ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿತನದ ಹಕ್ಕು ಮತ್ತು ಸಾರ್ವಜನಿಕ ಹಿತ

Last Updated 27 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಅದೊಂದು ವಿಷಯ ಅಲ್ಲಿ ಇದೆಯೋ ಇಲ್ಲವೋ ಎಂದು ಹುಡುಕಿ ಹುಡುಕಿ ಕೊನೆಗೂ ಅದು ಅಲ್ಲಿ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭಾರತದ ಸಂವಿಧಾನದಲ್ಲಿ ಖಾಸಗಿತನ ಒಂದು ಮೂಲಭೂತ ಹಕ್ಕು ಆಗಿ ಇದೆಯೋ ಇಲ್ಲವೋ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಲು ಈ ಹುಡುಕಾಟ ನಡೆದದ್ದು.

ದಶಕಗಳ ಹಿಂದೆ ಎರಡು ಬಾರಿ ಹುಡುಕಾಟ ನಡೆಸಿದ ನ್ಯಾಯಮೂರ್ತಿಗಳು ಅಂತಹದ್ದೊಂದು ಮೂಲಭೂತಹಕ್ಕು ಭಾರತದ ಸಂವಿಧಾನದಲ್ಲಿ ಇಲ್ಲವೇ ಇಲ್ಲ ಎಂದಿದ್ದರು. ಈ ಮಧ್ಯೆ ನ್ಯಾಯಾಲಯಗಳು ಅದು ಇದೆ ಎಂದು ಹಲವು ಬಾರಿ ಹೇಳಿದಾಗಲೂ ಗೊಂದಲ ನಿವಾರಣೆಯಾಗಿರಲಿಲ್ಲ. ಸರ್ಕಾರ ಎಲ್ಲಾ ಸಾರ್ವಜನಿಕ ವ್ಯವಹಾರಗಳಿಗೂ ಆಧಾರ್ ಕಡ್ಡಾಯಗೊಳಿಸುತ್ತಿರುವುದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಪ್ರಕರಣದ (ಕೆ.ಎಸ್‌.ಪುಟ್ಟಸ್ವಾಮಿ ಮತ್ತಿತರರು ವರ್ಸಸ್ ಭಾರತ ಸರ್ಕಾರ) ಜಾಡು ಹಿಡಿದು ಮತ್ತೊಮ್ಮೆ ಈ ಅನ್ವೇಷಣೆ ನಡೆಯಿತು. ಅದೇ ಪ್ರಶ್ನೆ. ಅದೇ ಸಂವಿಧಾನ. ಅದೇ ಸುಪ್ರೀಂ ಕೋರ್ಟ್. ಬೇರೆ ನ್ಯಾಯಮೂರ್ತಿಗಳು. ಬೇರೆ ಕಾಲ.

ಈ ಬಾರಿ ಒಂಬತ್ತು ಮಂದಿ ನ್ಯಾಯಮೂರ್ತಿಗಳಿದ್ದರು. ಹಿಂದಿನವರು ಯಾರೂ ಕಾಣದ್ದನ್ನು ಈ ಒಂಬತ್ತೂ ಮಂದಿ ಕಂಡರು. ಸಂವಿಧಾನದ ಆಶಯದ ಆಳದಲ್ಲಿ ಖಾಸಗಿತನದ ಹಕ್ಕು ಒಂದು ಮೂಲಭೂತ ಹಕ್ಕಾಗಿ ಅವಿನಾಭಾವ ರೀತಿಯಲ್ಲಿ ಬೆಸೆದುಕೊಂಡಿದೆ ಎನ್ನುವುದನ್ನು ಅವರು ತಮ್ಮ 547 ಪುಟಗಳ ತೀರ್ಪಿನಲ್ಲಿ ಆಗಸ್ಟ್ 24 ರಂದು ದೇಶದ ಮುಂದೆ ಘೋಷಿಸಿದಾಗ ಭಾರತದ ಪ್ರಜಾತಂತ್ರ ವ್ಯವಸ್ಥೆಯ ತಾಯಿಬೇರು ಇನ್ನೊಂದು ಅಂಗುಲ ಆಳಕ್ಕೆ ಬೆಳೆಯಿತು. ಇದು ಚಾರಿತ್ರಿಕ.

ಭಾರತದ ಸಂವಿಧಾನ ಈ ದೇಶದ ಜನರಿಗೆ ನೀಡಿದ್ದು ಏನು ಮತ್ತು ಎಷ್ಟು ಎನ್ನುವ ಪ್ರಶ್ನೆಗೆ ಸಂಪೂರ್ಣವಾದ ಉತ್ತರ ಅಂತ ಒಂದು ಇಲ್ಲ. ಒಂದು ಕಾಲಘಟ್ಟದಲ್ಲಿ ಕಾಣದ್ದು ಸಂವಿಧಾನದಲ್ಲಿ ಇನ್ನೊಂದು ಕಾಲಘಟ್ಟದಲ್ಲಿ ಕಾಣಿಸುತ್ತದೆ. ಕೆಲ ಮನಸ್ಸುಗಳು ಕಾಣದ್ದನ್ನು ಅದರಲ್ಲಿ ಇನ್ನು ಕೆಲವು ಮನಸ್ಸುಗಳು ಗುರುತಿಸುತ್ತವೆ. ಸಂವಿಧಾನ ಜೀವಂತಿಕೆ ಪಡೆಯುವುದು ಅದನ್ನು ಅರ್ಥೈಸುವ ಕಾಲದಲ್ಲಿ ಮತ್ತು ಅರ್ಥೈಸುವವರ ಒಲವು-ನಿಲುವುಗಳಲ್ಲಿ.

ಅಷ್ಟಕ್ಕೂ ಏನಿದು ಖಾಸಗಿತನ? ಖಾಸಗಿತನವನ್ನುಮೂಲಭೂತ ಹಕ್ಕು ಎಂದು ಸಂವಿಧಾನ ಮೂಲದಲ್ಲಿ ಗುರುತಿಸಿ ಸುಪ್ರೀಂ ಕೋರ್ಟ್ ಹೇಳಿದಾಕ್ಷಣ ಪ್ರಜಾ
ತಂತ್ರ ಬಲಗೊಳ್ಳುವುದು ಹೇಗೆ? ಇವೆಲ್ಲಾ ಬಹಳಸೂಕ್ಷ್ಮವಾದ ಪ್ರಜಾತಾಂತ್ರಿಕ ವಿಚಾರಗಳು. ಸೂಕ್ಷ್ಮ ಎನ್ನುವ ಕಾರಣಕ್ಕಾಗಿಯೇ ಇವುಗಳ ಕುರಿತಾಗಿ ಸ್ಪಷ್ಟತೆಮೂಡಲು ಸಂವಿಧಾನ ಜಾರಿಯಾಗಿ 67 ವರ್ಷಗಳಕಾಲ ಬೇಕಾಗಿ ಬಂದದ್ದು. ಸರ್ಕಾರ ಮತ್ತು ಜನರ ನಡುವೆ ಇರುವುದು ಒಂದು ಒಪ್ಪಂದ. ರಾಜಕೀಯ ಶಾಸ್ತ್ರಜ್ಞರ ಪ್ರಕಾರ ಇದೊಂದು ಸಾಮಾಜಿಕ ಒಪ್ಪಂದ. ಈ ಒಪ್ಪಂದದ ಪರಿಧಿಯಲ್ಲಿ ಸರ್ಕಾರಗಳು ಸಮಷ್ಟಿ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಜನಜೀವನದ ಮೇಲೆ ಬೇರೆ ಬೇರೆ ರೀತಿಯ ನಿಯಂತ್ರಣಗಳನ್ನು ಹೇರುತ್ತವೆ. ಜನಜೀವನವನ್ನು ಹೀಗೆ ನಿಯಂತ್ರಿಸಬೇಕಾದರೆ ಸರ್ಕಾರಕ್ಕೆ ಜನರ ಕುರಿತಾದ ಮಾಹಿತಿಯ ಅಗತ್ಯವಿದೆ. ಈ ಮಾಹಿತಿಯನ್ನು ಕಲೆಹಾಕಲು ಸರ್ಕಾರಗಳು ಅಂದರೆ ಸರ್ಕಾರದ ಅಂಗ ಸಂಸ್ಥೆಗಳು ಜನರ ಖಾಸಗಿ ಬದುಕನ್ನು ಸದಾ ಇಣುಕಿ ನೋಡುತ್ತಲೇ ಇರಬೇಕಾಗುತ್ತದೆ. ಜನಗಣತಿ, ಆಧಾರ್ ಕಾರ್ಡ್‌ಗಾಗಿ ಕೈಬೆರಳುಗಳಚ್ಚು- ಕಣ್ಣಿನ ಪಾಪೆಯ ಚಿತ್ರ ಸಂಗ್ರಹಿಸುವ೦ತಹ ಬಹಿರಂಗ ಇಣುಕುವಿಕೆಯಿಂದ ಹಿಡಿದು ಟೆಲಿಫೋನ್ ಕದ್ದಾಲಿಸುವಿಕೆ, ಬೇಹುಗಾರಿಕೆಯಂತಹ ರಹಸ್ಯ ಕಾರ್ಯಾಚರಣೆಗಳ ತನಕ ಇಣುಕುವ ಪ್ರಕ್ರಿಯೆ ಆಡಳಿತದ ಭಾಗವಾಗಿ ಸದಾ ನಡೆಯುತ್ತಿರುತ್ತದೆ. ಸರ್ಕಾರವೊಂದು ಜನಜೀವನವನ್ನು ಎಷ್ಟು ನಿಯಂತ್ರಿಸಬೇಕು, ನಿಯಂತ್ರಿಸಲು ಎಷ್ಟು ಮಾಹಿತಿ ಕಲೆಹಾಕಬೇಕು, ಅಗತ್ಯ ಮಾಹಿತಿಯನ್ನು ಹೇಗೆ ಕಲೆಹಾಕಬೇಕು, ಕಲೆಹಾಕಿದ ಮಾಹಿತಿಯ ದುರ್ಬಳಕೆ ಹೇಗೆ ತಡೆಯಬೇಕು ಇತ್ಯಾದಿಗಳೆಲ್ಲಾ ಅತ್ಯಂತ ಜಾಗರೂಕತೆಯಿಂದ ನಿಭಾಯಿಸಬೇಕಾದ ಪ್ರಶ್ನೆಗಳು. ಜತೆಗೆ ಖಾಸಗಿ ಸಂಸ್ಥೆಗಳು ಬೇರೆ ಬೇರೆ ವ್ಯವಹಾರಗಳಿಗೆ ಸಂಬಂಧಿಸಿದಂತೆ ಜನರಿಂದ ಸಂಗ್ರಹಿಸುವ ವೈಯಕ್ತಿಕ ಮಾಹಿತಿಯ ದುರುಪಯೋಗದ ಸಾಧ್ಯತೆಯ ವಿಚಾರವೂ ಅಷ್ಟೇ ಮುಖ್ಯವಾದದ್ದು.

ಇಷ್ಟು ಕಾಲ ಈ ಪ್ರಶ್ನೆಗಳೆಲ್ಲಾ ಆಗಾಗ ಭಾರತೀಯ ಮನಸ್ಸುಗಳನ್ನು ಕಾಡಿದ್ದರೂ ಅವನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಪರಿಸ್ಥಿತಿ ಈಗ ಬದಲಾಗಿದೆ. ಈಗ ಒಂದೆಡೆ ಎಲ್ಲವೂ ವ್ಯಕ್ತಿ-ಕೇಂದ್ರಿತವಾಗುತ್ತಿವೆ. ಹಾಗೆಯೇ ಈ ಕಾಲ, ವ್ಯಕ್ತಿ ತನ್ನನ್ನು ತಾನು ಕಳೆದುಕೊಂಡ ಕಾಲವೂ ಹೌದು. ಸುರಕ್ಷತೆಯ ದೃಷ್ಟಿಯಿಂದ ಮತ್ತು ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದ ಹೆಸರು ಹೇಳಿ ಸರ್ಕಾರಗಳು ವ್ಯಕ್ತಿಗಳ ಖಾಸಗಿ ಬದುಕಿನ ಎಲ್ಲಾ ಮಾಹಿತಿಯನ್ನು ಕಲೆಹಾಕುತ್ತಿವೆ. ಹೋದಲ್ಲಿ ಬಂದಲ್ಲಿ ವ್ಯಕ್ತಿಗಳ ಮೇಲೆ ಸಿ.ಸಿ. ಟಿ.ವಿ. ಕ್ಯಾಮೆರಾದ ಕಣ್ಣಿರುತ್ತದೆ.

ಅಪರಾಧಗಳನ್ನು ನಿಯಂತ್ರಿಸಲು ಇದು ಅಗತ್ಯ ಎಂದು ಸರ್ಕಾರ ಹೇಳುತ್ತದೆ. ಇದರ ಜತೆಗೆ ದೈನಂದಿನ ಬದುಕಿನ ವ್ಯವಹಾರಗಳೆಲ್ಲಾ ಡಿಜಿಟಲ್ ಪರಿಕರಗಳ ಮೂಲಕ ನಡೆಯುತ್ತಿರುವುದರಿಂದ ವ್ಯಕ್ತಿಗಳ ಬದುಕಿಗೆ ಸಂಬಂಧಿಸಿದ ಪ್ರತಿಯೊಂದು ವಿಚಾರವೂ ಎಲ್ಲೋ ದಾಖಲಾಗಿಬಿಟ್ಟಿರುತ್ತದೆ. ಎಲ್ಲಾ ವ್ಯವಹಾರಗಳೂ ವ್ಯಕ್ತಿ-ಕೇಂದ್ರಿತವಾ ಗಿಯೇ ನಡೆಯುತ್ತಿದ್ದರೂ ಯಾವುದೂ ಖಾಸಗಿಯಾಗಿ ಉಳಿಯದ ವಿಚಿತ್ರ ವೈರುಧ್ಯದ ಸನ್ನಿವೇಶವಿದು.

ಮುಖ್ಯವಾಗಿ ಸರ್ಕಾರವೊಂದು ಜನರ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಕಲೆಹಾಕುತ್ತಾ ಹೋದ ಹಾಗೆ ಸರ್ಕಾರ ಜನರ ಮೇಲೆ ನಿಯಂತ್ರಣ ಹೇರುವ ಸಾಧ್ಯತೆಯೂ ಹೆಚ್ಚುತ್ತದೆ. ಜನರಿಗೆ ಸರ್ಕಾರವನ್ನು ನಿಯಂತ್ರಿಸಲು ಕಷ್ಟವಾಗತೊಡಗುತ್ತದೆ. ಸರ್ಕಾರ ಮತ್ತು ಜನರ ಸಂಬಂಧದಲ್ಲಿ ಸರ್ಕಾರದ ಕೈ ಮೇಲಾಗುತ್ತಾ ಹೋದ೦ತೆ ಸರ್ಕಾರ, ಜನರ ಖಾಸಗಿ ಬದುಕನ್ನು ಸರ್ವವಿಧದಿಂದಲೂ ನಿರ್ಬಂಧಿಸಲು ಮುಂದಾಗುತ್ತದೆ. ಭಾರತ ಇಂದು ಈ ಸ್ಥಿತಿಯ ಹೊಸ್ತಿಲಲ್ಲಿ ನಿಂತಿದೆ ಎನ್ನುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ಮಹತ್ವವನ್ನು ಮನಗಾಣಬೇಕಿದೆ.

ಮನುಷ್ಯರಿಗೆ ಕೇವಲ ಮನುಷ್ಯರು ಎನ್ನುವ ಕಾರಣಕ್ಕಾಗಿ ಒಂದು ಮೂಲಭೂತ ಘನತೆ ಇರುತ್ತದೆ. ಇದು ಅಧಿಕಾರದಿಂದಲೂ ಅಂತಸ್ತಿನಿಂದಲೂ ಗಳಿಸಿಕೊಂಡ ಘನತೆಯಲ್ಲ. ಇದು ಸಂವಿಧಾನದ ಪ್ರಸ್ತಾವನೆಯಲ್ಲಿ ಉಲ್ಲೇಖವಾದ ವ್ಯಕ್ತಿ-ಘನತೆ ಅಥವಾ ಮಾನವ ಘನತೆ (dignity of individual). ಇದನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಎನ್ನುವುದು ಒಂದೆಡೆಯಾದರೆ, ಇನ್ನೊಂದೆಡೆ ಇದರ ರಕ್ಷಣೆಯಾಗಬೇಕಾದರೆ ಸರ್ಕಾರಗಳೇ ಅನಗತ್ಯವಾಗಿ ಜನರ ವೈಯಕ್ತಿಕ ಬದುಕಿನ ಮೇಲೆ ಹೇರುವ ನಿರ್ಬಂಧಗಳು ನಿಲ್ಲಬೇಕು. ಇದಕ್ಕಾಗಿ ಖಾಸಗಿತನದ ಹಕ್ಕು ಬೇಕಾಗಿದೆ.

ವ್ಯಕ್ತಿ ಎನ್ನುವ ಪರಿಕಲ್ಪನೆ ಗೌಣವಾಗಿ, ಸಮೂಹ ಮತ್ತು ಸರ್ಕಾರಗಳೇ ಪ್ರಧಾನವಾಗುತ್ತಿರುವ ಕಾಲದಲ್ಲಿ ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಮತ್ತು ವ್ಯಕ್ತಿ-ವ್ಯಕ್ತಿಗಳ ನಡುವಣ ಸಮಾನತೆಯನ್ನು ಗಟ್ಟಿಯಾಗಿ ನೆಲೆಗೊಳಿಸುವ ನಿಟ್ಟಿನಲ್ಲಿ ಇಂತಹದ್ದೊಂದು ತೀರ್ಪಿನ ಅಗತ್ಯವಿತ್ತು. ಇದು ಸಂವಿಧಾನದ ಸ್ವಾತಂತ್ರ್ಯ ಮತ್ತು ಸಮಾನತೆಯ ಆಶಯಗಳಿಗೆ ಸುಪ್ರೀಂ ಕೋರ್ಟ್ ಬರೆದ ಹೊಸ ಭಾಷ್ಯ. ಅಧಿಕಾರವೊಂದು ಇದ್ದುಬಿಟ್ಟರೆ ಇನ್ನೊಬ್ಬ ವ್ಯಕ್ತಿಯನ್ನು ಹೇಗಾದರೂ ನಡೆಸಿಕೊಳ್ಳಬಹುದು ಮತ್ತು ಇನ್ನೊಬ್ಬರ ಮೇಲೆ ಏನನ್ನಾದರೂ ಹೇರಬಹುದು ಎಂಬ ಅಘೋಷಿತ ವಾಸ್ತವ ಈ ತೀರ್ಪಿನಿಂದ ಬದಲಾಗಬಹುದು. ಇಲ್ಲಿ ಅಧಿಕಾರ ಎಂದರೆ ಕೇವಲ ಸರ್ಕಾರ ಮತ್ತು ಅದರ ಚೇಲಾ ಸಂಸ್ಥೆಗಳು ಹೊಂದಿರುವ ಶಕ್ತಿ ಮಾತ್ರವಲ್ಲ. ಇಲ್ಲಿ ಬಲಿಷ್ಠನಾದ ವ್ಯಕ್ತಿ, ಗುಂಪು, ಸಂಸ್ಥೆ ಇತ್ಯಾದಿಗಳೆಲ್ಲವೂ ದುರ್ಬಲರ ಮೇಲೆ ಬೇರೆ ಬೇರೆ ರೀತಿಯಲ್ಲಿ ಸವಾರಿ ನಡೆಸುವ ಹಿಂದಿರುವ ವಿದ್ಯಮಾನವನ್ನು ಕೂಡಾ ಅಧಿಕಾರ ಎಂದು ಕರೆಯಬೇಕಾಗುತ್ತದೆ. ಇನ್ನೊಬ್ಬರಿಗೆ ತೊಂದರೆಯಾಗದಂತೆ ವ್ಯಕ್ತಿಯೊಬ್ಬ ತನಗೆ ಬೇಕಾದದ್ದನ್ನು ಮಾಡಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿರುವ ಸ್ಥಿತಿಯನ್ನು ಖಾಸಗಿತನದ ಹಕ್ಕು ಎತ್ತಿ ಹಿಡಿಯುತ್ತದೆ. ವ್ಯಕ್ತಿಗಳ ಬದುಕಿನಲ್ಲಿ ಅನಗತ್ಯವಾಗಿ ಮೂಗು ತೂರಿಸುವ ಸರ್ಕಾರದ ಧೋರಣೆ, ಇನ್ನೊಬ್ಬ ವ್ಯಕ್ತಿಯನ್ನು ತನಗೆ ಬೇಕಾದಂತೆ ನಡೆದುಕೊಳ್ಳಬೇಕೆಂದು ಒತ್ತಾಯಿಸುವ ಬಲಾಢ್ಯ ವ್ಯಕ್ತಿಗಳ ಧೋರಣೆ, ತನ್ನ ಕಟ್ಟುಪಾಡುಗಳನ್ನು ವ್ಯಕ್ತಿಗಳ ಮೇಲೆ ಹೇರುವ ಸಮಾಜದ ಧೋರಣೆ, ಸಂಖ್ಯೆಯಲ್ಲಿ ಕಡಿಮೆ ಇದ್ದವರು ಸಂಖ್ಯೆಯಲ್ಲಿ ಹೆಚ್ಚಿರುವವರು ಹೇಳಿದ್ದನ್ನು ಅನುಸರಿಸಬೇಕು ಎನ್ನುವ ಬಹುಮತ ವಾದ ಇತ್ಯಾದಿಗಳೆಲ್ಲವೂ ಮುಂದಿನ ದಿನಗಳಲ್ಲಿ ಸಾಂವಿಧಾನಿಕವಾಗಿಪ್ರಶ್ನಾರ್ಹವಾಗಲಿವೆ. ಆದಕಾರಣ ಈ ಖಾಸಗಿತನದ ಹಕ್ಕಿನ ನೀಡಿಕೆಯ ಹಿಂದೆ ವ್ಯಾಪಕವಾದ ಸಾರ್ವಜನಿಕ ಹಿತದ ಪ್ರಶ್ನೆ ಇದೆ.

ಖಾಸಗಿತನದ ಹಕ್ಕನ್ನು ಜನ ಹೆಚ್ಚು ಹೆಚ್ಚು ಚಲಾಯಿಸಲು ಹಾತೊರೆದಾಗ ಕುಟುಂಬದಲ್ಲಿ, ಸಮಾಜದಲ್ಲಿ ಮತ್ತು ಸರ್ಕಾರ- ಜನರ ನಡುವಣ ಸಂಬಂಧದಲ್ಲಿ ಹೊಸ ಸಂಘರ್ಷಗಳು ಹುಟ್ಟಬಹುದು. ಉದಾಹರಣೆಗೆ ವಿವಾಹ ಸಂಬಂಧದೊಳಗಣ ಅತ್ಯಾಚಾರವನ್ನು ಖಾಸಗಿತನದ ಹಕ್ಕಿನ ಮೂಲಕ ಮಹಿಳೆಯರು ಪ್ರಶ್ನಿಸತೊಡಗಿದಾಗ, ಆಹಾರ ಕ್ರಮಗಳ ಮೇಲೆ ನಡೆಯುವ ಆಕ್ರಮಣಗಳನ್ನು ಸಮೂಹಗಳು ಖಾಸಗಿತನದ ಹಕ್ಕನ್ನು ಬಳಸಿ ಎದುರಿಸತೊಡಗಿದಾಗ, ಸಲಿಂಗ ವೈವಾಹಿಕ ಸಂಬಂಧಗಳ ಪ್ರತಿಪಾದನೆ ಮತ್ತು ಪ್ರದರ್ಶನ ಖಾಸಗಿತನ ಹಕ್ಕಿನ ಮೂಲಕ ನಡೆಯತೊಡಗಿದಾಗ, ದೇಶಪ್ರೇಮದ ನೆಪ ಹೇಳಿ ಜನರ ಖಾಸಗಿ ಬದುಕಿನಲ್ಲಿ ಸಂಘಟನೆಗಳು ಮತ್ತು ಸರ್ಕಾರಗಳು ಮೂಗು ತೂರಿಸುವುದನ್ನು ಜನ ಈ ಹಕ್ಕಿನ ಮೂಲಕ ಪ್ರತಿಭಟಿಸತೊಡಗಿದಾಗ ಸಮಾಜ ಮತ್ತು ರಾಜಕೀಯದಲ್ಲಿ ಹೊಸ ಪಲ್ಲಟಗಳು ಸಹಜವಾಗಿಯೇ ಸಂಭವಿಸಲಿವೆ. ನಮ್ಮ ಊಹೆಯನ್ನು ಮೀರಿದ ಸಾಮಾಜಿಕ ಬದಲಾವಣೆಗಳೂ ಆಗಲಿವೆ. ಇದು ಅನಿವಾರ್ಯ. ಇವೆಲ್ಲವನ್ನೂ ಪ್ರಜ್ಞಾವಂತಿಕೆ ಮತ್ತು ಪ್ರಭುದ್ಧತೆಯಿಂದ ಒಂದು ಸಮಾಜ ಎದುರಿಸಬೇಕು. ಸ್ಥಾಪಿತ ವ್ಯವಸ್ಥೆ ಬುಡಮೇಲಾಗುತ್ತದೆ ಎನ್ನುವ ಕಾರಣಕ್ಕೆ ಪ್ರಜಾತಂತ್ರವೊಂದರಲ್ಲಿ ಇಂತಹ ಹಕ್ಕುಗಳನ್ನು ಬಹಳ ಕಾಲ ಜನರಿಗೆ ನೀಡದಿರಲು ಸಾಧ್ಯವಿಲ್ಲ. ಇದನ್ನು ಅರಿತೇ ಒಂಬತ್ತು ಜನ ನ್ಯಾಯಮೂರ್ತಿಗಳಲ್ಲಿ ಯಾರೂ ಪ್ರತಿಕೂಲ ತೀರ್ಪು ಬರೆಯಲಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದಲಾದರೂ ಸರ್ಕಾರ ಇದನ್ನು ಸ್ವಾಗತಿಸದೆ ಬೇರೆ ವಿಧಿ ಇರಲಿಲ್ಲ.

ಖಾಸಗಿತನ ಇತ್ಯಾದಿಗಳೆಲ್ಲಾ ತೀರಾ ಮೇಲ್‌ಸ್ತರದ (elitist) ಪರಿಕಲ್ಪನೆಗಳು, ಈ ದೇಶದ ಬಡಜನ ಅದರ ಬಗ್ಗೆ ಯೋಚಿಸುವುದಿಲ್ಲ ಮತ್ತು ಅವರ ಹಿತದೃಷ್ಟಿಯಿಂದ ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಆಗಬಾರದು ಎನ್ನುವ ವಾದವನ್ನು ಸುಪ್ರೀಂ ಕೋರ್ಟ್ ಮುಂದೆ ಸರ್ಕಾರ ಮಂಡಿಸಿತ್ತು. ಖಾಸಗಿತನ ಇತ್ಯಾದಿಗಳು ಈ ದೇಶದ ಬಹಳಷ್ಟು ಜನರಿಗೆ ಅರ್ಥವಾಗದ ವಿಷಯಗಳು ಎನ್ನುವುದು ಸತ್ಯ. ಇಂತಹ ವಿಚಾರಗಳಲ್ಲಿ ಮೇಲ್‌ಸ್ತರದ ಮಂದಿ ವಹಿಸಿಕೊಂಡಷ್ಟು ಇತರರು ವಹಿಸಿಕೊಳ್ಳುವುದಿಲ್ಲ ಎನ್ನುವುದು ಸತ್ಯ. ಆದರೆ ಮೇಲ್‌ಸ್ತರದವರು ಪ್ರತಿಪಾದಿಸುತ್ತಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಅವರು ಪ್ರತಿಪಾದಿಸುವ ವಿಚಾರ ಬಡ ಜನರ ಜೀವನವನ್ನು ತಟ್ಟುವುದಿಲ್ಲ ಎಂದಾಗಲೀ, ಅವರಿಗೆ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದಾಗಲೀ ಅರ್ಥವಲ್ಲ. ಹಾಗೆ ನೋಡಿದರೆ ಈ ದೇಶಕ್ಕೆ ಪ್ರಜಾತಂತ್ರ ಬಂದದ್ದು ಕೂಡಾ ಮೇಲ್‌ಸ್ತರದ ವಿದ್ಯಾವಂತರಾದ ಕೆಲ ಜನ ವಹಿಸಿದ ಆಸಕ್ತಿಯಿಂದಾಗಿ. ಸಂವಿಧಾನ ಈ ದೇಶವನ್ನು ಪ್ರಜಾತಂತ್ರ ಗಣರಾಜ್ಯ ಎಂದು ಘೋಷಿಸಿದಾಗ ದೇಶದ ಬಹುಪಾಲು ಜನರಿಗೆ ಅದರ ಅರ್ಥ, ಪ್ರಾಮುಖ್ಯ ತಿಳಿಯಲಿಲ್ಲ. ಇವತ್ತಿಗೂ ಎಷ್ಟೋ ಜನರಿಗೆ ಅವೆಲ್ಲಾ ತಿಳಿದಿಲ್ಲ. ಆದರೆ ಭಾರತದ ಜನತಂತ್ರ ಮತ್ತು ಭಾರತದ ಜನರ ನಡುವೆ ವರ್ಗಾತೀತ ನೆಲೆಯಲ್ಲಿ ಒಂದು ಪರಸ್ಪರಾವಲಂಬನದ ಸಂಬಂಧ ಬೆಳೆದದ್ದು ಇತಿಹಾಸ. ಖಾಸಗಿತನದ ಹಕ್ಕಿನ ವಿಚಾರವೂ ಅಷ್ಟೇ. ಅದು ಮೂಲಭೂತವಾಗಿ ಸರ್ಕಾರ ಮತ್ತು ಜನರ ಸಂಬಂಧದಲ್ಲಿ ಜನರ ಕೈಬಲಪಡಿಸುವ ಸಲುವಾಗಿ ಇರಬೇಕಾದ ಹಕ್ಕು. ಇದರ ಅಗತ್ಯ ಮೇಲ್‌ಸ್ತರದ ಮಂದಿಗೆ ಎಷ್ಟಿದೆಯೋ ಅಷ್ಟೇ ಇತರರಿಗೂ ಇದೆ.

ಇದರ ಅನುಷ್ಠಾನ ಮತ್ತು ಆಚರಣೆಯಲ್ಲಿ ಎದುರಾಗುವ ಎಲ್ಲಾ ಎಡರು-ತೊಡರುಗಳನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಒಂದು ಪ್ರಜಾತಂತ್ರೀಯ ಆಶಯವಾಗಿ, ಒಂದು ಮಾನವೀಯ ಮೌಲ್ಯವಾಗಿ ಖಾಸಗಿತನದ ಸಂರಕ್ಷಣೆ ಎನ್ನುವುದು ಈ ಕಾಲದ ದೊಡ್ಡ ಅಗತ್ಯವಾಗಿತ್ತು. ಹಾಗೆಯೇ, ಈಚಿನ ದಿನಗಳಲ್ಲಿ ನ್ಯಾಯಾಂಗ ನಿಸ್ತೇಜವಾಗುತ್ತಿದೆ, ಸರ್ಕಾರದ ಎದುರು ತಲೆಬಾಗುತ್ತಿದೆ ಎನ್ನುವ ಭಾವನೆಯೊಂದು ದಟ್ಟವಾಗುತ್ತಿತ್ತು. ಇದನ್ನು ಅಲ್ಲಗಳೆಯಲೋ ಎಂಬಂತೆ ಸುಪ್ರೀಂ ಕೋರ್ಟ್ ಮತ್ತೆ ಮೈಕೊಡವಿ ಎದ್ದು ನಿಂತು ಮಾನವ ಘನತೆಯನ್ನು ಎತ್ತಿ ಹಿಡಿಯುವ ಈ ತೀರ್ಪು ನೀಡಿದೆ. ಆ ಮೂಲಕ ತನ್ನ ಘನತೆಯನ್ನೂ ಉಳಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT