ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದ ಹಿಂದಿರುವ ಕ್ರಿಕೆಟಿಗನ ಚಿತ್ರ

Last Updated 22 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಜಗತ್ತಿನ ಅತ್ಯುತ್ತಮ ಕ್ರಿಕೆಟ್ ಬರಹಗಾರ’ ಎಂಬ ಸ್ಥಾನಕ್ಕೆ ಆಕಾಂಕ್ಷಿಗಳು ಹಲವರಿದ್ದಾರೆ. ಆದರೆ ಇಂದು ಈ ಸ್ಥಾನ ಯಾರಿಗೆ ಸಲ್ಲಬೇಕು ಎಂಬ ಬಗ್ಗೆ ಯಾವ ವಿವಾದವೂ ಇಲ್ಲ. ಈ ಸ್ಥಾನ ನಿಜಕ್ಕೂ ಸಲ್ಲಬೇಕಾಗಿರುವುದು ಆಸ್ಟ್ರೇಲಿಯಾದ ಗೈಡನ್ ಹೇಗ್ ಅವರಿಗೆ. ಗೈಡನ್ ಸ್ವತಃ ಸ್ವಲ್ಪ ಭಿನ್ನ ರೀತಿಯ ಕ್ರಿಕೆಟಿಗ (ಅವರು ಆಟವಾಡುವ ಕ್ರಿಕೆಟ್ ಕ್ಲಬ್‌ ಹೆಸರು ‘ದ ವಿನ್ಸಿಬಲ್ಸ್’ ಅಂದರೆ ಯಾರಾದರೂ ಸೋಲಿಸಬಹುದಾದದ್ದು ಎಂದು ಅರ್ಥ. ಡಾನ್ ಬ್ರಾಡ್‍ಮನ್ ಅವರ ಎಲ್ಲರನ್ನೂ ಗೆದ್ದ ‘ಇನ್‍ವಿನ್ಸಿಬಲ್’ (ಅಜೇಯ) ತಂಡದಿಂದ ಸಂಪೂರ್ಣ ವ್ಯತಿರಿಕ್ತವಾದ ಹೆಸರು ಇದು.

ಆಟದ ತಾಂತ್ರಿಕ ಅಂಶಗಳು ಹೇಗೆಯೋ ಅದರ ಇತಿಹಾಸ ಮತ್ತು ರಾಜಕಾರಣದ ಅತ್ಯಂತ ಗಾಢವಾದ ಅರಿವನ್ನು ಗೈಡನ್‌  ಹೊಂದಿದ್ದಾರೆ. ಗೈಡನ್ ಅವರಿಗೆ ಕ್ರಿಕೆಟ್ ಜಗತ್ತು ಅತ್ಯಂತ ನಿಕಟವಾಗಿ ಗೊತ್ತಿರುವ ರೀತಿಯಲ್ಲಿಯೇ ಕ್ರಿಕೆಟ್‌ನ ಹೊರಜಗತ್ತೂ ಗೊತ್ತು. ವೈವಿಧ್ಯಮಯ ವಿಚಾರಗಳ ಬಗ್ಗೆ ಅವರು ಪುಸ್ತಕಗಳನ್ನು ಬರೆದಿದ್ದಾರೆ. ಮೆಲ್ಬರ್ನ್‌ನ ಅಪರಾಧ ಜಗತ್ತು, ಸಾಮಾಜಿಕ ಸಂಸ್ಥೆಯಾಗಿ ಕಚೇರಿ ಮುಂತಾದ ವಿಷಯಗಳ ಬಗ್ಗೆ ಅವರು ಬರೆದಿದ್ದಾರೆ. ಈ ವಿಶಾಲ ಜ್ಞಾನವನ್ನು ಕ್ರೀಡೆಯ ಬಗೆಗಿನ ಲೇಖನಗಳಿಗೆ ಅವರು ತರುತ್ತಾರೆ.

ಮಾಂತ್ರಿಕ ಸ್ಪಿನ್ನರ್ ಜಾಕ್ ಐವರ್‌ಸನ್ ಅವರ ಜೀವನಚರಿತ್ರೆ, 1950 ಮತ್ತು 1960ರ ದಶಕದ ಆಸ್ಟ್ರೇಲಿಯಾ ಕ್ರಿಕೆಟ್‌ನ  ಸಾಮಾಜಿಕ ಇತಿಹಾಸದ ನೆನಪುಗಳು ಮರುಕಳಿಸುವಂತೆ ಮಾಡುವ ‘ದ ಸಮ್ಮರ್ ಗೇಮ್’ ಪುಸ್ತಕಗಳು ನನಗೆ ಬಹಳ ಇಷ್ಟ. ಈ ಎರಡೂ ಪುಸ್ತಕಗಳು ಗಾತ್ರದಲ್ಲಿ ಬಹಳ ದೊಡ್ಡವು. ‘ಆನ್ ವಾರ್ನ್’ ಪುಟ್ಟದಾದರೂ ದೊಡ್ಡ ಒಳನೋಟಗಳನ್ನು ಹೊಂದಿರುವ ಕೃತಿ.

ವಾರ್ನ್ ಅವರ ಕೌಶಲ ಮತ್ತು ವ್ಯಕ್ತಿತ್ವವನ್ನು ಈ ಪುಸ್ತಕ ಪರಿಶೀಲನೆಗೆ ಒಳಪಡಿಸುತ್ತದೆ. ಒಮ್ಮೆ ದೆಹಲಿಯಿಂದ ಶಾಂಘೈಗೆ ಹೋಗುವ ವಿಮಾನ ಯಾನದಲ್ಲಿ ನಾನು ‘ಆನ್ ವಾರ್ನ್’ ಕೃತಿಯನ್ನು ಓದುವುದಕ್ಕಾಗಿ ಕೈಗೆತ್ತಿಕೊಂಡೆ. ಪುಸ್ತಕದ ನಾಲ್ಕರಲ್ಲಿ ಎರಡು ಅಧ್ಯಾಯಗಳನ್ನು ಓದಿದ ನಂತರ ಸಣ್ಣ ನಿದ್ದೆಗೆ ಜಾರಿದೆ.

ನಿದ್ದೆಯ ನಂತರ ಮತ್ತೆರಡು ಅಧ್ಯಾಯಗಳನ್ನು ಓದೋಣ ಎಂದು ಪುಸ್ತಕವನ್ನು ಖಾಲಿಯಿದ್ದ ಪಕ್ಕದ ಆಸನದಲ್ಲಿ ಇರಿಸಿದೆ. ಆದರೆ ಎದ್ದಾಗ ಪುಸ್ತಕವನ್ನು ಯಾರೋ ಲಪಟಾಯಿಸಿದ್ದರು. ವಿಮಾನದಲ್ಲಿದ್ದ ಭಾರತೀಯ ನಾನೊಬ್ಬ ಮಾತ್ರ ಮತ್ತು ಬಿಳಿಯರ ಸಂಖ್ಯೆ ಹೆಚ್ಚೇನೂ ಇರಲಿಲ್ಲ. ಕ್ರಿಕೆಟ್ ಮತ್ತು ಗೈಡನ್ ಅವರ ಅಭಿಮಾನಿಯಾಗಿರುವ ಚೀನೀಯನೇ ಪುಸ್ತಕದ ಚೋರ ಎಂಬುದು ಖಚಿತ.

ಗೈಡನ್ ಅವರ ತೀರಾ ಇತ್ತೀಚಿನ ಪುಸ್ತಕದ ಹೆಸರು ‘ಸ್ಟ್ರೋಕ್ ಆಫ್ ಜೀನಿಯಸ್’. 1905ರಲ್ಲಿ ಓವಲ್ ಮೈದಾನದಲ್ಲಿ ಎಸೆತವೊಂದನ್ನು ‘ಡ್ರೈವ್’ ಮಾಡಲು ವಿಕ್ಟರ್ ಟ್ರಂಪರ್ ನೆಗೆದದ್ದು ಜಿ.ಡಬ್ಲ್ಯು. ಬೆಲ್ಡ್‌ಹ್ಯಾಮ್ ಕ್ಯಾಮೆರಾದಲ್ಲಿ ಸೆರೆಯಾಯಿತು. ಇದು ಕ್ರಿಕೆಟ್‌ನ ಅತ್ಯಂತ ಪ್ರಸಿದ್ಧ ಚಿತ್ರ (ನಂತರ ಈ ಚಿತ್ರವನ್ನು ಲಕ್ಷಾಂತರ ಬಾರಿ ಮುದ್ರಿಸಲಾಗಿದೆ). ಈ ಚಿತ್ರದಿಂದಲೇ ಗೈಡನ್‌ ಪುಸ್ತಕ ಆರಂಭವಾಗುತ್ತದೆ. ‘ಆಟವನ್ನು ದೃಶ್ಯಾತ್ಮಕವಾಗಿಸಿದ ಮೊತ್ತ ಮೊದಲ ಕ್ರೀಡಾ ತಾರೆ ಟ್ರಂಪರ್; ಸರ್ ಡೊನಾಲ್ಡ್ ಬ್ರಾಡ್‍ಮನ್ ಅವರ ಅಂಕಿ ಅಂಶಗಳು ಹೇಗೆಯೋ ಟ್ರಂಪರ್ ಅವರ ಚಿತ್ರವೂ ಹಾಗೆಯೇ’ ಎಂದು ಗೈಡನ್ ಬರೆಯುತ್ತಾರೆ.

ಪುಸ್ತಕದ ಪ್ರಧಾನ ಪಾತ್ರಧಾರಿ ಟ್ರಂಪರ್; ಮುಂದಿನ ತಲೆಮಾರುಗಳಿಗಾಗಿ ಆ ಕ್ಷಣ ಶಾಶ್ವತವಾಗುವಂತೆ ಮಾಡಿದ ಛಾಯಾಗ್ರಾಹಕನ ವಿವರಗಳನ್ನೂ ಜೀವನ ಚರಿತ್ರೆಯ ರೂಪದಲ್ಲಿ ಹೇಳಲಾಗಿದೆ. ಅದಕ್ಕೆ ಅವರು ಅರ್ಹರೂ ಹೌದು. ಜಿ. ಡಬ್ಲ್ಯು. ಬೆಲ್ಡ್‌ಹ್ಯಾಮ್ ಸಮೃದ್ಧ ಮತ್ತು ತುಂಬು ಜೀವನ ನಡೆಸಿದರು. ಕಲಾತ್ಮಕ ಪದಗಳಲ್ಲಿ ಹೇಳುವುದಾದರೆ ಅವರು ಇಂತಹ ಛಾಯಾಗ್ರಹಣದ ನಿಜವಾದ ಮೂಲಪುರುಷ. ಈ ಕಥನದಲ್ಲಿ ಇನ್ನೂ ಇಬ್ಬರು ಮುಖ್ಯ ವ್ಯಕ್ತಿಗಳಿದ್ದಾರೆ.

ಒಬ್ಬರು ಟ್ರಂಪರ್ ಅವರ ಎದುರಾಳಿ ತಂಡದ ಆಟಗಾರ ಮತ್ತು ಬೆಲ್ಡ್‌ಹ್ಯಾಮ್‌ನ ಸಹಯೋಗಿ ಸಿ.ಬಿ. ಫ್ರೈ. ಅವರ ಕ್ರಿಕೆಟ್ ಜಾಣ್ಮೆ ಇಡೀ ಪುಸ್ತಕವನ್ನು ರಸವತ್ತಾಗಿಸಿದೆ. 1900ರಲ್ಲಿ ಕ್ರಿಕೆಟ್ ಛಾಯಾಗ್ರಹಣದ ಬೆಳವಣಿಗೆ ಬಗ್ಗೆ ಬರೆಯುತ್ತಾ ಫ್ರೈ ಅವರು ಮುಂದೊಂದು ದಿನ ಡಿಆರ್‍ಎಸ್ (ಅಂಪೈರ್‌ ನಿರ್ಧಾರ ಪುನರ್‌ಪರಿಶೀಲನಾ ವ್ಯವಸ್ಥೆ) ಬರುವ ಸೂಚನೆ ನೀಡಿದ್ದರು. ‘ಚಿತ್ರವನ್ನು ತಕ್ಷಣವೇ ನೀಡುವ ಮಟ್ಟಕ್ಕೆ ಯಂತ್ರವು ಪರಿಪೂರ್ಣಗೊಂಡರೆ ಅದು ಅಂಪೈರ್‌ನ  ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ’ ಎಂದು ಅವರು ಬರೆದಿದ್ದರು.

ಇಲ್ಲಿರುವ ಇನ್ನೊಬ್ಬ ವ್ಯಕ್ತಿ ಕ್ರಿಕೆಟ್ ಬರಹಗಾರ ನೆವಿಲ್ ಕಾರ್ಡಸ್, ತಮ್ಮ ಹದಿಹರೆಯದ ಹೀರೊ ಬಗ್ಗೆ ಅವರಲ್ಲಿದ್ದ ಶ್ಲಾಘನೆ ನೆವಿಲ್ ಅವರನ್ನೇ ಇತರರ ಹೀರೊವನ್ನಾಗಿ ಮಾಡಿತು. ಕಾರ್ಡಸ್ ತಮ್ಮ ಹೀರೊನ ಕೌಶಲವನ್ನು ವಾಗ್ನರ್‌ನ  ಸಂಗೀತ ಮತ್ತು ಟರ್ನರ್‌ನ ಕಲೆಗೆ ಹೋಲಿಸಿದರು. ‘ಭವ್ಯವಾದ ಸೂರ್ಯಾಸ್ತಗಳನ್ನು, ಮೋಡ ಮುಚ್ಚಿದ ಬೆಟ್ಟ ಶ್ರೇಣಿಗಳನ್ನು, ನಾದ, ಲಯಬದ್ಧ ಗೀತೆ ಮತ್ತು ಸಂಗೀತವನ್ನು ಅಥವಾ ಪೂರ್ಣ ಬಿರಿದ ಗುಲಾಬಿಯನ್ನು ನಾನು ಮರೆಯಬಲ್ಲೆ, ಆದರೆ ಟ್ರಂಪರ್ ಬ್ಯಾಟಿಂಗ್‌ನ ಸೊಗಸನ್ನು ಎಂದೂ ಮರೆಯಲಾಗದು’ ಎಂದು ನೆವಿಲ್ ಬರೆದಿದ್ದಾರೆ.

‘ಕ್ರಿಕೆಟ್‌ನ ಸುವರ್ಣ ಯುಗ’ದ ಅತ್ಯುತ್ಕೃಷ್ಟ ಪ್ರತಿನಿಧಿ ಎಂದು ಟ್ರಂಪರ್ ಅವರನ್ನು ಕಾರ್ಡಸ್ ಬಣ್ಣಿಸುತ್ತಾರೆ. ಕಾರ್ಡಸ್ ಪ್ರಕಾರ, ಸುಮಾರು 1890ರಿಂದ ಮೊದಲ ಜಾಗತಿಕ ಯುದ್ಧದ ಆರಂಭದ ದಿನಗಳವರೆಗಿನ ಅವಧಿ ಕ್ರಿಕೆಟ್‌ನ ಬಂಗಾರದ ಕಾಲ. ಈ ಯುಗದ ಆರಂಭ ಕಾಲದಲ್ಲಿ ಡಬ್ಲ್ಯು.ಜಿ. ಗ್ರೇಸ್ ಕೇಂದ್ರದಲ್ಲಿದ್ದರು. ಮುಂದಕ್ಕೆ ಸಾಗಿದಂತೆ ವಿಕ್ಟರ್ ಟ್ರಂಪರ್ ಮತ್ತು  ಕೆ.ಎಸ್. ರಂಜಿತ್‌ ಸಿಂಗ್‌ಜಿ ಅವರಂತಹ ಬ್ಯಾಟಿಂಗ್‌ ತಾರೆಯರು, ವಿಲ್ಫ್ರೆಡ್ ರೋಡ್ಸ್, ಹಗ್‌ ಟ್ರಂಬಲ್ ಮತ್ತು ಎಸ್.ಎಫ್. ಬಾರ್ನ್ಸ್‌ ಅವರಂತಹ ಬೌಲರ್‌ಗಳು ಈ ಪಟ್ಟಿಗೆ ಸೇರಿಕೊಂಡರು. ಆಗಲೂ ಹವ್ಯಾಸಿ ಸ್ಫೂರ್ತಿ ಆಟವನ್ನು ಆವರಿಸಿಕೊಂಡಿತ್ತು.

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡು ಪ್ರತಿಸ್ಪರ್ಧಿ ದೇಶಗಳಾಗಿದ್ದವು. ಮೊದಲ ಯುದ್ಧದಿಂದಾಗಿ ಈ ಸ್ವರ್ಣ ಯುಗ ಮರೆಯಾಯಿತು ಎಂದು ಕಾರ್ಡಸ್‌ ಹೇಳುತ್ತಾರೆ. ಆದರೆ ಅದಕ್ಕಿಂತ ಮೊದಲೇ ಜಾಕ್ ಹಾಬ್ಸ್ ಅವರ ಆರಂಭದ ದಿನಗಳು ಈ ಸ್ವರ್ಣ ಯುಗದಲ್ಲಿ ಸೇರಿಕೊಳ್ಳುತ್ತವೆ.

ಯುದ್ಧ ಕೊನೆಗೊಂಡ ನಂತರ ಬಹಳ ಕಾಲ ಟ್ರಂಪರ್ ಬದುಕಿರಲಿಲ್ಲ. ಅವರು 37ನೇ ವಯಸ್ಸಿಗೆ ನಿಧನರಾದರು. ಗೈಡನ್ ಹೇಳುವಂತೆ, ಟ್ರಂಪರ್, ‘ಆ ಯುಗಕ್ಕೆ ಕೊಟ್ಟ ಅತ್ಯುತ್ತಮ ವ್ಯಕ್ತಿರೂಪ. ಅವರ ಬ್ಯಾಟಿಂಗ್‌ನ ಗುಣಮಟ್ಟ ಮತ್ತು ವ್ಯಕ್ತಿತ್ವದ ಭವ್ಯತೆ ಇದಕ್ಕೆ ಒಂದು ಕಾರಣ. ಆ ಯುಗದ ನಾಜೂಕು ಮತ್ತು ಶಾಪಗ್ರಸ್ತ ಲಕ್ಷಣಕ್ಕೆ ಅವರ ಕಾಡುತ್ತಲೇ ಇದ್ದ ಅನಾರೋಗ್ಯ ಒಂದು ರೂಪಕ’.

‘ಜಗತ್ತಿನಲ್ಲಿ ಯಾವುದರಲ್ಲೇ ಆದರೂ ಅತ್ಯುತ್ತಮ ಎನಿಸಿಕೊಂಡ ಆ ಕಾಲದ ಮೊದಲ ಆಸ್ಟ್ರೇಲಿಯಾ ವ್ಯಕ್ತಿ ಟ್ರಂಪರ್’ ಎಂದು ಗೈಡನ್ ಬರೆದಿದ್ದಾರೆ. ಮುಂದಿನ ತಲೆಮಾರುಗಳಿಗೆ ಕೂಡ ಟ್ರಂಪರ್ ಹೆಸರು, ಖ್ಯಾತಿ ತಿಳಿಯಲು ಬೆಲ್ಡ್‌ಹ್ಯಾಮ್ ತೆಗೆದ ಚಿತ್ರ ನೆರವಾಯಿತು. ನಂತರದ ವರ್ಷಗಳಲ್ಲಿ ಈ ಚಿತ್ರದ ಅನುರಣನ ಹೇಗಿತ್ತು ಎಂಬುದನ್ನು ಅತ್ಯಂತ ನೈಪುಣ್ಯದಿಂದ ನಿಖರವಾಗಿ ಗೈಡನ್ ಕಟ್ಟಿಕೊಟ್ಟಿದ್ದಾರೆ: ‘ಚೆಂಡು ಎಲ್ಲಿಂದ ಬಂತೋ ಅಲ್ಲಿಗೇ ಹಿಂದಿರುಗಿಸುವ ಪರಿಪೂರ್ಣ ಸ್ಟ್ರೈಟ್ ಡ್ರೈವ್ ಹೇಗಿರಬೇಕೋ ಅದಕ್ಕೆ ತಕ್ಕಂತಿರುವ ಹೊಡೆತ ಟ್ರಂಪರ್ ವೈಶಿಷ್ಟ್ಯ; ಸ್ಟ್ರೈಟ್ ಡ್ರೈವ್ ಅಂದರೆ ಹೀಗೆಯೇ ಇರಬೇಕು, ಹಾಗಿದ್ದರೂ ಈ ರೀತಿಯ ಹೊಡೆತ ಟ್ರಂಪರ್‌ಗೆ ಮಾತ್ರ ಸಾಧ್ಯ.

ಚಿತ್ರದ ಚೌಕಟ್ಟಿನೊಳಗೆ ತಲೆ ಎತ್ತಿ ವೇಗದ ಚಲನೆಯ ಟ್ರಂಪರ್‌ ಅವರನ್ನು ಕಾಣಬಹುದು. ಕ್ರೀಸ್‌ನ ಸುರಕ್ಷತೆಯನ್ನು ಬಹಳ ಹಿಂದೆ ಬಿಟ್ಟು ಬಂದಿರುವ ಅವರ ಕಾಲುಗಳು ಅಪ್ರಯತ್ನಪೂರ್ವಕವಾಗಿಯೇ ನೆಲದಿಂದ ಮೇಲಕ್ಕೆದ್ದಿವೆ. ಚೆಂಡಿನತ್ತ ಇದು ಎರಡನೇ ನೆಗೆತ ಎಂಬುದನ್ನು ಅದು ಸೂಚಿಸುತ್ತದೆ. ಹಿಂಜರಿತ, ಅರೆಮನಸ್ಸುಗಳೇನೂ ಇಲ್ಲ– ತಮ್ಮ ಕೌಶಲದ ಮೂಲಕ ಎಲ್ಲದಕ್ಕೂ ಸವಾಲಾಗಿ ಟ್ರಂಪರ್‌ ನಿಂತಿದ್ದಾರೆ...’

1905ರಲ್ಲಿ ಕ್ಲಿಕ್ಕಿಸಲಾದ ಈ ‘ಜಂಪಿಂಗ್‌ ಔಟ್‌’ ಎಂಬ ಫೋಟೊ ಬೆಲ್ಡ್‌ಹ್ಯಾಮ್‌ ಅವರ ಫೋಟೊಗಳ ಪುಸ್ತಕದಲ್ಲಿಯೂ ಸೇರಿದೆ. ಆದರೆ 1927ರಲ್ಲಿ ಅದು ‘ಸಿಡ್ನಿ ಮೇಲ್‌’ ಪತ್ರಿಕೆಯಲ್ಲಿ ಮುದ್ರಣವಾಗುವ ತನಕ ಹೆಚ್ಚಿನ ಜನರಿಗೆ ಗೊತ್ತಿರಲಿಲ್ಲ. ಹೆಚ್ಚು ಹೆಚ್ಚು ಜನರ ಗಮನಕ್ಕೆ ಈ ಚಿತ್ರ ಬಂತು. ಕೊನೆಗೆ, ಆಸ್ಟ್ರೇಲಿಯಾದಲ್ಲಿ ಈ ಚಿತ್ರ ಇಲ್ಲದ ಕ್ರಿಕೆಟಿಗೆ ಸಂಬಂಧಿಸಿದ ಸ್ಥಳವೇ ಇಲ್ಲ ಎಂಬಷ್ಟು ಇದರ ಜನಪ್ರಿಯತೆ ವ್ಯಾಪಕವಾಯಿತು. ಜಗತ್ತಿನ ಅಸಂಖ್ಯ ಸ್ಟೇಡಿಯಂಗಳಲ್ಲಿ ಈ ಚಿತ್ರ ಸ್ಥಾನ ಪಡೆದುಕೊಂಡಿತು. ಡೆನಿಸ್‌ ಲಿಲಿ, ಸ್ಟೀವ್‌ ವಾ ಮತ್ತು ಸ್ವತಃ ಬ್ರಾಡ್‍ಮನ್ ಸೇರಿದಂತೆ ಅಪಾರ ಸಂಖ್ಯೆಯ ಜನರ ಮನೆಯಲ್ಲಿಯೂ ಈ ಚಿತ್ರ ವಿರಾಜಮಾನವಾಯಿತು.

ಟ್ರಂಪರ್‌ ಅಭಿಮಾನಿಗಳಲ್ಲಿ ಕೆ.ಎಸ್‌. ರಂಜಿತ್‌ ಸಿಂಗ್‌ಜಿ ಅವರೂ ಒಬ್ಬರು. ನ್ಯೂ ಸೌತ್‌ ವೇಲ್ಸ್‌ ಪರವಾಗಿ ಟ್ರಂಪರ್‌ ಅವರ ಬ್ಯಾಟಿಂಗನ್ನು ನೋಡಿದ ರಂಜಿತ್‌, ‘ಶೀಘ್ರದಲ್ಲಿಯೇ ಈ ವ್ಯಕ್ತಿ ಆ ದೇಶದ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗುತ್ತಾರೆ’ ಎಂದು ಭವಿಷ್ಯ ನುಡಿದಿದ್ದರು. ಆಗ ಟ್ರಂಪರ್‌ ಆಸ್ಟ್ರೇಲಿಯಾ ತಂಡಕ್ಕೂ ಆಯ್ಕೆ ಆಗಿರಲಿಲ್ಲ. ಕೆಲವು ವರ್ಷಗಳ ನಂತರ, ‘ತೆಳ್ಳನೆಯ, ಕ್ಷೀಣ ವ್ಯಕ್ತಿ ಟ್ರಂಪರ್‌ ತಮ್ಮ ನಾಜೂಕು ಆರೋಗ್ಯ ಸ್ಥಿತಿಯನ್ನೇ ಆಧ್ಯಾತ್ಮಿಕಗೊಳಿಸಿದರು’ ಎಂದು ಇಂಗ್ಲೆಂಡ್‌ನ ಕ್ರಿಕೆಟಿಗ ಎ.ಇ.ನೈಟ್‌ ಅವರು ಹೇಳುತ್ತಾರೆ (ನೈಟ್‌ ಮೆಥಡಿಸ್ಟ್‌ ಪಂಥದ ಬೋಧಕರೂ ಆಗಿದ್ದರು).

‘ಅಲ್ಲಿದ್ದ ಆಕರ್ಷಣೆ ಅವರ ಅತ್ಯಾಕರ್ಷಕ ಹೊಡೆತಗಳಾಗಲಿ, ಅದನ್ನು ಕಾರ್ಯರೂಪಕ್ಕೆ ತರುವ ಸರಳ ಮತ್ತು ಮುಕ್ತವಾದ ಶೈಲಿಯಾಗಲಿ ಅಲ್ಲ. ತಮ್ಮೊಳಗಿನ ಶಕ್ತಿಯಿಂದಲ್ಲ, ತಾವೇ ಶಕ್ತಿಯಾಗಿ ಅವರು ಆಡುತ್ತಿದ್ದ ಶೈಲಿಯೇ ಅತ್ಯಾಕರ್ಷಕ’, ‘ಚೆಂಡು ಕ್ರೀಡಾಂಗಣದ ಆವರಣ ಗೋಡೆಯನ್ನು ಬಡಿಯುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣದಲ್ಲಿ ಇದ್ದವರೆಲ್ಲರೂ ಎದ್ದು ನಿಲ್ಲುವ ದೃಶ್ಯ ವಿರಳ.  ನಿರೀಕ್ಷೆಯ ಕಾತರತೆಯಿಂದ ಮೂಕವಾಗಿರುವ ಜನರು ನಂತರ ಸಂಭ್ರಮದಿಂದ ಭೋರ್ಗರೆಯುವುದು ನಯನಮನೋಹರ’ ಎಂದು ನೈಟ್‌ ವಿವರಿಸಿದ್ದಾರೆ.

ಈ ಪುಸ್ತಕದಲ್ಲಿ ಸ್ಥಾನ ಪಡೆದಿರುವ ಇಬ್ಬರು ಭಾರತೀಯರಲ್ಲಿ ಒಬ್ಬರು ರಂಜಿತ್‌ ಮತ್ತು ಇನ್ನೊಬ್ಬರು ವಸಂತ್‌ ರಾಯ್‌ಜಿ. ವಸಂತ್‌ ಈಗ ಬದುಕಿರುವ ಅತ್ಯಂತ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ. ತಮ್ಮ ಆಟದ ದಿನಗಳು ಮುಗಿದ ನಂತರ  ಆಟ ಮತ್ತು ಅದರ ದಂತಕತೆಗಳ ಬಗ್ಗೆ ಬರೆಯುವುದಕ್ಕೆ ತಮ್ಮ ಸಮಯವನ್ನು ಅವರು ಮೀಸಲಿಟ್ಟಿದ್ದಾರೆ.

ನಾನು ಆರಂಭಿಕ ದಿನಗಳಲ್ಲಿ ಖರೀದಿಸಿದ ಕ್ರಿಕೆಟ್‌ ಸಂಬಂಧಿ ಪುಸ್ತಕಗಳಲ್ಲಿ ರಾಯ್‌ಜಿ ಅವರ ಕೃತಿಯೂ ಒಂದು. ರಾಯ್‌ಜಿ ಅವರು ಅತ್ಯಂತ ಪ್ರೀತಿಯಿಂದ ಸಂಕಲಿಸಿರುವ ರಂಜಿತ್‌ ಅವರ ಫೋಟೊಗಳಿರುವ ಆಲ್ಬಮ್‌ ಅದು. ಟ್ರಂಪರ್‌ ಅವರ ಬಗ್ಗೆ ಬಂದಿರುವ ಆರಂಭಿಕ ಪುಸ್ತಕಗಳಲ್ಲಿ ವಸಂತ್‌ ರಾಯ್‌ಜಿ ಬರೆದಿರುವ ಕೃತಿಯೂ ಸೇರಿದೆ ಎಂಬ ಉಲ್ಲೇಖ ‘ಸ್ಟ್ರೋಕ್‌ ಆಫ್ ಜೀನಿಯಸ್‌’ ಕೃತಿಯಲ್ಲಿ ಇದೆ.

‘ತಾವೆಂದೂ ನೋಡದ ದೇಶದ, ಎಂದೂ ನೋಡದ ವ್ಯಕ್ತಿಯಲ್ಲಿಯೂ ತಮ್ಮ ಬಗ್ಗೆ ಪುಸ್ತಕ ರಚನೆ ಮಾಡುವಂತೆ ಟ್ರಂಪರ್‌ ಸ್ಫೂರ್ತಿಯಾಗಿದ್ದರು’ ಎಂದು ಸ್ಟ್ರೋಕ್‌ ಆಫ್ ಜೀನಿಯಸ್‌ ಪುಸ್ತಕದಲ್ಲಿದೆ.

ಟ್ರಂಪರ್‌ ಬಗ್ಗೆ ದಂತಕತೆಗಳು ಹಲವು. ಜೀವನದಲ್ಲಿ ಮತ್ತು ಅದಕ್ಕೂ ಹೆಚ್ಚು ದಂತಕತೆಗಳ ಪ್ರಕಾರ, ಅವರ ಸರಳ ವ್ಯಕ್ತಿತ್ವದ ಸೌಂದರ್ಯ ಅವರ ಬ್ಯಾಟಿಂಗ್ ಕಲೆಗಾರಿಕೆಯ ಸೊಗಸನ್ನು ಹೆಚ್ಚಿಸಿದೆ.

‘ಸೂರ್ಯನ ಕಿರಣದ ಸೋಕುವಿಕೆಗೆ, ಹುಲ್ಲಿನ ಹಸಿರಿಗೆ, ಬಯಲಿನ ಜೀವನದ ಗಂಧ ಮತ್ತು ಸದ್ದುಗಳಿಗೆ ಸಂಭ್ರಮಪಡುವಂತಹ ವ್ಯಕ್ತಿ ಟ್ರಂಪರ್‌. ಬ್ಯಾಟಿಂಗ್‌ ಅತ್ಯಂತ ಲವಲವಿಕೆಯಿಂದ ಕೈಗೆತ್ತಿಕೊಳ್ಳಬೇಕಾದ ಒಂದು ವಿಚಾರ  ಎಂದು ಭಾವಿಸಿದ್ದ ಅವರು ಪ್ರತಿ ಇನಿಂಗ್ಸನ್ನೂ ಹೊಸತೊಂದು ಸಾಹಸವಾಗಿ ನೋಡುತ್ತಿದ್ದರು’ ಎಂದು ಸಮಕಾಲೀನರೊಬ್ಬರು ಬರೆದಿದ್ದರು.

ಆಸ್ಟ್ರೇಲಿಯಾದ ಕ್ರಿಕೆಟ್‌ ಕಥನದಲ್ಲಿ ಟ್ರಂಪರ್‌ ಅವರು ಡೊನಾಲ್ಡ್‌ ಬ್ರಾಡ್ಮನ್‌ ಅವರ ಮತ್ತೊಂದು ರೂಪ. ಗೈಡನ್‌ ಅವರು ಹೇಳುವಂತೆ, ‘ಟ್ರಂಪರ್‌ ಭಾವಗೀತೆಯಾದರೆ ಬ್ರಾಡ್‍ಮನ್ ಮಹಾಕಾವ್ಯ’.

1930ರಲ್ಲಿ ಹಲವು ದಾಖಲೆಗಳನ್ನು ಮುರಿದ ಬ್ರಾಡ್‍ಮನ್ ಅವರ ಇಂಗ್ಲೆಂಡ್‌ ಪ್ರವಾಸದ ನಂತರ ಆರ್ಥರ್‌ ಮೈಲಿ ಹೀಗೆ ಬರೆಯುತ್ತಾರೆ: ‘ದಾಖಲೆ ಮುರಿಯುವುದೇ ಈಗಿನ ಶೈಲಿಯಾಗಿದೆ. ಪಾನ್ಸ್‌ಫೋರ್ಡ್‌ ಅದನ್ನು ಆರಂಭಿಸಿದರೆ ಬ್ರಾಡ್‍ಮನ್ ಅದನ್ನು ಇನ್ನಷ್ಟು ಸೇಡಿನಿಂದ ಪೂರ್ಣಗೊಳಿಸುತ್ತಿದ್ದಾರೆ. ಟ್ರಂಪರ್‌ ಮಾಡಿದ ಕೆಲಸಗಳನ್ನು ಬ್ರಾಡ್‍ಮನ್ ಮಾಡಲಾಗದು, ಮತ್ತು ಬ್ರಾಡ್‍ಮನ್ ಈಗ ಮಾಡುತ್ತಿರುವಂತಹ ಕೆಲಸಗಳನ್ನು ಮಾಡಲು ಬಹುಶಃ ಟ್ರಂಪರ್‌ ಬಯಸಿರಲಾರರು’.

‘ಪದಗಳಲ್ಲಿ ಕಟ್ಟಿಕೊಡಲು ಅತ್ಯಂತ ಕಷ್ಟಕರವಾದ ಬ್ಯಾಟ್ಸ್‌ಮನ್‌ ಎಂದರೆ ಟ್ರಂಪರ್‌’ ಎಂದು ಸಿ.ಬಿ. ಫ್ರೈ ಒಮ್ಮೆ ಬರೆದಿದ್ದರು. ಈ ನಿಟ್ಟಿನಲ್ಲಿ ಗೈಡನ್‌ ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ. ಟ್ರಂಪರ್‌ ಅವರ ಬ್ಯಾಟಿಂಗ್‌ ಕಲೆಗಾರಿಕೆಯ ಅಂಶಗಳನ್ನು, ವ್ಯಕ್ತಿತ್ವದ ಸಾರವನ್ನು, ಅವರ ಜೀವನದ ಮಹತ್ವವನ್ನು, ಆಸ್ಟ್ರೇಲಿಯಾದ ಕ್ರಿಕೆಟಿಗೆ ಮತ್ತು ಸಾಮಾಜಿಕ ಇತಿಹಾಸಕ್ಕೆ ಅವರು ಬಿಟ್ಟುಹೋದ ಕೊಡುಗೆಯನ್ನು ಗೈಡನ್‌ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ (ಈ ಪುಸ್ತಕ ಇತರ ಅಂಶಗಳ ಜತೆಗೆ, ಕ್ರಿಕೆಟ್‌ ಚಿತ್ರಗಳು ಮತ್ತು ಕ್ರಿಕೆಟ್‌ ಛಾಯಾಗ್ರಹಣದ ಇತಿಹಾಸಕ್ಕೂ  ಮಹತ್ವದ ಕೊಡುಗೆಯಾಗಿದೆ).

ಬಹುಶಃ, ಕ್ರಿಕೆಟ್‌ ಬಗೆಗಿನ ಅತ್ಯುತ್ತಮ ಪುಸ್ತಕವಾಗಿ ಸಿ.ಎಲ್‌.ಆರ್‌. ಜೇಮ್ಸ್‌ ಅವರ ‘ಬಿಯಾಂಡ್‌ ಎ ಬೌಂಡರಿ’ ಉಳಿಯಲಿದೆ. ಈ ಬಗ್ಗೆ ಜಗತ್ತಿನಾದ್ಯಂತ ಇರುವ ಕ್ರಿಕೆಟ್‌ ಪ್ರೇಮಿಗಳಲ್ಲಿ ಸಹಮತವೂ ಇದೆ. ಎರಡನೇ ಅತ್ಯುತ್ತಮ ಪುಸ್ತಕದ ಸ್ಥಾನಕ್ಕೆ ಗೈಡನ್‌ ಅವರ ‘ಸ್ಟ್ರೋಕ್‌ ಆಫ್‌ ಜೀನಿಯಸ್‌’ ಸ್ಪರ್ಧೆಯಲ್ಲಿದೆ.

ಸೃಜನಶೀಲತೆ, ನಾವೀನ್ಯ, ವ್ಯಕ್ತಿ ಮತ್ತು ಆತನ ವ್ಯಕ್ತಿತ್ವ, ಆಟ ಮತ್ತು ಅದರ ತಂತ್ರಗಳ ಚಿತ್ರವತ್ತಾದ ನಿರೂಪಣೆ, ಸಂಕ್ರಮಣ ಘಟ್ಟದಲ್ಲಿದ್ದ ದೇಶವೊಂದರ ತುಮುಲವನ್ನು ಕಟ್ಟಿಕೊಟ್ಟ ರೀತಿಯಿಂದಾಗಿ ಅವರದೇ ಸಮೃದ್ಧ ಮತ್ತು ವೈವಿಧ್ಯಮಯ ಪುಸ್ತಕಗಳ ನಡುವೆಯೂ ಇದು ಪ್ರತ್ಯೇಕವಾದ ಸ್ಥಾನ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT