದುಕೊಂಡು ಹೋಗುತ್ತಾರೆ ಎಂಬುದು ವಿಧಾನಸೌಧದಲ್ಲಿ ಇರುವವರಿಗೆ ಗೊತ್ತಿಲ್ಲವೇ? ಕಂದಾಯ ಮಂತ್ರಿಯಾಗಿ ಶ್ರೀನಿವಾಸ ಪ್ರಸಾದ್‌ ಇದ್ದರೂ ಅಷ್ಟೇ, ಕಾಗೋಡು ತಿಮ್ಮಪ್ಪ ಇದ್ದರೂ ಅಷ್ಟೇ.

ಸ್ವತಃ ಮುಖ್ಯಮಂತ್ರಿಗಳೇ ಆ ಖಾತೆಯನ್ನು ಹೊಂದಿದ್ದರೂ ಸಬ್‌ ರಿಜಿಸ್ಟ್ರಾರ್ ಕಚೇರಿಗಳ ಕಾರ್ಯ ವೈಖರಿ ಬದಲಾಗುತ್ತದೆ ಎಂದು ಅನಿಸುವುದಿಲ್ಲ. ದುರದೃಷ್ಟ ಎಂದರೆ ಈ ಕಂದಾಯ ಇಲಾಖೆಯಿಂದಲೇ ಜನರಿಗೆ ಅನೇಕ ಸೇವೆಗಳು ಸಿಗಬೇಕು.
ಆ ಇಲಾಖೆಯೇ ಅತ್ಯಂತ ಭ್ರಷ್ಟ ಇಲಾಖೆಯೂ ಹೌದು. ಅಮಾಯಕ ಜನರಿಗೆ ಅಲ್ಲಿ ಆಗುವಷ್ಟು ಅವಮಾನ, ಹಿಂಸೆ ಇನ್ನೆಲ್ಲಿಯೂ ಆಗುವುದಿಲ್ಲ. ಬಹುಪಾಲು ಜನರು ಈಗ ಭ್ರಷ್ಟಾಚಾರವನ್ನು ಒಪ್ಪಿಕೊಂಡಿದ್ದಾರೆ. ಅವರು ಹಣ ಕೊಡಲು ಸಿದ್ಧರಿದ್ದಾರೆ. ಬೇಗ ಕೆಲಸ ಆದರೆ ಸಾಕು ಎಂದು ಮಾತ್ರ ಅವರು ಅಪೇಕ್ಷಿಸುತ್ತಿದ್ದಾರೆ.

ಇದು ಒಂದು ನೆಲೆಯ ಸಮಸ್ಯೆಯಾದರೆ ಸಾರ್ವಜನಿಕ ಸೇವೆ ಮತ್ತು ಸೌಕರ್ಯಗಳ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಿಯೇ ಹೊಣೆಗಾರರಾಗಿದ್ದಾರೆ. ದೂರದ ಬೀದರಿಗೆ ಹೋಗುವುದು ಬೇಡ.

ಬೆಂಗಳೂರಿನಲ್ಲಿಯೇ ಏನಾಗುತ್ತಿದೆ ನೋಡೋಣ. ಇಲ್ಲಿ ಮತ್ತೆ ಮಳೆ ಬರುತ್ತಿದೆ. ಅದರ ಜೊತೆಗೆ ರಸ್ತೆಗಳಲ್ಲಿ ಮತ್ತೆ ಗುಂಡಿಗಳು ಬೀಳುತ್ತಿವೆ. ಕಳೆದ ವರ್ಷ ನಾವು ನಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ಗುಂಡಿ ಬಿದ್ದ ಜಾಗಗಳಲ್ಲಿಯೇ ಈಗಲೂ ಮತ್ತೆ ಗುಂಡಿಗಳು ಬಿದ್ದಿವೆ! ಹಾಗಾದರೆ, ಜನರಿಗೆ ಸೌಕರ್ಯಗಳನ್ನು ಕಲ್ಪಿಸುವ ಮಹಾನಗರ ಪಾಲಿಕೆಯಂಥ ಸಂಸ್ಥೆಗಳು ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡುತ್ತ ಇರುತ್ತವೆಯೇ?

ಸಮಸ್ಯೆಗಳಿಗೆ ಕಾಯಂ ಪರಿಹಾರ ಕಂಡುಕೊಳ್ಳುವುದು ಆಡಳಿತಕ್ಕೆ ಬೇಕಿರುವುದಿಲ್ಲವೇ? ಅದು ತೇಪೆ ಹಾಕುವ ಕೆಲಸವನ್ನು ಮಾತ್ರ ಮಾಡುತ್ತ ಇರುತ್ತದೆಯೇ? ಸಾರ್ವಜನಿಕರ ಹಣ ಸೋರಿ ಹೋಗುವುದು ಹೀಗೆ.

ವಿಚಿತ್ರ ಎಂದರೆ ಪಾಲಿಕೆಯಲ್ಲಿ ಬಿಜೆಪಿಯವರು ಆಡಳಿತ ಮಾಡಿದಾಗಲೂ ಹೀಗೆಯೇ ಆಗುತ್ತದೆ, ಕಾಂಗ್ರೆಸ್‌ ಮತ್ತು ಜನತಾದಳದವರು ಕೂಡಿ ಆಡಳಿತ ಮಾಡುತ್ತಿರುವಾಗಲೂ ಅದೇ ಪುನರಾವರ್ತನೆ ಆಗುತ್ತದೆ.

ಬಿಜೆಪಿಯವರ ಕಾಲದಲ್ಲಿಯೂ ಕಸ ಕಾಡಿತು. ಈಗ ಕಾಂಗ್ರೆಸ್ಸಿಗರ ಕಾಲದಲ್ಲಿಯೂ ಕಾಡುತ್ತಿದೆ. ಆಗಲೂ ಕಸದಲ್ಲಿ ದುಡ್ಡು ಮಾಡಿಕೊಳ್ಳುವವರು ಇದ್ದರು. ಈಗಲೂ ಇದ್ದಾರೆ. ಅಂದರೆ, ಸರ್ಕಾರಗಳು ಬದಲಾಗುತ್ತವೆ.

ಆಡಳಿತ ಶೈಲಿ ಬದಲಾಗುವುದಿಲ್ಲ ಎಂದು ನಾವು ಅರ್ಥ ಮಾಡಿಕೊಳ್ಳಬಹುದೇ? ಆಡಳಿತ ಎಂದರೆ ಸಾರ್ವಜನಿಕರ ಜೀವನವನ್ನು ಸಹನೀಯ ಮಾಡುವುದು ಎಂದಲ್ಲವೇ? ಅದನ್ನು ಮಾಡುವುದು ಹೇಗೆ?

ಮುಖ್ಯಮಂತ್ರಿಗಳು ನಿಯತವಾಗಿ ಜನತಾದರ್ಶನ ಮಾಡುತ್ತಾರೆ. ಅಲ್ಲಿ ಅವರಿಗೆ ಜನರ ಜೊತೆಗೆ ತಮ್ಮ ಆಡಳಿತದ ನೇರ ‘ದರ್ಶನ’ವೂ ಆಗುತ್ತದೆ. ಎಲ್ಲಿ ಸಮಸ್ಯೆ ಇದೆ ಎಂದು ಅರ್ಥವಾಗುತ್ತದೆ.

ಎಲ್ಲಿಯೋ ಯಾವುದೋ ಗ್ರಾಮಕಚೇರಿಯಲ್ಲಿಯೋ ಅಥವಾ ತಾಲ್ಲೂಕು ಕಚೇರಿಯಲ್ಲಿಯೋ ಆಗುವ ಕೆಲಸವನ್ನು ಮಾಡಿಕೊಡಿ ಎಂದು ಬೆಂಗಳೂರಿನವರೆಗೆ ಅದೂ ಮುಖ್ಯಮಂತ್ರಿಯ ಬಳಿಗೆ ಜನರು ಅರ್ಜಿ ಹಿಡಿದುಕೊಂಡು ಏಕೆ ಬರಬೇಕು?

ಸಹಜ ಆಡಳಿತ ವ್ಯವಸ್ಥೆ ಎಂಬುದು ಕುಸಿದು ಹೋಗಿರುವ ಕಾರಣಕ್ಕಾಗಿ ಅವರು ಇಷ್ಟು ದೂರ ಬರುತ್ತಾರೆ. ಆಡಳಿತದಲ್ಲಿ ಇರುವ ಗೊಂದಲದ ಪರಿಹಾರಕ್ಕಾಗಿ ಅವರು ಇಷ್ಟು ದೂರ ಬರುತ್ತಾರೆ. ಅದಕ್ಕೆ ಪರಿಹಾರ ಎಂದರೆ ಆಗೀಗ ನಡೆಯುವ ಕಾರ್ಯದರ್ಶಿಗಳ, ಜಿಲ್ಲಾಧಿಕಾರಿಗಳ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಭೆಗಳು ಅಲ್ಲ.

ಈ ಸಭೆಗಳಲ್ಲಿ ಅವರಿಗೆ ಸಿಗುವ ‘ಚಾಟಿ’, ‘ತರಾಟೆ’ಗಿಂತ ಭಿನ್ನವಾದ ಮಾರ್ಗದರ್ಶನ ಏನು ಸಿಗುತ್ತದೆ? ಶಾಸಕಾಂಗ ಎಂಬುದು ನೀತಿ ನಿರೂಪಣೆಗೆ, ಕಾರ್ಯಾಂಗ ಎಂಬುದು ಅದರ ಜಾರಿಗೆ ಸೀಮಿತಗೊಳ್ಳದೇ ಇದ್ದರೆ ಆಡಳಿತಕ್ಕೆ ಕಾಯಕಲ್ಪ ಎಂಬುದು ಸಿಗುವುದಿಲ್ಲ.

ಆಡಳಿತ ಮಾಡುವವರಿಗೆ ದೂರದೃಷ್ಟಿ ಇರಬೇಕು. ಈಗಿನ ಆಡಳಿತಗಾರರಿಗೆ ಯಾರಿಗೂ ಅದು ಇಲ್ಲ. ಅವರಿಗೆ ಐದು ವರ್ಷಗಳ ಆಚೆ ಏನೂ ಕಾಣುವುದಿಲ್ಲ. ಈಗ ಸರ್ಕಾರದಲ್ಲಿ ಕನಿಷ್ಠ ಎರಡು ಲಕ್ಷ ಹುದ್ದೆಗಳು ಖಾಲಿ ಇವೆ.

ಅವುಗಳನ್ನು ತುಂಬದೇ ಇದ್ದರೆ ಆಡಳಿತಕ್ಕೆ ಚುರುಕು ಮತ್ತು ವೇಗ ಬರುವುದು ಸಾಧ್ಯವಿಲ್ಲ. ಆಡಳಿತದಲ್ಲಿ ನಿಯತವಾಗಿ ಯುವ ರಕ್ತವನ್ನು ತುಂಬುತ್ತಲೇ ಇರಬೇಕು. ನೇಮಕಾತಿ ನಿಂತು ಹೋದರೆ ಹೊಸ ರಕ್ತ ಬಂದು ಸೇರಿಕೊಳ್ಳುವುದಿಲ್ಲ.

ಸರ್ಕಾರದಲ್ಲಿ ತೆರವಾಗಿರುವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ವಿಧಾನವೂ ಪಾರದರ್ಶಕವಾಗಿರಬೇಕು ಮತ್ತು ಪ್ರಾಮಾಣಿಕವಾಗಿರಬೇಕು. ಸರ್ಕಾರಕ್ಕೆ ಅದು ನಿಜವಾಗಿಯೂ ಬೇಕಾಗಿದೆಯೇ? ಹಾಗೆ ಅನಿಸುವುದಿಲ್ಲ. ಯಾರನ್ನೋ ಯಾವುದೋ ಕಾರಣಕ್ಕಾಗಿಯೋ, ಅವರಿಗೆ ಸಲ್ಲದ, ಸೂಕ್ತವಲ್ಲದ, ಜಾಗಗಳಲ್ಲಿ ತಂದು ಕೂಡಿಸಲು ಇದೇ ಸರ್ಕಾರ ಪ್ರಯತ್ನ ಮಾಡುತ್ತಿದೆ.

ವಿಚಿತ್ರ ಎಂದರೆ ಮತ್ತೆ ಮತ್ತೆ ಮುಖಭಂಗವಾದರೂ ತನ್ನ ಪ್ರಯತ್ನವನ್ನು ಛಲಬಿಡದ ತ್ರಿವಿಕ್ರಮನ ಹಾಗೆ ಮುಂದುವರಿಸಿದೆ! ಕಾರಣ ಏನಿರಬಹುದು? ಸರ್ಕಾರ ಕೊಡುವ ಕಾರಣಗಳನ್ನು, ಸಮರ್ಥನೆಗಳನ್ನು ಯಾರೂ ನಂಬುವುದಿಲ್ಲ.

ಯಾರಿಗಾದರೂ ‘ಬಡ್ತಿ’ ಕೊಡಬೇಕು ಎಂದರೆ ಅವರಿಗೆ ಅರ್ಹತೆ ಇರಬೇಕು. ಅವರು ಕಳೆದ ನಾಲ್ಕು ವರ್ಷಗಳಲ್ಲಿ ಏನು ಕೆಲಸ ಮಾಡಿದರು ಎಂಬುದು ಕಣ್ಣಿಗೆ ಕಟ್ಟುವಂತೆ ಇರಬೇಕು. ದಕ್ಷ ಅಧಿಕಾರಿಗಳನ್ನು ಒಂದು ವರ್ಷಕ್ಕೆ, ಎರಡು ವರ್ಷಕ್ಕೆ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಕಾಲ್ಚೆಂಡಿನಂತೆ ಒದೆಯುತ್ತ ಇದ್ದು ಇನ್ನೊಂದು ಕಡೆ ಅಪ್ರಾಮಾಣಿಕರನ್ನು,

ಅದಕ್ಷರನ್ನು, ಕೇವಲ ‘ಮ್ಯಾನೇಜ್‌’ಮಾಡುವವರನ್ನು ದೀರ್ಘ ಅವಧಿವರೆಗೆ ಆಯಕಟ್ಟಿನ ಜಾಗದಲ್ಲಿ ಬಿಡುವುದಕ್ಕೂ ಕಾರಣಗಳು ತಿಳಿಯುವುದಿಲ್ಲ. ರಸ್ತೆಯಲ್ಲಿ ಇರುವ ನಮ್ಮಂಥ ಸಾಮಾನ್ಯ ಜನರಿಗೆ ಅನೇಕ ಸಂಗತಿಗಳು ಅರ್ಥವಾಗುವುದಿಲ್ಲ ಎಂದು ಸುಮ್ಮನಾಗಬೇಕೋ ಏನೋ!

ಯಾವ ಸರ್ಕಾರಕ್ಕಾದರೂ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ಬೇಕು ಎಂದು ಅನಿಸುವುದಿಲ್ಲ. ಅವರಿಗೆ ‘ಮ್ಯಾನೇಜರು’ಗಳು ಬೇಕು. ಮ್ಯಾನೇಜರುಗಳನ್ನು ಸಾಕಿಕೊಂಡು ಆಡಳಿತ ಚೆನ್ನಾಗಿರಬೇಕು ಮತ್ತು ಅದು ಜನಪರವಾಗಿರಬೇಕು ಎಂದು ಬಯಸುವುದು ಆತ್ಮವಂಚನೆ. ರಾಜಕಾರಣಿಗಳಿಗೆ ಇರುವಷ್ಟು ಆತ್ಮವಂಚನೆ ಗುಣ ಇನ್ನು ಯಾರಿಗೆ ಇರಲು ಸಾಧ್ಯ? ಅವರು ಹೇಳುವುದು ಒಂದು, ಮಾಡುವುದು ಇನ್ನೊಂದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT