ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷದ ವಿಧಾನಸಭಾ ಚುನಾವಣೆಗಳಿಗೇಕೆ ಮಹತ್ವ?

Last Updated 5 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ರಾಷ್ಟ್ರವು ಸ್ವಾತಂತ್ರ್ಯ ಗಳಿಸಿ 70 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನಮ್ಮ ಮಾಧ್ಯಮಗಳು, ರಾಷ್ಟ್ರ ಮಟ್ಟದಲ್ಲಿ ನಡೆಸಲಾದ ಸಮೀಕ್ಷೆಗಳಿಂದ ಹೊರಬಂದ ಮತದಾರರ ಮನೋಗತವನ್ನು ಹೊಸ ವರ್ಷದ ಆರಂಭದಲ್ಲಿ ಪ್ರಕಟಿಸಿದವು.

'ಒಂದೊಮ್ಮೆ ಲೋಕಸಭಾ ಚುನಾವಣೆಯು 2018ರ ಆರಂಭದ ವಾರಗಳಲ್ಲಿ ನಡೆದಿದ್ದೇ ಆದರೆ, ಬಿಜೆಪಿ ತನ್ನ ಎದುರಾಳಿ ಪಕ್ಷಗಳಿಗಿಂತ ಸ್ಪಷ್ಟವಾಗಿ ಮುನ್ನಡೆ ಪಡೆಯಲಿದೆ' ಎಂಬ ಒಮ್ಮತದ ಅಭಿಪ್ರಾಯ ಅವುಗಳಲ್ಲಿ ವ್ಯಕ್ತಗೊಂಡಿತ್ತು. ಅಲ್ಪಸ್ವಲ್ಪ ಬದಲಾವಣೆ ಬಿಟ್ಟರೆ 2014ರ ಫಲಿತಾಂಶವೇ ಹೊರಹೊಮ್ಮಲಿದೆ ಎಂದೂ ಅವು ಹೇಳಿದ್ದವು. ಇದೇ ವೇಳೆ, ನಿರ್ದಿಷ್ಟವಾಗಿ ಬಿಜೆಪಿಯ ಜನಪ್ರಿಯತೆ ಹಾಗೂ ಅದರ ನಾಯಕತ್ವದ ಮೇಲಿನ ಒಲವು ಕಳೆದ ಒಂದು ವರ್ಷದಲ್ಲಿ ಇಳಿಮುಖವಾಗಿದೆ ಎಂಬ ಒಕ್ಕೊರಲ ಅಭಿಪ್ರಾಯವನ್ನೂ ಈ ವರದಿಗಳು ದಾಖಲಿಸಿದ್ದವು.

ಅಧಿಕಾರಕ್ಕೆ ಬಂದು ಐದನೇ ವರ್ಷಕ್ಕೆ ಕಾಲಿಡಲು ಸಜ್ಜಾಗುತ್ತಿರುವ ನರೇಂದ್ರ ಮೋದಿ ಅವರ ನೇತೃತ್ವದ ಎನ್‍ಡಿಎ, ಲೋಕಸಭಾ ಚುನಾವಣೆ ಎದುರಿಸುವ ದಿಸೆಯಲ್ಲಿ ಸ್ಪಷ್ಟವಾಗಿ ಪ್ರಮುಖ ಸವಾಲುಗಳನ್ನು ಎದುರಿಸುತ್ತಿದೆ. ತನ್ನ ನಾಲ್ಕನೇ ವರ್ಷದ ಅಧಿಕಾರಾವಧಿಯಲ್ಲಿ ಜನಪ್ರಿಯತೆಯ ಇಳಿಮುಖಕ್ಕೆ ಗುರಿಯಾದ ಯಾವ ಪಕ್ಷವೂ ಅವಧಿಗೆ ಮುನ್ನ ಲೋಕಸಭಾ ಚುನಾವಣೆಗೆ ಹೋಗುವ ಜೂಜು ಆಡಲಾರದು. ಈ ವರ್ಷಾಂತ್ಯದ ವೇಳೆಗೆ ಅವಧಿಪೂರ್ವ ಚುನಾವಣೆ ನಡೆಯುವ ಬಗ್ಗೆ ಎಲ್ಲೆಡೆ ಮಾತುಗಳು ಕೇಳಿಬರುತ್ತಿದ್ದರೂ ಈಗಿನ ಕೇಂದ್ರ ಸರ್ಕಾರ ರಕ್ಷಣಾತ್ಮಕವಾಗಿ ಕಣಕ್ಕಿಳಿದು, ಅವಧಿ ಪೂರ್ಣಗೊಳಿಸಿದ ನಂತರವೇ ಹೊಸ ಜನಾದೇಶ ನಿರೀಕ್ಷಿಸಲಿದೆ.

ಈ ಸನ್ನಿವೇಶದಲ್ಲಿ ಮುಂದಿನ 16 ತಿಂಗಳುಗಳಿಗೆ ತುಂಬಾ ಮಹತ್ವವಿದೆ. ಪ್ರಸಕ್ತ 2018ರಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ರಾಜಕೀಯ ವಿದ್ಯಮಾನಗಳ ದೃಷ್ಟಿಯಿಂದ ಅತ್ಯಂತ ಗಮನಾರ್ಹ. ಮೊದಲನೆಯದಾಗಿ, ಇವು ಫೈನಲ್ ಮುಖಾಮುಖಿಗೆ ಭೂಮಿಕೆ ಸಿದ್ಧಪಡಿಸುವ ಸೆಮಿಫೈನಲ್ ಪಂದ್ಯಗಳಿದ್ದಂತೆ. ಎರಡನೆಯದಾಗಿ, ಚುನಾವಣೆಗೆ ಸಜ್ಜಾಗಿರುವ ಈ ರಾಜ್ಯಗಳು ಭಾರತದ ರಾಜಕಾರಣದ ವೈವಿಧ್ಯದ ಪ್ರತೀಕಗಳು.

ಈಶಾನ್ಯ ರಾಜ್ಯಗಳಲ್ಲಿ ಎಡಪಕ್ಷಗಳುಮತ್ತು ಕಾಂಗ್ರೆಸ್‍ನಿಂದ ಅಧಿಕಾರ ವರ್ಗಾವಣೆ ಬಯಸುವ ಬಿಜೆಪಿ ವರ್ಷದ ಮಧ್ಯದ ವೇಳೆಗೆ ದಕ್ಷಿಣದಲ್ಲಿಕರ್ನಾಟಕದಲ್ಲಿ ಮತಾದೇಶ ಕೋರಲಿದೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತುರುಸಿನ ಪೈಪೋಟಿಯ ಹೊಸ್ತಿಲಲ್ಲಿವೆ. ವರ್ಷದ ಕೊನೆಯ ಹೊತ್ತಿಗೆ ಬಿಜೆಪಿ ಮಧ್ಯಭಾರತದ ಮೂರು ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳಲು ಫಲಿತಾಂಶ ಕೋರಲಿದೆ. ಈ ಮೂರು ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷವೇ ಅದರ ನೇರ ಎದುರಾಳಿ.

ಈ ಚುನಾವಣೆಗಳಲ್ಲಿ ಜಯಮಾಲೆ ಧರಿಸುವವರು ಯಾರು? ಸೋಲಿನ ರುಚಿ ಉಣ್ಣುವವರು ಯಾರು ಎಂಬುದು 2019ರ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

2018ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎಂಬುದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ ಬಜೆಟ್ ಗಮನಿಸಿದರೆ ಸುಸ್ಪಷ್ಟವಾಗುತ್ತದೆ. ಬಜೆಟ್ ದಿನ ಷೇರುಪೇಟೆ ತೀವ್ರವಾಗಿ ಕುಸಿಯಿತು. ಇದೇ ವೇಳೆ, ಹಣಕಾಸು ಸಚಿವರು ಗ್ರಾಮೀಣ ಆರ್ಥಿಕತೆ ಮತ್ತು ಕೃಷಿ ವಲಯದ ಮೇಲೆ ಗುರಿ ಇಟ್ಟಿದ್ದಾರೆ ಎಂಬುದೂ ಗೊತ್ತಾಯಿತು.

ವಿಶೇಷವಾಗಿ ಗುಜರಾತ್ ಚುನಾವಣಾ ಫಲಿತಾಂಶ ಹೊರಬಿದ್ದ ಮೇಲೆ ಹಾಗೂ ಅಲ್ಲಿನ ಮತದಾನದ ಸ್ವರೂಪ ಕುರಿತಾದ ವಿಶ್ಲೇಷಣೆಗಳ ನಂತರ ಈ ನಡೆಯನ್ನು ನಿರೀಕ್ಷಿಸಲಾಗಿತ್ತು. ಗುಜರಾತ್‍ನಲ್ಲಿ ದೊಡ್ಡ ನಗರಗಳ ಗಟ್ಟಿ ಬೆಂಬಲದಿಂದಾಗಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಯಿತು. ಆದರೆ ಅಲ್ಲಿನ ಗ್ರಾಮೀಣ ಭಾಗದಲ್ಲಿ ಮತಗಳಿಕೆ ಪ್ರಮಾಣ ಮತ್ತು ಆಯ್ಕೆಯಾದ ಮತ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಅದಕ್ಕೆ ತನ್ನ ಸ್ಥಾನಬಲವನ್ನು ಮೂರಂಕಿಗಳಿಗೆ ಏರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಉದ್ಯೋಗ ಅವಕಾಶಗಳು ತಗ್ಗುತ್ತಿರುವ ಬಗ್ಗೆ ಗ್ರಾಮೀಣ ಜನರ ಹತಾಶೆ ಮತ್ತು ಅಸಮಾಧಾನಗಳು ಆಡಳಿತಾರೂಢ ಪಕ್ಷ ಹಾಗೂ ಅದರ ನಾಯಕತ್ವದ ಬಗೆಗಿನ ಜನಪ್ರಿಯತೆ ತಗ್ಗಲು ಮುಖ್ಯ ಕಾರಣಗಳು ಎಂಬುದು ಸ್ಪಷ್ಟವಾಗಿಯೇ ವ್ಯಕ್ತವಾಯಿತು. ಇದನ್ನು ಗಮನದಲ್ಲಿರಿಸಿಕೊಂಡು ಬಜೆಟ್‍ನಲ್ಲಿ ಸೂಕ್ತ ಹಾದಿಯಲ್ಲಿ ಹೆಜ್ಜೆ ಇರಿಸುವ ಪ್ರಯತ್ನ ನಡೆದಿದೆ. ಆದರೆ ಅದಕ್ಕಾಗಿ ಕೇವಲ ಬಜೆಟ್ ಘೋಷಣೆಗಳಷ್ಟೇ ಸಾಕೆ ಎಂಬುದು ಚರ್ಚಾಸ್ಪದ.

ಬಜೆಟ್‍ನಲ್ಲಿನ ಆಶ್ವಾಸನೆಗಳು ಮತ್ತು ರಿಯಾಯಿತಿಗಳು ದೈನಂದಿನ ಜೀವನದ ಆಗುಹೋಗುಗಳಲ್ಲಿ ಅನುಭವಕ್ಕೆ ಬರದಿದ್ದರೆ ಅದು ಸರ್ಕಾರಕ್ಕೆ ಬೆಂಬಲದ ಮಟ್ಟವನ್ನು ವೃದ್ಧಿಸುವಲ್ಲಿ ಸಹಕಾರಿಯಾಗದು ಎಂಬುದು ಅನುಭವ ವೇದ್ಯ.

ಕೇಂದ್ರ ಸರ್ಕಾರದ ಕಾರ್ಯವೈಖರಿ ಅತ್ಯಂತ ಮಹತ್ವದ್ದಾದರೂ ಭಾರತದ ರಾಜಕೀಯ ಸನ್ನಿವೇಶದ ವಾಸ್ತವ ಕೇಂದ್ರಗಳು ರಾಜ್ಯಗಳೇ ಹೊರತು ಕೇಂದ್ರ ಸರ್ಕಾರವಲ್ಲ ಎಂಬುದು ಮನವರಿಕೆಯಾಗಿರುವ ಸಂಗತಿ. ಈ ಧೋರಣೆ ಕೂಡ ಪ್ರಸಕ್ತ ವರ್ಷದ ವಿಧಾನಸಭಾ ಚುನಾವಣೆಗಳು ಗಮನಾರ್ಹ ಎಂಬುದನ್ನು ಪುಷ್ಟೀಕರಿಸುತ್ತದೆ. ವಿಶೇಷವಾಗಿ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಈ ಚುನಾವಣೆಗಳು ಸೃಷ್ಟಿಸಲಿರುವ ಸ್ಥಿತಿಗತಿಯು 2019ರ ಲೋಕಸಭಾ ಚುನಾವಣೆ ವಾತಾವರಣದ ಮೇಲೆ ಪ್ರಭಾವ ಬೀರಲಿದೆ ಎಂಬುದು ನಿಸ್ಸಂಶಯ.

ವರ್ಷಾರಂಭದ ಮೊದಲ ಆರು ತಿಂಗಳ ಅವಧಿಯಲ್ಲಿ ಬಿಜೆಪಿ ವಿವಿಧ ರಾಜ್ಯಗಳಲ್ಲಿ ಆಡಳಿತಾರೂಢ ಪಕ್ಷ ಇಲ್ಲವೇ ಮೈತ್ರಿಕೂಟಗಳಿಗೆ (ನಾಗಾಲ್ಯಾಂಡ್ ಹೊರತುಪಡಿಸಿ) ಮುಖಾಮುಖಿಯಾಗಲಿದೆ. ಈ ರಾಜ್ಯಗಳಲ್ಲಿ ಸರ್ಕಾರದ ಕಾರ್ಯವೈಖರಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಲಿರುವ ಅದು ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲೂ ಲೆಕ್ಕಾಚಾರ ಹಾಕಲಿದೆ. ಸಿಪಿಎಂ ಆಡಳಿತದಲ್ಲಿರುವ ತ್ರಿಪುರಾ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರದಲ್ಲಿರುವ ಮೇಘಾಲಯಕ್ಕೂ ಇದು ಅನ್ವಯಿಸುತ್ತದೆ. ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲಿ ಈಗಾಗಲೇ ತನ್ನ ಅಸ್ತಿತ್ವವನ್ನು ದಾಖಲಿಸಿರುವ ಆ ಪಕ್ಷವು ಈಶಾನ್ಯ ರಾಜ್ಯಗಳಲ್ಲಿ ತನ್ನ ಇರುವಿಕೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಶತಾಯಗತಾಯ ಯತ್ನಿಸಲಿದೆ. ರಾಜಕೀಯವಾಗಿ, ಕಾರ್ಯತಂತ್ರದ ದೃಷ್ಟಿಯಿಂದ ಹಾಗೂ ಭಾರತ ಉಪಖಂಡದಾದ್ಯಂತ ತನ್ನ ಅಸ್ತಿತ್ವದ ಬಗ್ಗೆ ಹೇಳಿಕೊಳ್ಳಲು ಅದು ಹೀಗೆ ಮಾಡುವುದು ಅನಿವಾರ್ಯ ಕೂಡ.

ಇದಕ್ಕೆ ಪ್ರತಿಯಾಗಿ ತ್ರಿಪುರಾದಲ್ಲಿ ಸಿಪಿಎಂ ಮತ್ತು ಮೇಘಾಲಯದಲ್ಲಿ ಕಾಂಗ್ರೆಸ್‍ನಿಂದ ಅದು ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ.

ಕರ್ನಾಟಕದ ವಿಷಯಕ್ಕೆ ಬಂದರೆ ಪರಿಸ್ಥಿತಿ ಬೇರೆ ರೀತಿಯೇ ಇದೆ. ಇಲ್ಲಿನ ಚಿತ್ರಣ ಹಾಗೂ ಪ್ರಮುಖ ಪಕ್ಷಗಳ ಮುಂದಿರುವ ಸವಾಲುಗಳು ಭಿನ್ನವಾಗಿವೆ.

ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯವೇ ಪಕ್ಷದ ಹೆಬ್ಬಾಗಿಲು ಎಂದು ಆ ಪಕ್ಷದ ವಕ್ತಾರರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ಸಂದರ್ಶನದಲ್ಲಿ 'ಕಾಂಗ್ರೆಸ್‍ಮುಕ್ತ ಭಾರತ' ಘೋಷಣೆಗೆ ಹೊಸ ವಿವರಣೆ ನೀಡಿದ್ದರೂ, ಕರ್ನಾಟಕದ ಮಟ್ಟಿಗೆ, ಅಧಿಕಾರದಲ್ಲಿರುವ ಕಾಂಗ್ರೆಸ್ಸನ್ನು ಕಿತ್ತೆಸೆಯಬೇಕೆಂಬ ಅದರ ಮೂಲ ಆಶಯವೇ ಹೆಚ್ಚು ಸಮಂಜಸವೆನ್ನಿಸುತ್ತದೆ. ಈಗಿನ ಪರಿಸ್ಥಿತಿ ನೋಡಿದರೆ, ಆಡಳಿತಾರೂಢ ಕಾಂಗ್ರೆಸ್ಸಾಗಲೀ ಅಥವಾ ಪ್ರತಿಪಕ್ಷವಾದ ಬಿಜೆಪಿಯಾಗಲೀ ಜನಸಾಮಾನ್ಯರಿಗೆ ಮುಖ್ಯವೆನ್ನಿಸುವ ಸಂಗತಿಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿಲ್ಲ ಎಂಬುದು ಮನವರಿಕೆಯಾಗುತ್ತದೆ.

ಕರ್ನಾಟಕದಲ್ಲಿ ಅಭಿವೃದ್ಧಿ ಅಥವಾ ಅಭಿವೃದ್ಧಿಯ ಕೊರತೆ, ಬೆಲೆ ಏರಿಕೆ, ಉದ್ಯೋಗ ಅವಕಾಶಗಳು ಮತ್ತು ಮೂಲಸೌಲಭ್ಯಗಳ ಒದಗಿಸುವಿಕೆ ಬಗ್ಗೆ ಪಕ್ಷಗಳು ಹೆಚ್ಚು ಚಿಂತನೆ ಮಾಡಬೇಕೆಂಬುದು ಜನರ ಅಪೇಕ್ಷೆ ಎಂದು ಮಾಧ್ಯಮ ಸಮೀಕ್ಷೆಗಳು ಹೇಳಿವೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಈ ವಿಷಯಗಳನ್ನು ಪ್ರಚಾರಾಭಿಯಾನದ ಮುಖ್ಯ ವಿಷಯಗಳನ್ನಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿಲ್ಲ.

ಜಾತಿ ಅಸ್ಮಿತೆ ಮತ್ತು ಭಾವುಕವಾದ ಸ್ಥಳೀಯ ವಿಷಯಗಳ ಬಗ್ಗೆ ಅದು ಗಮನ ಕೇಂದ್ರೀಕರಿಸಿದೆ. ಮತ್ತೊಂದೆಡೆ ಬಿಜೆಪಿ ಕೂಡ ಅಭಿವೃದ್ಧಿ ಕಾರ್ಯಸೂಚಿಯ ಬದಲಿಗೆ ಧಾರ್ಮಿಕ ಧ್ರುವೀಕರಣದ ಜಾಡು ಹಿಡಿದಿದೆ. ಮುಂಬರುವ ವಾರಗಳಲ್ಲಿ ಪ್ರಚಾರವು ಯಾವ ಸ್ವರೂಪ ಪಡೆಯಲಿದೆ ಎಂಬುದು ಖಚಿತವಿಲ್ಲವಾದರೂ ಪ್ರಮುಖ ಪಕ್ಷಗಳು ರಾಜ್ಯದ ಜನರ ಹಿತಾಸಕ್ತಿಗಳಿಂದ ವಿಷಯಗಳನ್ನು ವಿಮುಖಗೊಳಿಸುತ್ತಿರುವುದು ಕಂಡುಬರುತ್ತಿದೆ.

ವರ್ಷದ ಉತ್ತರಾರ್ಧದಲ್ಲಿ ಬಿಜೆಪಿಯು ಮಧ್ಯಪ್ರದೇಶ, ಛತ್ತೀಸಗಡ ಮತ್ತು ರಾಜಸ್ಥಾನಗಳಲ್ಲಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿದೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೇ ನೇರ ಎದುರಾಳಿಗಳು. ಬಿಜೆಪಿ ಕೇವಲ ಕೇಂದ್ರ ನಾಯಕತ್ವ ಅವಲಂಬಿಸಿ ಈ ಚುನಾವಣೆಗಳಲ್ಲಿ ಪುನರಾಯ್ಕೆ ಬಯಸಲಾಗದು. ಆಯಾ ರಾಜ್ಯ ಸರ್ಕಾರದ ಕಾರ್ಯಸಾಧನೆ ಮತ್ತು ರಾಜ್ಯ ಮಟ್ಟದ ನಾಯಕರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಗುಜರಾತ್ ಚುನಾವಣೆಯಿಂದ ಸಾಕಷ್ಟು ಪಾಠ ಕಲಿತಿರುವ ಕಾಂಗ್ರೆಸ್ ಪಕ್ಷವು ವಿಶ್ವಾಸಾರ್ಹವಾದ ರಾಜ್ಯ ಮಟ್ಟದ ನಾಯಕರನ್ನು ಪ್ರಮುಖವಾಗಿ ಬಿಂಬಿಸಲಿದೆ. ಜತೆಗೆ ಸ್ಪಷ್ಟವಾದ ಆದ್ಯತಾ ನೀತಿಗಳು ಮತ್ತು ಕಾರ್ಯಕ್ರಮಗಳನ್ನೂ ಪ್ರಚಾರದ ವೇಳೆ ಜನರಿಗೆ ಮನದಟ್ಟು ಮಾಡಿಕೊಡಲಿದೆ.

ಸಾರರೂಪದಲ್ಲಿ ಹೇಳುವುದಾದರೆ, 2018ರ ವಿಧಾನಸಭಾ ಚುನಾವಣೆಗಳ ಸ್ವರೂಪವು 2019ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ನಡೆಯಲಿರುವ ಮಹಾನ್ ಚರ್ಚೆಯ ಗಡಿರೇಖೆಗಳನ್ನು ನಿರ್ಧರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT