ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾನ್‌ಗಳಿಗೆಲ್ಲಾ ಇವರೇ ಮಾದರಿ

Last Updated 15 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ದೇವಾನಂದ್ ನಿಧನರಾದಾಗ ಇಲ್ಲೊಬ್ಬ ಗಂಡ ಹೆಂಡತಿ ಇಡೀ ದಿನ ಊಟ ಮಾಡಲಿಲ್ಲ. `ದೂರದಲ್ಲಿ ಮಗ ಇದ್ದಾನೆ~ ಎಂದೇ ಇಷ್ಟು ದಿನ ಅವರು ಅಂದುಕೊಂಡಿದ್ದರು. ಮಗ ಮತ್ತೊಮ್ಮೆ ಇಲ್ಲವಾಗಿದ್ದ...

`ಭಾರತೀಯ ಚಿತ್ರರಂಗದಲ್ಲಿ ಇಂಥ ನಟ ಸಿಗೋದಿಲ್ಲ- ಅವರ ಬಗ್ಗೆ ಒಂದು ಲೇಖನ ನೀವು ಬರೀಲೇ ಬೇಕು~ ಎಂದು ಬಿ. ಎಂ. ಪರಶಿವಮೂರ್ತಿ ಅನ್ನುವವರು ಫೋನ್ ಮೂಲಕ ಒತ್ತಾಯಿಸಿದರು.

ಪರಶಿವಮೂರ್ತಿ ಯಾರು ಎನ್ನುವುದು ನಿಮಗೆ ತಿಳಿದಿಲ್ಲ ಎನ್ನುವುದು ನನಗೆ ಗೊತ್ತು. ಅವರ ಬಗ್ಗೆ ನನಗೂ ಏನೂ ಗೊತ್ತಿಲ್ಲ. ಆದರೆ, ಪತ್ರಿಕೆಗಳಲ್ಲಿ, ಲೇಖನಗಳಲ್ಲಿ ಕಂಡುಬರುವ ಲೋಪದೋಷಗಳನ್ನು ತಕ್ಷಣವೇ ಕಂಡುಹಿಡಿದು, ಸಂಪಾದಕ ವರ್ಗಕ್ಕೆ ಫೋನ್ ಮಾಡಿ, ಚರ್ಚೆ ಮಾಡುವ ವ್ಯಕ್ತಿ ಪರಶಿವಮೂರ್ತಿ ಎನ್ನುವುದು ನನಗೆ ಗೊತ್ತು.

ಪತ್ರಿಕೆಗಳಲ್ಲಿ ಮೂಡುವ ಪ್ರಮಾದಗಳ ಬಗ್ಗೆ ಅವರು ಸದಾ ಫೋನ್ ಮೂಲಕ ಬೇಜಾರನ್ನು ತೋರ್ಪಡಿಸಿಕೊಳ್ಳುತ್ತಿರುತ್ತಾರೆ. ಡಿಸೆಂಬರ್ 4ರ ಭಾನುವಾರ ಅವರು ಫೋನ್ ಮಾಡಿ, `ಮುಂದಿನವಾರ ನೀವು ದೇವಾನಂದ್ ಬಗ್ಗೆ ಬರೆದರೆ ನನಗೆ ಸಂತೋಷವಾಗುತ್ತದೆ.
ನಾನು ದೇವಾನಂದನ ಅಭಿಮಾನಿ~ ಎಂದರು.
 
`ಅವರ ಅಭಿನಯದ ಎಲ್ಲ ಚಿತ್ರ ನೋಡಿದ್ದೇನೆ. ಪ್ಯಾರ್ ಮೊಹಬ್ಬತ್, ಕಾಲಾ ಬಜಾರ್, ಸಿ.ಐ.ಡಿ., ಪೇಯಿಂಗ್ ಗೆಸ್ಟ್, ಜಾಲಿನೋಟ್, ಮನ್ ಪಸಂದ್, ಜ್ಯೂಯಲ್ ಥೀಫ್, ಜಾನಿ ಮೇರಾ ನಾಮ್, ಹರೇ ರಾಮ ಹರೇ ಕೃಷ್ಣ... ಯಾವ ಚಿತ್ರವನ್ನೂ ಬಿಟ್ಟಿಲ್ಲ.

`ಗೈಡ್~ ಹತ್ತು ಸಲ ನೋಡಿದ್ದೇನೆ ಅಂಥಾ ನಟ ಇನ್ನು ಸಿಗಲ್ಲ. ದೇವಾನಂದ್ ಅಭಿನಯಕ್ಕೆ ಮಾರುಹೋಗಿ, ನನ್ನ ಮಗನಿಗೆ ದೇವಾನಂದ್ ಎಂದು ಹೆಸರಿಟ್ಟಿದ್ದೆ...~ ಎಂದು ಹೇಳುವಾಗ ಅವರ ದುಃಖ ಉಮ್ಮಳಿಸಿ ಬಂದಿತ್ತು. `ನೀನೂ ಅವರ ರೀತೀನೇ ಆಗಬೇಕು~ ಎಂದು ಹೇಳ್ತಾನೇ ಇದ್ರಂತೆ.

38ನೇ ವಯಸ್ಸಿನಲ್ಲಿ `ದೇವಾನಂದ್~ ತುಮಕೂರು ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟನಂತೆ. ಪುತ್ರ ಶೋಕ ನಿರಂತರ. ಆದರೂ ಧೈರ್ಯ ತಾಳಿದ ಪರಶಿವಮೂರ್ತಿ ಅವರಿಗೂ ಅವರ ಪತ್ನಿಗೂ ಮಗ ಬಾಲಿವುಡ್ಡಿನಲ್ಲಿ ಇದ್ದಾನೆ ಎಂದೇ ಭಾವನೆ.

ಕೈಗೆ ಬಂದ ಮಗ ಅಕಾಲ ಮೃತ್ಯುವಿಗೆ ತುತ್ತಾದಾಗ, ಪರಶಿವಮೂರ್ತಿ ದಂಪತಿ, ನಟ ದೇವಾನಂದನಲ್ಲಿ ಮಗನನ್ನು ಕಂಡರು. ಕಾಲ ನೂಕಿದರು.  ಭಾನುವಾರ ಟಿ.ವಿ.ಯ ಮುಂದೆ ಕುಳಿತು ಪರಶಿವಮೂರ್ತಿ ಅವರ ಪತ್ನಿ ಕಣ್ಣೀರು ಹಾಕಿದರು.

ಇಡೀ ದಿನ ಊಟ ಮಾಡಲಿಲ್ಲ. ದೂರದಲ್ಲಿ ಮಗ ಇದ್ದಾನೆ ಎಂದೇ ಇಷ್ಟು ದಿನ ಅಂದುಕೊಂಡಿದ್ದರು. ಮಗ ಮತ್ತೊಮ್ಮೆ ಇಲ್ಲವಾಗಿದ್ದ. ಕಣ್ಣೀರ ಕೋಡಿಯಲ್ಲಿ ಮಾತು ಮೌನವಾಯಿತು.

ಸಿನಿಮಾ ಬೇರು ಹೀಗೆ ಭಾವನಾತ್ಮಕತೆಗಳ ಜೊತೆ ಬೆರೆತು ಹೋಗಿರುವುದರಿಂದಲೇ ನಮ್ಮ ದೇಶದಲ್ಲಿ ಈ ಮಾಧ್ಯಮ ಬಹಳ ಪ್ರಭಾವಶಾಲಿ ಎನಿಸಿದೆ. ಬಡಜನರ ಕನಸುಗಳಿಗೆ ಸಿನಿಮಾ ಸಾಕಾರ ನೀಡುತ್ತಿದೆ.

ಪ್ರಚಾರಕ್ಕೆ, ರಾಜಕೀಯಕ್ಕೆ, ವ್ಯಕ್ತಿತ್ವ ವಿಕಸನಕ್ಕೆ, ಶೈಕ್ಷಣಿಕ ಪ್ರಗತಿಗೆ ಹೀಗೆ ಎಲ್ಲ ಕಡೆ ದೃಶ್ಯ ಮಾಧ್ಯಮ ಅನಿವಾರ‌್ಯವೇ ಅನಿಸಿದೆ. ಸಿನಿಮಾ ಹಾಗೂ ಅದರಲ್ಲಿನ ನಾಯಕ ನಟರು ದೈವಸ್ವರೂಪಿಗಳಾಗಿ, `ನಾನಿರುವುದೇ ನಿಮಗಾಗಿ~ ಎನ್ನುತ್ತಾ ಜನಜೀವನ ಆಕ್ರಮಿಸಿಕೊಳ್ಳುತ್ತಿದ್ದಾರೆ.

ನಟನೊಬ್ಬನ ಹೆಸರನ್ನು ಮಕ್ಕಳಿಗೆ ಇಡುವ ಪರಂಪರೆಯೇ ನಮ್ಮಲ್ಲಿ ಬೆಳೆದು ಬಂದಿರುವುದು ಈ ಹಿನ್ನೆಲೆಯಲ್ಲಿಯೇ. ದೇಶದಲ್ಲಿ ಎಷ್ಟೊ ದೇವಾನಂದರಿದ್ದಾರೆ, ಎಷ್ಟೋ ದಿಲೀಪ್‌ಕುಮಾರ್‌ಗಳಿದ್ದಾರೆ. ನೂರಾರು ಸಚಿನ್‌ಗಳಿದ್ದಾರೆ.

ರಾಮ, ಕೃಷ್ಣ, ಗೋವಿಂದ ಹೀಗೆ ದೇವರುಗಳ ಹೆಸರುಗಳನ್ನು ಇಡುವ ಹಾಗೆಯೇ ಸಿನಿಮಾ ನಟರ, ನಟಿಯರ ಹೆಸರುಗಳನ್ನು ಇಡುವುದು ವಾಡಿಕೆಯೇ ಆಗಿದೆ.
 

ತಮಿಳುನಾಡು, ಆಂಧ್ರದಲ್ಲಂತೂ ಸಿನಿಮಾ ನಟರ ಕೈಗೆ ಎಳೆ ಮಕ್ಕಳನ್ನು ಕೊಟ್ಟು ಆಶೀರ್ವದಿಸುವಂತೆ, ಅವರಿಗೊಂದು ಹೆಸರು ಸೂಚಿಸುವಂತೆ ಬೇಡಿಕೊಳ್ಳುವ ಪರಿಪಾಠವಿದೆ. ನಮ್ಮ ಹಳ್ಳಿಗಳಿಗೆ ಹೋಗಿ ನೋಡಿ- ನಿಮಗೆ ನೂರಾರು ರಾಜ್‌ಕುಮಾರ್‌ಗಳು, ವಿಷ್ಣುವರ್ಧನರೂ ಸಿಗುತ್ತಾರೆ.

ಪಕ್ಕದ ತಮಿಳುನಾಡಿನ ಗ್ರಾಮೀಣ ಭಾಗಕ್ಕೆ ಹೋಗಿ ನೋಡಿ ರಾಮಚಂದ್ರನ್‌ಗಳೂ, ರಜನೀಗಳೂ ನೂರಾರು ಜನರಿದ್ದಾರೆ!ಅಭಿಮಾನ, ಆರಾಧನೆ ಪರಾಕಾಷ್ಠೆಗೇರಿದಾಗ ಚಿತ್ರನಟರ ಅನುಕರಣೆ ಕೂಡ ನಮ್ಮಲ್ಲಿ ಹೆಚ್ಚು. ಇದೊಂದು ರೀತಿಯ ಹುಚ್ಚು.

ದೇವಾನಂದ್ ಕೂಡ ಅಂತಹ ಒಂದು ಟ್ರೆಂಡ್ ಹುಟ್ಟು ಹಾಕಿದ ನಟ. ದೇವಾನಂದ್ ಚಿತ್ರರಂಗ ಪ್ರವೇಶಿಸಿದಾಗ ದೇಶಕ್ಕೆ ಇನ್ನೂ ಸ್ವಾತಂತ್ರ್ಯವೇ ಬಂದಿರಲಿಲ್ಲ.

ಪಂಜಾಬಿನ ಗುರುದಾಸಪುರದ ದೇವಾನಂದ್, ಲಾಹೋರ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಓದಿಕೊಂಡು ನಾಟಕ-ಸಿನಿಮಾ ಹುಚ್ಚು ಹತ್ತಿಸಿಕೊಂಡು ಮುಂಬೈಗೆ ಬಂದಾಗ ಅವರ ಸಹೋದರ ಚೇತನ್ ಆನಂದ್, ರಂಗಭೂಮಿಯಲ್ಲಿ ಹೆಸರು ಮಾಡಿದ್ದರು.
ಪ್ರಭಾತ್ ಸ್ಟುಡಿಯೋದಲ್ಲಿ ಕೆಲಸಕ್ಕೆ ಸೇರಿದಾಗ ಅವರಿಗೆ ಅವಕಾಶಗಳ ಬಾಗಿಲು ತೆರೆಯಿತು. ಮೊದಲ ಚಿತ್ರ `ಹಮ್ ಏಕ್ ಹೈ~ ಯಶಸ್ಸು ಗಳಿಸಲಿಲ್ಲ. ಆದರೆ ಗುರುದತ್ ಅವರ ಸ್ನೇಹ ಚಿತ್ರರಂಗಕ್ಕೆ ಏಣಿ ಹಾಕಿತು.

ನಂತರ 1947ರ `ಜಿದ್ದಿ~ ಯಶಸ್ಸು ಕಂಡಿತು. 1949ರಲ್ಲಿ ನವಕೇತನ್ ನಿರ್ಮಾಣ ಸಂಸ್ಥೆ ಸ್ಥಾಪಿಸಿದರು. ಮೂರು ಚಿತ್ರ ನಿರ್ಮಿಸಿದರು. 1951ರಲ್ಲಿ ಗುರುದತ್ ನಿರ್ದೇಶನದ `ಬಾಜಿ~ ಚಿತ್ರ ದೇವಾನಂದ್‌ಗೆ ಬಾಲಿವುಡ್‌ನಲ್ಲಿ ಖಾಯಂ ಸ್ಥಾನ ಒದಗಿಸಿಕೊಟ್ಟಿತು.

ಆ ವೇಳೆಗಾಗಲೇ ದಿಲೀಪ್‌ಕುಮಾರ್, ರಾಜ್‌ಕಪೂರ್ ಚಿತ್ರರಂಗದಲ್ಲಿ ಸ್ಥಾನಮಾನಗಳಿಸಿದ್ದರು. ಅವರನ್ನು ಮೀರಿಸಿ, ತೆರೆಯ ಮೇಲೆ ಮಿಂಚುವ ಕೆಲಸ ಮಾಡಬೇಕಿತ್ತು. ರಾಜ್‌ಕಪೂರ್, ಚಾರ್ಲಿ ಚಾಪ್ಲಿನ್ ಅವರನ್ನು ಅನುಕರಣೆ ಮಾಡುತ್ತಾ, ಭಾರತದ ಬಡಜನರನ್ನು ವಸ್ತುವನ್ನಾಗಿಸಿಕೊಂಡ ಕತೆಗಳನ್ನು, ಮುಗ್ಧ ಪ್ರೇಮಕತೆಗಳನ್ನು ಆಯ್ಕೆ ಮಾಡಿಕೊಂಡು ಜನಪ್ರಿಯರಾಗಿದ್ದರು.

ದಿಲೀಪ್‌ಕುಮಾರ್ ಕೂಡ ಐತಿಹಾಸಿಕ ಚಿತ್ರದಲ್ಲೂ, ಹಳ್ಳಿಗಾಡಿನ ಮುಗ್ಧ ಯುವಕನಾಗಿಯೂ ಅಂದಿನ ಜನಜೀವನದ ಪ್ರತಿಬಿಂಬವಾಗಿದ್ದರು. ದೇವಾನಂದ್ 1951ರ `ಬಾಜಿ~ ಚಿತ್ರದಲ್ಲಿ ನಾಯಕ ನಟರ ಸುತ್ತ ಇದ್ದ ಪ್ರಭಾವಳಿಯನ್ನು ಮುರಿದರು.

ನಾಯಕನೇ ವಿಲನ್ ಆದರೆ ಹೇಗಿರುತ್ತೆ? ಮುಂಬೈ ಭೂಗತ ಲೋಕದ ಗ್ಯಾಂಬ್ಲರ್ ಆಗಿ ದೇವಾನಂದ್ ವಿಶಿಷ್ಟ ಉಡುಗೆ ತೊಡುಗೆ, ಹಾವಭಾವಗಳ ಮೂಲಕ ಪ್ರವೇಶ ಕೊಟ್ಟಿದ್ದು ಸಿನಿಪ್ರಿಯರಲ್ಲಿ ರೋಮಾಂಚನವನ್ನೇ ಉಂಟು ಮಾಡಿತು.

ಕೌಬಾಯ್ ಆಗಿ, ಆಂಗ್ಲ ಚಿತ್ರಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದ ನಟರ ಶೈಲಿಯನ್ನು ಅವರು ಅನುಕರಿಸಲಾರಂಭಿಸಿದರು. ಕುತ್ತಿಗೆಗೆ ಬಣ್ಣದ ಸ್ಕಾರ್ಫ್, ಹ್ಯಾಟ್, ಕ್ಯಾಪ್, ನಡೆಯುವ ಶೈಲಿಯಲ್ಲಿ ಭಿನ್ನತೆ, ಸಂಭಾಷಣೆ ಹೇಳುವ ಗತ್ತೇ ವಿಭಿನ್ನ! ಇದೆಲ್ಲ ಇದ್ದಕ್ಕಿದ್ದಂತೆ ರಸಿಕರಲ್ಲಿ ಸಂಚಲನ ಉಂಟು ಮಾಡಿತು. ಕೊನೆಯವರೆಗೂ ದೇವಾನಂದ್ ಅವರ ಶೈಲಿ ತನ್ನ ಗತ್ತನ್ನು ಉಳಿಸಿಕೊಂಡಿತು.

ಹಾಲಿವುಡ್ ನಟ ಗ್ರೆಗರಿಪೆಕ್ ಅವರನ್ನು ದೇವಾನಂದ್ ಹೋಲುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಬಹುಪಾಲು ಚಿತ್ರಗಳಲ್ಲಿ ದೇವಾನಂದ್ ಗ್ರೆಗರಿಪೆಕ್ ಅವರನ್ನು ಅನುಕರಣೆ ಮಾಡಿದ್ದಾರೆ. ಈ ವಿಷಯವನ್ನು ಆತ್ಮಕತೆಯಲ್ಲೂ ದೇವಾನಂದ್ ಬಿಚ್ಚಿಟ್ಟಿದ್ದಾರೆ.
`ನಾನು ದೇವಾನಂದನೋ ಗ್ರೆಗರಿಪೆಕ್ಕೋ ಎಂದು ನನಗೆ ನಾನೇ ಎಷ್ಟೋ ಸಲ ಕೇಳಿಕೊಂಡಿದ್ದೇನೆ. ಗ್ರೆಗರಿಯ ಇಮೇಜಿನಿಂದ ನನ್ನನ್ನು ನಾನು ಬೇರ್ಪಡಿಸಿಕೊಳ್ಳಲು ಸಾಧ್ಯವೇ ಇಲ್ಲ~ ಎಂದು ದೇವಾನಂದ್ ಹೇಳಿಕೊಂಡಿದ್ದಾರೆ.

ಇಂತಹ ದೇವಾನಂದರನ್ನು ಕನ್ನಡ ನಟರೂ ಅನುಕರಣೆ ಮಾಡಿದ್ದಾರೆ. `ಬಾಜಿ~ಯಲ್ಲಿ (1951) ದೇವಾನಂದ್ ಹಾಕಿ ಕೊಟ್ಟ ಟ್ರೆಂಡ್ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಮುಂದೆ ಯಾರೇ ಭೂಗತ ದೊರೆಗಳ ಚಿತ್ರ ನಿರ್ಮಿಸಿದರೂ ಅದರ ಪ್ರಭಾವ ಇಣುಕಿ ನೋಡುತ್ತಿತ್ತು.
ಡಾನ್, ಗ್ರೇಟ್ ಗ್ಯಾಂಬ್ಲರ್ ಮೊದಲಾದ ಚಿತ್ರಗಳೆಲ್ಲಾ ಅದರ ನೆರಳುಗಳೇ. (ಜಾನಿ ಮೇರಾ ನಾಮ್ ಚಿತ್ರ ಕನ್ನಡದಲ್ಲೂ `ಅಪೂರ್ವ ಸಂಗಮ~ (1984) ಎನ್ನುವ ಹೆಸರಿನಲ್ಲಿ ತೆರೆಕಂಡಿತು).

`ಜ್ಯೂವಲ್ ಥೀಪ್~ನಲ್ಲಿ ದೇವಾನಂದ್ ಧರಿಸಿದ್ದ ವಿಶಿಷ್ಟ ಶೈಲಿಯ ಟೋಪಿ ಅತ್ಯಂತ ಜನಪ್ರಿಯವಾಯಿತು. ಮಾರುಕಟ್ಟೆಯಲ್ಲಿ ಅಂತಹ ಹ್ಯಾಟ್‌ಗೆ ವಿಪರೀತ ಬೇಡಿಕೆ ಬಂತು. ಎಲ್ಲ ಯುವಕರ ತಲೆಯ ಮೇಲೂ ಜ್ಯೂವಲ್ ಥೀಪ್ ಹ್ಯಾಟ್! ದೇವಾನಂದ್ ಅಂತಹ ಒಂದು ಹುಚ್ಚನ್ನು ಅವರ ಅಭಿನಯದ ಕಾಲದಲ್ಲಿ ಹುಟ್ಟುಹಾಕಿದ್ದರು.

ಹಿಂದಿ ನಟ ನಟಿಯರು ಉಡುವ ಸೀರೆ, ವಿವಿಧ ಡ್ರೆಸ್ಸುಗಳು ಇಂದು ಬಿರುಗಾಳಿಯಂತೆ ಯುವಕ -ಯುವತಿಯರನ್ನು ಸೆಳೆಯುವ ಹಾಗೆ. ಕನ್ನಡದಲ್ಲೂ ಕಲ್ಪನಾ ಸೀರೆ, ಆರತಿ ಸೀರೆ ಎಂದು 70ರ ದಶಕದಲ್ಲಿ ಫ್ಯಾಷನ್ ಹುಚ್ಚು ಹೆಚ್ಚಾಗಿತ್ತು.

1969ರ ವೇಳೆಗೆ ದಿಲೀಪ್ ಕುಮಾರ್, ರಾಜ್‌ಕಪೂರ್, ದೇವಾನಂದ್ ಅವರಿಗೆ ವಯಸ್ಸಾಯಿತು ಎಂದು ಚಿತ್ರಪ್ರೇಮಿಗಳು ಗೊಣಗಲಾರಂಭಿಸಿದ್ದರು. ಜನ ಹೊಸತನಕ್ಕೆ ಹಾತೊರೆಯಲಾರಂಭಿಸಿದಂತೆ ಟ್ರೆಂಡ್ ಬದಲಾಯಿತು.
 
ರಾಜೇಶ್ ಖನ್ನಾ ಅವರ `ಆರಾಧನಾ~ ಬಿಡುಗಡೆಯಾಗುವುದರೊಂದಿಗೆ ಹಳೆಯ ನಟರೆಲ್ಲಾ ಮೂಲೆಗುಂಪಾದರು. ಆನಂತರ ದೇವಾನಂದರ ಹಾದಿಯೇ ಬದಲಾಯಿತು. ಅವರದು ಏಕಾಂಗಿ ದಾರಿ. ಅಭಿನಯ, ನಿರ್ದೇಶನ ಕ್ಷೇತ್ರದಿಂದ ಮತ್ತಷ್ಟು ಮುಂದೆ ಹೋಗಿ ಸಿನಿಮಾದಲ್ಲಿ ಮತ್ತಷ್ಟು ಸಾಧನೆ ದೇವಾನಂದ ಅವರಿಂದ ಆಗಬಹುದಿತ್ತೇನೋ .

ರಾಜಕೀಯವಾಗಿಯೂ ಅವರು ಪ್ರಬುದ್ಧರಾಗಿದ್ದರು. ತುರ್ತುಪರಿಸ್ಥಿತಿ ವಿರೋಧಿಸಿದ್ದ ಅವರು `ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸುತ್ತೇನೆ~ ಎಂದಿದ್ದರು. `ನ್ಯಾಷನಲ್ ಪಾರ್ಟಿ ಆಫ್ ಇಂಡಿಯಾ~ ಎಂಬ ಪಕ್ಷವನ್ನು ಹುಟ್ಟುಹಾಕಿದ್ದರು.

ವಾಜಪೇಯಿ ಪ್ರಧಾನಿ ಆಗಿದ್ದಾಗ, ದೇವಾನಂದ್‌ಗೆ ಬಿಜೆಪಿ ಸೇರುವ ಆಹ್ವಾನವಿತ್ತು. ಯಾವುದನ್ನೂ ಒಪ್ಪದ ದೇವಾನಂದ್, ಕೊನೆಗೆ ಎಲ್ಲವುಗಳಿಂದ ದೂರ ಉಳಿದು, ಸಿನಿಮಾ ಒಂದನ್ನು ಮಾತ್ರ ಕಾಯಕವಾಗಿಸಿಕೊಂಡರು, 88ನೇ ವಯಸ್ಸಲ್ಲೂ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡರು.

ರಾಜಕಾರಣದ ಕೋಡಂಗಿತನ, ಭ್ರಷ್ಟಾಚಾರ ಎಲ್ಲವೂ ಅವರನ್ನು ಕೆಣಕಿತ್ತು. ಸಿನಿಮಾ ನಿರ್ಮಾಣಕ್ಕೆ ವಯಸ್ಸಿನ ಹಂಗಿಲ್ಲ ಎನ್ನುವುದನ್ನು ತೋರಿಸಿಕೊಟ್ಟರು. ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬಯಸುವವರ ಅಧ್ಯಯನಕ್ಕೆ ದೇವಾನಂದ್ ಉತ್ತಮ ಪಾಠ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT