ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲಿನಲ್ಲಿ ಕಲೆತುಬಿಡಲಿ ಹಲವುಶೈಲಿ ಸರಿತೆಗಳು!

Last Updated 10 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

`ನನ್ನ ದುಡ್ಡಿನ ಪರ್ಸ್ ಕಳೆದು ಹೋಯಿತು' ಎಂದು ಹುಡುಗಿ ಅಳಲಾರಂಭಿಸಿದಾಗ ಮಾಯಾ ರಾವ್ ಅಮ್ಮನಂತೆ ಅವಳ ತಲೆ ನೇವರಿಸಿ ಸಮಾಧಾನ ಹೇಳಿದರು. 1981ರ ಒಂದು ದಿನವದು. ದೂರದ ಜರ್ಮನಿಯಲ್ಲಿ ಇಳಿದಾಗಿದೆ. ಎಲ್ಲಿ ಹುಡುಕುವುದು ಅವಳ ಕೈಚೀಲವನ್ನು! ತಂಡದವರನ್ನೆಲ್ಲ ಸೇರಿಸಿ ಮಾಯಾ ರಾವ್ ಹೇಳಿದರು, `ನೋಡಿ, ನಮ್ಮ ತಂಡದ ಸದಸ್ಯೆಯೊಬ್ಬಳ ಪರ್ಸ್ ಕಣ್ಮರೆಯಾಗಿದೆ. ಅದರಲ್ಲಿದ್ದ ಆಭರಣ, ಹಣ ಎಲ್ಲವನ್ನೂ ಆಕೆ ಕಳೆದುಕೊಂಡಿದ್ದಾಳೆ. ಅವಳ ನೋವನ್ನು ನಾವೆಲ್ಲ ಹಂಚಿಕೊಳ್ಳೋಣ. ಇಲ್ಲದಿದ್ದರೆ, ನಮ್ಮ ಪರಿವಾರದವಳೊಬ್ಬಳು ಕಷ್ಟದಲ್ಲಿರುತ್ತ ನಾವೆಲ್ಲ ಈ ಪ್ರವಾಸವನ್ನು ಆನಂದಿಸಲು ಸಾಧ್ಯವಾಗಲಾರದು. ನಮ್ಮ ಕೈಲಾದಷ್ಟನ್ನು ಸೇರಿಸಿ ಅವಳಿಗೆ ಕೊಡೋಣವೆ?'

ಮರುದಿನವೇ ಕರೆಮನೆ ಮಹಾಬಲ ಹೆಗಡೆಯವರೂ ಬಿರ್ತಿ ಬಾಲಕೃಷ್ಣರೂ ನಾನೂ ನಮ್ಮ ಯಥಾಸಾಧ್ಯ ಸಣ್ಣ ಮೊತ್ತವನ್ನು ಮಾಯಾರಾವ್ ಅವರ ಕೈಗಿತ್ತೆವು. ಅವರು ಉಳಿದವರಿಂದಲೂ ಪಡೆದುಕೊಂಡು, ತಮ್ಮದನ್ನೂ ಸೇರಿಸಿ ಹಾಸನ ಕಡೆಯ ಆ ಹುಡುಗಿಗೆ ಕೊಟ್ಟರು. ಮಹಾನ್ ಕಲಾವಿದೆಯಾಗಿದ್ದ ಮಾಯಾ ರಾವ್‌ರ ಅಂತರಂಗ ವೈಶಾಲ್ಯವನ್ನು ನಿರೂಪಿಸಲಷ್ಟೇ ಮೇಲಿನ ಘಟನೆಯನ್ನು ಹೇಳಿದ್ದೇನೆ. ಅವರ ಸನಿಹ ಇದ್ದಷ್ಟೂ ಹೊತ್ತು ವಾತ್ಸಲ್ಯ ವೃಕ್ಷದ ನೆರಳಿನ ಅನುಭವವಾಗುತ್ತಿತ್ತು. ಜರ್ಮನಿ ಪ್ರವಾಸದಿಂದ ಮರಳಿದ ಒಂದೆರಡು ತಿಂಗಳ ಬಳಿಕ, ಕರಾರುವಕ್ಕಾಗಿ ಯಾವ ದಿನವೆಂದು ನೆನಪಿಲ್ಲ, ನಮ್ಮ ತಂಡವನ್ನು ಮತ್ತೊಂದು ಪ್ರದರ್ಶನಕ್ಕಾಗಿ ಮಾಯಾರಾವ್ ದೆಹಲಿಗೆ ಕರೆಸಿಕೊಂಡರು.

ಬಭ್ರುವಾಹನ ಕಾಳಗ ಪ್ರಸಂಗ. ಕೆರೆಮನೆ ಮಹಾಬಲ ಹೆಗಡೆಯವರು ಅರ್ಜುನ, ನಾನು ಬಭ್ರುವಾಹನ. ಭಾಗವತಿಕೆಗೆ ಯಾರೆಂದು ಕೇಳುತ್ತೀರಾ? ಜಾನುವಾರುಕಟ್ಟೆ ಗೋಪಾಲಕೃಷ್ಣ ಕಮ್ತಿಯವರು!
`ಪಂಜೀವಾ, ಅಂಗ್ಯೋರೆ' (ಸಂಜೀವಾ, ಇಲ್ಲಿ ಬಾ) ಎಂದು ಪ್ರೀತಿಯಿಂದ ಕರೆಯುತ್ತಿದ್ದ ಆ ಧ್ವನಿ ಇನ್ನೂ ನೆನಪಿದೆ. ಬಡಗುತಿಟ್ಟು ಯಕ್ಷಗಾನದ ಭಾಗವತಿಕೆಗೆ ಮಾರ್ಗವೊಂದನ್ನು ರೂಪಿಸಿದ ಕುಂಜಾಲು ಶೇಷಗಿರಿ ಕಿಣಿಯವರನ್ನು ಅನುಸರಿಸಿಕೊಂಡು ಬಂದು `ಕುಂಜಾಲು' ಶೈಲಿಗೆ ಭದ್ರ ಬುನಾದಿ ಹಾಕಿದವರು ಜಾನುವಾರುಕಟ್ಟೆ ಭಾಗವತರು. ಬಡಗುತಿಟ್ಟಿನ ಅಪ್ಪಟ ಸಾಂಪ್ರದಾಯಿಕ ಶೈಲಿಯ ಹಾಡುಗಾರಿಕೆಯೇ ಬೇಕೆಂದು ಮಾಯಾ ರಾವ್ ಜಾನುವಾರುಕಟ್ಟೆಯವರನ್ನು ಭಾಗವತಿಕೆಗೆ ಕರೆಸಿದ್ದರು. ಅಲ್ಲದೆ, ತೆಂಕುತಿಟ್ಟಿನ ಸೃಷ್ಟಿಶೀಲ ವೇಷಧಾರಿಯಾಗಿದ್ದ ಬಣ್ಣದ ಕುಟ್ಯಪ್ಪು ಅವರನ್ನೂ ಕರೆಸಿದ್ದರೆಂದು ಕಾಣುತ್ತದೆ.

ಎರಡೂ ಕೈಯಗಲಿಸಿ ನಿಂತುಕೊಂಡು ಆರ್ಭಟ ಕೊಡುತ್ತಿದ್ದ ಆ ದೈತ್ಯ ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದ್ದಾರೆ. ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳದಲ್ಲಿ ಯಾರಿದ್ದರೆಂದು ನೆನಪಾಗುತ್ತಿಲ್ಲ. ರಂಗಸ್ಥಳದಲ್ಲಿ ನನ್ನ ನಿರ್ವಹಣೆ ನೋಡಿದ ಬಳಿಕ ಜಾನುವಾರುಕಟ್ಟೆಯವರು, `ಇಲ್ಲಿ ಬಾ, ನೀನು ಎಲ್ಲಿ ಹೆಜ್ಜೆ ಕಲಿತೆ?' ಎಂದು ನನ್ನನ್ನು ಕೇಳಿದ್ದು, ನಾನು ಗುರು ವೀರಭದ್ರ ನಾಯಕರನ್ನು ಉಲ್ಲೇಖಿಸಿದಾಗ ಅವರಿಗೆ ಸಂತೋಷವಾದದ್ದು ಎಲ್ಲವೂ ನನ್ನ ಜ್ಞಾಪಕ ಚಿತ್ರಶಾಲೆಯಲ್ಲಿವೆ.

ಇವತ್ತು ಕುಳಿತು ನೀಲಾವರ ರಾಮಕೃಷ್ಣಯ್ಯನವರ ಭಾಗವತಿಕೆಯ ಪಾಠವನ್ನು ನೆನೆದರೆ ಅಚ್ಚರಿಯೆನಿಸುತ್ತದೆ. ಯಕ್ಷಗಾನ ಹಿಮ್ಮೇಳದ ವಿಕಸನ ಹೇಗಾಯಿತು, ಕುಂಜಾಲು ಶೇಷಗಿರಿ ಕಿಣಿಯಂಥವರು ಅದನ್ನು ಹೇಗೆ ಮುಂದಿನ ತಲೆಮಾರಿಗೆ ದಾಟಿಸಿದರು, ಜಾನುವಾರುಕಟ್ಟೆ ಗೋಪಾಲಕೃಷ್ಣ ಕಮ್ತಿಯಯಂಥವರು ನೀಲಾವರ ರಾಮಕೃಷ್ಣಯ್ಯರಂಥವರು ಅದನ್ನು ಹೇಗೆ ಮುಂದುವರಿಸಿಕೊಂಡು ಬಂದರು ಎಂಬುದರ ಬಗ್ಗೆ ನನ್ನ ಜ್ಞಾನದ ಮಿತಿಯಲ್ಲಿ ಯೋಚಿಸುತ್ತಲೇ ಇದ್ದೇನೆ. ವಿದೇಶ ಪ್ರವಾಸದಲ್ಲಿರುವಾಗಲೂ ನೀಲಾವರ ರಾಮಕೃಷ್ಣಯ್ಯನರಿಗೆ ಯಾರಿಗಾದರೂ ತಾಳ, ಮಟ್ಟುಗಳನ್ನು ಹೇಳಿಕೊಡಬೇಕೆಂಬ ತುಡಿತವಿರುತ್ತಿತ್ತು. ವಿಮಾನ ನಿಲ್ದಾಣದಲ್ಲಿ ಕೊಂಚ ಕಾಯುವ ಅವಕಾಶವಿದ್ದರೂ ಸಾಕು, `ಸಂಜೀವಾ, ಇಲ್ಲಿ ಬಾ' ಎಂದು ಕರೆದವರೇ ಅಂಗೈಗಳನ್ನು ಪಟ ಪಟ ಬಡಿಯುತ್ತ ಪಾಠ ಶುರು ಮಾಡುತ್ತಿದ್ದರು.

ನಾವು ಉಳಕೊಳ್ಳುತ್ತಿದ್ದ ಕೊಠಡಿಯ ನೆಲದ ಮೇಲೆ ಗೆರೆ ಎಳೆದು ತಾಳಾಕ್ಷರ ಕಾಲದ ಸಂಕೇತಗಳ ಮೂಲಕ ಬೋಧಿಸುತ್ತಿದ್ದರು. ಆ ಗೆರೆಗಳ ಮೇಲೆ ಒಂದೊಂದೇ ಬೆರಳಿಟ್ಟು ಮು...ದ...ದಿಂ...ದ ನಿ...ನ್ನ... ಕೊಂ...ಡಾ...ಡು...ವೆ...ನು... ಒಪ್ಪಿಸಬೇಕಾಗಿತ್ತು. ಬಹುಶಃ ಮೊತ್ತ ಮೊದಲ ಬಾರಿಗೆ ಯಕ್ಷಗಾನ ಕ್ಷೇತ್ರದಲ್ಲಿ ಒಂದು ಲಕ್ಷಣಗ್ರಂಥ ಬೇಕು, ಒಂದು ಪಠ್ಯಪುಸ್ತಕ ಬೇಕು ಎಂಬ ಬಗ್ಗೆ ಯೋಚಿಸಿದವರು ಅವರೆಂದು ತೋರುತ್ತದೆ. ಹೇಳಿಕೇಳಿ ಕುಂಜಾಲು ಶೇಷಗಿರಿ ಕಿಣಿಯಂಥ ಮೇರು ಭಾಗವತರ ಕೂಡೆ ಮದ್ದಲೆವಾದಕರಾಗಿದ್ದವರಲ್ಲವೆ! ಅವರ `ಯಕ್ಷಗಾನ ಸ್ವಬೋಧಿನಿ' ಕೃತಿ ಇತ್ತೀಚೆಗೆ ತೃತೀಯ ಮುದ್ರಣ ಕಂಡಿದೆ.

ಶಿವರಾಮ ಕಾರಂತರು ತಮ್ಮ ಯಕ್ಷಗಾನ ಪ್ರಯೋಗಗಳಿಗೆ ಜಾನುವಾರುಕಟ್ಟೆ ಗೋಪಾಲಕೃಷ್ಣ ಕಮ್ತಿಯವರನ್ನೂ, ನಾರ್ಣಪ್ಪ ಉಪ್ಪೂರರನ್ನೂ ಬಳಸಿಕೊಂಡಿದ್ದರು. ಆ ಬಳಿಕ ಅವರ ಮನೋಧರ್ಮಕ್ಕೆ ಸಮರ್ಥವಾಗಿ ಸ್ಪಂದಿಸಿದವರು ನೀಲಾವರ ರಾಮಕೃಷ್ಣಯ್ಯನವರು. ಆದರೆ, ದೇಹಪ್ರಕೃತಿ ಅನುಕೂಲವಿಲ್ಲದ ಕಾರಣ ಕೆಲವಾರು ವರ್ಷಗಳ ಬಳಿಕ ಯಕ್ಷಗಾನ ಕೇಂದ್ರಕ್ಕೆ ಬರುವುದನ್ನು ನಿಲ್ಲಿಸಿದ್ದರು. ನನ್ನ ಮದುವೆಯ ಸುದ್ದಿಯನ್ನು ಕೇಳಿ, `ಸಂಜೀವ ಅವನ ಹೆಂಡತಿಯೊಂದಿಗೆ ಒಮ್ಮೆ ಬಂದು ಕಾಣಲಿ' ಎಂದು ಹೇಳಿ ಕಳುಹಿಸಿದರು.

ಆಗ ಅವರ ಕಿರಿಯ ಸಹೋದರ ನೀಲಾವರ ಲಕ್ಷ್ಮೀನಾರಾಯಣಯ್ಯನವರು ಯಕ್ಷಗಾನ ಕೇಂದ್ರದಲ್ಲಿ ಪ್ರಾಚಾರ್ಯರಾಗಿದ್ದರು. ನವದಂಪತಿಗಳಾದ ನಾನೂ ವೇದಾಳೂ ಅವರ ಮನೆಗೆ ಹೋಗುವಾಗ ಅನಿರೀಕ್ಷಿತವಾಗಿ ಭೋಜನ ವ್ಯವಸ್ಥೆಯನ್ನು ಏರ್ಪಡಿಸಿ ಸತ್ಕರಿಸಿದ್ದರು. ಅವರಿಗೆ ಬಾಗಿ ನಮಸ್ಕರಿಸಿ ಮರಳುವಾಗ ನನ್ನ ಹೆಂಡತಿಯ ಕಿವಿಯಲ್ಲಿ ಹೇಳಿದ್ದು ನನಗೂ ಕೇಳಿಸಿತು, `ಸಂಜೀವ ಒಳ್ಳೆಯ ಅನುಭವಿ. ಯಕ್ಷಗಾನ ಕ್ಷೇತ್ರದಲ್ಲಿ ಜಗದಗಲದ ಹೆಸರು ಪಡೆಯುತ್ತಾನೆ. ಆದರೆ, ಸ್ವಲ್ಪ ಮುಂಗೋಪಿ. ಕೊಂಚ ಸೈರಿಸಿಕೊಳ್ಳಮ್ಮ, ಚೆನ್ನಾಗಿ ನೋಡಿಕೊಳ್ಳಮ್ಮ'.

`ಚೆನ್ನಾಗಿ' ಎಂಬ ಪದವನ್ನು ಅಕ್ಷರಶಃ ಪಾಲಿಸಿದವಳು ನನ್ನ ಸಹಧರ್ಮಿಣಿ. ದೇಶ, ವಿದೇಶಗಳಿಗೆ ಅಲೆದಾಡುತ್ತಿದ್ದ ನನ್ನ `ಜಂಗಮ' ಬದುಕಿಗೆ ಶ್ರಮವಹಿಸಿ ಹೊಂದಿಕೊಂಡಳು. ಯಕ್ಷಗಾನ ಕೇಂದ್ರದಲ್ಲಿ ಗುರುವಾಗಿರುವಾಗಲೇ ಹವ್ಯಾಸಿ, ವೃತ್ತಿಪರ ಮೇಳಗಳಿಗೆ ಚೆಂಡೆವಾದಕನಾಗಿಯೋ ವೇಷಧಾರಿಯಾಗಿಯೋ ಹೋಗಿ ಒಂದಿಷ್ಟು ಹೆಚ್ಚುವರಿ ಸಂಪಾದಿಸುತ್ತಿದ್ದುದರಿಂದ `ಹೊಟ್ಟೆ ಹಸಿವಿನ' ಸಮಸ್ಯೆ ನಿಧಾನವಾಗಿ ಗೌಣವಾಗತೊಡಗಿತ್ತು. ಸಂಸ್ಥೆಯ ಶಿಸ್ತಿಗನುಗುಣವಾಗಿ ಬೋಧನೆಯ ಕರ್ತವ್ಯಕ್ಕಷ್ಟೇ ಬದ್ಧನಾಗಬೇಕಾದಾಗ ಸಂಜೆಯ ಬಿಡುವಿನಲ್ಲಿ ಸನಿಹದ ತೋಟದ ತೆಂಗಿನಮರಗಳ ಬುಡಕ್ಕೆ ಗೊಬ್ಬರ ಹಾಕಿ, ನೀರುಣಿಸಿ ಪೋಷಿಸಿದ್ದಕ್ಕೆ ದಕ್ಕಿದ ತೆಂಗಿನಕಾಯಿಗಳಿಂದಾಗಿ ಸಾರುಸಾಂಬಾರು ರುಚಿಗಟ್ಟಿತು.

ಮನೆಯಲ್ಲಿ ಊಟಕ್ಕೆ ಒಂದಷ್ಟು ಮಂದಿ ಅತಿಥಿಗಳು ಬರಲಾರಂಭಿಸಿದಾಗ ಚೆಂಡೆ, ಮದ್ದಲೆ ಮುಚ್ಚುಗೆ ಮಾಡಿದ ಗಳಿಕೆಯಿಂದ ಅನ್ನ ಬೇಯುತ್ತಿದ್ದ ಒಲೆಯ ಬೆಂಕಿ ಆರಲಿಲ್ಲ. ಇಂಥ ಅಡ್ಡಕಸುಬುಗಳು ಅನಿವಾರ್ಯ ಕಾರಣದಿಂದ ನಿಂತು ಹೋದಾಗ ನನ್ನ ಬಂಧುವೊಬ್ಬರು ಪರವೂರಿಗೆ ರಫ್ತು ಮಾಡುವುದಕ್ಕಾಗಿ ರೆಡಿಮೇಡ್ ಬಟ್ಟೆಗಳನ್ನು ಹೊಲಿಯಲು ಕೊಟ್ಟರು. ನನ್ನ ತರಗತಿ ಮುಗಿದ ಬಳಿಕ ಸಂಜೆಯ ಬಿಡುವಿನಲ್ಲಿ ನಾನು ಮಾಡುತ್ತಿದ್ದ ಟೈಲರಿಂಗ್ ಕೆಲಸದಿಂದ ಸಿಗುತ್ತಿದ್ದ ಮೂವತ್ತು ರೂಪಾಯಿ ದಿನಗೂಲಿ ನನ್ನ ಕಷ್ಟದ ಹೊರೆಯನ್ನು ಹಗುರಾಗಿಸಿತು.

ಹೊಲಿಗೆಯ ಮೆಷಿನ್ ತುಳಿಯುವಾಗಲೆಲ್ಲ ಬಟ್ಟೆಯ ಹಾಸಿನ ಮೇಲೆ ಸೂಜಿ `ಏಕತಾಳ' ಲಯದಲ್ಲಿ ಕುಣಿಯುತ್ತಿತ್ತು. ನನ್ನ ತಲೆಯಲ್ಲೆಲ್ಲ ನಾಳೆಯ ಪಾಠದ ವಿಚಾರವೇ ಚಕ್ರದಂತೆ ಸುತ್ತುತ್ತಿತ್ತು. ಧಿತ್ತ ತೈಯತ್ತ ಧಿನ್ನ ಎಂಬ ಬಾಯಿತಾಳವನ್ನು ಹಿರಿಯ ತಲೆಮಾರಿನ ಕಲಾವಿದರು ಹಾರಿ ತುಂಬಿಸುತ್ತಿದ್ದ ರೀತಿಗಿಂತ ಭಿನ್ನವಾಗಿ ಈ ಹಾರುವಿಕೆಯನ್ನೂ ತಾಳದ ಲಯದಲ್ಲಿ ಸ್ಪಷ್ಟವಾಗಿ ಹೊಂದಿಸಬೇಕೆಂಬ ಯೋಚನೆಯಲ್ಲಿಯೇ ನಾನು ಎಷ್ಟು ಅಂಗಿಚಡ್ಡಿಗಳನ್ನು ಯಾಂತ್ರಿಕವಾಗಿ ಹೊಲಿದೆಸೆಯುತ್ತಿದ್ದೆನೋ!
ನಾನು ಕುಣಿಯುವ ಬಾಗು-ಬಳುಕುಗಳು, ಹೆಜ್ಜೆಗಳ ನಿಖರತೆಯನ್ನು ಗಮನಿಸಿದ ಕೆಲವರು, `ನೀನು ಭರತನಾಟ್ಯ ಕಲಿತಿದ್ದೀಯಾ?' ಎಂದು ಕೇಳುವವರೇ.

*****************************************
`ಅಷ್ಟೇನೂ ಕಲಿತಿಲ್ಲ...' ಎಂದೆ.
`ನಿನ್ನ ಕುಣಿತದಲ್ಲಿ ಬೇರೆಯೇ ಆದ ಸೊಬಗಿದೆ' ಎಂದರವರು.
ನಾನು ಸಂಕೋಚದಿಂದ ಬಾಗಿ ನಿಂತೆ.
ಲೀಲಾ ಕಾರಂತರು! ಸ್ವತಃ ಭರತನಾಟ್ಯ ವಿದುಷಿ! ಬದುಕಿನಲ್ಲಿ ಕಲೆಯನ್ನು ಪ್ರೀತಿಸಿ, ಕಲಾತ್ಮಕವಾಗಿ ಬದುಕಿದವರನ್ನೂ ಪ್ರೀತಿಸಿ, ಶಿವರಾಮ ಕಾರಂತರ ಮನದೊಡತಿಯಾದವರು.

ಯಕ್ಷಗಾನಕ್ಕೆ ಅದರದ್ದೇ ಆದ ಹೆಜ್ಜೆಗಳಿರಲಿ, ಆದರೆ ಶಾಸ್ತ್ರೀಯ ನೃತ್ಯದ ಶಿಸ್ತು ಯಕ್ಷಗಾನದ ಹೆಜ್ಜೆಗಳನ್ನು ನಡೆಸಲಿ ಎಂಬ ಕನಸನ್ನು ಸದಾ ಕಾಣುತ್ತಿದ್ದ ದಿನಗಳವು. ಹಾಗೆಂದು, ಯಕ್ಷಗಾನದಲ್ಲಿಯೇ ಅನನ್ಯ ಮುದ್ರೆ ಮತ್ತು ನಾಟ್ಯ ವೈವಿಧ್ಯಗಳಿರುವ ಕಾರಣದಿಂದ ನಾಟ್ಯಶಾಸ್ತ್ರವನ್ನು ಅವಲಂಬಿಸಬೇಕಾದ ಅಗತ್ಯ ನನಗೆ ಕಂಡು ಬಂದಿರಲಿಲ್ಲ. ಯಕ್ಷಗಾನಕ್ಕೂ ನಾಟ್ಯಶಾಸ್ತ್ರಕ್ಕೂ ಸಂಬಂಧ ಕಲ್ಪಿಸುವ ಅತಿ ಉತ್ಸಾಹವೂ ನನಗಿರಲಿಲ್ಲ, ಇವತ್ತಿಗೂ ಇಲ್ಲ. ಶಿವರಾಮ ಕಾರಂತರು ಸ್ವತಃ ನೃತ್ಯ ಕಲಾವಿದರಾದರೂ ಅವರು ನಾಟ್ಯಶಾಸ್ತ್ರವನ್ನು ಅವಲಂಬಿಸದೆ, ಅಪ್ಪಟ ಯಕ್ಷಗಾನದ ಮುದ್ರೆಗಳನ್ನು ಬಳಸುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಒಂದು ಉದಾಹರಣೆ: `ಮತ್ಸ'ವನ್ನು ಮುದ್ರಾಭಾಷೆಯಲ್ಲಿ ಅವರು ಬಿಂಬಿಸುತ್ತಿದ್ದ ರೀತಿ ಯಕ್ಷಗಾನದ್ದೇ ಆಗಿದ್ದು, ನಾಟ್ಯಶಾಸ್ತ್ರದ್ದಾಗಿರಲಿಲ್ಲ. ಆ ಬಳಿಕ ಇದೇ ಹಸ್ತಮುದ್ರೆಯನ್ನು ತೆಂಕುತಿಟ್ಟಿನ ಪ್ರಸಿದ್ಧ ವೇಷಧಾರಿ ಬಣ್ಣದ ಮಾಲಿಂಗರವರ ಹನುಮಂತನ ತೆರೆಪೊರಪ್ಪಾಟಿನಲ್ಲಿ ಗಮನಿಸಿದ್ದೇನೆ.

ಆದರೂ, ಭರತನಾಟ್ಯವನ್ನು ಕಲಿಯಬೇಕೆಂಬ ತೀವ್ರ ಉತ್ಸಾಹ ನನ್ನಲ್ಲಿತ್ತು. ಹಾಗೆ, ಮೇಲ್ಪಂಕ್ತಿಯ ಭರತನೃತ್ಯ ವಿದುಷಿ ವೆಂಕಟಲಕ್ಷ್ಮಮ್ಮರವರ ಶಿಷ್ಯರೊಬ್ಬರ ಬಳಿಗೆ ಹೋಗಿ ಕೆಲವು ಕಾಲ ಹೆಜ್ಜೆಹಾಕಿದ್ದೆ. ತನ್ನ ಮಡಿಲಿನಲ್ಲಿ ಪೊರೆಯುವ ಔದಾರ್ಯ ಯಕ್ಷಗಾನ ಕ್ಷೇತ್ರದಲ್ಲಿರುವಂತೆ ಬೇರೆ ಕಲೆಗಳಲ್ಲಿ ಕಾಣಿಸಲಿಲ್ಲ. ಅದು ಒಂದರ್ಥದಲ್ಲಿ ಅನುಕೂಲವೇ ಆಯಿತು, ಬಿಡಿ. ಯಕ್ಷಗಾನದಲ್ಲಿಯೇ ನನ್ನ ನೆಲೆಯನ್ನು ಕಂಡುಕೊಳ್ಳುವಂತಾಯಿತು. ಹಾಗಾಗಿ, ಯಾರಾದರೂ ಭರತನಾಟ್ಯ ಕಲಿತಿದ್ದೀಯಾ ಎಂದು ಕೇಳಿದರೆ, `ಇಲ್ಲ' ಎಂದರೂ `ಹೌದು' ಎಂದರೂ ಅರ್ಧ ಸತ್ಯವೇ ಆಗುತ್ತಿತ್ತು.

`ನನಗೂ ಒಮ್ಮೆ ನಿಮ್ಮ ಅಭಿಮನ್ಯು ರಿಹರ್ಸಲ್ ನೋಡಬೇಕು' ಎಂದು ಲೀಲಾ ಕಾರಂತರು ಹೇಳುತ್ತಿದ್ದರೆಂದು ತೋರುತ್ತದೆ. ಹಾಗೆ ಒಮ್ಮೆ ಶಿವರಾಮ ಕಾರಂತರು ತಮ್ಮ ಕಾರಿನಲ್ಲಿ ಲೀಲಾ ಕಾರಂತರನ್ನು ಕರೆದುಕೊಂಡು ಬಂದಿದ್ದರು. ನಾವೆಲ್ಲ ಅವರಿಗೆ ಗೌರವದಿಂದ ನಮಸ್ಕರಿಸಿದೆವು. ಎಂದಿಲ್ಲದ ವಿಶೇಷ ಪ್ರೇಕ್ಷಕರೊಬ್ಬರು ಇಂದು ಇದ್ದಾರೆ ಎಂಬ ಭಯಮಿಶ್ರಿತ ಭಾವನೆಯಲ್ಲಿಯೇ ನಾನಂದು `ಅಭಿಮನ್ಯು'ವಾಗಿ ಕುಣಿದಿದ್ದೆ.

ನನ್ನ ಕುಣಿತವನ್ನು ನೋಡಿದ ಲೀಲಾ ಕಾರಂತರು ಹೊರಡುವಾಗ `ಚೆನ್ನಾಗಿ ಮಾಡಿದ್ದಿ... ಭರತನಾಟ್ಯ ಅಭ್ಯಾಸ ಮಾಡಿದ್ದೀಯಾ?' ಎಂದು ಕೇಳಿದ ಪ್ರಶ್ನೆಯಿಂದಲೇ ನನ್ನ ಬದುಕಿನ ಉತ್ತರೋತ್ತರವಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಆಗ, `ಯಕ್ಷರಂಗ'ದ ಕಲಾವಿದರು ಯಕ್ಷಗಾನ ಪ್ರಯೋಗಗಳ ರಿಹರ್ಸಲ್‌ನಲ್ಲಿ ಮತ್ತು ಪ್ರವಾಸದಲ್ಲಿ ತೊಡಗಬೇಕಾಗಿದ್ದುದರಿಂದ ಮತ್ತು ಅದೇ ಸಂದರ್ಭದಲ್ಲಿ `ಯಕ್ಷಗಾನ ಕೇಂದ್ರ' ತರಬೇತಿ ಮುಂದುವರಿಯಬೇಕಾಗಿರುವುದರಿಂದ ಈ ಎರಡೂ ಸಂಸ್ಥೆಗಳಿಗೆ ಬೇರೆ ಬೇರೆ ಕಲಾವಿದರನ್ನು ನೇಮಿಸಲಾಗುತ್ತಿತ್ತು. ಅದೊಂದು ಸಂದರ್ಭದಲ್ಲಿ ಯಕ್ಷಗಾನ ಕೇಂದ್ರದ ಗುರುಗಳು ನಿವೃತ್ತರಾದ ಕಾರಣ ಆ ಜಾಗಕ್ಕೆ ಬೇರೊಬ್ಬರ ಅಗತ್ಯವಿತ್ತು.

ಮರುದಿನದ ರಿಹರ್ಸಲ್‌ಗೂ ಲೀಲಾ ಕಾರಂತರೊಂದಿಗೆ ಬಂದಿದ್ದ ಶಿವರಾಮ ಕಾರಂತರು ಹೊರಡಲನುವಾದಾಗ ನೀಲಾವರ ರಾಮಕೃಷ್ಣಯ್ಯನವರು ನನ್ನನ್ನು ಕರೆದು, `ಗುರುಗಳು ನಿನ್ನನ್ನು ಕರೆಯುತ್ತಿದ್ದಾರೆ' ಎಂದರು. ನನ್ನ ಪದಾಭಿನಯದಲ್ಲೇನಾದರೂ ಕೊರತೆ ಕಂಡಿರೆ, ಎಂಬ ಅಳುಕಿನ ಭಾವದಲ್ಲಿ ನಾನು ಅವರ ಸನಿಹ ಸುಳಿದೆ. `ಸಂಜೀವಾ, ನೀನು ಇನ್ನು ಮುಂದೆ ಯಕ್ಷರಂಗದಲ್ಲಿ ಭಾಗವಹಿಸುವುದರ ಜೊತೆಗೆ ಯಕ್ಷಗಾನ ಕೇಂದ್ರದಲ್ಲಿಯೂ `ಗುರು'ವಾಗಿರಬೇಕು' ಎಂದರು.

ಬಿಡುವಿನ ವೇಳೆಯಲ್ಲಿ ಊರೂರಿನ ಆಟಗಳಿಗೆ ಹೋಗಿ `ಸಂಚಾರಿ' ಬದುಕಿಗೆ ಒಪ್ಪಿಸಿಕೊಂಡ ನನಗೆ ಈ ಬದ್ಧತೆ ಬೇಡವಾಗಿತ್ತು. ಜೊತೆಗೆ, ನನ್ನಿಂದ ಕಲಿಸಲು ಸಾಧ್ಯವೆ, ಎಂಬ ಹಿಂಜರಿಕೆಯೂ ಇತ್ತು. ನಾನು ತೊದಲುತ್ತ, `ನ... ನ್ನಿಂ.....ದ...' ಎಂದೆ. `ನೋಡು, ಅವಳೇ ನಿನ್ನ ಹೆಸರು ಸೂಚಿಸಿದಳು. ಅವಳನ್ನೇ ಕೇಳು, ಬೇಕಾದರೆ...' ಎಂದು ಲೀಲಾ ಕಾರಂತರತ್ತ ಕೈತೋರಿಸಿದರು. ಇನ್ನೇನು ಕಾರು ಏರುವುದರಲ್ಲಿದ್ದ ಲೀಲಾ ಕಾರಂತರ ಸನಿಹ ಹೋದೆ. `ನಿನ್ನಿಂದ ಸಾಧ್ಯ. ನೀನು ಚೆನ್ನಾಗಿ ಕಲಿಸಬಲ್ಲೆ' ಎಂದರು ನನ್ನ ಬೆನ್ನು ತಟ್ಟುತ್ತ.
ಕಾರು ಮುಂದಕ್ಕೆ ಚಲಿಸಿತು. ಅವರಿಬ್ಬರ ಆದೇಶದಂಥ ಮಾತು ನನ್ನ ಮುಂದೆ ಸ್ಥಿರವಾಗಿ ನಿಂತಿತ್ತು.

1984ರ ಒಂದು ದಿನ ಯಕ್ಷಗಾನ ಕೇಂದ್ರದಲ್ಲಿ `ಗುರು'ವಾಗಿ ಹೆಜ್ಜೆ ಹಾಕತೊಡಗಿದೆ. ಹೆಜ್ಜೆ ಹಾಕುತ್ತ ಹಾಕುತ್ತ ನನ್ನ ಮಾರ್ಗವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆಯೂ ಇತ್ತು. ಕರ್ನಾಟಕದ ಕರಾವಳಿಯ ಒಂದು ತುದಿಯಲ್ಲಿ ಕಥಕಳಿಯೊಂದಿಗೆ ಸಾಮ್ಯವನ್ನು ಹೊಂದಿರುವ ತೆಂಕುತಿಟ್ಟು ಯಕ್ಷಗಾನ, ಮತ್ತೊಂದು ತುದಿಯಲ್ಲಿ ದೊಡ್ಡಾಟಗಳಂಥ ಕಲೆಗಳಿಂದ ಪ್ರಭಾವಿತವಾದ ಕರ್ಕಿ ಶೈಲಿಯ (ಬಡಾಬಡಗು) ಯಕ್ಷಗಾನ. ನಡುವೆ ನಮ್ಮ ಬಡಗುತಿಟ್ಟಿನ ಯಕ್ಷಗಾನ. ತೆಂಕು ಮತ್ತು ಬಡಗುತಿಟ್ಟಿನ ಯಕ್ಷಗಾನಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ `ಪದ್ಯ ಪಠ್ಯ ಒಂದೇ' ಎಂಬ ಒಂದಂಶವನ್ನು ಬಿಟ್ಟರೆ, ಉಳಿದೆಲ್ಲ ವಿಚಾರಗಳಲ್ಲಿ ತೆಂಕು ಬೇರೆಯೇ ಬಡಗು ಬೇರೆಯೇ. ಬಡಾಬಡಗು ಎಂದು ಗುರುತಿಸಲಾಗುವ ಕರ್ಕಿ ಶೈಲಿಯ ಯಕ್ಷಗಾನದಲ್ಲಿಯೂ ಉಳಿದ ಪ್ರಕಾರಗಳೊಂದಿಗೆ ಪ್ರತ್ಯೇಕವಾಗಿ ಗುರುತಿಸಬಹುದಾದ ಲಕ್ಷಣಗಳಿವೆ.

ಆದರೆ, ಬಡಗುತಿಟ್ಟು ಯಕ್ಷಗಾನದೊಳಗೆಯೇ `ಹಾರಾಡಿ' ಮತ್ತು `ಮಟಪಾಡಿ' ಶೈಲಿಗಳೆಂಬ ಭೇದವಿರುವುದು ನನ್ನನ್ನು ಆಳವಾಗಿ ಯೋಚಿಸುವಂತೆ ಮಾಡಿತು. ಬಹುಶಃ ಇದು ಹಿಂದೂಸ್ತಾನಿ ಯಕ್ಷಗಾನದಲ್ಲಿ ಊರಿನ ಹೆಸರುಗಳಿಂದ ಗುರುತಿಸುವ `ಘರಾನಾ' ಪದ್ಧತಿಗಳಿವೆಯಲ್ಲ ; ಗ್ವಾಲಿಯರ್ ಘರಾನಾ, ಜೈಪುರ್ ಘರಾನಾ, ಪಟಿಯಾಲಾ ಘರಾನಾ... ಹಾಗಿರಬೇಕು. ನೃತ್ಯಾಭಿನಯದ ಸಂದರ್ಭದಲ್ಲಿ ಆಯುಧ ಧರಿಸುವ ಕ್ರಮ, ನಿಲುವಿನ ಗಾಂಭೀರ್ಯ, ವಾಚಿಕ ಪ್ರಸ್ತುತಿ ಇಂಥ ವಿಷಯಗಳಲ್ಲಿ ಸಣ್ಣ ವ್ಯತ್ಯಾಸಗಳು ಬಿಟ್ಟರೆ ಹೇಳಿಕೊಳ್ಳಬಹುದಾದ ಅಜಗಜಗಳೇನೂ ಇವೆರಡರ ನಡುವೆ ಇಲ್ಲ ಎಂಬುದು ನನಗೆ ಮನದಟ್ಟಾಗತೊಡಗಿತು. ಹಾರಾಡಿ-ಮಟಪಾಡಿಗಳೆಂಬ ದ್ವಂದ್ವಕ್ಕೊಳಗಾಗದೆ `ಬಡಗುತಿಟ್ಟು ಯಕ್ಷಗಾನ' ಎಂಬ ಏಕಸೂತ್ರದಲ್ಲಿ ಬೋಧನಕ್ರಮವನ್ನು ರೂಪಿಸತೊಡಗಿದೆ.

ಹಾಗೆಂದು, ಎರಡರ ನಡುವಿನ ಅನನ್ಯತೆಯ ಗೆರೆಗಳನ್ನು ಮಸುಕಾಗಿಸಿದೆ ಎಂದರ್ಥವಲ್ಲ, ಮಸುಕಾಗಿಸಲು ಸ್ಪಷ್ಟವಾದ ಗೆರೆಗಳೇ ಅಲ್ಲಿರಲಿಲ್ಲವಲ್ಲ! ಮಟಪಾಡಿ ವೀರಭದ್ರ ನಾಯಕರೂ ಹಾರಾಡಿ ನಾರಾಯಣ ಗಾಣಿಗರೂ ಗುರುಗಳಾಗಿದ್ದುದರಿಂದ ಈ ಬಗ್ಗೆ ಚೂಪಾಗಿ ವಿವೇಚಿಸುವುದಕ್ಕೆ ಅನುಕೂಲವಾಯಿತು. ನನ್ನ ಜ್ಞಾನದ ಮಿತಿಯಲ್ಲಿ ಪರಿಷ್ಕರಿಸಿದ ನೃತ್ಯಾಭಿನಯಗಳನ್ನು ನನ್ನ `ವ್ಯಕ್ತಿಗತ ಶೈಲಿ' ಎಂದು ಹೇಳಿಕೊಳ್ಳುವ ಬದಲಿಗೆ ಅವೆಲ್ಲ ಹಲವು ಸರಿತೆಗಳಾಗಿ ಸಾಗಿ ಯಕ್ಷಗಾನದ ಕಡಲಿನೊಡಲಿನಲ್ಲಿ ಸೇರಿ ಹೋಗಲಿ ಎಂಬ ಸದಾಶಯದಲ್ಲಿ ತಿಟ್ಟು, ಶೈಲಿಗಳ ನಡುವೆ ಹೆಜ್ಜೆಗಳನ್ನು ಹಾಕತೊಡಗಿದ್ದೆ.

ನಿಜವಾದ ದ್ವಂದ್ವ ಎದುರಾದದ್ದು ಇಂಥ ಕಾರಣಕ್ಕಾಗಿ ಅಲ್ಲ! `ಯಕ್ಷರಂಗ'ದಲ್ಲಿದ್ದಾಗ ನನ್ನ ಮಾಸಿಕ ವೇತನ 150 ರೂಪಾಯಿ ಇದ್ದದ್ದು, ಯಕ್ಷಗಾನ ಕೇಂದ್ರಕ್ಕೆ ಬೋಧಕನಾದಾಗ 250 ರೂಪಾಯಿಗಳಾಯಿತು. ಬಿಡುವಿನಲ್ಲಿ ಮಾಡುತ್ತಿದ್ದ ಕಿರುಕಾಯಕಗಳು ನಿಂತು ಹೋಗಿ ದೈನಿಕಕ್ಕೆ ತುಸು ಕಷ್ಟವೆನಿಸಿತ್ತು. ಇದನ್ನು ಯಾರಲ್ಲಿ ಹೇಳಿಕೊಳ್ಳುವುದು... ಮತ್ತೆ ಯಾರಲ್ಲಿ? ಶಿವರಾಮ ಕಾರಂತರಲ್ಲಿ!
ಆದರೆ, ಕೇಳುವುದೋ ಬೇಡವೋ ಎಂಬ ಇಬ್ಬಗೆ!

ಹಿಂದೊಮ್ಮೆ ಕಲಾವಿದರೊಬ್ಬರನ್ನು ಸಾಲಿಗ್ರಾಮದ ಮನೆಗೆ ಕರೆದೊಯ್ದು, `ಇವರು ಪ್ರತಿಭಾನ್ವಿತ ಕಲಾವಿದರು. ಈಗ ಆರೋಗ್ಯ ಕುಂದಿದೆ. ಬದುಕು ಬಡವಾಗಿದೆ' ಎಂದು ನಿವೇದಿಸಿಕೊಂಡಾಗ ಆ ಕಲಾವಿದನ ಜೀವನದ ಕೊನೆಯವರೆಗೂ ತನ್ನ ಸ್ವಂತದಿಂದ 250 ರೂಪಾಯಿಯನ್ನು ಪ್ರತಿತಿಂಗಳು ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದರು! ತಾನು ಊರಲ್ಲಿ ಇದ್ದರೂ ಇಲ್ಲದ್ದಿದ್ದರೂ ತಲುಪಬೇಕಾದ ಹತ್ತುಹಲವು ಮಂದಿಗೆ ಮನಿಯಾರ್ಡರ್ ತಪ್ಪದೆ ತಲುಪುತ್ತಿತ್ತು.

ಅವರ ಮಾನವೀಯ ಕಳಕಳಿಯನ್ನು ತಿಳಿದವನಾದುದರಿಂದ ಮನಸ್ಸು ಗಟ್ಟಿ ಮಾಡಿಕೊಂಡು ಎಷ್ಟೋ ಮಂದಿಗೆ ನೆರಳಾದ ಆ ಮಹಾಮನೆಯ ಬಾಗಿಲು ತಟ್ಟಿದೆ.

ಸಶೇಷ
ನಿರೂಪಣೆ: ಹರಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT