ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಖಂಡದ ಹಾಕಿ, ಕ್ರಿಕೆಟ್‌ ಲೋಕದ ಏರಿಳಿತ

Last Updated 13 ಮೇ 2017, 19:30 IST
ಅಕ್ಷರ ಗಾತ್ರ

ಕೇಂದ್ರೀಯ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಗೆ ಸಿದ್ಧತೆ ಮಾಡುವವರನ್ನು ಹೊರತುಪಡಿಸಿದರೆ ಬಹುತೇಕರಿಗೆ ಭಾರತವು ಒಲಿಂಪಿಕ್ಸ್‌ನಲ್ಲಿ ಯಾವ ವರ್ಷದಲ್ಲಿ ಅಸಲಿ ಚಿನ್ನದ ಪದಕ ಗೆದ್ದಿದೆ ಎನ್ನುವುದು ಗೊತ್ತಿರುವುದಿಲ್ಲ. ನಾನು ಇಲ್ಲಿ ‘ಅಸಲಿ ಚಿನ್ನದ ಪದಕ’ ಎನ್ನುವ ಶಬ್ದವನ್ನು ಉದ್ದೇಶಪೂರ್ವಕವಾಗಿಯೇ ಬಳಸಿರುವೆ. 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ನಮಗೆ ಚಿನ್ನದ ಪದಕವು ಡಿಸ್ಕೌಂಟ್ ರೂಪದಲ್ಲಿ ದೊರೆತಿತ್ತು. ಅಂದಿನ ಸೋವಿಯತ್ ಒಕ್ಕೂಟವು ಆಫ್ಘಾನಿಸ್ತಾನವನ್ನು ಅತಿಕ್ರಮಿಸಿರುವುದನ್ನು ಪ್ರತಿಭಟಿಸಿ ಹಾಕಿ ಆಟದ ಪ್ರಬಲ ದೇಶಗಳು ಕ್ರೀಡಾಕೂಟವನ್ನು ಬಹಿಷ್ಕರಿಸಿದ್ದವು.

1968ರಲ್ಲಿ ಮೆಕ್ಸಿಕೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿತ್ತು. 1975ರಲ್ಲಿ ಕ್ವಾಲಾಲಂಪುರದಲ್ಲಿ ನಡೆದಿದ್ದ ವಿಶ್ವಕಪ್‌ ನಲ್ಲಿಯೂ  ಭಾರತದ ಹಾಕಿ ತಂಡವು ಅಂತಿಮ ಪಂದ್ಯದಲ್ಲಿ ಗೆಲುವು ದಾಖಲಿಸಿತ್ತು.

ಅರವತ್ತರ ದಶಕದವರೆಗೆ, ಅಂತರರಾಷ್ಟ್ರೀಯವಾಗಿ  ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ನಡೆಯುತ್ತಿದ್ದ ಅಂತಿಮ ಪಂದ್ಯಗಳನ್ನು ತುಂಬ ಹಗುರವಾಗಿ ಪರಿಗಣಿಸಲಾಗುತ್ತಿತ್ತು. ನ್ಯಾಯಯುತವಾಗಿ ಹೇಳುವುದಾದರೆ,  ಜಾಗತಿಕ ಮಟ್ಟದಲ್ಲಿ ಮೂರು ಅಥವಾ ನಾಲ್ಕನೆ ಸ್ಥಾನದಲ್ಲಿ ಇರಲು ಪಾಕಿಸ್ತಾನವು ಬಹಳ ದಿನಗಳಿಂದ ಶ್ರಮಿಸುತ್ತಲೇ ಇದೆ. ಇನ್ನೊಂದೆಡೆ, ಭಾರತದ ಹಾಕಿ  ತಂಡವು ಒಲಿಂಪಿಕ್ಸ್‌, ವಿಶ್ವಕಪ್‌ ಮತ್ತು ಚಾಂಪಿಯನ್ಸ್‌ ಟ್ರೋಫಿಯ ಅರ್ಹತಾ ಮಟ್ಟ ತಲುಪಲು ಹೋರಾಟ ನಡೆಸುತ್ತಲೇ ಇದೆ.

ಇದಕ್ಕೆಲ್ಲ ನಾವು ಮೊದಲು  ಭಾರತದ ಹಾಕಿ ಫೆಡರೇಷನ್‌ ಅಧಿಕಾರಿಗಳನ್ನು ದೂರಬೇಕಾಗುತ್ತದೆ. ನಂತರ ಆಟಗಾರರಿಗೆ ಉತ್ತೇಜನ ಭತ್ಯೆಯ ಕೊರತೆ, ಕ್ರಿಕೆಟ್‌ನತ್ತ ಎಲ್ಲರ ಚಿತ್ತ ಹರಿದಿರುವುದು ಮತ್ತು ಅಂತಿಮವಾಗಿ ಹಾಕಿ ಮೈದಾನದಲ್ಲಿ ಆಸ್ಟ್ರೊ ಟರ್ಫ್‌ ಅಳವಡಿಸಿರುವುದನ್ನು ಹೊಣೆ ಮಾಡಬೇಕಾಗುತ್ತದೆ. ಮಳೆ ಬಂದರೂ ಆಟವಾಡಬಹುದಾದ, ಎಲ್ಲ ಬಗೆಯ  ಹವಾಮಾನಗಳಲ್ಲೂ ಆಟಕ್ಕೆ ಅಡ್ಡಿಯಾಗದ ಮೈದಾನದ  ಈ ಕೃತಕ  ಹೊರಮೈ ಕೊಡುಗೆಯೂ ಸಾಕಷ್ಟಿದೆ.

ಒಂಬತ್ತು ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಮತ್ತು ವಿಶ್ವಕಪ್‌ ಗೆದ್ದಿರುವ ಭಾರತದ ಹಾಕಿ ಬಗ್ಗೆ ನಾವು ಕ್ರಮೇಣ ಮಾತನಾಡುವುದನ್ನೇ ನಿಲ್ಲಿಸಿದೆವು. ಇದು ನಮ್ಮ  ರಾಷ್ಟ್ರೀಯ ಅಧಿಕೃತ ಕ್ರೀಡೆಯಾಗಿದ್ದರೂ, ಅದನ್ನು ನಿರ್ಲಕ್ಷಿಸುತ್ತಲೇ ಬಂದಿದ್ದೇವೆ. ಕಟ್ಟಾ ಅಭಿಮಾನಿಗಳಾಗಿರುವ ನನ್ನಂತಹ ಕೆಲವರನ್ನು ಬಿಟ್ಟರೆ ಅನೇಕರು ಈ ಕ್ರೀಡೆಯಿಂದಲೇ ದೂರ ಸರಿದಿದ್ದಾರೆ.

ಇನ್ನೊಂದೆಡೆ ಪಾಕಿಸ್ತಾನದ ಹಾಕಿಯೂ ಇದೇ ದುಃಸ್ಥಿತಿಗೆ ಒಳಗಾಯಿತು.  ಜಾಗತಿಕ ಮಟ್ಟದ ಕ್ರೀಡಾಕೂಟಗಳಿಗೆ ಅರ್ಹತೆ ಪಡೆಯಲು ಅದರಿಂದಲೂ ಸಾಧ್ಯವಾಗಲಿಲ್ಲ.  ಎಂಟು ದಶಕಗಳ ಕಾಲ ವಿಶ್ವ ಹಾಕಿ ರಂಗವನ್ನು ಆಳಿದ ಭಾರತ ಉಪಖಂಡದ ಹಾಕಿಯ ಸುವರ್ಣ ಯುಗ ಬಹಳ ಹಿಂದೆಯೇ ಅಂತ್ಯಕಂಡಿದೆ.

ಇದೇ ಹೊತ್ತಿಗೆ ಯುರೋಪ್‌ನ ದೇಶಿ ಲೀಗ್‌ ಮತ್ತು ರಾಷ್ಟ್ರೀಯ ತಂಡಗಳು ಏಳಿಗೆ ಕಾಣಲಾರಂಭಿಸಿದವು.  ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗಳ ಹಾಕಿ ತಂಡಗಳು ಭಾರತದ ವಿರುದ್ಧದ ಪಂದ್ಯಗಳಲ್ಲಿ ಟೆನಿಸ್‌ ಸ್ಕೋರ್ ಮಾದರಿಯಲ್ಲಿ ಗೆಲುವು ಸಾಧಿಸತೊಡಗಿದವು. ಇಂತಹ ವಿದ್ಯಮಾನಗಳನ್ನು ಕಂಡ ಜಾಗತಿಕ ಹಾಕಿ ಫೆಡರೇಷನ್‌ ಕಳವಳಪಟ್ಟಿತು.  ಉಪಖಂಡದ ಈ ಕ್ರೀಡೆ ಸಂಪೂರ್ಣವಾಗಿ ಮೂಲೆಗುಂಪಾದರೆ ಅದರ ಪರಿಣಾಮಗಳೇನು ಎನ್ನುವುದು ಅದರ ಆತಂಕವಾಗಿತ್ತು. ಭಾರತದ ಹಾಕಿ ಉಳಿಸಲು ಫೆಡರೇಷನ್‌ ಈಗ ಮುಂದಾಗಿದೆ. ನೆರವಿನ ಭಾಗವಾಗಿ ಹಣ ಸಹಾಯ ಒದಗಿಸುತ್ತಿದೆ. ಅದರ ಔದಾರ್ಯದ ಫಲವಾಗಿ ವಿದೇಶಗಳ ಕೆಲ ಜನಪ್ರಿಯ ಹಾಕಿ ಕೋಚ್‌ಗಳ ಸೇವೆಯೂ ದೊರೆಯುತ್ತಿದೆ. ಆಸ್ಟ್ರೇಲಿಯಾದ ರಿಕ್‌ ಚಾರ್ಲ್ಸ್‌ವರ್ತ್‌ ಅವರು ಭಾರತಕ್ಕೆ ಬರಲಿದ್ದಾರೆ. ಇದೊಂದು ಬಗೆಯಲ್ಲಿ ದೇಶಿ ಹಾಕಿಗೆ ಕೃತಕ ಉಸಿರಾಟ ಒದಗಿಸಿದಂತಾಗಿದೆಯಷ್ಟೆ.

ಇತ್ತೀಚಿನ ವರ್ಷಗಳಲ್ಲಿ ಹಾಕಿ ಕ್ರೀಡೆಯಲ್ಲಿ ವ್ಯಾಪಕ ಬದಲಾವಣೆಗಳಾಗಿವೆ.  ಚೆಂಡನ್ನು ಮೆಲ್ಲಮೆಲ್ಲನೆ ಹೊಡೆದುಕೊಂಡು ಹೋಗುತ್ತ, ಅದರ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತ ಹುಸಿ ದಾಳಿಯ ನಟನೆ ಮಾಡುತ್ತ, ಎದುರಾಳಿಗಳಿಂದ ನುಣುಚಿಕೊಳ್ಳುತ್ತ ಗೋಲ್‌ನತ್ತ ಸಾಗುವ ನಮ್ಮ ಸಾಂಪ್ರದಾಯಿಕ ಆಟವು ತನ್ನ ಪ್ರಸ್ತುತತೆ ಕಳೆದುಕೊಂಡಿದೆ.

ಆಸ್ಟ್ರೊ ಟರ್ಫ್‌ ಒಂದೇ ಇಲ್ಲಿ ಮುಖ್ಯ ಸಂಗತಿಯಲ್ಲ. ಎಲ್ಲ ಬಗೆಯ ಹವಾಮಾನಗಳಲ್ಲೂ ಆಟವಾಡಬಹುದಾದ ರೀತಿಯಲ್ಲಿ ಮೈದಾನವನ್ನು ಸಜ್ಜುಗೊಳಿಸಬೇಕಾಗಿದೆ. ಆಟಕ್ಕೆ ವೇಗ ನೀಡುವ, ಹೆಚ್ಚಿನ ಸಂಖ್ಯೆಯಲ್ಲಿ ಗೋಲ್‌ ಬಾರಿಸುವ ಮತ್ತು ರೆಫರಿಯ ಶಿಳ್ಳೆಗಳನ್ನು ಕಡಿಮೆಗೊಳಿಸುವ  ಬಗೆಯಲ್ಲಿ ನಿಯಮಗಳನ್ನು ಬದಲಿಸಲಾಗಿದೆ.
ಆಟಕ್ಕೆ ಹೆಚ್ಚಿನ ವೇಗ ನೀಡುವುದು ಈ ನಿಯಮಗಳ ಬದಲಾವಣೆಯ ಮುಖ್ಯ ಉದ್ದೇಶವಾಗಿದೆ. ಜಟಿಲ ಸ್ವರೂಪದ ಕಾರ್ಯತಂತ್ರ ಹೆಣೆಯುವ ಉಪಖಂಡದ ಆಟದ ಕೌಶಲ್ಯಗಳನ್ನು ಹಾಳು ಮಾಡುವ ಹುನ್ನಾರವೂ ಇಲ್ಲಿ ಕೆಲಸ ಮಾಡಿದೆ.

ಉದಾಹರಣೆಗೆ, ಫುಟ್‌ಬಾಲ್‌ ಪಂದ್ಯ ವೀಕ್ಷಿಸುವಾಗ  ಆಫ್‌ ಸೈಡ್‌ನ ಚಮತ್ಕಾರವನ್ನು ಕಾಣುವಿರಿ. ಈ ನಿಯಮ ರದ್ದಾದರೆ, ಗೋಲು ಗಳಿಸುವುದು ತುಂಬ ಸುಲಭವಾಗಲಿದೆ.

ಹೊಸ ಹಾಕಿಯಲ್ಲಿ ವೇಗ ಮತ್ತು ಸಾಮರ್ಥ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಐವರು ಮುಂಚೂಣಿಯಲ್ಲಿ ಇರುವ ( 5–3–2–1) ಏಷ್ಯಾದ ಹಳೆಯ ನಿಯಮವನ್ನು ಹೂತು ಹಾಕಲಾಗಿದೆ. ಹೊಸ ನಿಯಮದ ಅನುಸಾರ, ಅಪಾಯಕಾರಿ ಸ್ಥಳದಲ್ಲಿ ಎದುರಾಳಿಯ ದಾಳಿಕೋರ ಹೊಂಚುಹಾಕಿ ನಿಂತಿರುತ್ತಾನೆ. ದೀರ್ಘ ಪಾಸ್‌ ನೀಡಿ ಪ್ರತಿಸ್ಪರ್ಧಿಯನ್ನು ಬಲೆಗೆ ಬೀಳಿಸಿ ಗೋಲ್ ಆವರಣದ ಒಳಗೆ ಮೆಲ್ಲನೆ ಚೆಂಡನ್ನು ನೂಕಿ ಗೆಲುವಿನ ನಗೆ ಬೀರುತ್ತಾನೆ.

ಏಷ್ಯಾ ಖಂಡವು ಹಾಕಿ ಪ್ರಾಬಲ್ಯದ ನೆಲೆಯಾಗಿದ್ದರೂ,  1924ರಿಂದ ಇತ್ತೀಚಿನವರೆಗೆ ಅಂದರೆ, 2017ರಲ್ಲಿ  ಭಾರತದ ನರೀಂದರ್‌ ಬಾತ್ರಾ ಅವರು ಅಧಿಕಾರ ವಹಿಸಿಕೊಳ್ಳುವವರೆಗೆ  ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನಲ್ಲಿ (ಎಫ್ಐಎಚ್) ಯುರೋಪಿಯನ್ನರೇ ತಮ್ಮ  ಏಕಸ್ವಾಮ್ಯವನ್ನು ಮುಂದುವರೆಯಿಸಿಕೊಂಡು ಬಂದಿದ್ದರು.  ಹಣ ಹೆಚ್ಚಿಗೆ ಇರುವಲ್ಲಿಯೇ ಯಾವುದೇ ಒಂದು ಕ್ರೀಡೆಯ ಹಣೆಬರಹ ನಿರ್ಧಾರ ಆಗುತ್ತದೆ.

ಹಾಕಿಯಲ್ಲಿ ಪದಕಗಳಿಗೇನೂ ಬರವಿಲ್ಲ. ಆದರೆ, ಈ ಕ್ರೀಡೆ ಜನಪ್ರಿಯಗೊಳಿಸಲು ಸಾಕಷ್ಟು ಹಣ ಮತ್ತು ಮಾರುಕಟ್ಟೆಯೇ ಇಲ್ಲ. ಜಾಗತಿಕ ಮಟ್ಟದಲ್ಲಿಯೂ ಹಾಕಿ ಅವಸಾನದ ಹಾದಿಯಲ್ಲಿ ಇದೆ. ಈ ಮೊದಲ ಕಥೆಯ ಪಾಠ ಏನೆಂದರೆ, ಕ್ರೀಡೆಯೊಂದರಲ್ಲಿ ನೀವು ನಿಮ್ಮ ಸಾಮರ್ಥ್ಯ ಸಾಬೀತುಪಡಿಸದಿದ್ದರೆ, ಇತರರು ನಿಮ್ಮ ಮೇಲೆ ಸವಾರಿ ಮಾಡುತ್ತಲೇ ಇರುತ್ತಾರೆ.

ಎರಡನೇಯ ಕಥೆ ಕ್ರಿಕೆಟ್‌ನದು. ಭಾರತದಂತೆ ಪಾಕಿಸ್ತಾನ ಕೂಡ ಇಂಗ್ಲಿಷ್‌ ಕ್ಲಬ್‌ ವ್ಯವಸ್ಥೆಯನ್ನೇ ಅಳವಡಿಸಿಕೊಂಡಿದೆ.  ಆದರೆ, ಅಲ್ಲಿ ಆರಂಭದಿಂದಲೇ ಸರ್ಕಾರ ಕ್ರಿಕೆಟ್‌ ಮೇಲೆ ನಿಯಂತ್ರಣ ಹೊಂದಿದೆ. 1952ರಲ್ಲಿ ಸುಗ್ರೀವಾಜ್ಞೆ ಮೂಲಕ ಕ್ರಿಕೆಟ್‌ ಮಂಡಳಿ ಸ್ಥಾಪಿಸಿತ್ತು. ಕ್ರಿಕೆಟ್‌ ಮಂಡಳಿಯಲ್ಲಿ  ಸ್ವಾಯತ್ತತೆಯಾಗಲಿ ಅಥವಾ ಖಾಸಗಿ ನಾಯಕತ್ವವಾಗಲಿ ಇಲ್ಲ. ಕ್ರಿಕೆಟ್‌ ಆಡುವುದು ರಾಷ್ಟ್ರೀಯ ಕರ್ತವ್ಯ ಎಂದೇ ಅಲ್ಲಿನ ಸರ್ಕಾರ ಪರಿಗಣಿಸಿದೆ. ಹೀಗಾಗಿ ಅದನ್ನು ನಿಯಂತ್ರಿಸುವ ಅರ್ಹತೆ ತನಗೆ ಇದೆ ಎಂದೇ ಸರ್ಕಾರ ಭಾವಿಸಿದೆ.

ಪಾಕಿಸ್ತಾನದ ಮೊದಲ ಸರ್ವಾಧಿಕಾರಿ ಅಯೂಬ್‌ ಖಾನ್ ಅವರು, 1957ರಲ್ಲಿ  ಮಂಡಳಿಯನ್ನು ಪುನರ್‌ರಚಿಸಿ, ತಮ್ಮನ್ನೂ ಸೇರಿದಂತೆ ಮೂವರು ಉಪಾಧ್ಯಕ್ಷರನ್ನು ನೇಮಿಸಿದ್ದರು. ಆ ದಿನಗಳಿಂದಲೇ ಕ್ರಿಕೆಟ್‌ ಮಂಡಳಿಯಲ್ಲಿ ಅಪ್ರಾಮಾಣಿಕ ಚಟುವಟಿಕೆಗಳು ನಡೆಯುತ್ತ ಬಂದಿವೆ.

ಕ್ರಿಕೆಟ್‌ ಅಭಿಮಾನಿಗಳು ತಮ್ಮ ಸ್ಮೃತಿಪಟಲದಲ್ಲಿ ಉಳಿದಿರುವ ಅನೇಕ ಘಟನೆಗಳನ್ನು ಉಲ್ಲೇಖಿಸುತ್ತಾರೆ.  ಪಾಕಿಸ್ತಾನದಲ್ಲಿನ ನನ್ನ ಇಬ್ಬರು ಪರಿಚಯಸ್ಥರಿಗೆ ಫೋನ್‌ ಮಾಡಿದಾಗ ಅವರೂ ಇದನ್ನು ದೃಢಪಡಿಸಿದರು. 1974ರಲ್ಲಿ ಪಾಕಿಸ್ತಾನದಲ್ಲಿನ ಸರ್ಕಾರವು ತಾತ್ಪೂರ್ತಿಕ ಮಂಡಳಿಯನ್ನು ರಚಿಸುತ್ತದೆ. ಅಲ್ಲಿಂದಾಚೆಗೆ, ಸೇವೆಯಲ್ಲಿದ್ದ ಲೆಫ್ಟಿನೆಂಟ್‌ ಜನರಲ್‌ ತೌಕಿರ್ ಜಿಯಾ, ಉನ್ನತ ಅಧಿಕಾರಿ ಶಹರ್ಯಾರ್‌ ಖಾನ್‌, ರಾಜಕಾರಣಿಗಳು ಮತ್ತು ಸದ್ಯಕ್ಕೆ ಪತ್ರಿಕೆಯೊಂದರ ಸಂಪಾದಕ ನಜಂ ಸೇಠಿ ಅವರನ್ನು ಕ್ರಿಕೆಟ್‌ ಮಂಡಳಿ ಮುನ್ನಡೆಸಲು ನೇಮಿಸಲಾಗಿದೆ. ಪ್ರಧಾನಿ ಅಥವಾ ಅಧ್ಯಕ್ಷ, ಮಂಡಳಿಯ ಪ್ರಧಾನ ಪೋಷಕರಾಗಿರುತ್ತಾರೆ.

ಕ್ರಿಕೆಟ್‌ ಆಟಗಾರ ಅಥವಾ ಕ್ರಿಕೆಟ್‌ ವೃತ್ತಿನಿರತರು ಹೊರತುಪಡಿಸಿ, ಪ್ರತಿಯೊಬ್ಬರೂ  ಕ್ರಿಕೆಟ್‌ ಮಂಡಳಿಯ ಮುಖ್ಯಸ್ಥರಾಗಲು ಬಯಸುತ್ತಾರೆ. ಈ ವಿಷಯದಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯೂ ಮುಂಚೂಣಿಯಲ್ಲಿ ಇರುತ್ತಾರೆ. ಇದು ನಿಜಕ್ಕೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಸಂಬಂಧಿಸಿದ ವಾಸ್ತವ ವಿಚಾರವಾಗಿದೆ. ಓದುಗರು ಇದನ್ನು ಭಾರತದಲ್ಲಿನ ಕ್ರಿಕೆಟ್‌ ವಿದ್ಯಮಾನಗಳಿಗೆ ಹೇಗೆ ಬೇಕಾದರೂ ಹೋಲಿಸಿ ನೋಡಬಹುದು. ಪಾಕ್‌ ಕ್ರಿಕೆಟ್ ಮಂಡಳಿಯ  ಹಣಕಾಸು ಪರಿಸ್ಥಿತಿ ಹಲವಾರು ವರ್ಷಗಳಿಂದ ಬಿಕ್ಕಟ್ಟಿನಲ್ಲಿಯೇ ಮುಂದುವರೆದಿದೆ. 2004ರಲ್ಲಿ ಭಾರತದ ಪ್ರವಾಸಕ್ಕೆ ಬಂದಾಗ ಮಾತ್ರ ಮಂಡಳಿಯು ಸಾಕಷ್ಟು ಲಾಭ ಬಾಚಿಕೊಂಡಿತ್ತು.

ಹದಿನೈದು ವರ್ಷಗಳ ಹಿಂದಿನವರೆಗೆ, ವಿಶ್ವದ ಅತ್ಯುತ್ತಮ ಕ್ರಿಕೆಟ್‌ ಆಟಗಾರರು ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ತೆರಳುತ್ತಿದ್ದರು. ಕೌಂಟಿ ಕ್ರಿಕೆಟ್‌ನ ಜನಪ್ರಿಯತೆ ಕಡಿಮೆಯಾಗುತ್ತಿದ್ದಂತೆ ಅದು ಪಾಕಿಸ್ತಾನದ ಕ್ರಿಕೆಟ್‌ ಲೋಕದ ಮೇಲೆ ದೊಡ್ಡ ಆಘಾತ ಬೀರಿತು. ಅಲ್ಲಿನ ಕ್ರಿಕೆಟ್‌  ಶಕ್ತಿಯೇ ಉಡುಗಿತು. ಆದರೆ, ಇದು ಭಾರತದ ಕ್ರಿಕೆಟ್‌ ಮೇಲೆ ಗಂಭೀರ ಸ್ವರೂಪದ ಪ್ರತಿಕೂಲ ಪರಿಣಾಮ ಬೀರಲೇ ಇಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ಈಗ ಭಾರತ ವಿಶ್ವದ ಇತರೆಡೆಗಳಲ್ಲಿನ ಪ್ರತಿಭಾನ್ವಿತರನ್ನು ತನ್ನ ನೆಲದಲ್ಲಿ ಆಡಲು ಆಹ್ವಾನಿಸುತ್ತಿದೆ. ಈ ಎರಡೂ ದೇಶಗಳಲ್ಲಿನ ಕ್ರಿಕೆಟ್‌ ಸಾಗಿದ ಮಾರ್ಗವು ಸಂಪೂರ್ಣ ಭಿನ್ನವಾಗಿದೆ.

ಈ ಎರಡನೆ ಕಥೆಯು,  ಸರ್ಕಾರ ಅಥವಾ ನ್ಯಾಯಾಂಗದ ಹಸ್ತಕ್ಷೇಪದ ಫಲವಾಗಿ ಕ್ರೀಡೆಯೊಂದು ಯಾವ ರೀತಿಯಲ್ಲಿ ಅವಸಾನದತ್ತ ಸಾಗಬಲ್ಲದು ಎನ್ನುವ ಪಾಠ ಹೇಳುತ್ತದೆ.  ವೃತ್ತಿನಿರತ ಕ್ರೀಡೆಯೊಂದನ್ನು ಖಾಸಗಿಯವರು ಅತ್ಯುತ್ತಮವಾಗಿ ನಿಭಾಯಿಸಬಲ್ಲರೇ ಎನ್ನುವ ಪ್ರಶ್ನೆಗೂ ಇದು ಎಡೆಮಾಡಿಕೊಡುತ್ತದೆ.

ಮೂರನೇ ಕಥೆ ತುಂಬ ಹರ್ಷದಾಯಕವಾಗಿದೆ. ದೇಶಿ ಹಾಕಿಯು ಪುನಶ್ಚೇತನದ ಹಾದಿಯಲ್ಲಿ ಇರುವುದನ್ನು ಇದು ಹೇಳುತ್ತದೆ. ಹಾಕಿ ಕಥೆ ಮುಗಿದೇ ಹೋಯಿತು ಎನ್ನುವ ಹಂತದಲ್ಲಿ ಸರ್ಕಾರದ ಬೆಂಬಲ ಹೊಂದಿದ ಹೊಸ ನಾಯಕತ್ವವು ಈಗ ಹಾಕಿಗೆ ಜೀವ ತುಂಬಲು ಹೊರಟಿದೆ.  ದೇಶಿ ಕ್ರಿಕೆಟ್‌ ನಿರ್ವಹಿಸುತ್ತಿರುವವರು ಹಾಕಿ ಮರುಹುಟ್ಟು ಪಡೆಯಲು ಸಲಹೆ ನೀಡಲಿದ್ದಾರೆ.

ದೇಶಿ ಹಾಕಿ ಲೀಗ್‌ ನಡೆಸುವ ಚಿಂತನೆಗೆ ಈಗ ಚಾಲನೆ ಸಿಕ್ಕಿದೆ. ಕೆಲ ವೈಫಲ್ಯಗಳ ಹೊರತಾಗಿಯೂ ಇದು ಯಶಸ್ಸು ಕಾಣುವ ಲಕ್ಷಣಗಳನ್ನು ತೋರಿಸುತ್ತಿದೆ. ವಿಶ್ವದ ಇತರೆಡೆಗಳಲ್ಲಿನ  ಪ್ರತಿಭಾನ್ವಿತ ಹಾಕಿ ಆಟಗಾರರನ್ನು ಸೆಳೆಯಲಾಗುತ್ತಿದೆ. ರಾಂಚಿಯಂತಹ ಎರಡನೆ ಹಂತದ ನಗರಗಳಲ್ಲಿನ ಕ್ರೀಡಾಂಗಣಗಳು ಭರ್ತಿಯಾಗುತ್ತಿವೆ.

ಹಾಕಿಯಲ್ಲಿ ಭಾರತವು ವಿಶ್ವವನ್ನೇನೂ  ಗೆಲ್ಲುತ್ತಿಲ್ಲ. ಕ್ರೀಡೆಯ ದಾಳಗಳು ಮತ್ತು ಅದರ ಯುರೋಪ್‌ಮಯ ನಿಯಮಗಳು  ಏಷ್ಯಾದ ತಂಡದ ಪಾಲಿಗೆ ಇನ್ನೂ ಸವಾಲಾಗಿಯೇ ಪರಿಣಮಿಸಿವೆ. ಆದರೆ, ಈಗ ಭಾರತದ ಹಾಕಿ ತಂಡ ಏಷ್ಯಾದ ನಂಬರ್‌ 1 ಸ್ಥಾನದಲ್ಲಿ ನಿರಂತರವಾಗಿ ಮುಂದುವರೆದಿದೆ. ಜಾಗತಿಕ ಮಟ್ಟದಲ್ಲಿ 6ನೇ ಸ್ಥಾನದಲ್ಲಿ ಇದೆ.  ಹೀಗಾಗಿ ವಿಶ್ವಕಪ್‌, ಒಲಿಂಪಿಕ್ಸ್‌ ಮತ್ತು ಚಾಂಪಿಯನ್ಸ್‌ ಟ್ರೋಫಿಯಂತಹ ದೊಡ್ಡಮಟ್ಟದ ಕ್ರೀಡಾಕೂಟಗಳಿಗೆ ಸಹಜವಾಗಿಯೇ  ಅರ್ಹತೆ ಗಿಟ್ಟಿಸಿಕೊಂಡಿದೆ.

ವಿಶ್ವದ ಬಲಾಢ್ಯ ತಂಡಗಳ ಎದುರಿನ ನಮ್ಮ ಸಾಧನೆಯು ಸುಧಾರಿಸುತ್ತಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳ ಎದುರು ಹೀನಾಯ ಸೋಲು ಕಾಣುತ್ತಿದ್ದ ದಿನಗಳು ಈಗ ನೆನಪಿನಿಂದ ಮರೆಯಾಗುತ್ತಿವೆ. ಭಾರತದ ಹಾಕಿಯು ಜಾಗತಿಕ ಹೊಸ  ಶಕ್ತಿಯಾಗಿ ಬೆಳೆಯುತ್ತಿದೆ.  ಹಾಕಿಗೆ ಹೊಸ ಮಾರುಕಟ್ಟೆ ಸೃಷ್ಟಿಸಿರುವ ಭಾರತ, ಅದನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡುತ್ತಿದೆ.

ಇದರ ಪರಿಣಾಮವಾಗಿ, ಶ್ರೇಷ್ಠ ಆಟಗಾರರು ಪಂದ್ಯಗಳಲ್ಲಿ ಭಾಗವಹಿಸಲು ಭಾರತಕ್ಕೆ ಬರುತ್ತಿದ್ದಾರೆ. ಜತೆಗೆ, ಭಾರತೀಯರೊಬ್ಬರು ‘ಎಫ್‌ಐಎಚ್‌’ನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಈ ಹಿಂದೆ ದೇಶಿ ಹಾಕಿ ತನ್ನ ಹಿರಿಮೆ ಕಳೆದುಕೊಂಡಂತೆ, ಭಾರತದ ಕ್ರಿಕೆಟ್‌ ಜಾಗತಿಕ ಕ್ರಿಕೆಟ್‌ ಲೋಕದಲ್ಲಿ ತನ್ನ ಪ್ರಭಾವ ಕಳೆದುಕೊಂಡರೆ ಏನಾಗುವುದು. ವರಮಾನ ಹಂಚಿಕೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯಲ್ಲಿ  (ಐಸಿಸಿ) ಭಾರತ  ಕ್ರಿಕೆಟ್‌ ಮಂಡಳಿಗೆ ಸೋಲು ಉಂಟಾಗಿದೆ. ಹಣದ ಮುಗ್ಗಟ್ಟು ಎದುರಿಸುತ್ತಿರುವ ಮತ್ತು ದುರಾಸೆಯ ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯು (ಐಒಸಿ), ಕ್ರಿಕೆಟ್‌ ಅನ್ನು ಒಲಿಂಪಿಕ್ಸ್‌ನಲ್ಲಿ ಸೇರ್ಪಡೆ ಮಾಡು

ವಲ್ಲಿ ಯಶಸ್ವಿಯಾದರೆ,  ನಿರ್ದಿಷ್ಟ ಕ್ರೀಡಾಂಗಣದಲ್ಲಿ  ಪಂದ್ಯ ನಡೆಯುವ ಬದಲಿಗೆ ಬೇರೆ ತಾಣಗಳಲ್ಲೂ ಕ್ರಿಕೆಟ್‌ ನಡೆಸಲು ನೆರವಾಗುವ ‘ಡ್ರಾಪ್‌ ಇನ್‌ ಪಿಚ್‌’ ಪರಿಕಲ್ಪನೆ ಜನಪ್ರಿಯವಾಗಲಿದೆ. ಇದು ದೇಶಿ ಕ್ರಿಕೆಟ್‌ನ ಸ್ಪಿನ್‌ ಬೌಲಿಂಗ್‌ನ ಅನುಕೂಲತೆಗಳಿಗೆ ಕೊನೆ ಹಾಡಲಿದೆ.

ಇದು ಅತಿಶಯೋಕ್ತಿ ಏನಲ್ಲ. ಲಾರ್ಡ್ಸ್‌ನಿಂದ ವಿಶ್ವ ಕ್ರಿಕೆಟ್‌ ನಿಯಂತ್ರಿಸುವ ದಿನಗಳಲ್ಲಿ ಏನಾಯಿತು ಎನ್ನುವುದನ್ನು ನಾವು ಇಲ್ಲಿ ತಿಳಿದುಕೊಳ್ಳಬೇಕು. ಸ್ಪಿನ್‌ ಬೌಲರ್‌ಗಳ ನೆರವಿನಿಂದ ಭಾರತ 1971–72ರಲ್ಲಿ ವಿದೇಶಗಳಲ್ಲಿ ಎರಡು ಸರಣಿಗಳಲ್ಲಿ ಗೆಲುವು ಸಾಧಿಸಿತ್ತು.  ಆಗ ನಿಯಮಗಳಲ್ಲಿ ಬದಲಾವಣೆ ತಂದು ಲೆಗ್‌ ಟ್ರ್ಯಾಪ್‌ನಲ್ಲಿ (ಲೆಗ್‌ಸೈಡ್‌) ಫೀಲ್ಡರ್‌ಗಳ ನಿಯೋಜನೆ ಮೇಲೆ ನಿರ್ಬಂಧ ವಿಧಿಸಿತ್ತು.

ವೇಗದ ಬೌಲಿಂಗ್‌ನ ವೆಸ್ಟ್‌ ಇಂಡೀಸ್‌ ತಂಡವನ್ನು ನಿಯಂತ್ರಿಸಲಿಕ್ಕಾಗದೆ ಹೋದಾಗ ಇಂಗ್ಲೆಂಡ್‌ನ ಇದೇ ಜಾಣರು ಬೌನ್ಸರ್‌ಗಳ ಮೇಲೆ ಕಡಿವಾಣ ಹೇರಿದರು. ಅಲ್ಲಿಂದಾಚೆಗೆ ವೆಸ್ಟ್‌ ಇಂಡೀಸ್‌ ತಂಡ ಚೇತರಿಸಿಕೊಳ್ಳಲಿಲ್ಲ.

ಇಂತಹ ಸಂಗತಿಗಳು ಪುನರಾವರ್ತನೆಗೊಳ್ಳದಂತೆ ಭಾರತ ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ಕಸರತ್ತು ಮಾಡಿದೆ.  ಅಂತಹ ಅಧಿಕಾರ ಚಲಾಯಿಸದಂತೆ, ಹೇಳಿದಂತೆ ಕೇಳಲು ಈಗ  ಮತ್ತೆ ಬುದ್ಧಿಮಾತು ಹೇಳಲಾಗಿದೆ. ನನ್ನ ಮೇಲೆ ನಿಮಗೆ ವಿಶ್ವಾಸ ಇರದಿದ್ದರೆ, ಸುಪ್ರೀಂಕೋರ್ಟ್‌ ನೇಮಿಸಿರುವ ಆಡಳಿತಗಾರರ ಸಮಿತಿಯು (ಸಿಒಎ) ಬಿಸಿಸಿಐಗೆ ನೀಡಿರುವ ಆದೇಶಗಳನ್ನು ನೀವು ಓದಬಹುದು.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT