ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿದವರ ಪ್ರೇಮಪತ್ರಗಳ ನಡುವೆ...

Last Updated 11 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

‘ಎಲ್ಲಿಗೆ ಹೊರಟ್ರಿ ಬನ್ರಿ ಇಲ್ಲಿ’ ಎಂದು ಪ್ರಿನ್ಸಿಪಾಲರು ಕರೆದರು. ಅವರ ಮಾತಿನಲ್ಲಿ ಎಪ್ಪತ್ತೈದು ಪೈಸೆಯಷ್ಟು ಆದೇಶವೂ ನಾಲ್ಕಾಣೆಯಷ್ಟು ಪ್ರೀತಿಯೂ ಸೇರಿಕೊಂಡಿತ್ತು. ಆಗ ಕೆಲಸಕ್ಕೆ ಸೇರಿದ ಹೊಸತು.  ‘ಪ್ರಿನ್ಸಿಪಾಲರ ಎದುರು ಎರಡು ವರ್ಷ ಏನೂ ಎಗರಾಡಕ್ಕೆ ಹೋಗಬ್ಯಾಡ. ತಗ್ಗಿ ಬಗ್ಗಿ ಇರು. ಇಲ್ಲಾಂದ್ರೆ ಪ್ರೊಬೆಷನರಿ ಪಿರಿಯೇಡ್ ಮುಗಿಯೋದೇ ಇಲ್ಲ. ತೀರಾ ತಲೆ ಕೆಟ್ಟ ಕೆಲವರು ಇರ್ತಾರೆ. ಅಂಥವರು ಕತ್ತೇನ್ ತೋರ್‍್ಸಿ ಕುದ್ರೆ ಅಂದ್ರೂ ಹ್ಞೂ ಅಂತ ಮುಚ್ಕೊಂಡು ಒಪ್ಕೋ. ಇಲ್ಲದಿದ್ರೆ ಅಷ್ಟೇ ಮತ್ತೆ’ ಎಂದು ಪರಿಚಿತರೆಲ್ಲಾ ಎಚ್ಚರಿಸಿದ್ದರು. ಈ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೂ ಜೀವ ಭಯ ಮಾತ್ರ ಇದ್ದೇ ಇತ್ತು.

ಬಸ್ಸಿಗೆ ತಡವಾಗುತ್ತಿದೆ ಎಂದು ಹೊರಟಿದ್ದವನು ವಾಪಸ್ಸು ಬಂದು ನಿಂತೆ. ಮೂಗಿಗೆ ನಶ್ಯ ಪೋಣಿಸಿಕೊಂಡ ಅವರು ಮೂರು ಸಲ ಬಾಯಿ ಕಳೆದು ಆಕ್ಷ್ಶೀ... ಎಂದರು. ಮೂಗನ್ನು ಝಾಡಿಸಿಕೊಂಡರು. ಕೆಮ್ಮಿ ಕ್ಯಾಕರಿಸಿಕೊಂಡರು. ನಂತರ, ‘ರ್ರೀ.. ಕನ್ನಡ ಪಂಡಿತರೇ, ನೀವು ನೆಟ್ಟಗೆ ಕನ್ನಡ ಕಲಿಸ್ತಿದ್ದೀರೇನ್ರಿ, ಇಲ್ನೋಡ್ರಿ... ಇಲ್ಲಿ, ಒಬ್ಬ ಹುಡುಗನೂ ನೆಟ್ಟಗೆ ಪ್ರೇಮ ಪತ್ರ ಬರೆದಿಲ್ವಲ್ರೀ, ಕಾಗುಣಿತಾನೆ ಸರಿ ಇಲ್ವಲ್ರಿ?’ ಎನ್ನುತ್ತಾ ಒಂದಷ್ಟು ಪ್ರೇಮ ಪತ್ರಗಳನ್ನು ನನ್ನ ಮುಂದೆ ಎಸೆದರು. ನನಗೆ ಅವರ ಮಾತಿನ ತಲೆಬುಡವೇ ತಿಳಿಯಲಿಲ್ಲ. ಹುಡುಗರು ಪ್ರೇಮ ಪತ್ರಗಳನ್ನು ಸರಿಯಾಗಿ ಬರೀದೆ ಇರೋದಕ್ಕೂ ನಾನು ಕನ್ನಡ ಕಲಿಸುವುದಕ್ಕೂ ಏನು ಸಂಬಂಧ! ನಾನು ವಿದ್ಯಾರ್ಥಿಗಳಿಗೆ ಯಾವಾಗ ಈ ಪ್ರೇಮ ಪತ್ರದ ಟ್ರೈನಿಂಗ್ ಕೊಟ್ಟಿದ್ದೆ ಎಂದು ಗಾಬರಿಬಿದ್ದು ಆಲೋಚಿಸತೊಡಗಿದೆ.

ಪ್ರಿನ್ಸಿಪಾಲರ ಆದೇಶವಾಗಿತ್ತು. ಹೀಗಾಗಿ, ಕೂತು ಅವರೆಸೆದ ಪ್ರೇಮ ಪತ್ರಗಳನ್ನು ನೋಡಿದೆ. ರಂಗು ರಂಗಿನ ಇಂಕಿನಲ್ಲಿ ಕೆತ್ತಿದ ಆ ಪದಪುಂಜಗಳಲ್ಲಿ ಕನ್ನಡ ಭಾಷೆಯ ಕಗ್ಗೊಲೆಯೇ ನಡೆದು ಹೋಗಿತ್ತು. ಇದೆಲ್ಲಾ ಯಾರಿಗೆ ಬಂದಿದ್ದು ಸಾರ್ ಎಂದು ತುಂಟ ಪ್ರಶ್ನೆ ಎತ್ತಿದೆ. ‘ಥೂ... ನನ್ನ ಮುಸುಡಿಗ್ಯಾರ್ರಿ ಈಗ ಬರೀತಾರೆ? ನನ್ನ ಮೇಲೆ ಏನಿದ್ರು ಮೂಕರ್ಜಿಗಳಲ್ಲವೇನ್ರಿ ಬರೋದು?  ನಮ್ಮ ಕಾಲೇಜಿನ ತ್ರಿಪುರ ಸುಂದ್ರಿಯರಿಗೆ ಮಜ್ನುಗಳು ಕಾರಿಕೊಂಡಿರೋ ಪ್ರೇಮದ ವಾಂತಿ ಕಂಡ್ರಿ ಇದು. ಈ ಊರಲ್ಲಿ ಎಲ್ಲಾದಕ್ಕೂ ಬರಗಾಲ ಬಂದಿದೆ. ಆದ್ರೆ ಇದಕ್ಕೆ ಮಾತ್ರ ಬಂದಿಲ್ಲ ನೋಡಿ. ಈಗ ನೀವು ಕೂತು ಇದೆಲ್ಲಾ ಓದಿ. ಆಮೇಲೆ ಚರ್ಚೆ ಮಾಡೋಣ’ ಎಂದರು. ಕಕ್ಕಾಬಿಕ್ಕಿಯಾದ ನಾನು ‘ಇದು ಬೇರೆಯವರಿಗೆ ಬಂದಿರೋ ಪತ್ರಗಳಲ್ಲವೇ ಸಾರ್, ನಾವು ಓದಿದರೆ ತಪ್ಪಾಗುತ್ತಲ್ವಾ?’ ಎಂದು ಕೊಂಕು ಎಳೆದೆ.

ನನ್ನ ಮಾತಿಗೆ ಸಿಟ್ಟಾಗಿ ತಮ್ಮ ಬೋಳು ತಲೆಯನ್ನು ಪರಪರ ಕೆರೆದುಕೊಂಡರು. ‘ಇರೋ ನಾಲ್ಕು ತಲೆ ಕೂದಲನ್ನೂ ಎಲ್ಲಿ ಈ ಅಸಾಮಿ ಕೆಡವಿಕೊಳ್ಳುತ್ತಾರೋ’ ಎಂದು ನನಗೆ ಭಯವಾಯಿತು. ಕನ್ನಡಕ ಕಿತ್ತು ಟೇಬಲ್ ಮೇಲಿಟ್ಟರು. ‘ರೀ..ಮೇಷ್ಟ್ರೇ... ಓದದೆ ಹಂಗಂಗೆ ಕೊಟ್ರೆ ಇನ್ನೂ ದೊಡ್ಡ ತಪ್ಪಾಗುತ್ತೆ ಕಂಡ್ರಿ. ಇವು ಕೆಟ್ಟ ಟೀನೇಜ್ ಹುಡುಗ್ರು. ಏನೇನ್ ಬೇಕಾದ್ರೂ ಬರೀತಾವೆ. ಏನ್ ಹಡಬೆ ಬೇಕಾದ್ರೂ ಮಾಡ್ತಾವೆ. ನಾವಿಲ್ಲಿ  ಹುಷಾರಾಗಿರಬೇಕು. ಸಪೋಸ್... ಒಂದು ಹುಡುಗಿ ಈ ಕಾಲೇಜಿಂದ ಇದ್ದಕ್ಕಿದ್ದಂಗೆ ಎಸ್ಕೇಪ್ ಆದ್ಲು ಅಂತ ಇಟ್ಕೊಳ್ರಿ. ಆಗವಳು ಯಾವ ಹುಡುಗನ ಜೊತೆ ಓಡೋದ್ಲು ಅನ್ನೋ ಸೀಕ್ರೇಟ್ ಗೊತ್ತಾಗೋದೆ ಇದರಿಂದ ಅಲ್ಲವೇನ್ರಿ? ಆ ಟೈಮಲ್ಲಿ ಈ ಲಿಂಕ್‌ಗಳೆಲ್ಲಾ ವೆರಿವೆರಿ ಇಂಪಾರ್ಟೆಂಟ್ ವಿಟ್‌ನೆಸ್ ಆಗ್ತವೆ. ನೀವು ಮೊದ್ಲು ಇವನ್ನೆಲ್ಲಾ ಓದಿ ನನಗೆ ಬ್ರೀಫ್ ಮಾಡಿ. ಇದಕ್ಕೆ ಸಂಬಂಧಪಟ್ಟ ಒಂದೊಂದು ಹುಡುಗೀನೂ ನಾನು ಕರೆದು ವಿಚಾರಿಸ್ತೀನಿ. ಈ ಲವ್ ಲೆಟರ್‍ಸ್ ಮ್ಯಾಟ್ರೇ ಮೋಸ್ಟ್ ಡೇಂಜರಸ್ ಕಂಡ್ರಿ. ನಾವು ಎಲ್ಲಾ ವೆರಿಫೈ ಮಾಡಬೇಕಾಗುತ್ತೆ. ಯಾವನೋ ಪೋಕ್ರಿ ನನ್ಮಗ ಬರೆದಿರೋದನ್ನ ವಿಚಾರಿಸದೆ ಕೊಟ್ಬಿಟ್ರೆ ಏನ್ರಿ ಗತಿ? ನಾಳೆ ಆ ಹುಡ್ಗಿ ಈ ಲೆಟರ್ ಇಟ್ಕೊಂಡೇ ಏನಾದ್ರೂ ಹೆಚ್ಚು ಕಮ್ಮಿ ಮಾಡ್ಕೊಂಡ್ರೆ ಆಗ. ಎಲ್ಲಾ ನನ್ಮಕ್ಕಳೂ ನನಗೇ ಕೇಳೋದಲ್ವಾ?’ ಎಂದು ಪುರಾಣವನ್ನೇ ಊದಿದರು. ಸರಿ ಮಾತ್ಯಾಕೆ ಎಂದು ಓದತೊಡಗಿದೆ.

ಪ್ರೇಮ ಪತ್ರಗಳನ್ನು ಓದುವುದು ಖುಷಿ ವಿಷಯವೇ. ಆದರೆ ಯಾರಿಗೋ ಬಂದಿದ್ದನ್ನ ನಾವು ಓದುವುದು ಊಹ್ಞೂ... ಸರಿಯಲ್ಲ. ಇದರ ಜೊತೆಗೇ ಕಾಗುಣಿತದ ದೋಷಗಳನ್ನೂ ಹುಡುಕುವ ಹೊಸ ಜವಾಬ್ದಾರಿಯ ಕಸುಬು ಸಿಕ್ಕಿದ್ದು ವಿಚಿತ್ರವಾಗಿ ಕಂಡಿತು. ‘ಅಲ್ಲಾ ಸಾರ್ ಪ್ರೇಮ ಪತ್ರ ಬರೆದಿರೋರು ನಮ್ಮ ಕಾಲೇಜಿನ ಹುಡುಗ್ರೇ ಆದ್ರೆ ನೋಡಪ್ಪ... ಇಂಥಿಂಥ ತಪ್ಪು ಬರೀತಿದ್ದೀಯಾ ಅದನ್ನ ಹಿಂಗೆ ಸರಿ ಮಾಡ್ಕೊ ಅಂತ ತಿದ್ದಿ ಬೇಕಾದ್ರೆ ಒದ್ದು ಬುದ್ಧಿ ಹೇಳಬಹುದು. ಅದೇ, ನಮ್ಮ ಕಾಲೇಜಿನ ಸ್ಟೂಡೆಂಟೇ ಅಲ್ಲದವನನ್ನು ಕಂಡು ಹಿಡಿದು ಅವನು ಬರೆದಿರೋ ಪ್ರೇಮಪತ್ರದಲ್ಲಿ ಇಂಥಿಂಥ ಕಾಗುಣಿತ ದೋಷಗಳಿದ್ದಾವೆ ಅಂತ ಪತ್ತೆ ಹಚ್ಚಿ ಅವರನ್ನೆಲ್ಲಾ ತಿದ್ದಿಸುತ್ತಾ ಹೋದ್ರೆ ಒಂದು ವಯಸ್ಕರ ಶಿಕ್ಷಣ ಶಾಲೇನೆ ತೆರೀಬೇಕಾಗುತ್ತೆ ಸಾರ್?’ ಎಂಬ ಕ್ಯಾತೆ ಮಾತು ಎತ್ತಿದೆ.

ಅದಕ್ಕವರು ಸ್ವಲ್ಪ ಯೋಚಿಸಿ ‘ಹೌದಲ್ವಾ? ನಮ್ಮ ಹೆಣ್ಮಕ್ಕಳಿಗೆ ಪ್ರೇಮಪತ್ರ ಬರೆದು ತೊಂದರೆ ಕೊಡೋ ಆ ಪಡ್ಡೆ ನನ್ಮಕ್ಕಳಿಗೆ ತದಕಬೇಕು. ಅದನ್ನ ಬಿಟ್ಟು ಅವರಿಗ್ಯಾಕ್ರಿ ಶುದ್ಧ ಕನ್ನಡ ಕಲಿಸಬೇಕು. ನೀವು ನಮ್ ಕಾಲೇಜು ಹುಡುಗ್ರಿಗಷ್ಟೇ ಕಾಗುಣಿತ ಕಲಿಸ್ರಿ ಸಾಕು’ ಎಂದು ಮಾತಿಗೆ ಮಂಗಳ ಎಳೆದರು.

ಹೈಸ್ಕೂಲು, ಕಾಲೇಜು ಹುಡುಗರ ಪ್ರೇಮಪತ್ರಗಳನ್ನು ಓದೋದೇ ಒಂದು ಸೌಭಾಗ್ಯ. ಇಲ್ಲಿ ಅವಸರ, ಅಧ್ವಾನ, ಮುಗ್ಧತೆಗಳು ಬಿಟ್ಟರೆ ಮತ್ತೇನೂ ಇರುವುದಿಲ್ಲ. ಪ್ರೇಮ ನಿವೇದನೆಯಲ್ಲಿ ಸ್ಪಷ್ಟತೆಗಳಿರುವುದಿಲ್ಲ. ಮಾತೂ ಇರುವುದಿಲ್ಲ. ಬರೀ ಚಿತ್ರಕಲೆಗಳೇ ತುಂಬಿ ತುಳುಕಾಡುತ್ತಿರುತ್ತವೆ. ನಾನು ನೋಡಿದ ಪ್ರೇಮ ಪತ್ರಗಳಲ್ಲೂ ಇಂಥವೇ ಹೃದಯದ ಚಿತ್ರಗಳೇ ತುಂಬಿ ಹೋಗಿದ್ದವು. ಒಂದು ದೊಡ್ಡ ಹೃದಯಕ್ಕೆ ಚೂಪು ಬಾಣವೊಂದು ನಾಟಿಕೊಂಡು ಹೋಗಿ ಸುಸ್ತಾಗಿ ಆ ಕಡೆ ಬಿದ್ದಿತ್ತು. ಅದರ ಕೆಳಗೆ ಪೆಟ್ಟು ತಿಂದ ಮತ್ತಷ್ಟೂ ಪುಡಿ ಹೃದಯಗಳು ಬಿದ್ದಿದ್ದವು. ಒಂದಿಷ್ಟು ರಕ್ತವೂ ಚೆಲ್ಲಿ ಬಿದ್ದಿತ್ತು. ಹೂವುಗಳು ಅರಳಿದ್ದವು. ಬಳ್ಳಿಗಳು ಬಾಗಿದ್ದವು. ಆ ದೊಡ್ಡ ಹೃದಯದ ಆಚೆಈಚೆ ಬಣ್ಣದ ಪೆನ್ಸಿಲ್ಲಿನಲ್ಲಿ ಅವನ, ಅವಳ ಹೆಸರುಗಳು. ಅದರ ಕೆಳಗೆ ಎಚ್ಚರ ತಪ್ಪಿದ ವಿಚಿತ್ರ ಪ್ರೇಮ ಸಂದೇಶಗಳು.

‘ನಾನು ಬಳ್ಳಿಯಾದರೆ ನೀನು ಚಪ್ಪರ’, ‘ನೀನು ಹೂವಾದರೆ ನಾನು ದುಂಬಿ’ ‘ನೀನು ಹಣ್ಣಾದರೆ ನಾನು ಗಿಳಿ’ ಇಂಥವೇ ಸಾಲುಗಳು. ‘ಪ್ರೇಮದಂಥ ಖಾಸಗಿ ವ್ಯವಹಾರದಲ್ಲೂ ಹುಡುಗ್ರು ಮಾಸ್ ಕಾಪಿ ಮಾಡಿದ್ದಾರೆ ಸಾರ್. ಪರೀಕ್ಷೆಯಲ್ಲಿ ಕಾಪಿ ಮಾಡೋದಷ್ಟೇ ಅನ್ಕೊಂಡಿದ್ದೆ. ನೋಡಿದ್ರೆ ಇಲ್ಲೂ ಕಾಪಿಚಿಟ್ಟಿ ಮಾಡಿದ್ದಾವಲ್ಲಾ ಸಾರ್. ಮ್ಯಾಟರ್ ಸೇಮ್. ನೇಮ್ ಚೇಂಜ್’ ಎಂದು ಹಲುಬಿದೆ. ‘ಕಣ್ಣಲ್ಲಿ ಕಣ್ಣಿಟ್ಟು ನೋಡಿ’ ಎಂದರು ಪ್ರಾಚಾರ್ಯರು.  ಏನು ನೋಡೋದು ಮಣ್ಣಾಂಗಟ್ಟಿ?

ನನಗೆ ಪ್ರಾಚಾರ್ಯರು ಕೊಟ್ಟ ಇಪ್ಪತ್ತೈದು ಪತ್ರಗಳಲ್ಲಿ ಹನ್ನೆರಡು ಪತ್ರಗಳು ಹುಡುಗೀರ ಮನೆಯಿಂದ ಅವರವರ ಅಪ್ಪ, ಅಮ್ಮ, ಅಣ್ಣಂದಿರು ಬರೆದ ಯೋಗಕ್ಷೇಮ ಪತ್ರಗಳಿದ್ದವು. ‘ಇವು ಸೇಫ್ ಇದ್ದಾವೆ ಸಾರ್. ಇವನ್ನ ಕೊಟ್ಟು ಬಿಡೋಣ. ಹೃದಯ, ಬಾಣ, ಹೂವುಗಳು ಇರೋ ಪ್ರೇಮ ಪತ್ರಗಳನ್ನು  ಮಾತ್ರ ಕೊಡೋದೇ ಬ್ಯಾಡ ಸಾರ್. ನಾವೇ ಇಟ್ಕೊಳ್ಳೋಣ’ ಎಂದು ನನ್ನದೊಂದು ತೀರ್ಮಾನ ಹೇಳಿದೆ. ‘ಓ ಹೌದಾ! ವೆರಿಗುಡ್. ಹಾಗೇ ಆಗಲಿ. ಇನ್ಮೇಲೆ ಇದು ನಿಮ್ಮ ಕಾಯಂ ಕೆಲಸ. ದಿನಾ ಇಪ್ಪತ್ತು ಮೂವತ್ತು ಪತ್ರ ಹೆಣ್ಮಕ್ಕಳ ಹೆಸ್ರಿಗೆ ಬರ್ತಾವೆ. ಅವೆಲ್ಲಾ ನೀವೇ ಕೂತು ಓದಿ ಫೈನಲ್ ಮಾಡಬೇಕು’ ಎಂದು ಹೇಳಿದರು. ‘ಆಯಿತು ಸಾರ್’ ಎಂದು ಶ್ರದ್ಧೆಯಿಂದ ಕತ್ತನ್ನು ಕುಣಿಸಿದೆ.

ಎರಡು ತಿಂಗಳು ಪ್ರೇಮಪತ್ರಗಳನ್ನು ಓದುತ್ತಾ ಕಾಲಕಳೆದೆ. ಅದೇನಾಯಿತೋ ಗೊತ್ತಿಲ್ಲ. ಬರಬರುತ್ತಾ ಕಾಲೇಜಿಗೆ ಪ್ರೇಮಪತ್ರಗಳು ಬರೋದೆ ಕಮ್ಮಿಯಾದವು. ‘ಇದು ಪ್ರೇಮಿಗಳ ಸೀಝನ್ ಟೈಮಲ್ಲ’ ಎಂದು ನಾನು ತಮಾಷೆ ಮಾಡತೊಡಗಿದೆ. ಸಡನ್ನಾಗಿ ಪೋಷಕರಿಂದ ಬರುವ ಪತ್ರಗಳು ಹೆಚ್ಚಾದವು. ಸದ್ಯ ಈ ಪ್ರೇಮಿಗಳ ಕಾಟ ಈಗಲಾದರೂ ತಪ್ಪಿತಲ್ಲಾ ಎಂದು ನಾನೂ ನಿರಾಳನಾಗಿಬಿಟ್ಟೆ.  

ಒಂದು ದಿನ ಹೀಗೆ ಇರುವಾಗ, ಕ್ಲಾಸಿನಲ್ಲಿದ್ದ ನನಗೆ ಪ್ರಿನ್ಸಿಪಾಲರ ತುರ್ತು ಬುಲಾವ್ ಬಂದಿತು. ಗಾಬರಿಯಿಂದ ಓಡಿ ಬಂದೆ. ನನ್ನ ಮೇಲವರು ಅವತ್ತು ಸಖತ್ ಗರಂ ಆಗಿದ್ದರು. ‘ಏನ್ರೀ ಹೇಳಿದ ಒಂದು ಕೆಲ್ಸಾನು ನೆಟ್ಟಗೆ ಮಾಡಲ್ವಲ್ರಿ ನೀವು?’ ಎಂದು ನನ್ನ ದಬಾಯಿಸಿದರು. ಏನೋ ಎಡವಟ್ಟಾಗಿದೆ ಎಂಬುದು ಮನವರಿಕೆಯಾಯಿತು. ಏನಾಯಿತು ಸಾರ್ ಎಂದು ಮೆಲ್ಲಗೆ ಕೇಳಿದೆ. ಆಗೋದೇನು ನೋಡ್ರಿ ಇಲ್ಲಿ. ಇದು ಅಣ್ಣ ತಂಗಿಗೆ ಬರೆದ ಪತ್ರ ಏನ್ರಿ! ಪತ್ರ ಪೂರಾ ಓದಿದಿರೇನ್ರಿ? ಒಂಚೂರು ಜವಾಬ್ದಾರಿ ಬ್ಯಾಡ್ವಾ! ಇದನ್ನ ಹಂಗೇ ಕೊಟ್ಟಿದ್ರೆ ಎಂಥ ಅನಾಹುತ ಆಗ್ತಿತ್ತು ಗೊತ್ತೇನ್ರಿ? ಸದ್ಯ ನಾನು ನೋಡಿದಕ್ಕೆ ಬಚಾವ್, ಇಲ್ಲಾಂದ್ರೆ? ಎಂದು ಆ ಕಾಗದವನ್ನು ನನ್ನ ಮುಖಕ್ಕೆ ಹಿಡಿದರು. ಓದಿ ಶಾಕ್ ಆದೆ. ಓಹೋ! ನನ್ನ ಉದಾಸೀನದಿಂದ ಭಾರಿ ಅನಾಹುತವೇ ಆಗಿತ್ತು.

ನಾವಿಬ್ಬರೂ ದಿನಾ ಕೂತು ಪ್ರೇಮಪತ್ರಗಳನ್ನು ಓದಿ ಬಚ್ಚಿಡುತ್ತಿರುವುದು ಹೊರಗಿನ ಪತ್ರ ಪ್ರೇಮಿಗಳಿಗೆ ತಿಳಿದು ಹೋಗಿತ್ತು. ‘ಚಿತ್ರ ಇರೋ ಪತ್ರಗಳನ್ನು ಪ್ರಿನ್ಸಿಪಾಲರೂ, ಕನ್ನಡ ಮೇಷ್ಟ್ರೂ ಸೇರಿ ದಿನಾ ಒಡೆದು ಓದಿ ಬಚ್ಚಿಡ್ತಾ ಅವ್ರೆ. ನೀವು ಹಿಂಗೆಲ್ಲಾ ಬರುದ್ರೆ ಆಗಾಕಿಲ್ಲಾ. ಮನ್ಯಾಳಿಂದ ಸ್ವಂತ ಅಣ್ಣ, ಅಪ್ಪ, ಚಿಗಪ್ಪ, ಅವ್ವ, ಬರಿಯೋ ಹಂಗೆ ಸಿಂಪಲ್ಲಾಗಿ ಲವ್ವು ಲೆಟರ್ ಬರೀರೋ ಮಂಕು ಮುಂಡೇವಾ!’ ಎಂದು ನಮ್ಮ ಕಾಲೇಜಿನ ಅಟೆಂಡರ್ ಹೊರಗಿನ ಪ್ರೇಮಿಗಳಿಗೆ ತುತ್ತೂರಿ ಊದಿ ಬಿಟ್ಟಿದ್ದ. ಅದಕ್ಕೆ ಭಕ್ಷೀಸು ಪಡೆದಿದ್ದ. ಅಲ್ಲಿಂದ ಪತ್ರ ಪ್ರೇಮಿಗಳು ತಮ್ಮ ವರಸೆಯನ್ನೇ ಬದಲಿಸಿಕೊಂಡಿದ್ದರು. ಇದು ನನ್ನ ಹೆಡ್ಡ ತಲೆಗೆ ಹೊಳೆಯಲೇ ಇಲ್ಲ.   

‘ಪ್ರೀತಿಯ ತಂಗಿ ...ಳಿಗೆ ನಿನ್ನ ಅಣ್ಣ .... ಮಾಡುವ ಆಶೀರ್ವಾದಗಳು. ನಾವೆಲ್ಲಾ ಮನೆಯಲ್ಲಿ ಕ್ಷೇಮ. ನೀನು  ಕ್ಷೇಮವೇ? ನೀನು ಚೆನ್ನಾಗಿ ಓದು... ಮನೆಯ ಬಗ್ಗೆ ಹೆಚ್ಚು ಆಲೋಚಿಸಬೇಡ... ನಿನಗೆ ಏನಾದರೂ ಅಗತ್ಯವಿದ್ದರೆ ತಿಳಿಸು...  ಹೀಗೆ ಅರ್ಧದ ತನಕ ಪಕ್ಕಾ ಮನೆ ಪತ್ರ.  ಅರ್ಧ ಪತ್ರದ ನಂತರ ಶುರುವಾಗುತ್ತಿದ್ದದ್ದೇ ಒರಿಜಿನಲ್ ಪ್ರೇಮ ಪತ್ರ. ಪ್ರೀತಿಯ ಗೆಳತಿ... ಗೆ, ನಿನ್ನ ಖಾಸ ಪ್ರಿಯತಮನಾದ ನಾನು ಮಾಡುವ........ ಗಳು. ಏಯ್, ಹುಚ್ಚಿ ಮೇಲೆ ಬರೆದಿರೋ ಅಣ್ಣ ತಂಗಿ ವಿಷಯನ್ನೆಲ್ಲಾ ಮತ್ತೆ ನಿಜ ಅಂತ ನಂಬೀಯಾ. ಇನ್ಮೇಲೆ ಇಲ್ಲಿ ತಂಗಿ ಅಂದರೆ ನನ್ನ ಪ್ರಿಯತಮೆ ಅಂತ ಲೆಕ್ಕ. ಪ್ರಿಯ ಅಣ್ಣ ಅಂದ್ರೆ ನಾನು ನಿನ್ನ ಲವ್ವರ್ ಅಂತ ಲೆಕ್ಕ. ಇದೆಲ್ಲಾ ಆ ಬಾಂಡ್ಲಿ ಪ್ರಿನ್ಸಿಪಾಲ್, ಆ ದಡಿಯಾ ಕನ್ನಡ ಲೆಕ್ಚರರ್‌ಗೆ ಟಾಂಗ್ ಕೊಡೋಕೆ ಮಾಡ್ಕೊಂಡಿರೋ ಹೊಸ ಏರ್ಪಾಟು. ನೀನು ತಂಗಿ ಅಂತ ಬರೆದಿರೋದು ಸುಮ್ ಸುಮ್ಕೆ. ಚಿನ್ನಮರಿ ಮತ್ತೆ ಅದನ್ನೇ ನಿಜಾಂತ ತಿಳ್ಕಂಡ್ ಬಿಟ್ಟಿಯಾ! ಹುಶಾರು. ನನ್ನ ನಿನ್ನ ಲವ್ವು ಅರ್ಧ ಲೆಟರ್ ಆದ್ಮೇಲೆ ಶುರುವಾಗುತ್ತೆ..., ಮೊದಲಿಗೆ ಬರೆದಿರೋದೆಲ್ಲಾ ಡಂಗಾಣಿ. ನೀನು ಅದನ್ನ ಓದಾಕೆ ಹೋಗಬ್ಯಾಡ’. ಅಂತ ಸೂಚನೆ ಕೊಟ್ಟು ಮುಂದೆ ಪ್ರೇಮ ಪ್ರಲಾಪ ಒದರಿದ್ದ. ನಾವು ರಂಗೋಲಿ ಕೆಳಗೆ ನುಸುಳೋಕೆ ಪ್ಲಾನ್ ಹಾಕಿದ್ರೆ ಅವ್ರು ಭೂಮಿ ಒಳಗೇ ಸುರಂಗ ಕೊರೆದಿದ್ದರು.

ಪ್ರೇಮಿಗಳ ಬುದ್ಧಿ ಚಮತ್ಕಾರಕ್ಕೆ ದಂಗಾಗಿ ಹೋಗಿದ್ದೆ. ‘ಜಗತ್ತಿನಲ್ಲಿ ಹೊಸ ಹೊಸ ಅನ್ವೇಷಣೆಗಳು ಹುಟ್ಟಿರುವುದೇ ಯುದ್ಧ ಮತ್ತು ಪ್ರೇಮದ ಸಂದರ್ಭಗಳಲ್ಲಿ. ನಮ್ಮ ಹುಡುಗರು ಎಷ್ಟು ಬುದ್ಧಿವಂತರಿದ್ದಾರೆ ನೋಡಿ ಸಾರ್’ ಎಂದೆ.

‘ಇಂಥ ತಗಡು ಬುದ್ಧಿವಂತಿಕೆ ತಗೊಂಡು ಏನ್ ಬೆಂಕಿ ಹಚ್ಕೋತಿರೇನ್ರಿ’ ಎಂದು ಸಿಟ್ಟಿನಿಂದ ಅವರು ಎದ್ದು ಹೋದರು. ಹೀಗೆ ಇರುವಾಗ ಒಂದು ನನ್ನ ಹೆಸರಿಗೊಂದು ಪ್ರಿನ್ಸಿಪಾಲರ ನಾಮಧೇಯಕ್ಕೊಂದು ರಕ್ತದಿಂದ ಅದ್ದು ಬರೆದ ಎರಡು ಪ್ರೇಮಪತ್ರಗಳು ಬಂದವು. ಅದರ ಒಡಲಲ್ಲಿ ಮಚ್ಚಿನ ಚಿತ್ರ ಬರೆಯಲಾಗಿತ್ತು. ಜೊತೆಗೆ ಎಚ್ಚರಿಕೆಯೂ ಇತ್ತು. ನೀವಿಬ್ಬರು ಪ್ರೇಮಿಗಳ ಪಾಲಿಗೆ ವಿಲನ್ ಆಗಿದ್ದೀರಿ. ಗಾಳಿ, ನೀರು, ಬೆಂಕಿ, ಮತ್ತೆ ಲವ್ವರ್‌ಗಳನ್ನ ತಡೆಯೋರು ಯಾರೂ ಇಲ್ಲ. ನೀವಿಬ್ಬರು ನಾಳೆಯೊಳಗೆ ಮಟಾಶ್.

ನಿಮ್ಮಿಬ್ಬರಿಗೂ ಸ್ಮಶಾನದಲ್ಲಿ ಗುಂಡಿ ರೆಡಿ ಮಾಡಿದ್ದೀವಿ. ನೀವೂ ರೆಡಿಯಾಗಿರಿ. ನಿಮ್ಮ ಕೊನೆ ಆಸೆ ಏನೂಂತ ಕೇಳೋವಷ್ಟು ಟೈಮೂ ನಮ್ಗಿಲ್ಲ.

ಹದಿಹರೆಯದಲ್ಲಿ ಭಾವನೆಗಳ ನಿಯಂತ್ರಣ ಅರಿಯದ ಹುಡುಗರು ತಮ್ಮ ಅಪಕ್ವ ಪ್ರೀತಿ, ಪ್ರೇಮಗಳ ಚಲಾವಣೆ ಮಾಡಲು ಹೋಗಿ ಸೋಲುತ್ತಾರೆ. ಓದುವ ವಯಸ್ಸಿನಲ್ಲಿ ಕಾಡುವ ಭಾವನೆಗಳ ಬೆನ್ನು ಹತ್ತಿ ಜೀವನವ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈಗಿನ ಮಾಧ್ಯಮಗಳೂ ವಯಸ್ಸು ತುಂಬುವ ಮೊದಲೇ ಪ್ರೀತಿ, ಪ್ರೇಮಕ್ಕಾಗಿ ಮನೆಬಿಟ್ಟು ಓಡಿ ಹೋಗುವ ಪ್ರೇಮ ಕಥನಗಳನ್ನು  ಮೌಲ್ಯಗಳಂತೆ ಬಿಂಬಿಸುತ್ತಿವೆ. ಇದರ ಫಲಿತಾಂಶವೆಂಬಂತೆ ಬಂದಿದ್ದ ಮೇಲಿನ ಪತ್ರಕ್ಕೆ ನಾವೇನೂ ಹೆದರಲಿಲ್ಲ. ತರಗತಿಯ ಕೋಣೆಯೊಳಗೆ ಹದಿಹರೆಯದ ಉತ್ಸಾಹ ಅತಿ ಹೋಗದಂತೆ ಮಾಡಬೇಕಾದುದನ್ನೆಲ್ಲಾ ನಾವೇ ಮಾಡುತ್ತಲೇ ಇರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT