ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿತನದ ಹಕ್ಕು ಮೊಟಕುಗೊಳಿಸುವ ಹಾದಿಯಲ್ಲಿ...

Last Updated 24 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಖಾಸಗಿತನದ ಹಕ್ಕು ಮೊಟಕುಗೊಳಿಸುವ ಹಾದಿಯಲ್ಲಿ...

ಖಾಸಗಿತನ ಒಂದು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್‌ ಅವಿರೋಧವಾಗಿ ಘೋಷಿಸಿದ ದಿನವೇ ನಮ್ಮ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸುವ ನಿಯಮಗಳನ್ನು ಚರ್ಚಿಸಬೇಕಾದ ಅನಿವಾರ್ಯ ನಮಗೆ ಒದಗಿಬಂದಿದೆ. ಒಂದೆಡೆ ಭಾರತದ ಪ್ರಜೆಗಳಾಗಿ ನಮ್ಮ ಅಸಮ್ಮತಿಯನ್ನು ಸೂಚಿಸಲು ಇರುವ ಅವಕಾಶಗಳನ್ನು ಕಾನೂನುಗಳ ಮೂಲಕವೇ ನಮ್ಮ ಸರ್ಕಾರಗಳು ದಮನ ಮಾಡುತ್ತಿವೆ. ಇನ್ನೊಂದೆಡೆ ಅದೇ ಸರ್ಕಾರಗಳು ತಂತ್ರಜ್ಞಾನ ಬಳಕೆಯ ಮೂಲಕ ಕಣ್ಗಾವಲು (ಸರ್ವೇಲೆನ್ಸ್) ಇಡುವ ವ್ಯಾಪಕ ವ್ಯವಸ್ಥೆಯನ್ನು ರೂಪಿಸುತ್ತಿವೆ. ಈ ಸಂದರ್ಭದಲ್ಲಿ ನಮ್ಮ ಪ್ರತಿದಿನದ ಬದುಕಿನ ಸಂದರ್ಭಕ್ಕೆ ಸೃಜನಾತ್ಮಕವಾಗಿ ಪ್ರತಿಕ್ರಿಯಿಸಲು ಸಾಧ್ಯವೇ? ನಮಗಿರುವ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಉಳಿಸಿಕೊಳ್ಳಲು, ಪೋಷಿಸಲು ಸಾಧ್ಯವೇ ಎನ್ನುವ ಪ್ರಶ್ನೆಗಳು ಕಾಡಲಾರಂಭಿಸಿವೆ.

ಈ ಚರ್ಚೆಗೆ ಪೂರಕವಾಗಿ ಜಾರ್ಖಂಡ್‍ನ ಯುವ ಬರಹಗಾರ ಡಾ. ಹನ್ಸ್‌ದಾ ಸೊವ್ವೇಂದ್ರ ಶೇಖರ್ ಪ್ರಕರಣವನ್ನು ಗಮನಿಸಿ. ವೃತ್ತಿಯಿಂದ ವೈದ್ಯ ಹಾಗೂ ಪ್ರವೃತ್ತಿಯಿಂದ ಇಂಗ್ಲಿಷ್‌ ಸಾಹಿತಿಯಾದ 34 ವರ್ಷದ ಈ ಯುವ ಬರಹಗಾರ ಬಹುಶಃ ಭಾರತದಲ್ಲಿಯೇ ಇಂಗ್ಲಿಷ್‌ನಲ್ಲಿ ಬರೆಯುತ್ತಿರುವ ಬಹುಮುಖ್ಯ ಆದಿವಾಸಿ ಸಾಹಿತಿ. ಸ್ವತಃ ಸಂಥಾಲರೇ ಆದ ಡಾ. ಶೇಖರ್ ಇದುವರೆಗೆ ಬರೆದಿರುವ ಎರಡೂ ಕೃತಿಗಳು ಸಂಥಾಲರನ್ನು ಅವಹೇಳನ ಮಾಡುವ ಅಶ್ಲೀಲ ಬರವಣಿಗೆಗಳು ಎನ್ನುವ ಆಪಾದನೆಗೆ ಗುರಿಯಾಗಿ, ನಿಷೇಧಕ್ಕೆ ಒಳಗಾಗಿವೆ.

ಈ ಪ್ರಕರಣದ ಬಗ್ಗೆ ಬರೆಯಬೇಕೆಂದು ನನಗನ್ನಿಸಿದ್ದು ಡಾ. ಶೇಖರ್ ಅವರಿಗೆ ಪಾಕುರ್‌ನ ಜಿಲ್ಲಾಧಿಕಾರಿ ನೀಡಿದ ಷೋಕಾಸ್ ನೋಟಿಸನ್ನು ಓದಿದಾಗ. ಈ ನೋಟಿಸಿನಲ್ಲಿ ಮೂರು ಅಂಶಗಳನ್ನು ಪ್ರಸ್ತಾಪಿಸಿ, ಅವುಗಳಿಗೆ ವಿವರಣೆ ನೀಡುವಂತೆ ಶೇಖರ್ ಅವರನ್ನು ಕೇಳಲಾಗಿದೆ. ತಮ್ಮ ಕೃತಿಗಳನ್ನು ಬರೆಯಲು ಶೇಖರ್, ಸರ್ಕಾರದ ಅನುಮತಿಯನ್ನು ಪಡೆದಿದ್ದಾರೆಯೇ ಮತ್ತು ಇಲ್ಲದಿದ್ದರೆ ಅವರ ವಿರುದ್ಧ ಯಾಕೆ ಶಿಸ್ತು ಕ್ರಮ ತೆಗೆದುಕೊಳ್ಳಬಾರದು ಎನ್ನುವ ಪ್ರಶ್ನೆಗಳು ಮೊದಲೆರಡು ಅಂಶಗಳು. ಶೇಖರ್, ಜಾರ್ಖಂಡ್ ರಾಜ್ಯ ಸರ್ಕಾರದ ಸೇವೆಯಲ್ಲಿರುವ ವೈದ್ಯರು. ಹಾಗಾಗಿ ಅವರಿಗೆ ನಾಗರಿಕ ಸೇವೆಯ ನಿಯಮಗಳು ಅನ್ವಯವಾಗುತ್ತವೆ. ಹಾಗಾಗಿ ಸಾರ್ವಜನಿಕವಾಗಿ ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೊದಲು ಸರ್ಕಾರದ ಅನುಮತಿ ಪಡೆದಿರಬೇಕು ಎನ್ನುವುದು ನೋಟಿಸಿನಲ್ಲಿ ಮಾಡಲಾಗುತ್ತಿರುವ ವಾದ. ಶೇಖರ್ ಅವರ ಕೃತಿಗಳಲ್ಲಿರುವ ಆಕ್ಷೇಪಣಾರ್ಹ ಚಿತ್ರಣಗಳಿಂದ ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗೆ ಅಡಚಣೆಯಾಗಿದೆ ಎನ್ನುವ ಆರೋಪ ಈ ನೋಟಿಸಿನಲ್ಲಿರುವ ಮೂರನೆಯ ಅಂಶ. ಐಪಿಸಿಯ 295ನೆಯ ಸೆಕ್ಷನ್ ಅಡಿಯಲ್ಲಿ ಪೂಜಾಸ್ಥಳವನ್ನು ಅಶುದ್ಧಗೊಳಿಸಿದ ಅಥವಾ ನಾಶ ಮಾಡಿದ ಆಪಾದನೆಯನ್ನು ಅವರ ಮೇಲೆ ಹೊರಿಸಲಾಗುವುದು ಎಂದು ರಾಜ್ಯಸರ್ಕಾರವು ಹೇಳುತ್ತಿದೆ.

ಡಾ. ಶೇಖರ್ ಅವರ ಮೇಲಿನ ಆರೋಪಗಳು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಭಾರತದ ಯಾವುದೇ ಬರಹಗಾರನ ಮೇಲಾದರೂ ಸುಲಭವಾಗಿ ಹೇರಬಹುದಾಗಿರುವಂತಹವು. ಇದರ ವ್ಯಾಪ್ತಿಯ ಬಗ್ಗೆ ಯೋಚಿಸಿ. ಸರ್ಕಾರಿ ನೌಕರರಿಂದ ವಿಶ್ವವಿದ್ಯಾಲಯಗಳವರಗೆ, ಭದ್ರತಾ ಪಡೆಗಳಿಂದ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುವ ಯಾರಿಗಾದರೂ ನಾಗರಿಕ ಸೇವೆಯ ನಿಯಮಗಳು ಅನ್ವಯವಾಗುತ್ತವೆ. ಭಾರತವನ್ನು ಇಡಿಯಾಗಿ ಪರಿಗಣಿಸಿದರೆ ಇಂತಹ ಉದ್ಯೋಗಿಗಳ ಸಂಖ್ಯೆ ಐದಾರು ಕೋಟಿಗಳನ್ನು ದಾಟಿದರೆ ಆಶ್ಚರ್ಯವಿಲ್ಲ. ಇವರ ಪೈಕಿ ಪ್ರಭುತ್ವದ ವಿರುದ್ಧ ಮಾತನಾಡುವವರನ್ನು ಸುಮ್ಮನಿರಿಸಲು ಈಗಿರುವ ನಿಯಮಗಳನ್ನು ತಾಂತ್ರಿಕವಾಗಿ ಅನುಷ್ಠಾನಗೊಳಿಸಿದರೆ ಸಾಕು. ಸಾಹಿತ್ಯದಿಂದ ಹಿಡಿದು ಪತ್ರಿಕಾಲೇಖನಗಳ ರಚನೆಯ ತನಕ ಎಲ್ಲದಕ್ಕೂ ಸರ್ಕಾರದ ಅನುಮತಿ ಅಗತ್ಯವಾಗುತ್ತದೆ. ಇಂತಹ ವ್ಯವಸ್ಥೆಯಲ್ಲಿ ಉನ್ನತ ಅಧಿಕಾರಿಗಳು ಯಾವ ಬರಹಗಳಿಗೆ ಆಕ್ಷೇಪಿಸುವುದಿಲ್ಲವೋ ಅವುಗಳನ್ನು ಮಾತ್ರ ಪ್ರಕಟಿಸಬಹುದು. ಇಂತಹದೊಂದು ವ್ಯವಸ್ಥೆ ರೂಪುಗೊಂಡರೆ, ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳು ಸಾಹಿತ್ಯ ಸೆನ್ಸಾರ್ ಅಧಿಕಾರಿಗಳಾಗಿ ತಮ್ಮ ದಿನದ ಬಹುಭಾಗ ಕಳೆಯಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಡಾ. ಶೇಖರ್ ಪ್ರಕರಣವನ್ನು ನೋಡಿದಾಗ, ಅದನ್ನು ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯೆಂದಷ್ಟೇ ಪರಿಗಣಿಸಲು ಸಾಧ್ಯವಿಲ್ಲ. ನಮ್ಮ ಬಹುತೇಕ ಬರಹಗಾರರು ನಾಗರಿಕ ಸೇವೆಯ ನಿಯಮಗಳು ಅನ್ವಯವಾಗುವ ರೀತಿಯ ಉದ್ಯೋಗಗಳಲ್ಲಿ ಇರುವವರು. ಯಾವುದಾದರೂ ವಿವಾದ ಹುಟ್ಟಿದಾಗ ಮಾತ್ರ ನಮ್ಮ ಸರ್ಕಾರಗಳು ಈ ಬಗೆಯ ನಿಯಮಗಳನ್ನು ಬಳಸುತ್ತವೆ, ಸಾಮಾನ್ಯ ಸಂದರ್ಭದಲ್ಲಿ ಅಲ್ಲ ಎನ್ನುವುದು ನಿಜ. ಆದರೆ ಸರ್ಕಾರಗಳ ಕೈಯಲ್ಲಿ ನಾಗರಿಕ ಸೇವೆಯ ನಿಯಮಗಳು ಕತ್ತಿ ಹಾಗೂ ಗುರಾಣಿಗಳೆರಡರ ಸ್ವರೂಪದಲ್ಲಿಯೂ, ರಕ್ಷಣೆಗಾಗಿ ಮತ್ತು ಆಕ್ರಮಣ ಮಾಡಲು ಎರಡಕ್ಕೂ ಸಜ್ಜಾಗಿರುವಂತೆ ತೋರುತ್ತವೆ.

ಕರ್ನಾಟಕದ ನಾಗರಿಕ ಸೇವೆಯ ನಿಯಮಗಳನ್ನೇ ಗಮನಿಸಿ. 532 ಪುಟಗಳಷ್ಟು ಸುದೀರ್ಘವಾದ ಈ ನಿಯಮಗಳನ್ನು 1958ರಲ್ಲಿ ಪ್ರಕಟಿಸಲಾಯಿತು ಮತ್ತು ಕಾಲಕಾಲಕ್ಕೆ ತಿದ್ದುಪಡಿಗಳನ್ನು ಮಾಡಲಾಗಿದೆ. ಇವುಗಳೊಳಗೆ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಎಲ್ಲ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸುವ ನಿಯಮಗಳು ಒಂದಲ್ಲ ಒಂದು ಮೂಲೆಯಲ್ಲಿ ಇವೆ ಎನ್ನುವುದರಲ್ಲಿ ನನಗೆ ಅನುಮಾನವಿಲ್ಲ. ಅಧ್ಯಾಪಕರ ಕಾರ್ಯವ್ಯಾಪ್ತಿಯೇನು ಎಂದು ಚರ್ಚಿಸುವಾಗ, ನನ್ನ ಮೇಲಧಿಕಾರಿಯೊಬ್ಬರು ಮುಗುಳ್ನಗುತ್ತ, ನಾಗರಿಕ ಸೇವೆಯ ನಿಯಮಗಳಡಿಯಲ್ಲಿ ನಾವೆಲ್ಲರೂ ಪ್ರತಿದಿನದ 24 ಗಂಟೆಯೂ ಸರ್ಕಾರಿ ನೌಕರರು ಎಂದರು. ಅವರ ಮಾತಿನ ಅರ್ಥ ಸರ್ಕಾರವು ನಮ್ಮನ್ನು ಯಾವ ಹೊತ್ತಿನಲ್ಲಾದರೂ, ಯಾವ ಕೆಲಸವನ್ನು ಮಾಡಲಾದರೂ ನಿಯೋಜಿಸಬಹುದು ಎನ್ನುವುದಾಗಿತ್ತು. ಹಾಗಾಗಿ ನಾಗರಿಕ ಸೇವೆಯ ನಿಯಮಗಳು ಅಗತ್ಯಸೇವೆಗಳನ್ನು ಒದಗಿಸುವ ಪೋಲಿಸರು, ವೈದ್ಯರು ಇಂತಹವರ ಸಂದರ್ಭದಲ್ಲಿ ಮಾತ್ರವಲ್ಲ, ಯಾರಿಗಾದರೂ ಅನ್ವಯವಾಗುವಂತಿವೆ. ಸಂದರ್ಭ ಬಂದಾಗ ಹಾಗೆಯೇ ಬಳಕೆಯಾಗುತ್ತವೆ.

ಕಥೆ - ಕಾದಂಬರಿ -ಕಾವ್ಯಗಳಂತಹ ಸೃಜನಶೀಲ ಬರಹಗಳನ್ನು ಬರೆಯುವಾಗ, ಪ್ರಕಟಿಸುವಾಗ ಸರ್ಕಾರದ ಅನುಮತಿ ಬೇಕಿಲ್ಲ ಎನ್ನುವ ಕಾನೂನುಬದ್ಧ ವಾದವನ್ನು ಕೆಲವರು ಮುಂದಿಡುತ್ತಾರೆ. ಆದರೆ ನಾಗರಿಕ ಸೇವೆಯ ನಿಯಮಗಳ ಕೈಪಿಡಿಯೊಳಗೆ ಎಲ್ಲಿಯಾದರೂ ಸರಿ ಅನುಮತಿ ಬೇಕು ಎನ್ನುವ ನಿಯಮವಿರುತ್ತದೆ, ಅದಿಲ್ಲದಿದ್ದರೆ ಅಂತಹ ವ್ಯಾಖ್ಯಾನವನ್ನು ಮುಂದಿಡಲು ಸಾಧ್ಯವಾಗುವ ನಿಯಮವೊಂದು ಖಂಡಿತವಾಗಿಯೂ ಸಿಗುತ್ತದೆ ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ. ಪತ್ರಿಕೆಗಳಲ್ಲಿ ಅಗ್ರಲೇಖನ - ಅಂಕಣಗಳನ್ನು ಬರೆಯಲು ಅನುಮತಿಯ ಅಗತ್ಯವಿದೆ ಎನ್ನುವುದಂತೂ ನಿಜ. ಸ್ವತಃ ಶೇಖರ್ ಅವರೇ ಇತ್ತೀಚೆಗೆ ಬರೆದ ಅಗ್ರಲೇಖನವೊಂದರ ಬಗ್ಗೆ ಸರ್ಕಾರದಿಂದ ನೋಟಿಸ್ ಪಡೆದಿದ್ದರು.

ಸರ್ಕಾರದ ಸೇವೆಯಲ್ಲಿರುವವರ ಮೇಲೆ ಸಮಂಜಸವಾದ, ತರ್ಕಬದ್ಧವಾದ ಕೆಲವು ಮಿತಿಗಳನ್ನು ಹಾಕುವುದು ಸಮರ್ಥನೀಯವೇ ಸರಿ. ಉದಾಹರಣೆಗೆ, ಸರ್ಕಾರಿ ನೌಕರರು ಚುನಾವಣೆಗಳಲ್ಲಿ ಸ್ಪರ್ಧಿಸಬಾರದು, ಬಹಿರಂಗವಾಗಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎನ್ನುವುದನ್ನು ಒಂದು ಹಂತದ ತನಕ ಸಮರ್ಥಿಸಿಕೊಳ್ಳಬಹುದು. ಆದರೆ ಸರ್ಕಾರಿ ನೌಕರರು ಗಣನೀಯ ಸಂಖ್ಯೆಯಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಗಳಲ್ಲಿ, ಚುನಾವಣಾ ಪ್ರಚಾರಗಳಲ್ಲಿ ಹಾಗೂ ಜಾತಿ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎನ್ನುವುದೂ ಮುಕ್ತ ರಹಸ್ಯವೇ. ಆದರೆ ದೇಶದ ರಾಜಕಾರಣದ ಬಗ್ಗೆ ವ್ಯಾಖ್ಯಾನ ಮಂಡಿಸುವ ರಾಜಕೀಯಶಾಸ್ತ್ರಜ್ಞನ ಮೇಲೆ ಇಂತಹ ನಿಯಮಗಳು ಬಳಕೆಯಾಗುತ್ತವೆ ಎನ್ನುವುದು ವಾಸ್ತವ.

ಹಾಗೆಯೇ ವಿವಿಧ ನಾಗರಿಕ ಸೇವೆಗಳಲ್ಲಿರುವ ಹಿರಿಯ ಅಧಿಕಾರಿಗಳ ಮೇಲೆ ಸಾರ್ವಜನಿಕವಾಗಿ ಸರ್ಕಾರದ ನೀತಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸದಂತೆ ನಿರ್ಬಂಧವಿದೆ. ಅವರು ಈ ನೀತಿಗಳನ್ನು ರೂಪಿಸುವವರು ಹಾಗೂ ಅನುಷ್ಠಾನಗೊಳಿಸುವವರು. ಆದರೆ ಇದೇ ನಿಯಮಗಳನ್ನು ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುವ ನನ್ನಂತಹವರ ಮೇಲೆ ಸಹ ವಿಸ್ತರಿಸಿ, ಬಳಸಲು ಸಾಧ್ಯವಿದೆ. ನಾಗರಿಕ ಸೇವಾನಿಯಮಗಳು ವಿಶ್ವವಿದ್ಯಾಲಯ ಅಥವಾ ಅಂತಹ ಇತರ ಸಂಸ್ಥೆಗಳಿಗಿರುವ ಸ್ವಾಯತ್ತತೆಯನ್ನು ಕರಗಿಸಿಬಿಡುತ್ತವೆ.

ಹೀಗೆ ನಮ್ಮ ನಾಗರಿಕ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸುವ ನಿಯಮಗಳು ನಾಗರಿಕ ಸೇವೆಯ ನಿಯಮಗಳಲ್ಲಿ ಹತ್ತಾರು ಇವೆ ಎನ್ನುವುದು ಒಂದೆಡೆ ಆತಂಕಕ್ಕೆ ಎಡೆಮಾಡಿಕೊಡುತ್ತಿದೆ. ಮತ್ತೊಂದೆಡೆ ಇದೇ ನಿಯಮಗಳನ್ನು ಬಳಸುತ್ತ ಕಣ್ಗಾವಲು ವ್ಯವಸ್ಥೆಯೊಂದನ್ನು ರೂಪಿಸಲು ಸರ್ಕಾರಗಳು ಕ್ರಿಯಾಶೀಲವಾಗಿವೆ. ಇದಕ್ಕೊಂದು ಒಳ್ಳೆಯ ಉದಾಹರಣೆಯೆಂದರೆ ಎಲ್ಲೆಡೆ ಅಳವಡಿಸಿಕೊಳ್ಳಲಾಗುತ್ತಿರುವ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆ. ಈ ವ್ಯವಸ್ಥೆಯ ಪರ ಮತ್ತು ವಿರೋಧವಾಗಿ ಬಲವಾದ ವಾದಗಳಿವೆ. ಆದರೆ ಇವುಗಳನ್ನು ಅನುಷ್ಠಾನಗೊಳಿಸುವಾಗ ಯಾವ ಚರ್ಚೆಗಳೂ ನಡೆಯದೆ, ಪ್ರಭಾವಿ ಅಧಿಕಾರಸ್ಥರ ಇಂಗಿತದಂತೆ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಸರ್ಕಾರಿ ನೌಕರರಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ತನಕ ಎಲ್ಲರ ಹಾಜರಾತಿ ಬಯೊಮೆಟ್ರಿಕ್ ವ್ಯವಸ್ಥೆಯಲ್ಲಿರಬೇಕು ಎನ್ನುವುದು ಪ್ರಭುತ್ವದ ಆಶಯ.

ಇಂತಹದೊಂದು ವ್ಯವಸ್ಥೆ ನಾನು ಕೆಲಸ ಮಾಡುವ ರಾಜ್ಯ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಸಹ, ಅಧ್ಯಾಪಕರಿಗೂ ಅನ್ವಯವಾಗುವಂತೆ, ಹಲವೆಡೆ ಅನುಷ್ಠಾನಗೊಂಡಿದೆ. ವಿಶ್ವವಿದ್ಯಾಲಯವೊಂದರ ಅಧ್ಯಾಪಕ ನಿಜವಾದ ಅರ್ಥದಲ್ಲಿ ಬೌದ್ಧಿಕ ಬದುಕನ್ನು ಬದುಕುವುದಾದರೆ, 10ರಿಂದ 5ರ ತನಕ ಮಾತ್ರ ಚಿಂತನೆ, ಬರವಣಿಗೆಯ ಕೆಲಸ ಮಾಡುತ್ತಾನೆ ಅಥವಾ ಮಾಡಬೇಕು ಎನ್ನುವ ಪರಿಕಲ್ಪನೆಯೇ ಅಸಂಬದ್ಧವಾದುದು. ಮಿಗಿಲಾಗಿ ಬಯೊಮೆಟ್ರಿಕ್ ವ್ಯವಸ್ಥೆಯು ನಮ್ಮ ಕರ್ತವ್ಯಪ್ರಜ್ಞೆ, ಪ್ರಾಮಾಣಿಕತೆ ಮತ್ತು ಆತ್ಮಗೌರವಗಳನ್ನು ಪ್ರಶ್ನಿಸುವ ಸಂಕೇತವೂ ಆಗಿದೆ. ನನ್ನ ಕೆಲಸದ ಸಮಯವನ್ನು ಜವಾಬ್ದಾರಿಯುತವಾಗಿ ಬಳಸಲು ನನ್ನಿಂದ ಸಾಧ್ಯವಿಲ್ಲ, ಅದಕ್ಕೆ ಮೇಲಧಿಕಾರಿಯೊಬ್ಬರ ಉಸ್ತುವಾರಿ ಬೇಕು ಎನ್ನುವ ವಿಚಾರವೇ ಅಧ್ಯಾಪಕನೊಬ್ಬನಿಗೆ ಅವಮಾನದ್ದಲ್ಲವೇ? ಆದರೆ ಇಂತಹ ಕ್ರಮಗಳನ್ನು ಪ್ರಶ್ನಿಸುವ, ಪ್ರತಿಭಟಿಸುವ ಚೈತನ್ಯ ವಿಶ್ವವಿದ್ಯಾಲಯಗಳಲ್ಲಿ ಆಗಲೀ, ಇತರ ಸಂಸ್ಥೆಗಳಲ್ಲಿಯಾಗಲೀ ಇಂದು ಉಳಿದಿಲ್ಲ.

ಪ್ರಜಾಸತ್ತಾತ್ಮಕ ವ್ಯವಸ್ಥೆಯೊಂದು ಉಳಿಯುವುದು ಭಿನ್ನಮತ, ಪ್ರತಿಭಟನೆಗಳು ಹುಟ್ಟಲು ಸಾಧ್ಯವಿರುವಂತಹ ವಾತಾವರಣವಿದ್ದಾಗ. ಹೊಸ ವಿಚಾರಗಳು, ಕನಸುಗಳು, ಆದರ್ಶಗಳು ಹುಟ್ಟುವುದು ಭಿನ್ನಮತದ ಗರ್ಭದೊಳಗಿನಿಂದ. ಅವುಗಳನ್ನು ಪೋಷಿಸಲು ಪ್ರಜ್ಞಾಪೂರ್ವಕವಾಗಿಯೇ ಕೆಲಸ ಮಾಡಬೇಕು. ಆದರೆ ನಮ್ಮ ಇಡೀ ವ್ಯವಸ್ಥೆ ಸ್ವಾತಂತ್ರ್ಯ, ಖಾಸಗಿತನ, ವೈಯಕ್ತಿಕ ಹಕ್ಕುಗಳನ್ನು ಮೊಟಕುಗೊಳಿಸುವ ದಾರಿಯಲ್ಲಿ ಸಾಗಿದೆ. ಇದು ಮುಂದುವರೆದರೆ ಡಾ. ಶೇಖರ್ ಅನುಭವಿಸುತ್ತಿರುವ ಗತಿ ನಮಗೆಲ್ಲರಿಗೂ ಕಾದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT