ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಳು ಗೋಡೆಯ ಊರಿಗೆ ಒಡೆಯನ್ಯಾರು?

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಗೋಳು ಗೋಡೆಯ ಊರಿಗೆ ಒಡೆಯನ್ಯಾರು? ಈ ಪ್ರಶ್ನೆ ಹಲವು ದಶಕಗಳಿಂದ ಉತ್ತರಕ್ಕಾಗಿ ಕಾಯುತ್ತಿದೆ. ಮಧ್ಯಪ್ರಾಚ್ಯದಲ್ಲಿ ಕಲಹ, ಕದನಗಳಿಗೆ ಕಾರಣವಾಗಿ ಹಾಗೆಯೇ ಉಳಿದಿದೆ. ಮೊನ್ನೆ ಡಿಸೆಂಬರ್ 6 ರಂದು, ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸಗೊಂಡು 25 ವರ್ಷವಾಯಿತು ಎಂದು ನಾವು ಚರ್ಚಿಸುತ್ತಿರುವಾಗ ಅತ್ತ ಜಗತ್ತಿನ ವಿವಾದಿತ ನಗರದ ಕುರಿತು ಅಮೆರಿಕ ತನ್ನ ನಿಲುವನ್ನು ಸ್ಪಷ್ಟಗೊಳಿಸಿತು. ಅಮೆರಿಕದ ನಿಲುವು ಒಳಿತಿಗೆ ದಾರಿ ಮಾಡುತ್ತದೋ, ಇನ್ನಷ್ಟು ಕೆಡುಕಿಗೆ ಕಾರಣವಾಗುತ್ತದೋ ಬೇರೆಯ ಮಾತು. ಆದರೆ ಅಮೆರಿಕ ಏನನ್ನು ಬಯಸುತ್ತಿದೆ ಎಂಬುದಂತೂ ಇದೀಗ ಸ್ಪಷ್ಟವಾಗಿದೆ.

ಇದುವರೆಗೂ ಅಡ್ಡಗೋಡೆಯ ಮೇಲೆ ದೀಪ ಇಡುತ್ತಿದ್ದ ಅಮೆರಿಕ, ಜೆರುಸಲೇಂ ವಿಷಯದಲ್ಲಿ ಮುಖದ ಪರದೆ ಸರಿಸಿ ಮಾತನಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಜೆರುಸಲೇಂ ಇಸ್ರೇಲಿನ ರಾಜಧಾನಿ ಎಂದು ಅಮೆರಿಕ ಅನುಮೋದಿಸುತ್ತದೆ ಮತ್ತು ಈ ಕೂಡಲೇ ಅಮೆರಿಕದ ರಾಜತಾಂತ್ರಿಕ ಕಚೇರಿಯನ್ನು ಟೆಲ್ ಅವೀವ್‌ನಿಂದ ಜೆರುಸಲೇಂಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ’ ಎಂಬ ನಿರ್ಧಾರ ಘೋಷಿಸಿದ್ದಾರೆ. ಇದನ್ನು ಇಸ್ರೇಲ್ ‘ಚಾರಿತ್ರಿಕ ನಿರ್ಧಾರ’ ಎಂದು ಕರೆದರೆ, ಅರಬ್ ಲೀಗ್ ‘ಇದೊಂದು ಬೇಜವಾಬ್ದಾರಿ ನಿಲುವು, ಶಾಂತಿ ಒಪ್ಪಂದಗಳಿಗಿಟ್ಟ ತಿಲಾಂಜಲಿ, ಮೃತ್ಯು ಚುಂಬನ’ ಇತ್ಯಾದಿಯಾಗಿ ಕಠಿಣ ಮಾತುಗಳಲ್ಲಿ ಸಿಟ್ಟನ್ನು ತೋರ್ಪಡಿಸಿದೆ.

ಹಾಗೆ ನೋಡಿದರೆ, ಇದು ಟ್ರಂಪ್ ಹೊಸದಾಗಿ ತಳೆದ ನಿಲುವಲ್ಲ. 1967ರ ಆರು ದಿನಗಳ ಯುದ್ಧಕ್ಕೆ 25 ವರ್ಷ ತುಂಬಿದಾಗ, ಅಮೆರಿಕದ ರಾಜತಾಂತ್ರಿಕ ಕಚೇರಿಯನ್ನು ಜೆರುಸಲೇಂನಲ್ಲಿ ತೆರೆಯಬೇಕು ಎಂದು ಆಗ್ರಹಿಸಿ 93 ಕಾಂಗ್ರೆಸ್ ಸದಸ್ಯರು ಅಂದಿನ ವಿದೇಶಾಂಗ ಕಾರ್ಯದರ್ಶಿ ವಾರೆನ್ ಕ್ರಿಸ್ಟೋಫರ್ ಅವರಿಗೆ ಪತ್ರ ಬರೆದಿದ್ದರು. ಮರುವರ್ಷ ಹಾಗೆ ಆಗ್ರಹಿಸುವವರ ಸಂಖ್ಯೆ 257ಕ್ಕೆ ಏರಿತ್ತು. 1995ರಲ್ಲಿ ಅಮೆರಿಕ ಕಾಂಗ್ರೆಸ್, ಜೆರುಸಲೇಂ ಕುರಿತು ಕಾಯ್ದೆಯೊಂದನ್ನು ಅನುಮೋದಿಸಿತು. ಆ ಕಾಯ್ದೆಯ ಮೂಲಕ ‘1950ರಿಂದಲೂ ಜೆರುಸಲೇಂ ಇಸ್ರೇಲ್ ರಾಜಧಾನಿಯಾಗಿದೆ. ಜೆರುಸಲೇಂ ಯಹೂದಿಗಳ ಅಸ್ಮಿತೆಯ ಭಾಗ. ಇಸ್ರೇಲ್ ತನ್ನ ಸಂಸತ್ತು, ಸರ್ವೋಚ್ಚ ನ್ಯಾಯಾಲಯ ಮತ್ತು ಸರ್ಕಾರದ ಆಡಳಿತ ಕೇಂದ್ರಗಳನ್ನು ಜೆರುಸಲೇಂನಲ್ಲಿ ಹೊಂದಿದೆ. ಈ ಕಾರಣಗಳಿಂದ ಜೆರುಸಲೇಂ ಇಸ್ರೇಲಿನ ರಾಜಧಾನಿ ಎಂಬುದನ್ನು ಅಮೆರಿಕ ಮಾನ್ಯ ಮಾಡಬೇಕು’ ಎಂದು ಸ್ಪಷ್ಟವಾಗಿ ಅಮೆರಿಕ ಕಾಂಗ್ರೆಸ್ ಹೇಳಿತ್ತು.

ಜೊತೆಗೆ ‘ಒಂದೊಮ್ಮೆ ರಾಯಭಾರ ಕಚೇರಿಯನ್ನು ಸ್ಥಳಾಂತರಿಸುವುದರಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಲಿದೆ ಎಂದು ಅಧ್ಯಕ್ಷರು ಮನಗಂಡರೆ, ಆರು ತಿಂಗಳ ವಿನಾಯಿತಿ ಪಡೆದು ನಂತರ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ಕೊಡಬಹುದು’ ಎಂಬ ನುಸುಳು ದಾರಿ ಕಾಯ್ದೆಯಲ್ಲಿತ್ತು. ಇದನ್ನೇ ಕ್ಲಿಂಟನ್, ಬುಷ್ ಮತ್ತು ಒಬಾಮ 22 ವರ್ಷಗಳ ಕಾಲ ಬಳಸಿಕೊಂಡು ಆರು ತಿಂಗಳಿಗೊಂದು ಮಾಫಿ ಪತ್ರಕ್ಕೆ ರುಜು ಹಾಕಿ ಕಾಲತಳ್ಳಿದರು. ಇದೀಗ ಟ್ರಂಪ್ ಆ ಹಾದಿ ಬಿಟ್ಟು, ಅಪಾಯಗಳನ್ನು ಎದುರು ನೋಡುತ್ತಲೇ ಕಾಯ್ದೆಯನ್ನು ಮಾನ್ಯ ಮಾಡಿದ್ದಾರೆ.

ಹಾಗಾದರೆ, ಜೆರುಸಲೇಂ ಇಸ್ರೇಲಿನ ರಾಜಧಾನಿ ಎನ್ನುವ ಮೂಲಕ ಟ್ರಂಪ್ ಎಡವಿದರೇ? ಉತ್ತರ ಸರಳವಿಲ್ಲ. ಜೆರುಸಲೇಂ ಮೂರು ಮತಗಳ ಕೂಡು ತಾಣ. ಇಲ್ಲಿ ಯಹೂದಿಗಳ ಎರಡು ಪುರಾತನ ದೇವಾಲಯಗಳಿದ್ದವು. ಮೊದಲ ದೇವಾಲಯವನ್ನು ಬೆಬಿಲೋನಿಯನ್ನರು ನಿರ್ನಾಮ ಮಾಡಿದರು. ಅದೇ ಸ್ಥಳದಲ್ಲಿ ಮತ್ತೊಂದು ದೇವಾಲಯ ನಿರ್ಮಿಸಲಾಯಿತು. ಆ ದೇವಾಲಯ ರೋಮನ್ನರಿಂದ ನಾಶವಾಯಿತು. ಯಹೂದಿಗಳು ಎದುರಿಸಿದ ದೌರ್ಜನ್ಯ, ದಬ್ಬಾಳಿಕೆಯ ಕುರುಹಾಗಿ ಸದ್ಯಕ್ಕೆ ಗೋಡೆಯಷ್ಟೇ ಉಳಿದಿದೆ. ಆ ‘ಗೋಳು ಗೋಡೆ’ಯ ಮುಂದೆ ಈಗ ಪ್ರಾರ್ಥನೆ ನಡೆಯುತ್ತಿದ್ದೆ. ಜೊತೆಗೆ ಮುಸ್ಲಿಮರು, ಮೆಕ್ಕಾ-ಮದೀನಾ ನಂತರ ಜೆರುಸಲೇಂ ಅನ್ನು ಪವಿತ್ರ ಸ್ಥಳವೆಂದು ಭಾವಿಸುತ್ತಾರೆ. ಪ್ರವಾದಿ ಮೊಹಮದ್ ಸ್ವರ್ಗಾರೋಹಣವಾದ ಪ್ರದೇಶ ಇದು ಎಂಬುದು ನಂಬಿಕೆ. ಏಸುವನ್ನು ಶಿಲುಬೆಗೆ ಏರಿಸಿದ ಮತ್ತು ಏಸುವಿನ ಮಹಾಪರಿನಿರ್ವಾಣ ಸ್ಥಳವೂ ಇದೇ ಆದ್ದರಿಂದ ಕ್ರೈಸ್ತರಿಗಿದು ಪುಣ್ಯ ಭೂಮಿ.

ಐತಿಹಾಸಿಕವಾಗಿ ನೋಡುವುದಾದರೆ, ಯಹೂದಿಗಳು ತಮ್ಮ ಮೂಲವನ್ನು ಬಗೆಯುವಾಗ ತಮ್ಮ ಮೊದಲ ದೊರೆ ಡೇವಿಡ್ ಮತ್ತು ಸಾಲೊಮನ್ನರ ತನಕ ಹೋಗುತ್ತಾರೆ. ಇದೀಗ ಇಸ್ರೇಲ್-ಪ್ಯಾಲೆಸ್ಟೀನ್ ಎಂದು ಕರೆಯಲಾಗುವ ಭೂಮಿ ದೊರೆ ಡೇವಿಡ್ ಕಾಲದಲ್ಲಿ ಯಹೂದಿಗಳ ನಾಡಾಗಿತ್ತು, ಜೆರುಸಲೇಂ ಅದರ ರಾಜಧಾನಿಯಾಗಿತ್ತು. ನಂತರ ಆಕ್ರಮಣಗಳು ನಡೆದವು, ಯಹೂದಿಗಳು ಗುಳೆಹೊರಟರು. ಅರಬ್ಬರು ನೆಲೆನಿಂತರು. ಬೆಬಿಲೋನಿಯನ್ನರು, ರೋಮನ್ನರು, ಕೊನೆಗೆ ಬ್ರಿಟಿಷರು ದೇಶವನ್ನು ಆಳಿದರು. ಆ ನಂತರ 1896ರಿಂದ 1948ರ ಅವಧಿಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಯಹೂದಿಗಳು ಯುರೋಪಿನ ನಾನಾ ಭಾಗಗಳಿಂದ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಪ್ಯಾಲೆಸ್ಟೀನ್ ಕಡೆಗೆ ಬಂದರು. ಅದಕ್ಕೆ ಕಾರಣ, ಯುರೋಪಿನಲ್ಲಿ ನಡೆಯುತ್ತಿದ್ದ ಜನಾಂಗೀಯ ಹತ್ಯೆ. ಆ ವೇಳೆಗಾಗಲೇ ತಮ್ಮದೇ ದೇಶವನ್ನು ಹೊಂದದ ಹೊರತು ಉಳಿಗಾಲವಿಲ್ಲ ಎಂಬುದು ಯಹೂದಿಗಳಿಗೆ ಮನವರಿಕೆಯಾಗಿತ್ತು. ವಲಸೆ ಹೆಚ್ಚಾದಂತೆ ಅರಬ್ಬರ ಮತ್ತು ಯಹೂದಿಗಳ ನಡುವೆ ಘರ್ಷಣೆ ಆರಂಭವಾದವು. ಸುಮಾರು 6.5 ಲಕ್ಷ ಯಹೂದಿಗಳು ಒಂದು ಭಾಗದಲ್ಲಿ ನೆಲೆಸಿದರೆ, ಅದರ ದುಪ್ಪಟ್ಟಿದ್ದ ಅರಬ್ಬರು ಮತ್ತೊಂದು ಭಾಗದಲ್ಲಿ ಜಮಾವಣೆಯಾದರು. ಹೀಗೆ ಡೇವಿಡ್ ದೊರೆಯ ನೆಲ ಇಬ್ಭಾಗವಾಯಿತು. ಬ್ರಿಟಿಷರು ತಾವು ದೇಶ ತೊರೆಯುವ ಮೊದಲು ಆಯಾ ಭಾಗವನ್ನು ಯಹೂದಿ ಮತ್ತು ಅರಬ್ಬರಿಗೆ ಹಂಚಿದರು. ಯಹೂದಿಗಳು ಒಪ್ಪಿಕೊಂಡರು, ಅರಬ್ಬರು ಆಗದು ಎಂದರು. ಈಜಿಪ್ಟ್, ಜೋರ್ಡನ್, ಇರಾಕ್ ಮತ್ತು ಸಿರಿಯಾ ಜೊತೆಯಾಗಿ ಇಸ್ರೇಲಿನ ಮೇಲೆ ಯುದ್ಧ ಸಾರಿದವು. ಇಸ್ರೇಲ್ ಮಣಿಯಲಿಲ್ಲ. ಪಶ್ಚಿಮ ಜೆರುಸಲೇಂ ಇಸ್ರೇಲಿನ ಒಡೆತನದಲ್ಲಿ, ಪೂರ್ವ ಜೆರುಸಲೇಂ ಜೋರ್ಡನ್ ಹಿಡಿತದಲ್ಲಿ ಉಳಿಯಿತು.

1947ರಲ್ಲಿ ವಿಶ್ವಸಂಸ್ಥೆ ದ್ವಿರಾಷ್ಟ್ರ ಪ್ರಸ್ತಾಪ ಮುಂದಿಟ್ಟಿತು. ಜೆರುಸಲೇಂ ಅನ್ನು ‘ಪ್ರತ್ಯೇಕ ಭೂಮಿ’ (ಕಾರ್ಪಸ್ ಸೆಪರೇಟಮ್) ಎಂದು ಗುರುತಿಸಿ ಅದರ ಪಾಲನೆ ಅಂತರರಾಷ್ಟ್ರೀಯ ಸಮುದಾಯದ್ದಾಗಿರುತ್ತದೆ ಎಂದಿತು. ಆದರೆ ಪ್ಯಾಲೆಸ್ಟೀನ್ ಮಾತ್ರ ಯಹೂದಿ ರಾಷ್ಟ್ರದ ರಚನೆಯನ್ನು ಅನುಮೋದಿಸಲಿಲ್ಲ. ಜೆರುಸಲೇಂ ಒಡೆತನವೂ ಪೂರ್ತಿ ತನ್ನದೇ ಎಂದಿತು. ಈ ಒಳಗುದಿ 1967ರಲ್ಲಿ ಯುದ್ಧಕ್ಕೆ ನಾಂದಿ ಹಾಡಿತು. ಆರು ದಿನಗಳ ಯುದ್ಧದಲ್ಲಿ ಇಸ್ರೇಲ್, ಪೂರ್ವ ಜೆರುಸಲೇಂ ಮತ್ತು ಅದಕ್ಕೆ ಹೊಂದಿಕೊಂಡ ಅರಬ್ಬರ ಹಳ್ಳಿಗಳನ್ನು ವಶಪಡಿಸಿಕೊಂಡು. ‘ಯುನೈಟೆಡ್ ಜೆರುಸಲೇಂ’ ಎಂದು ಕರೆಯಿತು. ಪಶ್ಚಿಮ ದಂಡೆ (ವೆಸ್ಟ್ ಬ್ಯಾಂಕ್) ಮತ್ತು ಗಾಜಾ ಪಟ್ಟಿಯ ತುಂಡು ಭೂಮಿ ಮಾತ್ರ ಪ್ಯಾಲೆಸ್ಟೀನ್ ಪಾಲಿಗೆ ಉಳಿಯಿತು.

ಅಂದಿನಿಂದ ಘೋಷಿತ ಯುದ್ಧ ನಡೆಯದಿರಬಹುದು. ಆದರೆ ಮುಸುಕಿನ ಗುದ್ದಾಟ ಈ ಭಾಗದಲ್ಲಿ ನಡೆದೇ ಇದೆ. ಜೆರುಸಲೇಂ ಮಟ್ಟಿಗೆ ಯಹೂದಿಗಳು ಮತ್ತು ಅರಬ್ಬರು ಒಂದೆಡೆ ವಾಸಿಸುತ್ತಿದ್ದರೂ ಈ ಎರಡೂ ಸಮುದಾಯಗಳು ಸಾಮಾಜಿಕವಾಗಿ ಬೆರೆಯುವುದಿಲ್ಲ. ಅಷ್ಟೇ ಅಲ್ಲ, ಇಡೀ ಅರಬ್ ಜಗತ್ತು ಇಸ್ರೇಲಿಗಳ ವಿಷಯದಲ್ಲಿ ಹೀಗೆಯೇ ವರ್ತಿಸುತ್ತದೆ. ಎಷ್ಟೆಂದರೆ ಇಂದಿಗೂ ಇರಾನಿನ ಕ್ರೀಡಾಪಟುಗಳು ಇಸ್ರೇಲಿಗರ ಜೊತೆ ಸೆಣಸುವುದನ್ನು ನಿಷೇಧಿಸಲಾಗಿದೆ. ಮೊನ್ನೆ ನವೆಂಬರ್ 25ರಂದು ಪೋಲೆಂಡ್‌ನಲ್ಲಿ ನಡೆದ 23 ವರ್ಷದೊಳಗಿನವರ ಕುಸ್ತಿ ಪಂದ್ಯದಲ್ಲಿ ಇರಾನಿನ ಅಲಿರೇಜ ರಷ್ಯಾದ ಕುಸ್ತಿಪಟುವಿನೊಂದಿಗೆ ಸೆಣಸುತ್ತಿದ್ದರು. ಅಲಿರೇಜ ಗೆಲ್ಲುತ್ತಾರೆ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಅದೇ ಹೊತ್ತಿಗೆ ‘ಪಂದ್ಯವನ್ನು ಸೋಲಬೇಕು’ ಎಂಬ ಸೂಚನೆ ತರಬೇತುದಾರನಿಂದ ರವಾನೆಯಾಯಿತು. ಅಂತೆಯೇ ಅಲಿರೇಜ ಸೋತರು. ಅದಕ್ಕೆ ಕಾರಣ ಒಂದೊಮ್ಮೆ ಪಂದ್ಯ ಗೆದ್ದರೆ ಮುಂದಿನ ಸುತ್ತಿನಲ್ಲಿ ಇಸ್ರೇಲಿನ ಕುಸ್ತಿಪಟುವಿನೊಂದಿಗೆ ಅಲಿರೇಜ ಸೆಣಸಬೇಕಾಗುತ್ತದೆ ಎಂಬುದು. ಇಂತಹ ಉದಾಹರಣೆಗಳು ಹಲವು ಸಿಗುತ್ತವೆ. ಈ ಹಿಂದೆ 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿನ ಈಜುಪಟು ಜಿಗಿದ ಈಜುಕೊಳದಲ್ಲಿ ತಾನು ಸ್ಪರ್ಧೆಗೆ ಇಳಿಯುವುದಿಲ್ಲ ಎಂದು ಇರಾನಿನ ಸ್ಪರ್ಧಾಳು ಹಿಂದೆ ಸರಿದಿದ್ದಳು. 2004ರ ಅಥೆನ್ಸ್ ಕ್ರೀಡಾಕೂಟದಲ್ಲೂ ಇರಾನ್ ಸ್ಪರ್ಧಿ ಇಸ್ರೇಲಿಗರ ಜೊತೆ ಸೆಣಸಲು ನಿರಾಕರಿಸಿ ಅನರ್ಹಗೊಂಡಿದ್ದರು. ಪರಿಸ್ಥಿತಿ ಹೀಗಿರುವಾಗ ಜೆರುಸಲೇಂ ಅನ್ನು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ರಾಜಧಾನಿಯನ್ನಾಗಿ ಹಂಚಿಕೊಳ್ಳಬೇಕು ಎಂಬ ಪ್ರತಿಪಾದನೆ ಎಷ್ಟರಮಟ್ಟಿಗೆ ಕಾರ್ಯಸಾಧು?

ಇನ್ನು, ಟ್ರಂಪ್ ರಾಜಕೀಯ ಉದ್ದೇಶದಿಂದ ಈ ನಿಲುವು ಪ್ರಕಟಿಸಿದರೇ? ಮುಂದಿನ ಅಧ್ಯಕ್ಷೀಯ ಚುನಾವಣೆ ಸನಿಹದಲ್ಲಿದ್ದಾಗ ಈ ಹೇಳಿಕೆ ಹೊರಬಿದ್ದಿದ್ದರೆ ರಾಜಕೀಯ ಉದ್ದೇಶ ಎನ್ನಬಹುದಿತ್ತು. ಆದರೆ ಮುಂದಿನ ಶ್ವೇತಭವನದ ಕದನ ಇನ್ನೂ ದೂರದಲ್ಲಿದೆ. ಹಾಗಾಗಿ ಚುನಾವಣೆಯ ವೇಳೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮತ್ತು ಅತಿ ಪುರಾತನ ಬಿಕ್ಕಟ್ಟಿಗೆ ಹೊಸ ಮಾರ್ಗದ ಮೂಲಕ ಪರಿಹಾರ ಹುಡುಕಿ ಚಿರಸ್ಥಾಯಿಯಾಗಿ ಉಳಿಯುವ ಪ್ರಯತ್ನಕ್ಕೆ ಟ್ರಂಪ್ ಇಳಿದಂತಿದೆ. ಈ ಹಿಂದೆ ಟ್ರಂಪ್ ತಮ್ಮ ಅಳಿಯ ಕುಶ್ನರ್ ಮೂಲಕ ‘ಅಂತಿಮ ಒಪ್ಪಂದ’ದ ಪ್ರಯತ್ನಕ್ಕೆ ಮುಂದಾಗಿದ್ದರು. ಆದರೆ ಅರಬ್ ರಾಷ್ಟ್ರಗಳ ಬೆಂಬಲವನ್ನು ಬೆನ್ನಿಗಿರಿಸಿಕೊಂಡಿರುವ ಪ್ಯಾಲೆಸ್ಟೀನ್ ನಾಯಕರನ್ನು ಸಂಧಾನದ ಮೇಜಿಗೆ ತಂದು ಕೂರಿಸುವುದು ಸುಲಭವಲ್ಲ. ಈ ಹಿಂದೆ 2000ದ ಜುಲೈನಲ್ಲಿ ಕ್ಲಿಂಟನ್ ಅಂದಿನ ಇಸ್ರೇಲ್ ಪ್ರಧಾನಿ ಎಡ್ ಬರಾಕ್ ಮತ್ತು ಪ್ಯಾಲೆಸ್ಟೀನ್ ನಾಯಕ ಯಾಸಿರ್ ಅರಾಫತ್ ಅವರನ್ನು ಮುಖಾಮುಖಿಯಾಗಿಸುವ ಪ್ರಯತ್ನ ಮಾಡಿದ್ದರು. ಬೇರೆಲ್ಲಾ ವಿಷಯಗಳು ಒಪ್ಪಿತವಾಗಿದ್ದರೂ ಜೆರುಸಲೇಂನಲ್ಲಿ ಯಹೂದಿಗಳ ದೇವಾಲಯ ಇತ್ತು ಎಂಬುದನ್ನು ಯಾಸಿರ್ ಅರಾಫತ್ ಅಲ್ಲಗಳೆದಿದ್ದರು. ಕೊನೆಗೆ ಮಾತುಕತೆ ಮುರಿದು ಬಿದ್ದಿತ್ತು.

ಬಿಡಿ, ಕಳೆದ ದಿನಗಳು ಒತ್ತಟ್ಟಿಗಿರಲಿ. ಮಧ್ಯಪ್ರಾಚ್ಯದಲ್ಲಿ ಮುಂದಿನ ಬೆಳವಣಿಗೆಗಳು ಏನಾಗಬಹುದು ಅಂತ ನೋಡಿದರೆ, ಅರಬ್ ಲೀಗ್ ತನ್ನ ಅಸಮಾಧಾನವನ್ನು ಹಮಾಸ್‌ನಂತಹ ಉಗ್ರರನ್ನು ಬೆಂಬಲಿಸುವ ಮೂಲಕ ತೋರಿಸಬಹುದು. ಇಸ್ರೇಲ್ ಮತ್ತು ಸುತ್ತಲಿನ ರಾಷ್ಟ್ರಗಳ ನಡುವೆ ಯುದ್ಧೋನ್ಮಾದದ ಸನ್ನಿವೇಶ ಸೃಷ್ಟಿಯಾಗಬಹುದು. ಅಮೆರಿಕವನ್ನು ತಟಸ್ಥ ಮಧ್ಯಸ್ಥಿಕೆದಾರ ಎಂದು ಪ್ಯಾಲೆಸ್ಟೀನ್ ಮತ್ತು ಅರಬ್ ಲೀಗ್ ಒಪ್ಪಲಾರವು. ಹಾಗಾಗಿ ‘ಅಂತಿಮ ಕರಾರು’ (Ultimate Deal) ಎಂಬ ಶಾಂತಿ ಸಂಧಾನ ಪ್ರಕ್ರಿಯೆ ನನೆಗುದಿಗೆ ಬೀಳಬಹುದು. ಅಮೆರಿಕ ತನ್ನ ರಾಯಭಾರ ಕಚೇರಿಯನ್ನು ಜೆರುಸಲೇಂಗೆ ಸ್ಥಳಾಂತರಿಸಿದರೂ, ಇತರೆ ದೇಶಗಳು ತಮ್ಮ ರಾಜತಾಂತ್ರಿಕ ಕಚೇರಿಯನ್ನು ಟೆಲ್ ಅವೀವ್‌ನಲ್ಲೇ ಉಳಿಸಿಕೊಳ್ಳಬಹುದು. ಹೀಗಾದಾಗ ಅಮೆರಿಕದ ನಿರ್ಣಯಕ್ಕೆ ಕವಡೆ ಕಿಮ್ಮತ್ತಿಲ್ಲ ಎನ್ನುವಂತಾಗುತ್ತದೆ. ಅದು ಕೇವಲ ಇಸ್ರೇಲ್ ಮತ್ತು ಅಮೆರಿಕ ನಡುವಿನ ಬಾಂಧವ್ಯವನ್ನಷ್ಟೇ ಗಟ್ಟಿಮಾಡುತ್ತದೆ.

ಕಠಿಣ ಎನಿಸಿದರೂ ಇನ್ನೊಂದು ದಾರಿಗೂ ಅವಕಾಶವಿದೆ. ಮುಂದಿನ ದಿನಗಳಲ್ಲಿ ಟ್ರಂಪ್ ಆಡಳಿತ ತನ್ನ ಮಿತ್ರ ರಾಷ್ಟ್ರಗಳ ಮೇಲೆ ಅಮೆರಿಕ ನಿರ್ಧಾರವನ್ನು ಬೆಂಬಲಿಸುವಂತೆ ಒತ್ತಡ ಹೇರಬಹುದು. ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಒಂದು ಅಭಿಯಾನವನ್ನೇ ಆರಂಭಿಸಿ ರಕ್ಷಣೆಯ, ಹೆಚ್ಚಿನ ಒಡಂಬಡಿಕೆಯ ಭರವಸೆ ನೀಡಿ ಇತರ ದೇಶಗಳು ರಾಜತಾಂತ್ರಿಕ ಕಚೇರಿಯನ್ನು ಜೆರುಸಲೇಂನಲ್ಲಿ ತೆರೆಯುವಂತೆ ನೋಡಿಕೊಳ್ಳಬಹುದು. ಒಂದೊಮ್ಮೆ ಹೀಗಾದರೆ ಶಾಂತಿ ಸಂಧಾನ ಪ್ರಕ್ರಿಯೆಗೆ ಹೊಸ ತಿರುವು ದೊರಕುತ್ತದೆ. ಅರಬ್ ಲೀಗ್ ಮತ್ತು ಪ್ಯಾಲೆಸ್ಟೀನ್ ನಾಯಕರು ಕೊಂಚ ಬಾಗುವುದು ಅನಿವಾರ್ಯವಾಗುತ್ತದೆ. ‘ಜೆರುಸಲೇಂ ವಿಷಯ ಬಗೆಹರಿದಿದೆ, ಗಾಜಾ ಪಟ್ಟಿ ಮತ್ತು ಪಶ್ಚಿಮ ದಂಡೆಯತ್ತ ಮುಖ ಮಾಡಿದರೆ ಜೋಕೆ’ ಎಂದು ಇಸ್ರೇಲಿಗೂ ಅಂಕುಶ ಹಾಕಬಹುದು.

ಒಟ್ಟಿನಲ್ಲಿ, ಈ ಏಳು ದಶಕಗಳಲ್ಲಿ ಇಸ್ರೇಲ್ ಒಂದು ರಾಷ್ಟ್ರವಾಗಿ ಅಸ್ತಿತ್ವ ಕಂಡುಕೊಂಡು ತುಸು ನೆಮ್ಮದಿಯಾಗಿದೆ. ಪ್ಯಾಲೆಸ್ಟೀನ್ ಒಂದೇ ನಿಲುವಿಗೆ ಕಟ್ಟುಬಿದ್ದು, ಅರಬ್ ಲೀಗ್ ಮಾತಿಗೆ ಕಿವಿಕೊಟ್ಟು ಅತಂತ್ರ ಸ್ಥಿತಿಯಲ್ಲಿ ನರಳುತ್ತಿದೆ. ತಮ್ಮ ಜೆರುಸಲೇಂ ಘೋಷಣೆಯಲ್ಲಿ ಮುಖ್ಯ ಎನಿಸುವ ಎರಡು ಮಾತನ್ನು ಟ್ರಂಪ್ ಆಡಿದ್ದಾರೆ. ‘Old challenges demand new approaches’ ಅರ್ಥಾತ್ ಎಷ್ಟು ದಿನ ಹಳೆಯ ಹಗ್ಗಕ್ಕೇ ಜೋತು ಬೀಳುವುದು? ‘Recognition of Jerusalem is nothing but recognition of Reality' ಅರ್ಥಾತ್ ವಾಸ್ತವವನ್ನು ಒಪ್ಪಿಕೊಳ್ಳಲೇಬೇಕು. ಅಂದು ಪ್ಯಾಲೆಸ್ಟೀನ್ ನಾಯಕ ಯಾಸಿರ್ ಅರಾಫತ್ ಸಭೆಗಳಲ್ಲಿ ಅವರ ಬೆಂಬಲಿಗರು ಘೋಷಣೆಯೊಂದನ್ನು ಕೂಗುತ್ತಿದ್ದರು ‘ಅರಬ್ಬರದ್ದು, ಅರಬ್ಬರದ್ದು, ಜೆರುಸಲೇಂ ಅರಬ್ಬರದ್ದು, ಅಖಂಡ ಭೂಮಿ ಅರಬ್ಬರದ್ದು’. ಬಹುಶಃ ಹೀಗೆ ಹೇಳುವ ಕಾಲ ಮುಗಿದಿದೆ. ಅದೇ ವಾಸ್ತವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT