ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳಗಂಟಿ ವ್ಯವಸ್ಥೆ ಮತ್ತು ಖುಷಿಯ ಶೋಧ

Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

ಜಗಳಗಂಟಿಗಳಾಗತೊಡಗಿದ್ದೇವೆ ನಾವು. ಮನುಷ್ಯ ಮನುಷ್ಯರ ನಡುವೆ ಸಹಜವಾಗಿ ನಡೆಯುವ ಕಿತ್ತಾಟಗಳ ಬಗ್ಗೆ ಹೇಳುತ್ತಿಲ್ಲ ನಾನು.

ಮನುಷ್ಯರು ಕಿತ್ತಾಡಿಕೊಳ್ಳದ ಹಾಗೆ, ದಬ್ಬಾಳಿಕೆ ನಡೆಸದ ಹಾಗೆ, ಸಹಕಾರ ಮನೋಭಾವದಿಂದ ವರ್ತಿಸುವ ಹಾಗೆ ನೋಡಿಕೊಳ್ಳಲೆಂದೇ ಕಟ್ಟಲಾಗಿರುವ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಸಂಸ್ಥೆಗಳು ಜಗಳಗಂಟಿಗಳಾಗತೊಡಗಿವೆ. ಜನರನ್ನು ಪ್ರಚೋದಿಸುವುದು ಪರಸ್ಪರರ ವಿರುದ್ಧ ಎತ್ತಿ ಕಟ್ಟುವುದು ಯುದ್ಧಗಳಿಗೆಳೆಸುವುದು ಮಾಡುತ್ತಿವೆ ಇವು.

ಇದು ಹಿಂದೆಯೂ ಇತ್ತು. ಪುರಾಣ ಕಾಲದಿಂದಲೂ ಈ ಸಂಕಟವಿತ್ತು. ಹಾಗೆಂದೇ ಚೀನಾದ ಮಹಾನ್ ದಾರ್ಶನಿಕ ಲಾವೋತ್ಸೆ ವ್ಯವಸ್ಥೆಗಳನ್ನೇ ಆನುಮಾನದಿಂದ ನೋಡಿದ. ವ್ಯವಸ್ಥೆಗಳನ್ನು ದೊಡ್ಡದಾಗಿ ಬೆಳೆಸಿದಷ್ಟೂ, ಅವುಗಳ ಒಡಲೊಳಗಿಂದಲೇ, ಅವ್ಯವಸ್ಥೆಗಳೂ ಸಹ ಅಷ್ಟೇ ದೊಡ್ಡದಾಗಿ ಬೆಳೆಯುತ್ತ ಹೋಗುತ್ತವೆ  ಎಂಬ ಎಚ್ಚರಿಕೆಯ ಮಾತುಗಳನ್ನಾಡಿದ್ದ ಲಾವೋತ್ಸೆ. ಬೃಹತ್ತಾದ ವ್ಯವಸ್ಥೆಗಳನ್ನು ನಿರ್ಮಾಣ ಮಾಡಿರುವ ಇಂದಿನ ಆಧುನಿಕೋತ್ತರ ಯುಗವು ಅಷ್ಟೇ ಬೃಹತ್ತಾದ ಅವ್ಯವಸ್ಥೆಗಳನ್ನೂ ತಲೆಯ ಮೇಲೆ ಎಳೆದುಕೊಂಡಿದೆ.

ಪ್ರತಿಯೊಂದು ಜಾತಿ, ಧರ್ಮ, ಪಕ್ಷ, ತತ್ವ ಎಲ್ಲವೂ ಪ್ರತ್ಯೇಕವಾಗಿ, ಪ್ರತ್ಯೇಕತಾವಾದಿಯಾಗಿ ಯೋಚಿಸತೊಡಗಿವೆ. ತಾನಾಯಿತು ತನ್ನ ಹಕ್ಕುಗಳಾಯಿತು, ಹೆಚ್ಚೆಂದರೆ ತನ್ನದೇ ಜಾತಿ ಧರ್ಮ ಪಂಗಡ ಅಥವಾ ದೇಶಗಳ ಹಕ್ಕುಗಳಾಯಿತು ಎಂಬ ಸಂಕುಚಿತ ಮನೋಭಾವದಿಂದ ಯೋಚಿಸುವುದು ಇಂದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ವಿಶ್ವ ಮಾರುಕಟ್ಟೆಯ ಆರಾಧಕನೂ, ವಿಶ್ವ ಪರ್ಯಟಕನೂ ಆಗಿರುವ ಆಧುನಿಕ ಮಾನವನು ವಿಶ್ವಮಾನವನಾಗುವ ಬದಲಿಗೆ ಕಾಡುಮನುಷ್ಯನಿಗಿಂತಲೂ ಸಂಕುಚಿತವಾದ ಮನೋಭಾವದಿಂದ ಯೋಚಿಸಲಾರಂಭಿಸಿದ್ದಾನೆ.

ಬೃಹತ್ ವ್ಯವಸ್ಥೆಗಳು ಸೃಷ್ಟಿಸುತ್ತಿರುವ ಅಪಾಯಗಳ ಬಗ್ಗೆ ಮಾನವನಿಗೆ ನಿಧಾನವಾಗಿಯಾದರೂ ಸರಿ, ಅರಿವಾಗತೊಡಗಿದೆ. ಸರಳ ಬದುಕಿಗೆ ಹಿಂದಿರುಗದೆ ಬೇರೆ ದಾರಿಯಿಲ್ಲ ಎಂದವನು ಯೋಚಿಸತೊಡಗಿದ್ದಾನೆ. ಇತ್ತೀಚಿನ ಒಂದೆರಡು ಸಣ್ಣ ಪುಟ್ಟ ಬೆಳವಣಿಗೆಗಳು ನನ್ನ ನಂಬಿಕೆ ಮತ್ತೆ ಚಿಗುರೊಡೆಯುವಂತೆ ಮಾಡಿವೆ. ಈ ಬೆಳವಣಿಗೆಗಳ ನೇತೃತ್ವವನ್ನು ಯುವಕರೇ ವಹಿಸಿಕೊಂಡಿದ್ದರು ಎಂಬುದು ಮತ್ತಷ್ಟು ಮಹತ್ವದ ಸಂಗತಿಯಾಗಿದೆ. ಈ ಬಾರಿ ಇವುಗಳ ಬಗ್ಗೆಯೇ ಬರೆಯುವುದೆಂದು ನಿರ್ಧರಿಸಿದ್ದೇನೆ.

ಮೊದಲನೆಯ ಬೆಳವಣಿಗೆ ಬೆಂಗಳೂರು ನಗರದಲ್ಲಾದದ್ದು. ಐ.ಟಿ., ಬಿ.ಟಿ.ಗಳಲ್ಲಿ ಕೆಲಸ ಮಾಡುತ್ತಿರುವ ಒಂದಿಷ್ಟು ಯುವಕರು ಈಗೊಂದು ವರ್ಷದಿಂದ ಗ್ರಾಮ ಸೇವಾ ಸಂಘ ಎಂಬ ಸಂಘಟನೆಯೊಂದನ್ನು ಕಟ್ಟಿಕೊಂಡು ಸಕ್ರಿಯರಾಗಿದ್ದಾರೆ. ಇವರಾರೂ ಈ ಕೆಲಸಕ್ಕಾಗಿ ತಮ್ಮ ಉದ್ಯೋಗಗಳನ್ನು ಬಿಟ್ಟಿಲ್ಲ, ಅಥವಾ ಅತಿದೊಡ್ಡ ತ್ಯಾಗಗಳಿಗೂ ಕೈಹಚ್ಚಿಲ್ಲ.

ತಮ್ಮ ಮಿತಿಯೊಳಗೇ, ಗ್ರಾಮಗಳೊಟ್ಟಿಗೆ ಶ್ರಮಜೀವಿಗಳೊಟ್ಟಿಗೆ ಹಾಗೂ ಪ್ರಕೃತಿಯೊಟ್ಟಿಗೆ ಸಂಬಂಧವನ್ನು ಪುನರ್‌ ಸ್ಥಾಪಿಸುವ ಪ್ರಯತ್ನ ನಡೆಸಿದ್ದಾರೆ. ತಮ್ಮದೇ ಒಂದಿಷ್ಟು ಹಣವನ್ನು ಖರ್ಚು ಮಾಡಿಕೊಂಡು, ವಾರಾಂತ್ಯದ ಬಿಡುವಿನ ವೇಳೆಯಲ್ಲಿ ಈ ಕೆಲಸ ಮಾಡುತ್ತಿದ್ದಾರೆ ಅವರು. ಸರಳವಾಗಿ ಬದುಕತೊಡಗಿದ್ದಾರೆ, ಶ್ರಮದಾನ ಮಾಡುತ್ತಾರೆ, ಪಾದಯಾತ್ರೆ ಮಾಡುತ್ತಾರೆ.

ವಾಹನಗಳನ್ನು ಬಳಸುವುದು ಅನಿವಾರ್ಯವಾದಲ್ಲಿ ಸಾರ್ವಜನಿಕ ವಾಹನ ಬಳಸಿಕೊಂಡು ಕರ್ನಾಟಕದ ವಿವಿಧ ಭಾಗಗಳಿಗೆ ಹೋಗಿ ಅಲ್ಲಿ ನಡೆಯುತ್ತಿರುವ ಗ್ರಾಮೀಣ ಅಭಿವೃದ್ಧಿಯ ಕೆಲಸಗಳನ್ನು ಸಂದರ್ಶಿಸುತ್ತಾರೆ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಆ ಕೆಲಸಗಳಲ್ಲಿ ತಾವೂ ಕೈ ಜೋಡಿಸುತ್ತಾರೆ.

ಈ ಯುವಕರ ಪರಿಚಯ ನನಗಾದದ್ದು ಬದನವಾಳು ಸತ್ಯಾಗ್ರಹದ ಸಂದರ್ಭದಲ್ಲಿ. ಆನಂತರ ಚರಕದ ಕೆಲಸಗಳಲ್ಲಿ ಭಾಗವಹಿಸಲೆಂದು ಇವರು ಹೆಗ್ಗೋಡಿನ ಶ್ರಮಜೀವಿ ಆಶ್ರಮಕ್ಕೆ ಬಂದಾಗ ಪರಿಚಯವು ಗಾಢವಾಯಿತು. ಸರಳ ಬದುಕಿಗಾಗಿ ಯುವಜನರ ಪ್ರಚಾರಾಂದೋಲನವಿದು ಎಂದು ಗ್ರಾಮ ಸೇವಾ ಸಂಘವನ್ನು ಕರೆದಿದ್ದಾರೆ ಇವರು.

ಶ್ರಮದ ಬದುಕು, ಸರಳತೆ ಹಾಗೂ ಸಮಾನತೆಗಳು ಸಂಘದ ಮೂರು ಮೂಲ ಆಶಯಗಳಾಗಿವೆ. ಮನುಕುಲವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ, ಅದು ಹವಾಮಾನ ವೈಪರೀತ್ಯವಿರಲಿ, ಆರ್ಥಿಕ ಕುಸಿತವಿರಲಿ, ನೈತಿಕ ಕುಸಿತವಿರಲಿ, ಮನೋರೋಗವಿರಲಿ ಅಥವಾ ಹೆಚ್ಚುತ್ತಿರುವ ಶೋಷಿತ ವರ್ಗಗಳ ದುಃಸ್ಥಿತಿಯಿರಲಿ, ಶ್ರಮದಿಂದ ಕೂಡಿದ ಸರಳ ಬದುಕು ಪರಿಹಾರೋಪಾಯವೆಂದು ಇವರು ನಂಬುತ್ತಾರೆ. ಹಾಗೆಂದು ಇವರು, ಬಡವರಿಗೆ ಸರಳ ಬದುಕನ್ನು ಬೋಧಿಸುವ ಮೂರ್ಖತನ ಮಾಡುತ್ತಿಲ್ಲ. ಸರಳ ಬದುಕಿನ ಮಾದರಿ ತಾವೇ ಆಗಬೇಕೆಂಬ ಅರಿವಿದೆ, ಉಳ್ಳವರಾದ ಈ ಯುವಕ ಯುವತಿಯರಿಗೆ.

ಉಳ್ಳವರು ಸರಳ ಬದುಕನ್ನು ಸ್ವೀಕರಿಸಬೇಕು, ಹಾಗೆ ಸ್ವೀಕರಿಸಿದ ನಂತರ ಬಡವರೊಟ್ಟಿಗೆ ಕೈಜೋಡಿಸಿ ಸರಳ ಉತ್ಪಾದಕ ಚಟುವಟಿಕೆಗಳನ್ನು ರೂಪಿಸಬೇಕು ಎಂಬುದು ಸಂಘದ ಉದ್ದೇಶವಾಗಿದೆ. ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಇವರು ಮೂರು ದಿನಗಳ ಕಾರ್ಯಾಗಾರ ಹಾಗೂ ಅಧ್ಯಯನ ಶಿಬಿರವೊಂದನ್ನು ಆಯೋಜಿಸಿದ್ದರು.

ಕರ್ನಾಟಕದ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚಿನ ಯುವಕ ಯುವತಿಯರು ಶಿಬಿರಕ್ಕೆ ಬಂದಿದ್ದರು. ಶಿಬಿರದಲ್ಲಿ ಸಂಘದ ಮೂಲ ಆದರ್ಶವನ್ನು ಚರ್ಚಿಸುವುದರೊಟ್ಟಿಗೆ, ಇವರು ಮತ್ತೊಂದು ಮಹತ್ವದ ಕೆಲಸವನ್ನು ಅಲ್ಲಿ ಕೈಗೊಂಡರು. ವ್ಯವಸ್ಥೆಯ ಜಗಳಗಂಟಿತನವನ್ನು ನಿವಾರಿಸಬಲ್ಲ ಕೆಲಸವದು.

ಶಿಬಿರಕ್ಕೆ ವಿಷಯ ತಜ್ಞರನ್ನು ಕರೆಸಿ, ಗಾಂಧೀಜಿ, ಅಂಬೇಡ್ಕರ್, ಜ್ಯೋತಿಬಾ ಫುಲೆ, ವಿವೇಕಾನಂದ, ಕಾರ್ಲ್ ಮಾರ್ಕ್ಸ್ ಇತ್ಯಾದಿ ಮಹನೀಯರ ಮೂಲ ಆಶಯಗಳೇನು ಹಾಗೂ ಅವುಗಳಲ್ಲಿರುವ ಸಮಾನ ಅಂಶಗಳೇನು ಎಂದು ಅರಿಯುವ ಪ್ರಯತ್ನ ನಡೆಸಿದರು ಯುವಕರು. ಈ ಮಹನೀಯರ ಆಶಯಗಳು ಸೈದ್ಧಾಂತಿಕ ಜಗಳಗಳಿಗೆ ಕಾರಣವಾಗಿರುವ ಇಂದಿನ ಸಂದರ್ಭದಲ್ಲಿ ಇವರು ಒಟ್ಟುಗೂಡಿಸುವ ಪ್ರಯತ್ನ ನಡೆಸಿದ್ದರು.

ಶಿಬಿರದ ಗೋಷ್ಠಿಗಳು ಉದ್ದುದ್ದ ಭಾಷಣಗಳಾಗಿರದೆ ಪ್ರಶ್ನೋತ್ತರಗಳ ಮೂಲಕ ನಡೆದವು. ಯುವಕರು ಪ್ರಶ್ನೆಗಳನ್ನೆತ್ತುತ್ತಿದ್ದ ರೀತಿ ಹಾಗೂ ತಜ್ಞರು ನೀಡುತ್ತಿದ್ದ ಉತ್ತರವನ್ನು ಗ್ರಹಿಸುತ್ತಿದ್ದ ರೀತಿ ತುಂಬ ಮೇಲ್ಮಟ್ಟದ್ದಾಗಿತ್ತು. ಪರಿಸರದ ಬಗ್ಗೆ, ಕೃಷಿ ಅರಣ್ಯ ನೀರು ಗಾಳಿ ವಾತಾವರಣಗಳ ಬಗ್ಗೆ, ಪ್ರದೂಶಣದ ಬಗ್ಗೆ ಚರ್ಚೆಗಳು ನಡೆದವು.

ಮೊದಲ ಹಂತದಲ್ಲಿ ಸಾಂಸ್ಕೃತಿಕ ಪ್ರಚಾರಾಂದೋಲನ ಒಂದಕ್ಕೆ ಒತ್ತುಕೊಡಲು ಅಲ್ಲಿ ನಿರ್ಧರಿಸಲಾಯಿತು. ಹಾಡುಗಳು, ನಾಟಕಗಳು, ಶ್ರಮದಾನ ಮತ್ತು ಪಾದಯಾತ್ರೆಗಳ ಮೂಲಕ ಪ್ರಚಾರಾಂದೋಲನ ನಡೆಸುವುದು, ವಿವಿಧ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳೊಟ್ಟಿಗೆ ಕೈಜೋಡಿಸಿ ಶಾಲಾಕಾಲೇಜುಗಳನ್ನು ತಲುಪುವುದು, ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಯುವಕರನ್ನು ತಲುಪುವುದು ಇವರ ಉದ್ದೇಶ.

ಮಾತ್ರವಲ್ಲ, ಸಾಧ್ಯವಿದ್ದಷ್ಟೂ ಕಡಿಮೆ ಖರ್ಚಿನಲ್ಲಿ ಉದ್ದೇಶ ಸಾಧಿಸುವುದು, ಜನರಿಂದಲೇ ದೇಣಿಗೆ ಸ್ವೀಕರಿಸಿ ಚಳವಳಿಯನ್ನು ಮುಂದೊತ್ತುವುದು ಇವರ ನಿಲುವು. ನಾನು ಈ ಯುವಕರಿಗಾಗಿ ಗಾಂಧಿ ಅವರ ‘ಹಿಂದ್ ಸ್ವರಾಜ್’ ಕೃತಿಯಿಂದ ಪ್ರೇರಿತವಾದ ನಾಟಕವೊಂದನ್ನು ಬರೆದುಕೊಡಲಿಕ್ಕೆ ಒಪ್ಪಿಕೊಂಡೆ. ಅಲ್ಲಿಗೆ ಬಂದಿದ್ದ ಹಲವಾರು ಹಿರಿಯರು, ನನ್ನಂತೆಯೇ, ಅವರಿಗೆ ಮುಂದೆಯೂ ಮಾರ್ಗದರ್ಶನ ಮಾಡಲು ಒಪ್ಪಿಕೊಂಡರು.

ನಾನು ನಿರೂಪಿಸಲಿರುವ ಮತ್ತೊಂದು ಬೆಳವಣಿಗೆ ನೇರವಾಗಿ ರಂಗಭೂಮಿಗೆ ಸಂಬಂಧಿಸಿದ್ದು. ಎಮ್. ಗಣೇಶ್ ಎಂಬ ಪ್ರತಿಭಾವಂತ ರಂಗನಿರ್ದೇಶಕರು, ಜನಮನದಾಟ ಎಂಬ ಯುವಕರ ರಂಗತಂಡಕ್ಕೆ, ಪ್ರವಾದಿ ಮುಹಮ್ಮದರ ತತ್ವಗಳು, ಆದರ್ಶಗಳು ಹಾಗೂ ಜೀವನಚರಿತ್ರೆಯನ್ನು ಆಧರಿಸಿದ, ‘ಓದಿರಿ’ ಎಂಬ ನಾಟಕವನ್ನು ನಿರ್ದೇಶಿಸಿದ್ದಾರೆ.

ಈ ನಾಟಕದ ರಂಗ ಪ್ರದರ್ಶನಗಳು ಕರ್ನಾಟಕದಾದ್ಯಂತ ಹಾಲಿ ನಡೆಯುತ್ತಿವೆ. ಜನಮನದಾಟದ ಪ್ರಯೋಗದ ವಿಶೇಷತೆಯೆಂದರೆ, ನಿರ್ದೇಶಕ ಗಣೇಶ್ ಹಾಗೂ ಜನಮನದಾಟ ತಂಡದ ಎಲ್ಲ ನಟರೂ ಹಿಂದೂಗಳು. ಮಾತ್ರವಲ್ಲ, ಕೆಳಜಾತಿ ಕೆಳವರ್ಗಗಳಿಂದ ಬಂದಿರುವ ಹಿಂದೂಗಳು. ತಮಗೆ ತಿಳಿಯದ ಅಲ್ಲಾನ ಧಾರ್ಮಿಕತೆಯೇನು ಎಂದು ಅರಿಯುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಈ ವಿದ್ಯಾವಂತ ಯುವಕರು.

ಗ್ರಾಮ ಸೇವಾ ಸಂಘದಂತೆಯೇ ‘ಓದಿರಿ’ ರಂಗ ಪ್ರಯೋಗದ ಮಹತ್ವ ಕೂಡ ಸರಳತೆ, ಸೀಮಿತ ಸಂಪನ್ಮೂಲಗಳ ಬಳಕೆ ಹಾಗೂ ಜೀವಂತಿಕೆಯಲ್ಲಡಗಿದೆ. ಸರಳತೆ ಹಾಗೂ ಸಂಪನ್ಮೂಲಗಳ ಸೀಮಿತ ಬಳಕೆಯೆಂಬುದು ಇವರಿಗೆ ಕೇವಲ ಪರಿಸ್ಥಿತಿಯ ಅನಿವಾರ್ಯತೆಯಾಗಿಲ್ಲ. ಅದೊಂದು ಒಪ್ಪಿತ ಮೌಲ್ಯವಾಗಿದೆ. ‘ಓದಿರಿ’ ಎಂಬ ಹೆಸರಿನ ಈ ಕಲಾಕೃತಿಯ ಸೌಂದರ್ಯವನ್ನು ರೂಪಿಸಿರುವ ಮಹತ್ವದ ಸಂಗತಿಯಾಗಿದೆ ಅದರ ಸರಳತೆ. ಅದ್ಧೂರಿ ಪ್ರದರ್ಶನಗಳು ನಾಚುವಂತೆ ಮಾಡುತ್ತಿವೆ, ಗ್ರಾಮ ಸೇವಾ ಸಂಘ ಹಾಗೂ ಜನಮನದಾಟ.

‘ಓದಿರಿ’, ಬೊಳುವಾರು ಮಹಮ್ಮದ್  ಕುಂಞಿ ಕನ್ನಡ ಕಾದಂಬರಿ. ಬೊಳುವಾರರು  ಒಬ್ಬ ಮುಸಲ್ಮಾನನೂ ಹೌದು ಒಬ್ಬ ವಿಚಾರವಂತನೂ ಹೌದು. ವೈಚಾರಿಕತೆ ಹಾಗೂ ಧಾರ್ಮಿಕ ನಂಬಿಕೆ ಎಣ್ಣೆ ಸೀಗೆಕಾಯಿಗಳಾಗಬೇಕಿಲ್ಲ ಎಂದು ನಂಬುತ್ತಾರೆ ಬೊಳುವಾರರು. ಒಂದು ಮಹಾನ್ ಮನುಷ್ಯ ಪ್ರಯತ್ನದ ದಾಖಲೆಯಾಗಿ ಬರೆದಿದ್ದಾರೆ ಅವರು ‘ಓದಿರಿ’ ಕಾದಂಬರಿಯನ್ನು.

ಮೂರನೆಯ ಉದಾಹರಣೆ ನನ್ನದೇ ಹೌದು. ಕೊಂಚ ವ್ಯತಿರಿಕ್ತ ಉದಾಹರಣೆ ಎನ್ನಬಹುದು ಬೇಕಿದ್ದರೆ. ನಾನಾಗ ಯುವಕ. ಅದು ಬಂಡಾಯಗಳ ಯುಗ. ಎಲ್ಲವನ್ನೂ ಪ್ರಶ್ನಿಸುವ, ಎಲ್ಲವನ್ನೂ ಅನುಮಾನಿಸುವ, ಕೊಂಚ ಹೆಚ್ಚಾಗಿಯೇ ಹಾಗೆ ಮಾಡುವ ಯುಗವದು. ನಾನಿದ್ದ ಬಡಾವಣೆಯಲ್ಲೊಂದು ಕಾನ್ವೆಂಟ್ ಇತ್ತು. ಆ ಕಾನ್ವೆಂಟಿನಲ್ಲಿ ಮಕ್ಕಳಿಗೆ ಮೇಡಂಗಳು ಒಂದು ಪದ್ಯ ಕಲಿಸುತ್ತಿದ್ದದ್ದನ್ನು ಕೇಳಿದ್ದೆ. ಪದ್ಯ ಹೀಗಿತ್ತು, ದೇವರು ನಮಗೆ ತಂದೆಯು ಎರಡು ವರಗಳ್ ಕೊಟ್ಟಿದ್ದಾನೆ ಆ ಎರಡು ವರಗಳ್ ಯಾವ್ದಂದ್ರೆ, ಪುಟ್ಟ ಕೈಗಳು.... ಇತ್ಯಾದಿ.

ಕಯ್ಯಿ ಕಾಲು ಕಣ್ಣು ನಾಲಗೆಗಳನ್ನು ದೇವರ ವರವಾಗಿ ಕಾಣುವಂತೆ ಮಾನವರಿಗೆ ಬುದ್ಧಿ ಹೇಳುವ ಹಾಡಾಗಿತ್ತು ಅದು. ನಾನು ಆ ಪದ್ಯವನ್ನು ಗೇಲಿ ಮಾಡಿದ್ದೆ.
ಅದು ತುಂಬ ಒಳ್ಳೆಯ ಪದ್ಯವೇನಾಗಿರಲಿಲ್ಲ. ಕನ್ನಡವನ್ನು ಅವಸರದಲ್ಲಿ ಕಲಿತ ಪಾದ್ರಿಯೊಬ್ಬ ಇಂಗ್ಲಿಷ್‌ನ ‘ಹೈಮ್’ ಒಂದನ್ನು ಅವಸರದಲ್ಲಿಯೇ ಅನುವಾದಿಸಿದ್ದ ಹಾಡಾಗಿತ್ತು ಅದು.

ನ್ನ ಗೇಲಿಗೆ ಹಲವು ಕಾರಣಗಳಿದ್ದವು. ಕಾನ್ವೆಂಟಿನವರಿಗೆ  ಕನ್ನಡ ಬರುವುದಿಲ್ಲ ಎಂಬ ನಿಲುವು, ಕ್ರಿಸ್ತನ ಭಕ್ತಿಗೀತೆ ಹಾಡಿಸಿ ನಮ್ಮಗಳನ್ನು ಕ್ರೈಸ್ತರನ್ನಾಗಿಸಿಬಿಡುತ್ತಾರೆ ಎಂಬ ಅನುಮಾನ, ಎಲ್ಲಕ್ಕಿಂತ ಮಿಗಿಲಾಗಿ, ಕಯ್ಯಿಕಾಲುಗಳನ್ನು ಕಡೆಗಣಿಸುವ ಅಂದಿನ ಫ್ಯಾಷನ್ ಕಾರಣವಾಗಿತ್ತು ನನ್ನ ಈ ಗೇಲಿಗೆ.

ಅಂದು ನಾನು ಹಾಡಿನ ಮೂಲ ಆಶಯವನ್ನು ಮೆಚ್ಚುವಲ್ಲಿ ವಿಫಲನಾಗಿದ್ದೆ. ಮಾಸ್ತರಿಣಿಯೂ ಸಹಿತ ತಾನೇನು ಕಲಿಸುತ್ತಿದ್ದೇನೆ ಎಂಬ ಅರಿವಿಲ್ಲದೆ ಮಕ್ಕಳಿಗೆ ಮಹಾನ್ ಸಂದೇಶವೊಂದನ್ನು ರವಾನಿಸುತ್ತಿದ್ದಳು. ಆಕೆಯೂ ಶ್ರಮವನ್ನು ತ್ಯಜಿಸಿದ್ದಳು, ನಾನೂ ಶ್ರಮವನ್ನು ತ್ಯಜಿಸಿದ್ದೆ. ಆಕೆ ನೀಡುತ್ತಿದ್ದ ಹಾಗೂ ನಾವೆಲ್ಲರೂ ಸಡಗರಿಸುತ್ತಿರುವ, ಶಿಕ್ಷಣ ಪದ್ಧತಿ ಕೂಡ ಶ್ರಮವನ್ನು ತ್ಯಜಿಸಿತ್ತು.

ಈ ಲೇಖನದಲ್ಲಿ ನಾನು ಉದಾಹರಿಸಿರುವ ಭಾರತೀಯ ಯುವಕರ ಪ್ರಯತ್ನಗಳು ಗೆಲ್ಲಬಹುದು ಗೆಲ್ಲದಿರಬಹುದು. ಒಂದೊಮ್ಮೆ ಬಹುಸಂಖ್ಯಾತ ಭಾರತೀಯರ ಮಾನವೀಯತೆ ಮೇಲೆದ್ದು ಬಂದರೆ ಯುವಕರು ಗೆಲ್ಲುತ್ತಾರೆ. ವ್ಯವಸ್ಥೆಯ ಲೋಲುಪತೆ ಮೇಲೆದ್ದು ಬಂದರೆ ಅವರು ಸೋಲುತ್ತಾರೆ.

ಅದು ಮುಖ್ಯವಲ್ಲ. ಮುಖ್ಯವಾದ ಸಂಗತಿಯೇನೆಂದರೆ ಸರಳ ಬದುಕಿನ ತಮ್ಮ ಯತ್ನದಲ್ಲಿ ಈ ಯುವಕರಿಗೆ ಖುಷಿ ಸಿಗುತ್ತಿದೆ, ಕಿಕ್ ಸಿಗುತ್ತಿದೆ ಎಂಬುದು. ಮಾದಕ ವಸ್ತುಗಳ ಬಳಕೆಯಿಲ್ಲದೆ, ಕೊಳ್ಳುಬಾಕತೆಯಿಲ್ಲದೆ, ಕಿಕ್ ಕೊಡಬಲ್ಲ ಹೊಸ ಫ್ಯಾಷನ್ ಸರಳತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT