ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಪ್ರೇಮ: ಭ್ರಮೆ ಮತ್ತು ವಾಸ್ತವ

Last Updated 11 ಜನವರಿ 2014, 19:30 IST
ಅಕ್ಷರ ಗಾತ್ರ

ಮತ್ತೆ ಅದೇ ಪ್ರಶ್ನೆ. ಈ ಸಾರಿಯ ಮಡಿಕೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ.ಡಿಸೋಜ ಅವರೂ ಅದೇ ಪ್ರಶ್ನೆ ಎತ್ತಿದ್ದಾರೆ. ‘ಕನ್ನಡ ಉಳಿದೀತೆ’ ಎಂಬ ಪ್ರಶ್ನೆ ಅದು. ನಾರ್ಬರ್ಟ್ ಡಿಸೋಜ ಸಜ್ಜನ ಸಾಹಿತಿ. ಅವರು ಯಾರನ್ನಾದರೂ ಎಂದಾದರೂ ನೋಯಿಸಿದ್ದನ್ನು ಕಾಣೆ. ಕನ್ನಡ ಭಾಷೆಯ ಕಾರಣಕ್ಕಾಗಿಯೇ ಸಮ್ಮೇಳನದ ಕೊನೆಯ ದಿನ ಅವರು ‘ಆಸೆಬುರುಕ ಸಾಹಿತಿ’ಗಳನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ! ಸಾತ್ವಿಕರ ಸಿಟ್ಟಿಗೆ ಅರ್ಥ ಮತ್ತು ಮೌಲ್ಯ ಎರಡೂ ಜಾಸ್ತಿ. ಕನ್ನಡದ ಪರವಾಗಿ ಹೀಗೆ ಧ್ವನಿ ಎತ್ತಿದ ಮೊದಲಿಗರೂ ಅವರೇನಲ್ಲ. ಬಹುಶಃ ಕೊನೆಯವರೂ ಆಗಿರಲಾರರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗಲೆಲ್ಲ ಕನ್ನಡ ಭಾಷೆ ಉಳಿಸಬೇಕು ಎಂಬ ಕೂಗು ಹಿಂದೆಯೂ ಕೇಳಿ ಬರುತ್ತಿತ್ತು. ಮುಂದೆಯೂ ಕೇಳಿ ಬರುತ್ತದೆ. ಬಹುಶಃ ಅದಕ್ಕೆ ಕೊನೆ ಇರಲಾರದು.

ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚೆಯೇ 1941ರಲ್ಲಿ ಎ.ಆರ್‌.ಕೃಷ್ಣಶಾಸ್ತ್ರಿಗಳು ಹೈದರಾಬಾದಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಕನ್ನಡ ಭಾಷೆ ಎದುರಿಸುವ ಆತಂಕಗಳನ್ನು ಕುರಿತು ಆಡಿದ ಮಾತುಗಳನ್ನು ಯಾರೂ ಮರೆತಿರಲಾರರು. ಶಾಸ್ತ್ರಿಗಳು ಹೇಳಿದ್ದರು: ‘ನಮ್ಮ ದೇಶದಲ್ಲಿ ಬೌದ್ಧ ಧರ್ಮ ಖಿಲವಾಗಿ ಹೋದಂತೆ, ನಷ್ಟವಾಗಿ ಹೋದಂತೆ ಸಂಸ್ಕೃತವೂ ಆಗಿ ಹೋಗುವುದಾದರೆ, ಅದು ಹೊರದೇಶಗಳಲ್ಲಿ ಬದುಕಿರುತ್ತದೆ. ಬಾಳುತ್ತಿರುತ್ತದೆ. ಆದರೆ, ಕನ್ನಡ? ಕನ್ನಡಿಗರೇ, ನಿಮ್ಮ ಕನ್ನಡವನ್ನು ಇಂಡಿಯ ದೇಶದ ದಕ್ಷಿಣ ಭಾಗದಲ್ಲಿ ಒಂದು ಅಂಗೈ ಅಗಲ ಬಿಟ್ಟರೆ ಮತ್ತೆಲ್ಲಿಯೂ ನೋಡಲಾರಿರಿ. ನೀವು ಅದನ್ನು ಅಲಕ್ಷ್ಯ ಮಾಡಿದರೆ ಮಿಕ್ಕ ಯಾವ ದೇಶದ ಯಾವ ಜನರೂ ಅದನ್ನು ಎತ್ತಿ ಹಿಡಿಯಲಾರರು. ಅದು ಹೋದರೆ ಹೋಗಲಿ ಎನ್ನುವ ಹಾಗಿದ್ದರೆ, ಈ ಕಡೆ ಬಂಗಾಲ ಕೊಲ್ಲಿ ಇದೆ. ಆ ಕಡೆ ಅರಬ್ಬಿ ಸಮುದ್ರ ಇದೆ; ಗುಡಿಸಿ ಹಾಕಿಬಿಡಿ. ಇತರ ಭಾಷೆಗಳು ಒತ್ತಿಕೊಂಡು ಬರಲಿ, ಆಕ್ರಮಿಸಿಕೊಳ್ಳಲಿ!’

ಅವರು ಒಬ್ಬ ದೊಡ್ಡ ಸಂಸ್ಕೃತ ವಿದ್ವಾಂಸರಾಗಿದ್ದರು. ಆದರೂ ‘ಆ ಭಾಷೆ ಖಿಲವಾಗಿ, ನಷ್ಟವಾಗಿ ಹೋಗುವುದಾದರೆ ಹೋಗಲಿ’ ಎನ್ನಲು ಅವರಿಗೆ ಅಳುಕೇನೂ ಇರಲಿಲ್ಲ. ಆದರೆ, ಕನ್ನಡ ಭಾಷೆ ಬಗೆಗಿನ ಅವರ ಅಳುಕು ನಿಜವಾಗಿದೆ. ಕನ್ನಡಿಗರಿಗೇ ಕನ್ನಡ ಭಾಷೆ ಬೇಕಾಗಿದೆ ಎಂದು ಅನಿಸುವುದಿಲ್ಲ. ಇತ್ತ ಬಂಗಾಲ ಕೊಲ್ಲಿಗೆ, ಅತ್ತ ಅರಬ್ಬಿ ಸಮುದ್ರಕ್ಕೆ ಕನ್ನಡವನ್ನು ನಾವು ತಳ್ಳುವ ಕಾಲ ಬಹಳ ದೂರವೇನೂ ಇಲ್ಲ. ಅಥವಾ ಅದೇ ನಿಧಾನವಾಗಿ ಸರಿದು ಹೋಗಿ ಬಿಡಬಹುದು.

ಶಾಸ್ತ್ರಿಗಳ ಮಾತು ಗಮನಿಸಿದರೆ ನಮಗೆ ಆಗಲೇ ಇಂಗ್ಲಿಷ್‌ನ ಮೋಹ ಅಮರಿಕೊಳ್ಳತೊಡಗಿತ್ತು. ಕೃಷ್ಣಶಾಸ್ತ್ರಿಗಳಷ್ಟೇ ಹಿರಿಯರಾದ ವಿ.ಸೀತಾರಾಮಯ್ಯನವರೂ ‘ದೊಡ್ಡ ಬೆಳಕಿನ ಮೋಹದಿಂದ, ಕಾಣುವ ತಮ್ಮ ಕಣ್ಣನ್ನು ಕುರುಡು ಮಾಡಿಕೊಂಡವರ’ ಬಗ್ಗೆ ಮರುಕ ಪಟ್ಟಿದ್ದರು. ದೊಡ್ಡ ಬೆಳಕಿನ ಮೋಹ ಎಂದರೆ ಇಂಗ್ಲಿಷ್‌ ಮೋಹ ಎಂದು ನಾವು ಓದಿಕೊಳ್ಳಬೇಕು! ತಮಗೆ 1965ರಲ್ಲಿ ಆಗಿನ ಮೈಸೂರು ಸರ್ಕಾರ ‘ರಾಷ್ಟ್ರಕವಿ’ ಪ್ರಶಸ್ತಿ ಕೊಟ್ಟಾಗ ಕುವೆಂಪು ಮಾಡಿದ ಭಾಷಣವೂ ಕನ್ನಡಿಗರ ಇಂಗ್ಲಿಷ್‌ ಮೋಹದ ಕುರಿತೇ ಇತ್ತು. ಆಗ ಅವರು ಹೇಳಿದ್ದರು: ‘ಇಂಗ್ಲಿಷ್‌ ಭಾಷೆ ಬಲಾತ್ಕಾರದ ಸ್ಥಾನದಿಂದ ಐಚ್ಛಿಕ ಸ್ಥಾನಕ್ಕೆ ನಿಯಂತ್ರಣಗೊಳ್ಳದೇ ಇದ್ದರೆ, ಇಂಗ್ಲಿಷ್‌ ಶಿಕ್ಷಣ ತೊಲಗಿ ಪ್ರಾದೇಶಿಕ ಭಾಷೆಗೆ ಆ ಸ್ಥಾನ ಲಭಿಸದೇ ಇದ್ದರೆ ನಮ್ಮ ದೇಶ ಹತ್ತೇ ವರ್ಷಗಳಲ್ಲಿ ಸಾಧಿಸಬೇಕಾದುದನ್ನು ಇನ್ನೊಂದು ನೂರು ವರ್ಷ ಸಾಧಿಸಲಾರದೇ ನಿತ್ಯ ರೋಗಿಯಂತಿರಬೇಕಾಗುತ್ತದೆ... ನಮ್ಮ ಕಾರ್ಖಾನೆಗಳನ್ನೆಲ್ಲ ನಿಲ್ಲಿಸಿ, ಅಣೆಕಟ್ಟುಗಳನ್ನು ತಡೆಹಿಡಿದು, ಪ್ರಯೋಗ ಶಾಲೆ ಸಂಶೋಧನಾಗಾರಗಳನ್ನೆಲ್ಲ ವಜಾ ಮಾಡಿ ಹಲವು ಪಂಚ ವಾರ್ಷಿಕ ಯೋಜನೆಗಳ ಹಣವನ್ನೆಲ್ಲ ಇಂಗ್ಲಿಷ್‌ ಸ್ಟಾಂಡರ್ಡ್‌ ಅನ್ನು ಉತ್ತಮಗೊಳಿಸುವುದಕ್ಕಾಗಿಯೇ ವೆಚ್ಚ ಮಾಡಿದರೂ, ಇನ್ನೂ ನೂರು ವರ್ಷಗಳ ಅನಂತರವೂ ನಮ್ಮ ಮಕ್ಕಳ ಇಂಗ್ಲಿಷ್‌ನ ಜ್ಞಾನ ಈಗಿರುವುದಕ್ಕಿಂತ ಮೇಲಕ್ಕೇರುವುದಿಲ್ಲ...’

ಆದರೆ, ನಾವು ಇಂಥ ಯಾವ ದೃಷ್ಟಾರರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಕನ್ನಡ ಭಾಷೆ ಮತ್ತು ಕನ್ನಡ ಮಾಧ್ಯಮದ ಬಗ್ಗೆ ನಮಗೆ ಕೀಳರಿಮೆ ಇದೆ. ಇಂಗ್ಲಿಷ್‌ ಭಾಷೆ ಮತ್ತು ಮಾಧ್ಯಮದ ಬಗ್ಗೆ ನಮಗೆ ಎಲ್ಲಿಲ್ಲದ ಒಲವು ಇದೆ. ಇದು ಶಿಕ್ಷಿತ ವರ್ಗದ ಮಾತು ಮಾತ್ರವಲ್ಲ. ಮನೆಗೆ ಕೆಲಸಕ್ಕೆ ಬರುವ ಹಳ್ಳಿಯ ಹೆಣ್ಣು ಮಗಳಿಗೂ, ತರಕಾರಿ ತರುವ ಗಂಡು ಮಗನಿಗೂ ಅದೇ ಭ್ರಮೆ; ಕಣ್ಣ ಪೊರೆ.

ನಾನು ಬಿ.ಎ ಓದಿದ್ದು 1970ರ ದಶಕದಲ್ಲಿ. ಕುವೆಂಪು ಅವರ ‘ಕನ್ನಡಕ್ಕಾಗಿ ಕೈ ಎತ್ತು...’ ಓದಿ ‘ಉಗ್ರ’ ಕನ್ನಡ ಅಭಿಮಾನ ಬೆಳೆಸಿಕೊಂಡವನು. ನಮ್ಮ ಕನ್ನಡ ಪ್ರೇಮವನ್ನು ಜವರೇಗೌಡರು, ಹಾ.ಮಾ.ನಾಯಕರು ಪೊರೆದವರು; ಪೋಷಿಸಿದವರು. ಇಂಗ್ಲಿಷ್‌ ಅನ್ನು ಒಂದು ಮಾಧ್ಯಮವಾಗಿ ಕಲಿಯುವುದಕ್ಕೂ ಭಾಷೆಯಾಗಿ ಕಲಿಯುವುದಕ್ಕೂ ಇರುವ ವ್ಯತ್ಯಾಸವನ್ನು ಜವರೇಗೌಡರು ಮತ್ತು ನಾಯಕರಷ್ಟು ಬಿಡಿಸಿ ಹೇಳಿದವರು ಬೇರೆ ಯಾರೂ ಇರಲಾರರು. ಕನ್ನಡ ಮಾಧ್ಯಮದಲ್ಲಿಯೇ ಓದಬೇಕು ಎಂದು ನಾನೂ ಹಟ ಹಿಡಿದೆ. ಆಗಲೇ ಕನ್ನಡದಲ್ಲಿ ಸಹಿ ಮಾಡಲೂ ಶುರು ಮಾಡಿದೆ. ನನ್ನ ವಾರಿಗೆಯವರೆಲ್ಲ ಹಾಗೆಯೇ. ಅವರೆಲ್ಲ ಕನ್ನಡದಲ್ಲಿಯೇ ಸಹಿ ಮಾಡುವುದನ್ನು ರೂಢಿ ಮಾಡಿಕೊಂಡರು. ಕನ್ನಡದ ಪ್ರೇಮ ನಮಗೆ ಒಂದು ವ್ರತವಾಗಿತ್ತು. ಒಂದು ದೀಕ್ಷೆಯಾಗಿತ್ತು. ಬಿ.ಎ ಓದುವಾಗ ಮಾನವಿಕ ವಿಷಯಗಳನ್ನೂ ನಾನು ಕನ್ನಡ ಮಾಧ್ಯಮದಲ್ಲಿಯೇ ಓದಿದೆ; ಪರೀಕ್ಷೆಯನ್ನು ಬರೆದೆ. ಆದರೆ, ಇಂಗ್ಲಿಷ್‌ ಮಾಧ್ಯಮದಲ್ಲಿ ಬರೆಯುತ್ತಿದ್ದ ನನ್ನ ಸಹಪಾಠಿಗಳಿಗಿಂತ ಕನ್ನಡ ಮಾಧ್ಯಮದಲ್ಲಿ ಬರೆದ ನನಗೆ ಕಡಿಮೆ ಅಂಕಗಳು ಬರುತ್ತಿದ್ದುವು. ಹಾಗಾದರೆ, ಜವರೇಗೌಡರು, ನಾಯಕರು ಹೇಳುವುದು ಸರಿಯಲ್ಲವೇ ಎಂದು ಯೋಚನೆ ಶುರುವಾಯಿತು. ಕನ್ನಡ ಮಾಧ್ಯಮದಲ್ಲಿ ಓದಿದರೆ ಬೇಗ ಅರ್ಥವಾಗುತ್ತದೆ ಮತ್ತು ಹೆಚ್ಚು ಅರ್ಥವಾಗುತ್ತದೆ. ಅರ್ಥವಾದುದನ್ನು ಬರೆಯಲೂ ಸುಲಭವಾಗುತ್ತದೆ ಎಂದು ಅವರು ಸರಿಯಾಗಿಯೇ ಹೇಳಿದ್ದರು.

ಆದರೆ, ಇಲ್ಲಿ ವ್ಯತ್ಯಾಸವಾಗಿತ್ತು. ಇಂಗ್ಲಿಷ್‌ ಮಾಧ್ಯಮದಲ್ಲಿ ಬರೆದವರಿಗೆ ಹೆಚ್ಚು ಅಂಕಗಳು ಸಿಗುತ್ತಿದ್ದುವು. ಅವರೆಲ್ಲರ ಇಂಗ್ಲಿಷ್‌ ಹೇಗೆ ಇತ್ತು ಎಂದು ನನಗೆ ಗೊತ್ತಿತ್ತು. ಅಂದರೆ ಮೌಲ್ಯಮಾಪಕರು ಕನ್ನಡ ಮಾಧ್ಯಮದಲ್ಲಿ ಬರೆದ ಉತ್ತರ ಪತ್ರಿಕೆಗಳಿಗೆ ಹೆಚ್ಚು ಅಂಕಗಳನ್ನು ಕೊಡುತ್ತಿರಲಿಲ್ಲ. ವಿ.ಸೀ ಅವರ ಮಾತಿನಲ್ಲಿ ಹೇಳುವುದಾದರೆ ‘ಪ್ರದೇಶ ಭಾಷೆಯಲ್ಲಿ ಬರೆಯುವವರು ಪತಿತರು’ ಎಂಬ ಭಾವನೆ ನಮ್ಮ ಮೌಲ್ಯಮಾಪಕರಿಗೆ ಇತ್ತೇನೋ? ನನಗೆ ಅವಮಾನ ಆದಂತೆ ಆಯಿತು. ವಾಚಕರ ವಾಣಿಗೆ ಪತ್ರ ಬರೆದೆ. ಕರ್ನಾಟಕ ವಿಶ್ವವಿದ್ಯಾಲಯದ ಆಗಿನ ಕುಲಪತಿಗಳಾದ ಡಾ.ಆರ್‌.ಸಿ.ಹಿರೇಮಠ ಅವರಿಗೂ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಪತ್ರ ಬರೆದೆ. ಅವರು ನನಗೆ ಏನೋ ಸಮಾಧಾನ ಹೇಳಿ ಉತ್ತರ ಬರೆದರು. ಪರಿಸ್ಥಿತಿ ಬದಲಾಗಲಿಲ್ಲ; ನನ್ನ ಹಟವೂ ಕಡಿಮೆ ಆಗಲಿಲ್ಲ. ಕನ್ನಡದಲ್ಲಿಯೇ ಸ್ನಾತಕೋತ್ತರ ಪದವಿಯನ್ನೂ ತೆಗೆದುಕೊಂಡೆ. ಅಲ್ಲಿಯೂ ಕನ್ನಡ ಎಂ.ಎ ಮಾಡುವವರಿಗೆ ಕಡಿಮೆ ಅಂಕಗಳೇ ಬರುತ್ತಿದ್ದುವು. ಪ್ರಥಮ ದರ್ಜೆಯಲ್ಲಿ ಪಾಸಾಗುವುದು ಎಂದರೇ ದೊಡ್ಡ ಸಾಧನೆ ಮಾಡಿದಂತೆ. ಪದವಿ ಮುಗಿಸಿ ಹೊರಗೆ ಬಂದ ನಂತರ ನೌಕರಿ ಹಿಡಿಯುವುದು ನಮಗೆ ಕಷ್ಟವಾಗುತ್ತಿತ್ತು. ಏಕೆಂದರೆ ಬೇರೆ ವಿಷಯಗಳಲ್ಲಿ ಪದವಿ ಮಾಡಿದವರಿಗೆ ಹೆಚ್ಚು ಅಂಕಗಳು ಸಿಗುತ್ತಿದ್ದುವು. ಬಹುಶಃ ತಮ್ಮ ಗುರುಗಳು ಕೊಟ್ಟ ಕಡಿಮೆ ಅಂಕಗಳ ಸೇಡನ್ನು ನಮ್ಮ ಗುರುಗಳು ನಮ್ಮ ಮೇಲೆ ತೀರಿಸಿಕೊಳ್ಳುತ್ತಿದ್ದರೋ ಏನೋ!

ನನಗಿಂತ ಎರಡು ವರ್ಷ ಮುಂಚೆಯೇ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ನೌಕರಿ ಸಿಗದೇ ಆಗಲೇ ರಾಜ್ಯ ಲೋಕಸೇವಾ ಆಯೋಗದ ಕಚೇರಿ ಎದುರು ಬೂಟು ಪಾಲಿಷ್‌ ಮಾಡಿದ್ದರು. ನಮಗೇನೂ ಭಾರಿ ದೊಡ್ಡ ಆಸೆಗಳು ಇರಲಿಲ್ಲ. ಯಾವುದಾದರೂ ಒಂದು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಆದರೆ ಸಾಕು ಎಂದುಕೊಂಡಿದ್ದೆವು. ಆಸೆ ಈಡೇರಲಿಲ್ಲ. ಮತ್ತೆ ಅವಮಾನ ಆದಂತೆ ಆಯಿತು. ಕೇವಲ ಪ್ರೀತಿಯಿಂದ, ಅಭಿಮಾನದಿಂದ ನಾವು ಕನ್ನಡದ ಕೈ ಹಿಡಿದೆವು. ಆದರೆ, ಅದು ನಮ್ಮ ಕೈ ಬಿಡುತ್ತಿದೆ ಎಂದು ಭಯವಾಯಿತು. ನನ್ನ ಅನೇಕ ವಾರಿಗೆಯವರಿಗೂ ಇದೇ ಅನುಭವವಾಯಿತು. ದೇವರ ದಯದಿಂದ ನಾವೆಲ್ಲ ಪ್ರಜಾವಾಣಿ ಸೇರಿಕೊಂಡೆವು. ಆದರೆ, ಆಗಾಗಲೇ ನಾನು ಎಂ.ಎ ಮಾಡಿ ನಾಲ್ಕು ವರ್ಷ ಆಗಿತ್ತು. ದೇವರ ದಯ ಇಲ್ಲದ ನನ್ನ ಅನೇಕ ಸಹಪಾಠಿಗಳು ಏನಾಗಿ ಹೋದರೋ ಗೊತ್ತಾಗಲಿಲ್ಲ! ಈಗಲಂತೂ ಕನ್ನಡ ಎಂ.ಎ ಓದಿದವರ ಸ್ಥಿತಿ ಇನ್ನೂ ಕೆಟ್ಟದಾಗಿದೆ. ಆದರೆ, ವ್ಯತ್ಯಾಸವೇನು ಎಂದರೆ ನಾವು ಕನ್ನಡ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದರೂ ನಮಗೆ ಅಂಕ ಕೊಡುತ್ತಿರಲಿಲ್ಲ. ಈಗ ಮಾಸ್ತಿ ಎಂದರೆ ಏನು ಎಂದು ಕೇಳುವವರಿಗೆ ಶೇಕಡಾ 70–80 ಅಂಕಗಳು ಸಿಗುತ್ತವೆ! ಕನ್ನಡ ಎಂ.ಎ ಓದಿದವರಿಗೆ ಆಗಲೂ ಅನ್ಯಾಯ ಆಯಿತು. ಈಗಿನದಂತೂ ತೀರಾ ಅನ್ಯಾಯ!

ನನ್ನ ಮಕ್ಕಳನ್ನು ಶಾಲೆಗೆ ಸೇರಿಸುವ ವೇಳೆಗೆ ನನಗೆ ಕನ್ನಡ ಮಾಧ್ಯಮದ ಶಿಕ್ಷಣದಲ್ಲಿ ನಂಬಿಕೆ ಹೋಗಿರಲಿಲ್ಲ. ಈಗಲೂ ಹೋಗಿಲ್ಲ. ಆದರೆ, ಸೀದಾ ಹೋಗಿ ಅವರನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಹಾಕಿ ಬಂದೆ. ‘ನಾನು ಕನ್ನಡ ಓದಿ ಪಡಿಪಾಟಲು ಪಟ್ಟುದು ಸಾಕು, ನೀವು ಬೇರೆ ಏನನ್ನಾದರೂ ಓದಿ’ ಎಂದು ಅವರ ಪಾಡಿಗೆ ಅವರನ್ನು ಬಿಟ್ಟು ಬಿಟ್ಟೆ. ನನ್ನ ವಾರಿಗೆಯ ಯಾರೂ ತಮ್ಮ ಮಕ್ಕಳನ್ನು ಕನ್ನಡ ಎಂ.ಎಗೆ ಹಾಕಲಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಅವರ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯಲಿಲ್ಲ ಎಂದೂ ಗೊತ್ತಿದೆ. ಆದರೆ, ನಾವು ಬಿಡಿ ಕನ್ನಡದ ಲೇಖಕರು ಮಾಡಿದ ತಪ್ಪು ಏನು ಎಂದರೆ ಅವರಲ್ಲಿಯೂ ಬಹುತೇಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೇ ಹಾಕಿದರು. ಆದರೆ, ಅವರು ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿಲ್ಲ. ಜನರಿಗೆ ಕನ್ನಡ ಅನ್ನದ ಭಾಷೆ ಎಂದು ಅನಿಸಲಿಲ್ಲ ಎಂದು ಹೇಳಲು ಇಷ್ಟೆಲ್ಲ ಹೇಳಿದೆ. ಕನ್ನಡವನ್ನು ಹಟದಿಂದ ಓದಿದ ನಮಗೇ ಅದು ಅನ್ನದ ಭಾಷೆ ಎಂದು ಅನಿಸದೇ ಇದ್ದರೆ ಮನೆ ಕೆಲಸಕ್ಕೆ ಬರುವ ಹೆಂಗಸಿಗೆ, ತರಕಾರಿ ಮಾರುವ ಗಂಡಸಿಗೆ ಏಕೆ ಅನಿಸಬೇಕು? ಅಭಿಮಾನ ಎಂದರೆ ಏನು? ಅದು ಹೇಗೆ ಬರುತ್ತದೆ? ಏಕೆ ಬರುತ್ತದೆ? ಇವೆಲ್ಲ ಸುಲಭದ ಪ್ರಶ್ನೆಗಳು ಎಂದು ನಾನು ಅಂದುಕೊಂಡಿಲ್ಲ.

ಹೌದು, ಒಂದು ಭಾಷೆಯ ಮೇಲೆ ಸುಮ್ಮನೆ ಅಭಿಮಾನ ಬಂದು ಬಿಡುವುದಿಲ್ಲ. ಎಲ್ಲ ಕಡೆಯಿಂದ ಪರಭಾಷಾ ದಾಳಿ ಅನುಭವಿಸಿರುವ ಕರ್ನಾಟಕದಲ್ಲಿ ಕನ್ನಡ ಭಾಷೆಯ ಸ್ಥಿತಿ ಇನ್ನೂ ಶೋಚನೀಯವಾಗಿದೆ. ಕೆಲವು ವರ್ಷಗಳ ಹಿಂದೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಯುತ್ತ ಕುಳಿತಿದ್ದೆ. ನನ್ನ ಹಿಂದಿನ ಸೀಟಿನಲ್ಲಿ ತಾಯಿ, ಮಗಳು ಮತ್ತು ಮೊಮ್ಮಗಳು ಕುಳಿತು ತಮ್ಮ ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. ಅವರು ಮೂವರೂ ತಮಿಳು ಭಾಷೆಯಲ್ಲಿಯೇ ಮಾತನಾಡುತ್ತಿದ್ದರು. ಮತ್ತು ಅವರು ಮುಸ್ಲಿಮರಾಗಿದ್ದರು. ಕೇರಳದಲ್ಲಿಯೂ ಹೀಗೆಯೇ ಅಲ್ಲಿನ ಪ್ರಾದೇಶಿಕ ಭಾಷೆ ಎಲ್ಲರ ಮನೆ ಮಾತಿನ ಭಾಷೆಯೂ ಆಗಿದೆ. ಇದು ಅನ್ನದ ಭಾಷೆಯನ್ನು ಮೀರಿದ ಆತ್ಮದ ಭಾಷೆಯ ಅಭಿಮಾನ.

ಆದರೆ, ಕರ್ನಾಟಕದಲ್ಲಿ ಕನ್ನಡಕ್ಕೆ ಆ ಸ್ಥಾನ ಇಲ್ಲ. ಸಿಗುವಂತೆಯೂ ಕಾಣುವುದಿಲ್ಲ. ಸುಮ್ಮನೆ ಸರ್ಕಾರಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂದೆಲ್ಲ ಮಾಡಿದರೆ ಅದರಿಂದ ಕನ್ನಡಕ್ಕೆ ಮೂರು ಕಾಸಿನ ಪ್ರಯೋಜನ ಆಗುವುದಿಲ್ಲ. ಕರ್ನಾಟಕ ರಕ್ಷಣಾ ವೇದಿಕೆಯಂಥ ಸಂಘಟನೆಗಳನ್ನು ಕಟ್ಟಿಕೊಂಡು ಹೋರಾಡುವವರಿಂದಲೂ ಕನ್ನಡಕ್ಕೆ ಏನಾದರೂ ಪ್ರಯೋಜನ ಆಗುತ್ತದೆ ಎಂದು ನನಗೆ ಯಾವತ್ತೂ ಅನಿಸಿಲ್ಲ. ಹಾಗಾದರೆ ಕನ್ನಡ ಉಳಿಯುತ್ತದೆಯೇ?

​ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಂಥ ಭಾಷಾ ವಿಜ್ಞಾನಿಗಳು ಭರವಸೆ ಕೊಡುವ ಹಾಗೆ ಕನ್ನಡ ಭಾಷೆ ಇನ್ನೂ ಸಾವಿರಾರು ವರ್ಷ ಸಾಯದೇ ಉಳಿಯಬಹುದು. ಅದಕ್ಕೆ ಭಾಷೆಗೇ ಇರುವ ಸಹಸ್ರಮಾನಗಳ ಶಕ್ತಿ ಕಾರಣವೇ? ಕನ್ನಡಿಗರ ಅಲ್ಪ ಸ್ವಲ್ಪ ಅಭಿಮಾನ ಕಾರಣವೇ? ಮತ್ತೆ ಅದೇ ಪ್ರಶ್ನೆ. ಬರೀ ಸಾಹಿತ್ಯ ಸಮ್ಮೇಳನಕ್ಕೆ ಮಾತ್ರ ಭಾಷೆಯ ಪ್ರಶ್ನೆ ಸೀಮಿತವೇ? ಉತ್ತರ ಯಾರ ಬಳಿ ಇದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT