ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಸುಂದರ ಫೋನ್

Last Updated 7 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನೀಡುವ ಬೆಲೆಗೆ ಉತ್ತಮ ಎನ್ನಬಹುದಾದ ಫೋನ್‌ಗಳನ್ನು ನೀಡುತ್ತ ಬಂದಿರುವ ಒಂದು ಕಂಪನಿ ಹೋನರ್ ಎನ್ನಬಹುದು. ಮುಂದೆ ಎರಡು, ಸ್ವಂತೀಗೆ ಎರಡು, ಒಟ್ಟು ನಾಲ್ಕು ಕ್ಯಾಮೆರಾಗಳಿರುವ ಹೋನರ್ 9ಐ ಫೋನಿನ ವಿಮರ್ಶೆಯನ್ನು ಇದೇ ಅಂಕಣದಲ್ಲಿ ನೀಡಲಾಗಿತ್ತು. ಅದರ ಬೆಲೆ ಸ್ವಲ್ಪ ಜಾಸ್ತಿಯಾಯಿತು ಎನ್ನುವವರಿಗಾಗಿ ಹೋನರ್ ಕಂಪನಿ ಕಡಿಮೆ ಬೆಲೆಯ ಫೋನನ್ನು ತಂದಿದೆ. ಅದುವೇ ನಾವು ಈ ವಾರ ನಾವು ವಿಮರ್ಶಿಸುತ್ತಿರುವ ಹೋನರ್ 9 ಲೈಟ್ (Honor 9 Lite).

ಮೊತ್ತಮೊದಲನೆಯದಾಗಿ ನಮಗೆ ಗಮನ ಸೆಳೆಯುವುದು ಈ ಫೋನಿನ ರಚನೆ ಮತ್ತು ವಿನ್ಯಾಸ. ಉತ್ತಮ ರಚನೆ ಮತ್ತು ವಿನ್ಯಾಸಕ್ಕೆ ಪ್ರಶಸ್ತಿಯೇನಾದರೂ ಇದ್ದರೆ ಇದಕ್ಕೆ ಖಂಡಿತ ನೀಡಬಹುದು. ಇತ್ತೀಚೆಗಿನ ಬಹುತೇಕ ಫೋನ್‌ಗಳಂತೆ ಇದು ಕೂಡ ಅಂಚುರಹಿತ (bezelless) ಫೋನ್. ಅಂದರೆ 18:9 ಅನುಪಾತದ ಪರದೆ. 5.65 ಇಂಚಿನ ಪರದೆಯನ್ನು ಬಹುತೇಕ ಬಳಸಿಕೊಳ್ಳಲಾಗಿದೆ. ಆದುದರಿಂದ ಬೆರಳಚ್ಚು ಸ್ಕ್ಯಾನರ್ ಹಿಂದುಗಡೆಗೆ ಹೋಗಿದೆ. 2.5ಡಿ ಗಾಜು ಇದೆ. ಈ ಫೋನಿನ ವೈಶಿಷ್ಟ್ಯವಿರುವುದು ಹಿಂದುಗಡೆಯ ಕವಚದ ಮೇಲಿರುವ ಗಾಜಿನ ಹೊದಿಕೆ. ಅದು ಕೂಡ 2.5ಡಿ ಗಾಜು ಆಗಿದೆ.

ಈ ಗಾಜಿನಿಂದಾಗಿ ಹಿಂದುಗಡೆಯ ಕವಚದಲ್ಲೂ ನೀವು ನಿಮ್ಮ ಮುಖ ನೋಡಿಕೊಳ್ಳಬಹುದು ಹಾಗೂ ಅದನ್ನು ಕನ್ನಡಿಯಂತೆ ಬಳಸಬಹುದು! ಸಹಜವಾಗಿಯೇ ಇದು ಅತಿ ನಯವಾಗಿದ್ದು ಬೆರಳಚ್ಚು ಮೂಡಿ ಬೇಗ ಗಲೀಜು ಕಾಣುತ್ತದೆ. ನೀವು ಅದನ್ನು ಆಗಾಗ ಒರೆಸುತ್ತಿರಬೇಕು. ಅಷ್ಟು ಮಾತ್ರವಲ್ಲ ಅತಿ ನಯವಾಗಿರುವ ಕಾರಣ ಕೈಯಿಂದ ಜಾರಿ ಬೀಳದಂತೆ ಎಚ್ಚರಿಕೆವಹಿಸ ಬೇಕು. ಕೈಯಿಂದ ಜಾರಿ ಬೀಳದಂತೆ ಹೆಚ್ಚಿಗೆ ಕವಚ ಹಾಕಿಕೊಳ್ಳಬೇಕು. ಹಾಗೆ ಹಾಕಿಕೊಂಡರೆ ಅದರ ಸೌಂದರ್ಯವನ್ನು ನೀವು ಕಳೆದುಕೊಳ್ಳುತ್ತೀರಿ!

ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಯುಎಸ್‌ಬಿ ಕಿಂಡಿಗಳಿವೆ. ಇದು ಯುಎಸ್‌ಬಿ-ಸಿ ಅಲ್ಲ. ಎಡಭಾಗದಲ್ಲಿ ಚಿಕ್ಕ ಪಿನ್ ತೂರಿಸಿದಾಗ ಹೊರಬರುವ ಟ್ರೇ ಇದೆ. ಇದನ್ನು ಒಂದು ನ್ಯಾನೋಸಿಮ್ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಅಥವಾ ಎರಡು ನ್ಯಾನೋ ಸಿಮ್ ಹಾಕಲು ಬಳಸಲಾಗುತ್ತದೆ. ಯುಎಸ್‌ಬಿ ಓಟಿಜಿ ಸವಲತ್ತು ಇದೆ. ಹಿಂದುಗಡೆ ಬಲಮೂಲೆಯಲ್ಲಿ ಎರಡು ಕ್ಯಾಮೆರಾಗಳಿವೆ. ಪಕ್ಕದಲ್ಲಿ ಫ್ಲಾಶ್ ಇದೆ. ಇದನ್ನು ಕೈಯಲ್ಲಿ ಹಿಡಿದಾಗ ಒಂದು ಉತ್ತಮ ಮೇಲ್ದರ್ಜೆಯ ಫೋನನ್ನು ಹಿಡಿದ ಭಾವನೆ ಬರುತ್ತದೆ.

ಹೋನರ್ 9ಐಯಲ್ಲಿರುವಂತೆ ಇದರಲ್ಲೂ ಎರಡು ಪ್ರಾಥಮಿಕ ಕ್ಯಾಮೆರಾ ಹಾಗೂ ಎರಡು ಸ್ವಂತೀ ಕ್ಯಾಮೆರಾಗಳಿವೆ. ಇದರ ಕ್ಯಾಮೆರಾ ಕಿರುತಂತ್ರಾಂಶದಲ್ಲಿ ವಿಶೇಷ ಬದಲಾವಣೆಗಳಾಗಿಲ್ಲ. ಇತರೆ ಹೋನರ್ ಫೋನ್‌ಗಳಲ್ಲಿರುವಂತೆಯೇ ಇದೆ. ವೈಡ್ ಅಪೆರ್ಚರ್ (ಅಗಲ ಕವಾಟ) ಆಯ್ಕೆಯೂ ಇದೆ. ಅದನ್ನು ಬಳಸಿ ಫೋಟೊ ತೆಗೆದರೆ ನಂತರ ಫೋಟೊದ ಬೇರೆ ಬೇರೆ ಜಾಗಗಳ ಮೇಲೆ ಬೆರಳಿಟ್ಟು ಆಯಾ ಜಾಗಕ್ಕೆ ಫೋಕಸ್ ಮಾಡಬಹುದು. ಅಂದರೆ ನಿಮಗೆ ವ್ಯಕ್ತಿ ಮಾತ್ರ ಬೇಕಿದ್ದರೆ ಹಿನ್ನೆಲೆಯನ್ನು ಮಸುಕಾಗಿಸಬಹುದು ಮತ್ತು ಅಗತ್ಯವಿದ್ದಾಗ ಹಿನ್ನೆಲೆಯನ್ನು ಸ್ಪಷ್ಟಮಾಡಬಹುದು. ಕ್ಯಾಮೆರಾದ ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಮೋಡ್ ಆಯ್ಕೆ ಕೂಡ ಇದೆ.

ಹೋನರ್ 9ಐ ಮತ್ತು 8 ಪ್ರೋ ಫೋನ್‌ಗಳ ಕ್ಯಾಮೆರಾಗಳಿಗೆ ಹೋಲಿಸಿದರೆ ಇದು ಸ್ವಲ್ಪ ಕೆಳಮಟ್ಟದ್ದು ಎನ್ನ ಬಹುದು. ಕೆಲವು ಸಂದರ್ಭಗಳಲ್ಲಿ ಫೋಟೊಗಳು ಚೆನ್ನಾಗಿ ಮೂಡಿಬರುತ್ತವೆ. ಎಲ್ಲ ಹೋನರ್ ಫೋನ್‌ಗಳ ಕ್ಯಾಮೆರಾಗಳ ಮೇಲೆ ನನ್ನ ಅಸಮಾಧಾನವೇನೆಂದರೆ ಪ್ರಾಥಮಿಕ ಬಣ್ಣಗಳನ್ನು ಸ್ವಲ್ಪ ಜಾಸ್ತಿಯೇ ಗಾಢವಾಗಿ ಮೂಡಿಸುವುದು. ಈ ಫೋನ್ ಕ್ಯಾಮೆರಾವೂ ಅದಕ್ಕೆ ಹೊರತಾಗಿಲ್ಲ. ಕಡಿಮೆ ಬೆಳಕಿನ ಫೋಟೊಗ್ರಫಿ ಅಷ್ಟು ತೃಪ್ತಿದಾಯಕವಾಗಿಲ್ಲ. ಸ್ವಂತೀ ಕ್ಯಾಮೆರಾವೂ ಮುಖವನ್ನು ಜಾಸ್ತಿಯೇ ಸುಂದರ ಮಾಡುತ್ತದೆ. ನನಗೆ ಕ್ಯಾಮೆರಾದ ವಿಷಯದಲ್ಲಿ ಫೋನ್ ಸಂಪೂರ್ಣ ತೃಪ್ತಿ ನೀಡಿಲ್ಲ.

ಇದರಲ್ಲಿರುವುದು 5.65 ಇಂಚು ಗಾತ್ರದ 1080 x 2160 ಪಿಕ್ಸೆಲ್ ರೆಸೊಲೂಶನ್‌ ಪರದೆ. ಇದರ ಗುಣಮಟ್ಟ ಚೆನ್ನಾಗಿದೆ. ಫೋನಿನ ಕೆಲಸದ ವೇಗ ಪರವಾಗಿಲ್ಲ. ಅಂಟುಟು ಬೆಂಚ್‌ಮಾರ್ಕ್‌ 89,001 (ಸಿಪಿಯು – 42,098) ಇದೆ. ಅಂದರೆ ಮಧ್ಯಮ ವೇಗ ಎಂದು ತೀರ್ಮಾನಿಸಬಹುದು. ವಿಡಿಯೊ ವೀಕ್ಷಣೆ, ಸಾಮಾನ್ಯ ಆಟ ಆಡುವುದು ತೃಪ್ತಿದಾಯಕವಾಗಿವೆ. ಅಧಿಕ ಶಕ್ತಿ ಬೇಡುವ ಮೂರು ಆಯಾಮದ ಆಟಗಳನ್ನು ಆಡುವ ಅನುಭವ ಅದ್ಭುತವಾಗಿಲ್ಲ. ಹೈಡೆಫಿನಿಶನ್ ಸಹಿತ ಬಹುತೇಕ ಎಲ್ಲ ವಿಡಿಯೊ ವೀಕ್ಷಣೆ ಚೆನ್ನಾಗಿದೆ. 4k ವಿಡಿಯೊ ಪ್ಲೇ ಆಗುತ್ತದೆ. ಇದರ ಆಡಿಯೊ ಇಂಜಿನ್ ಸುಮಾರಾಗಿದೆ. ಧ್ವನಿಯಲ್ಲಿ ಪೂರ್ತಿ ಮೂರು ಆಯಾಮ ಮತ್ತು ಆಳದ ಅನುಭವ ಆಗುವು ದಿಲ್ಲ. ಇಯರ್‌ಫೋನ್ ನೀಡಿಲ್ಲ. ಈ ಫೋನ್ ಬಿಸಿಯಾಗುವುದಿಲ್ಲ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ.

ನಾಲ್ಕು ಕ್ಯಾಮೆರಾ ಎಂಬ ಹೆಗ್ಗಳಿಕೆ ಪ್ರಚಾರ ಮಾಡಿದಷ್ಟೇನೂ ಇಲ್ಲ. ಪೂರ್ತಿ ಪರದೆಯ ಬಳಕೆ ಉತ್ತಮ. 3+32 ಗಿಗಾಬೈಟಟ್ ಮಾದರಿ ನೀಡುವ ಹಣಕ್ಕೆ ಒಂದು ಮಟ್ಟಿಗೆ ತೃಪ್ತಿ ನೀಡುವ ಫೋನ್ ಎನ್ನಬಹುದು. 4+64 ಗಿಗಾಬೈಟ್ ಮಾದರಿಗೆ ಬೆಲೆ ಸ್ವಲ್ಪ ಕಡಿಮೆ ಮಾಡಬಹುದಿತ್ತು.

*

ವಾರದ ಆ್ಯಪ್‌(app):  ಬಣ್ಣದ ನೋಟ್‌ಪ್ಯಾಡ್
ಹಿಂದಿನ ಕಾಲದಲ್ಲಿ ನಾವೆಲ್ಲ ಕಿಸೆಯಲ್ಲಿ ಒಂದು ಚಿಕ್ಕ ನೋಟ್‌ಪ್ಯಾಡ್ ಇಟ್ಟುಕೊಳ್ಳುತ್ತಿದ್ದೆವು. ಸಾಮಾನಿನ ಪಟ್ಟಿ, ಫೋನ್ ಸಂಖ್ಯೆ, ಪುಸ್ತಕದ ಹೆಸರು, ಮಾಡಬೇಕಾದ ಕೆಲಸಗಳು -ಹೀಗೆ ಏನಾದರೂ ಬರೆದುಕೊಳ್ಳಲು ಅದು ಉಪಯೋಗವಾಗುತ್ತಿತ್ತು. ಈಗ ಅದರ ಜಾಗವನ್ನು ಸ್ಮಾರ್ಟ್‌ಫೋನ್ ಆಕ್ರಮಿಸಿದೆ. ಆ್ಯಂಡ್ರಾಯ್ಡ್ ಫೋನ್‌ಗಳಿಗೆ ನೋಟ್‌ಪ್ಯಾಡ್ ಕಿರುತಂತ್ರಾಂಶಗಳು (ಆ್ಯಪ್) ಬೇಕಾದಷ್ಟಿವೆ. ಅಂತಹ ಒಂದು ಕಿರುತಂತ್ರಾಂಶ ಬೇಕಿದ್ದರೆ ಗೂಗಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ ColorNote Notepad Notes To do ಎಂದು ಹುಡುಕಿ ಅಥವಾ http://bit.ly/gadgetloka315 ಜಾಲತಾಣಕ್ಕೆ ಭೇಟಿ ನೀಡಿ. ಮಾಡಬೇಕಾದ ಕೆಲಸಗಳ ಪಟ್ಟಿ ಅಥವಾ ಸುಮ್ಮನೆ ಟಿಪ್ಪಣಿ ಮಾಡಿಕೊಳ್ಳಲು ಇದನ್ನು ಬಳಸಬಹುದು. ಬಣ್ಣಗಳ ಆಯ್ಕೆ ಇದೆ ಎಂಬುದು ಇದರ ವೈಶಿಷ್ಟ್ಯ.

*
ಗ್ಯಾಜೆಟ್‌ ಪದ: Bluetooth - ಬ್ಲೂಟೂತ್
ಒಂದಕ್ಕೊಂದು ಸುಮಾರು 10ಮೀಟರುಗಳಷ್ಟು ಅಥವಾ ಅದಕ್ಕಿಂತ ಕಡಿಮೆ ಸಮೀಪದಲ್ಲಿರುವ ವಿದ್ಯುನ್ಮಾನ ಸಾಧನಗಳ ನಡುವೆ ನಿಸ್ತಂತು (ವೈರ್‌ಲೆಸ್) ಸಂವಹನ ಹಾಗೂ ಕಡತಗಳ ವಿನಿಮಯವನ್ನು ಸಾಧ್ಯವಾಗಿಸುವ ತಂತ್ರಜ್ಞಾನ. ಬಹುಮಟ್ಟಿಗೆ ಮೊಬೈಲ್ ಫೋನಿಗೆ ನಿಸ್ತಂತು ಇಯರ್‌ಫೋನ್‌ಗಳ ಜೋಡಣೆಗೆ ಬಳಕೆಯಾಗುತ್ತಿದೆ. ಗಣಕದಿಂದಲೂ ಈ ವಿಧಾನದಲ್ಲಿ ನಿಸ್ತಂತು ಸ್ಪೀಕರ್ ಅಥವಾ ಇಯರ್‌ಫೋನ್ ಜೋಡಿಸಬಹುದು. ಮೊಬೈಲ್ ಫೋನ್‌ಗಳ ನಡುವೆ ಕಡತ (ಫೈಲ್) ವರ್ಗಾವಣೆಗೂ ಬಳಕೆ ಮಾಡಬಹುದು.

*
ಗ್ಯಾಜೆಟ್‌ ಸಲಹೆ
ಭರತ ಜಯಕುಮಾರರ ಪ್ರಶ್ನೆ: ನನ್ನ ಸ್ನೇಹಿತನೊಬ್ಬ ಹೇಳುವ ಪ್ರಕಾರ ಯುಎಸ್‌ಬಿ-ಓಟಿಜಿಯನ್ನು ದೀರ್ಘ ಕಾಲ ಬಳಸುವುದರಿಂದ ಮದರ್‌ಬೋರ್ಡ್‌ ಹಾಳಾಗುವ ಸಾಧ್ಯತೆ ಇದೆ ಎಂದು. ಇದು ನಿಜವಾ?
ಉ: ಇದಕ್ಕೆ ದೀರ್ಘ ವಿವರಣೆ ನೀಡಬೇಕಾಗುತ್ತದೆ. ನೀವು ಯುಎಸ್‌ಬಿ ಹೋಸ್ಟ್ ಮೋಡ್‌ಅನ್ನು ದೀರ್ಘ ಕಾಲ ಬಳಸಿದರೆ ಹಾಳಾಗುವ ಸಾಧ್ಯತೆ ಇರುವುದು ಹೌದು. ಸಾಮಾನ್ಯ ಯುಎಸ್‌ಬಿ ಡ್ರೈವ್ ಜೋಡಿಸಿ ಸಿನಿಮಾ ವೀಕ್ಷಣೆ ಮಾಡಿದರೆ ಅಷ್ಟೇನೂ ತೊಂದರೆಯಿಲ್ಲ. ಆದರೂ ಓಟಿಜಿ ಮೂಲಕ ಫೈಲ್‌ಗಳನ್ನು ಮೊಬೈಲ್‌ಗೆ ವರ್ಗಾಯಿಸಿ ಅಲ್ಲಿಂದ ಬಳಸುವುದೇ ಹೆಚ್ಚು ಸುರಕ್ಷಿತ.

ಗ್ಯಾಜೆಟ್‌ ತರ್ಲೆ
ತುಂಬ ಗದ್ದಲದ ಸ್ಥಳದಲ್ಲಿದ್ದೀರಾ? ಅದರಿಂದ ತೊಂದರೆಯಾಗುತ್ತಿದೆಯೇ? ಕಿವಿಗೆ ಬಿರಟೆ ಹಾಕಿಕೊಳ್ಳುವುದು ಒಂದು ಸುಲಭ ಉಪಾಯ. ಆದರೆ ಗದ್ದಲದ ಪ್ರಮಾಣಕ್ಕೆ ಅನುಗುಣವಾಗಿ ಬಿರಟೆಯಲ್ಲೂ ವಾಲ್ಯೂಮ್ ಬಟನ್‌ನಂಥ ವ್ಯವಸ್ಥೆಯಿದ್ದು, ಬೇಕಾದಷ್ಟೇ ಗದ್ದಲವನ್ನು ಕಡಿಮೆ ಮಾಡಿ ಪಕ್ಕದಲ್ಲಿರುವವರು ಮಾತನಾಡುವುದನ್ನು ಕೇಳಲು ಅನುವು ಮಾಡುವಂತಹ ವ್ಯವಸ್ಥೆ ಇದ್ದರೆ ಒಳಿತಲ್ಲವೇ? ಹೌದು. ಈಗ ಅಂತಹ ಬಿರಟೆ ತಯಾರಾಗುತ್ತಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT