ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಸತ್ಯಾಗ್ರಹಿಗಳ ಭೂಮಿಗಾಗಿ ಹೋರಾಟ

Last Updated 18 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಹರಿಯುವ ನದಿಯಲ್ಲಿ ಕುತ್ತಿಗೆಯವರೆಗೆ ನೀರಿನಲ್ಲಿ ಮುಳುಗಿರುವಂತೆ ನೆಲದ ಮೇಲೆ ನಿಂತು ಸಾವಿರಾರು ಗ್ರಾಮಸ್ಥರು ನಡೆಸಿದ ವಿನೂತನ ಮಾದರಿಯ ಪ್ರತಿಭಟನೆಯೊಂದು ಈಚೆಗೆ ದೇಶದಾದ್ಯಂತ ಜನರ ಗಮನ ಸೆಳೆದಿದೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಸುಮಾರು ಹದಿನೇಳು ದಿನಗಳ ಕಾಲ ಈ ಚಳವಳಿ ನಡೆಯಿತು.

ಇನ್ನೂ ಹೆಚ್ಚಿನ ವಿದ್ಯುಚ್ಛಕ್ತಿ ಉತ್ಪಾದನೆ ಮತ್ತು ನೀರಾವರಿ ಸೌಲಭ್ಯ ಒದಗಿಸುವುದಕ್ಕಾಗಿ ಓಂಕಾರೇಶ್ವರ ಜಲಾಶಯದ ಎತ್ತರವನ್ನು ಇನ್ನಷ್ಟೂ ಹೆಚ್ಚಿಸಿದ್ದರಿಂದ ಜಲಾಶಯದಲ್ಲಿ ನೀರೇನೋ ಹೆಚ್ಚಿತು. ಆದರೆ ಜಲಾಶಯದ ಹಿನ್ನೀರು ಇನ್ನಷ್ಟೂ ಪ್ರದೇಶಗಳತ್ತ ನುಗ್ಗಿತು. ಹೀಗಾಗಿ ಅಂತಹ ಕಡೆ ನೂರಾರು ರೈತರ ಫಲವತ್ತಾದ ಕೃಷಿ ಭೂಮಿ ಮುಳುಗಿದವು.

ಆದರೆ ಈ ರೈತಾಪಿ ಮಂದಿಗೆ ಅದೆಷ್ಟು ತೊಂದರೆಯಾಗಿದೆ ಎಂಬುದನ್ನು ಅರಿಯಲು  ಯಾರೊಬ್ಬರೂ ಆಸಕ್ತಿ ತೋರಲಿಲ್ಲ. ಹೀಗಾಗಿ ಭೋಪಾಲ್ ಮತ್ತು ದೆಹಲಿಯಲ್ಲಿ ಕುಳಿತ ಅಧಿಕಾರಸ್ಥರ ಗಮನ ಸೆಳೆಯಲಿಕ್ಕಾಗಿ ರೈತರು ಈ ತೆರನಾದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.

ಸರ್ಕಾರದ ಅಭಿವೃದ್ಧಿ ಯೋಜನೆಯೊಂದರ ಪರಿಣಾಮವಾಗಿ ನಿರ್ದಿಷ್ಟ ಪ್ರದೇಶದಲ್ಲಿ ತೊಂದರೆ ಅನುಭವಿಸಿದ ನೂರಾರು ಮಂದಿಯ ಸ್ಥಿತಿಗತಿ ಬಗ್ಗೆ ಸರ್ಕಾರದ ಆಡಳಿತಗಾರರು ಎಳ್ಳಷ್ಟೂ ಗಮನ ಹರಿಸದಿದ್ದ ಸಂಗತಿ ಈ ಪ್ರತಿಭಟನೆಯಿಂದ ಜಗಜ್ಜಾಹೀರಾಯಿತು. ಈ ಜನರಿಗೆ ಯಾವ ರೀತಿ ಪುನರ್‌ವಸತಿ ಕಲ್ಪಿಸಬೇಕೆಂಬ ಬಗ್ಗೆ ಸಂಬಂಧಪಟ್ಟ ಸಚಿವರಾಗಲಿ, ಉನ್ನತ ಅಧಿಕಾರಿಗಳಾಗಲಿ ತಲೆಕೆಡಿಸಿಕೊಳ್ಳಲೇ ಇಲ್ಲ.

ಯೋಜನೆಯೊಂದರ ಪ್ರತಿಕೂಲ ಪರಿಣಾಮದಿಂದಾಗಿ ಈ ರೀತಿ ಜನ ನೆಲೆ ಕಳೆದುಕೊಳ್ಳುವುದನ್ನು ತಪ್ಪಿಸದಿದ್ದರೆ ಅಭಿವೃದ್ಧಿಯ ಅರ್ಥವಾದರೂ ಏನು ಎಂಬ ಬಗ್ಗೆಯೂ ಸರ್ಕಾರಕ್ಕೆ ಅರಿವಿದ್ದಂತಿಲ್ಲ.

ಆದರೆ ಸುಪ್ರೀಂ ಕೋರ್ಟ್‌ನಿಂದ ಹಸಿರು ನಿಶಾನೆ ಪಡೆದಿರುವ ನರ್ಮದಾ ಕಂಟ್ರೋಲ್ ಅಥಾರಿಟಿ ಅವಾರ್ಡ್ ಅನ್ವಯ ಈ ರೀತಿ ನೆಲೆ ಕಳೆದುಕೊಂಡವರಿಗೆ ಅವರು ಕಳೆದುಕೊಂಡಿರುವ ಭೂಮಿಯನ್ನು ಬೇರೆ ಕಡೆ ನೀಡಬೇಕು. ಅವರನ್ನು ಆ ನಿರ್ದಿಷ್ಟ ಸ್ಥಳದಿಂದ ಬೇರೆಡೆ ತೆರಳಲು ಸೂಚನೆ ನೀಡುವುದಕ್ಕೆ ಮೊದಲೇ ಅವರಿಗೆ ಪುನರ್‌ವಸತಿಯ ವ್ಯವಸ್ಥೆಯಾಗಿರಬೇಕು.
 
ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ಆರು ತಿಂಗಳು ಮೊದಲೇ  ಎಚ್ಚರಿಕೆ ನೀಡಿರಬೇಕು. ಆದರೆ ಇಂತಹ ನಿಯಮಗಳನ್ನೆಲ್ಲಾ ಇಲ್ಲಿ ಗಾಳಿಗೆ ತೂರಲಾಗಿದೆ. ಇದೀಗ ಹದಿನೇಳು ದಿನಗಳ ಪ್ರತಿಭಟನೆಯ ಸಂದರ್ಭದಲ್ಲಿ ಎಚ್ಚತ್ತುಕೊಂಡಂತಿರುವ ಮಧ್ಯಪ್ರದೇಶ ಸರ್ಕಾರ ಭೂಮಿ ಕಳೆದುಕೊಂಡಿರುವವರಿಗೆ ಭೂಮಿ ನೀಡುವ ಬಗ್ಗೆ ಒಪ್ಪಿಕೊಂಡಿದೆ. ಆದರೆ ಪುನರ್‌ವಸತಿಗೆ ಸಂಬಂಧಿಸಿದಂತೆ ನೀಡಬೇಕಾದ ನೆರವಿನ ಬಗ್ಗೆ ಚಕಾರ ಎತ್ತಿಲ್ಲ.
 
ಹೀಗಾಗಿ ಭೂಮಿ ಕಳೆದುಕೊಂಡಿರುವವರು ಮತ್ತೆ ಪ್ರತಿಭಟನೆಯ ಮೊರೆ ಹೋಗುವ ಸಾಧ್ಯತೆ ಇದೆ. ಮಧ್ಯಪ್ರದೇಶ ಸರ್ಕಾರ ನೇಮಿಸಿರುವ ಮೂವರು ಸಚಿವರ ಸಮಿತಿಯು ಪ್ರತಿಭಟನಾಕಾರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅತ್ಯಂತ ಸಣ್ಣ ರಿಯಾಯಿತಿಗಳಿಗೂ ಮೀನಮೇಷ ಎಣಿಸುತ್ತಿರುವುದೊಂದು ವಿಪರ್ಯಾಸ.

ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಈಚೆಗೆ ಅದ್ಭುತ ಸಾಧನೆಯನ್ನೇ ತೋರಿದೆ. ಆದರೆ ಇದಕ್ಕೆ ನೂರಾರು ಕೋಟಿ ರೂಪಾಯಿಗಳು ಖರ್ಚಾಗಿರುವುದೂ ನಿಜ. ನೂರು ಸಾಧನೆಗಳ ಸಂಭ್ರಮಾಚರಣೆ `ಇಸ್ರೊ ಕುಟುಂಬ~ದಲ್ಲಿ ಸದ್ದು ಮಾಡುತ್ತಿದೆ. ಆದರೆ ಅತ್ತ ಖಾಂಡ್ವಾದಲ್ಲಿ ನೂರಾರು ಹಳ್ಳಿಗರು ನದಿಯಲ್ಲಿ ನಿಂತು ಪ್ರತಿಭಟಿಸುತ್ತಿದ್ದಾರೆ. ಅವರ ಬೇಡಿಕೆ ಬಲು ದೊಡ್ಡದೇನಲ್ಲ.

`ಇಸ್ರೊ~ದವರು ಖರ್ಚು ಮಾಡಿದಕ್ಕೆ ಹೋಲಿಸುವಂತೆಯೂ ಇಲ್ಲ. ಆದರೆ ಆ ಹಳ್ಳಿಗಾಡಿನಲ್ಲಿ ಜನ ರೋದಿಸುತ್ತಿದ್ದಾರೆ. ಆದರೆ ಇಸ್ರೊದಲ್ಲಿ ಸಂಭ್ರಮ. ಈ ತೆರನಾಗಿ ಹೋಲಿಸುವುದು ಸರಿಯಲ್ಲವೆಂಬುದೂ ನನಗೆ ಗೊತ್ತಿದೆ. ಆದರೆ ಏನು ಮಾಡುವುದು, `ಇಂಡಿಯಾ ಮತ್ತು ಭಾರತ~ ಅಂದರೆ ನಗರ ಮತ್ತು ಹಳ್ಳಿಗಳ ನಡುವಣ ವ್ಯತ್ಯಾಸ ಎನ್ನುವಂತಿದೆ. ಈ ಅಂತರ ಕಡಿಮೆಯಾಗಲು ಇನ್ನೆಷ್ಟು ಕಾಲ ಬೇಕಾಗಬಹುದು ?

ಇಲ್ಲಿ ಇದೀಗ ವರ್ಗಗಳ ನಡುವಣ ಅಂತರದ ಬಗ್ಗೆ ಎದ್ದಿರುವ ಪ್ರಶ್ನೆಗಳಷ್ಟೇ ಅಲ್ಲ, ಪ್ರಾಮಾಣಿಕ ಬೇಡಿಕೆಯೊಂದರ ಬಗ್ಗೆ ಅಧಿಕಾರಸ್ತರು ತೋರುತ್ತಿರುವ ಅನಾದಾರವೂ ಎದ್ದು ಕಾಣುತ್ತಿದೆ. ನರ್ಮದಾ ನದಿ ಯೋಜನೆಯ ಒಂದು ಭಾಗವೇ ಓಂಕಾರೇಶ್ವರ ಜಲಾಶಯ ಎನ್ನುವುದನ್ನು ನಾವು ಮರೆಯುವಂತಿಲ್ಲ. ಈ ಯೋಜನೆಯಿಂದ ಗುಜರಾತ್‌ಗೆ ಅನುಕೂಲವಾಗುತ್ತಿದೆ ನಿಜ, ಜತೆಗೆ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳೂ ಫಲಾನುಭವಿಗಳೇ ಹೌದು. ಅದೇನೇ ಇದ್ದರೂ ಈ ಯೋಜನೆಯು ಹಲವು ತಪ್ಪುಗಳಿಂದ ಕೂಡಿದೆ ಎನ್ನಲಾಗಿದೆ.

ಭಾರೀ ಜಲಾಶಯಗಳು ಅಷ್ಟೇನೂ ಲಾಭಕರವಲ್ಲ ಎಂಬ ವಾಸ್ತವವನ್ನು ಈಚೆಗೆ ಜಗತ್ತು ಅರ್ಥಮಾಡಿಕೊಳ್ಳುತ್ತಿದೆ. ಇಂತಹ ಯೋಜನೆಗಳು ಹೆಚ್ಚು ಪ್ರದೇಶವನ್ನು ನುಂಗುತ್ತವೆ ಅಥವಾ ಹಾನಿ ಮಾಡುತ್ತವೆ. ಆದರೆ ಅದೇ ಮಟ್ಟದಲ್ಲಿ ಅದು ನಮಗೆ ವಾಪಸು ಕೊಡುವುದಿಲ್ಲ. ಟೆನೆಸ್ಸಿ ಕಣಿವೆ ಬೃಹತ್ ಯೋಜನೆಯ ಬಗ್ಗೆ ಅಮೆರಿಕಾ ಸರ್ಕಾರ ಇವತ್ತು ಅತೀವ ಪಶ್ಚಾತ್ತಾಪ ಪಡುತ್ತಿದೆ.

ಸಾಮಾನ್ಯವಾಗಿ ಹೇಳುವುದಿದ್ದರೆ ಕಿರು ನೀರಾವರಿ ಯೋಜನೆಗಳನ್ನು ವಿವಿಧ ಕಡೆ ನಿರ್ಮಿಸಬಹುದು. ಇದು ದೊಡ್ಡ ಮಟ್ಟದಲ್ಲಿ ನೆಲವನ್ನು ನುಂಗುವುದಿಲ್ಲ ಮತ್ತು ಹೆಚ್ಚು ಜನರಿಗೆ ಹಾನಿಯನ್ನುಂಟು ಮಾಡುವುದಿಲ್ಲ. ಭಾಕ್ರಾ ಅಣೆಕಟ್ಟು ನಿರ್ಮಿಸಿ ಅದೆಷ್ಟು ದಶಕಗಳು ಉರುಳಿಲ್ಲ, ಅದೇ ರೀತಿ ಪಂಜಾಬ್‌ನಲ್ಲಿ ಬಿಯಾಸ್ ನದಿಗೆ ಅಡ್ಡಲಾಗಿ ಕಟ್ಟಿರುವ ಪೊಂಗ್ ಅಣೆಕಟ್ಟನ್ನೇ ನೋಡಿ ಇವತ್ತಿಗೂ ಆ ಪ್ರದೇಶದಲ್ಲಿ ಪುನರ್‌ವಸತಿ ಕಾರ್ಯಗಳು ನಡೆಯುತ್ತಲೇ ಇವೆ !

ದಕ್ಷಿಣ ಏಷ್ಯಾದ ಅಣೆಕಟ್ಟುಗಳು, ನದಿಗಳು ಮತ್ತು ಜನ ಕುರಿತ ತಜ್ಞ ಹಿಮಾಂಶು ಠಕ್ಕರ್ ಈಚೆಗೆ ಮಾತನಾಡುತ್ತಾ `ನರ್ಮದಾ ಕಣಿವೆಯಲ್ಲಿ ರಾಜ್ಯ ಸರ್ಕಾರದ ಭಯೋತ್ಪಾದನೆಯನ್ನು ಕಾಣಬಹುದಾಗಿದೆ~ ಎಂದಿರುವುದು ಅರ್ಥಪೂರ್ಣವಾಗಿದೆ. ಓಂಕಾರೇಶ್ವರ ಯೋಜನೆಯ ಸ್ವಾಮ್ಯವನ್ನು ಹೊಂದಿರುವ ನರ್ಮದಾ ಜಲವಿದ್ಯುತ್ ಅಭಿವೃದ್ಧಿ ನಿಗಮ ಲಿಮಿಟೆಡ್‌ನವರೇ ಅದರ ಸಂಪೂರ್ಣ ಆಡಳಿತದ ಹೊಣೆಯನ್ನೂ ಹೊತ್ತಿದ್ದಾರೆ.
 
ವಿಶೇಷವೆಂದರೆ ಈ ನಿಗಮದಲ್ಲಿ ಕೇಂದ್ರ ಸರ್ಕಾರದ ಸಂಸ್ಥೆಯಾದ ರಾಷ್ಟ್ರೀಯ ಹೈಡ್ರೊ ಪವರ್ ಕಾರ್ಪೊರೇಷನ್ ಲಿಮಿಟೆಡ್ ಶೇಕಡಾ 51ರಷ್ಟು ಷೇರು ಹೊಂದಿದೆ. ವಸ್ತುಸ್ಥಿತಿ ಹೀಗಿರುವಾಗ ಪ್ರಸಕ್ತ ಪ್ರತಿಭಟನೆ ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಕೇಂದ್ರದ ಇಂಧನ ಸಚಿವ ವೀರಪ್ಪ ಮೊಯಿಲಿಯವರು ತಂಡವೊಂದನ್ನು ಜಲಾಶಯದ ಬಳಿ ಕಳುಹಿಸಿದ್ದಾರೆ !
 
ಆದರೆ ತೊಂದರೆಗೆ ಒಳಗಾಗಿರುವ ಜನರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅವರು ಆಸಕ್ತಿ ತೋರಿಸಿಯೇ ಇಲ್ಲ.ಇಲ್ಲಿ ಇಂಧನ ಸಚಿವಾಲಯವಷ್ಟೇ ಜವಾಬ್ದಾರವಲ್ಲ. ಜಲ ಸಂಪನ್ಮೂಲ ಸಚಿವಾಲಯ ಕೂಡ ಜವಾಬ್ದಾರವಾಗುತ್ತದೆ. ಏಕೆಂದರೆ ಈ ಎಲ್ಲಾ ನೀರಾವರಿ ಯೋಜನೆಗಳು `ನರ್ಮದಾ ಕಂಟ್ರೋಲ್ ಅಥಾರಿಟಿ~ಯ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತವೆ.

ಈ ನರ್ಮದಾ ಅಥಾರಿಟಿಯು ನೇರವಾಗಿ ಜಲ ಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ ಬರುತ್ತದೆ ಎಂದು ಠಕ್ಕರ್ ಹೇಳುತ್ತಾರೆ. ಪರಿಸರ ಸಚಿವಾಲಯವನ್ನೂ ನಾವಿಲ್ಲಿ ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ. ಈ ಎಲ್ಲಾ ಯೋಜನೆಗಳಿಗೆ ಕೆಲವು ಕರಾರುವಾಕ್ಕಾದ ವೈಜ್ಞಾನಿಕ ನಿಯಮಗಳ ಅನ್ವಯ ಪರಿಸರ ಸಚಿವಾಲಯವೂ ಹಸಿರು ನಿಶಾನೆ ತೋರಿಸಿರುವುದು ನಿಜ.
 
ಇದೀಗ ಜಲಾಶಯದಲ್ಲಿ ನೀರಿನ ಮಟ್ಟ ಏರಿರುವುದರಿಂದ ಅಂತಹ ನಿಯಮಗಳ ಉಲ್ಲಂಘನೆಯ ಸಾಧ್ಯತೆ ಇದೆ. ಈ ನಡುವೆ ಈ ಪ್ರದೇಶದಲ್ಲಿರುವ ಬುಡಕಟ್ಟು ಜನರ ಮೇಲೆ ದೌರ್ಜನ್ಯ ನಡೆದಿದ್ದು, ಈ ಕುರಿತು ಬುಡಕಟ್ಟು ಸಮುದಾಯಗಳ ವ್ಯವಹಾರ ಸಚಿವಾಲಯ ಸುಮ್ಮನಿರುವುದು ಹಲವರು ಹುಬ್ಬೇರಿಸುವಂತೆ ಮಾಡಿದೆ.

ಇವುಗಳೇನೇ ಇರಬಹುದು. ಕೊನೆಗೂ ಜಲ ಸತ್ಯಾಗ್ರಹಿಗಳಿಗೆ ಜಯ ದೊರಕಿರುವುದಂತೂ ನಿಜ. ಜಲಾಶಯದ ನೀರಿನ ಮಟ್ಟವನ್ನು 189 ಮೀಟರ್‌ಗಳಿಗೆ ಇಳಿಸಲಾಗಿದೆ.
ಸತ್ಯಾಗ್ರಹಿಗಳ ದೃಢಮನಸ್ಸು ಶ್ಲಾಘನಾರ್ಹ. ಅವರ ಕಾಲುಗಳಲ್ಲಿ ಹುಣ್ಣುಗಳಾಗಿದ್ದವು, ಚರ್ಮಕ್ಕೆ ಸಂಬಂಧಿಸಿದ ರೋಗಗಳು ಕಂಡು ಬಂದಿದ್ದವು, ಜತೆಗೆ ಆರೋಗ್ಯದಲ್ಲಿ ತೀವ್ರ ಏರುಪೇರುಗಳಾಗಿದ್ದವು.

ಆದರೂ ಸತ್ಯಾಗ್ರಹಿಗಳು ತಮ್ಮ ಛಲ ಬಿಡಲಿಲ್ಲ.ಇದಲ್ಲದೆ ಸತ್ಯಾಗ್ರಹಿಗಳು ನ್ಯಾಯಾಲಯದ ಮೆಟ್ಟಲು ಏರಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸರ್ಕಾರವು ನಿರ್ವಸಿತರಿಗೆ ನೀಡಿದ್ದ ಆಶ್ವಾಸನೆಯನ್ನು ಅದು ಮರೆತಿರುವುದರಿಂದ ಕಾನೂನು ಉಲ್ಲಂಘನೆಯಾಗಿದೆ ಎಂದೂ ಸತ್ಯಾಗ್ರಹಿಗಳು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ.

ಜಲಸತ್ಯಾಗ್ರಹಿಗಳ ಧ್ವನಿ ಇಡೀ ದೇಶಕ್ಕೆ ತಲುಪಿದೆ. ಅವರ ಧ್ವನಿಗೆ ದೇಶದಾದ್ಯಂತ ಜನ ಓಗೊಟ್ಟಿದ್ದಾರೆ. ನಿರ್ವಸಿತರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯದ ಬಗ್ಗೆ ಬೆಳಕು ಚೆಲ್ಲುವಲ್ಲಿ ಮಾಧ್ಯಮ ಕೂಡಾ ಉತ್ತಮ ಕೆಲಸ ಮಾಡಿದೆ. ಹೀಗಾಗಿ ಸರ್ಕಾರ ಕೂಡಾ ಅನಿವಾರ್ಯವಾಗಿ ನೊಂದವರ ಪರವಾಗಿ ನಿಲ್ಲಲೇ ಬೇಕಾಗಿದೆ.

ಸತ್ಯಾಗ್ರಹಿಗಳು ತಾವು ಹೋರಾಟ ನಡೆಸಿದ ಸ್ಥಳವನ್ನು  `ಭೂಮಿಯ ಹಕ್ಕು~ ಹೋರಾಟದ ಸಾಂಕೇತಿಕ ಸ್ಥಳವಾಗಿ ಪರಿಗಣಿಸಲಿದ್ದಾರೆ. ಆ ಸ್ಥಳದಲ್ಲಿ ನಡೆಸಿದ ಹೋರಾಟದಿಂದಾಗಿಯೇ ಭೂಮಿ ಕಳೆದುಕೊಂಡವರೆಲ್ಲಾ ಭೂಮಿ ಪಡೆಯಲು ಸಾಧ್ಯವಾಗಿದ್ದು ತಾನೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT