ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತಿ ಹೊಮ್ಮಿಸಿದ ಸ್ವರಗಳು, ನಿಸ್ತಂತು ಸ್ಮೃತಿಗಳು

Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

`ಶೂರ್ಪನಖಿಯ ಉಡುಗೆಯಿದೆಯಲ್ಲ, ಅದನ್ನು ನಾಡಿದ್ದು ತಾ' ಎಂದು ಗುರುಗಳು ಹೇಳಿದಂತೆಯೇ ಆ ದಿನ ಅದನ್ನು ಹಿಡಿದುಕೊಂಡು ಅವರ ಮನೆಯ ಬಾಗಿಲ ಮುಂದೆ ನಿಂತಿದ್ದೆ. `ನನ್ನ ಜೊತೆಗೆ ಬಾ' ಎಂದು ನೇರವಾಗಿ ಸೈಕಲ್ ರಿಪೇರಿಯ ಅಂಗಡಿಯೊಂದಕ್ಕೆ ಕರೆದೊಯ್ದರು. ಸಾಕ್ಷಾತ್ ಶಿವರಾಮ ಕಾರಂತರೇ ತಮ್ಮ ಅಂಗಡಿಗೆ ಬಂದುದನ್ನು ನೋಡಿ ಸೈಕಲ್ ರಿಪೇರಿಯವರು ಕೊಂಚ ಗಲಿಬಿಲಿಗೊಂಡಿರಬೇಕು.

`ಏನಾಗಬೇಕಿತ್ತು?' ವಿನಯದಲ್ಲಿ ಕೇಳಿದರು. `ಎರಡು ಸೈಕಲ್ ಟ್ಯೂಬುಗಳನ್ನು ಜೋಡಿಸಿ ಶೂರ್ಪನಖಿಯ ಇಳಿ ಉಡುಗೆಯ ಕೆಳಭಾಗದ ಸುತ್ತ ಜೋಡಿಸಲು ಅನುಕೂಲವಾಗುವಂತೆ ಮಾಡಿಕೊಡಬಹುದಾ?' ಗುರುಗಳು ಕೇಳಿದರು. ಸ್ವಲ್ಪ ಹೊತ್ತಿನಲ್ಲಿ ಅಪೇಕ್ಷಿತ ಅಳತೆಯ ಟ್ಯೂಬ್ ಸಿದ್ಧಗೊಂಡಿತು. ಸೈಕಲ್‌ಪಂಪ್‌ನಲ್ಲಿ ಗಾಳಿ ಹಾಕುವಾಗ ಅದು ಹಿಗ್ಗಿ ವೃತ್ತಾಕಾರದಲ್ಲಿ ನಿಲ್ಲುತ್ತಿತ್ತು. ಅದನ್ನು ರಾಕ್ಷಸಿಯ ಉಡುಗೆಯ ಕೆಳ ಅಂಚಿಗೆ ಹೊಂದಿಸಿ, ಕಾಣದಂತೆ ಮಡಚಿ ಹೊಲಿಯಲು ನನಗೆ ಹೇಳಿದರು. ಇಷ್ಟಾಗುವಾಗಲೇ ನನಗೆ ಗುರುಗಳ ಮನಸ್ಸಿನಲ್ಲೇನಿದೆ ಎಂದು ತಿಳಿದುಬಿಟ್ಟಿತು.

ನಮ್ಮ ಯಕ್ಷಗಾನದ ಶೂರ್ಪನಖಿಯ ವೇಷದ ಕೆಳಭಾಗ ಮೇಲ್ಭಾಗಕ್ಕೆ ಹೊಂದಿಕೆಯಾಗದೆ ತುಂಬ ಕೃಶವಾಗಿ ತೋರುತ್ತಿತ್ತು. ಕೆಳಭಾಗವು ವೃತ್ತಾಕಾರದಲ್ಲಿ ಕಾಣಿಸಿ ಭೀಕರ ದೇಹಾಕೃತಿಯನ್ನು ಬಿಂಬಿಸಲೋಸುಗ ಸೈಕಲ್‌ಟ್ಯೂಬನ್ನು ಇಳಿಲಂಗದ ಸುತ್ತ ಜೋಡಿಸುವುದು ಅವರ ಆಲೋಚನೆಯಾಗಿತ್ತು. ಕಥಕಳಿ ವೇಷದ ಕಲ್ಪನೆ ಅವರ ಮನಸ್ಸಿನಲ್ಲಿದ್ದಿರಲೂಬಹುದು.

ಸಿದ್ಧವಾದ ಪ್ರಾಯೋಗಿಕ ಉಡುಪನ್ನು ಯಕ್ಷಗಾನ ಕೇಂದ್ರಕ್ಕೆ ತಂದು ಶಿವರಾಮ ಕಾರಂತರ ಸಮಕ್ಷಮದಲ್ಲಿಯೇ ಶೂರ್ಪನಖಿಯ ಪಾತ್ರಧಾರಿ ಪೇತ್ರಿ ಮಾಧು ನಾಯ್ಕರಿಗೆ ತೊಡಿಸಲಾಯಿತು. ಆದರೆ, ಸೊಂಟದ ಭಾಗ ಸಪೂರವಾಗಿದ್ದು ಕೆಳಭಾಗದಲ್ಲಿ ವೃತ್ತಾಕಾರದಲ್ಲಿ ಉಬ್ಬಿಕೊಂಡು ಅಸಂಗತವಾಗಿ ತೋರಿತು. ಯಾವ ಕ್ಷಣಕ್ಕೆ ಸರಿ ಅನ್ನಿಸಲಿಲ್ಲವೋ ಅದನ್ನು ತತ್‌ಕ್ಷಣ, `ತೆಗೆದು ಬಿಡು' ಎಂದು ಆಜ್ಞಾಪಿಸಿದರು ಕಾರಂತರು. ತಮ್ಮ ಪ್ರಯತ್ನ ಫಲಕೊಡಲಿಲ್ಲವೆಂದು ಅನ್ನಿಸಿ ಪರ್ಯಾಯವಾಗಿ ಏನು ಮಾಡಬಹುದೆಂಬ ಚಿಂತನೆ ಅವರ ಮನಸ್ಸಿನಲ್ಲಿ ಮಂಡಿ ಸುತ್ತುತ್ತಿತ್ತು.

ಅಷ್ಟರಲ್ಲಿ ನಮ್ಮ ತಂಡದಲ್ಲಿದ್ದ ಹಿರಿಯ ಕಲಾವಿದರು `ಭೀಮನ ಡೌರು' ವೇಷದ ರಚನೆಯನ್ನು ನೆನಪಿಸಿಕೊಂಡರು. ನನಗೆ ಅದನ್ನು ನೋಡಿದ ಅನುಭವವಿರಲಿಲ್ಲ. ಕಾರಂತರಲ್ಲಿ ಅದರ ಬಗ್ಗೆ ಮೆಲುದನಿಯಲ್ಲಿ ಹೇಳಿದಾಗ, `ನೀನು ನೋಡಿಲ್ಲವಾ ಅದನ್ನು?' ಎಂದು ನನ್ನಲ್ಲಿ ಕೇಳಿದರು. `ಇಲ್ಲ... ಆದರೆ ಪ್ರಯತ್ನಿಸುತ್ತೇನೆ' ಎಂದೆ. ಅಲ್ಲಿಲ್ಲಿಂದ ಬೈಹುಲ್ಲನ್ನು ಸಂಗ್ರಹಿಸಿ, ತೆಂಕುತಿಟ್ಟಿನ ವೇಷಗಳಿಗೆ ಅಂಡು ಕಟ್ಟುವಂತೆ ಅದನ್ನು ಶೂರ್ಪನಖಿ ವೇಷದ ಸುತ್ತ ಕಟ್ಟಿ ತೋರಿಸಿದೆವು. ಅಡ್ಡಿಯಿಲ್ಲ ಅನ್ನಿಸಿತು ಕಾರಂತರಿಗೆ. ಕೆಲವು ತಿದ್ದುಪಡಿಗಳನ್ನು ಸೂಚಿಸಿದರು. ನಮ್ಮ `ಪಂಚವಟಿ' ಪ್ರಯೋಗದಲ್ಲಿ ಶೂರ್ಪನಖಿಗೆ ಅದೇ ಉಡುಗೆ ರೂಢಿಯಾಯಿತು.

ಯಕ್ಷಗಾನದ ಪುರುಷವೇಷಗಳು ಕೇದಗೆಮುಂದಲೆ, ಕಿರೀಟಗಳನ್ನು ತೊಟ್ಟು ಘನತೆಯಲ್ಲಿ ರಂಗ ಪ್ರವೇಶಿಸುವಾಗ ಸ್ತ್ರೀವೇಷಗಳು ಸೊರಗಿದಂತೆ ಕಾಣಿಸುವುದನ್ನು ಕಾರಂತರು ಗಮನಿಸಿದರು. ಕೇವಲ ಸೂಡಿ ಅಥವಾ ಮುಡಿ ಹಾಕಿಕೊಂಡ ಯಕ್ಷಗಾನದ ಲಲನೆಯರಿಗೆ ಶಿರೋಭೂಷಣವೊಂದರ ಅಗತ್ಯವಿತ್ತು. ಸ್ತ್ರೀವೇಷಗಳ ಹಿಂದಲೆಗೆ ಸಿಕ್ಕಿಸುವಂತೆ ಕಿರಣವನ್ನು ಮೊತ್ತಮೊದಲು ರೂಪಿಸಿದವರು ಶಿವರಾಮ ಕಾರಂತರು. ಅದು ಇವತ್ತಿಗೆ ಬಡಗುತಿಟ್ಟು ಮತ್ತು ತೆಂಕುತಿಟ್ಟು ಯಕ್ಷಗಾನ ವಿಭಾಗಗಳಲ್ಲಿ `ಪರಂಪರೆ'ಯ ಉಡುಗೆಯಾಗಿಬಿಟ್ಟಿದೆ.

ಸ್ತ್ರೀವೇಷಗಳು ತೊಡುವ ಸೀರೆ ಕೂಡ ಅವರದೇ ಸೂಚನೆಯಂತೆ ಕೈಮಗ್ಗದಲ್ಲಿ ನೇಯ್ದು ವಿನ್ಯಾಸಗೊಂಡದ್ದಾಗಿತ್ತು. ಅವರ ಪ್ರಯೋಗಗಳಲ್ಲಿ ಸ್ತ್ರೀವೇಷಗಳು ಅದೇ ಸೀರೆಯನ್ನು ಉಡಬೇಕಾಗಿತ್ತು. ನೀಳ ಕೈಯಿದ್ದು ಎದೆ ಮತ್ತು ನಡು ಭಾಗವನ್ನು ಪೂರ್ಣ ಮುಚ್ಚುವ ಕುಪ್ಪಸವನ್ನೂ ಕೂಡ ಹೊಲಿಸಿದ್ದರು. ಸ್ತ್ರೀವೇಷಗಳು ಮೂಗುತಿಯನ್ನಾಗಲಿ, ಮಾಂಗಲ್ಯವನ್ನಾಗಲಿ ಧರಿಸಬಾರದು ಮತ್ತು ಲಾಲಿತ್ಯದ ಪಾತ್ರವಾದರೂ ಉದ್ದನೆಯ ಜಡೆ ಬಿಡಬಾರದು ಎಂದು ಕಡ್ಡಾಯ ಮಾಡಿದ್ದರು. ಅವರಿಗೆ `ಒಡಿಸ್ಸಿ' ಅತ್ಯಂತ ಪ್ರಿಯವಾದ ಕಲಾಪ್ರಕಾರವಾಗಿತ್ತು. `ಒಡಿಸ್ಸಿ' ನೃತ್ಯದಲ್ಲಿ ಸ್ತ್ರೀಯರು ಬಳಸುವ ಶಿರೋಭೂಷಣ ಕಾರಂತರ `ಸ್ತ್ರೀವೇಷ' ಪ್ರಯೋಗಕ್ಕೆ ಪ್ರೇರಣೆಯಾಗಿರಲೂಬಹುದು. ಜೊತೆಗೆ, ಕೆ.ಕೆ. ಹೆಬ್ಬಾರರ ಕಲಾಕೃತಿಗಳೂ ಅವರನ್ನು ಪ್ರಭಾವಿಸಿರಬೇಕು.

ಮುಂಬಯಿಯಲ್ಲಿ ನಮ್ಮ ಯಕ್ಷಗಾನ ಪ್ರಯೋಗಗಳಾದಾಗ ಕೆ.ಕೆ. ಹೆಬ್ಬಾರರೂ, ಶಿವರಾಮ ಕಾರಂತರೂ ಜೊತೆಗಿರುವುದನ್ನು ಗಮನಿಸುತ್ತಿದ್ದೆ. ಕಾರಂತರೂ, ಹೆಬ್ಬಾರರೂ ದೊಡ್ಡ ಜನಗಳೆಂದು ನನಗೆ ತಿಳಿದಿತ್ತೇ ವಿನಾ ಅದರಾಚೆಗಿನ ಅರಿವು ನನಗಿರಲಿಲ್ಲ. ಕಾರಂತರ ಪ್ರಯೋಗಗಳಲ್ಲಿ ಮುಖ್ಯ ಪಾತ್ರಧಾರಿಯಾಗಿ ಭಾಗವಹಿಸುತ್ತಿದ್ದೆನಾದ್ದರಿಂದ ಹೆಬ್ಬಾರರಿಗೆ ನಾನು ಪರಿಚಿತನಾಗಿದ್ದೆ.

ಒಮ್ಮೆ, ಒಂದು ಪ್ರದರ್ಶನ ಮುಗಿದ ಬಳಿಕ ನನ್ನನ್ನು ಕರೆದು, `ನೀವೆಲ್ಲ ಚೆನ್ನಾಗಿ ಮಾಡಿದ್ದೀರಿ...' ಎಂದು ಪ್ರಶಂಸಿಸುತ್ತ, `ಆದರೆ, ಕಾರಂತರು ಯಕ್ಷಗಾನದಿಂದ ವಾಚಿಕದ ಅಂಶವನ್ನು ತೆಗೆದುಹಾಕಬಾರದಿತ್ತಲ್ಲ...' ಎಂದರು. ನಾನು ಭಯದಿಂದ ಸಣ್ಣಗೆ ನಡುಗಿದೆ. ಕಾರಣ, ಸನಿಹದಲ್ಲಿಯೇ ಕಾರಂತರು ಕುಳಿತಿದ್ದರು. ಅವರಿಗೆ, ಕೇಳಿಸಿತೋ ಇಲ್ಲವೋ. ಕೇಳಿಸಿದರೂ ಕಾರಂತರು ಪ್ರತಿಕ್ರಿಯಿಸುತ್ತಿರಲಿಲ್ಲವೋ ಏನೊ! ಅವರಿಬ್ಬರ ಸಂಬಂಧದ ತೂಕವೇ ಬೇರೆ. ಇಂಥ ವಿಮರ್ಶೆಯ ಮಾತು ನನಗೆ ಮಾತ್ರ ಸೋಜಿಗದ ಕ್ಷಣವಾಗಿತ್ತು.

ಶಿವರಾಮ ಕಾರಂತರಂಥ ಪರ್ವತ ಪ್ರತಿಭೆ ಯಕ್ಷಗಾನ ಕ್ಷೇತ್ರಕ್ಕೆ ಬಂದದ್ದೇ ಒಂದು ಐತಿಹಾಸಿಕ ಘಟನೆ. ನನಗೆ ಇವತ್ತು ಯೋಚಿಸಿದಾಗ ವ್ಯಥೆಯಾಗುತ್ತದೆ; ಅವರು ಹೋದಲ್ಲೆಲ್ಲ ಎಂತೆಂಥ ವ್ಯಕ್ತಿಗಳು ಅವರನ್ನು ಕಂಡು ಮಾತನಾಡಿಸುವುದಕ್ಕೆ ಬರುತ್ತಿದ್ದರು ಎಂಬುದನ್ನು ನಾನು ಸೂಕ್ಷ್ಮವಾಗಿ ಗಮನಿಸಲೇ ಇಲ್ಲವಲ್ಲ! ಗಮನಿಸುವುದಕ್ಕೆ ನನ್ನಲ್ಲಿ ಓದಿನ ಅನುಭವವೂ ಇರಲಿಲ್ಲ. ಯಕ್ಷಗಾನ ಪ್ರಯೋಗಗಳಲ್ಲಿ ತೊಡಗಿರುವಾಗಲೇ ಅವರು ನೂರಾರು ಇನ್ನಿತರ ಕೆಲಸಗಳನ್ನು ಮಾಡುತ್ತಿರಬಹುದು.

ವಿದೇಶಕ್ಕೆ ಹೋಗುವಾಗಲೂ ತಮ್ಮ ಕೆಲಸ ಮುಗಿದ ತತ್‌ಕ್ಷಣ ನಿರ್ಗಮಿಸುತ್ತಿದ್ದರು. ತಮ್ಮ ಕೊಠಡಿಗೆ ಬಂದವರೇ ಬರೆಯುವುದರಲ್ಲಿಯೋ ಓದುವುದರಲ್ಲಿಯೋ ತಲ್ಲೆನರಾಗುತ್ತಿದ್ದರು. ಏನು ಬರೆಯುತ್ತಿದ್ದರೊ! ಕಾದಂಬರಿಯೊ, ವಿಜ್ಞಾನ ಪುಸ್ತಕವೊ, ಮಕ್ಕಳ ಸಾಹಿತ್ಯವೊ, ಗೀತ ನಾಟಕವೊ, ಸಿನಿಮಾ ಕಥೆಯೊ, ಸಂಶೋಧನಾ ಕೃತಿಯೊ, ಪರಿಸರ ಹೋರಾಟದ ಲೇಖನವೊ ಅಥವಾ ಯಾರಿಗಾದರೂ ಪತ್ರವೊ! ಒಮ್ಮೆ ದಕ್ಷಿಣ ಆಫ್ರಿಕಾದ ವಸತಿಗೃಹದ ಕೊಠಡಿಯಲ್ಲಿ ಕುಳಿತೇಳುವುದರೊಂದಿಗೆ `ಯಕ್ಷರಂಗಕ್ಕಾಗಿ' ಕೃತಿಯನ್ನು ಬರೆದು ಮುಗಿಸಿದ್ದರು. ಅದರ ತುಂಬ ಅವರು ಯಕ್ಷಗಾನ ಕಲಾವಿದರ ಜೊತೆಗಿನ ಸಹವಾಸದ ಅನುಭವವನ್ನು ನಿಷ್ಠೂರವಾಗಿ ತೋಡಿಕೊಂಡಿದ್ದರು.
ಯಕ್ಷಗಾನ ಕಲಾವಿದರೆಂದಲ್ಲ; ಯಾವುದೇ ಕಲೆಯ ಕಲಾವಿದರಲ್ಲಿ ಸಂಕುಚಿತ ಭಾವವಿದ್ದರೆ ಹೊಸ ಯೋಚನೆಗೆ ತೆರೆದುಕೊಳ್ಳಲೇಬೇಕು. ತೆರೆದುಕೊಳ್ಳದಿದ್ದರೆ...
                                                                              ****
`ಮುಚ್ಚಿಬಿಡಿ ಹಾಗಿದ್ದರೆ, ಯಕ್ಷರಂಗ ಸಂಸ್ಥೆಯನ್ನು' ಎಂದು ಬಿಟ್ಟರು ಕಾರಂತರು. ಅವರದ್ದು ಮಾತೆಂದರೆ ಮಾತೇ. ಹಿಂದೆಗೆಯುವ ಪ್ರಶ್ನೆಯೇ ಇಲ್ಲ. ಕಲಾವಿದರ `ಮುಚ್ಚಿದಂಥ ಮನಸ್ಸು' ಇದಕ್ಕೆ ಕಾರಣ ಎಂಬುದನ್ನು ನಾನಿಲ್ಲಿ ಹೇಳದೆ ವಿಧಿಯಿಲ್ಲ. ದಕ್ಷಿಣ ಅಮೆರಿಕದ ಪೆರುವಿನಲ್ಲಿ ನಮ್ಮ ಪ್ರದರ್ಶನವಿತ್ತು. ಪ್ರದರ್ಶನ ಮುಗಿದ ಬಳಿಕ ಶಿವರಾಮ ಕಾರಂತರಿಗೆ ಮತ್ತು ತಂಡದ ಕಲಾವಿದರಿಗೆ ಔತಣಕೂಟವೊಂದನ್ನು ಅಲ್ಲಿನ ಭಾರತೀಯ ರಾಯಭಾರ ಕಚೇರಿ ವತಿಯಿಂದ ಏರ್ಪಡಿಸಲಾಗಿತ್ತು. ಅಲ್ಲಿಂದ ಪ್ರತಿನಿಧಿಯೊಬ್ಬರು ನಾಲ್ಕೈದು ಕಾರುಗಳ ಜೊತೆಗೆ ಬಂದು ನಮ್ಮನ್ನು ಕರೆದೊಯ್ದರು. ಸಿಗ್ನಲ್ ದಾಟುವಾಗ ಒಂದು ಕಾರು ಹಿಂದುಳಿದು ಪ್ರಮಾದವಾಯಿತು. ದೂರದ ಊರು. ಭಾಷೆ ಗೊತ್ತಿಲ್ಲ. ಎಲ್ಲರಿಗೂ ಆತಂಕ.

ಪೆರುವಿನಂಥ ದೇಶ ಬೇರೆ! ಕೊನೆಗೆ ರಾಯಭಾರ ಕಚೇರಿಯಿಂದ ಪೊಲೀಸ್ ಠಾಣೆಗಳಿಗೆ ಸಂಪರ್ಕ ಸಾಧಿಸಿ ದಾರಿತಪ್ಪಿದ ಕಾರನ್ನು ಪತ್ತೆ ಮಾಡಲಾಯಿತು. ಅದರಲ್ಲಿದ್ದ ಕಲಾವಿದರು ನಮ್ಮನ್ನು ತಲುಪುವಾಗ ಕೊಂಚ ತಡವಾಯಿತು. ಕಾರಂತರು ಅಷ್ಟರಲ್ಲೇ ತಮ್ಮ ಮಿತಾಹಾರ ಸೇವಿಸಿ ನಿರ್ಗಮನಕ್ಕೆ ಸಿದ್ಧರಾಗಿದ್ದರು.

ಭರ್ಜರಿ ಔತಣ ಕೂಟ, ಅಲ್ಲಿ ಕಲಾವಿದರ ಅನಿಯಂತ್ರಿತ ಲಹರಿಯ ವರ್ತನೆ, ಮುಂದೆ ಕಲಾವಿದರು ತೋರಿದ ಅಸಹಕಾರ ಎಲ್ಲವೂ ಶಿವರಾಮ ಕಾರಂತರ ಕಿವಿಗೆ ತಲುಪಿ ಅವರು ಅಸಮಾಧಾನಗೊಂಡರು. `ಸಾಕಿನ್ನು ಯಕ್ಷರಂಗ' ಎಂಬ ಕಠಿಣವಾದ ಮಾತು ಅವರ ಬಾಯಿಯಿಂದಲೇ ಹೊರಟೇಬಿಟ್ಟಿತು. ಎ.ವಿ. ಕೃಷ್ಣಮಾಚಾರ್, ಪ್ರೊಫೆಸರ್ ಹೆರಂಜೆ ಕೃಷ್ಣ ಭಟ್ಟರಂಥ ಹಿರಿಯರು, `ನಿಮ್ಮ ನಿರ್ದೇಶನವನ್ನು ವಿಧೇಯವಾಗಿ ಪಾಲಿಸುವವರೂ ನಮ್ಮ ತಂಡದಲ್ಲಿದ್ದಾರೆ' ಎನ್ನುತ್ತ ಸತತವಾಗಿ ಅವರ ಮನವೊಲಿಸಿ ಯಕ್ಷರಂಗವನ್ನು ಮುಂದುವರಿಸುವಂತೆ ಕೇಳಿಕೊಂಡರು.

ನಾನು ಅಕ್ಷರಶಃ ಅತ್ತೇ ಬಿಟ್ಟಿದ್ದೆ. ರಂಗ ಯಾತ್ರೆ ನಿಲ್ಲುತ್ತದೆ ಎಂಬ ಒಂದೇ ಕಾರಣಕ್ಕಾಗಿ ಅಲ್ಲ, ಕಾರಂತರಿಗೆ ನೋವಾಗುವ ಪ್ರಸಂಗ ಸಂಭವಿಸಿತಲ್ಲ ಎಂಬುದಕ್ಕಾಗಿ ಕೂಡ. ಏಕೆಂದರೆ, ಅವರು ಕಲಾವಿದರು ಕಷ್ಟವನ್ನು ತೋಡಿಕೊಂಡಾಗ ತಮ್ಮ ಸ್ವಂತದಿಂದಲೇ ಸಹಾಯ ಮಾಡುತ್ತಿದ್ದುದು ನನಗೆ ತಿಳಿದಿತ್ತು. ಹಾಂ! ಹಾಗೊಮ್ಮೆ ಚಾಚಿದ ನನ್ನ ಬರಿಗೈಗಳನ್ನು ತುಂಬಿ ಕಳುಹಿಸಿದ್ದರು. ಅದನ್ನು ಮತ್ತೊಮ್ಮೆ ಹೇಳುತ್ತೇನೆ.

ಊರಿಗೆ ಮರಳಿದ ಕೆಲವು ದಿನಗಳ ಬಳಿಕ ಯಕ್ಷಗಾನ ಕೇಂದ್ರದ ಮುಂದೆ ಕಾರು ನಿಂತಿತು. ಕಾರಿನಲ್ಲಿಯೇ ಕುಳಿತುಕೊಂಡು ನಾನು ಬರುವುದನ್ನೇ ಕಾಯುವುದು, ಆಮೇಲೆ ನನ್ನನ್ನಾಧರಿಸಿ ಮೆಲ್ಲನೆ ನಡೆದುಕೊಂಡು ಬರುವುದು ವಾಡಿಕೆಯಾಗಿತ್ತು. ಕಾರಿನಿಂದ ಇಳಿಯದೆ, ನನ್ನ ಕೈಯಲ್ಲಿ ಒಂದು ಪುಸ್ತಕವನ್ನಿತ್ತು, ಅದರಲ್ಲಿ ಅಡಿ ಗೆರೆ ಹಾಕಿದ ಪ್ಯಾರಾಗಳನ್ನು ತೋರಿಸಿ, `ಇದನ್ನು ಸಾಧ್ಯವಾದರೆ ಓದು, ಕಲಾವಿದರಿಗೂ ತೋರಿಸು' ಎಂದರು. `ವೇದಾ, ಒಂದು ಕಾಫಿ ಮಾಡು' ಎಂಬ ಆದೇಶವನ್ನು ಕೇಳಿ ಅಭ್ಯಾಸವಾಗಿದ್ದ ನನ್ನ ಹೆಂಡತಿ ವೇದಾ, ಕಾರು ನಿಂತ ಸದ್ದು ಕೇಳಿಸಿದೊಡನೆ ಅಡುಗೆಮನೆಗೆ ಧಾವಿಸಿ ಒಲೆ ಉರಿಸಲಾರಂಭಿಸಿದಳು.
                                                                              ****
`ವೇದಾ'
ಇದು ಕೂಡ ಹಿರಿತನದ್ದೇ ಧ್ವನಿ. ಎ.ವಿ. ಕೃಷ್ಣಮಾಚಾರ್‌ರದು. ಜೀವನವಿಡೀ ಸಂಗೀತವೇದವನ್ನು ಪಠಿಸುತ್ತಿದ್ದವರು. ಮನೆಯೊಳಗೆ ಬಂದ ಕೂಡಲೇ ವಯಲಿನ್ ಚೀಲವನ್ನೆತ್ತಿ ವೇದಾಳ ಕೈಗೆ ಕೊಡುತ್ತಿದ್ದರು. ಅದನ್ನು ನಾವು ಇನ್ನಿಲ್ಲದ ಜಾಗ್ರತೆಯಲ್ಲಿ ತೆಗೆದಿಡುತ್ತಿದ್ದೆವು. ಏಕೆಂದರೆ, ಅದರೊಳಗೆ ತಮ್ಮ ಹಣದ ಚೀಲವಿದೆಯೆಂದು ಅವರೇ ಹೇಳಿದ್ದರು. ರಾತ್ರಿ ಮಲಗುವಾಗ ಮಾತ್ರ ಅವರ ಸನಿಹವೇ ವಯಲಿನ್‌ನ ಚೀಲವನ್ನು ಇರಿಸಬೇಕಾಗಿತ್ತು. `ಇದು ನನ್ನ ಜೀವನ ಸಂಗಾತಿ' ಎನ್ನುತ್ತಿದ್ದರು. ಸಂಗೀತ ಅವರ ಬದುಕಿನ ಒಂಟಿತನವನ್ನು ನೀಗಿಸಿತ್ತು

 ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ವಯಲಿನ್ ಅಭ್ಯಾಸ ಆರಂಭವಾದರೆ ಬಿಸಿಲು ಬೀಳುವವರೆಗೂ ಅವರ ಬಲಗೈಯ ಬಿಲ್ಲು ಚಲಿಸುತ್ತಲೇ ಇತ್ತು. ಎಡಗೈಯ ಬೆರಳುಗಳು ತಂತಿಯನ್ನು ಮೀಟಿ ಮೀಟಿ ಜಡ್ಡುಗಟ್ಟಿದ್ದವು. ವಯಲಿನ್ ಅನ್ನು ಆಧರಿಸುತ್ತಿದ್ದ ಚರಣಗಳು ಸವೆದಿದ್ದವು. ವಯಲಿನ್ ಸಂಗದಲ್ಲಿಯೇ ಬದುಕು ಸವೆಸಿದ `ಪದ್ಮಚರಣ'ರು ಕೊನೆಕೊನೆಗೆ ಉಡುಪಿಗೂ ಬೆಂಗಳೂರಿಗೂ ಓಡಾಡಿಕೊಂಡಿದ್ದರು.

`ನನಗೊಂದು ಕಣ್ಣಿನ ಶಸ್ತ್ರಕ್ರಿಯೆ ಆಗಬೇಕಾಗಿದೆ. ನಿಮ್ಮಲ್ಲಿ ಅನುಕೂಲಕರ ಆಸ್ಪತ್ರೆ ಇದೆಯೆ?' ಎಂದು ಅವರು ನನಗೆ ಪತ್ರ ಬರೆದಾಗ `ಅವಶ್ಯವಾಗಿ ಬನ್ನಿ' ಎಂದು ಉತ್ತರಿಸಿದ್ದೆ. ಶಿವರಾಮ ಕಾರಂತರಲ್ಲಿ ಈ ಬಗ್ಗೆ ಹೇಳಿದಾಗ ಅವರು ಕೂಡಲೇ ಉಡುಪಿಯ ಮಿತ್ರಾ ಆಸ್ಪತ್ರೆಗೆ, `ಈ ಬಗ್ಗೆ ಸಹಕಾರ ನೀಡುವಂತೆ' ಪತ್ರ ಬರೆದರು. ಪ್ರಸಿದ್ಧ ನೇತ್ರತಜ್ಞರಾದ ಡಾ. ಶ್ರಿನಿವಾಸ ರಾವ್ ಅವರು ಯಶಸ್ವಿಯಾಗಿ ಶಸ್ತ್ರಕ್ರಿಯೆ ನಡೆಸಿದರು. ಕೃಷ್ಣಮಾಚಾರ್ ಐದು ದಿನ ಆಸ್ಪತ್ರೆಯಲ್ಲಿ ಇದ್ದಾಗ ಸ್ವತಃ ಶಿವರಾಮ ಕಾರಂತರು ಎರಡು ಸಲ ಬಂದು ಕ್ಷೇಮ ವಿಚಾರಿಸಿದರು. ರಾತ್ರಿ ನಾನು ಕೃಷ್ಣಮಾಚಾರ್ ಜೊತೆ ಆಸ್ಪತ್ರೆಯಲ್ಲಿಯೇ ಇರುತ್ತಿದ್ದೆ.

`ಒಂದು ದಿನವಾದರೂ ವಯಲಿನ್ ನುಡಿಸದೇ ಇದ್ದವನಲ್ಲ ನಾನು. ಆಸ್ಪತ್ರೆಯಲ್ಲಿರುವಾಗ ಏನು ಮಾಡುವುದು?' ಎಂಬುದು ಅವರ ಚಿಂತೆಯಾಗಿತ್ತು. `ಶಸ್ತ್ರಚಿಕಿತ್ಸೆಯಾದ ಎರಡು ದಿನ ಸಾಧ್ಯವಿಲ್ಲ. ಮತ್ತೆ ಎಂದಿನಂತೆ ನಿಮ್ಮ ಸಂಗೀತ ಅಭ್ಯಾಸ ಮುಂದುವರಿಸಬಹುದು' ಎಂದು ಮಿತ್ರಾ ಆಸ್ಪತ್ರೆಯ ಡಾ. ಶ್ರಿಧರ ಹೊಳ್ಳರು ಅನುಮತಿ ನೀಡಿದ್ದೇ ಅವರಿಗೆ ಕೊಂಚ ನೆಮ್ಮದಿಯಾಗಿರಬೇಕು. ಒಂದು ಕಣ್ಣಿನ ಶಸ್ತ್ರಕ್ರಿಯೆಯಾದರೂ ಎರಡೂ ಕಣ್ಣುಗಳನ್ನು ಮುಚ್ಚಲಾಗಿತ್ತು. ನಾನು ಅವರ ಬೆಡ್‌ನ ಮೇಲೆ ವಯಲಿನ್ ಚೀಲವನ್ನು ಇಟ್ಟಾಗ ಅದನ್ನೆತ್ತಿ ಮಗುವಿನಂತೆ ಮಡಿಲಿನಲ್ಲಿ ಎತ್ತಿಕೊಂಡರು. ಸ್ವರ ಹೊಮ್ಮಿದ್ದೇ ತಡ, ಆಸ್ಪತ್ರೆಯಲ್ಲಿದ್ದವರಿಗೆಲ್ಲ ಆಶ್ಚರ್ಯ. ಎಲ್ಲೋ ರೇಡಿಯೊದಲ್ಲಿ ಕೇಳಿಸುತ್ತಿದೆ ಎಂದು ಕೆಲವರು ತಿಳಿದರು.

ಸ್ವರದ ಮೂಲ ಗೊತ್ತಾದಾಗ ನಾವಿದ್ದ ಸ್ಪೆಷಲ್ ವಾರ್ಡ್‌ನ ಸುತ್ತ ಜನ ಸೇರತೊಡಗಿದರು. ನಾನು ಮೆಲ್ಲನೆ ಅವರ ಕಿವಿಯಲ್ಲಿ ಹೇಳಿದೆ, `ಜನ ನಿಮ್ಮ ಸಂಗೀತ ಕೇಳಿ ಆನಂದಿಸುತ್ತಿದ್ದಾರೆ'. `ಹೌದಾ!' ಎಂದವರೇ ರಾಗವಿಸ್ತರಣೆಯ ಅಭ್ಯಾಸವನ್ನು ಬಿಟ್ಟು ದಾಸರ ಕೀರ್ತನೆಗಳನ್ನು ಲಯಕಾರಿಯಲ್ಲಿ ನುಡಿಸತೊಡಗಿದರು.

ಕೆಲವು ದಿನ ನಮ್ಮ ಮನೆಯಲ್ಲಿಯೇ ಇದ್ದು ಹೊರಡುವ ದಿನ, ತಮ್ಮ ಚೀಲದಿಂದ ಮೈಸೂರು ಸಿಲ್ಕ್ ಸೀರೆ ತೆಗೆದು, `ಇದು ನನ್ನ ಮಗಳಿಗೆ' ಎನ್ನುತ್ತ ವೇದಾಳ ಕೈಯಲಿಟ್ಟರು. ಅವಳೂ ಕೃಷ್ಣಮಾಚಾರ್‌ರನ್ನು ತಂದೆಯ ಸಮಾನ ಗೌರವದಿಂದ ಕಂಡಿದ್ದಳು. 1989ರ ಆಸುಪಾಸು ಇರಬಹುದು. ಆಗಲೇ ಸುಮಾರು 600 ರೂಪಾಯಿ ಬೆಲೆ ಬಾಳುವ ಸೀರೆಯದು. ಅಷ್ಟು ಬೆಲೆಯ ಸೀರೆಯನ್ನು ಆವರೆಗೆ ಕನಸಿನಲ್ಲಿಯೂ ಕಂಡವಳಲ್ಲ ನನ್ನ ಹೆಂಡತಿ. ಇವತ್ತಿಗೂ ಆ ಸೀರೆ ಪೆಟ್ಟಿಗೆಯಲ್ಲಿ ಬೆಚ್ಚಗಿದೆ, ನಮ್ಮ ಮನಸ್ಸಿನೊಳಗಿರುವ ಆ ಸಂಗೀತೋಪಾಸಕನ ನೆನಪಿನಂತೆ.

`ನೋಡಿ ನಿರ್ಮಲ ಜಲ ಸಮೀಪದಿ ಮಾಡಿಕೊಂಡರು ಪರ್ಣ ಶಾಲೆಯ' ಎಂದು ನೀಲಾವರ ರಾಮಕೃಷ್ಣಯ್ಯನವರು ಹೇಳಿ ಮುಗಿಸಿದ ಕೂಡಲೇ ಅದೇ ಸಾಲುಗಳನ್ನು ಅಷ್ಟೇ ಆವರ್ತದಲ್ಲಿ ವಯಲಿನ್‌ನ ನಾದದಲ್ಲಿ ತುಂಬಿಸುತ್ತಿದ್ದ ಕೃಷ್ಣಮಾಚಾರ್, ಶಿವರಾಮ ಕಾರಂತರನ್ನು ಅನುಸರಿಸಿಕೊಂಡು ಯಕ್ಷಲೋಕದೊಳಗೆ ಪ್ರವೇಶಿಸಿದವರು.

ಯಕ್ಷಗಾನ ಪರಂಪರೆ-ಪ್ರಯೋಗಗಳ ಸಂಕ್ರಮಣದ ದಿನಗಳನ್ನು ಅವರ ವಯಲಿನ್ ಅನುರಣನವಿಲ್ಲದೆ ಸ್ಮರಿಸಿಕೊಳ್ಳುವುದು ಅಸಾಧ್ಯ. ರಾಕ್ಷಸರ ಪ್ರವೇಶದ ಸಂದರ್ಭದಲ್ಲಿ ಸೆಟೆದು ನಿಲ್ಲುತ್ತಿದ್ದ ಅವರ ವಯಲಿನ್‌ನ ಬಿಲ್ಲು ಕರುಣ ರಸದಲ್ಲಿ ಬಾಗಿಬಿಡುತ್ತಿತ್ತು. ದುಃಖರಸದ ಅವರ ನುಡಿತಗಳಿಗೆ ನನ್ನ ಕಣ್ತುಂಬಿ ಬಂದದ್ದಿದೆ. ಮೇಲುಲೋಕದಲ್ಲಿ ಒಪ್ಪಂದ ಮಾಡಿಕೊಂಡೇ ಇಳಿದು ಬಂದ ಕಿನ್ನರ-ಗಂಧರ್ವರಂತೆ ಶಿವರಾಮ ಕಾರಂತರ ಭಾವಗಳಿಗೆ ಕೃಷ್ಣಮಾಚಾರ್ ದನಿಯಾಗುತ್ತಿದ್ದರು. ಭಾಗವತ ನೀಲಾವರ ರಾಮಕೃಷ್ಣಯ್ಯನವರು ಮತ್ತು ಎ.ವಿ. ಕೃಷ್ಣಮಾಚಾರ್‌ರ ಅಂತರಂಗದ ಸಂಭಾಷಣೆ ಎರಡು ಕಲೆಗಳ ಮುಖಾಮುಖಿ ಸಂವಾದದಂತಿತ್ತು. ಇವನ್ನೆಲ್ಲ ನಾನು ನೋಡಿದ್ದೆಷ್ಟು, ಕೇಳಿದ್ದೆಷ್ಟು, ಅರ್ಥಮಾಡಿಕೊಂಡದ್ದೆಷ್ಟು, ಮನನ ಮಾಡಿಕೊಂಡದ್ದೆಷ್ಟು!

ಛೆ! ಯಾರಾದರೂ ಕಾಲಚಕ್ರವನ್ನು ಹಿಂದೆ ತಿರುಗಿಸುವಂತಿದ್ದರೆ!
(ಸಶೇಷ)
ನಿರೂಪಣೆ: ಹರಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT