ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಮೇಲ್ದಂಡೆ: ಮಾನವೀಯತೆ ಮರೆತ ಸರ್ಕಾರ

Last Updated 9 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರ ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಕಾರ್ಯಕ್ರಮ­ವನ್ನು ರೂಪಿಸುತ್ತಿದೆ; ತ್ವರಿತವಾಗಿ ಈ ಯೋಜನೆ­ಯನ್ನು ಪೂರ್ಣಗೊಳಿಸಬೇಕು ಎಂಬ ಆತುರ­ದಲ್ಲೂ ಇದೆ.

ಕಾಮಗಾರಿ ಪೂರ್ಣ­ಗೊಂಡು ಅತ್ತ ಆಲಮಟ್ಟಿ ಜಲಾಶಯದಲ್ಲಿ 524.256 ಮೀಟರ್‌ವರೆಗೆ ನೀರು ನಿಂತರೆ, ಇತ್ತ ಬಾಗಲ­ಕೋಟೆ ಮತ್ತು ವಿಜಾಪುರ ಜಿಲ್ಲೆಗಳ 22 ಹಳ್ಳಿಗಳು ಮತ್ತೆ ಮುಳುಗಡೆಯಾಗಲಿವೆ. ಈ ಹಿಂದೆ ಜಲಾಶಯಗಳಿಗಾಗಿ ಭೂಮಿ ಕಳೆದು­ಕೊಂಡವರಿಗೇ ಇನ್ನೂ ಸಮರ್ಪಕವಾಗಿ ಪುನ­ರ್ವಸತಿ ಕಲ್ಪಿಸುವುದು ಆಗಿಲ್ಲ.ಈಗ ಮತ್ತೆ ಹೊಸ­ದಾಗಿ ಇಂಥದೊಂದು ಕಾರ್ಯಕ್ಕೆ ಮುಂದಾಗ­ಬೇಕಿರುವುದು ಸರ್ಕಾರಕ್ಕೆ ಒಂದು ದೊಡ್ಡ ಸವಾಲೇ ಸರಿ.

ಆದರೆ ಪುನರ್ವಸತಿ ಮತ್ತು ಪುನರ್‌­ನಿರ್ಮಾಣ ಕಾರ್ಯವನ್ನು ಸರ್ಕಾರ ಗಂಭೀರ­ವಾಗಿ ಪರಿಗಣಿಸಿಲ್ಲ. ಇದಕ್ಕೆ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಮನೆ–ಭೂಮಿ– ಬದುಕು ಎಲ್ಲ­ವನ್ನೂ ಕಳೆದುಕೊಂಡ ಸಂತ್ರಸ್ತರು ಅನುಭವಿಸು­ತ್ತಿರುವ ಯಾತನೆಯೇ ನಿದರ್ಶನವಾಗಿದೆ.

ಬೇರೊಬ್ಬರ ಮನೆ ಬೆಳಗಲು ತಮ್ಮ ಮನೆ­ಯನ್ನು ಕತ್ತಲು ಮಾಡಿಕೊಂಡವರ ಬಗ್ಗೆ ಸರ್ಕಾರಕ್ಕೆ ಹೆಚ್ಚು ಕಳಕಳಿ ಇರಬೇಕಿತ್ತು. ಅವ­ರನ್ನು ಮಾನವೀಯ ದೃಷ್ಟಿಯಿಂದ ಕಾಣಬೇಕಿತ್ತು. ರೈತ ಭೂಮಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾನೆ. ಅಂತಹದ್ದರಲ್ಲೂ ತನ್ನ ಜೀವನ–ಬದುಕನ್ನು ಬದಿಗೊತ್ತಿ ಸರ್ಕಾರಕ್ಕೆ ಭೂಮಿಯನ್ನು ಕೊಡುತ್ತಾನೆ. ಈ ಅಂಶವನ್ನು ಸರ್ಕಾರ ಗಮನಕ್ಕೇ ತೆಗೆದುಕೊಳ್ಳುವು­ದಿಲ್ಲ­ವೇನೊ ಎನಿಸುತ್ತದೆ. ಅದಕ್ಕಾಗಿಯೇ ಭೂಮಿ ಸ್ವಾಧೀನಪಡಿಸಿಕೊಂಡ ಸಂದರ್ಭದಲ್ಲಿ ಪರಿ­ಹಾರದ ರೂಪದಲ್ಲಿ ಒಂದಿಷ್ಟು ಹಣ ಕೊಟ್ಟು ಕೈತೊಳೆದುಕೊಳ್ಳುವ ಧಾವಂತ ತೋರುತ್ತದೆ.

ಕುಟುಂಬದ ಶಾಶ್ವತ ಆಸ್ತಿಯಾದ ಭೂಮಿ­ಯನ್ನು ಕೊಟ್ಟವರ ಹೃದಯವಂತಿಕೆಯನ್ನು  ಹಣದಲ್ಲಿ ಅಳೆಯಲು ಆಗದು. ಹೊಸದಾಗಿ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಎಲ್ಲ ಸೌಕರ್ಯವನ್ನು ಅವನಿಗೆ ಒದಗಿಸಬೇಕು. ಆದರೆ ಇದುವರೆಗೆ ನಮ್ಮನ್ನು ಆಳಿದ ಯಾವ ಸರ್ಕಾರವೂ ಅಂಥದೊಂದು ಗಂಭೀರ ಪ್ರಯತ್ನ ಮಾಡಲಿಲ್ಲ. ಬದಲಿಗೆ ಆಡಳಿತದ ಚುಕ್ಕಾಣಿ ಹಿಡಿದವರು ಆ ಬಗ್ಗೆ ನಿರ್ಲಕ್ಷ್ಯ ತೋರಿದರು.

ಆ ಕಾರಣದಿಂದಲೇ ಸಂತ್ರಸ್ತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ದಶಕಗಳ ಹಿಂದೆ ಭೂಮಿ–ಮನೆ ಕಳೆದುಕೊಂಡ ಬಾಗಲಕೋಟೆ ಜಿಲ್ಲೆಯ ಕೆಲ ಗ್ರಾಮದವರು ಈಗಲೂ  ಶೆಡ್‌ಗಳಲ್ಲಿಯೇ ಜೀವನ ದೂಡುತ್ತಿದ್ದಾರೆ. ಇದನ್ನು ನೋಡಿದರೆ ಸರ್ಕಾರ ಕೂಡ ಪುನರ್ವಸತಿ ಮತ್ತು ಪುನರ್‌­ನಿರ್ಮಾಣವನ್ನು ಕೇವಲ ಸ್ಥಳಾಂತರ ಅಥವಾ ಒಕ್ಕಲೆಬ್ಬಿಸುವುದಷ್ಟೇ ಎಂದು ಭಾವಿಸಿರುವಂತಿದೆ.

ಪುನರ್ವಸತಿ ಮತ್ತು ಪುನರ್‌ ನಿರ್ಮಾಣ­ವೆಂದರೆ ಅದು ಬದುಕು ನೀಡುವ ಕೆಲಸ. ಸರ್ವಸ್ವ­ವನ್ನು ಕಳೆದುಕೊಂಡು ತಮ್ಮೂರಿನಲ್ಲೇ ನಿರ್ಗತಿಕ­ರಾಗಿ ನಿಂತಿರುವ ಸಂತ್ರಸ್ತರ ತಲ್ಲಣಗೊಂಡ ಬದುಕನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಆದರೆ ಸರ್ಕಾರ ಅದರ ಗೊಡವೆಗೆ ಹೋಗಿಲ್ಲ. ಸಂತ್ರಸ್ತರಿಗೆ ನೆಲೆ ಕೊಡುವ ಕೆಲಸವಾಗಿಲ್ಲ ಎಂಬು­ದನ್ನು ಭಣಗುಟ್ಟುವ ಪುನರ್ವಸತಿ ಕೇಂದ್ರಗಳು ಹೇಳುತ್ತವೆ. ರಾಜ್ಯ ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಗೆ ವಿಶ್ವಬ್ಯಾಂಕ್‌ ಹಿಂದೆ ತಗಾದೆ ತೆಗೆದಿತ್ತು. ಅಲ್ಲದೇ, ಹಣಕಾಸು ನೀಡುವುದನ್ನು ಸ್ಥಗಿತಗೊಳಿಸುವ ಬೆದರಿಕೆಯನ್ನೂ ಒಡ್ಡಿತ್ತು. ಆ ಸಂದರ್ಭದಲ್ಲಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದಕ್ಕೋ ಎಂಬಂತೆ, ಭೂಮಿ ಖರೀದಿಸಲು ಸಂತ್ರಸ್ತರಿಗೆ ಅನುಕಂಪ ಧನದ ಹೆಸರಲ್ಲಿ ಒಂದಿಷ್ಟು ನೆರವು ನೀಡಿತು.

ಅಣೆಕಟ್ಟೆ, ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ವೇಳೆಯಲ್ಲಿಯೇ ಅಚ್ಚುಕಟ್ಟು ಪ್ರದೇಶದಲ್ಲೂ ಒಂದಿಷ್ಟು ಭೂಮಿ­ಯನ್ನು ಸ್ವಾಧೀನಕ್ಕೆ ತೆಗೆದುಕೊಂಡು ಈ ಸಂತ್ರಸ್ತ­ರಿಗೂ ಹಂಚಬೇಕಿತ್ತು. ಆಗ  ಭೂಮಿ ಕಳೆದು­ಕೊಂಡವರ ಬದುಕೂ ಹಸನಾಗುತ್ತಿತ್ತು. ಪರಿ­ಹಾರದ ಹಣ ಪಡೆದ ರೈತರಿಗೆ ಭೂಮಿ ಖರೀದಿ­ಸಲು ಜಾಗ ಎಲ್ಲಿರುತ್ತದೆ ಎಂಬುದನ್ನೂ ಸರ್ಕಾರ ಯೋಚಿಸಲಿಲ್ಲ.

ಭೂಮಿ–ಮನೆ ಕಳೆದುಕೊಂಡವರಿಗೆ ಮನೆ ಕಟ್ಟಲು ಅನುಕಂಪ ಪರಿಹಾರ ನಿಧಿ; ಜೀವನಾಂಶ ಭತ್ಯೆ; ಆದಾಯ ಸೃಷ್ಟಿಸುವ ಹೆಸರಿನಲ್ಲಿ ನೆರವು ನೀಡುತ್ತಿದೆ. ಈ ನೆರವು ಯಾವುದಕ್ಕೂ ಸಾಕಾಗು­ವುದಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಪುನ­ರ್ವಸತಿ ಆಯುಕ್ತ ಹುದ್ದೆಯಲ್ಲಿ ಎಸ್‌.ಎಂ. ಜಾಮದಾರ ಅವರು ಇದ್ದಾಗ ಸಾಕಷ್ಟು ಕೆಲಸ­ಗಳಾದವು. ಇಡೀ ಕಾರ್ಯ ಪೂರ್ಣಗೊಳ್ಳು­ವವರೆಗೆ ಅವರನ್ನು ಅದೇ ಹುದ್ದೆಯಲ್ಲಿಯೇ ಮುಂದುವರಿಸಿದ್ದರೆ ಎಷ್ಟೋ ಸಮಸ್ಯೆಗಳು ನಿವಾ­ರಣೆಯಾಗುತ್ತಿದ್ದವು. ಆದರೆ ಹಾಗಾಗಗಲಿಲ್ಲ.

ಜನರ ಉಪಯೋಗಕ್ಕಾಗಿ ಎಂದು ಕೋಟಿ­ಗಟ್ಟಲೆ ಹಣವನ್ನು ಖರ್ಚು ಮಾಡಿ ಕಟ್ಟಿಸಿರುವ, ಬಾಗಲಕೋಟೆ ಜಿಲ್ಲೆಯ ಸೀಮಿಕೇರಿಯ ಪುನರ್ವಸತಿ ಕೇಂದ್ರದಲ್ಲಿ ನಿರ್ಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಹಾಗೂ ಸಿಬ್ಬಂದಿ­ಗಾಗಿ ಕಟ್ಟಿರುವ ಕ್ವಾರ್ಟರ್ಸ್‌ ಸರ್ಕಾರದ ಯೋಜನೆಗಳಿಗೆ ಕನ್ನಡಿ ಹಿಡಿಯುತ್ತವೆ. ಈ ಕಟ್ಟಡಗಳಿಗೆ ಉದ್ಘಾಟನೆಯ ಭಾಗ್ಯವೂ ಸಿಗದೇ ಪಾಳು ಬಿದ್ದಿವೆ. ಯಾವ ಸುಖಕ್ಕಾಗಿ ಈ ಕಟ್ಟಡ­ಗಳನ್ನು ಕಟ್ಟಬೇಕಿತ್ತು? ಇಂಥ ಕಟ್ಟಡಗಳನ್ನು ಕಟ್ಟುವುದರ ಜೊತೆ ಜೊತೆಗೆ ಕುಡಿಯುವ ನೀರು, ವಿದ್ಯುತ್‌, ರಸ್ತೆ, ಶಾಲೆ ಮೊದಲಾದ ಸೌಲಭ್ಯಗಳನ್ನೂ ಕಲ್ಪಿಸಿ ಜನರನ್ನು ಅಲ್ಲಿಗೆ ತೆರಳುವಂತೆ ಮನವೊಲಿಸುವ ಕೆಲಸವನ್ನಾದರೂ ಮಾಡಬೇಕಿತ್ತು.

ಸಾರಾಸಗಟಾಗಿ ಎಲ್ಲ 136 ಪುನರ್ವಸತಿ ಕೇಂದ್ರಗಳಲ್ಲೂ ಒಂದೇ ತೆರನಾದ ಪರಿಸ್ಥಿತಿ ಇದೆ ಎಂದೇನೂ ಅಲ್ಲ.  ಹೆದ್ದಾರಿಗಳ ಅಕ್ಕಪಕ್ಕದ ಪುನರ್ವಸತಿ ಕೇಂದ್ರಗಳು ಸೇರಿದಂತೆ ಕೆಲವು ಸಕಲ ಸೌಲಭ್ಯಗಳನ್ನೂ ಹೊಂದಿವೆ. ಆದರೆ ಈ ಕೇಂದ್ರಗಳನ್ನು ಗ್ರಾಮ ಪಂಚಾಯ್ತಿ­ಗಳಿಗೆ ಹಸ್ತಾಂತರಿಸುವ ಕೆಲಸ ಇನ್ನೂ ಆಗದೇ ಇರುವುದರಿಂದ, ನಿರ್ವಹಣೆ ಇಲ್ಲದೆ ಅಲ್ಲಿ ವಾಸವಿರುವ ಜನರು ಪರಿತಪಿಸುವಂತಾಗಿದೆ.

ಅಷ್ಟೊ ಇಷ್ಟೊ ಜನರು ಬಂದು ನೆಲೆಸಿರುವ ಪುನರ್ವಸತಿ ಕೇಂದ್ರಗಳನ್ನು ಗ್ರಾಮ ಪಂಚಾಯ್ತಿ­ಗಳಿಗೆ ಹಸ್ತಾಂತರಿಸಬೇಕು ಎಂಬ ಪ್ರಯತ್ನವೂ ಇಲ್ಲಿ ಸಫಲವಾಗಿಲ್ಲ. ಈ ಕೇಂದ್ರಗಳ ನಿರ್ವಹಣೆಗೆ ಹಣದ ಕೊರತೆಯ ಕಾರಣ ನೀಡಿ ಗ್ರಾಮ ಪಂಚಾಯ್ತಿಗಳು ಹಿಂದೆ ಸರಿಯುತ್ತಿವೆ. ಆದ್ದರಿಂದ ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಸ್ಮಶಾನ, ಸಾರ್ವಜನಿಕ ಶೌಚಾಲಯ, ಜಾನು­ವಾರುಗಳಿಗೆ ಮತ್ತು ತಿಪ್ಪೆಗುಂಡಿಗೆ ಸ್ಥಳಾವಕಾಶ ಕಲ್ಪಿಸಿ, ಈ ಕೇಂದ್ರಗಳನ್ನು ತುರ್ತಾಗಿ ಗ್ರಾಮ ಪಂಚಾಯ್ತಿಗಳಿಗೆ ಹಸ್ತಾಂತರಿಸುವುದು ಒಳಿತು.

ಭೂ ಸ್ವಾಧೀನ ಕಾರ್ಯವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಮಾಡುತ್ತಾರೆ. ಇದರ ಜೊತೆಗೆ  ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಕಾರ್ಯ ಕೂಡ ಕಂದಾಯ ಇಲಾಖೆ ವ್ಯಾಪ್ತಿಗೇ ಬರುತ್ತದೆ. ಆದರೆ ಈ ವಿಭಾಗ ಕಾರ್ಯನಿರ್ವಹಿಸುತ್ತಿರುವುದು ಮಾತ್ರ ಜಲ­ಸಂಪನ್ಮೂಲ ಇಲಾಖೆಯ ಅಡಿಯಲ್ಲಿ.

ಜಲಸಂಪ­ನ್ಮೂಲ ಇಲಾಖೆಗೆ ಹೆಚ್ಚಿನ ಅನುದಾನ ದೊರೆ­ಯು­ವುದರಿಂದ ಅದನ್ನು ಬಳಸಿಕೊಂಡು ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ ಎಂಬುದೇನೋ ಸರಿ. ಆದರೂ ಪುನರ್ವಸತಿಗಾಗಿಯೇ ಪ್ರತ್ಯೇಕ ಇಲಾಖೆ ರಚನೆ ಮಾಡುವುದು ಎಲ್ಲ ದೃಷ್ಟಿ­ಯಿಂದಲೂ ಒಳ್ಳೆಯದು. ಜೊತೆಗೆ ವಿವಿಧ ವಿಶ್ವ­ವಿದ್ಯಾಲಯಗಳಲ್ಲಿರುವ ಸಾಮಾಜಿಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಬಳಸಿಕೊಂಡು ಈ ಭಾಗದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಅಧ್ಯಯನ ನಡೆಸಬೇಕು. ಜನರ ಅಗತ್ಯಗಳನ್ನು ಮನಗಂಡು ಅದಕ್ಕೆ ಅನುಗುಣವಾಗಿ ಕಾರ್ಯಕ್ರಮ­ಗಳನ್ನು ರೂಪಿಸಿದರೆ ಜನರಿಗೆ ಉಪಯೋಗವಾಗುತ್ತದೆ.
ಎಲ್ಲ ಪುನರ್ವಸತಿ ಕೇಂದ್ರಗಳಿಗೂ ಸಕಲ ಸೌಲಭ್ಯಗಳನ್ನು ಒದಗಿಸಬೇಕು.

ನೀರು, ರಸ್ತೆ, ಸಾರಿಗೆ, ಶಾಲೆ, ಆಸ್ಪತ್ರೆಗಳು ಇರಬೇಕು. ಸಾಧ್ಯ­ವಾದಷ್ಟು ಮಟ್ಟಿಗೆ ರೈತರ ಜಮೀನಿಗೆ ಹತ್ತಿರ­ವಿರುವ ಪ್ರದೇಶದಲ್ಲಿ ಪುನರ್ವಸತಿ ಕೇಂದ್ರಗಳಿರ­ಬೇಕು. ಎಷ್ಟೋ ಹಳ್ಳಿಗಳು ಮುಳುಗಡೆಯಾಗಿ­ದ್ದರೂ ಜಮೀನು ಮುಳುಗಡೆಯಾಗಿಲ್ಲ. ಆ ಊರಿ­ನವರು ಜಮೀನಿಗೆ ಹೋಗಿ ಬಂದು ಮಾಡಲು ಕಷ್ಟವಾಗದಂತೆ ಎಚ್ಚರವಹಿಸಬೇಕು. ಭೂರಹಿತ ಕೂಲಿ ಕಾರ್ಮಿಕರಿಗೆ ಶಾಶ್ವತ ಉದ್ಯೋಗ ಒದಗಿಸುವ ಕೆಲಸವೂ ಆಗಬೇಕು. ಹಿಂದೆ ಜನರು
ಸೌಲಭ್ಯವಿಲ್ಲದಿದ್ದರೂ ಹೇಗೋ ಹೊಂದಿಕೊಂಡು ಜೀವನ ಸಾಗಿಸುತ್ತಿದ್ದರು.

ಈಗ ಜನರಲ್ಲಿ ಅರಿವು ಬಂದಿದೆ. ವ್ಯವಸ್ಥಿತವಾಗಿ ಬದುಕು ಸಾಗಿಸಬೇಕು ಎಂಬ ಅವರ ಆಸೆ ತಪ್ಪಲ್ಲ. ಅದಕ್ಕೆ ಅನುಗುಣವಾಗಿ ಸೌಕರ್ಯ ಕಲ್ಪಿಸುವ ಮೂಲಕ ಔದಾರ್ಯ ತೋರಬೇಕು. ಸರ್ಕಾರದ ವರ್ತನೆ ಅವರಿಗೆ ಜಿಗುಪ್ಸೆ ತರಿಸಬಾರದು. ಹೊಸದಾಗಿ ಭೂ ಸ್ವಾಧೀನಪಡಿಸಿಕೊಳ್ಳುವಾಗ ಹೊಸ ಕಾಯ್ದೆಯ ಅನ್ವಯ ಕಟ್ಟುನಿಟ್ಟಾಗಿ ಪುನರ್ವಸತಿ ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳಬೇಕು.

ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT