ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಚಿತ್ರೋತ್ಸವಗಳ ನಂತರ...

Last Updated 17 ಜನವರಿ 2013, 19:59 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಎರಡು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಗಳಿಗೆ ಸಾಕ್ಷಿಯಾಯಿತು. ಚಲನಚಿತ್ರ ಅಕಾಡೆಮಿ ಡಿಸೆಂಬರ್‌ನಲ್ಲಿ ನಡೆಸಿದ ಚಲನಚಿತ್ರೋತ್ಸವ ಕಳೆದ ವರ್ಷಕ್ಕಿಂತ ಹೆಚ್ಚು ಜನರನ್ನು ತಲುಪುವಲ್ಲಿ ಒಂದು ಹೆಜ್ಜೆ ಮುಂದೆ ಹೋಯಿತು. ಆದರೆ, ಚಿತ್ರೋತ್ಸವ ಮಿನಿ ಚಿತ್ರಮಂದಿರಗಳಲ್ಲಿ ನಡೆದ ಕಾರಣ ಬಹಳಷ್ಟು ಜನ ಹತಾಶರಾಗಬೇಕಾಯಿತು.

ಇದು ಪ್ರತೀಬಾರಿಯ ಸಮಸ್ಯೆ. ಚಿತ್ರೋತ್ಸವ ನಡೆಸುವುದು, ಆ ಮೂಲಕ ಜನರಲ್ಲಿ ನಮ್ಮ ಸಿನಿಮಾ ಸಂಸ್ಕೃತಿಯ ಅರಿವನ್ನು ಜಾಗೃತಗೊಳಿಸುವುದು ಇಂದಿನ ಅಗತ್ಯ ಆಗಿರುವುದರಿಂದ ಎಷ್ಟು ಚಿತ್ರೋತ್ಸವಗಳು ಬಂದರೂ ಆಸಕ್ತರ ಆಸೆ ತಣಿಯುವುದಿಲ್ಲ.

ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ವಿಶ್ವದ ಇತರ ಭಾಗಗಳಿಂದ ಬರುವ ಚಲನಚಿತ್ರಗಳನ್ನು ಬಹಳಷ್ಟು ಸಿನಿಮಾಸಕ್ತರು ನೋಡಲು ಸಾಧ್ಯವಾಗದಿದ್ದರೆ ಏನು ಪ್ರಯೋಜನ? ಒಂದೇ ಆವರಣದಲ್ಲಿ ಅಥವಾ ಕೂಗಳತೆಯ ದೂರದಲ್ಲಿರುವ ಮೂರ‌್ನಾಲ್ಕು ಚಿತ್ರ ಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಗಳು ನಡೆದರೆ ಪ್ರೇಕ್ಷಕರಿಗೆ ಆಯ್ಕೆ ಸುಲಭವಾಗುತ್ತದೆ.

ಅಲ್ಲದೆ, ಈ ಸಂದರ್ಭದಲ್ಲಿ ಪಾಲ್ಗೊಳ್ಳಲು ಆಗಮಿಸುವ ವಿದೇಶಿ ನಿರ್ದೇಶಕರ ಜೊತೆ ನಡೆಯುವ ಸಂವಾದಗಳು ಕೂಡ ಹೆಚ್ಚು ಫಲಪ್ರದವಾಗಬೇಕು. ಕೆಲವೇ ಮಂದಿ ಆಸ್ಥಾನ ವಿದ್ವಾಂಸರು ಕೂತು ಚರ್ಚೆ ನಡೆಸಿದರೆ, ಅದು ಶಾಸ್ತ್ರಕ್ಕಾಗಿ ನಡೆಸುವ ಸಂವಾದವಾಗುತ್ತದೆಯೇ ಹೊರತು ಅದರಿಂದ ಉದ್ದೇಶಿತ ಗುರಿ ಸಾಧನೆಯಾದಂತಾಗುವುದಿಲ್ಲ.

ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನೂರಾಧ ಅವರು, ವಿಶ್ವ ಸಿನಿಮಾ ಪ್ರದರ್ಶನ ಸಾಮಾನ್ಯ ಜನತೆಯನ್ನು ಒಳಗೊಳ್ಳುವ ಉದ್ದೇಶದ್ದು ಎಂಬ ನಿಲುವು ತಳೆದದ್ದು ಕೂಡ ಒಳ್ಳೆಯ ಬೆಳವಣಿಗೆಯಾಗಿ ಕಂಡಿತು. ಯಾವುದೇ ಚಿತ್ರೋತ್ಸವವನ್ನು ಗಂಭೀರವಾಗಿ ಪರಿಗಣಿಸದ, ಪಾಲ್ಗೊಳ್ಳಲು ಕಡು ಸೊಂಬೇರಿತನವನ್ನು ಪ್ರದರ್ಶಿಸುವ ಗಾಂಧೀನಗರದ ಸಿನಿಮಾ ಭೂಪರು, ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ಗಂಭೀರವಾಗಿ ಪರಿಗಣಿಸಿದರು ಎಂದು ಹೇಳಲು ಬರುವುದಿಲ್ಲ.

ಪ್ರೇಕ್ಷಕರಲ್ಲಿ ಸಿನಿಮಾ ಸಂಸ್ಕೃತಿಯನ್ನು ಬೆಳೆಸುವ ದೃಷ್ಟಿಯಿಂದ ಪ್ರೇಕ್ಷಕರಿಗಾಗಿ ಈ ಸಿನಿಮೋತ್ಸವ ನಡೆಸಲಾಗುತ್ತಿದೆ ಎಂದು ಹೇಳುವ ಮೂಲಕ ತಾರಾ, ಅಕಾಡೆಮಿಯ ಮೂಲ ತತ್ವವನ್ನು ಗೌರವಿಸಿದ್ದಾರೆ.
ಚಲನಚಿತ್ರ ಅಕಾಡೆಮಿಯ ಚಲನಚಿತ್ರೋತ್ಸವ ಮುಗಿದ ನಂತರ `ಚಿಲ್ಡ್ರನ್ಸ್ ಫಿಲಂ ಇಂಡಿಯಾ' ಸಂಸ್ಥೆ 8ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು ನಡೆಸಿತು.

ಎಂಟು ವರ್ಷಗಳಿಂದ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರು ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು ಏಕಾಂಗಿಯಾಗಿ ನಡೆಸುತ್ತಿದ್ದಾರೆ. ಚಲನಚಿತ್ರ ಅಕಾಡೆಮಿಯಂತೆಯೇ ಇವರ ಉದ್ದೇಶವೂ ಜನತೆಯಲ್ಲಿ ಮಕ್ಕಳ ಚಲನಚಿತ್ರಗಳ ಬಗ್ಗೆ ಅರಿವು ಮೂಡಿಸುವುದೇ ಆಗಿದೆ.

ಆರಂಭದ ವರ್ಷಗಳಲ್ಲಿ ಭಾರತದ ಚಲನಚಿತ್ರಗಳಿಗೆ ಸೀಮಿತವಾಗಿದ್ದ ಮಕ್ಕಳ ಚಲನಚಿತ್ರೋತ್ಸವ ಎಂಟನೇ ವರ್ಷಕ್ಕೆ ಬರುವಷ್ಟರಲ್ಲಿ ಹಲವಾರು ದೇಶಗಳೊಂದಿಗೆ ಸಂಪರ್ಕ ಪಡೆದು, ಮಹತ್ವದ ಚಲನ ಚಿತ್ರೋತ್ಸವದ ಸ್ವರೂಪ ಪಡೆಯಲು ಸಫಲವಾಗಿರುವುದು ಮೆಚ್ಚತಕ್ಕ ಕೆಲಸವೇ. ಈ ಸಲದ ಮಕ್ಕಳ ಚಲನಚಿತ್ರೋತ್ಸವಕ್ಕೆ ಇರಾನ್, ಚೀನಾ, ಕೊರಿಯಾ, ಸ್ವೀಡನ್, ಜರ್ಮನ್, ಇಟಲಿಗಳಿಂದ ಚಲನಚಿತ್ರ ನಿರ್ದೇಶಕರು ಆಗಮಿಸಿ ಪಾಲ್ಗೊಂಡಿದ್ದು ಒಂದು ವಿಶೇಷವಾಗಿಯೇ ಕಾಣಿಸಿತು.

ಮಕ್ಕಳ ಚಲನಚಿತ್ರಗಳನ್ನು ವೀಕ್ಷಿಸಲು ಶಾಲೆಯ ಮಕ್ಕಳನ್ನೇ ಆಶ್ರಯಿಸುವುದು ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಎನ್.ಆರ್. ನಂಜುಂಡೇಗೌಡರ ವೈಶಿಷ್ಟ್ಯ. ಬಾಲಭವನದಲ್ಲಿ ನಡೆಯುವ ಈ ಚಿತ್ರೋತ್ಸವದಲ್ಲಿ ನಿರ್ದೇಶಕರು ಮಕ್ಕಳೊಂದಿಗೆ ಸಂವಾದ ನಡೆಸುತ್ತಾರೆ.

ಶಾಲಾ ಮಕ್ಕಳು ಕೇಳುವ ಪ್ರಶ್ನೆಗಳು, ನಾವು ಯಾವ ತರಹದ ಚಿತ್ರಗಳನ್ನು ನೋಡಬಯಸುತ್ತೇವೆ ಎನ್ನುವುದನ್ನು ಅವರು ವಿವರಿಸಿದ ಪರಿ ನಿಜಕ್ಕೂ ಅಚ್ಚರಿಯ ಬೆಳವಣಿಗೆಯೇ ಹೌದು. ಚೀನಾದಲ್ಲಿ ಅಂತರರಾಷ್ಟ್ರೀಯ ಚಿತ್ರವೊಂದರ ಪ್ರದರ್ಶನವಾದರೆ ಸಬ್‌ಟೈಟಲ್ಸ್‌ಗಳು ಚೀನಿ ಭಾಷೆಯಲ್ಲೇ ಇರುತ್ತವಂತೆ. ಭಾರತದಲ್ಲಾದರೆ ಇಂಗ್ಲೀಷಿನಲ್ಲಿರುತ್ತದೆ.

ಹೀಗಾಗಿ ಬೆಂಗಳೂರಿನಲ್ಲಿ ಇಂಗ್ಲೀಷ್ ಭಾಷೆಯ ಜ್ಞಾನ ಮಕ್ಕಳಲ್ಲಿ ಚೆನ್ನಾಗಿದೆ. ನಮಗೆ ಅಂತಹ ಅವಕಾಶ ಇಲ್ಲ ಎಂದು ಚೀನಾ ಮಕ್ಕಳ ಚಲನಚಿತ್ರ ಸಂಘದ ಅಧ್ಯಕ್ಷೆ ಜಾಂಗ್ ಜೆಂಕೆನ್ ಹೇಳಿದ್ದು ಅರ್ಥಪೂರ್ಣ ಅವಲೋಕನವಾಗಿತ್ತು. ಸಾಹಸ ಸಿನಿಮಾಗಳು, ವಿಜ್ಞಾನದ ಅರಿವು ಮೂಡಿಸುವ ಚಲನಚಿತ್ರಗಳು, ಪರಿಸರ ಕಾಳಜಿ ಬೆಳೆಸುವ ಚಲನಚಿತ್ರಗಳನ್ನು ನಾವು ನೋಡಬಯಸುತ್ತೇವೆ ಎಂದು ಶಾಲಾ ಮಕ್ಕಳು ಹೇಳಿದರು. ಶಾಲಾ ಮಕ್ಕಳಲ್ಲಿ ಚಲನಚಿತ್ರದ ಮಹತ್ವವನ್ನು ಬೆಳೆಸಬೇಕಾದ ಇಂದಿನ ಅಗತ್ಯ ಎನ್ನುವುದನ್ನು ಎಲ್ಲರೂ ಪದೇ ಪದೇ ಹೇಳುತ್ತಾರೆ, ಆದರೆ ಆ ನಿಟ್ಟಿನಲ್ಲಿ ಯಾವ ಕೆಲಸವೂ ಆಗುತ್ತಿಲ್ಲ.

ಮಕ್ಕಳ ಚಲನಚಿತ್ರೋತ್ಸವದ ಬಗ್ಗೆ ಕಳೆದ ವರ್ಷದಿಂದ ವಿವಾದವೊಂದು ತಲೆದೋರಿದೆ. ಚಲನಚಿತ್ರ ಅಕಾಡೆಮಿಯೇ ಮಕ್ಕಳ ಚಲನ ಚಿತ್ರೋತ್ಸವವನ್ನು ನಡೆಸುವ ಉದ್ದೇಶವಿರುವುದರಿಂದ, ಬೇರೆ ಯಾರಿಗೂ ಅನುದಾನ ನೀಡುವ ಅಗತ್ಯವಿಲ್ಲ ಎಂದು ನಾಗಾಭರಣ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಠರಾವೊಂದನ್ನು ಮಾಡಿಕೊಂಡರು. ಅದುವರೆಗೆ ಸರ್ಕಾರದ ಅನುದಾನ ಪಡೆಯುತ್ತಿದ್ದ ಚಿಲ್ಡ್ರನ್ಸ್ ಫಿಲಂ ಇಂಡಿಯಾ ಸಂಸ್ಥೆಗೆ ಇದರಿಂದ ಕಂಟಕ ಎದುರಾಯಿತು.

ಈ ಬಾರಿ ಕೂಡ ಚಲನಚಿತ್ರ ಅಕಾಡೆಮಿ ಹಾಗೂ ಚಿಲ್ಡ್ರನ್ಸ್ ಫಿಲಂ ಇಂಡಿಯಾ ಸಂಸ್ಥೆ ನಡುವೆ ಈ ವಿಷಯದಲ್ಲಿ ವಿವಾದವಾಗಿದೆ. ಖಾಸಗಿಯಾಗಿ ಚಿತ್ರೋತ್ಸವಗಳನ್ನು ನಡೆಸುವವರಿಗೆ ಅನುದಾನ ಕೊಡುವುದಿಲ್ಲ ಎಂದು ತಾರಾ ಸ್ಪಷ್ಟವಾಗಿ ಹೇಳಿದ್ದಾರೆ. ಎಂಟು ವರ್ಷಗಳಿಂದ ಅಂತರಾಷ್ಟ್ರೀಯ ಮಕ್ಕಳ ಚಿತ್ರೋತ್ಸವವನ್ನು ಯಶಸ್ವಿಯಾಗಿ ನಡೆಸುತ್ತಿರುವ ನಮ್ಮ ಸಂಸ್ಥೆ ನೆರವಿಗೆ ಸರ್ಕಾರ ಮುಂದಾಗಬೇಕೆಂದು ನಂಜುಂಡೇಗೌಡರು ವಾದಿಸುತ್ತಾರೆ.

ಅದಕ್ಕಾಗಿಯೇ ಸರ್ಕಾರ 50 ಲಕ್ಷ ರೂಪಾಯಿಗಳನ್ನು ಅಕಾಡೆಮಿಗೆ ಬಿಡುಗಡೆ ಮಾಡಿದೆ ಎನ್ನುವುದು ಅವರ ವಾದ. ಬೆಂಗಳೂರಿನಲ್ಲೇ ಅಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಏಕಕಾಲಕ್ಕೆ ಮಕ್ಕಳ ಚಿತ್ರೋತ್ಸವ ನಡೆಯುತ್ತದೆ. ಈ ನಡುವೆ ಚಲನಚಿತ್ರ ಅಕಾಡೆಮಿಯೂ ಬೇರೆ ಬೇರೆ ಜಿಲ್ಲೆಗಳಲ್ಲಿ ಮಕ್ಕಳ ಚಲನ ಚಿತ್ರೋತ್ಸವ ನಡೆಸುವುದಾಗಿ ಪ್ರಕಟಿಸಿದೆ. ಚಲನ ಚಿತ್ರೋತ್ಸವ ಎನ್ನುವುದು ಈಗ ನಿತ್ಯೋತ್ಸವದಂತಾಗಿದೆ.

28 ರಾಷ್ಟ್ರಗಳಲ್ಲಿ ಒಂದಲ್ಲಾ ಒಂದು ಕಡೆ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯುತ್ತಲೇ ಇದೆ. ಭಾರತದಲ್ಲೇ ಹಲವಾರು ಕಡೆ ಚಿತ್ರೋತ್ಸವ ನಡೆಯುತ್ತಿದೆ. ಹೆಚ್ಚು ಹೆಚ್ಚು ಚಿತ್ರೋತ್ಸವ ನಡೆದಷ್ಟೂ ಪ್ರೇಕ್ಷಕನಿಗೇ ಲಾಭ. ಆದರೆ, ವಿವಾದ ಏಕೆ? ಚಲನಚಿತ್ರ ಅಕಾಡೆಮಿಯ ಅನುಮತಿಯಿಲ್ಲದೆ ಸಿನಿಮಾ ಚಟುವಟಿಕೆಗಳಿಗೆ ಬೇರೆ ಯಾರಿಗೂ ಅನುದಾನ ಕೊಡಬಾರದು ಎಂಬುದು ಅಕಾಡೆಮಿಯ ಹಟಮಾರಿ ಧೋರಣೆಯಾಗುತ್ತದೆ.

ಸುಚಿತ್ರಾ ಫಿಲಂ ಸೊಸೈಟಿಗೆ ಖಾಯಂ ಅನುದಾನ ಕೊಡುವುದಾದರೆ, ಚಿಲ್ಡ್ರನ್ಸ್ ಫಿಲಂ ಇಂಡಿಯಾಕ್ಕೂ ಕೊಡಬಹುದಲ್ಲವೇ? ಚಲನಚಿತ್ರ ಅಕಾಡೆಮಿ, ಈ ರೀತಿಯ ಎಲ್ಲ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು, ಚರ್ಚೆಯ ಮೂಲಕ ಸಿನಿಮಾಕ್ಕಾಗಿ ಒಂದು ವಿಶಾಲ ವೇದಿಕೆಯನ್ನು ಸೃಷ್ಟಿಸಿಕೊಳ್ಳಬೇಕಾದ ಅಗತ್ಯವಿದೆ ಎನಿಸುತ್ತಿದೆ.

ಭಾರತದಲ್ಲಿ 1955ರಲ್ಲೇ ಚಿಲ್ಡ್ರನ್ಸ್ ಫಿಲಂ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶವೇ ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವುದು, ಚಿಕ್ಕವಯಸ್ಸಿನ ಮಕ್ಕಳಲ್ಲಿ ಹೃದಯ ವೈಶಾಲ್ಯತೆಯ ಜೊತೆಗೆ ಅವರಲ್ಲಿ ಗಂಭೀರ ಚಿಂತನೆಯನ್ನು ಬೆಳೆಸಲು ಕಾರಣವಾಗುವುದು. ಇದರ ಮೂಲ ಉದ್ದೇಶ ಈ ಸಂಸ್ಥೆಯ ತಯಾರಿಕೆ `ಜಲದೀಪ' 1957ರಲ್ಲಿ ವೆನಿಸ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಮಕ್ಕಳ ಚಿತ್ರಗಳ ಮಹತ್ವವನ್ನು ವಿಸ್ತರಿಸಿತು.

ಈಗ ಮಕ್ಕಳ ಚಲನಚಿತ್ರಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಶಸ್ತಿಗಳೇ ಇವೆ. ರಾಜ್ಯದಲ್ಲಿ ನಾಲ್ಕು ಮಕ್ಕಳ ಚಿತ್ರಗಳಿಗೆ ಪ್ರತೀ ವರ್ಷ ವಿಶೇಷ ಪ್ರಶಸ್ತಿಯೂ 25 ಲಕ್ಷ ರೂಪಾಯಿಗಳನ್ನು ನೀಡಬೇಕೆಂಬ ಚಿಲ್ಡ್ರನ್ಸ್ ಫಿಲಂ ಇಂಡಿಯಾ ಸಂಸ್ಥೆಯ ಹಲವು ದಿನಗಳ ಬೇಡಿಕೆ ಈಡೇರಿದ ಫಲವಾಗಿ ಈಗ ಪ್ರತೀ ವರ್ಷ ಇಬ್ಬರು ನಿರ್ಮಾಪಕರು 25 ಲಕ್ಷ ರೂಪಾಯಿ ಸಹಾಯಧನ ಪಡೆಯುತ್ತಿದ್ದಾರೆ.

ಪ್ರತಿ ಜಿಲ್ಲೆಯಲ್ಲೂ ಮಕ್ಕಳ ಚಲನಚಿತ್ರ ಪ್ರದರ್ಶನಕ್ಕಾಗಿಯೇ ಬಾಲಭವನದಲ್ಲಿ ಪ್ರೊಜೆಕ್ಟರ್ ಅಳವಡಿಸಬೇಕೆಂಬ ಬೇಡಿಕೆ ಈಡೇರಬೇಕಾಗಿದೆ. ಮಕ್ಕಳ ಚಲನಚಿತ್ರ ಎನ್ನುವುದು ಒಂದು ಚಳವಳಿಯಾಗಿ ಬೆಳೆಯಬೇಕು ಎನ್ನುವುದು ಆಶಯ. ಆದರೆ ಮಕ್ಕಳ ಚಿತ್ರಗಳಿಗೆ ಪ್ರೇಕ್ಷಕರು ಯಾರು ಎನ್ನುವುದು ಬಗೆಹರಿಯದ ಪ್ರಶ್ನೆ.

ಮಕ್ಕಳ ಚಿತ್ರ ಎಂದರೆ ಯಾವುದು? ಎನ್ನುವುದೂ ನಿರಂತರ ಪ್ರಶ್ನೆ. ಇಂಥ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಹಂತದಲ್ಲೇ ಅನಿಮೇಶನ್ ಚಿತ್ರಗಳು, ಕಾರ್ಟೂನ್ ಚಿತ್ರಗಳು, ಆಕಾಶದಲ್ಲಿ ಹಾರಾಡುವ ಸಾಹಸಮಯ ಚಿತ್ರಗಳು, ಜಾನಪದ ಚಿತ್ರಗಳು ಮಕ್ಕಳ ಮೇಲೆ ದಾಳಿ ಮಾಡಲಾರಂಭಿಸಿವೆ. ನಮ್ಮಲ್ಲಿ ಮಕ್ಕಳ ಚಿತ್ರ ಎಂದರೇನು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲ. ಎಲ್ಲದಕ್ಕೂ ಸಿದ್ಧ ಸೂತ್ರ. ಸೂಪರ್ ಸ್ಟಾರ್‌ಗಳಿದ್ದರೆ ಅದು ಎಲ್ಲ ವರ್ಗದ ಚಿತ್ರ.

ಅದೇ ಕತೆಯನ್ನು ಬಾಲನಟರನ್ನಿಟ್ಟುಕೊಂಡು ಚಿತ್ರಿಸಿದರೆ ಅದು ಮಕ್ಕಳ ಚಿತ್ರ ಎನ್ನುವಂತಾಗಿದೆ ಸ್ಥಿತಿ. ಕನ್ನಡದಲ್ಲೇ ಇದುವರೆಗೆ ತಯಾರಾಗಿರುವ ಬಹುತೇಕ ಚಿತ್ರಗಳು ಚರ್ವಿತಚರ್ವಣವಾಗಿವೆ. ಸಾಮಾನ್ಯವಾಗಿ ಹಳ್ಳಿ ಹುಡುಗ ಬಡತನದಿಂದ ಕೂಲಿ ಮಾಡಿಕೊಂಡು ಶಾಲೆಗೂ ಹೋಗುತ್ತಾ ಕಷ್ಟಪಟ್ಟು ಜೀವಿಸುತ್ತಿರುತ್ತಾನೆ.

ಕುಡುಕ ತಂದೆ, ಬಡತನದಿಂದ ಕುಗ್ಗಿ ಹೋಗಿರುವ ತಾಯಿ... ಈ ಸೂತ್ರವನ್ನಿಟ್ಟುಕೊಂಡು ಬಹುತೇಕ ಚಿತ್ರಗಳು ತಯಾರಾಗಿವೆ. ಮಕ್ಕಳು ಕಾಡಿಗೆ ಹೋಗುವುದು, ಅಲ್ಲಿ ದೆವ್ವದ ಮನೆ ಮತ್ತೊಂದು ಸೂತ್ರ. ಪ್ರಾಣಿಗಳು, ಪಕ್ಷಿಗಳು ಇರುವುದು ಮತ್ತೊಂದು ಸೂತ್ರ. ಮಕ್ಕಳು ಅತಿಮಾನುಷ ಸಾಹಸಗಳನ್ನೆಲ್ಲಾ ಮಾಡುವುದು ಕೂಡ ಉಂಟು. ಜೊತೆಗೆ ಮೂತ್ರಪಿಂಡ ಕಳವು ಜಾಲವನ್ನು ಪತ್ತೆಹಚ್ಚುವುದು, ಶಿಕ್ಷಣ ಪದ್ಧತಿ ಸರಿಯಿಲ್ಲ ಎಂಬ ಸಂದೇಶ ಸಾರುವುದು...

ಹೀಗೆ ವಸ್ತು ಹಲವಾರು. ದೊಡ್ಡವರ ಚಿತ್ರಗಳಿಗೂ ಮಕ್ಕಳ ಚಿತ್ರಗಳಿಗೂ ವ್ಯತ್ಯಾಸವೇ ಇಲ್ಲದಂತಹ ಸನ್ನಿವೇಶವನ್ನು ಸೃಷ್ಟಿಸಲಾಗಿದೆ. ಮಕ್ಕಳ ಚಿತ್ರಗಳ ಸೋಲಿನ ಎಳೆ ಇರುವುದೇ ಇಲ್ಲಿ. ಇದರಿಂದಾಗಿ ಮಕ್ಕಳ ಚಿತ್ರಗಳನ್ನು ತಾಳ್ಮೆಯಿಂದ ನೋಡುವ ವ್ಯವಧಾನವನ್ನೇ ಪ್ರೇಕ್ಷಕರು ಕಳೆದುಕೊಂಡಿದ್ದಾರೆ. ಮಕ್ಕಳ ಚಲನಚಿತ್ರ ನೋಡುವಂತ ವಾತಾವರಣವನ್ನು ಚಲನಚಿತ್ರ ರಂಗ ಸೃಷ್ಟಿಸಿಯೇ ಇಲ್ಲ. ಅಂತಹ ವಾತಾವರಣವನ್ನು ಮಕ್ಕಳ ಚಿತ್ರೋತ್ಸವ ಸೃಷ್ಟಿಸಿಕೊಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT