ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಮೂರ್ಖರು ಮತ್ತು ತಿಕ್ಕಲರ ನಡುವಿನ ಪೈಪೋಟಿ

Last Updated 18 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದಲ್ಲಿ ಕಾಣಿಸಿಕೊಂಡಿರುವ  ಬಿಕ್ಕಟ್ಟಿಗೆ ಎರಡು ಮುಖಗಳಿವೆ. ಮೊದಲನೆಯದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ರಾಜಕೀಯ ತಿಕ್ಕಲುತನ, ಎರಡನೆಯದು ಕಾಂಗ್ರೆಸ್ ಪಕ್ಷದ ಮೂರ್ಖತನ.
 
ಈಗಿನ ರಾಜಕೀಯ ಬಿಕ್ಕಟ್ಟಿಗೆ ಮೊದಲನೆಯದಕ್ಕಿಂತ ಎರಡನೆಯದ್ದೇ ಮುಖ್ಯ ಕಾರಣ. ಅಣ್ಣಾಹಜಾರೆ ಚಳುವಳಿಯಿಂದ ಹಿಡಿದು ರೈಲ್ವೆ ಬಜೆಟ್ ಪ್ರಹಸನದವರೆಗೆ ಕಾಂಗ್ರೆಸ್ ಕಾರ್ಯವೈಖರಿಯನ್ನು ನೋಡುತ್ತಾ ಬಂದರೆ ಆ ಪಕ್ಷದ ಮೂರ್ಖ ನಡವಳಿಕೆಗಳಿಗೆ ಇನ್ನಷ್ಟು ಸಮರ್ಥನೆಗಳು ಸಿಗುತ್ತವೆ.

ರಾಜಕೀಯದಲ್ಲಿ ಎದುರಾಳಿಗಳಿಗೆ ಬಡಿಯುವುದು, ಬಡಿಸಿಕೊಳ್ಳುವುದು ಇದ್ದೇ ಇರುತ್ತದೆ. ಆದರೆ ಮೂರ್ಖರು ಮಾತ್ರ ಎದುರಾಳಿಯ ಕೈಗೆ ಬಡಿಗೆ ಕೊಟ್ಟು ಬಡಿಸಿಕೊಳ್ಳುತ್ತಾರೆ. ಮಮತಾ ಬ್ಯಾನರ್ಜಿ ಜತೆಗಿನ ಸಂಘರ್ಷದಲ್ಲಿ ಇದನ್ನೇ ಕಾಂಗ್ರೆಸ್ ಮಾಡಿಕೊಂಡಿರುವುದು.

ಭಾರತದ ರಾಜಕೀಯದ ನಾಲ್ವರು ಕುಮಾರಿಯರಾದ ಜೆ.ಜಯಲಲಿತಾ, ಮಾಯಾವತಿ, ಮಮತಾ ಬ್ಯಾನರ್ಜಿ ಮತ್ತು ಉಮಾಭಾರತಿ ಜತೆಗಿನ ರಾಜಕೀಯ ಸಂಬಂಧ ಎಷ್ಟು ಕಠಿಣ ಎಂಬುದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ. ತನ್ನ ಒಂದು ಕಣ್ಣು ಹೋದರೂ ಸರಿ, ವಿರೋಧಿಯ ಎರಡು ಕಣ್ಣು ಕಿತ್ತುಹಾಕಬೇಕೆನ್ನುವಷ್ಟು ಹಟಮಾರಿಗಳು ಈ ನಾಯಕಿಯರು.

ಇವರ ಅತಿರೇಕದ ನಡವಳಿಕೆಗಳಿಂದ ಆಗಿರುವ ರಾಜಕೀಯ ಅವಾಂತರಗಳನ್ನು ಜನರೂ ಮರೆತಿರಲಾರರು. ಉತ್ತರಪ್ರದೇಶದಲ್ಲಿ ಬಿಜೆಪಿ ಸೋತರೆ ಗಂಗಾನದಿಯಲ್ಲಿ ಮುಳುಗಿ ಸಾಯುವುದಾಗಿ ಮೊನ್ನೆ ಮೊನ್ನೆ ಉಮಾಭಾರತಿ ಸಾರ್ವಜನಿಕ ಸಭೆಯಲ್ಲಿ ಪ್ರತಿಜ್ಞೆ ಮಾಡಿದ್ದರು. ಆ ಪ್ರತಿಜ್ಞೆಯನ್ನು ನೆರವೇರಿಸಿದ ಸುದ್ದಿ ಇಲ್ಲಿಯವರೆಗೆ ಬಂದಿಲ್ಲ.

ಅಟಲಬಿಹಾರಿ ವಾಜಪೇಯಿಯವರು ಈ ನಾಲ್ವರು ಕುಮಾರಿಯರಿಂದ ಸಾಕಷ್ಟು ತಲೆನೋವು ಅನುಭವಿಸಿದ್ದಾರೆ. ಮಾತನಾಡುವ ಸ್ಥಿತಿಯಲ್ಲಿ ಇದ್ದಿದ್ದರೆ  ಅವರು ಮನಮೋಹನ್ ಸಿಂಗ್ ಅವರನ್ನು ಕರೆದು  ಅನುಭವವನ್ನು ಹಂಚಿಕೊಳ್ಳುತ್ತಿದ್ದರೇನೋ? ಆದ್ದರಿಂದ ಕಾಂಗ್ರೆಸ್ ಕೀಟಳೆಗೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ಅನಿರೀಕ್ಷಿತವೇನಲ್ಲ.

ಅವರು ಇರುವುದೇ ಹಾಗೆ, ಅವರ ಜತೆ ಮೈತ್ರಿ ಬೇಕಿದ್ದರೆ ಆ ಸ್ಥಿತಿಯಲ್ಲಿಯೇ ಒಪ್ಪಿಕೊಂಡು ಸಂಬಂಧವನ್ನು ಉಳಿಸಿಕೊಂಡು ಹೋಗಬೇಕು, ಇಲ್ಲವಾದರೆ ಅದನ್ನು ಕಡಿದುಕೊಳ್ಳಬೇಕು. ಇದಕ್ಕೆ ಬದಲಾಗಿ ಸುಮ್ಮನೆ ಚಿವುಟಲು ಹೋದರೆ ಮುಸುಡಿಗೆ ಬಡಿಸಿಕೊಳ್ಳಬೇಕಾಗುತ್ತದೆ.

ಪೆಟ್ರೋಲ್ ದರ ಏರಿಕೆಯಿಂದ ಎನ್‌ಎಟಿಸಿ ರಚನೆವರೆಗೆ ಯುಪಿಎ ಸರ್ಕಾರದ ಹಲವಾರು ಪ್ರಮುಖ ನೀತಿ-ನಿರ್ಧಾರಗಳನ್ನು ತಡೆಹಿಡಿಯುವ ಮೂಲಕ ಮಮತಾ ಬ್ಯಾನರ್ಜಿ ತನ್ನನ್ನು ನಿರ್ಲಕ್ಷಿಸಬೇಡಿ ಎಂಬ ಸಂದೇಶವನ್ನು ಕಳುಹಿಸುತ್ತಲೇ ಇದ್ದಾರೆ.

ವಿರೋಧಿಸುವುದು ಅವರ ಮೂಲ ಸ್ವಭಾವ, ಜತೆಗೆ ಪಶ್ಚಿಮ ಬಂಗಾಳದಲ್ಲಿ ತನ್ನ ಪಕ್ಷದ ನೆಲೆಯನ್ನು ಉಳಿಸಿಕೊಳ್ಳಲು ಈ ರೀತಿಯ ಕಾಂಗ್ರೆಸ್ ವಿರೋಧದ ಸಂದೇಶವನ್ನು ಕಳುಹಿಸುವುದು ಅವರಿಗೂ ಅನಿವಾರ್ಯವಾಗಿರಲೂಬಹುದು.

ಇದನ್ನು ಅರ್ಥಮಾಡಿಕೊಂಡು ಈ ಒಳಜಗಳ ಬೀದಿಗೆ ಬರದಂತೆ ನೋಡಿಕೊಳ್ಳಬೇಕಾಗಿದ್ದ ಜವಾಬ್ದಾರಿ ಕಾಂಗ್ರೆಸ್ ಪಕ್ಷದ್ದಾಗಿತ್ತು. ಆದರೆ ಕಾಂಗ್ರೆಸ್ ನಾಯಕರು ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿಯೇ ಸಮಾಜವಾದಿ ಪಕ್ಷದ ಜತೆಗಿನ ಸಂಭವನೀಯ ಮೈತ್ರಿಯ ಗಾಳಿಸುದ್ದಿಯನ್ನು ತೇಲಿಬಿಟ್ಟು ಮಮತಾ ಅವರನ್ನು ಇನ್ನಷ್ಟು ಕೆರಳಿಸಿದ್ದರು.

ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ರೈಲ್ವೆ ಬಜೆಟ್ ದಿಟ್ಟತನದ ಪ್ರಯತ್ನ ಎನ್ನುವುದರಲ್ಲಿ ಅನುಮಾನ ಇಲ್ಲವೇ ಇಲ್ಲ.  ರೈಲ್ವೆಸಚಿವ ದಿನೇಶ್ ತ್ರಿವೇದಿ ಅವರ ಪಕ್ಷದ ನಾಯಕಿಯಾಗಿರುವ ಮಮತಾ ಬ್ಯಾನರ್ಜಿಯವರೂ ಸೇರಿದಂತೆ ಕಳೆದ ಹತ್ತುವರ್ಷಗಳ ಅವಧಿಯ ಎಲ್ಲ ರೈಲ್ವೆ ಸಚಿವರೂ ಕೇವಲ ಜನಪ್ರಿಯತೆಗಾಗಿ ಪ್ರಯಾಣ ದರವನ್ನು ಹೆಚ್ಚಿಸದೆ ಇಲಾಖೆಯನ್ನು ದಿವಾಳಿ ಸ್ಥಿತಿಗೆ ತಂದು ನಿಲ್ಲಿಸಿದ್ದರು. ತ್ರಿವೇದಿಯವರು ಈ ಜನವಿರೋಧಿ ಪರಂಪರೆಯನ್ನು ಮುರಿದು ಬಜೆಟ್ ಮಂಡಿಸಿದ್ದಾರೆ.

ಸದಾ ಅಭದ್ರತೆಯಿಂದ ನರಳುತ್ತಿರುವ ಮಮತಾ ಬ್ಯಾನರ್ಜಿ  ಸಹೋದ್ಯೋಗಿಯ ಇಂತಹ ದಿಟ್ಟತನವನ್ನು ಸಹಿಸಿಕೊಳ್ಳುವ ಸ್ವಭಾವದವರಲ್ಲ. ಅವರದ್ದು ಆಂತರಿಕ ಪ್ರಜಾತಂತ್ರ ಇಲ್ಲದ ಏಕವ್ಯಕ್ತಿ ಕೇಂದ್ರಿತ ಪಕ್ಷ.ಈ ವಿಷಯದಲ್ಲಿ ಅವರು ಜಯಲಲಿತಾ ಮತ್ತು ಮಾಯಾವತಿ ಪರಂಪರೆಗೆ ಸೇರಿದವರು.

ರೈಲ್ವೆ ಖಾತೆಯೊಂದನ್ನು ಹೊರತುಪಡಿಸಿ ಬೇರೆ ಯಾವ ಖಾತೆಯಲ್ಲಿಯೂ ತಮ್ಮ ಪಕ್ಷದ ಸದಸ್ಯರನ್ನು ಸಂಪುಟ ಸಚಿವರಾಗಲು ಬಿಡದಷ್ಟು ಸಣ್ಣ ಮನಸ್ಸಿನ ನಾಯಕಿ ಮಮತಾ.

ಇವೆಲ್ಲವೂ ಕಾಂಗ್ರೆಸ್ ನಾಯಕರಿಗೆ ಗೊತ್ತಿದ್ದ ಕಾರಣ ಅವರು ಇನ್ನಷ್ಟು ಎಚ್ಚರಿಕೆಯಿಂದ ವರ್ತಿಸಬೇಕಿತ್ತು. ಪ್ರಯಾಣ ದರ ಹೆಚ್ಚಳದಂತಹ ಪ್ರಮುಖ ನಿರ್ಧಾರವನ್ನು ಬಜೆಟ್‌ನಲ್ಲಿ ಪ್ರಕಟಿಸಲು ಹೊರಟಾಗ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷದ ಜತೆ ಸಮಾಲೋಚನೆ ನಡೆಸುವುದು ಬೇಡವೇ? ಅದೂ ಅದೇ ಪಕ್ಷದವರು ರೈಲ್ವೆ ಸಚಿವರಾಗಿದ್ದಾಗ. ಅಂತಹದ್ದೊಂದು ಮಾತುಕತೆ ನಡೆಸಿದ್ದರೆ ಸರ್ಕಾರ ಈಗಿನ ಮುಜುಗರದ ಪರಿಸ್ಥಿತಿಯನ್ನು ಎದುರಿಸಬೇಕಾಗಿರಲಿಲ್ಲ.

ಆದರೆ ಅದು ಮಾಡಿದ್ದೇನು? ಸ್ವಂತ ಬಲದಿಂದ ಮುನ್ಸಿಪಾಲಿಟಿ ಚುನಾವಣೆಯಲ್ಲಿಯೂ ಗೆಲ್ಲಲಾಗದ ದಿನೇಶ್ ತ್ರಿವೇದಿ ಎಂಬ ದುರ್ಬಲ ನಾಯಕನನ್ನು ಮುಂದಿಟ್ಟುಕೊಂಡು ಮಮತಾ ಬ್ಯಾನರ್ಜಿ ವಿರುದ್ಧ ದಾಳಿ ಮಾಡಲು ಹೊರಟಿತು. ಸಂಸದೀಯ ನಡವಳಿಕೆಗಳ ಪ್ರಕಾರ ಕೇಂದ್ರ ಸಂಪುಟದ ಸಚಿವರು ತಮ್ಮ ಖಾತೆಯ ನಿರ್ವಹಣೆಯಲ್ಲಿ ಪಕ್ಷದ ನಾಯಕರ ಸಲಹೆಯನ್ನು ಪಡೆಯಬೇಕಾಗಿಲ್ಲ ಎನ್ನುವುದು ನಿಜ.

ಆದರೆ ಒಂದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿನ ಅಭ್ಯರ್ಥಿಯ ಆಯ್ಕೆಗಾಗಿಯೂ ಸೋನಿಯಾ ಗಾಂಧಿಯವರ ಮನೆ ಬಾಗಿಲು ತಟ್ಟಬೇಕಾಗಿರುವ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷ ಮಿತ್ರಪಕ್ಷದಿಂದ ಇಷ್ಟೊಂದು ವಿಶಾಲ ಮನಸ್ಸನ್ನು ಹೇಗೆ ನಿರೀಕ್ಷಿಸಲು ಸಾಧ್ಯ? 

 ಈಗಿನ ಬಿಕ್ಕಟ್ಟಿನಲ್ಲಿ ಮಮತಾ ಬ್ಯಾನರ್ಜಿ ಅವರ ತಿಕ್ಕಲುತನದ ಕೊಡುಗೆಯೂ ದೊಡ್ಡದು. ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರುವ ಮೊದಲು ಈ ತಿಕ್ಕಲುತನದ ಪರಿಣಾಮವನ್ನು ಅವರು ನಿರ್ವಹಿಸಿದ ಖಾತೆಗಳು ಮತ್ತು ಪಕ್ಷ ಮಾತ್ರ ಅನುಭವಿಸುತ್ತಿತ್ತು, ಈಗ ಇಡೀ ದೇಶ  ಅನುಭವಿಸುವಂತಾಗಿದೆ. ಮತ್ತೆ ಉಳಿದ ಮೂವರು ಕುಮಾರಿಯರಿಗೆ ಹೋಲಿಸುವುದಾದರೆ ಅವರೆಲ್ಲರಿಗಿಂತ ಮಮತಾ ಬ್ಯಾನರ್ಜಿ ಪ್ರಾಮಾಣಿಕರು ಮತ್ತು ಸರಳ ಜೀವಿ.

ಈ ಎರಡು ಗುಣಗಳನ್ನು ಸನ್ಯಾಸಿನಿ ಎಂದು ಹೇಳಿಕೊಳ್ಳುತ್ತಿರುವ ಉಮಾಭಾರತಿಯವರಲ್ಲಿಯೂ ಕಾಣಲಾಗದು, ಜಯಲಲಿತಾ ಮತ್ತು ಮಾಯಾವತಿ ಅವರಿಗೆ ಅಂಟಿಕೊಂಡಿರುವ ಭ್ರಷ್ಟಾಚಾರದ ಕಳಂಕ ಮತ್ತು ಐಷಾರಾಮಿ ಜೀವನದ ಶೋಕಿಗಳು ಮಮತಾ ಬ್ಯಾನರ್ಜಿ ಅವರಿಗಿಲ್ಲ. ರಾಜಕೀಯದಲ್ಲಿರುವ ಹೆಣ್ಣು-ಗಂಡು ಎಲ್ಲರನ್ನೂ ಸೇರಿಸಿ ಹೇಳುವುದಾದರೆ ಸರಳ ಜೀವನದ ವಿಷಯದಲ್ಲಿ ಮಮತಾ ಬ್ಯಾನರ್ಜಿಯವರಿಗೆ ಮತ್ತೊಬ್ಬರು ಸಾಟಿ ಇಲ್ಲ.
 
ಆದರೆ ಇವುಗಳ ಜತೆ ಮಾಯಾವತಿ ಮತ್ತು ಜಯಲಲಿತಾ ನಾಯಕಿಯರು ಬಿಗಿಯಾದ ಆಡಳಿತಕ್ಕಾಗಿಯೂ ಖ್ಯಾತಿ ಹೊಂದಿದವರು, ಆ ಸಾಮರ್ಥ್ಯ ಮಮತಾ ಬ್ಯಾನರ್ಜಿ ಅವರಲ್ಲಿಲ್ಲ. ಪಶ್ಚಿಮ ಬಂಗಾಳದ ಜನತೆ ಎಡಪಕ್ಷಗಳ ಮೇಲಿನ ಸಿಟ್ಟಿನಿಂದ ಮಮತಾ ಬ್ಯಾನರ್ಜಿ ಅವರ ಪಕ್ಷವನ್ನು ಆಯ್ಕೆ ಮಾಡಿದ್ದಾರೆ, ಬೇರೆ ನಿರೀಕ್ಷೆಗಳೂ ಅವರಿಗೂ ಇದ್ದಿರಲಾರದು.
 
ಎಡಪಕ್ಷಗಳನ್ನು ಅಭಿವೃದ್ಧಿ ವಿರೋಧಿಗಳೆನ್ನುವುದಾದರೆ ಮಮತಾ ಬ್ಯಾನರ್ಜಿ ಯಾವ ಅಭಿವೃದ್ಧಿಯ ಹರಿಕಾರರು? ಅಭಿವೃದ್ಧಿಪರ ನಿಲುವು ಅವರ ಯಾವ ಮಾತು-ಕೃತಿಗಳಲ್ಲಿ ವ್ಯಕ್ತವಾಗಿದೆ? ಮೂರು ಬಾರಿ ರೈಲ್ವೆ ಸಚಿವರಾಗಿ, ಒಂದು ಬಾರಿ ಕಲ್ಲಿದ್ದಲು ಮತ್ತು ಗಣಿ ಸಚಿವರಾಗಿ ಮಮತಾ ಬ್ಯಾನರ್ಜಿ ಮಾಡಿರುವ ಸಾಧನೆಗಳು ಯಾರ ನೆನಪಿನಲ್ಲಾದರೂ ಇವೆಯೇ?

ಮಮತಾ ಬ್ಯಾನರ್ಜಿ ಅವರು ಬುದ್ದಿವಂತೆಯಾಗಿದ್ದರೆ, ಪಶ್ಚಿಮ ಬಂಗಾಳದ ಜನತೆಯ ಬಗ್ಗೆ ಕಾಳಜಿ ಹೊಂದಿದ್ದರೆ ಕೇಂದ್ರ ಸರ್ಕಾರದ ಜತೆ ಕಾಲು ಕೆರೆದು ಜಗಳ ಮಾಡುತ್ತಿರಲಿಲ್ಲ. ಕನಿಷ್ಠ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರ ಕಾರ್ಯಶೈಲಿಯನ್ನಾದರೂ ಅವರು ಅನುಸರಿಸಬಹುದಿತ್ತು.
 
ಎನ್‌ಡಿಎ ನಾಯಕತ್ವ ಹೊಂದಿರುವ ಬಿಜೆಪಿಯ ಎಲ್ಲ ನೀತಿ-ನಿರ್ಧಾರಗಳನ್ನು ನಿತೀಶ್‌ಕುಮಾರ್ ಈಗಲೂ ಒಪ್ಪುವುದಿಲ್ಲ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಬಿಹಾರಕ್ಕೆ ಕಾಲಿಡಲು ಅವರು ಬಿಟ್ಟಿಲ್ಲ. ಆದರೆ ಅದೇ ವೇಳೆ ಎನ್‌ಡಿಎ ಜತೆ ನೇರಾನೇರ ಗುದ್ದಾಟವನ್ನೂ ಅವರು ನಡೆಸುತ್ತಿಲ್ಲ.
 
ವಿರೋಧಪಕ್ಷವಾದ ಕಾಂಗ್ರೆಸ್ ಜತೆಯಲ್ಲಿಯೂ ಅವರು ಸಂಘರ್ಷಕ್ಕೆ ಇಳಿಯದೆ ರಾಜ್ಯದ ಅಭಿವೃದ್ಧಿಗೆ ಬೇಕಾದ ಕೇಂದ್ರದ ನೆರವನ್ನು ಉಪಾಯದಿಂದ ಪಡೆದುಕೊಂಡು ಸದ್ದಿಲ್ಲದಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ.
 
ಅಭಿವೃದ್ಧಿಯ ಮಾನದಂಡದಲ್ಲಿ ಬಿಹಾರಕ್ಕಿಂತ ಪಶ್ಚಿಮ ಬಂಗಾಳವೇನೂ ಬಹಳ ಮುಂದಿಲ್ಲ. ಅಲ್ಲಿನ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ನೀಡಬೇಕೆನ್ನುವ ತಮ್ಮ ಹಳೆಯ ಬೇಡಿಕೆಯನ್ನು ಮಮತಾ ಬ್ಯಾನರ್ಜಿಯವರೇ ಮರೆತುಬಿಟ್ಟಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿಯೂ ಅದರ ಉಲ್ಲೇಖ ಇದ್ದಂತಿಲ್ಲ. ಇಂತಹ ವಿಷಯಗಳನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷದ ಜತೆ ಚೌಕಾಶಿ ನಡೆಸಿದ್ದರೆ ಪಶ್ಚಿಮ ಬಂಗಾಳದ ಜನರಾದರೂ ಅವರ ಬೆಂಬಲಕ್ಕೆ ನಿಲ್ಲುತ್ತಿದ್ದರು.
 
ರಾಜಕೀಯವಾಗಿ ಪ್ರಜ್ಞಾವಂತರಾಗಿರುವ ಆ ರಾಜ್ಯದ ಜನತೆ ಮಮತಾ ಬ್ಯಾನರ್ಜಿ ಅವರ ಈಗಿನ ತಿಕ್ಕಲು ನಡವಳಿಕೆಯನ್ನು ಬಹಳ ದಿನ ಸಹಿಸಿಕೊಳ್ಳಲಾರರು. ಇದರಿಂದಾಗಿ ಎಡಪಕ್ಷಗಳು ಪೂರ್ಣವಾಗಿ ಐದು ವರ್ಷ ವಿರೋಧಪಕ್ಷದ ಸ್ಥಾನದಲ್ಲಿಯೇ ಕೂರಬೇಕಾದ ಪರಿಸ್ಥಿತಿ ಇರಲಾರದು.

ಮಮತಾ ಬ್ಯಾನರ್ಜಿ ಅವರಿಂದ ಬಿಡುಗಡೆ ಪಡೆಯಲು ಕಾಂಗ್ರೆಸ್ ಪಕ್ಷ ಹೂಡಿರುವ ತಂತ್ರ ಕೂಡಾ ಅಷ್ಟೇ ಆತ್ಮಹತ್ಯಾಕಾರಿಯಾದುದು. ಯಾವ ಪಕ್ಷದ ಬಲದಿಂದ ಕಾಂಗ್ರೆಸ್ ಪಕ್ಷ ಮಮತಾ ಬ್ಯಾನರ್ಜಿ ಅವರನ್ನು ಎದುರು ಹಾಕಿಕೊಳ್ಳಲು ಹೊರಟಿದೆಯೋ ಆ ಪಕ್ಷ ಇನ್ನೂ ಅಪಾಯಕಾರಿ.
 
ಬ್ಯಾನರ್ಜಿ ಮೂಲತಃ ಕಾಂಗ್ರೆಸಿನವರು, ಒಂದು ರೀತಿಯಲ್ಲಿ ಅವರು ಅರ್ಧ ಕಾಂಗ್ರೆಸ್. ಅಷ್ಟು ಮಾತ್ರವಲ್ಲ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡಮಟ್ಟದ ನಿರೀಕ್ಷೆಗಳೂ ಇಲ್ಲ. ಅಲ್ಲಿ ಅದು ಆಡಳಿತ ಪಕ್ಷವನ್ನು ಹಿಂಬಾಲಿಸಿಕೊಂಡು ಇರುವುದರಿಂದ ಅದಕ್ಕೆ ನಷ್ಟವೂ ಇಲ್ಲ.
 
ಆದರೆ ಸಮಾಜವಾದಿ ಪಕ್ಷದ ಜತೆಗಿನ ಮೈತ್ರಿ ಅಷ್ಟು ಸರಳವಾಗಿಲ್ಲ. ಕಾಂಗ್ರೆಸ್ ವಿರೋಧಿ ರಾಜಕಾರಣವನ್ನೇ ಮಾಡುತ್ತಾ ಬಂದ ಮುಲಾಯಂಸಿಂಗ್ ಯಾದವ್ ಬದಲಾಗುವುದು ಸಾಧ್ಯವೇ ಇಲ್ಲ.

ಇಷ್ಟು ಮಾತ್ರವಲ್ಲ ಉತ್ತರಪ್ರದೇಶವನ್ನು ಮರಳಿ ಗೆಲ್ಲಬೇಕೆಂಬ ಆಸೆಯನ್ನು ಕಾಂಗ್ರೆಸ್ ಹೇಗೆ ಬಿಟ್ಟುಕೊಟ್ಟಿಲ್ಲವೋ ಹಾಗೆ ತೃತೀಯ ರಂಗ ರಚನೆಯ ಪ್ರಯತ್ನವನ್ನು ಮುಲಾಯಂಸಿಂಗ್ ಯಾದವ್ ಅವರೂ ಕೈಬಿಟ್ಟಿಲ್ಲ. ಈ ಸ್ಥಿತಿಯಲ್ಲಿ ಸಮಾಜವಾದಿ ಪಕ್ಷದ ಜತೆಗಿನ ಮೈತ್ರಿ ಎಂದರೆ ಸೆರಗಲ್ಲಿ ಕೆಂಡ ಕಟ್ಟಿಕೊಂಡಂತೆ.

ಈಗಿನ ಬಿಕ್ಕಟ್ಟು ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳಿಗಷ್ಟೇ ಸೀಮಿತವಾಗಿ ಕೊನೆಗೊಳ್ಳುವಂತಹದ್ದಲ್ಲ. ಈಗಿನದ್ದು ಮಾತ್ರವಲ್ಲ ಬಹುಶಃ ಮುಂದಿನದ್ದು ಕೂಡಾ ಮೈತ್ರಿಕೂಟದ ಯುಗ.

ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಯಾವ ಪಕ್ಷ ಕೂಡಾ ಸರಳ ಬಹುಮತಕ್ಕೆ ಬೇಕಾಗುವಷ್ಟು ಸ್ಥಾನಗಳನ್ನು ಗಳಿಸಲು ಸಾಧ್ಯವಾಗಲಾರದು. ಈ ವಾಸ್ತವವನ್ನು ಒಪ್ಪಿಕೊಂಡರೆ ಎಲ್ಲರಿಗೂ ಕ್ಷೇಮ.

ಬದಲಾಗಿರುವ ಕಾಲಕ್ಕೆ ತಕ್ಕ ಹಾಗೆ ಪಕ್ಷಗಳು ಮುಖ್ಯವಾಗಿ ಮೈತ್ರಿಕೂಟದ ನೇತೃತ್ವ ವಹಿಸಿರುವ ಪಕ್ಷ ತಮ್ಮ ರಾಜಕೀಯ ನಡವಳಿಕೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.
 
ಏಕಪಕ್ಷದ ಆಡಳಿತ ಸರ್ವಾಧಿಕಾರಕ್ಕೆ ದಾರಿಮಾಡಿಕೊಟ್ಟಂತೆ ಬಹುಪಕ್ಷಗಳಿಂದ ಕೂಡಿದ ಮೈತ್ರಿಕೂಟ  ಸದಾ ಕೇಂದ್ರ ನಾಯಕತ್ವವನ್ನು ದುರ್ಬಲಗೊಳಿಸಲು  ಪ್ರಯತ್ನಿಸುತ್ತಿರುತ್ತದೆ. ಮೈತ್ರಿಕೂಟದ ನಾಯಕತ್ವ ವಹಿಸಿದ್ದ ಪಕ್ಷ ದುರ್ಬಲವಾದಷ್ಟು ತಾವು ಸುರಕ್ಷಿತ ಎಂಬ ಭಾವನೆ ಪ್ರಾದೇಶಿಕ ಪಕ್ಷಗಳಲ್ಲಿದೆ.

ಯಾವ ಪ್ರಾದೇಶಿಕ ಪಕ್ಷ ಕೂಡಾ ಬಲಿಷ್ಠವಾದ ಕೇಂದ್ರ ಸರ್ಕಾರವನ್ನು ಬಯಸುವುದಿಲ್ಲ, ಅಂತಹ ಸರ್ಕಾರ ತಮ್ಮ ಹಿತಾಸಕ್ತಿಗೆ ಮಾರಕ ಎಂದು ಅವುಗಳು ಅನುಭವದ ಬಲದಿಂದ ತಿಳಿದುಕೊಂಡಿದೆ.

ಆದರೆ ಇಂತಹ ದುರ್ಬಲ ಕೇಂದ್ರ ಸರ್ಕಾರ ದೇಶದ ಹಿತಾಸಕ್ತಿಗೆ ಮಾರಕ. ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಮಾತ್ರವಲ್ಲ ದೇಶ ಕೂಡಾ ಎದುರಿಸಲಿರುವ ಬಹುದೊಡ್ಡ ಸವಾಲು ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT