ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿಯಲ್ಲಿ ಒಂದು ‘ಭಯೋತ್ಪಾದನೆ’ ಪ್ರಕರಣ...

Last Updated 26 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನಾನು ಈ ಲೇಖನ ಬರೆದದ್ದು ಟರ್ಕಿಯ ಇಸ್ತಾಂಬುಲ್‌ನಲ್ಲಿ ಇದ್ದಾಗ. ಭಯೋತ್ಪಾದನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯೊಂದರ ವೀಕ್ಷಕನಾಗಿ ನಾನು ಅಲ್ಲಿ ಇದ್ದೆ. ‘ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಟರ್ಕಿ’ಯ ಅಧ್ಯಕ್ಷ ಹಾಗೂ ನಿರ್ದೇಶಕ ವಿಚಾರಣೆ ಎದುರಿಸುತ್ತಿದ್ದಾರೆ. ನಾನು ಕೂಡ ಈ ಜಾಗತಿಕ ಚಳವಳಿಯ ಒಂದು ಭಾಗ, ನಾನು ಆಮ್ನೆಸ್ಟಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಎಂಬುದು ಓದುಗರಲ್ಲಿ ಕೆಲವರಿಗೆ ಗೊತ್ತಿರಬಹುದು. ಭಯೋತ್ಪಾದಕ ಸಂಘಟನೆಯೊಂದರ ಸದಸ್ಯರಾಗಿದ್ದಾರೆ ಎಂಬ ಆರೋಪ ಹೊತ್ತುಕೊಂಡು, ವಿಚಾರಣೆ ಎದುರಿಸುತ್ತಿರುವವರ ಪೈಕಿ ನನ್ನ ಇಬ್ಬರು ಸಹೋದ್ಯೋಗಿಗಳು- ಇದಿಲ್ ಅಸೆರ್ ಮತ್ತು ತನೆರ್ ಕಿಲಿಕ್- ಕೂಡ ಸೇರಿದ್ದಾರೆ.

ಇದಿಲ್‌ ಅವರಿಗೆ ಕೆಲವು ವಾರಗಳ ಹಿಂದೆ ಜಾಮೀನು ನೀಡಲಾಯಿತು. ನಾನು ಅವರನ್ನು ಕೋರ್ಟ್‌ ಹೊರಗಡೆ ಭೇಟಿಯಾಗಿದ್ದೆ. ಆದರೆ ತನೆರ್ ಅವರು, ಇಸ್ತಾಂಬುಲ್‌ನಿಂದ ಅಂದಾಜು 500 ಕಿ.ಮೀ. ದೂರದಲ್ಲಿ ಇರುವ ಇಜ್ಮಿರ್‌ ಎಂಬಲ್ಲಿ ಜೈಲಿನಲ್ಲಿದ್ದಾರೆ. ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗಿಯಾದರು. ಅವರು ಜೂನ್‌ನಿಂದಲೂ ಜೈಲಿನಲ್ಲಿ ಇದ್ದಾರೆ. ಡಿಜಿಟಲ್‌ ಭದ್ರತೆಗೆ ಸಂಬಂಧಿಸಿದಂತೆ ಒಂದು ಹೋಟೆಲ್‌ನಲ್ಲಿ ನಡೆದ ಕಾರ್ಯಾಗಾರವೊಂದರಲ್ಲಿ ಪಾಲ್ಗೊಂಡ ನಂತರ ಈ ಕಾರ್ಯಕರ್ತರ ಮೇಲೆ ಆರೋಪ ಹೊರಿಸಲಾಯಿತು. ‘ಈ ಕಾರ್ಯಾಗಾರವು ಒಂದು ರಹಸ್ಯ ಸಭೆಯಾಗಿತ್ತು, ಗೂಢಚರ್ಯೆ ನಡೆಸಲು ಮತ್ತು ಕ್ರಾಂತಿಯಲ್ಲಿ ಪಾಲ್ಗೊಳ್ಳಲು ಅದನ್ನು ಆಯೋಜಿಸಲಾಗಿತ್ತು’ ಎಂದು ಸರ್ಕಾರ ಅತಾರ್ಕಿಕ ವಾದ ಮುಂದಿಡುತ್ತಿದೆ. ಜರ್ಮನಿ ಹಾಗೂ ಸ್ವೀಡನ್ನಿನ ತಲಾ ಒಬ್ಬರು ಕೂಡ ಇದೇ ವಿಚಾರಣೆ ಎದುರಿಸುತ್ತಿದ್ದಾರೆ. ಅವರಿಬ್ಬರೂ ಜಾಮೀನು ಪಡೆದಿದ್ದಾರೆ.

ಆರೋಪಗಳಲ್ಲಿ ಗಟ್ಟಿಯಾದುದು ಏನೂ ಇಲ್ಲ. ತನೆರ್ ಅವರು ಬೈಲಾಕ್ ಎನ್ನುವ ಆ್ಯಪ್‌ ಅನ್ನು ತಮ್ಮ ಫೋನಿಗೆ ಡೌನ್‌ಲೋಡ್‌ ಮಾಡಿಕೊಂಡಿದ್ದರು ಎಂಬುದು ಪ್ರಮುಖ ಆರೋಪ. ವಾಟ್ಸ್‌ಆ್ಯಪ್‌ನಂತೆಯೇ ಈ ಆ್ಯಪ್‌ ಮೂಲಕ ಕಳುಹಿಸುವ ಸಂದೇಶಗಳನ್ನು ಮೂರನೆಯ ವ್ಯಕ್ತಿಯಿಂದ ಓದಲು ಸಾಧ್ಯವಿಲ್ಲ. ಕಳೆದ ವರ್ಷ ನಡೆದ ಕ್ರಾಂತಿಯ ಯತ್ನಕ್ಕೂ ಮೊದಲು, ಕ್ರಾಂತಿಯನ್ನು ಬೆಂಬಲಿಸುವವರ ಗುಂಪು ಈ ಆ್ಯಪ್‌ ಬಳಕೆ ಮಾಡಿತ್ತು ಎಂದು ಟರ್ಕಿಯ ಸರ್ಕಾರ ಹೇಳುತ್ತಿದೆ. ಆದರೆ ತನೆರ್ ಕುರಿತ ಆರೋಪಕ್ಕೆ ಆಧಾರಗಳಿಲ್ಲ. ಆಮ್ನೆಸ್ಟಿ ಸಂಸ್ಥೆಯು ತನೆರ್ ಅವರ ಫೋನನ್ನು ಎರಡು ವಿಧಿವಿಜ್ಞಾನ ಪರೀಕ್ಷೆಗಳಿಗೆ ಒಳಪಡಿಸಿತು. ಅವುಗಳಲ್ಲಿ ಒಂದನ್ನು ಅಂತರರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಸಂಸ್ಥೆ ಸೆಕ್ಯುರ್ ವರ್ಕ್ಸ್‌ ನಡೆಸಿತ್ತು. ಅವರ ಫೋನಿನಲ್ಲಿ ಈ ಆ್ಯಪ್‌ ಇರಲಿಲ್ಲ ಎಂಬುದು ಪರೀಕ್ಷೆಯಿಂದ ಗೊತ್ತಾಗಿದೆ. ಇದನ್ನು ತಜ್ಞರೊಬ್ಬರು ವಿಚಾರಣೆ ವೇಳೆ ಕೋರ್ಟ್‌ನಲ್ಲಿ ಹೇಳಿದ್ದಾರೆ. ಆ ಸಂದರ್ಭದಲ್ಲಿ ನಾನೂ ಅಲ್ಲಿದ್ದೆ. ಅದರ ಬಗ್ಗೆ ತುಸು ಹೆಚ್ಚಿನ ವಿವರ ನೀಡುವೆ.

ನಾವು ಅಲ್ಲಿನ ‘ಜಸ್ಟಿಸ್ ಪ್ಯಾಲೇಸ್’ ಹೊರಗಡೆ ಬೆಳಿಗ್ಗೆ ಪ್ರತಿಭಟನೆ ಆಯೋಜಿಸಿದ್ದೆವು. ಈ ಕಟ್ಟಡವು ಆಧುನಿಕವಾಗಿದೆ ಹಾಗೂ ವೃತ್ತಾಕಾರದಲ್ಲಿ ಇದೆ. ಕೋರ್ಟ್‌ ಕೊಠಡಿಗಳು ಇರುವುದು ಇಲ್ಲೇ. ಅಲ್ಲಿ ವಿಪರೀತಿ ಚಳಿ ಹಾಗೂ ಗಾಳಿ ಇದ್ದರೂ ನಾಗರಿಕ ಸಮಾಜದ ವಿವಿಧ ಗುಂಪುಗಳು ಮತ್ತು ಸಾರ್ವಜನಿಕರು ಪ್ರತಿಭ ಟನೆಯಲ್ಲಿ ಪಾಲ್ಗೊಂಡಿದ್ದರು.  ಆಮ್ನೆಸ್ಟಿ ಸಂಸ್ಥೆಯ ಬ್ರೆಜಿಲ್ ಮತ್ತು ಬ್ರಿಟನ್ನಿನ ಅಧ್ಯಕ್ಷರು, ಐರೂಪ್ಯ ಒಕ್ಕೂಟ ಮತ್ತು ಅಮೆರಿಕದ ರಾಜತಾಂತ್ರಿಕರು ಅಲ್ಲಿ ವೀಕ್ಷಕರಾಗಿ ಬಂದಿದ್ದರು.

ಮಾನವ ಹಕ್ಕುಗಳ ಪರವಾಗಿ ಇರುವವರಿಗೆ ಬೆಂಬಲ ವ್ಯಕ್ತಪಡಿಸಿ ಒಂದು ಹೇಳಿಕೆಯನ್ನು ಓದಲಾಯಿತು. ತನೆರ್ ಅವರ 19 ವರ್ಷ ವಯಸ್ಸಿನ ಮಗಳು ಗುಲ್ನಿಹಾಲ್ ನಮ್ಮ ಜೊತೆ ಇದ್ದರು. ನಾವೆಲ್ಲರೂ ಉತ್ಸಾಹದಿಂದ ಇದ್ದೆವು. ವಕೀಲರು ಮತ್ತು ಇತರ ಅಧಿಕಾರಿಗಳ ಲ್ಲದೆ, ಅಂದಾಜು 120 ಜನ ಕೋರ್ಟ್‌ನಲ್ಲಿ ಕೂರಬಹುದು. ಅಲ್ಲಿನ ಪ್ರತಿ ಕುರ್ಚಿಯಲ್ಲೂ ಜನ ಕುಳಿತಿದ್ದರು. ಕೆಲವರು ಹೊರಗಡೆ ನಿಂತಿದ್ದರು.

ಕೋರ್ಟ್‌ನಲ್ಲಿ ಮೂವರು ನ್ಯಾಯಾಧೀಶರಿದ್ದರು- ಇಬ್ಬರು ಪುರುಷರು, ಒಬ್ಬ ಮಹಿಳೆ. ಅವರು ಕೆಂಪು ಬಣ್ಣದ ಕಾಲರ್‌ ಇರುವ ಬಟ್ಟೆ, ಕಪ್ಪು ಬಣ್ಣದ ನಿಲುವಂಗಿ ಧರಿಸಿದ್ದರು. ಭಾರತದಲ್ಲಿ ನ್ಯಾಯಾಧೀಶರು ಕುಳಿತುಕೊಳ್ಳುವಂತೆ, ಅವರು ಕೂಡ ಎತ್ತರದ ಸ್ಥಾನದಲ್ಲಿ ಕುಳಿತಿದ್ದರು. ಆಶ್ಚರ್ಯದ ಸಂಗತಿಯೆಂದರೆ, ಪ್ರಾಸಿಕ್ಯೂಟರ್‌ ಕೂಡ ಅವರ ಜೊತೆಯಲ್ಲೇ ಒಂದು ಕಡೆ ಕುಳಿತಿದ್ದರು. ಆರು ತಾಸಿಗೂ ಹೆಚ್ಚು ಕಾಲ ನಡೆದ ವಿಚಾರಣೆಯ ವೇಳೆ ಪ್ರಾಸಿಕ್ಯೂಟರ್‌ ಒಮ್ಮೆ ಮಾತ್ರ ಮಾತನಾಡಿದ್ದು ನನಗೆ ಕೇಳಿಸಿತು.

ಬಹುಪಾಲು ಅವಧಿಯನ್ನು ತನೆರ್ ಪರ ವಕೀಲರು ತೆಗೆದುಕೊಂಡರು. ಬೈಲಾಕ್‌ ಆ್ಯಪ್ ಬಗ್ಗೆ ವಿವರ ನೀಡಲು ತನೆರ್ ಅವರ ವಕೀಲರು ಒಬ್ಬ ತಜ್ಞನನ್ನು ಕರೆಸಿದ್ದರು. ಅವರು ಬೈಲಾಕ್‌ ಆ್ಯಪ್‌ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಫೋನಿನಲ್ಲಿನ ತಂತ್ರಾಂಶದ ನಕಲು ಪ್ರತಿಯನ್ನು ತೆಗೆದುಕೊಂಡು ಪೊಲೀಸರು ಫೋನನ್ನು ತನೆರ್ ಅವರಿಗೆ ಹಿಂದಿರುಗಿಸಿದ್ದರು. ತನೆರ್ ಅವರು ಬೈಲಾಕ್ ಅನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದ ಸಾಧ್ಯತೆಯೇ ಇಲ್ಲ ಎಂದು ಆ ತಜ್ಞ ಸ್ಪಷ್ಟವಾಗಿ ಹೇಳಿದ. ಕ್ರಾಂತಿಯ ಯತ್ನ ನಡೆದ ನಂತರದ ಅವಧಿಯವರೆಗೆ ತಾನು ಬೈಲಾಕ್‌ ಬಗ್ಗೆ ಕೇಳಿರಲೇ ಇಲ್ಲ ಎಂದು ತನೆರ್ ಹೇಳಿದರು. ಇಷ್ಟೆಲ್ಲ ಇದ್ದರೂ, ಮೊದಲ ವಿಚಾರಣೆಯ ವೇಳೆ ತನೆರ್ ಅವರಿಗೆ ಜಾಮೀನು ಸಿಗಲಿಲ್ಲ. ‘ಮೂರು ತಿಂಗಳಿಗಿಂತ ಹೆಚ್ಚು ಸಮಯ ಕಳೆದರೂ ಪ್ರಾಸಿಕ್ಯೂಟರ್‌ ಬಳಿ ಯಾವುದೇ ಸಾಕ್ಷ್ಯಗಳು ಇಲ್ಲ. ಹಾಗಾಗಿ, ತನೆರ್ ವಿರುದ್ಧದ ಪ್ರಕರಣ ವಜಾಗೊಳಿಸಲು ನ್ಯಾಯಾಧೀಶರಿಗೆ ಅರ್ಧ ಗಂಟೆಗಿಂತ ಹೆಚ್ಚು ಹೊತ್ತು ಬೇಕಾಗುವುದಿಲ್ಲ’ ಎಂದು ನನ್ನ ಸಹೋದ್ಯೋಗಿ ಜಾನ್ ಡಾಲ್‌ಹ್ಯೂಸೆನ್‌ ಅಂದಿನ ವಿಚಾರಣೆ ಪೂರ್ಣಗೊಂಡ ನಂತರ ಹೇಳಿದ್ದರು.

ಆ ಪ್ರಕರಣ ವಜಾ ಆಗಲಿಲ್ಲ. ಅದರ ವಿಚಾರಣೆ ಮುಂದುವರಿಯಿತು. ನಾನು ಮಾತನಾಡುತ್ತಿರುವುದು ಮುಂದುವರಿದ ವಿಚಾರಣೆ ಬಗ್ಗೆ. ನಡುವಿನಲ್ಲಿ ಕುಳಿತಿದ್ದ ಹಿರಿಯ ನ್ಯಾಯಾಧೀಶರಿಗೆ ಕೆಲವು ಪ್ರಶ್ನೆಗಳಿದ್ದವು. ಆ ಇಡೀ ದಿನದ ವಿಚಾರಣೆ ಸತ್ಯದ ಪರವಾಗಿದೆ ಎಂದು ನಮಗೆ ಅನಿಸಿತು. ಕೆಲವು ಇಂಗ್ಲಿಷ್ ಪದಗಳನ್ನು ಹೊರತುಪಡಿಸಿದರೆ, ಇಡೀ ವಿಚಾರಣೆ ಟರ್ಕಿಷ್‌ ಭಾಷೆಯಲ್ಲಿ ನಡೆಯಿತು (ಐ.ಪಿ. ವಿಳಾಸ, ಬೈಲಾಕ್ ಎಂಬ ಪದಗಳು ಇಂಗ್ಲಿಷ್‌ನಲ್ಲಿ ಇದ್ದವು. ಆದರೆ ತಜ್ಞರು ನೀಡಿದ ವಿವರಣೆ ಮಾಡಿದ ಪರಿಣಾಮವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿರಲಿಲ್ಲ). ತಮ್ಮ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲವಾದ ಕಾರಣ ತಮ್ಮನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ತನೆರ್ ನೇರವಾಗಿ, ನಿರ್ಭಾವುಕವಾಗಿ ಮನವಿ ಮಾಡಿಕೊಂಡರು. ಇಡೀ ದಿನದ ವಿಚಾರಣೆಯಲ್ಲಿ ಪ್ರಾಸಿಕ್ಯೂಟರ್‌ ಮಾತನಾಡಿದ್ದನ್ನು ನಾನು ಕೇಳಿಸಿಕೊಂಡಿದ್ದು ಒಮ್ಮೆ ಮಾತ್ರ. ಸರ್ಕಾರವು ಜಾಮೀನು ನೀಡುವುದನ್ನು ವಿರೋಧಿಸುತ್ತದೆ ಎಂದಷ್ಟೇ ಅವರು ಹೇಳಿದ್ದು.

ಅಂದಾಜು ಆರು ತಾಸುಗಳ ವಿಚಾರಣೆಯ ನಂತರ ಕೋರ್ಟ್‌ ಕೊಠಡಿಯಿಂದ ವಕೀಲರು ಮತ್ತು ಆರೋಪಿಗಳನ್ನು ಹೊರತುಪಡಿಸಿ ಉಳಿದವರೆಲ್ಲರನ್ನೂ ಹೊರಗೆ ಕಳುಹಿಸಲಾಯಿತು. ಹೊರಗಡೆ ಕಾಯುವಂತೆ ನಮಗೆ ಸೂಚಿಸಲಾಯಿತು. ಜಾಮೀನು ನಿರಾಕರಿಸಲಾಗಿದೆ ಎಂದು ನಮಗೆ ನಂತರ ತಿಳಿಸಲಾಯಿತು. ಇದು ನಮ್ಮಲ್ಲರನ್ನೂ ಆಘಾತಕ್ಕೆ ಈಡು ಮಾಡಿತು. ಅದರಲ್ಲೂ, ಯುವತಿ ಗುಲ್ನಿಹಾಲ್ ತೀರಾ ಆಘಾತಕ್ಕೆ ಒಳಗಾದಳು.

ನಾನು ಹಲವು ವರ್ಷಗಳ ಕಾಲ ನ್ಯಾಯಾಂಗದ ಕಲಾಪಗಳನ್ನು ವರದಿ ಮಾಡಿದ್ದೇನೆ. ಆದರೆ, ಮಾನವ ಹಕ್ಕುಗಳ ಪರವಾಗಿ ಹೋರಾಡುತ್ತಿರುವವರನ್ನು ಇಷ್ಟೊಂದು ನೇರವಾಗಿ ಹತ್ತಿಕ್ಕಿದ್ದನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಅದನ್ನು ಭಯೋತ್ಪಾದನೆಯ ಜೊತೆ ಸಮೀಕರಿಸಿದ್ದನ್ನು ನಾನು ಈ ಮಟ್ಟದಲ್ಲಿ ಎಂದೂ ಕಂಡಿಲ್ಲ. ಈ ವಿಚಾರಣೆಯ ವೀಕ್ಷಕರನ್ನಾಗಿ ಭಾರತ ಸರ್ಕಾರ ಕೂಡ ತನ್ನ ಪ್ರತಿನಿಧಿಯನ್ನು ಕಳುಹಿಸಿದ್ದರೆ ಒಳ್ಳೆಯದಿತ್ತು. ಅದು ಮುಂದಿನ ವಿಚಾರಣೆಯ ವೇಳೆ ಆ ಕೆಲಸ ಮಾಡುತ್ತದೆ ಎಂದು ಆಶಿಸುತ್ತೇನೆ. ಈ ವಿಚಾರದ ಬಗ್ಗೆ ನಾವು ಟರ್ಕಿ ಜೊತೆ ಮಾತುಕತೆ ನಡೆಸಬೇಕು.

ಒಬ್ಬ ಭಾರತೀಯನಾಗಿ, ಇತಿಹಾಸದ ವಿದ್ಯಾರ್ಥಿಯಾಗಿ ನಾನು ಟರ್ಕಿಯಲ್ಲಿ ನಡೆದಿದ್ದನ್ನು ಕಂಡು ನಿರಾಸೆಗೆ ಒಳಗಾಗಿದ್ದೇನೆ. ಟರ್ಕಿಯ ಜನ ಟರ್ಕಿಯ ಭೂಪ್ರದೇಶಕ್ಕೆ ಅಂದಾಜು 1000 ವರ್ಷಗಳ ಹಿಂದೆ ಬರುವ ಮೊದಲಿನಿಂದಲೂ ನಮಗೆ ಅವರ ಜೊತೆ ಹತ್ತಿರದ ಸಾಂಸ್ಕೃತಿಕ ಸಂಬಂಧ ಇದೆ. ಭಾರತವನ್ನು ಆಳಿದ ಮುಸ್ಲಿಂ ರಾಜರಲ್ಲಿ ಬಹುತೇಕರು ವಾಸ್ತವದಲ್ಲಿ ಟರ್ಕಿ ಮೂಲದವರೇ ಆಗಿದ್ದರು. ಮೊಹಮ್ಮದ್ ಘಜ್ನಿ ಮೂಲತಃ ಟರ್ಕಿಯವನು, ಬಾಬರ್ ಕೂಡ ಟರ್ಕಿಯ ಚಗತಾಯ್ ವಂಶಸ್ಥ, ಮೈಸೂರಿನ ಟಿಪ್ಪು ತನ್ನ ಪೂರ್ವಿಕರು ಟರ್ಕಿಯ ಮೂಲದವರು ಎಂಬ ಕಾರಣಕ್ಕೆ ತನ್ನನ್ನು ‘ಸುಲ್ತಾನ’ ಎಂದು ಕರೆದುಕೊಂಡಿದ್ದ.

ಮಹಾನ್ ಸಂಸ್ಕೃತಿಯ ಜನರನ್ನು ಪ್ರತಿನಿಧಿಸುವ ಸರ್ಕಾರವು ಟರ್ಕಿಯ ಜನರ ಒಳಿತಾಗಿ, ಅವರ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ನನ್ನ ಸಹೋದ್ಯೋಗಿಗಳ ವಿಚಾರಣೆಯ ವಿಚಾರದಲ್ಲಿ ಇನ್ನಷ್ಟು ಉತ್ತಮವಾಗಿ ನಡೆದುಕೊಳ್ಳಬೇಕಿತ್ತು ಎಂಬುದು ನನ್ನ ಭಾವನೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT