ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನೆಂದು ಸಂಭ್ರಮಿಸೋಣ ಶತಮಾನೋತ್ಸವದ ಈ ಹೊತ್ತಿನಲ್ಲಿ?

Last Updated 15 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಮಹಿಳಾ ಹೋರಾಟಗಳ ಇತಿಹಾಸದಲ್ಲಿ ಈ ಬಾರಿಯ ಮಹಿಳಾ ದಿನಾಚರಣೆಗೆ ವಿಶೇಷವಾದ ಸ್ಧಾನ. ಈ ದಿನಾಚರಣೆಗೆ ಶತಮಾನದ ಸಂಭ್ರಮ. ಒಂದೆಡೆ, ವಹಿಳಾ ಹಕ್ಕುಗಳಿಗಾಗಿ ಪ್ರಾರಂಭವಾದ ಸಂಘರ್ಷ ನೂರು ವರ್ಷಗಳಾದ ನಂತರವೂ ಇಷ್ಟೊಂದು ಶಕ್ತಿಯುತವಾಗಿ ಬೆಳೆಯುತ್ತಿರುವುದನ್ನು ನೋಡಿ ಮನಸ್ಸು ಮುದಗೊಂಡರೆ, ಮತ್ತೊಂದೆಡೆ ಈ ಶತಮಾನದ ಸಂಭ್ರಮವನ್ನು ಮಸುಕಾಗಿಸುವಂಥ ಕೆಲ ಘಟನೆಗಳು ಈ ದಿನಾಚರಣೆಯ ಹಿಂದೆ ಮುಂದೆ ನಡೆದದ್ದು, ಮನಸ್ಸನ್ನು ತೀವ್ರವಾಗಿ ಕಲಕಿತ್ತು. ಇವುಗಳ ಬಗ್ಗೆ ಯೋಚಿಸುತ್ತಾ ಹೋದ ಹಾಗೆಲ್ಲಾ ನಮ್ಮ ಸಮಾಜದಲ್ಲಿ ಅನೇಕ ಮಹಿಳೆಯರು ಇಂದಿಗೂ ಎದುರಿಸಬೇಕಾದ ಪರಿಸ್ಧಿತಿಗಳನ್ನು ಸುತ್ತುವರೆದಂತೆ ಹಲವಾರು ಪ್ರಶ್ನೆಗಳು ಬಾಧಿಸತೊಡಗಿದವು.

ನೂರು ವರುಷಗಳ ಹಿಂದೆ, ಎಂದರೆ 1911ರಲ್ಲಿ ಜರ್ಮನಿಯ ಕ್ರಾಂತಿಕಾರಿ ಚಿಂತಕಿ ಕಾರ್ಲಾ ಜೆಟ್‌ಕಿನ್ ಮಹಿಳಾ ಹೋರಾಟವನ್ನು ಸಾರ್ವಜನಿಕ ವಲಯಕ್ಕೆ ತಂದ ಕಾಲಘಟ್ಟಕ್ಕೂ ಸಮಕಾಲೀನ ಸಾಮಾಜಿಕ ಸಂದರ್ಭಗಳಿಗೂ ನಡುವೆ ಮಹಿಳೆಯರ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಸಮಾಜದ ಸರ್ವರಂಗಗಳಲ್ಲೂ ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣದಲ್ಲಿ ಸಂಖ್ಯಾತ್ಮಕ ಹಾಗೂ ಗುಣಾತ್ಮಕ ಹೆಚ್ಚಳಗಳೆರಡೂ ಆಗಿವೆ ಎಂಬುದರಲ್ಲೂ ಸಂದೇಹವಿಲ್ಲ.

ಮಹಿಳೆಯರು ವೈಯಕ್ತಿಕ ಮತ್ತು ಸಾರ್ವಜನಿಕ ಬದುಕುಗಳಲ್ಲಿ ಎದುರಿಸುತ್ತಿದ್ದಂಥ ಹೆಚ್ಚು ಕಡಿಮೆ ಎಲ್ಲ ಬಗೆಯ ದೌರ್ಜನ್ಯಗಳನ್ನೂ ಕಾಯಿದೆಗಳ ಪರಿಧಿಯೊಳಗೆ ತರುವ ಮೂಲಕ ಲಿಂಗ ನ್ಯಾಯ ಸ್ಥಾಪನೆಯ ಹೋರಾಟಕ್ಕೆ ಹೊಸ ಬಲವನ್ನೂ ನೀಡಲಾಗಿದೆ ಎಂಬುದೂ ನಿಜ. ಇನ್ನು ಮಹಿಳಾ ಅಭಿವೃದ್ಧಿಯ ವಿಚಾರಕ್ಕೆ ಬಂದರಂತೂ ಸ್ವಾತಂತ್ರ್ಯ ಬಂದಾಗಿನಿಂದ ನಿನ್ನೆ ಮೊನ್ನೆಯವರೆಗೂ ಸಾಲು ಸಾಲಾಗಿ ಯೋಜನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಇಷ್ಟೆಲ್ಲಾ ಬದಲಾವಣೆಗಳು ಹೋರಾಟಗಳ ನಡುವೆಯೂ ಅಪಾಯದ ವಲಯದಲ್ಲಿ ತಮ್ಮ ಜೀವನವನ್ನು ಸವೆಸುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಏಕದಿನ ಮಹಿಳಾ ಕೇಂದ್ರಿತ ದಿನಾಚರಣೆಗಳ ಪರಿಣಾಮದ ಬಗ್ಗೆ ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.

ದೇಶದಲ್ಲಿ ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯಗಳ ಬಗ್ಗೆ ಕಾಲದಿಂದ ಕಾಲಕ್ಕೆ ಅಂಕಿ ಅಂಶಗಳನ್ನು ದಾಖಲಿಸಿ - ಪ್ರಕಟಿಸುವ ಜವಾಬ್ದಾರಿಯನ್ನು ಹೊತ್ತಿರುವ ರಾಷ್ಟ್ರೀಯ ಅಪರಾಧಗಳ ದಾಖಲಾತಿ ವಿಭಾಗ ಪ್ರತಿ ಬಾರಿಯೂ ಆತಂಕಕಾರಿ ಎನಿಸುವಂಥ ವಿಚಾರವೊಂದನ್ನು ಹೊರಗೆಡುವುತ್ತಿದೆ. ಅದೇನೆಂದರೆ, ವರ್ಷದಿಂದ ವರ್ಷಕ್ಕೆ ಈ ದೌರ್ಜನ್ಯಗಳ ಪ್ರಮಾಣದಲ್ಲಿ ಸರಾಸರಿ ಶೇಕಡ 10ರಷ್ಟು ಹೆಚ್ಚಳವಾಗುತ್ತಿದೆ ಎನ್ನುವುದು. ದೌರ್ಜನ್ಯದ ಪ್ರಮಾಣವನ್ನು ಕುರಿತು ನಮಗೆ ಲಭ್ಯವಿರುವ ಮಾಹಿತಿ ಕೂಡ ಪೂರ್ಣ ಚಿತ್ರವನ್ನು ನೀಡುವುದಿಲ್ಲ.

ಏಕೆಂದರೆ, ನಮಗೆ ದೊರೆಯುವ ಅಂಕಿ ಅಂಶಗಳು ಕೇವಲ ದಾಖಲಾಗಿರುವ ದೌರ್ಜನ್ಯದ ಪ್ರಕರಣಗಳಿಗೆ ಸೀಮಿತವಾಗಿರುವಂಥವು. ಯಾರ ಗಮನಕ್ಕೂ ಬಾರದೆ, ದೌರ್ಜನ್ಯವನ್ನೆಸಗಿದವರಿಗೆ ಯಾವುದೇ ರೀತಿಯ ಶಿಕ್ಷೆಯಾಗದೆ, ದೌರ್ಜನ್ಯಕ್ಕೆ ಒಳಗಾದವರಿಗೆ ಯಾವ ನ್ಯಾಯವೂ ದೊರೆಯದೆ ಕಾಲಗರ್ಭದಲ್ಲಿ ಸೇರಿ ಹೋಗುವಂಥ ಸಂದರ್ಭಗಳೇ ಹೆಚ್ಚು. ರಾಷ್ಟ್ರೀಯ ಅಪರಾಧಗಳ ದಾಖಲಾತಿ ವಿಭಾಗವೇ ಒಪ್ಪಿಕೊಂಡಿರುವಂತೆ ಶೇಕಡ 70ರಷ್ಟು ಮಹಿಳಾ ವಿರೋಧಿ ದೌರ್ಜನ್ಯಗಳ ವಿರುದ್ಧ ಯಾವ ಕಾನೂನು ಕ್ರಮವನ್ನೂ ಇನ್ನೂ ಜರುಗಿಸಲಾಗಿಲ್ಲ.

ದಾಖಲಾಗುವ ಎಲ್ಲ ಮಹಿಳಾ ವಿರೋಧಿ ದೌರ್ಜನ್ಯಗಳ ಪ್ರಕರಣಗಳಲ್ಲೂ ನ್ಯಾಯ ದೊರೆಯುತ್ತದೆ ಎಂಬ ನೆಚ್ಚಿಕೆಯೇನೂ ಇಲ್ಲ. ಇವುಗಳಲ್ಲಿ ಕೆಲ ಘಟನೆಗಳು ಅಪಾರ ಗೋಚರತೆಯನ್ನು ಪಡೆದು ಕೆಲ ದಿನ ಭಾರಿ ಸುದ್ದಿ ಮಾಡಿ ಹಾಗೆಯೇ ತಣ್ಣಗಾಗುತ್ತವೆ. ಇಂಥ ಕೆಲ ಪ್ರಕರಣಗಳು ನಡೆದು ಹೋಗಿ ವರ್ಷಗಳೇ ಉರುಳಿ ಹೋಗುತ್ತಿದ್ದರೂ ಶಿಕ್ಷೆಯ ಮಾತಿರಲಿ, ಘಟನೆಗೆ ಕಾರಣರಾದವರನ್ನು ಗುರುತು ಹಚ್ಚಲು ಕೂಡ ಆರಕ್ಷಕ ವ್ಯವಸ್ಧೆ ವಿಫಲವಾಗಿದೆ ಎಂದರೆ ನಮ್ಮ ನಾಡಿನಲ್ಲಿ ಹೆಣ್ಣು ಮಕ್ಕಳು, ಮಹಿಳೆಯರು ಎಷ್ಟು ಸುರಕ್ಷಿತ ಎಂಬುದು ವೇದ್ಯವಾಗುತ್ತದೆ. ಹದಿನೈದು ವರುಷದ ಬಾಲಕಿ ಆರುಷಿ ತಲ್ವಾರ್ ಕೋಲೆ ಪ್ರಕರಣಕ್ಕಿಂತ ಬೇರೆ ಸಾಕ್ಷಿ ಇದಕ್ಕೆ ಬೇಕೆ ?

ಮಹಿಳಾ ಹಕ್ಕುಗಳ ಬಗ್ಗೆ ಬರಹಗಳು - ಭಾಷಣಗಳು ವರದಿಗಳು  ಕಾರ್ಯಕ್ರಮಗಳು ಸತತವಾಗಿ ಮೂಡಿ ಬರುತ್ತಿದ್ದರೂ ಇಂದಿಗೂ ಬಹುತೇಕ ಮಹಿಳೆಯರು ತಾವು ಎದುರಿಸಿದ ಅಥವಾ ಒಳಗಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಧೈರ್ಯವಾಗಿ ದೂರು ದಾಖಲಿಸಲು ಮುಂದೆ ಬರುವುದಿಲ್ಲ. ಹಾಗೇನಾದರೂ ದೂರು ಸಲ್ಲಿಸಲು ಮುಂದೆ ಬಂದರೂ ಮಹಿಳೆಯರ ಮೇಲೆಯೇ ಪ್ರಕರಣದ ಹೊಣೆ ಹೊರಿಸಿ ಅವರನ್ನು ಸುಮ್ಮನಾಗಿಸಲು ಪುರುಷ ಕೇಂದ್ರಿತ ಮೌಲ್ಯಗಳಿಂದ ಆವೃತ್ತವಾಗಿರುವ ರಾಜಕೀಯ, ಆಡಳಿತಾತ್ಮಕ ಹಾಗೂ ನ್ಯಾಯಪಾಲನಾ ವ್ಯವಸ್ಥೆ ಪ್ರಯತ್ನಿಸುತ್ತದೆ.

ಪ್ರಾಣ ಬೆದರಿಕೆ, ಅತ್ಯಾಚಾರ, ಕುಟುಂಬದ ಸದಸ್ಯರ ಪ್ರಾಣಕ್ಕೆ ಸಂಚಕಾರ, ಉದ್ಯೋಗಕ್ಕೆ ತೊಂದರೆ - ಇವೇ ಮುಂತಾದ ಒತ್ತಡಗಳನ್ನು ಹೇರಿ ಮಹಿಳೆಯರನ್ನು ಹಿಮ್ಮೆಟ್ಟುವಂತೆ ಮಾಡಿರುವ ಘಟನೆಗಳು ದಿನ ನಿತ್ಯ ದೇಶದ ನಾನಾ ಕಡೆಗಳಲ್ಲಿ ಸಂಭವಿಸುತ್ತಿವೆ ಎಂದು ಹೇಳಿದರೆ ಅದು ಅತಿಶಯೋಕ್ತಿಯಾಗಲಾರದು.

ಇಂಥ ಪರಿಸ್ಥಿತಿಗಳ ನಡುವೆ ಕೆಲ ಪ್ರಕರಣಗಳಲ್ಲಿ ಮಾತ್ರ ನಿಷ್ಪಕ್ಷಪಾತವಾದ ತನಿಖೆ ನಡೆದು ದೌರ್ಜನ್ಯಕ್ಕೆ ಬಲಿಯಾದವರಿಗೆ ನ್ಯಾಯ ದೊರೆತಿರುವುದು ಎಂಬ ವಿಷಯ, ಮಹಿಳಾ ದಿನಾಚರಣೆಯ ಶತಮಾನೋತ್ಸವವನ್ನು ನಾವು ಆಚರಿಸುತ್ತಿರುವ ಈ ಹೊತ್ತಿನಲ್ಲಿ ನಮ್ಮ ಮುಂದೆ ಒಂದು ದೊಡ್ಡ ಸವಾಲಾಗಿ ನಿಂತಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು.

ಮಹಿಳಾ ದಿನಾಚರಣೆಯ ಬಗ್ಗೆ ಪ್ರಸ್ತಾಪ ಮಾಡುವಾಗ ನಾವು ಎತ್ತಬೇಕಾದ ಮೂಲಭೂತ ಪ್ರಶ್ನೆಯೆಂದರೆ ಇಂಥ ದಿನಾಚರಣೆಗಳ ಅರ್ಥವೇನು ಎಂಬುದು. ಈ ದಿನದಂದು ಮಹಿಳೆಯರ ಸಾಧನೆಗಳನ್ನು ಬಿಂಬಿಸುವುದು ಎಷ್ಟು ಮುಖ್ಯವೋ, ಅವರು ಬದುಕುತ್ತಿರುವ ಸ್ಥಿತಿಗಳು ಮತ್ತು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಕೂಡ ಅಷ್ಟೇ ಮುಖ್ಯ. ಎಲ್ಲಕ್ಕಿಂತ ಮಿಗಿಲಾಗಿ ಲಿಂಗ ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ವ್ಯಕ್ತಪಡಿಸುವುದು ಮಹಿಳಾ ದಿನಾಚರಣೆಯ ಅತ್ಯಂತ ಪ್ರಧಾನ ಅಂಶ.

ಆದರೆ ಬಹುತೇಕ ಸಂದರ್ಭಗಳಲ್ಲಿ ಮಹಿಳೆಯರು ಪ್ರಶ್ನೆಗಳನ್ನು ಕೇಳಿದಾಕ್ಷಣ ಅಥವಾ ಪ್ರತಿಭಟನೆಯ ಸೂಚನೆಯನ್ನು ನೀಡಿದ ಕೂಡಲೇ, ಪುರುಷ ಪ್ರಧಾನ ವ್ಯವಸ್ಧೆಗೆ ಅದು ಅಸಹನೀಯವಾಗಲಾರಂಭಿಸುತ್ತದೆ. ಅದನ್ನು ಹತ್ತಿಕ್ಕಲು ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದರಿಂದ ಹಿಡಿದು, ಅವರನ್ನು ಕೊಲೆ ಮಾಡುವವರೆಗೆ ಪುರುಷ ಪ್ರಧಾನ ವ್ಯವಸ್ಥೆ ಯಾವ ಮಟ್ಟಕ್ಕಾದರೂ ಹೋಗಬಹುದು. ಇದಕ್ಕೆ ಎರಡು ಜ್ವಲಂತ ಉದಾಹರಣೆಗಳೆಂದರೆ ಮಹಿಳಾ ದಿನಾಚರಣೆಯಂದೇ ಕೊಲೆಯಾದ ರಾಧಿಕಾ ತನ್ವರ್ ಮತ್ತು 36 ವರ್ಷಗಳಿಂದ ಜೀವಂತ ಶವವಾಗಿ ಆಸ್ಪತ್ರೆಯಲ್ಲಿ ಬದುಕನ್ನು ಸವೆಸುತ್ತಿರುವ ಅರುಣಾ ಶಾನ್‌ಭಾಗ್.

ಮಹಿಳೆಯರಿಗೆ ತಮ್ಮ ಬದುಕನ್ನು ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಆಯ್ಕೆಯ ಸ್ವಾತಂತ್ರ್ಯವಿರಬೇಕೆಂಬುದೇ ಸಶಕ್ತೀಕರಣದ ನಿಜವಾದ ಅರ್ಥ. ಆದರೆ ನಮ್ಮ ಸಮಾಜದಲ್ಲಿ ಅನೇಕ ಹೆಣ್ಣು ಮಕ್ಕಳ - ಮಹಿಳೆಯರ ವಿಚಾರದಲ್ಲಿ ಆ ಪದಕ್ಕೆ ಅರ್ಥವೇ ಇಲ್ಲ. ಹೆಣ್ಣೊಬ್ಬಳ ಮೇಲೆ ಕಾಮುಕ ಅಥವಾ ವಿಕೃತ ಮನಸ್ಸಿನ ಪುರುಷನ ಕಣ್ಣು ಬಿದ್ದು, ಆಕೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ಆತನೇನಾದರೂ ನಿರ್ಧರಿಸಿದರೆ ಈ ನ್ಯಾಯಬಾಹಿರ ಸಂಬಂಧಕ್ಕೆ ಆಕೆ ಒಪ್ಪಲೇ ಬೇಕೆಂಬುದು ಆತನ ನಿರೀಕ್ಷೆ. ದ್ವಂದ್ವ ಮೌಲ್ಯಗಳಿಂದ ತಾಂಡವವಾಡುತ್ತಿರುವ ಈ ಸಾಮಾಜಿಕ ವ್ಯವಸ್ಥೆಯಲ್ಲಿ ತಾವು ಮಾಡುತ್ತಿರುವುದೇ ಸರಿ ಎನ್ನುತ್ತಾರೆ ಇಂಥ ಜನ.

ದೆಹಲಿಯ ಕಾಲೇಜು ಯುವತಿ ರಾಧಿಕಾಳನ್ನೇ ವಿವಾಹವಾಗಬೇಕೆಂದು ನಿರ್ಧರಿಸಿದ್ದ ವಿಜಯ್ ಎಂಬಾತ ಅಕೆಯನ್ನು ಕಳೆದ ಮೂರು ವರ್ಷಗಳಿಂದ ಹಿಂಬಾಲಿಸಿದ್ದೇ ಅಲ್ಲದೆ, ಆತನ ಇಂಗಿತವನ್ನು ಅಕೆಗೆ ರವಾನಿಸಿಯೂ ಇದ್ದ. ಸಹಜವಾಗಿಯೇ ಈ ಧೈರ್ಯಶಾಲಿ ಯುವತಿ ಆತನ ಬೇಡಿಕೆಯನ್ನು ಧಿಕ್ಕರಿಸಿದಳಷ್ಟೇ ಅಲ್ಲ, ವಿಜಯ್‌ನ ಹಿಂಸೆಯನ್ನು ತಡೆಯಲಾರದೆ ಆತನಿಗೆ ಥಳಿಸಿಯೂ ಇದ್ದಳು.

ರಾಧಿಕಾಳೇ ಅಲ್ಲದೆ ಇತರ ಹೆಣ್ಣುಮಕ್ಕಳನ್ನೂ ಹಿಂಬಾಲಿಸುತ್ತಿದ್ದ ಈತನಿಗೆ ನೆರೆಹೊರೆಯವರಿಂದಲೂ ಏಟು ಬಿದ್ದಿತ್ತು.ಇದಕ್ಕೆಲ್ಲಾ ರಾಧಿಕಾಳೇ ಕಾರಣ ಎಂದು ತೀರ್ಮಾನಿಸಿದ್ದ ವಿಜಯ್ ಆಕೆಯ ಮೇಲೆ ಹಗೆ ಸಾಧಿಸಲು ಕಾಯುತ್ತಿದ್ದ.ರಾಧಿಕಾಳನ್ನು ಹತ್ಯೆಗೆಯ್ಯಲು ವ್ಯವಸ್ಥಿತ ಸಂಚು ನಡೆಸುತ್ತಿದ್ದ ಈ ದಾನವರೂಪಿ ಮಾನವ ಮಾರ್ಜ್ 8, ಎಂದರೆ ಮಹಿಳಾ ದಿನಾಚರಣೆಯಂದೇ ಆಕೆ ಕಾಲೇಜಿಗೆ ಹೋಗುತ್ತಿದ್ದಾಗ ಜನಾವೃತವಾಗಿದ್ದ ಪ್ರದೇಶದಲ್ಲಿ ಆಕೆಗೆ ಗುಂಡಿಕ್ಕಿ ಕೊಲೆ ಮಾಡಿದ.

ಇಡೀ ದೇಶವೇ ಮಹಿಳಾ ದಿನಾಚರಣೆಯ ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾಗಲೇ ತನ್ನ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಹೆಣ್ಣು ಮಗಳೊಬ್ಬಳು ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಇದು ರಾಧಿಕಾ ಎಂಬ ಒಬ್ಬಳೇ ಹೆಣ್ಣಿನ ಕಥೆಯಲ್ಲ. ತಮ್ಮ ದೇಹ ಮತ್ತು ಮನಸ್ಸುಗಳ ಮೇಲೆ ನಡೆಯುವ ಆಕ್ರಮಣವನ್ನು ಪ್ರತಿಭಟಿಸುವ ಅನೇಕಾನೇಕ ಸ್ತ್ರೀಯರ ಬದುಕು ಅಂತ್ಯಗೊಳ್ಳುವ ರೀತಿಯಿದು.

ಕಳೆದ 36 ವರ್ಷಗಳಿಂದ ಮುಂಬೈಯ ಆಸ್ಪತ್ರೆಯೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬದುಕಿದ್ದೂ ಸತ್ತಂಥ ಸ್ಥಿತಿಯಲ್ಲಿರುವ ಅರುಣಾ ಶಾನ್‌ಭಾಗ್ ಎಂಬಾಕೆಗೆ ದಯಾಮರಣ ಕೋರಿ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ನ್ಯಾಯಾಲಯ ತಿರಸ್ಕರಿಸಿತು. ‘ಜೀವವನ್ನು ನೀಡಲು ನಮಗೆ ಹಕ್ಕಿದೆಯೇ ಹೊರತು, ಜೀವ ತೆಗೆಯಲು ಅಲ್ಲ’ ಎಂಬುದು ಈ ತೀರ್ಪಿನ ಹಿಂದಿದ್ದ ಸಂದೇಶ.

ತನ್ನ 22ನೇ ವಯಸ್ಸಿನಲ್ಲಿ ಭವಿಷ್ಯದ ಬಗ್ಗೆ ಅನೇಕ ಕನಸುಗಳನ್ನು ಹೊತ್ತು ಈ ಆಸ್ಪತ್ರೆಯಲ್ಲಿ ದಾಯಿಯ ವೃತ್ತಿಗೆ ಸೇರಿದ್ದ ಅರುಣಾ ತನ್ನ ಧೈರ್ಯಶಾಲಿ ಧೋರಣೆ ಹಾಗೂ ವೃತ್ತಿಪರತೆಗೆ ಹೆಸರಾಗಿದ್ದವಳು. ತನ್ನ ಸಹೋದ್ಯೋಗಿಯೊಬ್ಬನ ದುರಾಡಳಿತ ದುರಾಚಾರಗಳನ್ನು ಪ್ರಶ್ನಿಸಿ, ಪ್ರತಿಭಟಿಸಿದ್ದಕ್ಕಾಗಿ ಆತನಿಂದ ಅತ್ಯಾಚಾರ ಹಾಗೂ ಹಲ್ಲೆಗೆ ಒಳಗಾಗಿ ಮಿದುಳಿನ ಶಕ್ತಿಯನ್ನೇ ಕಳೆದುಕೊಂಡವಳು.

ಆಕೆಯನ್ನು ಸಾಯಿಸುವ ಹಕ್ಕು ಯಾರಿಗೂ ಇಲ್ಲ, ಸರಿ, ಆದರೆ ಉದ್ಯೋಗ ಸ್ಥಳದಲ್ಲಿ ಸ್ವಾಭಿಮಾನದಿಂದ ಬದುಕಲು ಅರುಣಾಗೆ ಆಸ್ಪದ ಕೊಡದೆ ಆಕೆಯನ್ನು ಈ ಸ್ಥಿತಿಗೆ ತಂದಿಟ್ಟ ವ್ಯಕ್ತಿಗಳಿಗೆ,  ವ್ಯವಸ್ಧೆಗೆ ಏನು ಶಿಕ್ಷೆ? ಅರುಣಾ ಶಾನ್‌ಭಾಗ್‌ಳ ಪ್ರಕರಣವೇನೋ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು, ಆದರೆ ದಿನ ನಿತ್ಯ ತಮ್ಮ ಉದ್ಯೋಗ ಸ್ಥಳಗಳಲ್ಲಿ ಕಾಮುಕ  ಕ್ರೂರಿ ಸಹೋದ್ಯೋಗಿಗಳ ಆಕ್ರಮಣವನ್ನು ಎದುರಿಸಬೇಕಾದಂಥ ಸ್ಥಿತಿಯಲ್ಲಿರುವ ಸಾವಿರಾರು ಮಹಿಳೆಯರಿಗೆ ನಮ್ಮ ಆಡಳಿತಾರೂಢ ವ್ಯವಸ್ಥೆ ನೀಡುತ್ತಿರುವ ರಕ್ಷಣೆಯಾದರೂ ಎಂತಹುದು?

ಮಹಿಳಾ ದಿನಾಚರಣೆಯಂದು ತೋರಿಕೆಗಾಗಿ ತಮ್ಮ ಮಹಿಳಾಪರ ಕಾಳಜಿಗಳನ್ನು ಭಾಷಣಗಳು  ಘೋಷಣೆಗಳ ಮೂಲಕ ವ್ಯಕ್ತಪಡಿಸಿ, ವಾಸ್ತವದಲ್ಲಿ ಮಹಿಳೆಯರ ಬದುಕನ್ನು ಹಸನು ಮಾಡುವಂಥ ನಿಷ್ಠೆಯಿಲ್ಲದ ಸರ್ಕಾರಗಳು ಹಾಗೂ ಅವುಗಳ ಅಂಗ ಸಂಸ್ಥೆಗಳ ಬಣ್ಣ ಈಗ ಬಯಲಾಗುತ್ತಿದೆ.

ತಾಯಂದಿರಿಗೆ ಸೀರೆ, ಅವಿವಾಹಿತ ಮಹಿಳೆಯರಿಗೆ ಮಾಶಾಸನ (ಹೆಣ್ಣಿನ ಜೀವನದ ಗುರಿಯನ್ನೇ ಸೀಮಿತಗೊಳಿಸುವ ಇಂಥ ಯೋಜನೆಗಳಿಂದ ಯಾವ ಅರ್ಥಪೂರ್ಣ ಬದಲಾವಣೆಯೂ ಸಾಧ್ಯವಿಲ್ಲ) ಮುಂತಾದ ಕಾರ್ಯಕ್ರಮಗಳಿಗೆ ಕೊನೆ ಹಾಡಿ ಮಹಿಳೆಯರು ಸ್ವಾಭಿಮಾನ ಹಾಗೂ ಸ್ವಾವಲಂಬನೆಗಳಿಗೆ ಬದ್ಧವಾದ ಬದುಕನ್ನು ನಡೆಸುವುದಕ್ಕೆ ಅಗತ್ಯವಾದ ಪರಿಸರವನ್ನು ನಮ್ಮ ವ್ಯವಸ್ಥೆ ಮೊದಲು ಕಲ್ಪಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT