ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಚುನಾವಣೆಯಲ್ಲಿ ಏನುಂಟು, ಏನಿಲ್ಲ?

Last Updated 3 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಗುಜರಾತ್‌ನ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಪ್ರಸ್ತಾಪ ಆಗುತ್ತಿರುವ ವಿಚಾರಗಳು ಯಾವುವು? 22 ವರ್ಷಗಳಿಂದ ರಾಜ್ಯವನ್ನು ಆಳುತ್ತಿರುವ ಭಾರತೀಯ ಜನತಾ ಪಕ್ಷವು ಅಲ್ಲಿ 'ಅಭಿವೃದ್ಧಿ'ಯ ವಿಚಾರ ಪ್ರಸ್ತಾಪ ಆಗುತ್ತಿದೆ ಎಂದು ಹೇಳುತ್ತಿದೆ. 'ಅಭಿವೃದ್ಧಿ' ಎಂಬುದು ಹಕ್ಕುಸ್ವಾಮ್ಯತ್ವಕ್ಕೆ ಒಳಪಟ್ಟ ಪದದಂತೆ ಕಾಣಿಸುತ್ತಿದೆ, ಅಭಿವೃದ್ಧಿಯನ್ನು ಬಿಜೆಪಿ ಮಾತ್ರ ಸಾಧಿಸಬಲ್ಲದು, ಅದರಲ್ಲೂ ಮುಖ್ಯವಾಗಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಾತ್ರ ಅದು ಸಾಧ್ಯ ಎಂಬಂತೆ ಹೇಳಲಾಗುತ್ತಿದೆ. ಬಿಜೆಪಿ ಮಾಡುವುದು ಅಭಿವೃದ್ಧಿ ಕಾರ್ಯಗಳನ್ನು, ಇತರ ಪಕ್ಷಗಳೆಲ್ಲ ಮಾಡುವುದು ಭ್ರಷ್ಟಾಚಾರ ಹಾಗೂ ವಂಶಪಾರಂಪರ್ಯದ ರಾಜಕಾರಣವನ್ನು ಎಂಬಂತಹ ವಿವರಣೆ ಬಿಜೆಪಿ ಕಡೆಯಿಂದ ಬರುತ್ತಿದೆ. ಹೀಗೆ ಎಲ್ಲವನ್ನೂ ಸರಳೀಕರಣಗೊಳಿಸಿ, ಸೂತ್ರರೂಪದಲ್ಲಿ ಹೇಳುತ್ತಿರುವುದು ತೀರಾ ಎಳಸಾಗಿ ಕಾಣುತ್ತದೆ. ಆದರೆ, ಹೀಗೆ ಹೇಳಿಕೊಳ್ಳುವ ಬಿಜೆಪಿಯನ್ನು ವಿರೋಧಿ ಪಕ್ಷಗಳು ಪ್ರಶ್ನಿಸದೆ ಇರುವುದು ಇಲ್ಲಿ ಮುಖ್ಯವಾಗಿ ಕಾಣಬೇಕಾದ ಅಂಶ.

ಚುನಾವಣೆ ಪ್ರಚಾರದ ವೇಳೆ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಬಯಸುತ್ತಿದೆ ಎಂದು ಭಾವಿಸೋಣ. ಅಂದರೆ, ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಕಾರಣವಾಗುವ ಅಂಕಿ-ಅಂಶಗಳನ್ನು, ನೀತಿಗಳನ್ನು ಇಟ್ಟುಕೊಂಡು ಮಾತನಾಡಲು ಅದು ಬಯಸುತ್ತಿದೆ ಎಂದು ಭಾವಿಸೋಣ. ಆ ಪಕ್ಷವು ಮೂಲ ವಿಷಯದಿಂದ ಬೇರೆಡೆ ಹೊರಳುತ್ತಿರುತ್ತದೆ ಎಂಬುದು ನಿಜ. ರಾಹುಲ್ ಗಾಂಧಿ ಅವರ ಧರ್ಮ ಯಾವುದು ಎಂಬುದನ್ನು ತಿಳಿಯಲು ಆ ಪಕ್ಷ ಬಯಸುತ್ತದೆ. ಹಫೀಜ್‌ ಸಯೀದ್‌ಗೆ ಜಾಮೀನು ಸಿಕ್ಕಿದ್ದಕ್ಕೆ ಕಾಂಗ್ರೆಸ್ ಸಂಭ್ರಮಿಸಿತ್ತು ಎಂದು ಪ್ರಧಾನಿಯವರು ಸುಳ್ಳು ಹೇಳುತ್ತಾರೆ. ಇವೆಲ್ಲ ವಿಚಾರಗಳಿಗೂ ಅಭಿವೃದ್ಧಿಗೂ ಯಾವ ಸಂಬಂಧ ಇದೆ? ಯಾವ ಸಂಬಂಧವೂ ಇಲ್ಲ.

ತಾನು ಅಭಿವೃದ್ಧಿ ವಿಚಾರಗಳನ್ನು ಮಾತನಾಡುತ್ತಿದ್ದೇನೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದ್ದರೆ, ಚುನಾವಣೆಯಲ್ಲಿನ ವಿಷಯ ಏನು ಎಂಬ ಬಗ್ಗೆ ಕಾಂಗ್ರೆಸ್ಸಿಗೆ ಸ್ಪಷ್ಟತೆಯೇ ಇಲ್ಲ. ಅಥವಾ, ಬಿಜೆಪಿಯು 'ತಾನು ಅಭಿವೃದ್ಧಿ ಕೆಲಸ ಮಾಡುತ್ತೇನೆ' ಎಂದು ಹೇಳಿಕೊಳ್ಳುವಂತೆ ಕಾಂಗ್ರೆಸ್ ಯಾವುದೇ ಒಂದು ವಿಚಾರವನ್ನು ಹೇಳಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಅವರು 'ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ, ಅದನ್ನು ಚರ್ಚಿಸಬೇಕು' (ಇದಕ್ಕೆ ಅವರಿಗೆ ಮಾಧ್ಯಮಗಳ ಬೆಂಬಲ ಸಿಗಲಿಲ್ಲ) ಎಂದು ಒಂದು ದಿನ ಹೇಳುತ್ತಾರೆ. ಮಾರನೆಯ ದಿನ ಅವರು ಜಿಎಸ್‌ಟಿ ಅಥವಾ ನೋಟು ರದ್ದತಿ ಬಗ್ಗೆ ಮಾತನಾಡುತ್ತಾರೆ. ಒಂದು ವಿಷಯವನ್ನು ಕೇಂದ್ರೀಕರಿಸಿಕೊಂಡು ಮಾತನಾಡುತ್ತಿಲ್ಲದ ಕಾರಣ, ಬಿಜೆಪಿ ವಿರುದ್ಧದ ಸಂದೇಶ ಚದುರಿಹೋಗುತ್ತಿದೆ.

ವಿಷಯಗಳನ್ನು ಹೊರತುಪಡಿಸಿದರೆ, ಮುಖ್ಯವಾಗಿ ಕಾಣಿಸಿಕೊಳ್ಳುವುದು ಸಂಘಟನೆಗೆ ಸಂಬಂಧಿಸಿದ ಸಂಗತಿ. ಗುಜರಾತ್‌ನಲ್ಲಿ ಬಿಜೆಪಿಯು ಶಕ್ತಿಯುತವಾಗಿದೆ. ಪ್ರಜಾತಂತ್ರ ಇರುವ ಜಗತ್ತಿನಲ್ಲಿ ಬಿಜೆಪಿಯು ಅತ್ಯಂತ ಶಕ್ತಿಶಾಲಿ ಪಕ್ಷಗಳಲ್ಲೊಂದು. ತಳಮಟ್ಟದಲ್ಲಿ ಅದಕ್ಕೆ ವಿಸ್ತೃತ ನೆಲೆ ಇದೆ. ಅದನ್ನು ವಿಶ್ವದ ಅತಿದೊಡ್ಡ ಸರ್ಕಾರೇತರ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಲಕ್ಷಾಂತರ ಸದಸ್ಯರ ಮೂಲಕ ನಿಭಾಯಿಸುತ್ತದೆ. ಈ ಸದಸ್ಯರು ಬದ್ಧತೆ ಇರುವವರು ಹಾಗೂ ತರಬೇತಿ ಹೊಂದಿದವರು. ಈಚಿನ ವರ್ಷಗಳಲ್ಲಿ, ನರೇಂದ್ರ ಮೋದಿ ಅವರ ಆಕರ್ಷಕ ನಾಯಕತ್ವದ ಕಾರಣದಿಂದಾಗಿ ಈ ಸದಸ್ಯರು ಸಾಕಷ್ಟು ಪ್ರೇರಣೆಯನ್ನೂ ಪಡೆದಿದ್ದಾರೆ. ಮೋದಿ ಅವರನ್ನು ತಳಮಟ್ಟದ ಕಾರ್ಯಕರ್ತರು ಗೌರವಿಸುತ್ತಾರೆ. ಗುಜರಾತಿನಲ್ಲಿ ತುರುಸಿನ ಸ್ಪರ್ಧೆ ಇದೆಯೇ ಎಂಬುದು ಖಚಿತವಾಗಿಲ್ಲ. ಆದರೂ ಅಂಥದ್ದೊಂದು ಸ್ಪರ್ಧೆ ಏರ್ಪಟ್ಟರೆ, ಬಿಜೆಪಿಯ ಸಂಘಟನಾ ಶಕ್ತಿಯೇ ಗೆಲುವನ್ನು ತಂದುಕೊಡುತ್ತದೆ.

ಗುಜರಾತ್‌ನಲ್ಲಿ ಸ್ಪರ್ಧೆ ಇರುವುದು ಎರಡೇ ಪಕ್ಷಗಳ ನಡುವೆ. ಹಾಗಾಗಿ ನಾವು ಬಿಜೆಪಿ ಹೊರತುಪಡಿಸಿದರೆ ಕಾಂಗ್ರೆಸ್ಸನ್ನು ಮಾತ್ರ ಕಾಣಬಹುದು. ಆದರೆ ಕಾಂಗ್ರೆಸ್ ಪಾಳೆಯದಲ್ಲಿ, ಬಿಜೆಪಿಯಲ್ಲಿ ಕಾಣುವಂತಹ ಸ್ಪರ್ಧೆಯ ಹುರುಪು ಕಾಣುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ಸೇವಾ ದಳದ ಹಳೆಯ ಕಾಂಗ್ರೆಸ್ ಸದಸ್ಯರು ಅಥವಾ ಯುವ ಕಾಂಗ್ರೆಸ್ಸಿನ ಸದಸ್ಯರು ಕಾಣುತ್ತಿಲ್ಲ. ಕಾಂಗ್ರೆಸ್ಸಿನ ಕಾರ್ಯಕರ್ತರ ಬಲ ಕುಸಿದುಹೋಗಿದೆ. ಹಾಗಾಗಿ, ತಮ್ಮ ಪರ ಕೆಲಸ ಮಾಡುವವರನ್ನು ಹುಡುಕಿಕೊಳ್ಳುವ ವೈಯಕ್ತಿಕ ಹೊಣೆ ಕಾಂಗ್ರೆಸ್ಸಿನ ಅಭ್ಯರ್ಥಿಗಳ ಮೇಲೆಯೇ ಇದೆ. ಹೀಗೆ ಮಾಡುವುದಕ್ಕೆ ಹೆಚ್ಚು ಹಣ ಬೇಕಾಗುತ್ತದೆ. ಪಕ್ಷ ನಿರಂತರವಾಗಿ ಸೋಲುತ್ತಿರುವ ಕಾರಣ ಕಾಂಗ್ರೆಸ್ಸಿನ ನಾಯಕರು ಹೆಚ್ಚು ಹಣ ಖರ್ಚು ಮಾಡುತ್ತಿಲ್ಲ.

ವಿಚಾರಗಳನ್ನು ಪ್ರಸ್ತಾಪಿಸುವುದರಲ್ಲಿ ಹಾಗೂ ಸಂಘಟನಾತ್ಮಕ ನೆಲೆಯಲ್ಲಿ ಬಿಜೆಪಿಯು ಮುಂದಿದೆ ಎಂಬುದು ನನ್ನ ಭಾವನೆ. ಹೀಗೆ ಮುಂದಿರುವುದಕ್ಕೆ ಕಾರಣ ಬಿಜೆಪಿಯ ಶಕ್ತಿ ಅಥವಾ ಕಾಂಗ್ರೆಸ್ಸಿನ ದೌರ್ಬಲ್ಯ ಅಥವಾ ಅವೆರಡೂ ಆಗಿರಬಹುದು.

ಮೂರನೆಯದು ಚುನಾವಣಾ ಪ್ರಚಾರ ಕಾರ್ಯತಂತ್ರಕ್ಕೆ ಸಂಬಂಧಿಸಿದ್ದು. ಬಿಜೆಪಿಯು ಪ್ರಧಾನ ಮಂತ್ರಿಯವರ ರೂಪದಲ್ಲಿರುವ ತನ್ನ ಅತ್ಯಂತ ಶಕ್ತಿಶಾಲಿ ಅಸ್ತ್ರವನ್ನು ಪ್ರಯೋಗಿಸಿದ್ದು, ಅವರನ್ನು ಹತ್ತು ಹಲವು ಚುನಾವಣಾ ಪ್ರಚಾರ ಸಭೆಗಳಲ್ಲಿ ಬಳಕೆ ಮಾಡಿಕೊಂಡಿದೆ. ಪ್ರಧಾನಿಯವರು ಗುಜರಾತಿನಲ್ಲಿ ಕೂಡ ಹಿಂದಿಯಲ್ಲೇ ಮಾತನಾಡುತ್ತಿದ್ದರು. ಆದರೆ ಈಚೆಗೆ ಅವರು ಗುಜರಾತಿಯಲ್ಲಿ ಮಾತನಾಡಲು ಆರಂಭಿಸಿರುವುದನ್ನು ಓದುಗರು ಗಮನಿಸಿರಬಹುದು. ಅಂದರೆ ಅವರಿಗೆ ಬಲವಾದ ಸಂದೇಶವೊಂದನ್ನು ರವಾನಿಸಬೇಕಿದೆ. ಚುನಾವಣಾ ಸಮೀಕ್ಷೆಗಳು ಹೇಳುತ್ತಿರುವುದಕ್ಕಿಂತ ತುರುಸಿನ ಸ್ಪರ್ಧೆ ಅಲ್ಲಿ ಇದ್ದಿರಬಹುದು ಎಂಬುದು ಇದರ ಅರ್ಥ. ಅತ್ಯುತ್ತಮ ಎನ್ನಬಹುದಾದ ಸಾರ್ವಜನಿಕ ಭಾಷಣ ಕಲೆ ಮೋದಿ ಅವರಲ್ಲಿ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಯೇ, ಸಾರ್ವಜನಿಕ ಚರ್ಚೆಯ ವಿಷಯಗಳು ಏನಿರಬೇಕು ಎಂಬುದನ್ನೂ ಮೋದಿ ಅವರು ತೀರ್ಮಾನಿಸಬಲ್ಲರು. ಇದನ್ನು ಮಾಡುವುದು ರಾಹುಲ್ ಅವರಿಗೆ ಆಗದು. ಮೋದಿ ಅವರು ದೊಡ್ಡ ಭಾಷಣವೊಂದನ್ನು ಮಾಡಿದಾಗ, ಹಳೆಯ ವಿಚಾರವನ್ನು ಹೊಸ ಬಗೆಯಲ್ಲಿ ಹೇಗೆ ಹೇಳುತ್ತಾರೆ ಅಂದರೆ, ಅದು ಹೆಡ್‌ಲೈನ್‌ ಮೂಲಕವೇ ಬಿತ್ತರವಾಗುತ್ತದೆ.

ಒಂದು ಉದಾಹರಣೆ: 'ನಾನು ಚಹಾ ಮಾರಿದೆ, ಆದರೆ ದೇಶವನ್ನು ಮಾರಲಿಲ್ಲ'. ಇಷ್ಟು ಸ್ಪಷ್ಟವಾಗಿ ಹಾಗೂ ಸರಳವಾಗಿ ಪದಗಳನ್ನು ಜೋಡಿಸುವುದು ಒಬ್ಬ ನಾಯಕ ಹೊಂದಿರಬಹುದಾದ ಭಯಂಕರ ಆಸ್ತಿ! ಕಾಂಗ್ರೆಸ್ಸಿನ ಪರಿಸ್ಥಿತಿ ಹೇಗಿದೆಯೆಂದರೆ, ಚರ್ಚೆಯ ವಿಷಯಗಳು ಏನಿರಬೇಕು ಎಂಬುದನ್ನು ತೀರ್ಮಾನಿಸುವ ಶಕ್ತಿ ಆ ಪಕ್ಷಕ್ಕೆ ಇಲ್ಲ. ಅಷ್ಟೇ ಅಲ್ಲ, ಅಷ್ಟೇನೂ ಮಹತ್ವದ್ದಲ್ಲದ ವಿಚಾರಗಳಲ್ಲಿ ತನ್ನನ್ನು ತಾನು ಸಮರ್ಥಿಸುತ್ತ ಕೂರಬೇಕಾಗುತ್ತದೆ- ಅಹ್ಮದ್ ಪಟೇಲ್ ಅವರು ಆಸ್ಪತ್ರೆಯೊಂದರ ಟ್ರಸ್ಟಿ ಆಗಿದ್ದು ಸರಿಯೇ ಎಂಬ ಬಗ್ಗೆ, ರಾಹುಲ್ ಅವರು ಕೆಥೋಲಿಕ್ ಹೌದೇ ಎಂಬ ಬಗ್ಗೆ ಕಾಂಗ್ರೆಸ್ ವಿವರಣೆಗಳನ್ನು ನೀಡುತ್ತ ಕುಳಿತಿರಬೇಕಾಗುತ್ತದೆ.

ಹೀಗಿದ್ದರೂ ಒಂದು ಕೆಲಸವನ್ನು ಕಾಂಗ್ರೆಸ್ ಪರಿಣಾಮಕಾರಿಯಾಗಿ ಮಾಡಿದೆ. ಕೆಲವು ತಿಂಗಳುಗಳಿಂದ ಚಳವಳಿಯಲ್ಲಿ ತೊಡಗಿರುವ ಮೂರು ಭಿನ್ನಮತೀಯ ಗುಂಪುಗಳನ್ನು ಒಗ್ಗೂಡಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕೂರ್ ನೇತೃತ್ವದ ಪಟೇಲರನ್ನು, ದಲಿತರನ್ನು ಮತ್ತು ಒಬಿಸಿ ಕ್ಷತ್ರಿಯರನ್ನು ಅದು ಒಂದೆಡೆ ತಂದಿದೆ. ಈ ಮೂರೂ ಗುಂಪುಗಳ ಬೇಡಿಕೆಗಳು ಒಂದಕ್ಕೊಂದು ವಿರೋಧಾಭಾಸದವುಗಳಾಗಿರುವ ಕಾರಣ, ಈ ಗುಂಪುಗಳನ್ನು ಒಂದೆಡೆ ತರುವುದು ಸುಲಭದ ಕೆಲಸವೇನೂ ಆಗಿರಲಿಲ್ಲ. ಹಾಗೆಯೇ, ಈ ಮೂರು ಗುಂಪುಗಳು ರಾಜಕೀಯ ರಹಿತವಾಗಿಯೂ, ಯಾವುದೇ ಬಾಹ್ಯ ಒತ್ತಡಗಳು ಇಲ್ಲದೆಯೇ ಮೂಡಿದವಾದ ಕಾರಣ, ಅವು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಸಹಜವೇನೂ ಆಗಿರಲಿಲ್ಲ. ಹೀಗಿದ್ದರೂ ಈ ಗುಂಪುಗಳನ್ನು ಒಂದೆಡೆ ತರುವಲ್ಲಿ ಕಾಂಗ್ರೆಸ್ ಯಶಸ್ಸು ಕಂಡಿದೆ. ಇದನ್ನು ಸಾಧ್ಯವಾಗಿಸಿರುವುದು ಅಹ್ಮದ್ ಪಟೇಲ್ ಎಂಬುದು ನನ್ನ ಊಹೆ.

ಈ ಬೆಳವಣಿಗೆಯು ಬಿಜೆಪಿಗೆ ತಲೆಬಿಸಿ ತಂದಿದೆ. ಆ ಪಕ್ಷದ ನಾಯಕರು, ಅದರಲ್ಲೂ ಮುಖ್ಯವಾಗಿ ಅಲ್ಲಿನ ಮುಖ್ಯಮಂತ್ರಿ, ನೀಡುತ್ತಿರುವ ಹೇಳಿಕೆಗಳಲ್ಲಿ ಇದು ವ್ಯಕ್ತವಾಗುತ್ತಿದೆ. ಅವರಿಗೆ ಈ ಹೊಂದಾಣಿಕೆ ಮುರಿದುಬೀಳಬೇಕಾಗಿದೆ. ಈಗಿರುವ ಪ್ರಶ್ನೆ: ಬಿಜೆಪಿಯನ್ನು ಸೋಲಿಸಲು ಈ ಹೊಂದಾಣಿಕೆಯೊಂದೇ ಸಾಕೇ? ಇವೆಲ್ಲಕ್ಕಿಂತಲೂ ಈ ಚುನಾವಣೆಯಲ್ಲಿ ಹೆಚ್ಚು ಕೆಲಸ ಮಾಡುವುದು ಮತದಾನದ ಪ್ರಮಾಣ ಎಂಬುದು ನನ್ನ ಅನಿಸಿಕೆ. ಗುಜರಾತಿನಲ್ಲಿ ಮತದಾನದ ಪ್ರಮಾಣ ಜಾಸ್ತಿಯೇ ಇರುತ್ತದೆ. ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಬಿಜೆಪಿ ಮುಂದಿದ್ದರೂ, ತನ್ನ ಬೆಂಬಲಿಗ ಸಮೂಹವು ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಅದು ನೋಡಿಕೊಳ್ಳಬೇಕು. ಆದರೆ ಬಿಜೆಪಿ ಅಲ್ಲಿ ರಕ್ಷಣಾತ್ಮಕ ಅಭಿಯಾನ ನಡೆಸುತ್ತಿರುವ ಕಾರಣ ಹೀಗೆ ಮಾಡುವುದು ಸುಲಭ ಆಗಲಿಕ್ಕಿಲ್ಲ. ಕಾಂಗ್ರೆಸ್ಸಿನ ಮತದಾರ ಸಮೂಹ ಅಲ್ಲಿ ಚಿಕ್ಕದಾಗಿದ್ದರೂ, ಅವರಲ್ಲಿ ಆಕ್ರೋಶ ಇರುವ ಕಾರಣ ಅವರು ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಾರೆ ಎಂದು ನಂಬಬಹುದು.

ಈ ನಿಟ್ಟಿನಲ್ಲಿ ನೋಡಿದಾಗ, ಗುಜರಾತಿನ ನೈಜ ವಿಚಾರಗಳು, ಅಂದರೆ ಉದ್ಯೋಗ ಹಾಗೂ ಅರ್ಥಪೂರ್ಣ ಆರ್ಥಿಕ ಅಭಿವೃದ್ಧಿ, ಆಡಳಿತಾರೂಢ ಪಕ್ಷಕ್ಕೆ ವಿರುದ್ಧವಾಗಿಯೇ ಇವೆ- ಆಡಳಿತದಲ್ಲಿ ಇರುವ ಪಕ್ಷವು ತಾನು ಈ ಉದ್ದೇಶಗಳಿಗಾಗಿ ಹೋರಾಡುತ್ತಿರುವುದಾಗಿ ತೋರಿಸಿಕೊಂಡರೂ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT