ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಪಟುಗಳಿಗಾಗಿ ಬ್ಲೂಟೂತ್ ಸ್ಟಿರಿಯೊ ಹೆಡ್‌ಸೆಟ್

Last Updated 12 ಅಕ್ಟೋಬರ್ 2017, 6:20 IST
ಅಕ್ಷರ ಗಾತ್ರ

ಮೊಬೈಲ್‌ನಲ್ಲಿ ಮಾತನಾಡಲು ಅದರಲ್ಲೇ ಇರುವ ಮೈಕ್ ಮತ್ತು ಸ್ಪೀಕರ್ ಬಳಸಬಹುದು ಅಥವಾ ಮಾತನಾಡುತ್ತ ಕೈಯಲ್ಲಿ ಬೇರೆ ಕೆಲಸ ಮಾಡಬೇಕಿದ್ದರೆ ಹ್ಯಾಂಡ್ಸ್‌ಫ್ರೀ ಬಳಸಬಹುದು. ಇವುಗಳಲ್ಲಿ ಕೇಬಲ್ ಮೂಲಕ ಜೋಡಣೆಗೊಳ್ಳುವ (ವೈರ್ಡ್) ಮತ್ತು ನಿಸ್ತಂತು (ಬ್ಲೂಟೂತ್ ವೈರ್‌ಲೆಸ್) ಎಂಬ ಎರಡು ನಮೂನೆಗಳಿವೆ. ಈ ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲಿ ಮತ್ತೆ ಹಲವು ನಮೂನೆಗಳಿವೆ. ಕೇವಲ ಮಾತನಾಡಲು ಬಳಸುವ  ಮೋನೊ ಮತ್ತು ಸಂಗೀತ ಆಲಿಸಲಿಕ್ಕೂ ಬಳಸಬಹುದಾದ ಸ್ಟಿರಿಯೊ ಹೆಡ್‌ಸೆಟ್‌ಗಳು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಸ್ಯಾಮ್‌ಸಂಗ್ ಲೆವೆಲ್ ಆ್ಯಕ್ಟಿವ್ ಬ್ಲೂಟೂತ್ ಸ್ಟಿರಿಯೊ ಹೆಡ್‌ಸೆಟ್ (Samsung Level Active).

ಇದು ವಿಶೇಷವಾಗಿ ಕ್ರೀಡಾಪಟುಗಳಿಗೆಂದೇ ತಯಾರಿಸಿದ ಹೆಡ್‌ಸೆಟ್. ಎಡ ಮತ್ತು ಬಲ ಸ್ಪೀಕರುಗಳನ್ನು ಒಂದು ಪಟ್ಟಿಯಾಕಾರದ ಕೇಬಲ್ ಮೂಲಕ ಜೋಡಿಸಲಾಗಿದೆ. ಈ ಪಟ್ಟಿಯಲ್ಲಿ, ಬಲ ಸ್ಪೀಕರಿನಿಂದ ಸುಮಾರು 2 ಇಂಚು ದೂರದಲ್ಲಿ ಮೂರು ಬಟನ್‌ಗಳಿರುವ ಮಾಡ್ಯೂಲ್‌ ಇದೆ. ಇದರಲ್ಲಿರುವ ಬಟನ್‌ಗಳಲ್ಲಿ ಮಧ್ಯದ ಬಟನ್ ಫೋನ್ ಬಳಕೆಯಲ್ಲಿ ಕರೆ ಸ್ವೀಕರಿಸುವ ಮತ್ತು ನಿಲ್ಲಿಸುವ ಬಟನ್ ಆಗಿ ಕೆಲಸ ಮಾಡುತ್ತದೆ. ಸಂಗೀತ ಆಲಿಸುವಾಗ ಇದೇ ಬಟನ್ ಸಂಗೀತವನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಮತ್ತು ಪುನಃ ಪ್ಲೇ ಮಾಡುವ (pause/play) ಬಟನ್ ಆಗಿ ಕೆಲಸ ಮಾಡುತ್ತದೆ. ಈ ಬಟನ್‌ನ ಒಂದು ಪಕ್ಕದಲ್ಲಿ ವಾಲ್ಯೂಮ್ ಹೆಚ್ಚು ಮಾಡುವ ಮತ್ತು ಇನ್ನೊಂದು ಪಕ್ಕದಲ್ಲಿ ವಾಲ್ಯೂಮ್ ಕಡಿಮೆ ಮಾಡುವ ಬಟನ್ ಇವೆ. ಇದೇ ಬಟನ್‌ಗಳು ಸಂಗೀತ ಆಲಿಸುವಾಗ ಹಿಂದಿನ ಅಥವಾ ಮುಂದಿನ ಹಾಡಿಗೆ ಲಂಘನ ಮಾಡಲೂ ಬಳಕೆಯಾಗುತ್ತವೆ.

ಎಡ ಬಲ ಸ್ಪೀಕರುಗಳ ವಿನ್ಯಾಸ ಚೆನ್ನಾಗಿದೆ. ಕಿವಿ ಕಾಲುವೆಯೊಳಗೆ ತುರುಕಿಸಿದರೆ ಸುಲಭದಲ್ಲಿ ಕಳಚಿ ಬೀಳುವುದಿಲ್ಲ. ಈ ಇಯರ್‌ಬಡ್‌ಗಳಿಗೆ 5 ಪ್ರತಿ ಕುಶನ್ ನೀಡಿದ್ದಾರೆ. ನಿಮ್ಮ ಕಿವಿಕಾಲುವೆಯ ಗಾತ್ರಕ್ಕೆ ಸರಿಹೊಂದುವ ಕುಶನ್ ಬಳಸುವುದು ಅತೀ ಅಗತ್ಯ. ತಪ್ಪಿದಲ್ಲಿ ಕಡಿಮೆ ಕಂಪನಾಂಕದ ಧ್ವನಿಯ (bass) ಪುನರುತ್ಪತ್ತಿ ತೃಪ್ತಿದಾಯಕವಾಗಿರುವುದಿಲ್ಲ. ಈ ಸ್ಪೀಕರುಗಳಿಗೆ ಕಿವಿಗೆ ನೇತುಹಾಕಲು ವಿಂಗ್‌ಟಿ‍ಪ್ಸ್‌ಗಳಿವೆ. ಅವು ಬೇಡ ಎಂದರೆ ಅವನ್ನು ಕಳಚಿಡಬಹುದು. ಅವುಗಳ ಜಾಗದಲ್ಲಿ ಎರಡು ರೆಕ್ಕೆಗಳಂತಹ ಕುಶನ್ ಅನ್ನು ಜೋಡಿಸಬಹುದು. ಇಂತಹ ಕುಶನ್‌ಗಳನ್ನು ಎರಡು ಪ್ರತಿ ನೀಡಿದ್ದಾರೆ.

ಎಡ ಬಲ ಸ್ಪೀಕರುಗಳ ಮೇಲೆ ವೃತ್ತಾಕಾರದ ಅಲ್ಯೂಮಿನಿಯಂ ಪ್ಲೇಟ್ ಇದೆ. ಬಲದ ಸ್ಪೀಕರ್‌ನ ಈ ಪ್ಲೇಟ್‌ನ ಅಡಿಯಲ್ಲಿ ಆನ್/ಆಫ್ ಬಟನ್ ಇದೆ. ಈ ಬಟನ್ ಇಲ್ಲಿರುವುದು ಕೆಲವೊಮ್ಮೆ ಕಿರಿಕಿರಿಯಾಗುತ್ತದೆ. ಸ್ಪೀಕರಿನ ಕುಶನ್ ಅನ್ನು ಕಿವಿ ಕಾಲುವೆಯೊಳಗೆ ಸರಿಯಾಗಿ ತುರುಕಿಸಿ ಕುಳಿತುಕೊಳ್ಳಿಸುವುದು ಅತೀ ಅಗತ್ಯ ಎಂದೆನಲ್ಲ, ಹಾಗೆ ಮಾಡುವಾಗ ಕೆಲವೊಮ್ಮ ಈ ಆನ್/ಆಫ್ ಬಟನ್ ಒತ್ತಿ ಹೋಗಿ, ಹೆಡ್‌ಸೆಟ್ ಆಫ್ ಆಗಿಬಿಡುತ್ತದೆ! ಎಡ ಕಿವಿಯ ಸ್ಪೀಕರಿನ ಪ್ಲೇಟ್ ಅನ್ನು ಸ್ವಲ್ಪ ಎತ್ತಿ ತಿರುಗಿಸಬಹುದು. ಆಗ ಅಲ್ಲಿ ಯುಎಸ್‌ಬಿ ಕಿಂಡಿ ಕಂಡುಬರುತ್ತದೆ. ಇದು ಹೆಡ್‌ಸೆಟ್ ಅನ್ನು ಚಾರ್ಜ್ ಮಾಡಲು ಬಳಕೆಯಾಗುತ್ತದೆ. ಎಡ ಸ್ಪೀಕರಿನಲ್ಲಿ ಎಲ್‌ಇಡಿ ಇದೆ. ಚಾರ್ಜ್ ಆಗುತ್ತಿರುವಾಗ ಅದು ಕೆಂಪಾಗಿದ್ದು ಪೂರ್ತಿ ಚಾರ್ಜ್ ಆದಾಗ ನೀಲಿಯಾಗುತ್ತದೆ.

ಕರೆ ಸ್ವೀಕರಿಸುವ ಬಟನ್ ಅನ್ನು 5 ಸೆಕೆಂಡು ಒತ್ತಿ ಹಿಡಿದರೆ ಹೆಡ್‌ಸೆಟ್ ಬ್ಲೂಟೂತ್ ಸಾಧನದ ಜೊತೆಗೂಡಲು ಸಿದ್ಧವಾಗುತ್ತದೆ (ಬ್ಲೂಟೂತ್ ಪೇರಿಂಗ್ ಮೋಡ್). ಆಗ ಎಲ್‌ಇಡಿ ನೀಲಿ ಮತ್ತು ಕೆಂಪು ಬಣ್ಣಗಳಲ್ಲಿ ಒಂದಾದ ನಂತರ ಒಂದರಂತೆ ಮಿನುಗುತ್ತದೆ. ಈಗ ನೀವು ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಈ ಹೆಡ್‌ಸೆಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಪೇರಿಂಗ್ ಅನ್ನು ಒಂದು ಸಲ ಮಾಡಿದರೆ ಸಾಕು. ನಂತರ ಬೇಕಾದಾಗ ಆನ್/ಆಫ್ ಮಾಡಬಹುದು. ಮೊಬೈಲ್ ಜೊತೆ ಬೇಗನೆ ಸಂಪರ್ಕಗೊಳ್ಳುತ್ತದೆ. ಲ್ಯಾಪ್‌ಟಾಪ್ ಜೊತೆ ಮೊದಲ ಸಲ ಸಂಪರ್ಕ ಸಾಧಿಸಲು ಸ್ವಲ್ಪ ಜಾಸ್ತಿ ಸಮಯ ಹಿಡಿಯುತ್ತದೆ.

ಸ್ಯಾಮ್‌ಸಂಗ್‌ನವರು ತಮ್ಮ ಜಾಲತಾಣದಲ್ಲಿ ಎಲ್ಲೂ ಈ ಹೆಡ್‌ಸೆಟ್‌ನ ಪೂರ್ತಿ ತಾಂತ್ರಿಕ ಗುಣವೈಶಿಷ್ಟ್ಯಗಳನ್ನು ನಮೂದಿಸಿಲ್ಲ. ಪೆಟ್ಟಿಗೆಯಲ್ಲೂ, ಜೊತೆಗೆ ನೀಡಿದ ಕೈಪಿಡಿಯಲ್ಲೂ ನೀಡಿಲ್ಲ. ಆದುದರಿಂದ ಕೆಲವು ಪ್ರಮುಖ ಗುಣವೈಶಿಷ್ಟ್ಯಗಳು ಏನೆಂದು ತಿಳಿದಿಲ್ಲ.

ಇದು ಮುಖ್ಯವಾಗಿ ಕ್ರೀಡಾಪಟುಗಳಿಗೆಂದೇ ತಯಾರಿಸಲ್ಪಟ್ಟಿದ್ದು. ಇದನ್ನು ತಯಾರಿಸಿದ ವಸ್ತುಗಳ ಗುಣಮಟ್ಟ ಚೆನ್ನಾಗಿದೆ. ಸ್ವಲ್ಪ ಮಟ್ಟಿನ ತೇವ ಮತ್ತು ಬೆವರುಗಳಿಂದ ಇದಕ್ಕೆ ಏನೂ ಹಾನಿಯಾಗುವುದಿಲ್ಲ. ಓಡುವಾಗ ಅಥವಾ ವ್ಯಾಯಾಮ ಮಾಡುವಾಗ ಇದನ್ನು ಧರಿಸಿಕೊಂಡಿರಬಹುದು. ಇದು ಸುಲಭವಾಗಿ ಕಿವಿಯಿಂದ ಬೀಳುವುದಿಲ್ಲ.

ಬ್ಲೂಟೂತ್ ವ್ಯಾಪ್ತಿ ಸುಮಾರು 10 ಮೀ. ಎಂದಿದ್ದಾರೆ. ಮಧ್ಯದಲ್ಲಿ ಗೋಡೆ ಅಡ್ಡ ಬಂದರೆ ಸಂಪರ್ಕ ಕಡಿತವಾಗುತ್ತದೆ. ಮಾತನಾಡುವಾಗ ಮೈಕ್ರೊಫೋನ್ ಬಾಯಿಗೆ ಹತ್ತಿರವಿದ್ದರೆ ಒಳ್ಳೆಯದು. ಮಾತನಾಡುತ್ತ ತಲೆ ಅತ್ತಿತ್ತ ತಿರುಗಿಸಿದರೆ ಇನ್ನೊಂದು ಬದಿಯಲ್ಲಿ ನಮ್ಮೊಡನೆ ಮಾತನಾಡುತ್ತ ನಮ್ಮ ಮಾತು ಕೇಳುವವರಿಗೆ ಧ್ವನಿ ಸ್ವಲ್ಪ ಏರುಪೇರಾಗುತ್ತದೆ. ಕೆಲವೊಮ್ಮೆ ಧ್ವನಿ ಗೊರಗೊರ ಎಂದು ಕೇಳಿಸುತ್ತದೆ.

ಧ್ವನಿಯ ಗುಣಮಟ್ಟ ನನಗೆ ತೃಪ್ತಿದಾಯಕವಾಗಿ ಕಂಡುಬಂದಿಲ್ಲ. ಧ್ವನಿಯಲ್ಲಿ ನಿಖರತೆ ಇದೆ. ಆದರೆ ಎಲ್ಲ ಕಂಪನಾಂಕಗಳ ಧ್ವನಿಯ ಪುನರುತ್ಪತ್ತಿ ತೃಪ್ತಿದಾಯಕವಾಗಿಲ್ಲ. ಅದರಲ್ಲೂ ಮುಖ್ಯವಾಗಿ ಕಡಿಮೆ ಕಂಪನಾಂಕದ ಧ್ವನಿಯ ಪುನರುತ್ಪತ್ತಿ ಇದರ ಬೆಲೆಗೆ ಹೋಲಿಸಿದರೆ ಖಂಡಿತವಾಗಿಯೂ ತೃಪ್ತಿದಾಯಕವಾಗಿಲ್ಲ. ಮಾನವ ಧ್ವನಿಯ ಪುನರುತ್ಪತ್ತಿ ಅತ್ಯುತ್ತಮವಾಗಿದೆ, ಅಂದರೆ ಈ ಹೆಡ್‌ಸೆಟ್ ಗಾಯನವನ್ನು ಆಲಿಸಲು ಉತ್ತಮ, ವಾದ್ಯಸಂಗೀತ ಆಲಿಸಲು ಸಾಲದು. ನೀಡುವ ಹಣಕ್ಕೆ ಹೋಲಿಸಿದರೆ ಖಂಡಿತವಾಗಿಯೂ ತೃಪ್ತಿ ನೀಡದ ಹೆಡ್‌ಸೆಟ್ ಎನ್ನಬಹುದು.

***
ವಾರದ ಆ್ಯಪ್:  ಫೋನ್ ಪರೀಕ್ಷಿಸಿ

ನೀವು ಕೊಂಡುಕೊಂಡ ಆಂಡ್ರೋಯಿಡ್ ಫೋನ್ ಎಷ್ಟು ಉತ್ತಮವಾಗಿದೆ? ಅದರಲ್ಲಿರುವ ಪ್ರೋಸೆಸರ್ ಯಾವುದು? ಅದರ ವೇಗ ಎಷ್ಟು? ಫೋನಿನ ಪರದೆಯ ರೆಸೊಲೂಶನ್ ಎಷ್ಟು? ಎಷ್ಟು ಕ್ಯಾಮರಗಳಿವೆ? ಅವುಗಳ ರೆಸೊಲೂಶನ್ ಎಷ್ಟು? ಎನ್‌ಎಫ್‌ಸಿ, ಎಫ್‌ಎಂ ರೇಡಿಯೋ, ಇತ್ಯಾದಿಗಳು ಇವೆಯೋ ಇಲ್ಲವೋ? ಹೀಗೆ ಹತ್ತು ಹಲವು ಮಾಹಿತಿಗಳಿಗೆ ಹುಡುಕಾಡುತ್ತಿದ್ದೀರಾ? ಹಾಗಿದ್ದರೆ ನಿಮಗೆ ಫೋನ್ ಪರೀಕ್ಷಿಸುವ ಕಿರುತಂತ್ರಾಂಶ (ಆಪ್) ಬೇಕು. ಅಂತಹವು ಗೂಗ್ಲ್ ಪ್ಲೇ ಸ್ಟೋರಿನಲ್ಲಿ ಹಲವಾರಿವೆ. ಅಂತಹ ಒಂದು ಕಿರುತಂತ್ರಾಂಶವನ್ನು ನೀವು Phone Check (and Test) ಎಂದು ಪ್ಲೇ ಸ್ಟೋರಿನಲ್ಲಿ ಹುಡುಕಿದರೆ ನಿಮಗೆ ಲಭ್ಯ, ಅಥವಾ bit.ly/gadgetloka299 ಜಾಲತಾಣಕ್ಕೆ ಭೇಟಿ ನೀಡಿಯೂ ಪಡೆಯಬಹುದು. ಒಂದು ಉತ್ತಮ ಕಿರುತಂತ್ರಾಂಶ.

***

ಗ್ಯಾಜೆಟ್ ಸುದ್ದಿ: ಎನ್‌ಎಫ್‌ಸಿ ಅಳವಡಿಸಿದ ಚಡ್ಡಿ!

ಅತಿ ಸಮೀಪ ಸಂವಹನ ಅಂದರೆ ಎನ್‌ಎಫ್‌ಸಿ ಬಳಸಿ ಹಲವು ಕೆಲಸಗಳನ್ನು ಮಾಡಬಹುದು. ಉದಾಹರಣೆಗೆ ಫೋನಿಗೆ ಸ್ಪೀಕರ್ ಸಂಪರ್ಕ ಮಾಡುವುದು, ಹಣ ವರ್ಗಾವಣೆ ಮಾಡುವುದು, ಇತ್ಯಾದಿ. ಕ್ರೀಡೆಗೆ ಬೇಕಾದ ಹಲವು ಉಪಕರಣ, ಪಾದರಕ್ಷೆ, ಉಡುಗೆ ತೊಡುಗೆಗಳನ್ನು ತಯಾರಿಸುವ ನೈಕ್ ಕಂಪೆನಿ ಇದೀಗ ಎನ್‌ಎಫ್‌ಸಿ ಅಳವಡಿಸಿದ ಚಡ್ಡಿಗಳನ್ನು ತಯಾರಿಸಿದೆ. ಅಮೆರಿಕದ ಮುಂಬರುವ ನ್ಯಾಶನಲ್ ಬ್ಯಾಸ್ಕೆಟ್‌ಬಾಲ್ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಈ ಚಡ್ಡಿಗಳನ್ನು ಧರಿಸಲಿದ್ದಾರೆ. ಬೇರೆ ಬೇರೆ ತಂಡಗಳಿಗೆ ಬೇರೆ ಬೇರೆ ಸಂಕೇತಗಳನ್ನೊಳಗೊಂಡ ಚಡ್ಡಿಗಳನ್ನು ನೈಕ್ ತಯಾರಿಸಿದೆ. ಕ್ರೀಡಾಭಿಮಾನಿಗಳು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅದಕ್ಕೆಂದೇ ತಯಾರಿಸಿದ ಕಿರುತಂತ್ರಾಂಶವನ್ನು ಹಾಕಿಕೊಳ್ಳಬೇಕು. ಆಯಾ ತಂಡದ ಅಭಿಮಾನಿಗಳು ಆಯಾ ತಂಡದ ಚಡ್ಡಿಗಳನ್ನು ಖರೀದಿಸಿ ಅದನ್ನು ಎನ್‌ಎಫ್‌ಸಿ ಮೂಲಕ ಫೋನಿಗೆ ಸಂಪರ್ಕಿಸಿದರೆ ಆಯಾ ತಂಡದ ಇತ್ತೀಚೆಗಿನ ಸ್ಕೋರು ಹಾಗೂ ಕ್ರೀಡೆಯ ಇತರೆ ಸುದ್ದಿ ಎಲ್ಲ ಅವರ ಫೋನಿನಲ್ಲಿ ಬರುತ್ತದೆ.

***

ಗ್ಯಾಜೆಟ್ ಸಲಹೆ
ಶ್ರೀನಾಥ ಡೋಂಗ್ರೆ ಅವರ ಪ್ರಶ್ನೆ: ಮಾಮೂಲಿ ವಿಡಿಯೋಗಳನ್ನು HD ವಿಡಿಯೋಗಳಾಗಿ ಪರಿವರ್ತನೆ ಮಾಡುವುದು ಹೇಗೆ? ದಯವಿಟ್ಟು ಮಾಹಿತಿ ನೀಡಿ.

ಉ: ಮಾಮೂಲಿ ವಿಡಿಯೋ ಎಂದರೆ ಯಾವುದು ಎಂಬುದನ್ನು ನೀವು ಸ್ಪಷ್ಟೀಕರಿಸಿಲ್ಲ. ಕಡಿಮೆ ರೆಸೊಲೂಶನ್‌ನ ವಿಡಿಯೋವನ್ನು ಅಧಿಕ ರೆಸೊಲೂಶನ್ ವಿಡಿಯೋ ಆಗಿ ಪರಿವರ್ತಿಸುವುದು ಹೇಗೆ ಎಂಬುದು ನಿಮ್ಮ ಪ್ರಶ್ನೆ ಎಂದು ನಾನು ಊಹಿಸುತ್ತಿದ್ದೇನೆ. ಇದು ಸಾದ್ಯವಿಲ್ಲ. ರೆಸೊಲೂಶನ್ ಜಾಸ್ತಿ ಮಾಡಬಹುದು. ಆದರೆ ಗುಣಮಟ್ಟ ಉತ್ತಮವಾಗಲಾರದು.

***

ಗ್ಯಾಜೆಟ್ ತರ್ಲೆ:
ಒಂದಾನೊಂದು ಕಾಲದಲ್ಲಿ ಜನಪ್ರಿಯವಾಗಿದ್ದ ಗ್ರಾಮಾಫೋನುಗಳು ನೆನಪಿವೆಯಾ? ಅತ್ಯುತ್ತಮ ಗುಣಮಟ್ಟದ ಗ್ರಾಮಾಫೋನ್ ಟರ್ನ್‌ಟೇಬಲ್‌ಗೆ ಟೆಕ್ನಿಕ್ಸ್ ಪ್ರಖ್ಯಾತವಾಗಿತ್ತು. ಅವೆಲ್ಲ ಈಗ ಇತಿಹಾಸ. ನಿಲ್ಲಿ, ಇತಿಹಾಸ ಮರುಕಳಿಸುತ್ತದೆ. ಅದೇ ಪ್ರಖ್ಯಾತ ಟೆಕ್ನಿಕ್ಸ್ ಟರ್ನ್‌ಟೇಬಲ್ ಮತ್ತೆ ಬರುತ್ತಿದೆ. ಬೆಲೆ ಎಷ್ಟು ಗೊತ್ತಾ? ಕೇವಲ 4000 ಡಾಲರ್ ಅಂದರೆ ಸುಮಾರು 2,60,000 ರೂ! ಬೇಕಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT