ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ್ಲಿಕಟ್ಟು ಜನೋನ್ಮಾದದಲ್ಲಿ ಸೋತ ಸಂವಿಧಾನ

Last Updated 30 ಜನವರಿ 2017, 4:40 IST
ಅಕ್ಷರ ಗಾತ್ರ

ಜನಾಂದೋಲನ ಮತ್ತು ಜನೋನ್ಮಾದದ ನಡುವಣ ಗೆರೆ ಯಾವತ್ತೂ ಅಸ್ಪಷ್ಟವಾಗಿಯೇ ಇರುತ್ತದೆ. ಆದರೆ ಅಸ್ಪಷ್ಟವಾಗಿದೆ ಎನ್ನುವ  ಕಾರಣಕ್ಕೆ ಇವೆರಡರ ವ್ಯತ್ಯಾಸವನ್ನು ಗುರುತಿಸಲಾಗದ ಸ್ಥಿತಿಯೊಂದು ನಿರ್ಮಾಣವಾದರೆ ಅದು ಅಪಾಯಕಾರಿ.

ಜನ  ದೊಡ್ಡ ಮಟ್ಟದಲ್ಲಿ ಬೀದಿಗಿಳಿಯುವ ಎಲ್ಲಾ ಪ್ರಕರಣಗಳನ್ನು ಪ್ರಜಾತಂತ್ರದ ಪವಿತ್ರ ಪ್ರಕಟರೂಪ ಅಥವಾ ನಿಷ್ಕಳಂಕ ಜನಾಂದೋಲನ ಎನ್ನುವ ರೀತಿಯಲ್ಲಿ ಚಿತ್ರಿಸುವ ಅಚಿಕಿತ್ಸಕ ಪ್ರವೃತ್ತಿಯೊಂದು ನಮ್ಮ ಮಧ್ಯೆ ಅನಾವರಣಗೊಳ್ಳುತ್ತಿದೆ ಎನ್ನುವುದು ತಮಿಳುನಾಡಿನ  ಜಲ್ಲಿಕಟ್ಟು ವಿವಾದದಲ್ಲಿ ಹೋದ ವಾರ ಸಾಬೀತಾಗಿ ಹೋಯಿತು.

ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರ  ಒಟ್ಟಾಗಿ ನಿಷೇಧಿಸಿದ್ದ ಜಲ್ಲಿಕಟ್ಟು ಎಂಬ ಜನ-ಜಾನುವಾರುಗಳ ನಡುವಣ ಬೀಭತ್ಸ ಕ್ರೀಡೆಗೆ ಅನುವು ಮಾಡಿಕೊಟ್ಟಾಗ ಮಾಧ್ಯಮಗಳು ಅದನ್ನು ‘ಜನರಿಗೆ ಸಂದ ಜಯ’ ಎಂದು ಕರೆದವು.

ಜನರ ಪ್ರತಿಭಟನೆಗೆ ಮಣಿದು ಸರ್ಕಾರಗಳು ಈ ನಿರ್ಧಾರ ಕೈಗೊಂಡ ಕಾರಣಕ್ಕೆ ಮಾಧ್ಯಮಗಳು ‘ಜನ ಗೆದ್ದರು’ ಎಂಬ ನಿರ್ಣಯ ನೀಡಿದವು. ಇಲ್ಲಿ ಒಂದು  ಪ್ರಶ್ನೆ ಮೂಡುತ್ತದೆ.  ಜನರು ಗೆದ್ದರು ಎಂದಾದರೆ ಸೋತದ್ದು ಯಾರು? ಅಥವಾ ಜನರು ಯಾರ ವಿರುದ್ಧ ಈ ಜಯ ಗಳಿಸಿದ್ದು?

ಭಾರತ ಗೆದ್ದ ಎತ್ತಿನ ಬಾಲ ಹಿಡಿಯುವ ದೇಶ. ಸೋತವರ ಕಡೆಗೆ ಕಡೆಗಣ್ಣಿನ ದೃಷ್ಟಿ ಬೀರುವಷ್ಟು ಕೂಡಾ ವ್ಯವಧಾನ ಭಾರತೀಯ ಸಮಾಜದಲ್ಲಿ ಇಲ್ಲ. ಅದು ಪಬ್ಲಿಕ್ ಪರೀಕ್ಷೆಯಲ್ಲಿ ಫೇಲಾಗುವ ಅರ್ಥಾತ್ ಸೋಲುವ ವಿದ್ಯಾರ್ಥಿಗಳ ವಿಚಾರ ಇರಬಹುದು ಅಥವಾ ಚುನಾವಣೆಗಳಲ್ಲಿ ಸೋಲುವ ರಾಜಕಾರಣಿಗಳ ವಿಷಯ ಇರಬಹುದು. ಇಂಥವರೆಲ್ಲ ಗೆದ್ದರು ಎನ್ನುವುದಷ್ಟೆ ಮುಖ್ಯ.

ಹಾಗಿರುವಾಗ ಸಾಕ್ಷಾತ್ ಜನಶಕ್ತಿಯ ವಿಜಯ ಎಂದು ಬಣ್ಣಿಸಲಾಗುತ್ತಿರುವ ಜಲ್ಲಿಕಟ್ಟು ವಿವಾದದಲ್ಲಿ ಯಾರು ಸೋತರು, ಏನು ಸೋತಿತು ಎಂದೆಲ್ಲಾ ಕೇಳುವ ಗೋಜಿಗೆ  ಯಾರೂ ಹೋಗದೇ ಇದ್ದದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಈ ಪ್ರಕರಣದಲ್ಲಿ ಯಾರು ಸೋತರು ಎನ್ನುವುದು ಯಾರು ಗೆದ್ದರು ಎನ್ನುವುದಕ್ಕಿಂತ ಮುಖ್ಯ ವಿಷಯ.

ಜಲ್ಲಿಕಟ್ಟು ನಡೆಸುವುದನ್ನು  ನಿಷೇಧಿಸಬೇಕು ಎಂದು ಮೊದಲಿಗೆ ತೀರ್ಪು ನೀಡಿದ್ದು ಮದ್ರಾಸ್ ಹೈಕೋರ್ಟ್‌.  ಆ ತೀರ್ಪನ್ನು ಎತ್ತಿ ಹಿಡಿದದ್ದು ಈ ದೇಶದ ಸುಪ್ರೀಂ ಕೋರ್ಟ್‌.  ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳ ತೀರ್ಪನ್ನು ಮೀರಿ ಜಲ್ಲಿಕಟ್ಟು ನಡೆಸಲು ಅನುವು ಮಾಡಿಕೊಡುವುದಕ್ಕೆ ಹೋದ ವರ್ಷ ಕೇಂದ್ರದ ಬಿಜೆಪಿ ಸರ್ಕಾರ ಕಾನೂನು  ಕಸರತ್ತು ನಡೆಸಿದಾಗ ‘ಇಲ್ಲ ಸಾಧ್ಯವಿಲ್ಲ’  ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದು ಕೂಡಾ ಈ ದೇಶದ ಸುಪ್ರೀಂ ಕೋರ್ಟ್‌. 

ಇವಿಷ್ಟೂ ತೀರ್ಪುಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಕಾನೂನು ಪಂಡಿತರು ಹೇಳುವ ಪ್ರಕಾರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ಜಲ್ಲಿಕಟ್ಟು ನಿಷೇಧಿಸಬೇಕು ಎನ್ನುವ ನಿರ್ಣಯಕ್ಕೆ ಬರುವ ಮುನ್ನ ವಿಷಯವನ್ನು ಎಲ್ಲಾ ಆಯಾಮಗಳಿಂದಲೂ ಆಳವಾಗಿ ಮತ್ತು ವಿಸ್ತೃತವಾಗಿ ಅಧ್ಯಯನ ಮಾಡಿವೆ. ನ್ಯಾಯನಿರ್ಣಯದ ಎಲ್ಲಾ ಸೂತ್ರಗಳನ್ನು ಅನ್ವಯಿಸಿ ತೀರ್ಪು ನೀಡಿವೆ. ಪ್ರಾಣಿದಯಾ ಸಂಘದವರು ಕೇಳಿದರು ಎನ್ನುವ ಒಂದೇ ಕಾರಣಕ್ಕೆ   ಸಾಮಾಜಿಕ ವಾಸ್ತವವನ್ನು ಅರಿಯುವ ಪ್ರಯತ್ನ ಮಾಡದೆ ಕುಳಿತು ಈ ನಿಷೇಧವನ್ನು ಹೇರಿಲ್ಲ.

ಹಾಗೆಯೇ 1960ರ ಪ್ರಾಣಿಗಳ ಮೇಲಿನ ಕ್ರೌರ್ಯ ನಿಷೇಧಿಸುವ ಕಾಯ್ದೆಯ ಉಲ್ಲಂಘನೆಗಾಗಿ ಮಾತ್ರ ನ್ಯಾಯಾಂಗ ಈ ನಿಷೇಧ ಹೇರಿದ್ದಲ್ಲ; ಸಂವಿಧಾನದ ವ್ಯಕ್ತ ಮತ್ತು ಅವ್ಯಕ್ತ ಆಶಯಗಳನ್ನು ಆಧಾರವಾಗಿರಿಸಿಕೊಂಡು ಈ ನಿರ್ಣಯಕ್ಕೆ ಬರಲಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಜಲ್ಲಿಕಟ್ಟು ಬೆಂಬಲಿಸುವವರು ನೀಡಿದ ಒಂದೊಂದು ಕಾರಣವನ್ನೂ ನ್ಯಾಯಾಲಯಗಳು ಪರಿಶೀಲಿಸಿವೆ. 

ಜಲ್ಲಿಕಟ್ಟು ತಮಿಳುನಾಡಿನ ಸಂಸ್ಕೃತಿಯ ಭಾಗ ಎಂಬ ವಾದವನ್ನು ಪ್ರಾಚೀನ-ಅರ್ವಾಚೀನ ತಮಿಳು ದಾಖಲೆಗಳನ್ನೇ ಪರಿಶೀಲಿಸಿ ಇತ್ಯರ್ಥಪಡಿಸಿಕೊಂಡಿವೆ. ಪ್ರಾಚೀನ ಸಂಪ್ರದಾಯಗಳ ಭಾಗವಾಗಿದ್ದರೂ ಸಂವಿಧಾನಕ್ಕೆ ವಿರುದ್ಧ ಇರುವ  ಆಚರಣೆಗಳನ್ನು ಮುಂದುವರಿಸುವ ಹಾಗಿಲ್ಲ ಎಂಬ ಅಭಿಪ್ರಾಯವನ್ನೂ ನೀಡಿವೆ. ಜಲ್ಲಿಕಟ್ಟುವಿನಲ್ಲಿ ಹಿಂಸೆ ಇಲ್ಲ ಎನ್ನುವ ವಾದವನ್ನು ವಿಡಿಯೊ ದಾಖಲೆ ಮತ್ತು ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಗಳೇ ಮಂಡಿಸಿದ ಪುರಾವೆಗಳ  ಆಧಾರದ ಮೇಲೆ ತಿರಸ್ಕರಿಸಿವೆ.

ಆಹಾರಕ್ಕಾಗಿ ಪ್ರಾಣಿಗಳನ್ನು ವಧಿಸುವುದಕ್ಕೆ ಮತ್ತು  ರಂಜನೆಗಾಗಿ ಪ್ರಾಣಿಗಳನ್ನು ಬಳಸುವುದಕ್ಕೆ ಇರುವ ವ್ಯತ್ಯಾಸವನ್ನು ಸಂವಿಧಾನಾತ್ಮಕವಾಗಿ ವಿಶ್ಲೇಷಿಸಿ ‘ಹಾಗಾದರೆ ಬಿರಿಯಾನಿ ತಿನ್ನುವುದೇಕೆ’ ಎಂದು ತಮಿಳು ಚಿತ್ರನಟನೋರ್ವ ಈಗ ಎತ್ತಿದ ಪ್ರಶ್ನೆಗೆ ಹಿಂದೆಯೇ ಉತ್ತರಿಸಿದೆ. ಇಷ್ಟೆಲ್ಲಾ ಕ್ರಮಬದ್ಧವಾಗಿ ನೀಡಿದ ತೀರ್ಪನ್ನು ಧಿಕ್ಕರಿಸಬೇಕೆಂದು ಜನ ಬೀದಿಗಿಳಿದು ಒತ್ತಾಯಿಸುತ್ತಾರೆ; ಅದಕ್ಕೆ ಸಾಹಿತಿಗಳು, ಚಿಂತಕರು, ಕಲಾವಿದರು, ಸಿನಿಮಾ ನಟರು, ಕೊನೆಗೆ ಪೊಲೀಸರು ಕೂಡಾ ಬೆಂಬಲ ನೀಡುತ್ತಾರೆ. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚಕಾರವೆತ್ತದೆ ಕೋರ್ಟು ತೀರ್ಪನ್ನು ಅಲ್ಲಗಳೆಯುವ ಕಾನೂನು ರೂಪಿಸುತ್ತವೆ. ಕೆಲವರು ಪ್ರಾಣಿ ದಯಾ ಸಂಘಟನೆಗಳನ್ನು ನಿಷೇಧಿಸಬೇಕು ಎಂಬ ಬೇಡಿಕೆ ಇಡುತ್ತಾರೆ. ಈ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸುತ್ತಿರುವುದು ಅವುಗಳ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದೆ ಎನ್ನುವ ಕಾರಣಕ್ಕೆ. ಅಂದರೆ ಪರ್ಯಾಯವಾಗಿ ಯಾರ ಮೇಲೆ ನಿಷೇಧಕ್ಕೆ ಆಗ್ರಹಿಸಿದ ಹಾಗಾಯಿತು? ಈ ದೇಶದ ಸುಪ್ರೀಂ ಕೋರ್ಟ್‌ ಮೇಲೆ!

ಈ ಎಲ್ಲಾ  ಅಂಶಗಳ ಹಿನ್ನೆಲೆಯಲ್ಲಿ ಸೋತದ್ದು ಯಾರು  ಎಂಬ ಪ್ರಶ್ನೆಗೆ ಸೋತದ್ದು ಈ ದೇಶದ ಸಂವಿಧಾನ, ಸೋತದ್ದು ಈ ದೇಶದ ನ್ಯಾಯಾಂಗ ಎನ್ನುವ ಉತ್ತರವನ್ನು ಅನಿವಾರ್ಯವಾಗಿ ನೀಡಬೇಕಾಗುತ್ತದೆ. ಈ ಸೋಲನ್ನು ಜನರ ಗೆಲುವು ಎಂದು ಯಾವ ಅರ್ಥದಲ್ಲಿ ಹೇಳುವುದು?

ಜನ ನಡೆಸುವ ಹೋರಾಟಗಳೆಲ್ಲಾ ಜನಪರ ಹೋರಾಟಗಳಲ್ಲ. ಜನರನ್ನು ಸೇರಿಸಿ ಸುಪ್ರೀಂ ಕೋರ್ಟ್‌  ತೀರ್ಪುಗಳನ್ನು ಕೂಡಾ ಧಿಕ್ಕರಿಸಿ ಬಿಡಬಹುದು ಎನ್ನುವ ತಪ್ಪು ಸಂದೇಶ ನೀಡಿದ ತಮಿಳುನಾಡಿನ ಜನೋನ್ಮಾದವನ್ನು ಕೆಲ ಮಾಧ್ಯಮಗಳು ಅದ್ಭುತ ಜನಾಂದೋಲನ ಎಂದು ಕರೆದವು.

‘ನಾಡುನುಡಿಗಾಗಿ ತಮಿಳುನಾಡಿನಲ್ಲಿ ಅದ್ಭುತ ಹೋರಾಟ ನಡೆಯುತ್ತಿದೆ; ಕನ್ನಡಿಗರಿಗೆ ಬೆನ್ನೆಲುಬಿಲ್ಲ, ಈ ನೆಲದ ಬಗ್ಗೆ ಅಭಿಮಾನವಿಲ್ಲ’ ಎಂದು ಅಣಕಿಸುವ ಕೆಲಸವೂ ನಡೆಯಿತು. ಮಾಧ್ಯಮಗಳು ಏನೇ ಹೇಳಲಿ, ಇಂತಹ ಸಂದರ್ಭಗಳಲ್ಲಿ ಕನ್ನಡಿಗರು  ಅತಿರೇಕದಿಂದ ವರ್ತಿಸದಿದ್ದರೆ ಅದಕ್ಕೆ ಹೆಮ್ಮೆಪಡಬೇಕು. ಕರ್ನಾಟಕದ ಸಿನಿಮಾ ನಟರು, ಸಾಹಿತಿಗಳು ಸೂಕ್ಷ್ಮ ವಿಷಯಗಳಲ್ಲಿ ಸಂಯಮದ ನಿಲುವು ತಳೆದರೆ ಅವರನ್ನು ಅಭಿನಂದಿಸಬೇಕು.

ಜಲ್ಲಿಕಟ್ಟು ಪ್ರತಿಭಟನೆ ಮೇಲ್ನೋಟಕ್ಕೆ ಈ ದಶಕದಲ್ಲಿ ದೇಶ ಕಂಡ ಇತರ ಎರಡು ಬೃಹತ್ ಜನಾಂದೋಲನಗಳನ್ನು ನೆನಪಿಸುತ್ತದೆ. ಮೊದಲನೆಯದ್ದು 2011ರಲ್ಲಿ ಲೋಕಪಾಲ್ ಸ್ಥಾಪನೆಗೆ ಆಗ್ರಹಿಸಿ ನಡೆದ ಚಳವಳಿ. ಎರಡನೆಯದ್ದು 2013ರಲ್ಲಿ ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆ.

ಲೋಕಪಾಲ್ ಚಳವಳಿ ಮತ್ತು ಅತ್ಯಾಚಾರ ಪ್ರಕರಣದ ಸುತ್ತ ಚಳವಳಿಗಳು ನಡೆದದ್ದು ಸರ್ಕಾರದ ವೈಫಲ್ಯದ ವಿರುದ್ಧ. ಜಲ್ಲಿಕಟ್ಟು ಚಳವಳಿ ಹಾಗಲ್ಲ. ಅದು ಸಾಂವಿಧಾನಿಕ ಸಂಸ್ಥೆಯೊಂದನ್ನು ಧಿಕ್ಕರಿಸಿ, ಅದನ್ನು ಮಣಿಸುವುದಕ್ಕೋಸ್ಕರ ನಡೆದ ಜನೋನ್ಮಾದ. ಇದರ ಹಿಂದೆ ತಮಿಳುನಾಡಿನ ಗ್ರಾಮೀಣ  ಸಂಕಷ್ಟ, ಬಡವ-ಶ್ರೀಮಂತರ ಅಂತರ, ಜಾತಿ ರಾಜಕೀಯ ಹೀಗೆ ಬೇರೆಬೇರೆ ಕಾರಣಗಳನ್ನು ಗುರುತಿಸಲಾಗುತ್ತಿದೆ.

ಇಂತಹ ಕಾರಣಗಳನ್ನು ಎಲ್ಲಾ ಚಳವಳಿಗಳ ಹಿನ್ನೆಲೆಯಲ್ಲಿಯೂ ಸಮಾಜಶಾಸ್ತ್ರಜ್ಞರು ನೀಡುತ್ತಲೇ ಬಂದಿದ್ದಾರೆ. ಇವೆಲ್ಲವನ್ನೂ ಮೀರಿ  ತಮಿಳುನಾಡಿಗೆ ಸಂಬಂಧಿಸಿದಂತೆ ಬೇರೆಯೇ ಒಂದು ವಿಷಯವಿದೆ. ಅದು, ಒಂದು ರಾಜ್ಯವಾಗಿ ತಮಿಳುನಾಡು ಭಾರತೀಯ ಒಕ್ಕೂಟದಲ್ಲಿ ಅನುಭವಿಸುತ್ತಿರುವ ವಿಚಿತ್ರವಾದ ಚಡಪಡಿಕೆಗೆ ಸಂಬಂಧಿಸಿದ್ದು. ಅದು ಆ ರಾಜ್ಯಕ್ಕೆ ನೆರೆರಾಜ್ಯಗಳ ಮತ್ತು ಕೇಂದ್ರ ಸರ್ಕಾರದ ಜತೆ ಇರುವ ವಿವಿಧ ರೀತಿಯ ಸಂಘರ್ಷಗಳಿಗೆ ಸಂಬಂಧಿಸಿದ್ದು. ಜಲ್ಲಿಕಟ್ಟು ಪ್ರತಿಭಟನೆಯನ್ನು ತಮಿಳುನಾಡಿನ ಈ ಚಡಪಡಿಕೆಯ ಭಾಗವಾಗಿ ನೋಡುವುದು ಹೆಚ್ಚು ಸೂಕ್ತ.

1950–60ರ ದಶಕಗಳಲ್ಲಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಧೋರಣೆಯ ವಿರುದ್ಧ ತಮಿಳುನಾಡಿನಲ್ಲಿ ಚಳವಳಿ ನಡೆಯಿತು. ಕೇಂದ್ರ ಸರ್ಕಾರ ರಾಜ್ಯಗಳ ಅಸ್ಮಿತೆಯನ್ನು ಕಡೆಗಣಿಸಿ ಹಿಂದಿ ಭಾಷೆ ಹೇರುವುದರ ವಿರುದ್ಧ ತಮಿಳುನಾಡು ಪ್ರತಿಭಟಿಸಿದ್ದರಲ್ಲಿ ಅರ್ಥವಿತ್ತು. ಆದರೆ ಆ ನಂತರದ ದಿನಗಳಲ್ಲಿ ದೇಶದ ಇತರ ರಾಜ್ಯಗಳಿಗೆ ಒಂದು ನೀತಿಯಾದರೆ ತಮಿಳುನಾಡಿಗೆ ಮಾತ್ರ ಇನ್ನೊಂದು ನೀತಿಯಾಗಬೇಕು ಎನ್ನುವ ರೀತಿಯಲ್ಲಿ ಆ ರಾಜ್ಯವು ಕೇಂದ್ರ ಸರ್ಕಾರವನ್ನು ತನ್ನ ಪರವಾಗಿ ಮಣಿಸಿಕೊಳ್ಳುವ, ಒಲಿಸಿಕೊಳ್ಳುವ ಕೆಲಸ ಮಾಡುತ್ತಿದೆ.

ಇಡೀ ದೇಶದಲ್ಲಿ ಶೇ 50 ರಷ್ಟು ಮೀಸಲಾತಿ ಇದ್ದರೆ ತಮಿಳುನಾಡಿನಲ್ಲಿ ಅದು ಶೇ 70ಕ್ಕಿಂತಲೂ ಹೆಚ್ಚಿದೆ. ಇತರ ರಾಜ್ಯಗಳಲ್ಲಿ ಜಾರಿಯಲ್ಲಿರುವ ತ್ರಿಭಾಷಾ ಶಿಕ್ಷಣ ನೀತಿಯನ್ನು ತಮಿಳುನಾಡು ಅನುಸರಿಸುವುದಿಲ್ಲ. ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳ ಜತೆ ತಮಿಳುನಾಡು ನದಿ ನೀರಿನ ಹಂಚಿಕೆಯ ವಿಚಾರದಲ್ಲಿ ಜಗಳ ಕಾಯುತ್ತಿದ್ದು ಕಾಲಕಾಲಕ್ಕೆ ಈ ವಿಚಾರದಲ್ಲೂ ಕೇಂದ್ರ ಸರ್ಕಾರ ತನ್ನ ಪರವಾಗಿರುವಂತೆ ನೋಡಿಕೊಂಡಿದೆ. ಇತರ ರಾಜ್ಯಗಳಿಗೆ ದೊರಕದಷ್ಟು ಕೇಂದ್ರದ  ಅನುದಾನ ತಮಿಳುನಾಡಿಗೆ ದೊರಕುತ್ತದೆ ಎನ್ನುವ ಆಪಾದನೆ ಇದೆ.

ಜಲ್ಲಿಕಟ್ಟು ಪ್ರಕರಣದಲ್ಲೂ ಅಷ್ಟೇ. ಸುಗ್ರೀವಾಜ್ಞೆಯ  ಮೂಲಕ,  ವಿಶೇಷ ಕಾನೂನಿನ ಮೂಲಕ ಸುಪ್ರೀಂ ಕೋರ್ಟಿನ ತೀರ್ಪನ್ನು ಧಿಕ್ಕರಿಸಲು ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಸರ್ಕಾರ ಸರ್ವವಿಧದ ಸಹಕಾರವನ್ನು ನೀಡುತ್ತದೆ. ಇವೆಲ್ಲದಕ್ಕೆ ಮೊದಲೇ, ಹೋದ ವರ್ಷ ಜನವರಿಯಲ್ಲಿ  ಸುಪ್ರೀಂ ಕೋರ್ಟ್‌ ತೀರ್ಪಿನ ವ್ಯಾಪ್ತಿಯಿಂದ ಜಲ್ಲಿಕಟ್ಟನ್ನು ಹೊರಗಿಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತದೆ.

ಜಲ್ಲಿಕಟ್ಟುವಿನ ಜತೆ ನಿಷೇಧಗೊಂಡ ಇತರ ಕ್ರೀಡೆಗಳ ಬಗ್ಗೆ ಮೌನ ತಳೆಯುತ್ತದೆ. ಕರ್ನಾಟಕದ ವಿಷಯಕ್ಕೆ ಬಂದರೆ 1980ರ ದಶಕದಲ್ಲಿ ರಾಜ್ಯ ಜಾರಿಗೆ ತರಲು ಉದ್ದೇಶಿಸಿದ ಪಂಚಾಯತ್ ರಾಜ್ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ದೊರಕಲು ಅಂದಿನ ಪಂಚಾಯತ್ ರಾಜ್ ಸಚಿವರು ರಾಷ್ಟ್ರಪತಿ ಭವನದ ಎದುರು ಧರಣಿ ಹೂಡಬೇಕಾಗುತ್ತದೆ. ಸದ್ಯ ಬೆಂಗಳೂರು ಮಹಾನಗರ ಪಾಲಿಕೆಯ ಸುಧಾರಣೆಗೆ ಸಂಬಂಧಿಸಿದ ಕರ್ನಾಟಕದ ಕಾಯ್ದೆಯ ವಿಚಾರದಲ್ಲಿ ರಾಜ್ಯ ಸರ್ಕಾರ  ಅದೆಷ್ಟು ಬಾರಿ ಸಮಜಾಯಿಸಿ ನೀಡಿದರೂ ಅದಕ್ಕೆ ರಾಷ್ಟ್ರಪತಿಗಳ ಅಂಕಿತ ಬೀಳುವುದಿಲ್ಲ.

ಭಾರತೀಯ ಒಕ್ಕೂಟದಲ್ಲಿ ತಾನಿರುವುದು ತಾನು ದೇಶಕ್ಕೆ ಮಾಡುತ್ತಿರುವ ಉಪಕಾರ ಎಂಬಂತೆ ಮೊದಲಿನಿಂದಲೂ ತಮಿಳುನಾಡು ವರ್ತಿಸುತ್ತಿರುವುದು ಮತ್ತು ಅದಕ್ಕೆ ಅನುಗುಣವಾಗಿ ಆ ರಾಜ್ಯದ ವಿಷಯದಲ್ಲಿ ಕೇಂದ್ರ ಸರ್ಕಾರ ವಿಶೇಷ ಆಸ್ಥೆ ತೋರುವುದು ಬಹಳ ಕಾಲದಿಂದ ನಡೆದಿದೆ. ಇಷ್ಟು ಸಮಯ ಕೇಂದ್ರ ಸರ್ಕಾರ ಮತ್ತು ನೆರೆ ರಾಜ್ಯಗಳೊಂದಿಗೆ ಸೆಣಸುತ್ತಿದ್ದ ತಮಿಳುನಾಡು ಈ ಬಾರಿ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಸವಾಲು ಹಾಕಿದೆ. ಸಂಸ್ಕೃತಿಯ ಹೆಸರಿನಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ, ದೇಶಪ್ರೇಮದ ಹೆಸರಲ್ಲಿ ಏನು ಮಾಡಿದರೂ ನಡೆಯುತ್ತದೆ.

ಈ ಜಲ್ಲಿಕಟ್ಟು ವಿದ್ಯಮಾನದ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳು ಎತ್ತಬೇಕಾಗಿದ್ದ ಹಲವು ಮಹತ್ವದ ಪ್ರಶ್ನೆಗಳಿದ್ದವು. ಅವು ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದವು.  ಕೇಂದ್ರ ಸರ್ಕಾರದ ತಾರತಮ್ಯ ನೀತಿಗೆ ಸಂಬಂಧಿಸಿದವು. ಒಂದು ರಾಜ್ಯದ ಜನ ಸಂವಿಧಾನವನ್ನು ಧಿಕ್ಕರಿಸಿ ಇಡೀ ವ್ಯವಸ್ಥೆಯನ್ನು ಬ್ಲ್ಯಾಕ್‌ಮೇಲ್ ಮಾಡುವುದಕ್ಕೆ ಸಂಬಂಧಿಸಿದವು. ಇಂತಹ  ಪ್ರಶ್ನೆಗಳನ್ನು ಯಾರೂ ಎತ್ತಲಿಲ್ಲ. ಬದಲಿಗೆ ಕರ್ನಾಟಕ ಮತ್ತು ಆಂಧ್ರ ಪ್ರದೇಶ ತಮಿಳುನಾಡಿನ ಜನಾವೇಶವನ್ನು ತಮ್ಮ ತಮ್ಮ ನೆಲಗಳಲ್ಲೂ ಸೃಷ್ಟಿಸುವ ಅಪಾಯಕಾರಿ ಪ್ರಯತ್ನಕ್ಕೆ ಕೈಹಾಕಿವೆ.

ಆಂಧ್ರಪ್ರದೇಶದಲ್ಲಿ ಅದು ಅದೃಷ್ಟವಶಾತ್ ಸಾಧ್ಯವಾಗಿಲ್ಲ.  ಆದರೆ   ಕಂಬಳ ಉಳಿಸುವ ಹೆಸರಿನಲ್ಲಿ ತಮಿಳುನಾಡನ್ನು ಅನುಕರಿಸುವ ಅನಿಷ್ಟಕರ ಮತ್ತು ಅಪ್ರಬುದ್ಧ ಪ್ರಯತ್ನ ಕರ್ನಾಟಕದಲ್ಲಿ ನಡೆಯುತ್ತಿದೆ. ಇದಕ್ಕೆ ಮುಖ್ಯಮಂತ್ರಿಗಳೂ ಸೇರಿದಂತೆ ಸರ್ಕಾರವೂ ಧ್ವನಿಗೂಡಿಸಿರುವುದು ದುರದೃಷ್ಟಕರ. ಕಂಬಳ, ಜಲ್ಲಿಕಟ್ಟುಗಿಂತ ತುಸು ಭಿನ್ನವಾಗಿರಬಹುದು. ಆದರೆ ಕರ್ನಾಟಕದ ಅಸ್ಮಿತೆಯು ಪಾಳೇಗಾರಿ-ಜಮೀನ್ದಾರಿ ಸಂಸ್ಕೃತಿಯ ಪಳೆಯುಳಿಕೆಯಾಗಿ ಬಂದಿರುವ ಕಂಬಳ ಉಳಿಯುತ್ತದೋ  ಬಿಡುತ್ತದೋ ಎನ್ನುವುದರ ಮೇಲೆ ಖಂಡಿತ ನಿರ್ಣಯವಾಗುವುದಿಲ್ಲ.  

ತಮಿಳುನಾಡಿನ ಜನೋನ್ಮಾದ, ಸುಗ್ರೀವಾಜ್ಞೆ, ಕಾಯ್ದೆ ತಿದ್ದುಪಡಿ ಮುಂತಾದ ಪ್ರಹಸನಗಳು ಇಲ್ಲಿ ಪುನರಾವರ್ತನೆ ಆಗದೆ ಕರ್ನಾಟಕ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿದ್ದರೆ ಅದು ಕನ್ನಡ ಮಣ್ಣಿನ ಅಸ್ಮಿತೆ ಕಾಯ್ದುಕೊಳ್ಳುವಲ್ಲಿ  ದೊಡ್ಡ ಕೊಡುಗೆಯಾಗುತ್ತಿತ್ತು. ತಮಿಳುನಾಡನ್ನು ಅನುಕರಿಸುವ ಮೂಲಕ ಕರ್ನಾಟಕ ಇದ್ದ ಗುಣವನ್ನೂ ಕಳೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT