ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೀಗ ‘ಪ್ರತಿಪಕ್ಷಮುಕ್ತ’ ಭಾರತದತ್ತ...

Last Updated 30 ಜುಲೈ 2017, 19:30 IST
ಅಕ್ಷರ ಗಾತ್ರ

ಬಿಜೆಪಿ ಬಯಸಿದ್ದು ಕೇವಲ ಕಾಂಗ್ರೆಸ್ ಮುಕ್ತ ಭಾರತವನ್ನು. ಆದರೆ ಬರಬರುತ್ತಾ ಭಾರತದ ರಾಜಕೀಯ ಇದೀಗ ಎಲ್ಲಾ ಪ್ರತಿಪಕ್ಷಗಳಿಂದಲೂ ಮುಕ್ತವಾಗುವ ದಾರಿಯಲ್ಲಿ ಸಾಗುತ್ತಿದೆ. 2014ರ ಲೋಕಸಭಾ ಚುನಾವಣೋತ್ತರ ಭಾರತದಲ್ಲಿ ಅಕ್ಷರಶಃ ತತ್ತರಗೊಂಡಿದ್ದ ಪ್ರತಿಪಕ್ಷಗಳ ಏಕೈಕ ವಿಶ್ವಾಸಾರ್ಹ ಮತ್ತು ಭರವಸೆಯ ಮುಖ ಎಂದು ನಂಬಲಾಗಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೋದ ವಾರ ಬಿಜೆಪಿಯ ಏಕಚಕ್ರಾಧಿಪತ್ಯದ ಜತೆ ಕೈಜೋಡಿಸಿ ತನ್ನ ಕುರ್ಚಿ ಭದ್ರಪಡಿಸಿಕೊಂಡಿದ್ದಾರೆ ಎಂಬಲ್ಲಿಗೆ ಈಗ ಪ್ರತಿಪಕ್ಷಗಳಲ್ಲಿ ಉಳಿದಿರುವುದು ಒಂದೋ ಭರವಸೆ ಮೂಡಿಸದ ಮುಖಗಳು, ಇಲ್ಲವೇ ಜನರ ವಿಶ್ವಾಸ ಕಳೆದುಕೊಂಡಿರುವ ಮುಖಗಳು.

ಸ್ವತಂತ್ರ ಭಾರತದ ರಾಜಕೀಯ ಚರಿತ್ರೆಯಲ್ಲಿ ಹಿಂದೊಂದು ಕಾಲವಿತ್ತು. ಅದು ಕಾಂಗ್ರೆಸ್ ಆಧಿಪತ್ಯದ ಕಾಲ. ಅಂದರೆ ಬಹುತೇಕ ಎಲ್ಲ ಕಡೆ ಕಾಂಗ್ರೆಸ್ ಗೆಲ್ಲುತ್ತಿದ್ದ ಕಾಲ. ಪ್ರಖ್ಯಾತ ರಾಜಕೀಯ ಚಿಂತಕ ರಜನಿ ಕೊಠಾರಿ ಅದನ್ನು ಕಾಂಗ್ರೆಸ್ ವ್ಯವಸ್ಥೆಯ (Congress System) ಕಾಲ ಎಂದು ಕರೆದಿದ್ದರು. ಚರಿತ್ರಕಾರ ರಾಮಚಂದ್ರ ಗುಹಾ, ಕಾಂಗ್ರೆಸ್ ವ್ಯವಸ್ಥೆಯ ಈ ಕಾಲದಲ್ಲಿ ಎರಡು ಹಂತಗಳನ್ನು ಗುರುತಿಸುತ್ತಾರೆ. ಮೊದಲನೆಯದ್ದು ಜವಾಹಾರಲಾಲ್ ನೆಹರೂ- ಕಾಮರಾಜ ನಾಡರ್ ಅವರ ನಾಯಕತ್ವದ ಅವಧಿ. ಆಗ ಕಾಂಗ್ರೆಸ್‌ನಲ್ಲಿ ರಾಷ್ಟ್ರ ಮಟ್ಟದ ಪ್ರಬಲ ನಾಯಕರಿಗೆ ಸಮ-ಸಮನಾಗಿ ರಾಜ್ಯ ಮಟ್ಟದಲ್ಲೂ ಪ್ರಬಲ ನಾಯಕರು ಇರುತ್ತಿದ್ದರು. ಆ ನಂತರ ಬಂದದ್ದು ಇಂದಿರಾ ಗಾಂಧಿ ಪ್ರಾಬಲ್ಯದ ಕಾಂಗ್ರೆಸ್ ಆಧಿಪತ್ಯ. ಈ ಅವಧಿಯಲ್ಲಿ ರಾಜ್ಯ ಮಟ್ಟದ ನಾಯಕರನ್ನೆಲ್ಲಾ ಮಟ್ಟ ಹಾಕಲಾಗುತ್ತದೆ. ಕಾಂಗ್ರೆಸ್ ಆಧಿಪತ್ಯ ಅಂದರೆ ಅಕ್ಷರಶಃ ಇಂದಿರಾ ಆಧಿಪತ್ಯವಾಗಿಬಿಡುತ್ತದೆ.

ಗುಹಾ ಅವರ ಪ್ರಕಾರ ಈಗ ನಾವು ಕಾಣುತ್ತಿರುವುದು ಬಿಜೆಪಿ ವ್ಯವಸ್ಥೆಯ (BJP System) ಕಾಲವನ್ನು. ಸದ್ಯಕ್ಕೆ ನೆಹರೂ- ಕಾಮರಾಜರ ಕಾಲದ ಕಾಂಗ್ರೆಸ್ ವ್ಯವಸ್ಥೆಯ ಹಾಗೆ ಬಿಜೆಪಿಯಲ್ಲಿ ಅಲ್ಲಿಇಲ್ಲಿ ಕೆಲ ಮಟ್ಟಿನ ಪ್ರಬಲ ನಾಯಕರಿದ್ದಾರೆ- ರಾಜಸ್ಥಾನದ ವಸುಂಧರಾ ರಾಜೇ, ಮಧ್ಯ ಪ್ರದೇಶದ ಶಿವರಾಜ ಸಿಂಗ್ ಚೌಹಾಣ್, ಛತ್ತೀಸಗಡದ ರಮಣ ಸಿಂಗ್ ಮುಂತಾದವರು. ಆದರೆ 2019ರ ಮುಂದಿನ ಚುನಾವಣೆಯ ನಂತರ ಬಿಜೆಪಿ ವ್ಯವಸ್ಥೆ ಕೂಡಾ ಇಂದಿರಾ ಅವಧಿಯ ಕಾಂಗ್ರೆಸ್ ವ್ಯವಸ್ಥೆಯಂತೆ ಸಂಪೂರ್ಣ ಏಕಚಕ್ರಾಧಿಪತ್ಯದ ಕಡೆಗೆ ವಾಲಿದರೂ ವಾಲೀತು ಎನ್ನುವುದು ಅವರ ವಾದ. ಯಾಕೆಂದರೆ 2014ರ ನಂತರ ಯಾವ ಯಾವ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆಯೋ ಅಲ್ಲೆಲ್ಲಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ತಮ್ಮ ತಮ್ಮ ಮಂದಿಯನ್ನೇ ಮುಖ್ಯಮಂತ್ರಿಗಳನ್ನಾಗಿ ಪ್ರತಿಷ್ಠಾಪಿಸಿದ್ದಾರೆ ಮತ್ತವರ ಸಂಪೂರ್ಣ ವಿಧೇಯತೆಯನ್ನು ಸ್ಥಿರೀಕರಿಸಿಕೊಂಡಿದ್ದಾರೆ. ಸದ್ಯ ಇದಕ್ಕೆ ತುಸು ಭಿನ್ನ ಅಂತ ಅನ್ನಿಸುವುದು ಉತ್ತರ ಪ್ರದೇಶ.

ಏನೇ ಇರಲಿ. ವಾಸ್ತವದಲ್ಲಿ ಆಗಿನ ಕಾಂಗ್ರೆಸ್ ವ್ಯವಸ್ಥೆಯ ಕಾಲ ಮತ್ತು ಈಗಿನ್ನೂ ಉದಯಿಸುತ್ತಿರುವ ಬಿಜೆಪಿ ವ್ಯವಸ್ಥೆಯ ಕಾಲದಲ್ಲಿ ನಾವು ಗಮನಿಸಬೇಕಾಗಿರುವುದು ಗುಹಾ ಮುಂತಾದವರು ಗುರುತಿಸುತ್ತಿರುವ ಸಾಮ್ಯತೆಗಳನ್ನಲ್ಲ. ಸಾಮ್ಯತೆಗಳಿಗಿಂತ ಹೆಚ್ಚು ನಮ್ಮ ಗಮನ ಸೆಳೆಯಬೇಕಿರುವುದು ಕಾಂಗ್ರೆಸ್ ಪ್ರಾಬಲ್ಯದ ಮತ್ತು ಬಿಜೆಪಿ ಪ್ರಾಬಲ್ಯದ ಕಾಲಗಳ ವ್ಯತ್ಯಾಸಗಳನ್ನು. ಎರಡು ಕಾಲಘಟ್ಟಗಳ ನಡುವೆ ಕಾಣಿಸುವ ದೊಡ್ಡ ವ್ಯತ್ಯಾಸ ಇರುವುದು ಪ್ರತಿಪಕ್ಷಗಳ ಸ್ಥಿತಿಗತಿಗಳಲ್ಲಿ. ಕಾಂಗ್ರೆಸ್ ಪ್ರಾಬಲ್ಯ ಇದ್ದ ಕಾಲದಲ್ಲಿ ಪ್ರತಿಪಕ್ಷಗಳು ಚುನಾವಣೆಗಳಲ್ಲಿ ಗೆದ್ದು ಅಧಿಕಾರ ಪಡೆಯುತ್ತಿರಲಿಲ್ಲ. ಕಾಂಗ್ರೆಸ್ ಎಂತಹವರನ್ನು ಚುನಾವಣೆಗೆ ನಿಲ್ಲಿಸಿದರೂ ಅವರಲ್ಲಿ ಹೆಚ್ಚಿನವರು ಗೆಲ್ಲುತ್ತಿದ್ದರು; ಪ್ರತಿಪಕ್ಷದವರು ಎಂತಹವರನ್ನು ನಿಲ್ಲಿಸಿದರೂ ಅವರಲ್ಲಿ ಹೆಚ್ಚಿನವರು ಸೋಲುತ್ತಿದ್ದರು. ಕಾಂಗ್ರೆಸ್ ದುರಾಡಳಿತದ ಬಗ್ಗೆ ಪ್ರತಿಪಕ್ಷಗಳು ಬಾರಿ ಬಾರಿ ಸಾರಿ ಸಾರಿ ಜನರಿಗೆ ಹೇಳಿದರೂ ಹೆಚ್ಚಿನ ಜನ ವೋಟು ಮಾತ್ರ ಕಾಂಗ್ರೆಸ್ಸಿಗೆ ನೀಡುತ್ತಿದ್ದರು. ಆದರೆ ಇವೆಲ್ಲದರ ನಡುವೆ ಆಗ ವಿರೋಧ ಪಕ್ಷಗಳಲ್ಲಿ ಆಳುವ ಪಕ್ಷವನ್ನು ನಡುಗಿಸಬಲ್ಲ ನಾಯಕರು ಇರುತ್ತಿದ್ದರು. ಚುನಾವಣೆಯಲ್ಲಿ ಸೋಲಾದರೂ ಅವರಿಗೆ ಸರ್ಕಾರದ ಜುಟ್ಟು ಹಿಡಿದು ಜಗ್ಗಬಲ್ಲ ರಾಜಕೀಯ ಬಲ ಮತ್ತು ನೈತಿಕ ಬಲ ಎರಡೂ ಇದ್ದವು. ಅವರೆಲ್ಲಾ ಸೇರಿದರೆ ಅಧಿಕಾರದ ತಂಗಾಳಿಯಲ್ಲಿ ವಿಹರಿಸುತ್ತಿದ್ದ ಅಂದಿನ ಪ್ರಧಾನ ಮಂತ್ರಿಗಳ ಹಣೆಯಲ್ಲಿ ಬೆವರು ತರಿಸಬಲ್ಲವರಾಗಿದ್ದರು. ಚುನಾವಣೆಗಳ ಸೋಲು-ಗೆಲುವುಗಳಾಚೆಗೆ ಪ್ರತಿಪಕ್ಷಗಳು, ಆಳುವ ಸರ್ಕಾರವನ್ನು ಮತ್ತು ಅದರ ಏಕಮೇವಾದ್ವಿತೀಯ ನಾಯಕ- ನಾಯಕಿಯರನ್ನು ಆ ಪರಿ ಕಾಡುತ್ತಿದ್ದ ಕಾರಣವೇ 1975ರಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರತಿಪಕ್ಷಗಳ ನಾಯಕರ ಸದ್ದಡಗಿಸುವ ಕೆಲಸವನ್ನು ಅಂದಿನ ಪ್ರಧಾನ ಮಂತ್ರಿ ಕೈಗೊಂಡದ್ದು.

ಈಗಿನ ಸ್ಥಿತಿ ನೋಡಿ. ಈಗಿನ ಪ್ರತಿಪಕ್ಷಗಳ ನಾಯಕರಿಗೆ ಇಂದಿನ ಸರ್ಕಾರ ಅಥವಾ ಇಂದಿನ ಪ್ರಧಾನ ಮಂತ್ರಿ ನಡುಗುವುದು ಬಿಡಿ. ಇಂದು ಆಳುವ ಪಕ್ಷ ಮತ್ತು ಅದರ ನಾಯಕತ್ವದ ಶಕ್ತಿಯ ಮೂಲ ಇರುವುದೇ ಪ್ರತಿಪಕ್ಷದ ನಾಯಕತ್ವದ ಬಲಹೀನತೆಯಲ್ಲಿ. ಆಳುವ ಪಕ್ಷದ ಜತೆ ಕೈಜೋಡಿಸಲು ಪ್ರತಿಪಕ್ಷಗಳೆಲ್ಲಾ ಸರತಿಯಲ್ಲಿ ನಿಂತು ಕಾಯುತ್ತಿರುವಂತಿದೆ ಇಂದಿನ ಸ್ಥಿತಿ. ಹಾಗೆ ಕೈಜೋಡಿಸುವ ಅವಕಾಶ ಎಂದಿಗೂ ಬಾರದು ಎನ್ನುವ ಒಂದೇ ಕಾರಣಕ್ಕೆ ಕೆಲವು ಪಕ್ಷಗಳು ಇನ್ನೂ ಪ್ರತಿಪಕ್ಷಗಳ ಸ್ಥಾನದಲ್ಲಿ ಉಳಿದಿವೆ ಎನ್ನುವುದನ್ನು ಬಿಟ್ಟರೆ ಪ್ರತಿಪಕ್ಷ ಅಥವಾ ವಿರೋಧ ಪಕ್ಷ ಎನ್ನುವುದಕ್ಕೆ ಯಾವುದೇ ಅರ್ಥ ರಾಷ್ಟ್ರಮಟ್ಟದಲ್ಲಿ ಈಗ ಉಳಿದಿಲ್ಲ. ಇದು ಕಾಂಗ್ರೆಸ್ ವ್ಯವಸ್ಥೆಯ ಕಾಲಕ್ಕೂ, ಬಿಜೆಪಿ ವ್ಯವಸ್ಥೆಯ ಕಾಲಕ್ಕೂ ಇರುವ ಮೂಲಭೂತ ವ್ಯತ್ಯಾಸ. ಈ ಕಾಲದ ಅಪಾಯ ಅಡಗಿರುವುದು ಈ ವ್ಯತ್ಯಾಸದಲ್ಲಿ. ಆದರೆ ಈ ವ್ಯತ್ಯಾಸಕ್ಕೆ ದೂರಬೇಕಾಗಿರುವುದು ಬಿಜೆಪಿಯನ್ನಲ್ಲ ಎನ್ನುವುದನ್ನು ನಿತೀಶ್ ಕುಮಾರ್ ನಡೆ ಮತ್ತೊಮ್ಮೆ ಸಾಬೀತುಪಡಿಸಿದೆ.

ಆಗಿನ ಸ್ಥಿತಿಯನ್ನೂ ಈಗಿನ ಸ್ಥಿತಿಯನ್ನೂ ವಿರೋಧ ಪಕ್ಷಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವಾಗ ಇನ್ನೊಂದು ವ್ಯತ್ಯಾಸವನ್ನೂ ಗಮನಿಸಬೇಕಾಗುತ್ತದೆ. ಅಂದು ವಿರೋಧ ಪಕ್ಷಗಳಿಗೆ ಮತ ನೀಡುವವರ ಸಂಖ್ಯೆ ಇನ್ನೂ ಬೆಳೆದಿರಲಿಲ್ಲ. ಆದರೆ ಯಾರ್‍ಯಾರು ಆ ಪಕ್ಷಗಳಿಗೆ ಆಗ ಮತ ಹಾಕುತ್ತಿದ್ದರೋ ಅವರಿಗೆ ಅಂದಿನ ವಿರೋಧ ಪಕ್ಷಗಳ ಬಗ್ಗೆ, ಅವುಗಳ ನಾಯಕರ ಬಗ್ಗೆ ಭರವಸೆ ಇತ್ತು. ನಾಳೆ ಇವರೆಲ್ಲಾ ಒಂದು ಧನಾತ್ಮಕ ಬದಲಾವಣೆ ತರಬಲ್ಲವರು ಎನ್ನುವ ಆಶಾವಾದ ಇತ್ತು. ಯಾಕೆಂದರೆ ಅಂದಿನ ವಿರೋಧ ಪಕ್ಷಗಳು ಅಷ್ಟರತನಕ ಅಧಿಕಾರ ಅನುಭವಿಸಿರಲಿಲ್ಲ ಮತ್ತು ಅಧಿಕಾರದಲ್ಲಿದ್ದಾಗ ಅವು ಹೇಗೆ ನಡೆದುಕೊಳ್ಳುತ್ತವೆ ಎನ್ನುವ ಬಗ್ಗೆ ಜನರಿಗೆ ಪ್ರತ್ಯಕ್ಷ ಅನುಭವ ಇರಲಿಲ್ಲ. ಈಗ ಹಾಗಲ್ಲ, ಈಗಿನ ಪ್ರತಿಯೊಂದು ವಿರೋಧ ಪಕ್ಷವೂ ಅಧಿಕಾರದಲ್ಲಿದ್ದಾಗ ಜನರ ವಿಶ್ವಾಸ ಕಳೆದುಕೊಂಡ ಪಕ್ಷವೇ ಆಗಿದೆ. ಆದುದರಿಂದ ವಿರೋಧ ಪಕ್ಷಗಳಿಗೆ ಮತ ನೀಡಬೇಕು ಎಂದು ನಿರ್ಧರಿಸುವಾಗ ಕೂಡಾ ಆ ನಿರೀಕ್ಷೆಯ ಹಿಂದೆ ಯಾವುದೇ ಭರವಸೆ ಇರುವುದಿಲ್ಲ. ‘ಯಾರಿಗೋ ಮತ ಹಾಕಬಾರದು ಎನ್ನುವ ಕಾರಣಕ್ಕೋಸ್ಕರ ಇವರಿಗೆ ಹಾಕಬೇಕು’ ಎನ್ನುವ ಕನಿಷ್ಠತಮ ಸಮತೋಲನ ಮಾತ್ರ ವಿರೋಧ ಪಕ್ಷಗಳನ್ನು ಅಷ್ಟಿಷ್ಟು ಉಳಿಸಿರುವುದು. ವಿರೋಧ ಪಕ್ಷಗಳು ಮತ್ತೆ ಮತ್ತೆ ಸೋತರೆ ಅದರಿಂದ ಪ್ರಜಾತಂತ್ರಕ್ಕೆ ಅಪಾಯವಿಲ್ಲ. ಯಾವತ್ತು ವಿರೋಧ ಪಕ್ಷಗಳು ತಮ್ಮ ಜೀವಂತಿಕೆ ಕಳೆದುಕೊಳ್ಳುತ್ತವೋ ಅವತ್ತಿಗೆ ಪ್ರಜಾತಂತ್ರ ಅರ್ಧ ಸತ್ತಂತೆ. ರಾಷ್ಟ್ರಮಟ್ಟದಲ್ಲಿ ಭಾರತೀಯ ರಾಜಕೀಯ ಈಗ ಈ ಸ್ಥಿತಿಯತ್ತ ವಾಲುತ್ತಿದೆ. ಈ ತನಕ ತನ್ನದೇ ವಿಶಿಷ್ಟ ಛಾಪಿನಿಂದ ಹುಲುಸಾಗಿ ಬೆಳೆದ ಭಾರತದ ಜನತಂತ್ರ ವ್ಯವಸ್ಥೆಯ ಭವಿಷ್ಯದ ಬಗ್ಗೆ ಆತಂಕ ಮೂಡುವುದು ಈ ಕಾರಣಕ್ಕಾಗಿ. ಆದರೆ ಈ ಆತಂಕ ಮೂಡುವುದಕ್ಕೆ ಬಿಜೆಪಿಯನ್ನು ದೂರಿ ಪ್ರಯೋಜನ ಇಲ್ಲ.

ರಾಜಕೀಯ ಅಧಿಕಾರ ಎನ್ನುವುದು ಮಾನವ ಸಮಾಜದ ಅತ್ಯಂತ ಅಪಾಯಕಾರಿ ಪರಿಕರ. ಅದು ಅತ್ಯಂತ ಒಳ್ಳೆಯವರು ಎಂದು ನಾವು ಭಾವಿಸುವವರ ಕೈಯಲ್ಲಿ ಇದ್ದಾಗಲೂ ಅದನ್ನು ಗುಮಾನಿಯಿಂದಲೇ ನೋಡಬೇಕು ಮತ್ತು ಅದನ್ನು ಸದಾ ಪ್ರಶ್ನಿಸುತ್ತಿರಬೇಕು. ಅದನ್ನು ಪ್ರಶ್ನಿಸಿ ಎಡವಿದರೂ ಪರವಾಗಿಲ್ಲ, ಪ್ರಶ್ನಿಸದೆ ಎಡವಬಾರದು. ರಾಜಕೀಯ ಅಧಿಕಾರ ಹೊಂದಿದವರು ‘ಕಮ್ಯುನಲ್’ ಆಗಿದ್ದರೂ ಸರಿ ‘ಸೆಕ್ಯುಲರ್’ ಆಗಿದ್ದರೂ ಸರಿ; ಪರಮ ಪ್ರಾಮಾಣಿಕರಾದರೂ ಸರಿ, ಪ್ರಚಂಡ ಭ್ರಷ್ಟರಾದರೂ ಸರಿ; ಅವರ ಮೇಲೊಂದು ನಿಗಾ ಇರಿಸಲು ಬೇಕಾದ ಪರ್ಯಾಯ ರಾಜಕೀಯವೊಂದು ಇಲ್ಲವಾದರೆ ಪ್ರಜಾಸತ್ತೆಗೂ-ಸರ್ವಾಧಿಕಾರಕ್ಕೂ ವ್ಯತ್ಯಾಸ ಉಳಿಯುವುದಿಲ್ಲ. ಈ ಸಿದ್ಧಾಂತದ ಮೇಲೆ ಪ್ರಜಾತಂತ್ರದ ತಳಹದಿ ಇರುವುದು. ಅಧಿಕಾರವನ್ನು ಗುಮಾನಿಯಿಂದ ನೋಡುವ, ಅಧಿಕಾರದ ಚಲಾವಣೆಯನ್ನು ಸದಾ ಪ್ರಶ್ನಿಸುವ ಪ್ರಾಥಮಿಕ ಜವಾಬ್ದಾರಿ ಇರುವುದು ಪ್ರತಿಪಕ್ಷಗಳಿಗೆ. ಭಾರತ ರಾಜಕೀಯದ ಇಂದಿನ ಸ್ಥಿತಿಯಲ್ಲಿ ಪ್ರತಿಪಕ್ಷಗಳು ಈ ಕೆಲಸ ಮಹತ್ವದ್ದಲ್ಲ ಎಂದು ಭಾವಿಸಿವೆ. ಅವು ಸದಾ ಅಧಿಕಾರಸ್ಥರ ಜತೆ ಕೈಜೋಡಿಸಲು ಹವಣಿಸುತ್ತವೆ. ಒಂದು ವೇಳೆ ಸಾಧ್ಯವಾಗದಿದ್ದರೂ ಅಧಿಕಾರಕ್ಕೆ ಪ್ರತಿರೋಧ ಒಡ್ಡುವ, ಅಧಿಕಾರಸ್ಥರ ಮಾದರಿಗೊಂದು ಪರ್ಯಾಯ ಮಾದರಿಯನ್ನು ರೂಪಿಸುವ ತಮ್ಮ ರಾಜಕೀಯ- ನೈತಿಕ ಸ್ಥಿತಿಯನ್ನು ಸಂಪೂರ್ಣ ಕಳೆದುಕೊಂಡಿವೆ.

ಇಂತಹ ಒಂದು ಭೀಕರ ಶೂನ್ಯಾವಸ್ಥೆಯನ್ನು ತುಂಬುವ ಜವಾಬ್ದಾರಿ ಹೊರಲು ದೇಶ ನಿತೀಶ್ ಕುಮಾರ್‌ರಂತಹ ನಾಯಕರತ್ತ ನೋಡುತ್ತಿತ್ತು. ಬಿಹಾರದ ಮುಖ್ಯಮಂತ್ರಿಯಾಗಲು ಸಾವಿರ ಮಂದಿಗೆ ಸಾಧ್ಯ. ಆದರೆ ಈ ಕಾಲದಲ್ಲಿ ಭಾರತದ ರಾಜಕೀಯವನ್ನು ಆವರಿಸಿದ ಪರ್ಯಾಯ ಮಾದರಿ ಮತ್ತು ಚಿಂತನೆಗಳ ಶೂನ್ಯವನ್ನು ತುಂಬಲು ಬೇಕಾದ ನಾಯಕತ್ವವನ್ನು ಭೂತಕನ್ನಡಿಯಲ್ಲಿ ಹುಡುಕಬೇಕಿದೆ. ಆದುದರಿಂದ ಲಾಲು ಪರಿವಾರದ ಭ್ರಷ್ಟಾಚಾರ ಸಹಿಸಲಾಗುವುದಿಲ್ಲ ಎನ್ನುವ ನೈತಿಕ ಕಾರಣ ನೀಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಿಸಾಡಿದ ನಿತೀಶ್ ಕುಮಾರ್, ಈ ರಾಷ್ಟ್ರೀಯ ಜವಾಬ್ದಾರಿ ಹೊತ್ತಿದ್ದರೆ ಆಗ ಅವರು ದೊಡ್ಡ ನಾಯಕರಾಗುತ್ತಿದ್ದರು.

ಭಾರತದ ರಾಜಕೀಯ ನಿರ್ಣಾಯಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ತಿರುವುಗಳೆಲ್ಲಾ ಎಷ್ಟು ನಿರ್ಣಾಯಕ ಎನ್ನುವುದರ ಆಳ, ಅಗಲಗಳ ಬಗ್ಗೆ ಯೋಚಿಸಲಾಗದಷ್ಟು ನಮ್ಮ ರಾಜಕೀಯ ಮತ್ತು ಬೌದ್ಧಿಕ ನಾಯಕತ್ವ ನಿಸ್ತೇಜವಾಗಿಬಿಟ್ಟಿದೆ. ಇದಕ್ಕೆ ಒಂದು ಕಾರಣ ಈ ತಿರುವುಗಳೆಲ್ಲಾ ತೀರಾ ಅನಿರೀಕ್ಷಿತವಾಗಿ ಅಪ್ಪಳಿಸುತ್ತಿವೆ ಎನ್ನುವುದಿರಬೇಕು. ಊಹೆಗೆ ನಿಲುಕುವಷ್ಟು ಕಾಲ ಭಾರತವನ್ನು ಸಮ್ಮಿಶ್ರ ಸರ್ಕಾರಗಳೇ ಆಳಲಿವೆ ಎನ್ನುವ ನಂಬಿಕೆಯೊಂದು ಗಟ್ಟಿಯಾಗಿರುವಾಗಲೇ 2014ರ ಚುನಾವಣೆಯಲ್ಲಿ ಮತ್ತೆ ಒಂದೇ ಪಕ್ಷ ಅಧಿಕಾರ ಹಿಡಿಯುವ ಸ್ಥಿತಿ ಬಂತು. ದೇಶಕ್ಕೆ ಬಂದ ಈ ಸ್ಥಿತಿ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಪುನರಾವರ್ತಿಸಬಹುದು ಎನ್ನುವ ನಿರೀಕ್ಷೆ ಯಾರೂ ಇಟ್ಟುಕೊಳ್ಳದಾಗ ಅದೂ ಆಯಿತು. ದೇಶದಲ್ಲಿ ಮತ್ತೆ ಏಕಪಕ್ಷದ ಅಧಿಕಾರ ಸ್ಥಾಪನೆಯಾಗುವುದರೊಂದಿಗೆ ಪ್ರತಿಪಕ್ಷದಲ್ಲಿ ಒಂದು ಪಕ್ಷವಾದರೂ ಎದ್ದು ನಿಂತೀತು ಎನ್ನುವ ನಿರೀಕ್ಷೆ ಇಟ್ಟುಕೊಂಡಾಗಲೇ ಅದೂ ಹುಸಿಯಾಗುತ್ತಾ ಏಕಪಕ್ಷದ ಅಧಿಕಾರ ಈಗ ಏಕ ಚಕ್ರಾಧಿಪತ್ಯವಾಗಹೊರಟಿದೆ. ಬಿಜೆಪಿಗೆ ಇದು ಬಯಸದೆ ಬಂದ ಭಾಗ್ಯವಾಗಿರಬಹುದು. ಆದರೆ ಭಾರತದ ಪ್ರಜಾಸತ್ತೆಗೆ ಇದು ಬಯಸದೆ ಬಂದ ದೌರ್ಭಾಗ್ಯ. ಬಿಜೆಪಿಯ ಸ್ಥಾನದಲ್ಲಿ ಇನ್ನೊಂದು ಪಕ್ಷವಿದ್ದು ಈ ಏಕಚಕ್ರಾಧಿಪತ್ಯ ಸ್ಥಾಪಿಸುವತ್ತ ಅದು ಸಾಗುತ್ತಿದ್ದರೂ ಇದೇ ಮಾತುಗಳನ್ನು ಹೇಳಬೇಕಾಗುತ್ತಿತ್ತು.

ಇಂದಿನ ಈ ಸ್ಥಿತಿಗೆ ಕಾರಣ ಜನರ ನಂಬಿಕೆ ಕಳೆದುಕೊಂಡಿರುವ ಪ್ರತಿಪಕ್ಷಗಳು. ಅಳಿದುಳಿದ ಪ್ರತಿಪಕ್ಷಗಳ ಪಾಳಯದಲ್ಲಿ ದಿಗ್ವಿಜಯದ ಕುದುರೆಯನ್ನು ಕಟ್ಟಿಹಾಕಬಲ್ಲವ ಎಂದೇ ಬಿಂಬಿತರಾಗಿದ್ದ ನಿತೀಶ್ ಕುಮಾರ್ ಸ್ವತಃ ತಾನೇ ಏಕಚಕ್ರಾಧಿಪತ್ಯಕ್ಕೆ ಕಪ್ಪ ಒಪ್ಪಿಸಿ ತನ್ನ ಸಾಮಂತ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಸ್ವಾತಂತ್ರೋತ್ತರ ಭಾರತದಲ್ಲಿ ಪ್ರತಿಪಕ್ಷಗಳು ಎಂದೂ ಇಷ್ಟೊಂದು ಬಡವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT