ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಮ್ಮೆಗೇ ಎರಡು ಏಟು

Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ
ಒಂದು ಕಡೆ `ಗಂಗ್ವಾ' ಚಿತ್ರೀಕರಣ ಎರಡು ಹಂತದಲ್ಲಿ ನಡೆಯಿತು. ಒಂದು ಹಂತ ಊಟಿಯಲ್ಲಿ, ಇನ್ನೊಂದು ಮದ್ರಾಸ್‌ನಲ್ಲಿ. ಎರಡೂ ಹಂತಗಳ ನಡುವೆ ಇದ್ದ 22 ದಿನಗಳ ಅಂತರದಲ್ಲೇ `ಇಂದಿನ ರಾಮಾಯಣ' ಮಾಡಿ ಮುಗಿಸಿದೆ. `ಮನೆಮನೆ ಕಥೆ', `ಅದೃಷ್ಟವಂತ' ಚಿತ್ರಗಳನ್ನು ನಿರ್ದೇಶಿಸಿದ್ದ ರಾಜಾಚಂದ್ರ ಅವರೇ ಅದನ್ನೂ ನಿರ್ದೇಶಿಸಿದರು. ಜೀನತ್ ಅಮಾನ್ ಅವರ ಪತಿ ಮಜರ್ ಖಾನ್ ಹಾಗೂ ಅಲ್ಕಾ ನೂಪುರ್ `ಇಂದಿನ ರಾಮಾಯಣ' ಚಿತ್ರದಲ್ಲಿ ಸಂಭಾವನೆ ಇಲ್ಲದೆ ಅಭಿನಯಿಸಿದರು. ಬಾಂಬೆಯಿಂದ ಇಲ್ಲಿಗೆ ಅವರು ನನ್ನ ಮೇಲಿನ ಪ್ರೀತಿಯಿಂದಲೇ ಖುಷಿಯಿಂದ ಬಂದು ಒಂದು ಹಾಡಿನ ಚಿತ್ರೀಕರಣದಲ್ಲೂ ಪಾಲ್ಗೊಂಡು ಹೋಗಿದ್ದರು. 
 
`ಇಂದಿನ ರಾಮಾಯಣ' ಚಿತ್ರದ ಯಶಸ್ಸಿನ ಸುದ್ದಿ ಕಿವಿಮುಟ್ಟಿತ್ತಷ್ಟೆ. ಆಗ ಅಮ್ಮಿ ಫಿಲ್ಮ್ಸ್‌ನ ನಾಗರಾಜರಾವ್ ಫೋನ್ ಮಾಡಿ, `ಶಂಕರಾಭರಣಂ' ಚಿತ್ರ ಚೆನ್ನಾಗಿ ಓಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿದರು. ಮದ್ರಾಸ್‌ನಿಂದ ಬೆಂಗಳೂರಿಗೆ ಹೋಗಿದ್ದಾಗ ಅಲಂಕಾರ್ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿದೆ. ನಾಗರಾಜರಾವ್ ಅವರಿಗೆ ಫೋನ್ ಮಾಡಿ, `ಸಾಧ್ಯವಾದರೆ ಇನ್ನು ನಾಲ್ಕು ತಿಂಗಳಲ್ಲಿ ನಾನೂ ಅಂಥ ಒಂದು ಸಿನಿಮಾ ಕೊಡುತ್ತೇನೆ' ಎಂದೆ. 
 
ಜಂಧ್ಯಾಲ ಸುಬ್ರಹ್ಮಣ್ಯ ಶಾಸ್ತ್ರಿ `ಶಂಕರಾಭರಣಂ' ಚಿತ್ರಕ್ಕೆ ಸಾಹಿತ್ಯ ಬರೆದಿದ್ದರು. ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದ ಅವರು ಚಿತ್ರಕತೆ ರಚಿಸುವುದರಲ್ಲಿಯೂ ಪಳಗಿದ್ದರು. ನಾನು ಕೂಡ `ಶಂಕರಾಭರಣಂ' ರೀತಿಯದ್ದೇ ವಸ್ತುವಿನ ಸಿನಿಮಾ ಮಾಡಬೇಕೆಂದು ತೀರ್ಮಾನಿಸಿದಾಗ ಅವರು ಬಂದು ಕತೆ ಹೇಳಿದರು. ಅದೇ `ಆನಂದ ಭೈರವಿ'. ಅವರೇ ತೆಲುಗು ನಿರ್ಮಾಪಕರೊಬ್ಬರನ್ನು ಕರೆದುಕೊಂಡು ಬಂದರು.

ಕನ್ನಡ, ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಆ ಚಿತ್ರದ ನಿರ್ಮಾಣ ಮಾಡುವುದೆಂದು ನಿರ್ಧರಿಸಿದೆವು. ಕನ್ನಡದಲ್ಲಿ ನಾನು ನಿರ್ಮಾಪಕ. ತೆಲುಗು ಚಿತ್ರಕ್ಕೆ ಫೈನಾನ್ಸ್ ಮಾಡಿದೆ. ಉತ್ತರ ಪ್ರದೇಶದ ಸರ್ಕಾರ ನೇಮಿಸಿಕೊಂಡಿದ್ದ ನೃತ್ಯ ಕಲಾವಿದೆ ಮಾಲವಿಕಾ ಅವರನ್ನು ಜಂಧ್ಯಾಲ ನಾಯಕಿಯಾಗಿ ಆರಿಸಿದರು. ರಾಜೇಶ್ವರ ರಾವ್ ಸಂಗೀತ ನೀಡುವುದೆಂದು ತೀರ್ಮಾನವಾಯಿತು. ಸಂಗೀತ ಗುರುವಿನ ಪಾತ್ರಕ್ಕೆ ಸೋಮಯಾಜುಲು ಅವರು ಸೂಕ್ತ ಎಂಬುದು ಜಂಧ್ಯಾಲ ಅಭಿಪ್ರಾಯವಾಗಿತ್ತು. ಕನ್ನಡಕ್ಕೆ ಅವರು ಬೇಡ ಎಂದು ನಾನು ಪಟ್ಟುಹಿಡಿದೆ. ಆ ಪಾತ್ರಕ್ಕೆ ಯಾರು ಸೂಕ್ತ ಎಂದು ಯೋಚಿಸಿದಾಗ ನನಗೆ ನೆನಪಾದವರು ಗಿರೀಶ್ ಕಾರ್ನಾಡ್. ಅವರನ್ನು ಬುಕ್ ಮಾಡಿದ್ದಾಯಿತು. 
 
ರಾಜಮಂಡ್ರಿಯಲ್ಲಿ ಸಿನಿಮಾ ಚಿತ್ರೀಕರಣ ಪ್ರಾರಂಭಿಸಿದೆವು. ಒಂದು ಒಂದೂವರೆ ತಿಂಗಳಾಯಿತು. ನಿರ್ದೇಶಕ ಜಂಧ್ಯಾಲ ಹಾಗೂ ನಾಯಕಿಯ ನಡುವೆ ಮನಸ್ತಾಪವಾಯಿತು. ನಾಯಕಿ ಮಾಲವಿಕಾ ಚಿತ್ರೀಕರಣಕ್ಕೆ ಬರುವುದನ್ನು ನಿಲ್ಲಿಸಿ, ಬಾಂಬೆಗೆ ಹೊರಟುಬಿಟ್ಟರು. ಒಂದೂವರೆ ತಿಂಗಳು ಚಿತ್ರೀಕರಣ ನಿಂತೇಹೋಯಿತು. ಬಯಸಿದ ಹೋಟೆಲ್ ಕೋಣೆ ಮತ್ತಿತರ ಸೌಕರ್ಯ ಕೊಡಲಿಲ್ಲ ಎಂಬ ಕಾರಣಕ್ಕೆ ಮಾಲವಿಕಾ ಮುನಿಸಿಕೊಂಡಿದ್ದರು. ಆ ಸಮಸ್ಯೆಯನ್ನು ನಿರ್ದೇಶಕರಿಗೆ ಬಗೆಹರಿಸಲು ಆಗಿರಲಿಲ್ಲ. 
 
ನಾನು ಬಾಂಬೆಗೆ ಹೋದೆ. ಸೀರಾಕ್ ಹೋಟೆಲ್‌ನಲ್ಲಿ ರೂಮ್ ಮಾಡಿದೆ. ಮಾಲವಿಕಾ ಮನೆ ಎಲ್ಲಿದೆ ಎಂದು ನನ್ನ ಸಂಪರ್ಕಗಳನ್ನು ಉಪಯೋಗಿಸಿ ಪತ್ತೆಮಾಡಿದೆ. ರಮೇಶ್ ಬೆಹ್ಲ್ ಎಂಬ ಚಿತ್ರೋದ್ಯಮಿಯ ಮನೆ ಮೇಲೆ ಅವರು ಬಾಡಿಗೆಗೆ ಇದ್ದರು. ಅವರ ಮನೆ ಇದ್ದಲ್ಲಿಗೆ ಕಾರಿನಲ್ಲಿ ಹೋದೆ. ಕಾಯುತ್ತಾ ನಿಂತೆ. ಸಂಜೆ ಹೊತ್ತಿಗೆ ಮಾಲವಿಕಾ ಹಾಗೂ ಅವರ ತಾಯಿ ಕೆಳಗಿಳಿದು ಬಂದರು.

ಅವರನ್ನು ಕಾರಿನಲ್ಲೇ ಅಡ್ಡಗಟ್ಟಿ, ಸೀರಾಕ್ ಹೋಟೆಲ್‌ಗೆ ಕರೆದುಕೊಂಡು ಹೋದೆ. ಅಲ್ಲಿ ಸಮಸ್ಯೆ ಏನೆಂದು ಕೂರಿಸಿಕೊಂಡು ಮಾತನಾಡಿದೆ. ಯಾವ ಹೋಟೆಲ್‌ನಲ್ಲಿ ರೂಮ್ ಬೇಕು, ಯಾವ ರೀತಿಯ ಕಾಸ್ಟ್ಯೂಮ್ಸ ಬೇಕು, ಎಷ್ಟು ಹಣ ಬಾಕಿ ಕೊಡಬೇಕು ಎಲ್ಲವನ್ನೂ ಕೇಳಿಕೊಂಡೆ. ಸಿಂಗಲ್ ಪೇಮೆಂಟ್‌ನಲ್ಲಿ ಬಾಕಿ ಹಣ ಕೊಡುವುದಾಗಿ ಹೇಳಿ, ಅವರನ್ನು ಮತ್ತೆ ನಟಿಸಲು ಒಪ್ಪಿಸಿದೆ. 
 
ಅಷ್ಟೆಲ್ಲಾ ಒದ್ದಾಡಿಕೊಂಡು ಮಾಡಿದ `ಆನಂದ ಭೈರವಿ' ತೆಲುಗಿನಲ್ಲಿ ಹಿಟ್ ಆಯಿತು. ಕನ್ನಡದಲ್ಲಿ ಓಡಲಿಲ್ಲ. ಗಿರೀಶ್ ಕಾರ್ನಾಡರು ಸೊಗಸಾಗಿ ಅಭಿನಯಿಸಿದರು. ಮೊದಲಿನಿಂದಲೂ ಅವರ ಪಾತ್ರಗಳನ್ನು ನೋಡಿ ಮೆಚ್ಚಿಕೊಂಡಿದ್ದ ನನಗೆ ಅವರಿಂದ ನನ್ನ ಸಿನಿಮಾದಲ್ಲೂ ಪಾತ್ರ ಮಾಡಿಸಿದ ಖುಷಿ. ಮೈಸೂರಿನ ದೊಡ್ಡ ಸಂಗೀತ ವಿದ್ವಾಂಸರೊಬ್ಬರು ವಿಮಾನ ನಿಲ್ದಾಣದಲ್ಲಿ ಒಮ್ಮೆ ಸಿಕ್ಕಾಗ, `ಆನಂದ ಭೈರವಿ ನಿಮ್ಮ ಬೆಸ್ಟ್' ಸಿನಿಮಾ ಎಂದರು. 
 
ದಾಸರಿ ನಾರಾಯಣ ರಾವ್ ಅವರ ಬಗೆಗೆ ನನಗೆ ಪ್ರೀತಿ ಇತ್ತು. `ಪ್ರೇಮಾಭಿಷೇಕಂ', `ತಾತ ಮನವಡು' ಚಿತ್ರಗಳನ್ನು ನೋಡಿ ಮೆಚ್ಚಿಕೊಂಡಿದ್ದ ನಾನು, ಅವರನ್ನೇ ಹಾಕಿಕೊಂಡು `ಪೊಲೀಸ್ ಪಾಪಣ್ಣ' ಸಿನಿಮಾ ಮಾಡಿದೆ. 1982ರಿಂದ ಒಂದರ ನಂತರ ಒಂದು ಸಿನಿಮಾಗಳೇ. ಪುರುಸೊತ್ತೇ ಇರಲಿಲ್ಲ. ಒಂದು ವರ್ಷವಂತೂ ಐದು ಸಿನಿಮಾಗಳನ್ನು ನಿರ್ಮಿಸಿದೆ. 
 
ಆಮೇಲೆ ಮೂಡಿಬಂದದ್ದು `ಪ್ರಚಂಡ ಕುಳ್ಳ'. `ಗರುಡ ರೇಖೆ' ಚಿತ್ರವನ್ನು ನಿರ್ದೇಶಿಸಿದ್ದ ಪ್ರಕಾಶ್ ಅವರೇ ಅದಕ್ಕೆ ಆ್ಯಕ್ಷನ್, ಕಟ್ ಹೇಳಿದರು. ಆ ಚಿತ್ರವನ್ನು ನೋಡಿ ರಿಶಿ ಕಪೂರ್ ಖುಷಿಪಟ್ಟಿದ್ದರು. ಎಲ್.ವಿ. ಪ್ರಸಾದ್ ಅವರ ಮಗ ರಮೇಶ್ ಪ್ರಸಾದ್ ಅದನ್ನು ಹಿಂದಿಗೆ ಡಬ್ ಮಾಡಿದರು. ಆ ಚಿತ್ರವನ್ನು `3ಡಿ'ಯಲ್ಲಿ ಮಾಡುವ ಯೋಚನೆ ಮೂಡುತ್ತಿದೆ. 
 
`ಪೊಲೀಸ್ ಪಾಪಣ್ಣ' ಸುಮಾರಾಗಿ ಓಡಿತು. ಆಮೇಲೆ ಟೈಗರ್ ಪ್ರಭಾಕರ್ ಅವರನ್ನು ನಾಯಕರಾಗಿಸಿ `ಒಂದೇ ಗೂಡಿನ ಹಕ್ಕಿಗಳು' ಚಿತ್ರವನ್ನು ತೆಗೆದೆ. ಇವೆಲ್ಲವೂ ಆದಮೇಲೆ ಮೂಡಿದ್ದು `ನೀ ಬರೆದ ಕಾದಂಬರಿ'. ಅದರ ಮೊದಲ ಪ್ರತಿ ಬಂದಮೇಲೆ ರಜನೀಕಾಂತ್, ಶ್ರೀದೇವಿ ಇಬ್ಬರಿಗೂ ಮದ್ರಾಸ್‌ನ ಮೀನಾ ಥಿಯೇಟರ್‌ನಲ್ಲಿ ಸಿನಿಮಾ ತೋರಿಸಿದೆ. ಶಿವಕುಮಾರ್-ಅಂಬಿಕಾ ಜೋಡಿಯನ್ನಿಟ್ಟು ತಮಿಳಿನಲ್ಲಿ ಆ ಚಿತ್ರ ಮಾಡಬೇಕೆಂಬುದು ನನ್ನ ಬಯಕೆಯಾಗಿತ್ತು.

ಈಗಿನ ಜನಪ್ರಿಯ ನಟ ಸೂರ್ಯ ಅವರ ತಂದೆ ಶಿವಕುಮಾರ್. ಆದರೆ `ನೀ ಬರೆದ ಕಾದಂಬರಿ' ನೋಡಿದ ಮೇಲೆ ರಜನಿ, ಅವರ ಪತ್ನಿ ಲತಾ ತುಂಬಾ ಮೆಚ್ಚಿಕೊಂಡರು. ಶ್ರೀದೇವಿಗೂ ಇಷ್ಟವಾಯಿತು. ಅವರಿಬ್ಬರ ಜೋಡಿಯಲ್ಲೇ ತಮಿಳಿನಲ್ಲೂ ಆ ಸಿನಿಮಾ ಬಂದರೆ ಒಳ್ಳೆಯದು ಎಂದು ತಾವಾಗಿಯೇ ಹೇಳಿಕೊಂಡರು. ತಕ್ಷಣ ಡೇಟ್ಸ್ ಕೊಟ್ಟರೆ ಆಗಬಹುದು ಎಂದೆ. ಅದಕ್ಕೂ ಒಪ್ಪಿಗೆ ನೀಡಿ, ಅಲ್ಲಿಯೇ ಡೇಟ್ಸ್ ಕೊಟ್ಟರು.
 
ವೆಲ್ಲಾಂಚರಿಯಲ್ಲಿ ರಜನಿ ಆಗ ದೊಡ್ಡ ಮನೆ ಕಟ್ಟಿಸಿದ್ದ. ಅಲ್ಲಿಯೇ ನಾವು ಸಿನಿಮಾ ಕುರಿತು ಚರ್ಚೆ ನಡೆಸಿದೆವು. ವಿಜಯಾನಂದ್ ಸಂಗೀತ ನೀಡಬೇಕು ಎಂಬುದು ರಜನಿ ಆಸೆಯಾಗಿತ್ತು. ತಮಿಳಿನಲ್ಲಿ ಕೂಡ ನಾನೇ ನಿರ್ದೇಶಿಸಲು ನಿರ್ಧರಿಸಿದೆ. ಗಿರೀಶ್ ಕಾರ್ನಾಡರೆಂದರೆ ರಜನಿಗೆ ತುಂಬಾ ಇಷ್ಟ. ಅವರ ಜೊತೆ ಪಾತ್ರ ಮಾಡಬೇಕೆಂಬ ಬಯಕೆ ಇತ್ತು. ಕನ್ನಡದಲ್ಲಿ ಸಿ.ಆರ್. ಸಿಂಹ ಮಾಡಿದ ಪಾತ್ರವನ್ನು ತಮಿಳಿನಲ್ಲಿ ಗಿರೀಶ್ ಕಾರ್ನಾಡರಿಂದ ಮಾಡಿಸಿದೆ.

`ನಾನ್ ಅಡಿಮೆ ಇಲ್ಲೈ' ಎಂಬುದು ಚಿತ್ರದ ಶೀರ್ಷಿಕೆ. `ನೀ ಬರೆದ ಕಾದಂಬರಿ' ಸೂಪರ್ ಹಿಟ್ ಆಯಿತು. ತೆಲುಗಿನಲ್ಲಿ ಬೇರೊಬ್ಬರು ಅದನ್ನು ರೀಮೇಕ್ ಮಾಡಿ ಗೆದ್ದರು. ಹಿಂದಿಯಲ್ಲಿ ಬಂದಿದ್ದ `ಪ್ಯಾರ್ ಝುಕ್ತಾ ನಹೀ' ಕೂಡ ಯಶಸ್ವಿಯಾಗಿತ್ತು. ತಮಿಳಿನಲ್ಲಿ ಮಾತ್ರ ದೊಡ್ಡ ಪೆಟ್ಟು ಬಿತ್ತು. ರಜನಿ-ಶ್ರೀದೇವಿ ಇದ್ದಿದ್ದರಿಂದ ಚಿತ್ರ ಬಿಡುಗಡೆಗೆ ಮೊದಲೇ ಒಳ್ಳೆಯ ಬೆಲೆಗೆ ಕೊಳ್ಳಲು ಅನೇಕ ವಿತರಕರು ಆಸಕ್ತಿ ತೋರಿಸಿದ್ದರು. ನಾನು ಮಾರಲಿಲ್ಲ. ಆನಂದ್ ಪಿಕ್ಚರ್ಸ್‌ಗೆ 15 ಲಕ್ಷ ರೂಪಾಯಿಗೆ ವಿತರಣೆ ಕೊಟ್ಟೆನಷ್ಟೆ. ಸಿನಿಮಾ ಸೋಲುಂಡಿತು. 
 
ವಾಹಿನಿ ಸ್ಟುಡಿಯೋದಲ್ಲಿ ಕೆ.ಎಸ್.ಆರ್. ದಾಸ್ ನಿರ್ದೇಶನದ ಚಿತ್ರವೊಂದರಲ್ಲಿ ಜಯಪ್ರದಾ ಅಭಿನಯಿಸುತ್ತಿದ್ದರು. ಅಲ್ಲಿಗೆ ನಾನು ಹೋದಾಗ ಅವರು ಸೂಚಿಸಿದ ಸಿನಿಮಾ ಹಿಂದಿಯ `ಶರಾಬಿ'. ಅದನ್ನು ಕನ್ನಡದಲ್ಲಿ ಮಾಡಿದರೆ ತಾವೇ ನಟಿಸುವುದಾಗಿಯೂ ಜಯಪ್ರದಾ ಹೇಳಿದರು. ಯಥಾಪ್ರಕಾರ ವಿಷ್ಣುವನ್ನು ನಾಯಕನ ಪಾತ್ರಕ್ಕೆ ಒಪ್ಪಿಸಿದೆ. ಆದರೆ, ಕಾರಣಾಂತರಗಳಿಂದ ಜಯಪ್ರದಾ ಆ ಚಿತ್ರದಲ್ಲಿ ನಟಿಸಲು ಆಗಲಿಲ್ಲ. ಅವರ ಬದಲು ಜಯಸುಧಾ ಅವರನ್ನು ಒಪ್ಪಿಸಿದೆ. `ಶರಾಬಿ' ರೀಮೇಕ್ `ನೀ ತಂದ ಕಾಣಿಕೆ'ಯಾಗಿ ಬಂದಿತು. 
 
1985ರ ಡಿಸೆಂಬರ್ 28ಕ್ಕೆ `ನೀ ತಂದ ಕಾಣಿಕೆ' ತೆರೆಕಂಡಿತು. 1986 ಫೆಬ್ರುವರಿ 2ರಂದು `ನಾನ್ ಅಡಿಮೆ ಇಲ್ಲೈ' ಬಿಡುಗಡೆಯಾಯಿತು. ಕಡಿಮೆ ಅವಧಿಯಲ್ಲಿ ಎರಡು ದೊಡ್ಡ ಏಟುಗಳು ನನಗೆ ಬಿದ್ದವು. ಈ ಎರಡರಲ್ಲಿ ಯಾವುದೂ ಗೆಲ್ಲಲಿಲ್ಲ. ಸೋಲಿನ ಬಿಸಿ ನನಗೆ ಸರಿಯಾಗಿಯೇ ತಟ್ಟಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT