ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ?

Last Updated 21 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಹಗರಣವೊಂದರಲ್ಲಿ ಸರ್ಕಾರದ ಪಾತ್ರವಿರುವ ಬಗ್ಗೆ ಭಾರತದ ಮಹಾಲೇಖಪಾಲರು  ಬಹಿರಂಗ ಪಡಿಸುತ್ತಿರುವುದು ಇದೇ ಮೊದಲ ಸಲವೇನಲ್ಲ. ಆದರೆ ಇದೀಗ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸ್ವತಃ ಪ್ರಧಾನಿ ಮನಮೋಹನ್‌ಸಿಂಗ್ ಅವರೇ ಸಿಎಜಿ ವರದಿಯೊಂದನ್ನು ಸಂಸತ್ತಿನಿಂದ ದೂರವಿರಿಸಿದ್ದರು ಎಂಬ ಆರೋಪ ಮಾತ್ರ ತಬ್ಬಿಬ್ಬುಗೊಳಿಸುವಂತಹದ್ದಾಗಿದೆ. ಈ ಹಗರಣವನ್ನು ಲಘುವಾಗಿ ಪರಿಗಣಿಸುವಂತಹದ್ದೇನಲ್ಲ. ಬರೋಬ್ಬರಿ 1.45 ಲಕ್ಷ ಕೋಟಿ ರೂಪಾಯಿಗಳ ಅವ್ಯವಹಾರಕ್ಕೆ ಸಂಬಂಧಿಸಿದ್ದು !

ಸಂಸತ್ತಿನಲ್ಲಿ ಮನಮೋಹನ್‌ಸಿಂಗ್ ಅವರು ಮೇ 23ರಂದು ಮಾತನಾಡುತ್ತಾ ಈ ವಿಷಯಕ್ಕೆ ಸಂಬಂಧಿಸಿದ ಮಹಾಲೇಖಪಾಲರ (ಸಿಎಜಿ) ವರದಿಯು ಕೇವಲ ಪ್ರಾಥಮಿಕ ಹಂತದ ಕರಡು ಪ್ರತಿಯಷ್ಟೇ ಎಂದಿದ್ದರು. ಆದರೆ ಮೇ 11ರಂದೇ ಅಂತಿಮ ವರದಿಯನ್ನು ಸರ್ಕಾರ ಸ್ವೀಕರಿಸಿತ್ತು ಎಂಬ ಸಂಗತಿ ಇದೀಗ ಬಯಲಾಗಿದೆ.

ಹಾಗಿದ್ದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಸಂಸತ್ತಿನ ನೀತಿ ನಿಯಮಾವಳಿ ಸೇರಿದಂತೆ ಯಾವುದೂ ಪವಿತ್ರವಲ್ಲ. ಮನಮೋಹನ್ ಸಿಂಗ್ ಅವರಿಂದ ಯಾವ ಪಾರದರ್ಶಕತೆಯನ್ನು ನಾವು ನಿರೀಕ್ಷಿಸಿದ್ದೆವೋ ಅದು ಅಲ್ಲಿ ಇಲ್ಲವೇನೋ ಎಂದೆನಿಸತೊಡಗಿದೆ.

ಸಿಎಜಿ ವರದಿಯನ್ನು ಪಡೆದು ಅದನ್ನು ಸಂಸತ್ತಿನ ಮುಂದಿಡುವುದಷ್ಟೇ ಸರ್ಕಾರದ ಕೆಲಸ. ಸಿಎಜಿ ನೇರವಾಗಿ ಸಂಸತ್ತಿಗೆ ಜವಾಬ್ದಾರ ಸಂಸ್ಥೆಯಾಗಿದ್ದು, ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆಯೂ ಅದು ಹಾಗೆಯೇ ಮಾಡಿದೆ. ಇಲ್ಲಿ ಒಂದು ವಿಶೇಷವೆಂದರೆ ಕಲ್ಲಿದ್ದಲು ಖಾತೆ ನೇರವಾಗಿ ಮನಮೋಹನ್ ಸಿಂಗ್ ಅವರ ಅಡಿಯಲ್ಲಿಯೇ ಬರುತ್ತದೆ. ಇದೀಗ ಇಂತಹದ್ದೊಂದು ವರದಿಯನ್ನು ಸಂಸತ್ತಿನ ಮುಂದಿಡುವಲ್ಲಿ ಆಗಿರುವ ವಿಳಂಬದ ಬಗ್ಗೆ ಪ್ರಧಾನಿಯವರು ಯಾವ ತೆರನಾದ ಜಾಣ್ಮೆಯ ಉತ್ತರ ನೀಡುತ್ತಾರೆಂದು ಕಾದು ನೋಡಬೇಕಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಭ್ರಷ್ಟಾಚಾರ ತೀರಾ ಗಂಭೀರವಾಗಿರುವಂತಹದ್ದೇ ಹೌದು. ಕೆಲವು ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಈ ಹಗರಣದಿಂದ ಭಾರಿ ಲಾಭ ಮಾಡಿಕೊಂಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಇಂತಹ ಸಂಸ್ಥೆ ಮತ್ತು ವ್ಯಕ್ತಿಗಳು ಆಡಳಿತರೂಢ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿಯೇ ಸಹಾಯ ಮಾಡಿರಬಹುದೆನ್ನಲಾಗಿದೆ.

ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಗಾಂಧಿವಾದಿ ಅಣ್ಣಾ ಹಜಾರೆ ಅವರು ತೆಗೆದುಕೊಂಡ ನಿರ್ಧಾರವೊಂದು ನನಗೆ ತೀರಾ ನೋವುಂಟು ಮಾಡಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟವೊಂದು ತೀರಾ ಅಗತ್ಯವಾಗಿರುವಂತಹ ಈ ಸಂದರ್ಭದಲ್ಲಿ, ಅಣ್ಣಾ ಹಜಾರೆ ಅವರು ತಮ್ಮ ಹೋರಾಟದ ತಂತ್ರಗಾರಿಕೆಯನ್ನು ಬದಲಿಸಿದ್ದಾರೆ. 2014ರ ಚುನಾವಣೆಯಲ್ಲಿ ಪಾಲ್ಗೊಳ್ಳಲು ಅವರು ನಿರ್ಧರಿಸಿದಂತಿದೆ. ತಮಗೆ ಚುನಾವಣಾ ರಾಜಕಾರಣದಲ್ಲಿ ಸ್ಪರ್ಧಿಸುವ ಆಸಕ್ತಿ ಇಲ್ಲ ಎಂದು ಅವರು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ, ನಿಜ. ಆದರೂ ಅವರ ಜತೆಗಿರುವ ತಂಡದ ಸದಸ್ಯರ ಆಸಕ್ತಿ ಮಾತ್ರ ಕುತೂಹಲಕರವಾಗಿದೆ. ಆದರೆ ಇದೀಗ ಆ ಹಿಂದಿನ ಸಮಿತಿಯನ್ನು ಕೂಡಾ ಅಣ್ಣಾ ವಿಸರ್ಜಿಸಿದ್ದಾರೆ.

ನಿರ್ದಿಷ್ಟ ಗುರಿಯೊಂದಿಗೆ ಸಾಗುತ್ತಿದ್ದ ಇಂತಹದ್ದೊಂದು ಚಳವಳಿ ಮಾರ್ಗಮಧ್ಯದಲ್ಲಿಯೇ ನಿಂತು, ಅಲ್ಲಿಂದ ಎತ್ತಲೋ ಹೋಗಿಬಿಡುವುದು ಸಾರ್ವಜನಿಕರ ಮನದಲ್ಲಿ ತುಮುಲಕ್ಕೆ ಕಾರಣವಾಗುತ್ತದೆ. ಪ್ರಸಕ್ತ ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ಬಲಿಷ್ಠ ಲೋಕಪಾಲ ಮಸೂದೆ ಜಾರಿಗೆ ಬರುವುದು ಬೇಕಾಗಿಯೇ ಇಲ್ಲ ಎಂಬ ಮಾತಂತೂ ನಿಜ. ವಿರೋಧ ಪಕ್ಷಗಳು ಕೂಡಾ ಆಡಳಿತ ಪಕ್ಷದ ಧೋರಣೆಗಿಂತ ತೀರಾ ಭಿನ್ನವಾಗೇನೂ ಇಲ್ಲ. ಇಂತಹ ಸಂದರ್ಭದಲ್ಲಿ ಪ್ರಬಲ ಲೋಕಪಾಲ ಬೇಕೆಂಬ ಆಂದೋಲನ ಈ ದೇಶದ ಅನಿವಾರ್ಯವಾಗಿತ್ತು. ಈ ಚಳವಳಿ ಇನ್ನಷ್ಟೂ ಗಟ್ಟಿಯಾಗಬೇಕಿತ್ತು.

ಉಪವಾಸ ನಿರತರಾಗಿದ್ದ ಕೆಲವು ಹೋರಾಟಗಾರರ ಆರೋಗ್ಯ ಹದಗೆಟ್ಟಿದ್ದೂ  ಆಂದೋಲನ ಅರ್ಧದಲ್ಲಿಯೇ ನಿಂತು ಹೋದುದಕ್ಕೆ ಒಂದು ಕಾರಣ ಇರಬಹುದು. ಮುಂದಿನ ದಿನಗಳಲ್ಲಿ ಆಂದೋಲನವನ್ನು ವಿಭಿನ್ನ ರೀತಿಯಲ್ಲಿ ಕೊಂಡೊಯ್ಯುವ ಬಗ್ಗೆಯೂ ಚರ್ಚೆಗಳು ನಡೆದಿರಬಹುದು. ಹೋರಾಟಕ್ಕೆ ಸಂಬಂಧಿಸಿದಂತೆ ಭಿನ್ನ ಹಾದಿಯನ್ನು ಕಂಡು ಕೊಳ್ಳುವ ದಿಸೆಯಲ್ಲಿ ತಾತ್ಕಾಲಿಕವಾಗಿ ಇದು ತಂತ್ರಗಾರಿಕೆಯೂ ಇರಬಹುದು. ಅದೇನೇ ಇರಲಿ, ಉಪವಾಸವನ್ನೇ ಅಸ್ತ್ರವಾಗಿಸಿಕೊಳ್ಳುವುದು ಅದೆಷ್ಟು ಸರಿ ಎನ್ನುವ ಮಾತೂ ಇದೆ. ಮಹಾತ್ಮಾ ಗಾಂಧೀಜಿಯವರು ನಡೆಸುತ್ತಿದ್ದ ನಿರಶನ ಯಾರ ವಿರುದ್ಧವೂ ದ್ವೇಷದಿಂದ ಕೂಡಿರಲಿಲ್ಲ  ಎಂಬ ಅಂಶವನ್ನು ನಾವು ಮನದಟ್ಟು ಮಾಡಿಕೊಳ್ಳಬೇಕಿದೆ. ಆಂಗ್ಲರಿಂದ ವಿಮೋಚನೆ ಸಾಧಿಸುವುದು ಅವರ ಹೆಗ್ಗುರಿಯಾಗಿತ್ತು.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರು ತಮ್ಮ ಆದಾಯಕ್ಕೂ ಮೀರಿದ ಆಸ್ತಿ ಗಳಿಸಿದ್ದಾರೆಂಬ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಮುಂದುವರಿಸಬಾರದೆಂಬ ಆದೇಶ ಬಂದಾಗ, ಅದರ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ಸಿಬಿಐ ನಿರ್ಧರಿಸಿತು. ಸಿಬಿಐನ ಈ ನಿರ್ಧಾರದ ಬಗ್ಗೆ ಕೇಂದ್ರ ಸರ್ಕಾರ ಒಳಗೊಳಗೇ ಖುಷಿ ಪಟ್ಟಿರುವುದಂತೂ ಸ್ಪಷ್ಟ. ಲೋಕಸಭೆಯಲ್ಲಿ ಬಹುಮತ ತೋರಬೇಕಿದ್ದರೆ ಮಾಯಾವತಿಯವರ ಕೈಯಲ್ಲಿರುವ 21 ಮತಗಳ ಅಗತ್ಯವಿದೆ ಎಂಬ ಸಂಗತಿ ಮನಮೋಹನ್ ಸಿಂಗ್ ಅವರಿಗೆ ಗೊತ್ತಿರುವಂತಹದ್ದು ತಾನೆ.

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಎಜಿ ನೀಡಿದ ವರದಿಯ ಬಗ್ಗೆ ಯುಪಿಎ ಸರ್ಕಾರ ತಳೆದಿರುವ ಧೋರಣೆ ಸರಿಯಲ್ಲ ಎಂಬುದು ಗೊತ್ತಾದರೂ, ಮುಂದಿನ ಸುಮಾರು 22 ತಿಂಗಳ ಕಾಲ ಕಾಂಗ್ರೆಸ್ ಅಧಿಕಾರಕ್ಕೆ ಅಂಟಿಕೊಂಡಿರುತ್ತದೆ ಎಂಬುದಂತೂ ನಿಚ್ಚಳ. ಹೌದು, ಅಣ್ಣಾ ಅವರು ರಾಜಕಾರಣಕ್ಕೆ ಧುಮುಕಲು ಇದು ಸಕಾಲ. ಆದರೆ ಕಳೆದ ಹದಿನೆಂಟು ತಿಂಗಳ ಕಾಲ ಮಾಧ್ಯಮದವರನ್ನು ಸೂಜಿಗಲ್ಲಂತೆ ಸೆಳೆದಿದ್ದ ಚಳವಳಿಯ `ಬೂದಿ~ಯಿಂದ ಹೊಸತೊಂದು ರಾಜಕೀಯ ಪಕ್ಷ ಧುತ್ತೆನ್ನಲು ಸಾಧ್ಯವಿದೆಯೇ. ನಿಜವಾಗಿ ಹೇಳಬೇಕೆಂದರೆ ಈ ಚಳವಳಿಯ ಮಹತ್ವದ ಸಾಧನೆಯಂತೂ ಏನು ಕಂಡು ಬರುತ್ತಿಲ್ಲ. ಆದರೆ ನಾಗರಿಕ ಸಮಾಜದಲ್ಲಿ ಒಂದು ಎಚ್ಚರಿಕೆಯ ಗಂಟೆಯಾಗಿ ಮೊಳಗಿದ, ಅರಿವಿನ ಬೆಳಕಾಗಿ ಹರಿದ ಅಣ್ಣಾ ಆಂದೋಲನದ ಕೊಡುಗೆಯನ್ನು ಗೌಣವಾಗಿ ಕಾಣುವಂತೆಯೇ ಇಲ್ಲ.

ಪ್ರಸಕ್ತ ಗೊಂದಲಮಯ ಪರಿಸ್ಥತಿಯಲ್ಲಿ ಆಡಳಿತಗಾರರ ಬಗ್ಗೆ ಇರುವ ಅಸಹನೀಯತೆಯನ್ನು ಮತವಾಗಿ ಪರಿವರ್ತಿಸುವಲ್ಲಿ ಅಣ್ಣಾ ಯಶಸ್ಸು ಸಾಧಿಸುತ್ತಾರೋ ಎಂಬುದನ್ನು ಕಾದುನೋಡಬೇಕಿದೆ. ಪ್ರಸಕ್ತ ಇರುವ ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ದೊಡ್ಡ ಪಕ್ಷಗಳ ಎದುರು ಪರ್ಯಾಯ ಶಕ್ತಿಯೊಂದರ ಅಗತ್ಯ ಎದ್ದು ಕಾಣುತ್ತಿರುವುದು ಅಣ್ಣಾ ಪಾಲಿಗೆ ಸಕಾರಾತ್ಮಕವಾಗಬಹುದು. ಜನ ಬದಲಾವಣೆ ಬಯಸುತ್ತಿದ್ದಾರೆ. ಆದರೆ ಆ ಬದಲಾವಣೆ ಕಾಂಗ್ರೆಸ್ ಅಥವಾ ಬಿಜೆಪಿಗಳ ಮಟ್ಟದಲ್ಲಿಯೇ ಅಲ್ಲ ಎಂಬುದನ್ನೂ ನಾವು ತಿಳಿದುಕೊಳ್ಳಬೇಕಿದೆ.

ಹಿಂದೆ ಗಾಂಧಿವಾದಿ ಜಯಪ್ರಕಾಶ್ ನಾರಾಯಣ್ ಅವರು ಇಂತಹದೇ ಪ್ರಸಂಗ ಎದುರಾದಾಗ ಆಗಿನ ಜನಸಂಘದ ಜತೆಗೂ ಕೈಜೋಡಿಸಿದ್ದರು. ಆಗ ಜನಸಂಘದವರು ತಾವು ಯಾವುದೇ ಕಾರಣಕ್ಕೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜತೆಗೆ ಸಂಬಂಧವಿರಿಸಿಕೊಳ್ಳುವುದಿಲ್ಲ ಎಂಬ ಆಶ್ವಾಸನೆ ನೀಡಿದ ಮೇರೆಗೆ ಜಯಪ್ರಕಾಶರು ಆ ನಿಲುವು ತೆಗೆದುಕೊಂಡಿದ್ದರು. ನಂತರದ ದಿನಗಳಲ್ಲಿ ಅವರು ಮೋಸ ಹೋಗಿದ್ದು ಗೊತ್ತಾಯಿತು ಬಿಡಿ. ಆದರೆ ಆ ಪ್ರಕ್ರಿಯೆಯ ನಡುವೆ ಜನಸಂಘವು ದೇಶದ ರಾಜಕಾರಣದ ಮುಖ್ಯವಾಹಿನಿಯಲ್ಲಿ ಪ್ರಮುಖ ಸ್ಥಾನವನ್ನೇ ಗಳಿಸಿಬಿಟ್ಟಿತು.

ಅಂದು ಜಯಪ್ರಕಾಶರು ಹಿಡಿದಿದ್ದಂತಹ ಜ್ಯೋತಿ ಇವತ್ತು ಅಣ್ಣಾ ಅವರ ಎದುರಲ್ಲಿದೆ. ಆದರೆ ಅಂದು ಜಯಪ್ರಕಾಶ ನಾರಾಯಣ್ ಅವರು ದೇಶದಾದ್ಯಂತ ಪ್ರವಾಸ ನಡೆಸಿದ್ದರು. ಆಗಿನ ಆಡಳಿತಗಾರರು ಪ್ರಜಾಸತ್ತೆಯ ಮೌಲ್ಯಗಳಿಗೆ ಧಕ್ಕೆ ಉಂಟು ಮಾಡುವಂತಹ ಶಕ್ತಿಯಾಗಿದ್ದಾರೆಂಬ ಸತ್ಯವನ್ನು ಜನಮನ ತಲುಪಿಸಲು ಪ್ರಯತ್ನಿಸಿದ್ದರು. ಅಂತಹ ಒಂದು ಶಕ್ತಿಯ ವಿರುದ್ಧ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಪರ್ಯಾಯ ಶಕ್ತಿಯ ಅಗತ್ಯವನ್ನು ಜನರಿಗೆ ಮನದಟ್ಟು ಮಾಡಿದ್ದರು.

ಪ್ರಸಕ್ತ ಅಣ್ಣಾ ಅವರು ಚುನಾವಣಾ ರಾಜಕಾರಣದಲ್ಲಿ ತೊಡಗಿಕೊಳ್ಳುವುದಾದರೆ ನಾನು ಅದಕ್ಕೆ ಯಾವುದೇ ಕಾರಣಕ್ಕೂ ವಿರೋಧಿಸುವುದಿಲ್ಲ. ಆದರೆ ಅಣ್ಣಾ ಅವರಲ್ಲಿಯೇ ಈ ಬಗ್ಗೆ ನಂಬಿಕೆಗೆ ಸಂಬಂಧಿಸಿದಂತೆ ಗೊಂದಲಗಳಿದ್ದಂತಿದೆ. ಇಂತಹ ಸಂದಿಗ್ಧದಲ್ಲಿ ಅವರು ಜನಪರ ಹೋರಾಟಗಾರರಾದ ಮೇಧಾ ಪಾಟ್ಕರ್ ಮತ್ತು ಅರುಣಾ ರಾಯ್ ಅವರೊಂದಿಗೆ ಚರ್ಚಿಸುವುದು ಉತ್ತಮ. ಅಂತಹವರೊಂದಿಗೆ ವಿಚಾರ ವಿನಿಮಯ ನಡೆಸುವುದು ಒಳ್ಳೆಯದು. ಹಿಂದೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿದಾಗಲೂ ಅಣ್ಣಾ ಅವರು ಆ ಇಬ್ಬರೊಂದಿಗೆ ಚರ್ಚಿಸಿದ್ದನ್ನು ನಾವು ಮರೆಯುವಂತಿಲ್ಲ. ಪ್ರಸಕ್ತ ದೇಶದಾದ್ಯಂತ ಹತ್ತು ಹಲವು ಸಣ್ಣಪುಟ್ಟ ಸಂಘಟನೆಗಳು ತಳಸ್ತರದಲ್ಲಿ ಜನಪರವಾದ ಕೆಲಸ ಮಾಡುತ್ತಿವೆ. ಅಂತಹ ಸಂಘಟನೆಗಳನ್ನೆಲ್ಲಾ ಒಗ್ಗೂಡಿಸಿಕೊಂಡು ಅದಕ್ಕೊಂದು `ಪ್ರವಾಹ~ದ ಸ್ವರೂಪ ಕೊಟ್ಟು ಮುನ್ನಡೆಸುವ ಸಾಧ್ಯತೆ ಅಣ್ಣಾ ಅವರಿಗಿದೆ.

ಅಂದು ತಮ್ಮ ನೇತೃತ್ವದ ಆಂದೋಲನವು ಚುನಾವಣೆಯಲ್ಲಿ ಜಯಭೇರಿ ಗಳಿಸುವವರೆಗೂ ಜಯಪ್ರಕಾಶ್ ನಾರಾಯಣರು ಯಾವುದೇ ಪಕ್ಷದ ಸದಸ್ಯರಾಗಿರಲಿಲ್ಲ. ಆದರೂ ಅಂದು ತಮ್ಮ ಚಳವಳಿಯ ಮೂಲಕ ಎದ್ದು ನಿಂತವರೆಲ್ಲರೂ ಒಂದೇ ಚಿಹ್ನೆಯ ಮೇಲೆ ಸ್ಪರ್ಧಿಸಬೇಕೆಂಬ ಹಂಬಲವನ್ನು ಜಯಪ್ರಕಾಶ್ ನಾರಾಯಣರು ಹೊಂದಿದ್ದರು ಎಂಬ ಮಾತಂತೂ ನಿಜ. ಕೊನೆಗೂ ಆಗ ಚುನಾವಣೆಯಲ್ಲಿ ಗೆದ್ದ ಕೆಲವರು ತಮ್ಮ ನಿರೀಕ್ಷೆಯ ಮಟ್ಟದವರಲ್ಲ ಎಂಬ ಸತ್ಯವೂ ಜೆಪಿ ಅವರ ಅನುಭವಕ್ಕೆ ಬಂದಿತ್ತು. ಆಗ ಗೆದ್ದ ಕೆಲವರು ದೊಡ್ಡ ಮಟ್ಟದ ಬದಲಾವಣೆ ಬಯಸುವವರಾಗಿರಲಿಲ್ಲ. ಕೈಗೆಟುಕಿದ ಅಧಿಕಾರವನ್ನು, ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಂಡಿದ್ದನ್ನೂ ಅವರು ಕಂಡರು.

ನಂತರದ ದಿನಗಳಲ್ಲಿ ಜಯಪ್ರಕಾಶರ ಆರೋಗ್ಯ ಕೆಟ್ಟಿತು. ಮೊದಲಿನಂತೆ ಜನರನ್ನು ತಲುಪಲು ಅವರಿಂದ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಬಹಳ ಮುಖ್ಯವಾಗಿ ನಾನು ಬಯಸುವುದೇನೆಂದರೆ ಅಣ್ಣಾ ಅವರು ತಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಲಿ.

ತಾವು ನಂಬಿದ ಪ್ರಾಮಾಣಿಕತೆಯ ಮೌಲ್ಯಗಳಿಗೆ ಹೆಚ್ಚು ಬದ್ಧತೆ ಹೊಂದಿರುವವರನ್ನೇ ಆಣ್ಣಾ ತಮ್ಮ ಜತೆಗಿಟ್ಟುಕೊಳ್ಳಲಿ. ಅಗತ್ಯವೆನಿಸಿದರೆ ಅವರು ಇನ್ನೊಂದಷ್ಟು ಕಾಲ ತೆಗೆದುಕೊಳ್ಳಲಿ. ಆದರೆ ಎರಡನೇ ಸಲ ವೈಫಲ್ಯದ ಹಾದಿಯಲ್ಲಿ ನಡೆಯುವುದು ಮಾತ್ರ ಬೇಡ.  ಪ್ರಸಕ್ತ ರಾಜಕಾರಣದ ಮುಂಚೂಣಿಯಲ್ಲಿರುವವರು ರಾಜಕಾರಣಕ್ಕೆ ಕೆಟ್ಟ ಹೆಸರು ತಂದಿದ್ದಾರೆ ಎಂದ ಮಾತ್ರಕ್ಕೆ ರಾಜಕಾರಣವೇ ಕೆಟ್ಟದ್ದೆಂದು ದೂರ ಸರಿಯುವುದು ಬೇಡ.

(ನಿಮ್ಮ ಅಭಿಪ್ರಾಯ ತಿಳಿಸಿ: editpagefeedback@prajavani.co.in )
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT