ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವಿಗೆ ಕುಳಿತಿರುವ ಒಂದು ಅಗ್ನಿ‘ಪ್ರಳಯ’

Last Updated 8 ಜನವರಿ 2017, 19:30 IST
ಅಕ್ಷರ ಗಾತ್ರ

ಕಲ್ಲಿದ್ದಲು ಗಣಿಗಳಡಿ ಬಡ ಕಾರ್ಮಿಕರ ಜೀವಂತ ಸಮಾಧಿಯ ಪ್ರಕರಣಗಳು ಬಿಟ್ಟೂ ಬಿಡದೆ ಮರುಕಳಿಸುವ ದುರಂತಗಳು. ಹೊಸ ವರ್ಷದ ಹೊಸ್ತಿಲಲ್ಲಿ ಜಾರ್ಖಂಡದ ಗೊಡ್ಡಾ ಗಣಿ ದುರಂತದಲ್ಲಿ ಹತ್ತಕ್ಕೂ ಹೆಚ್ಚು ಕಾರ್ಮಿಕರು ಅಸುನೀಗಿದರು. ಸುರಕ್ಷತಾ ಕ್ರಮಗಳ ಕೊರತೆಯೇ ಈ ದುರಂತಗಳ ಮೂಲ ಕಾರಣಗಳು. ಈ ಕಟು ವಾಸ್ತವ ಮತ್ತೆ ಮತ್ತೆ ಮುಖಕ್ಕೆ ರಾಚಿದರೂ ಕಲ್ಲು ಹೃದಯಗಳು ಕರಗುವುದಿಲ್ಲ.

ನೂರಾರು ಅಡಿಗಳ ಆಳದ ನಿಶ್ಶಬ್ದ ನರಕದಲ್ಲಿ ಕಲ್ಲಿದ್ದಲ  ನಿಕ್ಷೇಪವನ್ನು ಕಡಿದು ಸಾಗಿಸುವ ಶ್ರಮಜೀವಿಯ ಪ್ರಾಣಕ್ಕೆ ಕಿಲುಬು ಕಾಸಿನ ಕಿಮ್ಮತ್ತೂ ಇಲ್ಲ. ಯಾಕೆಂದರೆ ಶ್ರಮಜೀವಿಯ ಮರಣ ದೇಶಭಕ್ತಿ ಅಲ್ಲವೇ ಅಲ್ಲ. ಈ ಸಾವಿನ ಸರಣಿಯನ್ನು ತುಂಡು ಮಾಡುವ ಮಾನವೀಯ ಮನಸುಗಳು ಸ್ವಾರ್ಥ ಮತ್ತು ಕ್ರೌರ್ಯದ ಬೆಂಗಾಡಿನಲ್ಲಿ ಅರಳುತ್ತಲೇ ಇಲ್ಲ.

ಇಂತಹ ರುದ್ರ ನಾಟಕಗಳ ಸಾವಿರಾರು ಪಟ್ಟು ದೈತ್ಯ ದುರಂತವೊಂದು ಪೂರ್ವ ಭಾರತದಲ್ಲಿ ಕಾವಿಗೆ ಕುಳಿತಿದೆ. ಅದು ‘ಸ್ಫೋಟಿಸಿದ’ ಗಳಿಗೆಯಲ್ಲಿ ಲಕ್ಷಾಂತರ ಬಡಜನರ ಸಾಮೂಹಿಕ ಮಾರಣಹೋಣ ಜರುಗಲಿದೆ. ಜಾರ್ಖಂಡದ ಧನಬಾದ್ ಸೆರಗಿನ ಝರಿಯಾ, ದೇಶದ ಕಲ್ಲಿದ್ದಲ  ರಾಜಧಾನಿ ಎಂದೇ ಪ್ರಸಿದ್ಧ.

ಇಲ್ಲಿನ ಕಲ್ಲಿದ್ದಲ ಅಪಾರ ನಿಕ್ಷೇಪವನ್ನು ಕಪ್ಪು ವಜ್ರವೆಂದೇ ಕರೆಯಲಾಗುತ್ತದೆ. ಕಬ್ಬಿಣವನ್ನು ಕರಗಿಸಿ ಉಕ್ಕು ಉತ್ಪಾದಿಸುವ ಕುಲುಮೆಗಳಿಗೆ ಝರಿಯಾದ ಅತ್ಯುತ್ತಮ ಗುಣಮಟ್ಟದ ಕಲ್ಲಿದ್ದಲು ಅತ್ಯಂತ ಪ್ರಶಸ್ತ. ನೆಲಮಟ್ಟದಿಂದ ಹತ್ತಿಪ್ಪತ್ತು ಅಡಿಗಳ ಆಳದಲ್ಲಿ ದೊರೆತಿರುವ ಈ ವರ ಸ್ಥಳೀಯ ಬಡಜನರ ಪಾಲಿನ ಅಭಿಶಾಪ.

ನಾಲ್ಕೂ ಕಾಲು ಲಕ್ಷ ಜನಸಂಖ್ಯೆಯ ಪುಟ್ಟ ಪೇಟೆ ಝರಿಯಾ. 700 ಡಿಗ್ರಿ ಸೆಂಟಿಗ್ರೇಡ್ ಶಾಖದ ಕಲ್ಲಿದ್ದಲ  ಕೆಂಡದ ಹೊಂಡಗಳ ಅಗ್ನಿಗರ್ಭದ ಮೇಲೆ ಮಲಗಿದೆ. ನಾಲ್ಕು ಲಕ್ಷ ಮಂದಿ ಉಂಡು ಉಸಿರಾಡಿ ನಡೆದಾಡಿರುವ ಸಾವಿರಾರು ಎಕರೆಗಳ ನೆಲದಡಿಯನ್ನು ದಾವಾನಲ ಆಕ್ರಮಿಸಿದೆ. 20 ಅಡಿಗಳ ಆಳದಲ್ಲಿ ಹಬ್ಬಿ ಹರಡಿ ಅಬ್ಬರಿಸಿರುವ ಬೆಂಕಿಯ ಒಡಲಿಗೆ ಹಳ್ಳಿ ಹಳ್ಳಿಗಳೇ ಕುಸಿದು ಕಾಣೆಯಾಗತೊಡಗಿವೆ.

ಅಲ್ಲಲ್ಲಿ ಬಿರುಕು ಬಿಟ್ಟು ಬಾಯಿ ತೆರೆದ ಭೂಮಿಯಿಂದ ಚಾಚಿದ ಕೆನ್ನಾಲಿಗೆಗಳು ಬಡಜನರ ಸಾವಿರಾರು ಸೂರುಗಳನ್ನು ನೆಲಕ್ಕೆ ಕೆಡವಿ ನುಂಗಿವೆ. ಸಾವಿರಾರು ಕಟ್ಟಡಗಳು ಬಿರುಕು ಬಿಟ್ಟಿವೆ. ರೈಲು ಮಾರ್ಗವೊಂದು ಸಾರಾಸಗಟಾಗಿ ಭೂ ತಳಕ್ಕೆ ಇಳಿದು ಹೋಗಿದೆ. ಕೆಲ ರೈಲು ಮಾರ್ಗಗಳನ್ನು ಮುಚ್ಚಲಾಗಿದೆ.

ಪ್ರಮುಖ ರೈಲು ನಿಲ್ದಾಣವೊಂದು ಪಾಳು ಬಿದ್ದಿದೆ. ಅಗಲ ಡಾಂಬರು ರಸ್ತೆಗಳು ಅವಶೇಷಗಳಾಗಿ ಹೋಗಿವೆ. ಲಾಲಟೆನ್ ಗಂಜ್, ಭಗತ್ ಡೀಹ, ಕುಕುರ್ ತೋಪ, ಬಾಗ್ಡಿಗಿ, ಇಡಲೀಪಟ್ಟಿ ಮುಂತಾದ ಹಳ್ಳಿಗಳ ಅಸ್ತಿತ್ವ ಈಗಾಗಲೆ ಅಳಿಸಿ ಹೋಗಿದೆ. 450 ಚದರ ಕಿ.ಮೀ. ಭೂಪ್ರದೇಶ ಧ್ವಸ್ತವಾಗಿದೆ.

ದೇಶದ ಮೂರನೆಯ ಎರಡರಷ್ಟು ವಿದ್ಯುಚ್ಛಕ್ತಿ ಉತ್ಪಾದನೆಗೆ ಕಲ್ಲಿದ್ದಲೇ ಇಂಧನ ಮೂಲ. ಝರಿಯಾ ಸೀಮೆಯ ಕಲ್ಲಿದ್ದಲನ್ನು ಹೊರತೆಗೆಯಲು ಆಳದ ಗಣಿಗಾರಿಕೆಯ ಅಗತ್ಯವಿಲ್ಲ. ಬ್ರಿಟಿಷ್ ಆಡಳಿತ ಕಣ್ಣು ಹಾಕಿ ಬೇಕಾಬಿಟ್ಟಿ ಅಗೆಸಿತು. ವೈಜ್ಞಾನಿಕ ವಿಧಾನವನ್ನು ಗಾಳಿಗೆ ತೂರಿ ಮನಬಂದಂತೆ ಅಗೆದು ತೆಗೆಯುವ ಇಂತಹ ವಿಧಾನವನ್ನು ‘ಕಸಾಯಿ ಗಣಿಗಾರಿಕೆ’ (Slaughter Mining) ಎಂದು ಕರೆಯಲಾಗುತ್ತದೆ.

ಕಲ್ಲಿದ್ದಲನ್ನು ಹೊರತೆಗೆದ ನಂತರ ಉಳಿಯುವ ಹೊಂಡಕ್ಕೆ ಮರಳು ತುಂಬಿ ಭರ್ತಿ ಮಾಡಬೇಕು. ಹಾಗೆ ಮಾಡದೆ ಬಾಯಿ ತೆರೆದ ಹೊಂಡಗಳಲ್ಲಿ ಅಳಿದುಳಿದ ಕಲ್ಲಿದ್ದಲು ನೈಸರ್ಗಿಕ ದಹನ ಕ್ರಿಯೆಯನ್ನು ಆಕರ್ಷಿಸಿ ಹೊತ್ತಿದ ಬೆಂಕಿಯಿದು. ಹತ್ತಿರ ಹತ್ತಿರ ನೂರುಕೋಟಿ ಟನ್ನುಗಳಷ್ಟು ಕಲ್ಲಿದ್ದಲು ಈವರೆಗೆ ಉರಿದು ಬೂದಿಯಾಗಿದೆ.

1933ರಷ್ಟು ಹಿಂದೆಯೇ ಭೂಗರ್ಭದ ಬೆಂಕಿಗೆ ನೆಲ ಕುಸಿದು ಸ್ಥಳೀಯರು ಊರು ತೊರೆದ ದಾಖಲೆಗಳಿವೆ. 1934ರ ಬಿಹಾರ ಭೂಕಂಪ ಈ ಜ್ವಾಲೆಗಳು ಇನ್ನಷ್ಟು ದೂರ ದೂರಕ್ಕೆ ಚಾಚಲು ಕಾರಣ ಆಯಿತು. ಊರಿನ ನೆಲದ ಕೆಳಗೆ ಉರಿದು ಮೊರೆಯುವ ಬೆಂಕಿ ಹಬ್ಬಿ ಹರಡಿದೆ ಎಂದು 1938ರ ಹೊತ್ತಿಗೆ ಬ್ರಿಟಿಷ್ ಸರ್ಕಾರವೇ ಅಧಿಕೃತವಾಗಿ ಸಾರಿಬಿಟ್ಟಿತ್ತು. ಈ ಸೀಮೆಯ 133 ಕಲ್ಲಿದ್ದಲು ಗಣಿತಾಣಗಳ ಪೈಕಿ 42 ಆಗಲೇ ಹೊತ್ತಿ ಉರಿಯತೊಡಗಿದ್ದವು. ಬಿರುಕುಗಳಿಂದ ಹೊರಚಾಚಿರುವ ಜ್ವಾಲೆಗಳ ಎತ್ತರ ಕೆಲವೆಡೆ 60 ಅಡಿಗಳು ತಲುಪಿದೆ.

1916ರಲ್ಲಿ ಮೊದಲ ಸಲ ಹೊತ್ತಿ ಎಡೆಬಿಡದೆ ಉರಿದಿರುವ ಈ ಬೆಂಕಿಗೆ ಇದೀಗ ನೂರು ವರ್ಷದ ಪ್ರಾಯ. 1976ರ ಹೊತ್ತಿಗೆ ಭೂಗರ್ಭದ ಈ ಬೆಂಕಿ 72 ತಾವುಗಳಲ್ಲಿ ನೆಲದ ಮೇಲ್ಪದರ ಸೀಳಿ ಧಗಧಗಿಸಿತ್ತು. ಇನ್ನೂ 3,800 ವರ್ಷಗಳ ಕಾಲ ಹೊತ್ತಿ ಉರಿಯುವಷ್ಟು ನಿಕ್ಷೇಪ ಇಲ್ಲಿದೆ ಎನ್ನಲಾಗಿದೆ.

ಚಟಪಟ ಸದ್ದಿನೊಂದಿಗೆ ಉರಿವ ಕಿತ್ತಳೆ ಕೆಂಡದ ಹೊಂಡಗಳಿಂದ ಹುಟ್ಟಿ ದಶದಿಕ್ಕುಗಳ ಆವರಿಸಿ ಮುತ್ತಿದ ದಟ್ಟ ಧೂಮ. ವಾಕರಿಕೆ ಬರಿಸುವ ಇಂಗಾಲ ಮತ್ತು ಗಂಧಕದ ಕಮಟು ನಾತದ ಬಿಸಿ ಭಾರ ಗಾಳಿ. ನಡುವೆ ಬದುಕಿಗಾಗಿ ಹೋರಾಟ ನಡೆದಿದೆ ಇಲ್ಲಿ.  ಇರುಳಿನಲ್ಲಿ  ಕಣ್ಣು ಹಾಯಿಸಿದರೆ ಸಾವಿರಾರು ಚಿತೆಗಳನ್ನು ಒಟ್ಟಿಗೆ ಹೊತ್ತಿಸಿದಂತಹ ಬೀಭತ್ಸದ ದೃಶ್ಯ.

ಹಸಿರಿನ ಪಸೆಯಿಲ್ಲದೆ ನೋಟ ಹರಿದಷ್ಟೂ ದೂರಕ್ಕೆ ಸುಡುಗಾಡಾಗಿ ಬದಲಾಗಿರುವ ಸೀಮೆ. ಹೆಜ್ಜೆ ಹೆಜ್ಜೆಗೆ ಬಿರುಕು ಬಿಟ್ಟು ಭುಸುಗುಟ್ಟಿ, ಟನ್ನುಗಟ್ಟಲೆ ವಿಷಾನಿಲಗಳು ಕಪ್ಪು ಹೊಗೆಯನ್ನು ಇಲ್ಲಿ ವಾತಾವರಣಕ್ಕೆ ತೂರತೊಡಗಿದ್ದಾಳೆ ವಸುಂಧರೆ. ಕ್ಷಯ, ಶ್ವಾಸಕೋಶದ ಕ್ಯಾನ್ಸರ್, ಚರ್ಮರೋಗಗಳು, ಅಲರ್ಜಿಗಳು, ಅಕಾಲ ಮುಪ್ಪು ಮುಂತಾದ ಪೀಡೆಗಳು ಜನರನ್ನು ಕಾಡತೊಡಗಿವೆ. ಒಂದು ಅಂದಾಜಿನ ಪ್ರಕಾರ 1.20 ಲಕ್ಷ ಮಂದಿ ಅಕಾಲ ಮರಣಕ್ಕೆ ಬಲಿಯಾಗಿದ್ದಾರೆ.

ಈ ಬೆಂಕಿಯನ್ನು ಆರಿಸುವ ಪ್ರಯತ್ನಗಳು ಸಫಲವಾಗಿಲ್ಲ. ಬದಲಾಗಿ ಇಲ್ಲಿನ ಜನವಸತಿಯನ್ನು ಖಾಲಿ ಮಾಡಿಸಿ ಬಯಲು ಗಣಿಗಾರಿಕೆಯನ್ನು ಇನ್ನಷ್ಟು ವ್ಯಾಪಕಗೊಳಿಸುವ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ (ಬಿಸಿಸಿಎಲ್) ಗುಪ್ತ ಕಾರ್ಯಸೂಚಿ ಈಗ ಗುಟ್ಟಾಗಿ ಉಳಿದಿಲ್ಲ. 2020ರ ವೇಳೆಗೆ ಕಲ್ಲಿದ್ದಲಿನ ಉತ್ಪಾದನೆಯನ್ನು ದುಪ್ಪಟ್ಟು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಈ ನಡುವೆ ತಾಕೀತು ಮಾಡಿದ್ದಾರೆ.

ಒಂದಾನೊಂದು ಕಾಲದಲ್ಲಿ ದಟ್ಟ ಹಸಿರು ಕಾನನವಾಗಿತ್ತು ಝರಿಯಾ. 18ನೆಯ ಶತಮಾನದ ಕಡೆಯ ಭಾಗದಲ್ಲಿ ಕಲ್ಲಿದ್ದಲು ಪತ್ತೆಯಾಯಿತು. 19ನೆಯ ಶತಮಾನದ ಆರಂಭದಲ್ಲಿ ಗಣಿಗಾರಿಕೆ ಮೊದಲಾಯಿತು. ಬ್ರಿಟಿಷ್ ಸಾಮ್ರಾಜ್ಯಶಾಹಿ, ಬಾಡಿಗೆ ಹಂತಕರು, ಅರಸೊತ್ತಿಗೆಗಳ ನಡುವೆ ಈ ಕಪ್ಪು ಚಿನ್ನದ ಕೈವಶಕ್ಕೆ ಪೈಪೋಟಿ ನಡೆಯಿತು. ಇವರೆಲ್ಲರ ದುರಾಸೆಗೆ ಸಾಕ್ಷಿಯಾಯಿತು.

ಧನಬಾದ್ ಕಲ್ಲಿದ್ದಲು ಮಾಫಿಯಾ ಒಂದು ಕಾಲಕ್ಕೆ ಲೋಕಪ್ರಸಿದ್ಧ. ಪುಢಾರಿಗಳ ಜೊತೆ ಅಪವಿತ್ರ ಮೈತ್ರಿಗೆ ಇಳಿದ ಗಣಿ ಕಂಪೆನಿಗಳ ಅಧಿಕಾರಿಗಳು- ಕಾರ್ಮಿಕರ ಗುತ್ತಿಗೆದಾರರು, ಬಡ್ಡಿಗೆ ಸಾಲ ನೀಡುವ ಸಾಹುಕಾರರು ಕೈ ಕಲೆಸಿದ್ದ ದುಷ್ಟ ಕೂಟವಿದು. ವರ್ಷಕ್ಕೆ 1200 ಕೊಲೆಗಳು. ಇವುಗಳ ಪೈಕಿ 800 ಮೃತದೇಹಗಳನ್ನು ‘ಹಿಟ್ ಅಂಡ್ ರನ್’ ಕೇಸುಗಳೆಂದು ದಾಖಲಿಸಿ ಮುಚ್ಚಿ ಹಾಕಲಾಗುತ್ತಿತ್ತು.

ರಾಜಧಾನಿ ಎಕ್ಸ್‌ಪ್ರೆಸ್‌ನ ಮೂರು ಕುಪೆಗಳನ್ನು ಕಾಯ್ದಿರಿಸಿ ಅವುಗಳಲ್ಲಿ ಕ್ರೇಟುಗಟ್ಟಲೆ ಸ್ಕಾಚ್ ವಿಸ್ಕಿಯನ್ನು ತುಂಬಿ ದೆಹಲಿಯ ರಾಜಕಾರಣಿಗಳಿಗೆ ತಲುಪಿಸುತ್ತಿದ್ದ ಕಾಲ, ಅಂದಿನ ಹಿರಿಯ ಪತ್ರಕರ್ತರು, ಕಾರ್ಮಿಕ ನಾಯಕರ ನೆನಪಿನಲ್ಲಿ ಇಂದಿಗೂ ಹಸಿರು. ಧನಬಾದ್ ಧನರಾಶಿ ಆಡಳಿತ ಯಂತ್ರವನ್ನು ಸಾರಾಸಗಟು ಖರೀದಿಸಿದ್ದ ಕಾಲವದು. ಪೊಲೀಸ್ ಠಾಣೆಗಳು, ಸರ್ಕಾರಿ ಕಚೇರಿಗಳ ಮುಖ್ಯ ಹುದ್ದೆಗಳು ಅಕ್ಷರಶಃ ಹರಾಜಿಗಿದ್ದವು. ಮಾಫಿಯಾವನ್ನು ಎದುರು ಹಾಕಿಕೊಂಡರೆ ಎತ್ತಂಗಡಿ ಇಲ್ಲವೇ ಪ್ರಾಣಹರಣ ತಪ್ಪಿದ್ದಲ್ಲ.

‘ಕಪ್ಪುವಜ್ರ’ದ ಮಾಫಿಯಾ ಸಾಮ್ರಾಜ್ಯ ಕಟ್ಟಿ ಅರಮನೆಗಳಂತಹ ಮಹಲುಗಳಲ್ಲಿ ಮೆರೆದು ಉರಿದ ‘ಡಾನ್’ಗಳ ಪೈಕಿ ಮುಂಚೂಣಿಯ ಹೆಸರುಗಳು ಸೂರ್ಯದೇವ ಸಿಂಗ್ ಮತ್ತು ಬಿ.ಪಿ.ಸಿನ್ಹಾ. ಸಿಂಗ್ ಜೊತೆಗಿನ ಸಂಬಂಧಕ್ಕಾಗಿ ಮಾಜಿ ಪ್ರಧಾನಿ ಚಂದ್ರಶೇಖರ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಆದರೆ ಟೀಕೆ ಟಿಪ್ಪಣಿಗೆ ಅವರು ಸೊಪ್ಪು ಹಾಕಲಿಲ್ಲ. ಬಿಹಾರದ ಜನತಾ ಪಾರ್ಟಿಯ ಆಧಾರ ಸ್ತಂಭ ಎಂದು ಸಿಂಗ್‌ನನ್ನು ಹೊಗಳುತ್ತಿದ್ದರು ಶೇಖರ್.

ಒಂದು ಕಾಲಕ್ಕೆ ದಟ್ಟಡವಿಯಾಗಿದ್ದ ಈ ಸೀಮೆಯಲ್ಲಿ ನಲಿಯುತ್ತಿದ್ದ ಆದಿವಾಸಿಗಳಿಂದ ಜಲ ಜಂಗಲ್ ಜಮೀನನ್ನು ಕಿತ್ತುಕೊಂಡು ಅರೆ ಗುಲಾಮಗಿರಿಯ ತಬ್ಬಲಿತನಕ್ಕೆ ತಳ್ಳಲಾಯಿತು. ಕಲ್ಲಿದ್ದಲ ಗಣಿಗಳ ದುಡಿಮೆಗೆ ಪಶುಗಳಂತೆ ಬಳಸಲಾಯಿತು.

ಗಣಿಗಳ ರಾಷ್ಟ್ರೀಕರಣದ ನಂತರ ಈ ಜನರನ್ನು ನಿರುದ್ಯೋಗ ಹುರಿದು ಮುಕ್ಕತೊಡಗಿತು. ಒಪ್ಪೊತ್ತಿನ ಕೂಳಿಗೆ ಗತಿಯಿಲ್ಲದೆ ಕಲ್ಲಿದ್ದಲ ‘ಕಳವಿಗೆ’ ಇಳಿದರು. ಆದಿವಾಸಿಗಳು, ದಲಿತರು, ಹಿಂದುಳಿದ ವರ್ಗಗಳವರೇ ಅಧಿಕ. ಬೆಳಕು ಹರಿಯಿತೆಂದರೆ ಹರುಕು ಬಟ್ಟೆ ತೊಟ್ಟ ಬಡಕಲು ಜನ ಮುರುಕು ಸೈಕಲ್ಲುಗಳ ಮೇಲೆ ಕಲ್ಲಿದ್ದಲನ್ನು ಸಾಗಿಸುವ ನೋಟ ಸರ್ವೇ ಸಾಧಾರಣ. ಹಾಲುಗಲ್ಲದ ಮಕ್ಕಳು, ಮಹಿಳೆಯರ ತಲೆ ಮೇಲೆ ಶಕ್ತ್ಯಾನುಸಾರ ಕಲ್ಲಿದ್ದಲ ಹೊರೆ.

ಬರಿದಾಗಿರುವ ಗಣಿಗಳಲ್ಲಿ ಉಳಿದಿರುವ ಚೂರುಪಾರು ಕಲ್ಲಿದ್ದಲ  ಹೆಕ್ಕಿ ತೆಗೆಯಲು ಸ್ಥಳೀಯರು ಏಳೆಂಟು ನೂರು ಅಡಿಗಳ ಆಳಕ್ಕೆ ಇಳಿಯುತ್ತಾರೆ. ಜೀವದ ಹಂಗು ತೊರೆಯಬೇಕು ಇಲ್ಲವೆ ಹಸಿವಿನಿಂದ ಸಾಯಬೇಕು. ಈ ಅಪಾಯಕರ ಹಸಿವಿನ ಆಟದಲ್ಲಿ ಸತ್ತವರು ನೂರಾರು ಮಂದಿ. ಇವರನ್ನು ನಂಬಿದ ಕುಟುಂಬಗಳಿಗೆ ಸರ್ಕಾರಿ ಪರಿಹಾರ ಕನಸಿನ ಗಂಟು. ಕಳೇಬರ ಪತ್ತೆಯಾಗದೆ ಹೋದರೆ ‘ಡೆತ್ ಸರ್ಟಿಫಿಕೇಟು’ ಕೂಡ ದೊರೆಯುವುದಿಲ್ಲ.

ನೆಲದಾಳದ ಗಣಿಗಳು, ಭೋರ್ಗರೆವ ಬೆಂಕಿಯ ಸಾವಿನ ದವಡೆಯಿಂದ ಈ ಬಡಪಾಯಿಗಳು ಹೆಕ್ಕಿ ತರುವುದು ತುತ್ತು ಕೂಳನ್ನೇ ವಿನಾ ಐಶ್ವರ್ಯ ಐಭೋಗಗಳನ್ನು ಅಲ್ಲ. ಈ ಶ್ರಮಿಕರನ್ನು ಕಳ್ಳರೆಂದು ಕರೆಯುವುದೇ ಆದರೆ ಪೇಟೆ ಪಟ್ಟಣ ಮಹಾನಗರಗಳ ಝಗಮಗಿಸುವ ಬೆಳಕು, ಬಿಸುಪು, ಬಿನ್ನಾಣಗಳಲ್ಲಿ ಬದುಕನ್ನು ಕೊಳ್ಳೆ ಹೊಡೆಯುವ ವರ್ಗವನ್ನು ಏನೆಂದು ಕರೆಯಬೇಕು? ಝರಿಯಾದ ನತದೃಷ್ಟ ಜನಸಮುದಾಯಗಳಿಗೆ ಘನತೆಯ ಬದುಕನ್ನು ನಿರಾಕರಿಸಿರುವವರು ಯಾರು ಎಂಬ ಪ್ರಶ್ನೆಗೆ ಯಾರು ಉತ್ತರ ಹೇಳಬೇಕು?

ಝರಿಯಾದ ಪುನರ್ವಸತಿ ಯೋಜನೆ ಕಡೆಗೂ ಕಾಗದಿಂದ ಕ್ಷೇತ್ರಕ್ಕೆ ಇಳಿದಿದೆ. 4.18 ಲಕ್ಷ ಮಂದಿ ಅಥವಾ 85 ಸಾವಿರ ಕುಟುಂಬಗಳು ಝರಿಯಾ ಜ್ವಾಲೆಗಳ ಆಸುಪಾಸಿನಲ್ಲಿ ಬದುಕಿವೆಯೆಂದು  ಈ ಯೋಜನೆಯ ವಿವರಗಳೇ ಒಪ್ಪಿಕೊಂಡಿವೆ. ಆದರೆ ಪುನರ್ವಸತಿ ಯೋಜನೆಗೆ ಬಸವನ ಹುಳುವಿನ ವೇಗವೂ ದಕ್ಕಿಲ್ಲ. ಝರಿಯಾ ಮತ್ತು ಧನಬಾದ್‌ನಿಂದ ಹದಿನೈದು ಕಿ.ಮೀ. ದೂರದ ಬೇಲ್ ಗಡಿಯಾದಲ್ಲಿ 1,360 ಕುಟುಂಬಗಳಿಗೆ ನೆಲೆ ಕಲ್ಪಿಸಲಾಗಿದೆ. ಒಟ್ಟಾರೆ ಪುನರ್ವಸತಿಗೆ ಅಗತ್ಯವಿರುವ ಜಮೀನು 2,730 ಎಕರೆಗಳು. ಈವರೆಗೆ ಆಗಿರುವ ಜಮೀನು ಸ್ವಾಧೀನ 120 ಎಕರೆಗಳು ಮಾತ್ರ.

ದೇಶಕ್ಕೆ ಉಕ್ಕು, ಬೆಳಕು, ಊರ್ಜೆಯನ್ನು ನೀಡಲು ತಮ್ಮ  ಪ್ರಾಣಗಳನ್ನು ಪಣವಾಗಿಟ್ಟು, ಸ್ವಾಸ್ಥ್ಯವನ್ನು ಬಲಿಕೊಡುವ ಈ ಜನರ ವಸತಿಗಳಿಗೆ ವಿದ್ಯುಚ್ಛಕ್ತಿ ಪೂರೈಕೆ ಇಲ್ಲ ಎಂಬುದು ವಿಕಟ ವಿಡಂಬನೆ. ನಾಗರಿಕ ಜಗತ್ತು ಮೂಲಭೂತ ಸೌಕರ್ಯಗಳು ಎಂದು ಕರೆಯುವ ಯಾವ ಸೌಲಭ್ಯಗಳೂ ಈ ತಬ್ಬಲಿಗಳಿಗೆ ಲಭ್ಯವಿಲ್ಲ. ತನ್ನ ಬದುಕನ್ನು ಬೆಳಕಾಗಿಸುವ ಈ ಜನರ ಕತ್ತಲ ಬದುಕುಗಳು ಬಹುತೇಕ ಭಾರತದ ಕಣ್ಣಿಗೆ ಬೀಳುವುದೇ ಇಲ್ಲ. ಅನ್ನ ಬೆಳೆವ ರೈತನ ಕುಟುಂಬ ಹಸಿವಿನಿಂದ ನರಳುವಂತಹುದೇ ವಿಕಟ ಸ್ಥಿತಿಯಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT