ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ರಕ್ಷಿಸುವ ಕಾನೂನುಗಳ ಭಂಜನೆಯೇ?

Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕೆಲವು ವಿಶೇಷ ಕಾನೂನುಗಳ 'ದುರ್ಬಳಕೆ' ವಿರುದ್ಧ ನಮ್ಮ ಸುಪ್ರೀಂ ಕೋರ್ಟ್ ನಡೆಸುತ್ತಿರುವ ಅಭಿಯಾನ ಮುಂದುವರಿದಿದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ 'ಮಿತಿಮೀರಿದ ದುರ್ಬಳಕೆ' ತಡೆಯಲು ನ್ಯಾಯಮೂರ್ತಿಗಳಾದ ಎ.ಕೆ. ಗೋಯಲ್ ಮತ್ತು ಯು.ಯು. ಲಲಿತ್ ಅವರಿದ್ದ ದ್ವಿಸದಸ್ಯ ಪೀಠ ಕೆಲವು ದಿನಗಳ ಹಿಂದೆ ಹೊಸ ನಿರ್ದೇಶನಗಳನ್ನು ನೀಡಿತು. ದಲಿತರು ಮತ್ತು ಆದಿವಾಸಿಗಳನ್ನು ರಕ್ಷಿಸಲು ಅತ್ಯಂತ ಮಹತ್ವದ್ದಾದ ಒಂದು ಕಾನೂನಿನ ಬಳಕೆಯನ್ನು ಈ ನಿರ್ದೇಶನಗಳು ತೀರಾ ಸೀಮಿತಗೊಳಿಸುವ ಸಾಧ್ಯತೆಗಳು ಇವೆ.

ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿ ನಿಂತವರು ಹೊಂದಿರುವ ‘ನ್ಯಾಯಸಮ್ಮತ ವಿಚಾರಣೆ’ಯ ಹಕ್ಕುಗಳನ್ನು ರಕ್ಷಿಸುವ ಉದ್ದೇಶ ಈ ನಿರ್ದೇಶನಗಳಿಗೆ ಇದ್ದಿರುವಂತೆ ಮೇಲ್ನೋಟಕ್ಕೆ ಕಾಣುತ್ತದೆ. ನಾಗರಿಕರನ್ನು ತಪ್ಪುತಪ್ಪಾಗಿ ಬಂಧಿಸುವುದು ಅಥವಾ ವಶಕ್ಕೆ ತೆಗೆದುಕೊಳ್ಳುವುದರಿಂದ, ವ್ಯಕ್ತಿ ಸ್ವಾತಂತ್ರ್ಯವೆಂಬ ಸಾಂವಿಧಾನಿಕ ಹಕ್ಕಿಗೆ ಚ್ಯುತಿ ಬರುತ್ತದೆ ಎಂದು ಕೋರ್ಟ್‌ ಹೇಳಿರುವುದು ಸರಿಯಾಗಿದೆ. ವಿಚಾರಣಾ ಪ್ರಕ್ರಿಯೆಯು ಸರಿಯಾಗಿ ನಡೆಯಬೇಕು, ಆರೋಪ ಸಾಬೀತಾಗುವವರೆಗೂ ವ್ಯಕ್ತಿಯನ್ನು ನಿರಪರಾಧಿ ಎಂದೇ ಪರಿಗಣಿಸಬೇಕು ಎನ್ನುವ ತತ್ವಗಳನ್ನು ಈ ನಿರ್ದೇಶನಗಳು ರಕ್ಷಿಸುವಂತಿವೆ. ಇಂತಹ ತತ್ವಗಳನ್ನು ಭಾರತದ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯು ಮತ್ತೆ ಮತ್ತೆ, ಸಲೀಸಾಗಿ ಕಡೆಗಣಿಸಿದೆ ಎಂಬುದನ್ನು ಗಮನಿಸಬೇಕು.

ಆದರೆ, ಈ ತೀರ್ಪಿನಲ್ಲಿ ಇರುವ ಕೆಲವು ತರ್ಕಗಳು ಸೂಕ್ತವಾಗಿಲ್ಲ. ಕೆಲವು ಹೈಕೋರ್ಟ್‌ಗಳು ನೀಡಿರುವ ಆದೇಶಗಳು ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಕಲೆಹಾಕಿರುವ ಅಂಕಿ- ಅಂಶಗಳನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್‌, ದೌರ್ಜನ್ಯ ತಡೆ ಕಾಯ್ದೆಯು ‘ಶೋಷಣೆ ಮತ್ತು ದಬ್ಬಾಳಿಕೆ ನಡೆಸಲು ಪರವಾನಗಿಯಂತೆ ಆಗಿರಬಹುದು’ ಎಂಬ ತೀರ್ಮಾನಕ್ಕೆ ಬಂದಿದೆ. ‘ಇದು ಬ್ಲ್ಯಾಕ್‌ಮೇಲ್‌ ಮಾಡುವ ಅಥವಾ ವೈಯಕ್ತಿಕ ದ್ವೇಷ ತೀರಿಸಿಕೊಳ್ಳುವ ಅಸ್ತ್ರವಾಗಿ’, ‘ಜಾತೀಯತೆಯನ್ನು ನಿರಂತರಗೊಳಿಸುವ’ ಕಾನೂನಾಗಿ ಬದಲಾಗಿರಬಹುದು ಎಂದೂ ತೀರ್ಪಿನಲ್ಲಿ ಹೇಳಲಾಗಿದೆ.

ಹಲವು ನಿರ್ದೇಶನಗಳನ್ನು ನೀಡಿರುವ ಈ ತೀರ್ಪು, ವಿನಾಶಕಾರಿ ಪರಿಣಾಮ ಬೀರಬಹುದಾದ ಒಂದು ನಿರ್ದೇಶನವನ್ನೂ ನೀಡಿದೆ. ಜಾತಿ ಆಧಾರಿತ ತಾರತಮ್ಯ ಮತ್ತು ಹಿಂಸೆಗೆ ಸಂಬಂಧಿಸಿದಂತೆ ಬರುವ ದೂರುಗಳ ವಿಚಾರದಲ್ಲಿ ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌) ದಾಖಲಿಸುವ ಮೊದಲು ಪೊಲೀಸರು ಪ್ರಾಥಮಿಕ ವಿಚಾರಣೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂಬುದು ಆ ನಿರ್ದೇಶನ.

ರಕ್ಷಣೆಗಾಗಿ ರೂಪಿಸಿದ ಕಾನೂನುಗಳ ದುರ್ಬಳಕೆ ವಿರುದ್ಧ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಪ್ರಶ್ನೆಗಳನ್ನು ಎತ್ತಿರುವುದು ಇದೇ ಮೊದಲಲ್ಲ. ಭಾರತೀಯ ದಂಡ ಸಂಹಿತೆಯ (ಐಪಿಸಿ) 498(ಎ) ಸೆಕ್ಷನ್ನಿನ ‘ದುರ್ಬಳಕೆ’ ತಡೆಯಲು ಇದೇ ನ್ಯಾಯಪೀಠ ಕಳೆದ ವರ್ಷದ ಜುಲೈನಲ್ಲಿ ಕೆಲವು ನಿರ್ದೇಶನಗಳನ್ನು ನೀಡಿದೆ. ವರದಕ್ಷಿಣೆಗೆ ಸಂಬಂಧಿಸಿದ ಕಿರುಕುಳ ಪ್ರಕರಣಗಳಲ್ಲಿ ಆರೋಪಿಗಳನ್ನು, ಅನುಮಾನಿತರನ್ನು ಬಂಧಿಸುವ ಮೊದಲು ಆ ದೂರುಗಳ ಸತ್ಯಾಸತ್ಯತೆ ಪರಿಶೀಲಿಸಲು ರಾಜ್ಯ ಸರ್ಕಾರಗಳು ಕುಟುಂಬ ಕಲ್ಯಾಣ ಸಮಿತಿಗಳನ್ನು ರಚಿಸಬೇಕು ಎಂಬುದು ಪೀಠದ ಬಯಕೆ ಆಗಿತ್ತು (ಈ ನಿರ್ದೇಶನವನ್ನು ಪುನರ್‌ ಪರಿಶೀಲನೆಗೆ ಒಳಪಡಿಸಲಾಗುವುದು ಎಂದು ಕೋರ್ಟ್‌ನ ವಿಸ್ತೃತ ಪೀಠವೊಂದು ನಂತರದ ದಿನಗಳಲ್ಲಿ ಹೇಳಿರುವುದು ಒಳ್ಳೆಯ ಬೆಳವಣಿಗೆ).

[ದುರ್ಬಳಕೆ ಆಗುತ್ತಿವೆ ಎಂದು ಮತ್ತೆ ಮತ್ತೆ ಹೇಳಲಾಗುತ್ತಿರುವ ಕಾನೂನುಗಳ ಬಗ್ಗೆ ಒಂದು ಕ್ಷಣ ಆಲೋಚಿಸಿ. ಲೈಂಗಿಕ ಕಿರುಕುಳ ತಡೆಯುವ ಕಾನೂನು (ಕೆಲಸದ ಸ್ಥಳಗಳಲ್ಲಿ ಮಹಿಳೆಯರನ್ನು ರಕ್ಷಿಸಲು ಇರುವಂಥದ್ದು); ವರದಕ್ಷಿಣೆ ವಿರೋಧಿ ಕಾನೂನು (ವಿವಾಹಿತ ಮಹಿಳೆಯರನ್ನು ರಕ್ಷಿಸಲು ಇರುವುದು); ಜಾತಿ ಕಾರಣಕ್ಕೆ ನಡೆಯುವ ದೌರ್ಜನ್ಯಗಳನ್ನು ತಡೆಯುವ ಕಾನೂನು (ದಲಿತರು ಮತ್ತು ಆದಿವಾಸಿಗಳನ್ನು ರಕ್ಷಿಸಲು ರೂಪಿಸಿರುವುದು). ದೌರ್ಜನ್ಯಕ್ಕೆ ಈಡಾಗುವ ಸ್ಥಿತಿಯಲ್ಲಿ ಇರುವವರ ರಕ್ಷಣೆಗೆಂದು ರೂಪಿಸಿರುವ ಕಾನೂನುಗಳೇ ‘ದುರ್ಬಳಕೆ ಆಗುತ್ತಿವೆ’ ಎಂಬ ಆರೋಪಕ್ಕೆ ಮತ್ತೆ ಮತ್ತೆ ಗುರಿಯಾಗುತ್ತಿರುವುದು ಕಾಕತಾಳೀಯವೇನೂ ಅಲ್ಲ].

ಮೇಲಿನ ಎರಡೂ ಪ್ರಕರಣಗಳಲ್ಲಿ ಬಂದಿರುವ ತೀರ್ಪುಗಳಿಗೆ ಸಂಬಂಧಿಸಿದಂತೆ ಎರಡು ಪ್ರಶ್ನೆಗಳು ಮೂಡುತ್ತವೆ. ಮೊದಲನೆಯದು, ಈ ಕಾನೂನುಗಳು ಬೇರೆ ಕಾನೂನುಗಳಿಗಿಂತಲೂ ಹೆಚ್ಚು ದುರ್ಬಳಕೆ ಆಗುವ ಸಾಧ್ಯತೆ ಹೆಚ್ಚು ಎಂಬ ಆರೋಪದಲ್ಲಿ ಸತ್ಯ ಇದೆಯೇ? ಎರಡನೆಯದು, ಸೂಚಿಸಿರುವ ಕ್ರಮಗಳು ನ್ಯಾಯಸಮ್ಮತ ವಿಚಾರಣೆ ನಡೆಯುವಂತೆ ಆಗಲು ಅತ್ಯುತ್ತಮ ಮಾರ್ಗಗಳೇ?

ಕಳದ ವಾರ ನೀಡಿರುವ ತೀರ್ಪಿನಲ್ಲಿ ಕೋರ್ಟ್‌ ಉಲ್ಲೇಖಿಸಿರುವ ಅಂಕಿ-ಅಂಶಗಳತ್ತ ಗಮನಹರಿಸೋಣ. 2015ನೇ ಸಾಲಿನ ಎನ್‌ಸಿಆರ್‌ಬಿ ಅಂಕಿ-ಅಂಶಗಳ ಅನ್ವಯ, ‘ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ 5,347, ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ 912 ಪ್ರಕರಣಗಳು ಸುಳ್ಳು ಪ್ರಕರಣಗಳು ಎಂದು ಗೊತ್ತಾಗಿದೆ' ಎಂದು ಕೋರ್ಟ್ ಹೇಳಿದೆ.

ಪ್ರಬಲ ಜಾತಿಗಳಿಗೆ ಸೇರಿದ ಪೊಲೀಸ್ ಸಿಬ್ಬಂದಿಯು ದಲಿತರ ಮೇಲೆ ನಡೆಯುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ, ಅವು ಸುಳ್ಳು ಪ್ರಕರಣಗಳು ಎಂದು ಬಹುಬೇಗ ತೀರ್ಮಾನಿಸುತ್ತಾರೆ ಎಂಬುದನ್ನು ದಲಿತರ ಹಕ್ಕುಗಳ ಪರ ಕೆಲಸ ಮಾಡುವ ಸಂಘಟನೆಗಳು ಕಂಡುಕೊಂಡಿವೆ. ಅದೇನೇ ಇರಲಿ, ಎನ್‌ಸಿಆರ್‌ಬಿ ನೀಡಿರುವ 2016ನೇ ಸಾಲಿನ ‘ಭಾರತದಲ್ಲಿನ ಅಪರಾಧಗಳು’ ವರದಿಯಲ್ಲಿರುವ ಅಂಕಿ-ಅಂಶಗಳನ್ನು ಗಮನಿಸೋಣ.

ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಡಗಳಿಗೆ ಸಂಬಂಧಿಸಿದಂತೆ ವರದಿಯಾಗಿರುವ ಮತ್ತು ವಿಚಾರಣೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕ್ರಮವಾಗಿ 56,299 ಮತ್ತು 9,096 ಎಂದು ಈ ವರದಿ ಹೇಳಿದೆ. ಅಂದರೆ, ಶೇಕಡ 10ರಷ್ಟು ಅಥವಾ ಹತ್ತರಲ್ಲಿ ಒಂದು ಪ್ರಕರಣ ‘ಸುಳ್ಳು’ ಎಂದಾಯಿತು. ಹಾಗೆಯೇ, ಪ್ರತಿ ಹತ್ತು ಪ್ರಕರಣಗಳ ಪೈಕಿ ಒಂಬತ್ತು ಪ್ರಕರಣಗಳು ಸುಳ್ಳಲ್ಲ ಎಂದೂ ಅರ್ಥ ಮಾಡಿಕೊಳ್ಳಬಹುದು. ಅಂದರೆ, ‘ಮಿತಿ ಮೀರುತ್ತಿರುವ ದುರ್ಬಳಕೆ’ ಎಂದು ಹೇಳುವುದು ಕಷ್ಟ.

ಈ ಅಂಕಿ-ಅಂಶಗಳನ್ನು ಇತರ ಅಪರಾಧ ಪ್ರಕರಣಗಳ ಜೊತೆ ಹೋಲಿಕೆ ಮಾಡಿ ನೋಡೋಣ. ಅಪಹರಣ ಪ್ರಕರಣಗಳ ಪೈಕಿ ಸುಳ್ಳು ಪ್ರಕರಣಗಳ ಪ್ರಮಾಣ ಶೇಕಡ 9ರಷ್ಟು. ನಕಲಿ ದಾಖಲೆ, ನಕಲಿ ಸಹಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೇಕಡ 12ರಷ್ಟು ಸುಳ್ಳಾಗಿರುತ್ತವೆ ಎಂದು ಪೊಲೀಸರು ಹೇಳುತ್ತಾರೆ. ಹೀಗಿರುವಾಗ, ಅಪಹರಣ ಮತ್ತು ನಕಲಿ ದಾಖಲೆಗಳನ್ನು ತಡೆಯುವುದಕ್ಕೆ ಇರುವ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಯಾರಾದರೂ ಒತ್ತಾಯಿಸಿದ್ದನ್ನು ಕಂಡಿದ್ದೀರಾ?

‘2015ರಲ್ಲಿ ಕೋರ್ಟ್‌ಗಳು 15,638 ಪ್ರಕರಣಗಳ ವಿಚಾರಣೆ ನಡೆಸಿದವು. ಈ ಪೈಕಿ 11,024 ಪ್ರಕರಣಗಳಲ್ಲಿ ಆರೋಪಿಗಳನ್ನು ಬಿಡುಗಡೆ ಮಾಡಲಾಯಿತು. 495 ಪ್ರಕರಣಗಳನ್ನು ಹಿಂಪಡೆಯಲಾಯಿತು, 4,119 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಯಿತು' ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಸೆಕ್ಷನ್‌ 498(ಎ) ಅಡಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿರುವ ಪ್ರಮಾಣವನ್ನು ಕೂಡ ಈ ಸೆಕ್ಷನ್ನಿನ ವಿರೋಧಿಗಳು 'ದುರ್ಬಳಕೆಗೆ ಸಾಕ್ಷಿ’ ಎಂದು ಹೇಳುತ್ತಾರೆ. ದೌರ್ಜನ್ಯ ತಡೆ ಕಾಯ್ದೆಯ ಅಡಿ ದಾಖಲಾದ ಪ್ರಕರಣಗಳ ಪೈಕಿ ಶೇಕಡ 26ರಷ್ಟರಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆ ಆಗಿದೆ ಎನ್ನುವುದು ಈ ಕಾನೂನು ದುರ್ಬಳಕೆ ಆಗುತ್ತಿದೆ ಎಂದು ಭಾವಿಸಲು ಸಾಕು ಎಂದು ಈ ತೀರ್ಪು ಹೇಳುತ್ತಿರುವಂತಿದೆ.

ತನಿಖೆ ಮತ್ತು ವಿಚಾರಣೆಯಲ್ಲಿ ದಿನನಿತ್ಯ ಆಗುವ ವಿಳಂಬ, ದೌರ್ಜನ್ಯಕ್ಕೆ ಒಳಗಾದವರಿಗೆ ಮತ್ತು ದೌರ್ಜನ್ಯ ಪ್ರಕರಣಗಳ ಸಾಕ್ಷಿಗಳಿಗೆ ಕಿರುಕುಳ ನೀಡಿದ, ಅವರಿಗೆ ಬೆದರಿಕೆ ಒಡ್ಡಿದ ವರದಿಗಳನ್ನು, ದಲಿತರು ಮತ್ತು ಆದಿವಾಸಿಗಳು ನ್ಯಾಯ ಪಡೆಯಲು ನಮ್ಮ ವ್ಯವಸ್ಥೆಯಲ್ಲೇ ಇರುವ ಅಡೆತಡೆಗಳನ್ನು ಕೆಲವು ಕ್ಷಣಗಳವರೆಗೆ ಪಕ್ಕಕ್ಕೆ ಇಡೋಣ. ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣದಲ್ಲಿ ಇವುಗಳ ಪಾತ್ರವೂ ಇದೆ ಎಂಬುದು ಬೇರೆ ಮಾತು. ಆದರೆ, ದೌರ್ಜನ್ಯ ತಡೆ ಕಾಯ್ದೆಯ ಅಡಿ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣವು ಒಂದು ಕಾಯ್ದೆ ದುರ್ಬಳಕೆ ಆಗುತ್ತಿದೆ ಎನ್ನಲು ಅಳತೆಗೋಲು ಎಂದು ನಂಬುವುದಾದರೆ, ವಂಚನೆ, ಸುಲಿಗೆ ಮತ್ತು ಆಸ್ತಿಪಾಸ್ತಿಗೆ ಬೆಂಕಿ ಹಚ್ಚುವ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುವ ಪ್ರಮಾಣವು ಎನ್‌ಸಿಆರ್‌ಬಿ ನೀಡಿರುವ ಈಚಿನ ವರದಿ ಅನ್ವಯ ಕ್ರಮವಾಗಿ ಶೇಕಡ 20, 19 ಮತ್ತು 16ರಷ್ಟು ಮಾತ್ರ. ಆದರೆ, ಈ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಯಾರಾದರೂ ಹೇಳಿರುವುದನ್ನು ನಾನು ಇದುವರೆಗೆ ಕಂಡಿಲ್ಲ.

ಐಪಿಸಿಯ ಸೆಕ್ಷನ್ 498(ಎ) ಅಥವಾ ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆ ಆಗುವ ಸಾಧ್ಯತೆಯೇ ಇಲ್ಲ ಎಂದು ಹೇಳುತ್ತಿಲ್ಲ. ಪ್ರತಿ ಕಾನೂನನ್ನೂ ದುರ್ಬಳಕೆ ಮಾಡಿಕೊಳ್ಳಬಹುದು, ಮಾಡಿಕೊಳ್ಳುತ್ತಿದ್ದಾರೆ. ಆದರೆ, ಕೆಲವು ಕಾನೂನುಗಳನ್ನು ಮಾತ್ರ ಪರಿಶೀಲಿಸಿ, ಭಾರತದಲ್ಲಿನ ಜಾತಿ ಮತ್ತು ಲಿಂಗ ತಾರತಮ್ಯದ ವಾಸ್ತವವನ್ನು ನಿರ್ಲಕ್ಷಿಸುವ ರೀತಿಯಲ್ಲಿ ಅವುಗಳನ್ನು ಗ್ರಹಿಸಿ, ಅವು ದುರ್ಬಳಕೆ ಆಗುತ್ತಿವೆ ಎಂಬ ತೀರ್ಮಾನಕ್ಕೆ ಬರುವುದು ತಪ್ಪು.

ವಿಚಾರಣೆ ನ್ಯಾಯೋಚಿತ ಆಗಿರಬೇಕು ಎಂಬ ಕಳಕಳಿಗೆ ಸ್ಪಂದಿಸಲು ಇರುವ ಸರಿಯಾದ ಕ್ರಮವು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಲ್ಲಿ ಅಡಕವಾಗಿದೆಯೇ ಎಂಬುದು ಎರಡನೆಯ ವಿಚಾರ. ದೌರ್ಜನ್ಯಕ್ಕೆ ಒಳಗಾದವರನ್ನು ಅಥವಾ ಸಾಕ್ಷಿಗಳನ್ನು ರಕ್ಷಿಸುವ ವ್ಯವಸ್ಥೆ ಭಾರತದಲ್ಲಿ ಸರಿಯಾಗಿ ಇಲ್ಲ. ಹಾಗಾಗಿ ಜಾತಿಯ ಕಾರಣಕ್ಕೆ ನಡೆಯುವ ದೌರ್ಜನ್ಯ ಅಥವಾ ಲೈಂಗಿಕ ಹಿಂಸೆ ಕುರಿತು ದುರ್ಬಲರು ದೂರು ನೀಡಿದಾಗ ಅವರು ಆರೋಪಿಗಳ ಕಡೆಯಿಂದ ಬೆದರಿಕೆ ಅಥವಾ ಕಿರುಕುಳ ಎದುರಿಸುವ ಸಾಧ್ಯತೆ ಹೆಚ್ಚು.

ಪೊಲೀಸರು ಕೂಡ ಸಾಮಾನ್ಯವಾಗಿ ಎಫ್‌ಐಆರ್‌ ದಾಖಲಿಸಲು ಹಿಂದೇಟು ಹಾಕುತ್ತಾರೆ. ಹೀಗಿರುವಾಗ, ದೂರುಗಳನ್ನು ಪರಿಶೀಲಿಸಲು ಕುಟುಂಬ ಕಲ್ಯಾಣ ಸಮಿತಿ ರಚಿಸಬೇಕು, ಎಫ್‌ಐಆರ್‌ ದಾಖಲಿಸುವ ಮುನ್ನ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಬೇಕು ಎಂದು ಹೇಳುವುದರಿಂದ ನ್ಯಾಯ ಪಡೆಯುವ ದಾರಿಯಲ್ಲಿ ಇನ್ನೊಂದು ಅಡೆತಡೆ ಸೃಷ್ಟಿಸಿದಂತೆ ಆಗುತ್ತದೆ.

ಒಂದು ಉದಾಹರಣೆ ನೋಡೋಣ. ಛತ್ತೀಸಗಡ ರಾಜ್ಯದ ರಾಯಗಡದ ಅಂದಾಜು ನೂರು ಜನ ಆದಿವಾಸಿಗಳು ದೌರ್ಜನ್ಯ ತಡೆ ಕಾಯ್ದೆಯ ಅಡಿ ಕಳೆದ ವರ್ಷ ಎಫ್‌ಐಆರ್‌ ದಾಖಲಿಸಲು ಯತ್ನಿಸಿದರು. ಖಾಸಗಿ ಕಂಪನಿಗಳ ಪರ ಕೆಲಸ ಮಾಡುವ ಕೆಲವು ಏಜೆಂಟರು ತಮಗೆ ತಪ್ಪು ಮಾಹಿತಿ ನೀಡಿ, ಬೆದರಿಕೆ ಒಡ್ಡಿ ತಮ್ಮ ಜಮೀನನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ ಎಂಬುದು ಅವರ ದೂರಾಗಿತ್ತು. ರಾಯಗಡದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪೊಲೀಸ್ ಠಾಣೆಯ ಸಿಬ್ಬಂದಿ ದೂರನ್ನು ಸ್ವೀಕರಿಸಿದರು. ಆದರೆ ತನಿಖೆಯನ್ನು ವಿಳಂಬಗೊಳಿಸಲು 'ಪ್ರಾಥಮಿಕ ವಿಚಾರಣೆ'ಯ ಕುಂಟು ನೆಪ ಮುಂದುಮಾಡಿದರು. ಕೆಲವು ವಾರಗಳ ನಂತರ ಅವರು ಎಫ್‌ಐಆರ್‌ ದಾಖಲಿಸಲು ನಿರಾಕರಿಸಿದರು.

ಸುಳ್ಳು ಪ್ರಕರಣಗಳನ್ನು ನಿಭಾಯಿಸಲು ಬೇಕಿರುವ ವ್ಯವಸ್ಥೆ ಭಾರತದ ಕಾನೂನಿನಲ್ಲಿ ಈಗಾಗಲೇ ಇದೆ. ಇನ್ನೊಬ್ಬನಿಗೆ ನೋವು ಕೊಡುವ ಉದ್ದೇಶದಿಂದ ಅವನ ಮೇಲೆ ಸುಳ್ಳು ದೂರು ನೀಡುವವ ಏಳು ವರ್ಷಗಳ ಅವಧಿಗೆ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು. ಸುಳ್ಳು ಸಾಕ್ಷ್ಯ ಹೇಳುವುದು, ತಿರುಚಿದ ದಾಖಲೆಗಳನ್ನು ನೀಡುವುದು ಕೂಡ ಕ್ರಿಮಿನಲ್ ಅಪರಾಧಗಳು. ಇಂತಹ ವ್ಯವಸ್ಥೆಯನ್ನು ಪೊಲೀಸರು ಮತ್ತು ನ್ಯಾಯಾಂಗವು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಸುಳ್ಳು ದೂರುಗಳನ್ನು ತಡೆಯಬಹುದು. ರಕ್ಷಣೆಗಾಗಿ ರೂಪಿಸಿರುವ ಕಾನೂನುಗಳನ್ನು ಮೊಂಡಾಗಿಸುವ, ಸಂಸತ್ತು ಗುರುತಿಸಿರುವ ಹಕ್ಕುಗಳನ್ನು ಅನುಭವಿಸುವುದಕ್ಕೆ ಅಡ್ಡಿಯಾಗುವ ಆದೇಶಗಳು ಇನ್ನು ನಮಗೆ ಬೇಕಾಗಿಲ್ಲ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT