ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಹೊಳೆದ ಭರವಸೆಯ ಬೆಳ್ಳಿಗೆರೆ

Last Updated 4 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಭಾರತ, ಪಾಕಿಸ್ತಾನ ನಡುವಣ ಸ್ನೇಹ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಕೊನೆಗೂ ಆಶಾಕಿರಣವೊಂದು ಮಿನುಗುತ್ತಿದೆ. ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರು ಹಿಂದ್-ಪಾಕ್ ದೋಸ್ತಿ ಮಂಚ್‌ಗೆ ಶುಭ ಸಂದೇಶ ಕಳುಹಿಸಿದ್ದಾರೆ. ಇದೊಂದು ಆರೋಗ್ಯಕರ ಬೆಳವಣಿಗೆ.

ಎರಡೂ ದೇಶಗಳ ನಡುವೆ ಮಧುರ ಸಂಬಂಧ ಮೂಡಿಸಲಿಕ್ಕಾಗಿ ದೋಸ್ತಿಮಂಚ್ ನಿರಂತರವಾಗಿ ಒಂದಿಲ್ಲಾ ಒಂದು ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಆಗಸ್ಟ್ 14 ಮತ್ತು 15ರ ಮಧ್ಯರಾತ್ರಿ ದೋಸ್ತಿಮಂಚ್ ಮತ್ತು ಪಾಕಿಸ್ತಾನದಲ್ಲಿ `ಸಫ್ಮಾ~ ಸದಸ್ಯರು ಸಾರ್ವಜನಿಕ ಸ್ಥಳಗಳಲ್ಲಿ ಮೊಂಬತ್ತಿಗಳನ್ನು ಹಚ್ಚಿ ಸಂಭ್ರಮಿಸಿದ್ದಾರೆ.

ಅಂದು ಈ ಎರಡೂ ದೇಶಗಳು ಹುಟ್ಟು ಪಡೆದ ದಿನ ತಾನೆ. ಕಳೆದ 17 ವರ್ಷಗಳಿಂದ ದೋಸ್ತಿಮಂಚ್ ಸದಸ್ಯರು ಈ ಕೈಂಕರ್ಯ ನಡೆಸುತ್ತಲೇ ಬಂದಿದ್ದಾರೆ. ಅಟ್ಟಾರಿ ವಾಘಾ ಗಡಿಯಲ್ಲಿ ಮೊಂಬತ್ತಿಗಳು ಮಿಣಮಿಣ ಎಂದಿವೆ. ಮೊನ್ನೆ ವಾಘಾ ಗಡಿಯಲ್ಲಿ `ಭಾರತ ಪಾಕಿಸ್ತಾನ ಗೆಳೆತನ ಅಜರಾಮರವಾಗಿರಲಿ~ `ಸೋದರರು ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯಲಿ~ ಇತ್ಯಾದಿ ಘೋಷಣೆಗಳು  ಮುಗಿಲು ಮುಟ್ಟಿದ್ದವು.

ಉಭಯ ದೇಶಗಳ ನಡುವೆ ಸೌಹಾರ್ದತೆ ಮತ್ತು ಶಾಂತಿಗೆ ಪೂರಕವಾಗಿ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಜರ್ದಾರಿ ಅವರು ತಮ್ಮ ಅತೀವ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ದಿಕ್ಕಿನಲ್ಲಿ ಶ್ರಮಿಸುತ್ತಿರುವವರನ್ನು ಅವರು ಅಭಿನಂದಿಸಿದ್ದಾರೆ, ಕೃತಜ್ಞತೆ ಸಲ್ಲಿಸಿದ್ದಾರೆ.

`ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರ ಮತ್ತು ಜನಸಾಮಾನ್ಯರು ಈ ಭೂಪ್ರದೇಶದಲ್ಲಿ ಸದಾ ಶಾಂತಿ ನೆಲೆಸಬೇಕೆಂದು ಬಯಸುತ್ತವೆ. ಸರ್ಕಾರವಂತೂ ಈ ನಿಲುವಿಗೆ ಬದ್ಧವಾಗಿದೆ. ಉಭಯ ದೇಶಗಳೂ ತಮ್ಮ ವೈಮನಸ್ಸುಗಳನ್ನೆಲ್ಲಾ ಮರೆತು ಅಭಿವೃದ್ಧಿಯ ಪಥದಲ್ಲಿ ಪರಸ್ಪರ ಸಹಕಾರದೊಂದಿಗೆ ಹೆಜ್ಜೆ ಇಡಬೇಕೆಂಬ ಆಶಯ ಹೊಂದಿದ್ದೇವೆ~ ಎಂದೂ ಜರ್ದಾರಿ ನುಡಿದಿದ್ದಾರೆ.

ಮನಮೋಹನ್ ಸಿಂಗ್ ಅವರೂ ಅದೇ ತೆರನಾದ ಆಶಯವಿರುವ ಸಂದೇಶ ಕಳುಹಿಸಿದ್ದಾರೆ. `ಅಮೃತಸರದಲ್ಲಿ ಭಾರತ ಮತ್ತು ಪಾಕಿಸ್ತಾನ ದೋಸ್ತಿಮಂಚ್ ಸಂಘಟಿಸಿರುವ ಭಾರತ ಪಾಕ್ ಶಾಂತಿ ಹಬ್ಬದ ಸಂಗತಿ ನನಗೆ ಅತೀವ ಸಂತಸ ಉಂಟು ಮಾಡಿದೆ. ದಕ್ಷಿಣ ಏಷ್ಯದಾದ್ಯಂತ ಶಾಂತಿ, ಸ್ನೇಹದ ವಾತಾವರಣ ಮೂಡಿಸುವ ದಿಸೆಯಲ್ಲಿ ಮಂಚ್ ಹೊಂದಿರುವ ಆಶಯ ನಿಜಕ್ಕೂ ಶ್ಲಾಘನಾರ್ಹ.

ಇದು ಇವತ್ತಿನ ಅಗತ್ಯ ಕೂಡ. ಇಂತಹ ಪ್ರಯತ್ನಗಳು ದಕ್ಷಿಣ ಏಷ್ಯಾವನ್ನು ಕಾಡುತ್ತಿರುವ ಬಡತನ, ಅನಕ್ಷರತೆ, ರೋಗರುಜಿಣಗಳು, ಹಸಿವು ಇತ್ಯಾದಿ ಭೀಕರ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿಯಾಗಬಲ್ಲದು~ ಎಂಬ ಆಶಯ ವ್ಯಕ್ತ ಪಡಿಸಿದ್ದಾರೆ.

ಭಾರತ-ಪಾಕ್ ಗಡಿಯಲ್ಲಿ ಮೊಂಬತ್ತಿ ಹಚ್ಚುವ ನಮ್ಮ ಪ್ರಕ್ರಿಯೆಯ ಹಿಂದಿನ ಅನುಭವ ಸಿಹಿಯಾಗೇನೂ ಇರಲಿಲ್ಲ. ಹಾದಿ ಸಲೀಸೂ ಆಗಿರಲಿಲ್ಲ. ನಾವು ಶಾಂತಿಯಾತ್ರೆ ಆರಂಭಿಸಿದಾಗ ಎಲ್ಲೆಡೆಯೂ ಪಾಕ್ ವಿರೋಧಿ ಭಾವನೆಗಳೇ ಎದ್ದು ಕಾಣುತಿತ್ತು. ಬೆದರಿಕೆ ಕರೆಗಳು, ಈ ಯಾತ್ರೆಯನ್ನು ವಿರೋಧಿಸುವ ಪ್ರದರ್ಶನಗಳು, ಬೈಗುಳವೇ ತುಂಬಿದ್ದ ಪತ್ರಗಳು ಸಾಮಾನ್ಯವಾಗಿತ್ತು.

ಆದರೆ ನಾವು ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯಲಿಲ್ಲ. ಎರಡೂ ದೇಶಗಳ ನಡುವಣ ಸಂಬಂಧದಲ್ಲಿ ಒಡಕು ಕಾಣಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ, ನಾವೆಲ್ಲರೂ ಮಾನವ ಕುಲಕ್ಕೆ ಸೇರಿದವರು ಎಂಬ ಭಾವ ಬಿತ್ತುತ್ತಾ ಸಾಗಿದ್ದೆವು. ಎರಡೂ ದೇಶಗಳ ನಡುವಣ ಭಿನ್ನಾಭಿಪ್ರಾಯಗಳನ್ನು ಸಂಪೂರ್ಣ ನಿವಾರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಾದ ದಾರಿಗಳ ಬಗ್ಗೆಯೂ ಹಾದಿಯುದ್ದಕ್ಕೂ ಅಲ್ಲಲ್ಲಿ ನಡೆದ ವಿಚಾರಸಂಕಿರಣಗಳಲ್ಲಿ ಚರ್ಚಿಸಿದ್ದೆವು.

ನಮ್ಮ ಪ್ರಯತ್ನಗಳ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಮಂದಿ ಲೇವಡಿ ಮಾಡಿ ನಕ್ಕಿದ್ದರು. `ಮೊಂಬತ್ತಿವಾಲಾ~ಗಳೆಂದು ಕಟಕಿಯಾಡಿದ್ದರು. ಗಡಿಪ್ರದೇಶದಲ್ಲಿ ರಾತ್ರಿ ಎಂಟು ಗಂಟೆಯ ಮೇಲೆ ಕರ್ಫ್ಯೂ ಇರುತ್ತದೆಯಾದರೂ, ಭಾರತ ಸರ್ಕಾರ ನಮ್ಮ ಯಾತ್ರೆಗೆ ಅನುಮತಿ ನೀಡಿ ಸಹಕರಿಸಿತ್ತು. ಅತ್ತ ಪಾಕ್ ಸರ್ಕಾರ ಕೂಡಾ ಹಸಿರು ನಿಶಾನೆ ತೋರಿತ್ತು.

ಗಡಿಯಲ್ಲಿ ನಾವು ಧ್ವಜಗಳನ್ನು, ಸಿಹಿತಿನಿಸುಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡೆವು. ನಾವೆಲ್ಲರೂ ಒಗ್ಗೂಡಿ ಫೈಜ್ ಅಹಮ್ಮದ್ ಫೈಜ್ ಅವರ `ಹಮ್ ದೇಖೇಂಗೇ...~ ಗೀತೆಯನ್ನು ಎದೆತುಂಬಿ ಹಾಡಿದೆವು. ಅದೊಂದು ಭಾವನಾತ್ಮಕ ಸಂದರ್ಭ. ಆ ಗಡಿಯಲ್ಲಿ ನಮ್ಮೆಲ್ಲರನ್ನೂ ವಿಭಜಿಸುವ ಗೆರೆ ಎಳೆದಿರಬಹುದು.

ಆದರೆ ಶತಶತಮಾನಗಳ ಸಾಂಸ್ಕೃತಿಕ ಸಂಬಂಧದ ನಡುವೆ ಗೆರೆ ಎಳೆಯಲು ಸಾಧ್ಯವಾಗಿರಲಿಲ್ಲ. ಈ ಪ್ರದೇಶದಲ್ಲೇ ಹಿಂದೂ, ಮುಸಲ್ಮಾನರು ಶತಮಾನಗಳಿಂದ ಒಗ್ಗೂಡಿ ಬದುಕಿದ್ದರು. ಸುಖ ದುಃಖಗಳನ್ನು ಹಂಚಿಕೊಂಡಿದ್ದರು. ಈದ್, ದೀಪಾವಳಿ ಆಚರಿಸಿದ್ದರು. ಆದರೆ ಸ್ವಾತಂತ್ರ ಸಿಕ್ಕಿದ ನಂತರ ಈ ಪ್ರದೇಶದಲ್ಲಿ ಮತ್ತೆ ಏಕೆ ಆ ರೀತಿ ಒಗ್ಗೂಡಿ ಬದುಕಲು ಸಾಧ್ಯವಾಗಲಿಲ್ಲ ?

ದೇಶ ಇಬ್ಭಾಗವಾದ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ನಡೆದ ದುಷ್ಕೃತ್ಯಗಳು, ಅಮಾನವೀಯ ಘಟನೆಗಳಿಂದಾಗಿ ಒಡೆದುಹೋದ ಮನಸ್ಸುಗಳು ಮತ್ತೆ ಒಂದಾಗಲು ಸಾಧ್ಯವಿದೆ ಎನ್ನುವ ಆಶಾಭಾವನೆ ನನ್ನದು. ಆ ನಿಟ್ಟಿನ ವಿಚಾರಧಾರೆಯ ಸಿಂಚನ ಅಲ್ಲಿ ಆಗಬೇಕಾದುದು ಪ್ರಸಕ್ತ ಅಗತ್ಯ.

ಆ ಕಾಲದಲ್ಲಿ ಸಂಭವಿಸಿದ ಬುದ್ಧಿಭ್ರಮಣೆಯ ಪ್ರಸಂಗ ಎಂದು ಆ ಘಟನೆಗಳನ್ನೆಲ್ಲಾ ಮರೆಯಬೇಕಾದ ಅಗತ್ಯವಿದೆ. ಆ ಪ್ರದೇಶದಲ್ಲಿ ಸ್ವಾತಂತ್ರ್ಯಕ್ಕೆ ಮೊದಲೇ ದ್ವೇಷದ ಬೀಜ ಬಿತ್ತಿಯಾಗಿತ್ತು ಎನ್ನುವುದನ್ನೂ ಅಲ್ಲಗಳೆಯುವಂತಿಲ್ಲ. ಜೀವಮಾನವೆಲ್ಲಾ ಒಂದೇ ಊರಿನಲ್ಲಿ ಬದುಕಿದವರು ಆ ದಿನಗಳಲ್ಲಿ ತಮ್ಮ ನೆರೆಹೊರೆಯವರನ್ನೇ ಕೊಂದು ಹಾಕಿದ್ದು, ಅಲ್ಲಿದ್ದ ಮಹಿಳೆಯರನ್ನು ಅಪಹರಿಸಿದ್ದು ಇತ್ಯಾದಿ ಘಟನೆಗಳು ಅನಾಗರಿಕ ಸಮಾಜದ ಸಂಕೇತವೆನಿಸುತ್ತದೆ.

ಅದೇನೇ ಇರಲಿ, ನಾವು ಇತಿಹಾಸದ ಕಥೆಗಳನ್ನು ತುಂಬಿಕೊಂಡ ಬುಟ್ಟಿಯನ್ನೊತ್ತು ನಡೆಯುತ್ತಿದ್ದೇವೆ. ದೇಶ ವಿಭಜನೆಗೆ ಸಂಬಂಧಿಸಿದ ವಿಭಿನ್ನ ಆಯಾಮಗಳ ಬಗ್ಗೆ ಅಸಂಖ್ಯ ಕಥೆಗಳು ಹೊರಬಂದಿವೆ. ಮತೀಯ ನೆಲೆಯಲ್ಲಿಯೇ ವಾಗ್ವಾದಗಳನ್ನು ಕಂಡಿದ್ದೇವೆ. ಹೀಗಾಗಿ, ಎರಡೂ ಕಡೆ ಬದುಕುವವರ ಎದೆಯಾಳದ ಭಾವನೆಗಳನ್ನೂ ಮೀರಿದ ಸಂಗತಿಗಳೇ ನಿರ್ಣಾಯಕ ಪಾತ್ರ ವಹಿಸುತ್ತಿವೆ.

ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಪಹರೆ ಕಡಿಮೆಯಾಗಲಿ. ಎರಡೂ ಕಡೆ ಜನ ಅತ್ತಿಂದಿತ್ತ, ಇತ್ತಿಂದತ್ತ ಹೋಗಿಬರುವುದು ನಡೆಯಲಿ. ಅವರಿಗೆ ವೀಸಾ, ಪೊಲೀಸ್ ತಪಾಸಣೆಗಳ ಕಿರಿಕಿರಿ ಇಲ್ಲದಾಗಲಿ. ಆಗ ಎರಡೂ ಕಡೆಯ ಮಂದಿ ಸೌಹಾರ್ದದಿಂದ ಒಗ್ಗೂಡಿ ಹೆಜ್ಜೆ ಇಡಲು ಸಾಧ್ಯವಾಗಬಹುದು.

 ಆದರೆ ಎರಡೂ ದೇಶಗಳಲ್ಲಿರುವ ಮೂಲಭೂತವಾದಿಗಳ ಪಾತ್ರ ಮಾತ್ರ ಮಾನವತೆಯ ಹಾದಿಗೆ ಸದಾ ಅಡ್ಡಗಾಲಾಗುತ್ತಲೇ ಇದೆ. ಈ ದಿಸೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಪಾಕಿಸ್ತಾನದಲ್ಲಿಯೇ ಇವರ ಅಬ್ಬರ ಹೆಚ್ಚು. ಪಾಕ್ ಮೂಲಭೂತವಾದಿಗಳ ಜಿಹಾದ್ ಕರೆ ಕಾಲು ಕೆರೆದು ಕದನಕ್ಕೆ ನಿಲ್ಲುವಂತಿದೆ.
 
ಈ ಮೂಲಭೂತವಾದಿಗಳು ಕಳುಹಿಸಿದರೆನ್ನಲಾದ ಬೆದರಿಕೆ ಸಂದೇಶಗಳಿಗೆ ಹೆದರಿದ ಭಾರತದ ಈಶಾನ್ಯ ರಾಜ್ಯಗಳ ಸಾವಿರಾರು ಮಂದಿ ದಕ್ಷಿಣ ಭಾರತದ ಹತ್ತಾರು ಪಟ್ಟಣಗಳನ್ನು ತೊರೆದು ತಮ್ಮೂರಿಗೆ ಹೊರಟಿದ್ದನ್ನು ಮರೆಯುವುದೆಂತು.
 
ಪಾಕ್‌ನ ಅಂತಹ ಶಕ್ತಿಗಳ ಜತೆಗೆ ಕೆಲವು ಭಾರತೀಯರೂ ಕೈಜೋಡಿಸಿರುವುದೂ ನಿಜ. ಆದರೆ ಇಂತಹ ಕೃತ್ಯಗಳಲ್ಲಿ ತೊಡಗಿರುವವರನ್ನು ಹಿಡಿದು ಶಿಕ್ಷಿಸುವ ದಿಸೆಯಲ್ಲಿ ಉಭಯ ದೇಶಗಳ ಸರ್ಕಾರಗಳು ಪರಸ್ಪರ ಸಹಕರಿಸುತ್ತಾ ನಡೆದಿರುವುದಂತು ಸಂತಸ ಕೊಡುವಂತಹ ಸಂಗತಿಯೇ ಹೌದು.


ಭಾರತ ಜಾತ್ಯತೀತ ದೇಶ ಎನ್ನುತ್ತೇವೆ. ಆದರೆ ಈಚೆಗೆ ಗಡಿಯಾಚೆಯಿಂದ ಬಂದಿವೆ ಎನ್ನಲಾದ ಸುಮಾರು ಇನ್ನೂರರಷ್ಟು ಸಂದೇಶಗಳು ಭಾರತದ ವಿವಿಧ ಕಡೆ ನೆಲೆಸಿರುವ ಈಶಾನ್ಯ ರಾಜ್ಯಗಳ ಜನರನ್ನು ನಡುಗಿಸಿಬಿಟ್ಟಿತಲ್ಲ. ಮುಂದಿನ ದಿನಗಳಲ್ಲಿ ಎರಡು ಸಾವಿರ ಸಂದೇಶ ಬಂದಿತ್ತೆಂದರೆ, ದೇಶದ ಪರಿಸ್ಥಿತಿ ಏನಾಗಬಹುದು.

ಇದು ತೀರಾ ಗಂಭೀರವಾದ ಸಂಗತಿಯೆಂದೇ ಪರಿಗಣಿಸಬೇಕಿದೆ. ಭಾರತದ ಸರ್ಕಾರ ಮತ್ತು ನಾಗರಿಕ ಸಮಾಜ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಸ್ವಾತಂತ್ರ್ಯ ಸಿಕ್ಕಿ 65 ವರ್ಷಗಳು ಕಳೆದರೂ ರಾಷ್ಟ್ರೀಯ ಸಮಗ್ರತೆಯನ್ನು ಕಂಡುಕೊಳ್ಳಲು ನಮಗೆ ಸಾಧ್ಯವಾಗಿಲ್ಲ ಎಂದೆನಿಸುತ್ತದಲ್ಲವೇ ?

ಸಂಬಂಧ ಸುಧಾರಣೆಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ಸರ್ಕಾರಗಳು ಮಾತ್ರ ನಿಂತಲ್ಲಿಯೇ ನಿಂತು ಬಿಟ್ಟಿವೆಯಲ್ಲಾ ಎಂಬ ಚಿಂತೆ ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಸದ್ಯದಲ್ಲೇ ಪಾಕ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಯಾವುದೇ ಒಪ್ಪಂದಗಳಿಗೆ ಸಹಿ ಹಾಕದಿದ್ದರೂ, ಅವರ ಭೇಟಿಯೇ ಸಂಬಂಧ ಸುಧಾರಣೆಯಲ್ಲೊಂದು ಉತ್ತಮ ನಡೆಯಾಗಲಿದೆ.

ಆಫ್ಘಾನಿಸ್ತಾನದ ಪರಿಸ್ಥಿತಿ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಅದೇನೇ ಇರಬಹುದು, ಒಂದು ವೇಳೆ ಅಲ್ಲಿ ತಾಲಿಬಾನ್ ಮಂದಿ ಅಧಿಕಾರದ ಚುಕ್ಕಾಣಿ ಹಿಡಿದುದೇ ಆದರೆ ಏಷ್ಯಾದ ಈ ಪ್ರದೇಶಗಳೆಲ್ಲಾ ತತ್ತರಿಸಿಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವುದಂತು ನಿಜ. ಇಸ್ಲಾಮಾಬಾದ್‌ಗೆ ಸಮೀಪದಲ್ಲಿರುವ ಪಾಕ್ ವಾಯುನೆಲೆಯ ಮೇಲೆ ಈಚೆಗೆ ನಡೆದ ದಾಳಿಯನ್ನೇ ನೋಡಿ.

ತಾಲಿಬಾನ್ ಯಾವುದೇ ಸಮಯದಲ್ಲಿ ಯಾವುದೇ ಸ್ಥಳದ ಮೇಲೆ ದಾಳಿ ನಡೆಸಲು ಸಮರ್ಥ ಎನ್ನುವುದನ್ನು ಇದು ತೋರಿಸಿಕೊಟ್ಟಿದೆ. ಆದರೆ ಇನ್ನೊಂದೆಡೆ, ಪಾಕಿಸ್ತಾನ ಸರ್ಕಾರ ಭಯೋತ್ಪಾದಕರನ್ನು ನಿರ್ನಾಮ ಮಾಡುವ ನಿಟ್ಟಿನಲ್ಲಿ ಪೂರ್ಣ ಮನಸ್ಸಿನಿಂದ ತೊಡಗಿಕೊಂಡಿಲ್ಲ.
 
ಹಿಂದೆ ಮುಂಬೈ ದಾಳಿ ನಡೆಸಿದುದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಹಿಡಿಯುವುದೇ ಆಗಲಿ, ಹಿಡಿದವರಿಗೆ ಶಿಕ್ಷೆ ನೀಡುವುದೇ ಆಗಲಿ ಮುಂತಾದ ವಿಚಾರಗಳಲ್ಲಿ ಪಾಕ್ ಮೀನಮೇಷ ಎಣಿಸುತ್ತಾ ಕುಳಿತಿದೆ. ಸಿಕ್ಕಿ ಬಿದ್ದ ಉಗ್ರರು ನಿಜವಾಗಿಯೂ ಭಯೋತ್ಪಾದಕರಿರಲಿಕ್ಕಿಲ್ಲ ಎಂದೂ ತನ್ನ ವಾದಸರಣಿಯನ್ನೂ ಮುಂದಿಡುತ್ತಾ ಬಂದಿದೆ.

ಇವುಗಳ ನಡುವೆಯೂ ಪಾಕಿಸ್ತಾನ ತನ್ನ ವಾಣಿಜ್ಯ ಸಂಬಂಧಗಳನ್ನು ಬಲಗೊಳಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಆದರೆ ಈಚೆಗೆ ಕೆಲವು ಪ್ರಮುಖ ಉದ್ದಿಮೆ ಸಂಸ್ಥೆಗಳು ಮಾಡಿಕೊಂಡಿದ್ದ ಒಪ್ಪಂದಗಳನ್ನೂ ಕೊನೆಯ ಕ್ಷಣಗಳಲ್ಲಿ ರದ್ದುಗೊಳಿಸಿಬಿಟ್ಟಿವೆ.

ಆದರೆ ಆರ್ಥಿಕ ಸಂಬಂಧ ಗಟ್ಟಿಗೊಳ್ಳುವುದು ಅಥವಾ ಉಭಯ ದೇಶಗಳ ನಡುವಣ ವ್ಯಾಪಾರ ವಾಣಿಜ್ಯ ಚಟುವಟಿಕೆ ವೃದ್ಧಿಗೊಂಡಷ್ಟೂ ಭರವಸೆಯ ಆಶಾಕಿರಣಗಳು ಹೊಳೆಯತೊಡಗುತ್ತವೆ. ಈ ಸತ್ಯವನ್ನು ಎರಡೂ ದೇಶಗಳು ಮನದಟ್ಟು ಮಾಡಿಕೊಳ್ಳಬೇಕಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT