ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರನ್ನೂ ಎಲ್ಲವನ್ನೂ ಭ್ರಷ್ಟಗೊಳಿಸುವ ಕಾಲ ಇದು...

Last Updated 13 ಜನವರಿ 2011, 9:55 IST
ಅಕ್ಷರ ಗಾತ್ರ

ಇದು ರಾಜ್ಯಕ್ಕೆ ಕಷ್ಟದ ಕಾಲ, ಕೆಟ್ಟ ಕಾಲ. ಸರ್ಕಾರ ಮತ್ತು ಆಡಳಿತ ಪಕ್ಷಕ್ಕೆ ಹೀಗೆ ಕೆಸರು ಮೆತ್ತಿಕೊಂಡುದು ಈಚಿನ ವರ್ಷಗಳಲ್ಲಿ ಇದೇ ಮೊದಲು. ಸರ್ಕಾರದಲ್ಲಿ ಇದ್ದವರು,ಆಡಳಿತ ಪಕ್ಷದವರು ಇಷ್ಟು ಭ್ರಷ್ಟರಾಗಬಹುದೇ? ಸ್ವಜನ ಪಕ್ಷಪಾತದಲ್ಲಿ ತೊಡಗಬಹುದೇ ಎಂದು ಅಚ್ಚರಿಯಾಗುತ್ತದೆ. ಯಾವುದೇ ಒಂದು ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕನಿಷ್ಠ ಒಂದೆರಡು ವರ್ಷ ಅದು ಮಾಧ್ಯಮಗಳ ಜತೆಗಿನ ಮಧುಚಂದ್ರ ಅವಧಿ ಎಂದೇ ಪರಿಗಣಿತವಾಗಿರುತ್ತದೆ.

ಆದರೆ, ಈ ಸರ್ಕಾರ ಆ ‘ಆನಂದ’ವನ್ನು ಅನುಭವಿಸಿಯೇ ಇಲ್ಲ. ಅದಕ್ಕೆ ಮಾಧ್ಯಮಗಳನ್ನು ದೂರಿ ಫಲವಿಲ್ಲ. ಅಧಿಕಾರಕ್ಕೆ ಬಂದವರು ಭ್ರಷ್ಟಾಚಾರದಲ್ಲಿ ತೊಡಗಲು ಅಷ್ಟೊಂದು ಆತುರ ಮಾಡಿದರೆ, ತಮ್ಮ ಕುಟುಂಬದ ಸದಸ್ಯರಿಗೇ ಅನುಕೂಲ ಮಾಡಿಕೊಡುವಲ್ಲಿ ‘ಶ್ರದ್ಧೆ’ ತೋರಿದರೆ ಮಾಧ್ಯಮಗಳು ಕಣ್ಣು ಮುಚ್ಚಿಕೊಂಡಿರಬೇಕು ಎಂದು ಯಾರೂ ಬಯಸಬಾರದು.

ಮುಖ್ಯಮಂತ್ರಿ ಯಡಿಯೂರಪ್ಪನವರು ‘ಅವರು ಮಾಡಿಲ್ಲವೇ? ಅವರು ಮಾಡಿದ್ದನ್ನೇ ನಾವೂ ಮಾಡಿದ್ದೇವೆ’ ಎಂದು ಹೇಳುತ್ತಿರುವುದು ಎರಡು ತಪ್ಪುಗಳನ್ನು ಸೇರಿಸಿ ಒಂದು ಸರಿ ಮಾಡಲು ಹೊರಟಂತಿದೆ.ವಿರೋಧ ಪಕ್ಷದವರು ಪಾಲುಗೊಂಡ ಹಗರಣಗಳು ಮುಖ್ಯಮಂತ್ರಿಗಳಿಗೆ ಯಾವ ಸಮರ್ಥನೆಯನ್ನೂ ನೀಡುವುದಿಲ್ಲ. ತರಾತುರಿಯಲ್ಲಿ ತಮ್ಮ ಮಕ್ಕಳಿಗೆ, ಅಳಿಯಂದಿರಿಗೆ ಕೊಟ್ಟ ಜಮೀನನ್ನು ಸರ್ಕಾರ ವಾಪಸು ತೆಗೆದುಕೊಳ್ಳುವ ಮೂಲಕವೂ ಅದನ್ನು ಸರಿಪಡಿಸಲು ಆಗದು. ಆಗಿರುವ ಡ್ಯಾಮೇಜ್‌ನ್ನು ಅಷ್ಟು ಸುಲಭವಾಗಿ ಸರಿಪಡಿಸಲು ಸಾಧ್ಯವಿಲ್ಲ. ಬಿಜೆಪಿ ಒಂದು ಭಿನ್ನ ಪಕ್ಷ ಎಂದು ಆ ಪಕ್ಷದವರು ಹೇಳಿಕೊಂಡು ಅಧಿಕಾರಕ್ಕೆ ಬಂದವರು. ಅವರು ಹಾಗೆಯೇ ಇರಬೇಕು ಎಂದು ಜನರು ಬಯಸಿದ್ದರು.ಈಗ ಜನರಿಗೆ ನಿರಾಶೆಯಾಗಿದೆ. ನಾವು ಇಂಥ ಸರ್ಕಾರವನ್ನು ಬಯಸಿರಲಿಲ್ಲ ಅಥವಾ ಇವರು ನಮ್ಮನ್ನು ಆಳಲು ಯೋಗ್ಯರಲ್ಲ ಎಂಬ ಭಾವನೆ ಅವರಲ್ಲಿ ಬಲಿಯುತ್ತಿದೆ.

ಈ ಸರ್ಕಾರ ಅಧಿಕಾರಕ್ಕೆ ಬಂದ ಲಾಗಾಯ್ತಿನಿಂದ ಆಗಿರುವ ಎರಡು ಮುಖ್ಯ ಸಮಸ್ಯೆ ಎಂದರೆ ಒಂದು, ಆಡಳಿತ ಪಕ್ಷದವರು ಒಂದಾದ ನಂತರ ಮತ್ತೊಂದು ಹಗರಣದಲ್ಲಿ   ಸಿಲುಕುತ್ತಿರುವುದು. ಇಲ್ಲವೇ ಸರ್ಕಾರವನ್ನು ಭಿನ್ನಮತ ನಿರಂತರವಾಗಿ ಕಾಡುತ್ತಿರುವುದು. ಈ ಎರಡೂ ಕಾರಣಗಳಿಂದ ಆಡಳಿತ ಯಂತ್ರವೇ ಕುಸಿದು ಹೋಗಿದೆ.ಸರ್ಕಾರದ ಅಧಿಕೃತ ದಾಖಲೆಗಳು ಹಾದಿ ಬೀದಿಯಲ್ಲಿ ಕರಪತ್ರಗಳ ಹಾಗೆ ಸಿಗುವಂತೆ ಆಗಿರುವುದೇ ಆಡಳಿತದಲ್ಲಿ ಬಿಗಿ ಸಂಪೂರ್ಣವಾಗಿ ಕುಸಿದು ಹೋಗಿರುವುದಕ್ಕೆ ದೊಡ್ಡ ನಿದರ್ಶನ. ಬಿಗಿಯಾಗಿ ಆಡಳಿತ ಮಾಡಬೇಕಿದ್ದ ಮುಖ್ಯಮಂತ್ರಿಗಳು ಅದನ್ನು ಬಿಟ್ಟು ಈಗ ಮಾಡುತ್ತಿರುವುದು ಎರಡೇ ಕೆಲಸ. ಒಂದು, ಭಿನ್ನಮತವನ್ನು ತಣಿಸುವುದು.ಎರಡು, ತಮ್ಮ ಅಥವಾ ತಮ್ಮ ಸಹೋದ್ಯೋಗಿಗಳ ವಿರುದ್ಧ ಪುಂಖಾನುಪುಂಖವಾಗಿ ಬರುತ್ತಿರುವ ಹಗರಣಗಳನ್ನು ಸಮರ್ಥಿಸಿಕೊಳ್ಳುವುದು.

ಸರ್ಕಾರಕ್ಕೆ, ಅದರ ನೇತೃತ್ವ ವಹಿಸಿದವರಿಗೆ ಒಂದು ‘ಇಮೇಜ್’ ಎಂದು ಇರುತ್ತದೆ. ಈ ಸರ್ಕಾರಕ್ಕೆ ಆ ‘ಇಮೇಜ್’ ಎಂಬುದೇ ಇಲ್ಲ. ಅದನ್ನು ತಂದುಕೊಡಲು ಮುಖ್ಯಮಂತ್ರಿಗಳು ನಾಯಕರಾಗಿ, ಅವರ ಸಹೋದ್ಯೋಗಿಗಳು ವೈಯಕ್ತಿಕವಾಗಿ ಅಥವಾ ಒಂದು ತಂಡವಾಗಿ ಮಾಡಿದ ಯಾವ ಪ್ರಯತ್ನಗಳೂ ಜನರ ಮನಸ್ಸಿನಲ್ಲಿ ಉಳಿದಿಲ್ಲ.ವಿಪರ್ಯಾಸ ಎಂದರೆ ಬಿಜೆಪಿಗೆ ಚುನಾವಣೆಗಳಲ್ಲಿ ಅಪೂರ್ವ ಜನಬೆಂಬಲ ಸಿಗುತ್ತಿರುವುದು.ಕಳೆದ ಎರಡೂವರೆ ವರ್ಷಗಳಲ್ಲಿ ನಿರಂತರವಾಗಿ ಬಂದ ಎಲ್ಲ ಚುನಾವಣೆಗಳಲ್ಲಿ ಪಕ್ಷಕ್ಕೆ ದೊಡ್ಡ ಸೋಲಾಗಿಲ್ಲ.ಈ ಚುನಾವಣೆಗಳಲ್ಲಿ ವಿರೋಧ ಪಕ್ಷಗಳಿಗೆ ಸಿಕ್ಕುದು ಬರೀ ‘ಸಮಾಧಾನಕರ ಬಹುಮಾನ’ ಮಾತ್ರ. ಈ ಜನಬೆಂಬಲವೇ ಆಡಳಿತ ಪಕ್ಷದ ಹಾದಿ ತಪ್ಪಿಸಿರಬಹುದು. ಹೇಗೂ ಜನರ ಬೆಂಬಲವಿದೆ ಏನು ಮಾಡಿದರೂ ನಡೆಯುತ್ತದೆ ಎಂದು ಅವರು ಅಂದುಕೊಳ್ಳುತ್ತಿರಬಹುದು.

ಇದು ವೈಯಕ್ತಿಕ ಲಾಭದ ಕಡೆಗೆ ಗಮನ ಕೊಡುವ ಕಾಲ.ತಮಗೆ, ತಮ್ಮ ಕುಟುಂಬಕ್ಕೆ ಅನುಕೂಲ ಎನಿಸುವಂಥ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮಾತ್ರ ಜನರಿಗೆ ಅನಿಸುತ್ತಿರುವಂತೆ ಕಾಣುತ್ತದೆ.ಮುಖ್ಯಮಂತ್ರಿಗಳು ‘ಭಾಗ್ಯಲಕ್ಷ್ಮಿ’ ಯೋಜನೆಯಡಿ ಊರು ಊರಿಗೆ ಹೋಗಿ ಸೀರೆ ಹಂಚಿದರೆ ಹೆಣ್ಣು ಮಕ್ಕಳು ಯಾವ ಸಂಕೋಚವೂ ಇಲ್ಲದೆ  ಅದನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಅದೇನು ಬಹಳ ಬೆಲೆಬಾಳುವ ಸೀರೆಯಲ್ಲ; 220 ರೂಪಾಯಿ ಕೊಟ್ಟರೆ ಅಂಥ ಒಂದು ಸೀರೆ ಸಿಗುತ್ತದೆ. ಯಾವ ಮಹಿಳೆಯೂ ತನಗೆ ಸರ್ಕಾರ ಏಕೆ ಸೀರೆ ಕೊಡಿಸಬೇಕು ಎಂದು ಕೇಳಿದ್ದು ವರದಿಯಾಗಿಲ್ಲ. ಇದು ಮಾನದ ವಿಚಾರ. ಮಹಿಳೆಯರು, ಸರ್ಕಾರ ತಮಗೆ ಸೀರೆ ಕೊಟ್ಟು ಮಾನ ಮುಚ್ಚುವ ಕೆಲಸ ಮಾಡಬೇಕಾದ ಅಗತ್ಯವಿಲ್ಲ. ಅದನ್ನು ತನ್ನ ಗಂಡ ಮಾಡುತ್ತಾನೆ ಎಂದು ಹೇಳಬೇಕಿತ್ತು. ಇಲ್ಲವೇ ಆ ಮಹಿಳೆಯ ಪತಿ ‘ನನ್ನ ಹೆಂಡತಿಗೆ ಸೀರೆ ಕೊಡಿಸದಷ್ಟು ನಾನು ಅಯೋಗ್ಯನಾಗಿಲ್ಲ’ ಎಂದು ಹೇಳಬೇಕಿತ್ತು. ಎರಡೂ ಆಗಲಿಲ್ಲ.

ಈ ಸೀರೆ, ಪಂಚೆ ಕೊಡುವ ಕೆಲಸವನ್ನು 80ರ ದಶಕದಲ್ಲಿಯೇ ಆರಂಭ ಮಾಡಿದವರು ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು. ಅದನ್ನು ಪ್ರಬಲವಾಗಿ ವಿರೋಧ ಮಾಡಿದವರು ಆಗಿನ ನೀರಾವರಿ ಸಚಿವ ಎಚ್.ಡಿ.ದೇವೇಗೌಡರು.‘ನನಗೆ ನೀರಾವರಿ ಯೋಜನೆ ಪೂರ್ಣಗೊಳಿಸಲು 300 ಕೋಟಿ ರೂಪಾಯಿ ಕೊಡಿ’ ಎಂದು ಗೌಡರು ದೊಡ್ಡ ಹೋರಾಟವನ್ನೇ ಮಾಡಿದರು. ಹೆಗಡೆ ಮಣಿಯಲಿಲ್ಲ. ದುಡ್ಡು ಕೇಳಲು ಗೌಡರಿಗೆ ರಾಜಕೀಯ ಕಾರಣಗಳೇ ಇದ್ದುವು ಎಂದುಕೊಂಡರೂ ಅವರ ಉದ್ದೇಶವನ್ನು ಪ್ರಶ್ನಿಸುವಂತೆ ಇರಲಿಲ್ಲ. ಆಗ ಆರಂಭವಾದ ಮತದಾರರಿಗೆ ನೀಡುವ ವೈಯಕ್ತಿಕ ಆಮಿಷಗಳ ಪರಂಪರೆ ಈಗಲೂ ಮುಂದುವರಿದುಕೊಂಡು ಬಂದಿದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗಲೂ ಇದನ್ನೇ  ಮಾಡಿದರು.

ವೈಯಕ್ತಿಕ ಆಮಿಷಗಳಿಗೆ ಬರೀ ಮತದಾರರು ಮಾತ್ರ ಮಣಿಯುವುದಿಲ್ಲ.ರಾಜಕಾರಣಿಗಳೂ ಅದೇ ಹಾದಿ ಹಿಡಿದಿದ್ದಾರೆ.ಅಧಿಕಾರಕ್ಕೆ ಬಂದ ಕೂಡಲೇ ಮೊದಲು ತಮಗೆ, ತಮ್ಮ ಕುಟುಂಬದ ಸದಸ್ಯರಿಗೆ, ಬೀಗರು ಬಿಜ್ಜರಿಗೆ ಅನುಕೂಲ ಮಾಡಿಕೊಡುವುದರ ಹಿಂದೆ ಈ ವೈಯಕ್ತಿಕ ಲಾಭದ ರಾಜಕಾರಣವೇ ಕಾಣುತ್ತದೆ. ತಮ್ಮ ಕುಟುಂಬದ ಸದಸ್ಯರಿಗೆ ಅನುಕೂಲ ಮಾಡಿಕೊಡುವುದರ ಇನ್ನೊಂದು ಮುಖ ಆಡಳಿತದಲ್ಲಿ ನೇರವಾಗಿ ಅಧಿಕಾರಸ್ಥರ ಕುಟುಂಬದ ಸದಸ್ಯರು ಕೈಯಾಡಿಸುವುದು. ಇದು ಕುಮಾರಸ್ವಾಮಿಯವರ ಕಾಲದಲ್ಲಿಯೇ ಶುರುವಾಯಿತು ಎನ್ನುವುದಾದರೆ ಅದನ್ನು ತಡೆಯಲು ಯಡಿಯೂರಪ್ಪನವರು ಮಾಡಿದ ಪ್ರಯತ್ನವೇನು ಎಂದು ಗೊತ್ತಾಗುವುದಿಲ್ಲ. ರಾಜಕಾರಣಿಗಳು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕೋಟಿಗಟ್ಟಲೆ  ಕಬಳಿಸುವಾಗ ಜನರು ಸೀರೆ -ಪಂಚೆಗೆ ಆಸೆ ಪಟ್ಟರೆ ತಪ್ಪು ಎಂದು ಹೇಳುವುದು ಕಷ್ಟ. ಎಲ್ಲರನ್ನೂ, ಎಲ್ಲವನ್ನೂ  ಭ್ರಷ್ಟಗೊಳಿಸುವ ಕಾಲ ಇದು.

ಭ್ರಷ್ಟಾಚಾರ ಬರೀ ರಾಜ್ಯ ಬಿಜೆಪಿಗೇನೂ ಸೀಮಿತಗೊಂಡಿಲ್ಲ. ಕೇಂದ್ರ ದೂರಸಂಪರ್ಕ ಖಾತೆ ಸಚಿವ ರಾಜಾ ಮಾಡಿದ ಹಗರಣದ ಮುಂದೆ ಇದೆಲ್ಲ ಏನೂ ಅಲ್ಲ. ಆದರೆ, ಒತ್ತಡದಲ್ಲಿ ಇರುವ ಕಾಂಗ್ರೆಸ್ ಪಕ್ಷ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಯಡಿಯೂರಪ್ಪ ಅವರ ಮೇಲೆ ಬೀಳುತ್ತಿದೆ. ಸಂಸತ್ತಿನ ಅಂಗಳದಲ್ಲಿ ಅದು ಈಗಾಗಲೇ ಜಾಹೀರಾಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ಮನೆಗೆ ಕಳಿಸಿದ್ದನ್ನು, ರಾಜಾ ಅವರಿಂದ ರಾಜೀನಾಮೆ ಕೊಡಿಸಿದ್ದನ್ನು ಕಾಂಗ್ರೆಸ್ ಪಕ್ಷ ನಿದರ್ಶನವಾಗಿ ಕೊಡುತ್ತಿದೆ. ಯಡಿಯೂರಪ್ಪನವರನ್ನು ಕಂಡರೆ ಆಗದ ಬಿಜೆಪಿ ಹೈಕಮಾಂಡ್‌ನ ಕೆಲವರೂ ಹಿನ್ನೆಲೆಯಲ್ಲಿ ರಾಗ ಸೇರಿಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಈ ಎಲ್ಲ ಒತ್ತಡಗಳ ಮಧ್ಯೆಯೇ ಯಡಿಯೂರಪ್ಪ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳನ್ನು ಎದುರಿಸಲು ಸಾಟಿಯಿಲ್ಲದ ಸಿದ್ಧತೆ ಮಾಡಿಕೊಂಡಿದ್ದಾರೆ. ಇಷ್ಟು ತರಾತುರಿಯಲ್ಲಿ ಊರಿಂದ ಊರಿಗೆ ಪ್ರವಾಸ ಮಾಡಿ ಸೀರೆ ಹಂಚುತ್ತಿರುವುದಕ್ಕೆ ಬೇರೆ ಕಾರಣವೇ ಇಲ್ಲ. ಕಾಂಗ್ರೆಸ್ ಮತ್ತು ಜೆ.ಡಿ (ಎಸ್)ನವರು ಅದನ್ನು ವಿರೋಧ ಮಾಡುತ್ತಿರುವುದಕ್ಕೂ ಇದೇ ಕಾರಣ.

ಚುನಾವಣೆ ಎದುರಿಸುವುದರಲ್ಲಿ ನಿಸ್ಸೀಮರಾಗಿರುವ ಮುಖ್ಯಮಂತ್ರಿ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುವುದಕ್ಕೇ ಹೆಣಗಬೇಕಿರುವುದು ದೊಡ್ಡ ವಿಪರ್ಯಾಸ. ಅವರ ಜತೆಗೇ ಇದ್ದಂತೆ ಇರುವ ರೆಡ್ಡಿಗಳು ಚಿಕ್ಕ ಪುಟ್ಟ ನೆವ ಸಿಕ್ಕರೂ ಸಾಕು, ನಾಯಕತ್ವ ಬದಲಾವಣೆಯ ಇಂಗಿತ ವ್ಯಕ್ತಪಡಿಸುತ್ತಾರೆ. ಹೆದರಿದವರ ಮೇಲೆ ಅರಿವೆ ಹಾವು ಎಸೆಯುವ ಕೆಲಸ ಇದು.ಚುನಾವಣೆಗಳಲ್ಲಿ ಯಡಿಯೂರಪ್ಪನವರ ಯಶಸ್ಸಿಗೆ ಇರುವ ಬಹುಮುಖ್ಯ ಕಾರಣ ಲಿಂಗಾಯತ ಸಮಾಜ ಅವರ ಹಿಂದೆ ಭದ್ರ ಬಂಡೆಯ ಹಾಗೆ ನಿಂತಿರುವುದು. ಹಲವು ಸಣ್ಣಪುಟ್ಟ ಸಮಾಜಗಳೂ ಬಿಜೆಪಿ ಜತೆಗೆ ಇವೆ.ರಾಜ್ಯದಲ್ಲಿ ಹಿಂದೆಯೂ ಲಿಂಗಾಯತ ಮುಖ್ಯಮಂತ್ರಿಗಳು ಇದ್ದರು. ಆದರೆ ಅವರು ಯಾರೂ ಯಡಿಯೂರಪ್ಪನವರ ಹಾಗೆ ಮಠ ಮಾನ್ಯಗಳಿಗೆ ದುಡ್ಡು ಕೊಟ್ಟು ತಮ್ಮ ಸಮಾಜದ ಜತೆಗೆ ‘ಗುರುತಿಸಿಕೊಂಡಿರಲಿಲ್ಲ’.
ಇದು ಬೇರೆ ಪಕ್ಷಗಳ ಮೇಲೆ ಎಂಥ ಒತ್ತಡ ನಿರ್ಮಾಣ ಮಾಡಿದೆ ಎಂದರೆ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಡಾ.ಜಿ.ಪರಮೇಶ್ವರ್ ಅವರು ತುಮಕೂರಿಗೆ ಧಾವಿಸಿ ಶಿವಕುಮಾರ ಸ್ವಾಮಿಗಳ ಪಾದಕ್ಕೆ ಎರಗಿದರು. ಕೆ.ಪಿ.ಸಿ.ಸಿ ಅಧ್ಯಕ್ಷರು ಬರೀ ತಮ್ಮ ಊರಿನ ಸ್ವಾಮೀಜಿ ಎಂದು ಈ ಕೆಲಸ ಮಾಡಿರಲಾರರು.

ಯಡಿಯೂರಪ್ಪ ಅವರ ರಾಜೀನಾಮೆಗೆ ಕಾಂಗ್ರೆಸ್ ಎಷ್ಟೇ ಆಗ್ರಹ ಮಾಡಬಹುದು.ಆದರೆ, ಚುನಾವಣೆ ತಂತ್ರದ ದೃಷ್ಟಿಯಿಂದ ಅದು ಮತ್ತೆ ಎಡವಿದೆ.ಪರಿಶಿಷ್ಟ ಜಾತಿಯ ಬಲಗೈ ಪಂಗಡದ ಪರಮೇಶ್ವರ್ ಅವರನ್ನು ಅಧ್ಯಕ್ಷ ಹುದ್ದೆಗೆ ತಂದಿರುವುದರಿಂದ ರಾಜ್ಯದ ಎರಡು ಬಹುದೊಡ್ಡ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರು ಕಾಂಗ್ರೆಸ್ ತೆಕ್ಕೆಯಿಂದ ಇನ್ನಷ್ಟು ದೂರವಾಗುತ್ತಾರೆ. ತಮ್ಮ ಸಮುದಾಯದವರು ಮುಖ್ಯಮಂತ್ರಿ ಆಗುತ್ತಾರೆ ಎಂದು ತಿಳಿದಾಗಲೇ ಈ ಎರಡೂ ಸಮುದಾಯಗಳು ಆ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿವೆ.

 ಈಗ ಕಾಂಗ್ರೆಸ್ಸಿನಲ್ಲಿ ಬಲಗೈ ಪಂಗಡದವರಿಗೆ ಸಿಕ್ಕ ಆದ್ಯತೆ ಹೆಚ್ಚು ಅನ್ನುವಂತೆಯೇ ಆಯಿತು.ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ತಿನ ನಾಯಕಿ ಸ್ಥಾನದಲ್ಲಿ ಮೋಟಮ್ಮ ಇರುವುದು ಸಾಲದು ಎನ್ನುವಂತೆ ಈಗ ಕೆ,ಪಿ.ಸಿ.ಸಿ ಅಧ್ಯಕ್ಷ ಗಾದಿಯೂ ಅದೇ ಪಂಗಡಕ್ಕೆ ಸಿಕ್ಕಿದೆ. ಇದಕ್ಕೆ ಪರಿಶಿಷ್ಟ ಜಾತಿಯಲ್ಲಿಯೇ ಇರುವ ಎಡಗೈ ಪಂಗಡದ ಪ್ರತಿಕ್ರಿಯೆ ಏನಿರಬಹುದು ಎಂದು ಕಾಂಗ್ರೆಸ್ ನಾಯಕರು ತಿಳಿಯುವ ಪ್ರಯತ್ನ ಮಾಡಿದ್ದರೆ ತಂತ್ರಗಾರಿಕೆ ದೃಷ್ಟಿಯಿಂದ ತಾವು ಎಡವಿದ್ದು ಎಲ್ಲಿ ಎಂದು ತಿಳಿಯುತ್ತಿತ್ತು. ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯ ಫಲಿತಾಂಶದಲ್ಲಿ ತಾನು ಮಾಡಿದ್ದು ಸರಿಯೇ ತಪ್ಪೇ ಎಂದು ಕಾಂಗ್ರೆಸ್ಸಿಗೆ ತಿಳಿಯಬಹುದು.

ಯಡಿಯೂರಪ್ಪನವರ ಬದಲಾವಣೆಗೆ ಹೊರಗಿನಿಂದ ಮತ್ತು ಒಳಗಿನಿಂದ ಆರಂಭವಾಗಿರುವ ಒತ್ತಡ ಈ         ಚುನಾವಣೆಯ ನಂತರ ಇನ್ನಷ್ಟು ಹೆಚ್ಚಬಹುದು. ಅವರ ಜಾಗಕ್ಕೆ ಬರಲು ಅನೇಕ ನಾಯಕರು ಸಿದ್ಧರಿರಬಹುದು.ಆದರೆ, ಲಿಂಗಾಯತರನ್ನು ಬಿಟ್ಟು ಬೇರೆಯವರಿಗೆ ಆ ಸ್ಥಾನ ಕೊಟ್ಟು ನೋಡುವ ಸಾಹಸವನ್ನು ಬಿಜೆಪಿ ಹೈಕಮಾಂಡ್ ಮಾಡಲಾರದು ಎನಿಸುತ್ತದೆ. ಏಕೆಂದರೆ ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದುದು ಲಿಂಗಾಯತ ಮತ ಬುನಾದಿಯಿಂದಲೇ ಎಂಬುದು ಅದಕ್ಕೆ ಗೊತ್ತಿದೆ. ಹಾಗಾದರೆ ಯಡಿಯೂರಪ್ಪ ಜಾಗಕ್ಕೆ ಜಗದೀಶ ಶೆಟ್ಟರ್ ಬರಬೇಕಾಗುತ್ತದೆ. ಅವರು ಮುಖ್ಯಮಂತ್ರಿ ಆಗುತ್ತಾರೆಯೇ? ಹೊರಗಿನ ಮತ್ತು ಒಳಗಿನ ಒತ್ತಡದ ಪ್ರಮಾಣದ ಮೇಲೆ ಈ ತೀರ್ಮಾನ ನಿಂತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT