ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಯಲ್ಲಿ ಕಾಸಿಲ್ಲ; ಕನಸುಗಳಿಗೆ ಬರವಿಲ್ಲ!

Last Updated 8 ಸೆಪ್ಟೆಂಬರ್ 2015, 19:58 IST
ಅಕ್ಷರ ಗಾತ್ರ

ಈ ಮಕ್ಕಳ ಕನಸು ನನಗೆ ಇಷ್ಟವಾಯಿತು. ಇವರಿಗೆ ತಾವು ಬದುಕುತ್ತಿರುವ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎನ್ನುವ ಅಪರಿಮಿತ ತವಕವಿದೆ. ಸಮಾಜಕ್ಕಾಗಿ ತುಡಿಯುವ ಈ ‘ನೆಲದ ಬಳ್ಳಿ’ಗಳ ಉದಾತ್ತ ಕನಸುಗಳು ಉನ್ನತವಾಗಿಯೇ ಇವೆ. ಉಳ್ಳವರು ಮತ್ತು ನಗರ ಪ್ರದೇಶದ ಮಕ್ಕಳಂತೆ ವಿದೇಶಕ್ಕೆ ‘ಹಾರುವ ರೆಕ್ಕೆ’ ಪಡೆಯುವುದು, ನಗರಗಳಲ್ಲಿ ಸುಸಜ್ಜಿತ ನರ್ಸಿಂಗ್ ಹೋಂ ಇಲ್ಲವೇ ಆಸ್ಪತ್ರೆ ಆರಂಭಿಸಿ ಕೋಟಿ ಕೋಟಿ ಗಳಿಸುವುದು, ಜಪ್ಪಯ್ಯ ಎಂದರೂ ಹಳ್ಳಿಗಳತ್ತ ಮುಖ ಮಾಡದಿರುವುದು ಇವರಿಗೆ ತಿಳಿಯದ ಭಾಷೆ.

ಅರೆಹೊಟ್ಟೆ, ಹರಕಲು ಬಟ್ಟೆ, ಹರಿದ ಚಪ್ಪಲಿಯಾದರೂ ಪರವಾಗಿಲ್ಲ; ತಲೆ ತುಂಬ ಜ್ಞಾನ, ಕಣ್ಣು ತುಂಬ ಕನಸುಗಳು. ಅವುಗಳನ್ನು ದಕ್ಕಿಸಿಕೊಂಡು ಸಾಧಿಸುವ ಆತ್ಮವಿಶ್ವಾಸ ಎದೆ ತುಂಬ. ಬಡ ಪ್ರತಿಭಾವಂತರಿಗೆ ಮಾತ್ರ ಇಂಥ ಹಸಿವು, ಸಾಧನೆಯ ಕನಸುಗಳು ಇರುತ್ತವೆಯೇನೋ?

ನಾನು ಹೀಗೆ ಯೋಚಿಸಲು ಕಾರಣವಿದೆ. ಹಲವು ವರ್ಷಗಳಿಂದ ‘ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ಪರಿಹಾರ ಟ್ರಸ್ಟ್‌’ ಅಸ್ತಿತ್ವದಲ್ಲಿದೆ. ಈ ಟ್ರಸ್ಟ್‌ ಮೂಲಕ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲಾಗುತ್ತದೆ. ಈ ದೆಸೆಯಿಂದಾಗಿ ಹತ್ತಾರು ವಿದ್ಯಾರ್ಥಿಗಳನ್ನು ಸಂದರ್ಶಿಸಿದೆ.

ಆ ವಿದ್ಯಾರ್ಥಿಯ ಅರ್ಜಿ ಹೀಗಿದೆ: ‘ನನ್ನ ತಂದೆ ಕೃಷಿಕ. ಈ ಬಾರಿ ಕೃಷಿ ಕೈ ಕೊಟ್ಟಿದೆ. ಸಾಲದ ಭಾರವೂ ಇದೆ. ಆದರೂ ತಂದೆ ಸ್ವಲ್ಪ ಸಾಲ ತಂದಿದ್ದಾರೆ. ಆ ಹಣವೂ ಸಾಲುತ್ತಿಲ್ಲ. ಆದರೆ, ನನಗೆ ಓದುವ ಹಂಬಲ. ಅಣ್ಣ ಎಂಜಿನಿಯರಿಂಗ್‌ ಅಭ್ಯಾಸ ಮಾಡುತ್ತಿದ್ದಾನೆ. ಅವನಿಗೆ ಸ್ಟಡಿ ಲೋನ್‌ ಸಿಕ್ಕಿದೆ. ಆದರೆ ನನ್ನದೇ ತಾಪತ್ರಯ. ನಿಮ್ಮಿಂದ ಹಣದ ಸಹಾಯ ದೊರಕಿದರೆ ಅನುಕೂಲವಾಗುತ್ತದೆ’.

ಇನ್ನೊಬ್ಬ ಹುಡುಗ ತಂದೆಯೊಂದಿಗೆ ಬಂದನು. ಈತ ಸಂಕೋಚದ ಮುದ್ದೆ. ಸ್ವಲ್ಪ ಸುಧಾರಿಸಿಕೊಳ್ಳಲಿ ಎನ್ನುವ ಕಾರಣಕ್ಕಾಗಿ ನಾನು ಈತ ಬರೆದಿದ್ದ ಅರ್ಜಿ ಮೇಲೆ ಕಣ್ಣಾಡಿಸುತ್ತಾ ಹೋದೆ. ‘ನಾನು ವಿಜ್ಞಾನ ವಿಷಯದಲ್ಲಿ ಪ್ರವೇಶ ಪಡೆದು ವೈದ್ಯನಾಗಿ ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ. ತಂದೆ ಕ್ಷೌರಿಕ. ಈ ದುಡಿಮೆಯಿಂದ ಬರುವ ಆದಾಯ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಸಾಲುತ್ತಿಲ್ಲ. ಸಂಸಾರ ನಡೆಸುವುದೇ ಕಷ್ಟವಾಗಿದೆ. ಹೀಗಿರುವಾಗ ನಾನು ಓದಲು ಹಣವನ್ನು ಎಲ್ಲಿಂದ ಹೊಂದಿಸಲು ಸಾಧ್ಯ?’.

‘ಇಷ್ಟೊಂದು ಕಷ್ಟದ ನಡುವೆಯೂ ವೈದ್ಯನಾಗಬೇಕೆಂಬ ಕನಸು ಏಕೆ ಕಾಣುತ್ತಿರುವೆ?’ಎಂದು ಕೇಳಿದೆ. ‘ಆರೋಗ್ಯವೇ ಸಂಪತ್ತು ಎನ್ನುತ್ತಾರೆ. ಇದು ಅಕ್ಷರಶಃ ನಿಜ. ನನ್ನ ಸಂಬಂಧಿಕರೊಬ್ಬರು ಅನಾರೋಗ್ಯದ ಕಾರಣ ಗಳಿಸಿದ್ದೆಲ್ಲವನ್ನೂ ಕಳೆದುಕೊಂಡರು. ಬಡವರಿಗೆ ವೈದ್ಯಕೀಯ ಚಿಕಿತ್ಸೆ ಎನ್ನುವುದು ದುಬಾರಿಯಾಗಿದೆ. ಔಷಧವನ್ನು ಕೊಳ್ಳಲು ಸಾಧ್ಯವಾಗದಷ್ಟು ಬೆಲೆ ಹೆಚ್ಚಾಗಿದೆ. ಆದ್ದರಿಂದ ವೈದ್ಯನಾಗಿ ಬಡವರ ಸೇವೆ ಮಾಡಬೇಕು. ಸಾಧ್ಯವಾದರೆ ಔಷಧಗಳನ್ನು ಕಂಡು ಹಿಡಿದು ಕಡಿಮೆ ದರಕ್ಕೆ ಮಾರಾಟ ಮಾಡಬೇಕು. ಇದೇ ನನ್ನ ಮೊದಲ ಮತ್ತು ಕೊನೆಯ ಆಸೆ’. ಈತನ ಆತ್ಮವಿಶ್ವಾಸ ಕಂಡು ಬೆರಗಾದೆ.

ಮೇದಾರನ ಮಗಳು ನನ್ನನ್ನು ಅಚ್ಚರಿಗೆ ದೂಡಿದಳು. ‘ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನ ಪಡೆಯಬೇಕು ಎನ್ನುವ ಛಲ ಮತ್ತು ಹಂಬಲ. ಆದರೆ, ಮನೆಯ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ನಾನು ವೈದ್ಯಳಾಗಬೇಕು ಎನ್ನುವ ಆಸೆ ಈಡೇರುವುದೋ ಇಲ್ಲವೋ ಎಂದು ದಿಗಿಲುಗೊಂಡಿದ್ದೆ.ಪ್ರಜಾವಾಣಿಯಲ್ಲಿ ಶೈಕ್ಷಣಿಕ ನೆರವಿಗೆ ಅರ್ಜಿ ಎನ್ನುವ ಪ್ರಕಟಣೆಯನ್ನು ಓದಿ ಮತ್ತೆ ಆಸೆ ಚಿಗುರಿತು’.

ಈಕೆ ಇಷ್ಟಕ್ಕೆ ಮಾತು ನಿಲ್ಲಿಸಬಹುದು ಎಂದುಕೊಂಡಿದ್ದು ತಪ್ಪಾಯಿತು. ‘ಕೊಪ್ಪಳದಲ್ಲಿ ಎಂ.ಡಿ. ಮಾಡಿರುವ ವೈದ್ಯರ ಸಂಖ್ಯೆ ತೀರಾ ಕಡಿಮೆ. ನಾನು ಚರ್ಮರೋಗ ವಿಷಯದಲ್ಲಿ ಎಂ.ಡಿ. ಮಾಡಬೇಕು ಎಂದುಕೊಂಡಿದ್ದೇನೆ’ ಎಂದು ಹೇಳಿ ಕುತೂಹಲ ಹೆಚ್ಚಿಸಿದಳು. 

‘ಚರ್ಮರೋಗ ವಿಷಯವೇ ಏಕೆ? ಬೇರೆ ಇಲ್ಲವೇ?’ ಎಂದು ಕೇಳಿದೆ. ‘ನನ್ನ ತಾಯಿಗೆ ಚರ್ಮರೋಗವಿದೆ. ಅದನ್ನು ನೋಡಿದ ಮೇಲೆ ಚರ್ಮರೋಗಕ್ಕೆ ತಕ್ಕ ಚಿಕಿತ್ಸೆ ನೀಡುವ ತಜ್ಞ ವೈದ್ಯೆಯೇ ಆಗಬೇಕು ಎಂದು ನಿರ್ಧರಿಸಿದ್ದೇನೆ’ ಎಂದಳು! ನೇಕಾರನ ಮಗಳ ಪದಗಳ ನೇಯ್ಗೆ ಹೀಗಿದೆ.

‘ನನ್ನ ಮುಂದಿನ ವ್ಯಾಸಂಗಕ್ಕೆ ಬೇಕಾದ ಹಣವನ್ನು ಹೊಂದಿಸುವ ಸಾಮರ್ಥ್ಯ ತಂದೆಗೆ ಇಲ್ಲ. ನನಗೆ ಚೆನ್ನಾಗಿ ಓದಬೇಕು, ಒಳ್ಳೆಯ ಕೆಲಸಕ್ಕೆ ಸೇರಿ ತಂದೆ ತಾಯಿಯನ್ನು ಕಷ್ಟದಿಂದ ಪಾರು ಮಾಡಿ ಅವರನ್ನು ಸುಖವಾಗಿ ನೋಡಿಕೊಳ್ಳಬೇಕು. ಸಮಾಜಕ್ಕೆ ಕೈಲಾದ ಸಹಾಯ ಮಾಡಬೇಕು ಎಂಬ ಮಹದಾಸೆ’. ಈ ವಿದ್ಯಾರ್ಥಿನಿಯ ಪೋಷಕರು ಟೈಲರ್‌. ಕಷ್ಟವಿದ್ದರೂ ಮಗಳನ್ನು ಒಳ್ಳೆಯ ಶಾಲೆಗೆ ಕಳುಹಿಸಿದರು. ಅವರ ನಿರೀಕ್ಷೆಯಂತೆ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಾಳೆ. ಆದರೆ ಮುಂದಿನ ಓದಿಗೆ ಹಣದ ತೊಂದರೆಯಾಗಿದೆ. ಈಕೆ ವೈದ್ಯೆಯಾಗಬೇಕು ಎಂದು ಕನಸು ಕಂಡಿದ್ದಾಳೆ.

ಇಂಥ ಮಕ್ಕಳ ಕಾರಣಕ್ಕಾಗಿಯೇ ಸಮಾಜದ ಮೇಲೆ ಭರವಸೆ ಇಟ್ಟುಕೊಳ್ಳಬಹುದಾಗಿದೆ. ಇವರಿಗೆ ಸಾಧನೆ ಮತ್ತು ಸಮಾಜ ಸೇವೆಯ ಕನಸು ಬಂದದ್ದು ಯಾರೋ ಆದರ್ಶ ವ್ಯಕ್ತಿಗಳನ್ನು ನೋಡಿಯಲ್ಲ. ತಮ್ಮದೇ ಕುಟುಂಬ, ಪರಿಸರ, ಸಮುದಾಯ, ಸಮಾಜವನ್ನು ನೋಡಿ ಬಂದಿದೆ. ಇವರು ಅನುಭವಿಸಿದ ಕಷ್ಟ, ಹಸಿವು, ಅವಮಾನಗಳು ಕಲಿಸಿದ ಪಾಠವಿದು. ಇವರಿಗೆ ‘ಇಂಥ ಸಮಾಜ’ದ ಮೇಲೆ ಸಿಟ್ಟು, ಸೆಡವು ಯಾವುದೂ ಇಲ್ಲ! ಬದಲಿಗೆ ಪ್ರೀತಿ, ಕರುಣೆ, ಕಾಳಜಿ ಇದೆ. ಇವರ ಕೈಯಲ್ಲಿ ಕಾಸಿಲ್ಲ; ಆದರೆ, ಕನಸುಗಳಿಗೆ ಬರವಿಲ್ಲ.

ಇವರೆಲ್ಲ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 90 ಕ್ಕೂ ಮೇಲ್ಪಟ್ಟು ಅಂಕಗಳನ್ನು ಗಳಿಸಿದ್ದಾರೆ. ಆದರೆ, ಇವರ ಕುಟುಂಬದ ವಾರ್ಷಿಕ ಆದಾಯ ಮಾತ್ರ ಹತ್ತರಿಂದ ಹನ್ನೊಂದು ಸಾವಿರ ಮೀರುವುದಿಲ್ಲ!

ಸಮಾಜದಲ್ಲಿ ಇಂಥವರಿಗಾಗಿ ಉದಾರವಾಗಿ ದೇಣಿಗೆ ಕೊಡುವವರು ಇರುವುದರಿಂದಲೇ ಇವರ ಕನಸುಗಳು ಇನ್ನೂ ಜೀವಂತವಾಗಿವೆ. ಪ್ರಾಮಾಣಿಕತೆ, ಬದ್ಧತೆ, ವಿಶ್ವಾಸರ್ಹತೆಯನ್ನು ಉಳಿಸಿಕೊಂಡರೆ ಉದಾರವಾಗಿ ಸಹಾಯ ಮಾಡುವ ಕೈಗಳಿಗೇನು ಕೊರತೆ ಇಲ್ಲ. ಈ ಮಕ್ಕಳು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಕೆಳಸ್ತರದಲ್ಲಿದ್ದಾರೆ. ಆದರೆ, ಉನ್ನತ ಶಿಕ್ಷಣ, ಸಮಾಜ ಸೇವೆಯಂಥ ಉದಾತ್ತ ಕನಸುಗಳನ್ನು ಕಾಣುತ್ತಿದ್ದಾರೆ.

ಇವರು ಅಂದುಕೊಂಡಂತೆ ವೈದ್ಯರೋ, ಎಂಜಿನಿಯರೋ, ಉನ್ನತ ಮಟ್ಟದ ಅಧಿಕಾರಿಯೋ ಆದಾಗಲೂ ಇದೇ ಆದರ್ಶ, ಕನಸುಗಳನ್ನು  ಉಸಿರಾಡುತ್ತಲೇ ಇರಲಿ. ರೈತರು, ಕ್ಷೌರಿಕರು, ಮೇದಾರರು, ನೇಕಾರರು, ದರ್ಜಿಗಳಂತಹ ಶ್ರಮಿಕ ವರ್ಗದ ಮಕ್ಕಳು ‘ಗ್ರಾಮ ಭಾರತ’ದ ನಾಳೆಗಳನ್ನು ಉಜ್ವಲಗೊಳಿಸುವ ಭರವಸೆಯಂತೆ ಕಾಣಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT