ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಕ್ಷಣ ಅರ್ಥವಾದ ವಿವರಣೆ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಅದೊಂದು ದೊಡ್ಡ ಕಂಪನಿ. ಕಂಪನಿಯ ಮಾಲೀಕರಿಗೆ ನೌಕರರ ಭವಿಷ್ಯದ ಬಗ್ಗೆ ಬಹಳ ಯೋಚನೆ. ಅವರು ಹಲವಾರು ಯೋಜನೆಗಳನ್ನು ತಂದು ನೌಕರರ ಬೆಳವಣಿಗೆಗೆ ಅನುಕೂಲವಾಗುವಂತೆ ಮಾಡಿದ್ದರು.

ಇನ್ನೊಂದು ಹೊಸ ಅವಕಾಶ ಒದಗಿ ಬಂತು. ಅದನ್ನು ಜಾರಿಗೆ ತಂದರೆ ಕೆಲಸದಲ್ಲಿರುವಾಗ ಯಾರಿಗಾದರೂ ಅಪಘಾತವಾದರೆ ಅಥವಾ ಮರಣ ಸಂಭವಿಸಿದರೆ ಪರಿವಾರದವರಿಗೆ ಸಾಕಷ್ಟು ಹಣ ಸಂದಾಯವಾಗುವ ಮತ್ತು ಮಕ್ಕಳು ತಮ್ಮ ಕಾಲ ಮೇಲೆ ನಿಲ್ಲುವ ತನಕ ಅವರ ಶಿಕ್ಷಣದ ಸಮಸ್ತ ಖರ್ಚನ್ನು ವಿಮಾ ಕಂಪನಿ ವಹಿಸಿಕೊಳ್ಳುತ್ತಿತ್ತು. ಆದರೆ ಅದಕ್ಕೊಂದು ಕರಾರು ಇತ್ತು. ಈ ಯೋಜನೆಯನ್ನು ಕಂಪನಿಯ ಎಲ್ಲರೂ ಒಪ್ಪಬೇಕಿತ್ತು. ಒಬ್ಬರು ಒಪ್ಪದಿದ್ದರೂ ಆ ಯೋಜನೆಯನ್ನು ಅಳವಡಿಸಲು ಸಾಧ್ಯವಿರಲಿಲ್ಲ.

ಕಂಪನಿಯ ಅಧಿಕಾರಿಗಳು ಎಲ್ಲ ನೌಕರರನ್ನು ಕರೆದು ಯೋಜನೆಯನ್ನು ವಿವರಿಸಿದರು. ಅನೇಕರು ಅದನ್ನು ತಕ್ಷಣವೇ ಒಪ್ಪಿಕೊಂಡರು. ಕೆಲವರು ಪ್ರಶ್ನೆಗಳನ್ನು ಕೇಳಿ ಸಮಾಧಾನದ ಉತ್ತರಗಳನ್ನು ಪಡೆದು ಒಪ್ಪಿದರು. ಒಂದಿಬ್ಬರು ಎರಡು ದಿನಗಳ ಕಾಲಾವಧಿ ಕೇಳಿ ಬೇರೆ ಕಡೆಗೆ ಅದರ ಬಗ್ಗೆ ಮಾಹಿತಿ ಪಡೆದು ತಮ್ಮ ಒಪ್ಪಿಗೆ ನೀಡಿದರು. ಆದರೆ ಒಬ್ಬನಿಗೆ ಮಾತ್ರ ಈ ಯೋಜನೆ ಇಷ್ಟವಾಗಲೇ ಇಲ್ಲ. ಯಾರು ಏನು ಹೇಳಿದರೂ ಆತ ನನಗೆ ಒಪ್ಪಿಗೆ ಇಲ್ಲ ಎಂದು ತಲೆ ಅಲ್ಲಾಡಿಸಿ ಹೊರಟುಬಿಡುತ್ತಿದ್ದ. ಕಾಯಿದೆಯ ಪ್ರಕಾರ ಎಲ್ಲರೂ ಒಪ್ಪದ ಹೊರತು ಯೋಜನೆಯನ್ನು ಜಾರಿಗೆ ತರುವುದು ಆಗುತ್ತಿರಲಿಲ್ಲ.

ಕಂಪನಿಯ ಎಲ್ಲರಿಗೂ ಬಹಳ ಬೇಜಾರಾಯಿತು. ಈತನೊಬ್ಬ ಒಪ್ಪಿ ಸಹಿ ಮಾಡಿದರೆ ಸಾಕು ತುಂಬ ಪ್ರಯೋಜನಕಾರಿಯಾದ ಯೋಜನೆ ತಕ್ಷಣವೇ ಜಾರಿಯಾಗುತ್ತದೆ. ಆದರೆ ಈತನೋ ಜಗಮೊಂಡ.

ಒಂದು ದಿನ ಇವನ ಮ್ಯೋನೇಜರ್ ಕರೆದು ಹೇಳಿದರು,  ನೋಡಿಯಪ್ಪ, ಇದು ನಿಮಗೆ ತುಂಬ ಅನುಕೂಲವಾಗುತ್ತದೆ. ಕಂಪನಿಗೆ ಈ ಯೋಜನೆಯಿಂದ ಬಹಳ ಹಣ ವ್ಯಯವಾದರೂ ನೌಕರರ ಕುಟುಂಬಗಳಿಗೆ ಸಹಾಯವಾಗಲೆಂದು ಮಾಲಿಕರು ಒಪ್ಪಿದ್ದಾರೆ ನೀವೂ ದಯಮಾಡಿ ಒಪ್ಪಿ. ಅದರಿಂದ ಎಲ್ಲರಿಗೂ ಇದು ಅನ್ವಯವಾಗುತ್ತದೆ .

`ಏನು ಸ್ವಾಮಿ, ತಾವು ಹೇಳುವುದು? ನನ್ನ ಕುಟುಂಬಕ್ಕೆ ಹಣ ಬರಲೆಂದು ನಾನು ಅಪಘಾತಕ್ಕೆ ಒಳಗಾಗಬೇಕೇ? ಸಾಯಬೇಕೇ? ನಾನೇ ಸತ್ತ ಮೇಲೆ ಹಣ ಯಾರಿಗೆ ಬಂದರೇನು~  ಎಂದು ಪ್ರಶ್ನಿಸಿದ ಈ ಭೂಪತಿ.

`ಹಾಗಲ್ಲಪ್ಪ, ವಿಮೆ ಮಾಡುವುದು ಸಾಯುವುದಕ್ಕೇನು? ಈ ಕಾಲದಲ್ಲಿ ಏನು ಯಾವಾಗ ಆದೀತು ಎಂದು ಹೇಳುವುದು ಕಷ್ಟ. ಎಲ್ಲವೂ ಸರಿಯಾಗಿದ್ದರೆ ಭಗವಂತನ ಕೃಪೆ. ಒಂದು ವೇಳೆ ಏನಾದರೂ ಹೆಚ್ಚು ಕಡಿಮೆಯಾದರೆ ಸಂಸಾರಕ್ಕೆ ಸಹಾಯ ಮಾಡುವವರು ಯಾರು?~  ಅಧಿಕಾರಿ ಇವನನ್ನು ಒಲಿಸಲು ನೋಡಿದರು.

`ಸರ್, ನೀವು ಏನೇ ಹೇಳಿ ನನಗೆ ಇದು ಸಮ್ಮತವಿಲ್ಲ. ನೀವೆಲ್ಲರೂ ಯಾವ ಯೋಜನೆಯನ್ನಾದರೂ ಮಾಡಿಕೊಳ್ಳಿ. ನನಗೆ ಮಾತ್ರ ಇದರಲ್ಲಿ ಆಸಕ್ತಿ ಇಲ್ಲ~  ಎಂದು ರಪ್ಪನೇ ಮುಖಕ್ಕೆ ಹೊಡೆದಂತೆ ಹೇಳಿ ಹೋಗಿಬಿಟ್ಟ.

ಮ್ಯೋನೇಜರ್‌ರಂತೆ ಅನೇಕ ಅಧಿಕಾರಿಗಳು, ಸಹೋದ್ಯೋಗಿಗಳು ಅವನನ್ನು ಒಪ್ಪಿಸಲು ಹೆಣಗಿದರು. ಆದರೆ ಅವನದು ಒಂದೇ ಉತ್ತರ, ತನಗೆ ಯೋಜನೆಯಿಂದ ಆಗುವ ಲಾಭದ ಬಗ್ಗೆ ಮನವರಿಕೆಯಾಗುತ್ತಿಲ್ಲ . ಕೊನೆಗೆ ಎಲ್ಲರೂ ನಿರಾಶರಾಗಿ ಯೋಜನೆಯ ಆಸೆಯನ್ನು ಬಿಟ್ಟರು. ಕಂಪನಿಯ ಮಾಲೀಕರು ಈ ಯೋಜನೆ ಇನ್ನೂ ಯಾಕೆ ಜಾರಿಯಾಗಿಲ್ಲವೆಂದು ಅಧಿಕಾರಿಗಳಿಗೆ ಕೇಳಿದಾಗ ಅವರು ಈತನ ಮೊಂಡುತನದ ಬಗ್ಗೆ ತಿಳಿಸಿ ಅವನನ್ನು ಬದಲಾಯಿಸುವುದು ಸಾಧ್ಯವಿಲ್ಲವೆಂದರು. ಆಗ ಮಾಲೀಕರು ಆತನನ್ನು ತಮ್ಮೆಡೆಗೆ ಕಳುಹಿಸಲು ಹೇಳಿದರು.

ಮರುದಿನ ಈತ ಮಾಲೀಕರ ಕೊಠಡಿಗೆ ಹೋದಾಗ ಮಾಲೀಕರು ನಗುತ್ತಾ ಅವನ ಮುಂದೆ ಒಂದು ಕಾಗದವನ್ನು ಸರಿಸಿ ಪೆನ್ನು ಕೂಡ ನೀಡಿ ಹೇಳಿದರು,  `ನೋಡಪ್ಪ, ಇದು ಯೋಜನೆಗೆ ನಿನ್ನ ಅನುಮತಿ ಪತ್ರ. ಅದಕ್ಕೆ ಸಹಿ ಮಾಡು. ಇಲ್ಲದಿದ್ದರೆ ಅದರ ಪಕ್ಕದಲ್ಲಿದೆಯಲ್ಲ ನಿನ್ನನ್ನು ನೌಕರಿಯಿಂದ ತೆಗೆದು ಹಾಕಿದ ಪತ್ರ, ಅದನ್ನು ತೆಗೆದುಕೋ.~ ಈತನೂ ನಗುತ್ತಲೇ ಅನುಮತಿ ಪತ್ರಕ್ಕೆ ಸಹಿ ಮಾಡಿ ಹೊರಗೆ ಬಂದ. ಎಲ್ಲರಿಗೂ ಆಶ್ಚರ್ಯ! ಒಂದೇ ಕ್ಷಣದಲ್ಲಿ ಇವನು ಹೇಗೆ ಒಪ್ಪಿಗೆ ನೀಡಿದ. ಅವನ ಸ್ನೇಹಿತ ಕೇಳಿದ,  `ಅದೇನಾಯಿತೋ ಅಷ್ಟು ಬೇಗ ಸಹಿ ಮಾಡಿ ಬಂದುಬಿಟ್ಟೆ?~  ಈತ ಪೆದ್ದನ ನಗೆ ನಕ್ಕು ಹೇಳಿದ,  `ಈ ಯೋಜನೆಯ ಲಾಭವನ್ನು ಇಷ್ಟು ಸುಲಭವಾಗಿ, ಸ್ಪಷ್ಟವಾಗಿ ನನಗೆ ಯಾರೂ ಮೊದಲು ವಿವರಿಸಿರಲಿಲ್ಲ. ಈಗ ನನಗೆ ಯಾವ ಸಂಶಯವೂ ಇಲ್ಲ.~

 ಮೂರು ತರಹದ ಕುದುರೆಗಳಿರುತ್ತವಂತೆ. ಒಂದಕ್ಕೆ ಚಾಟಿಯ ನೆನಪಿದ್ದರೆ ಸಾಕು, ಚುರುಕಾಗುತ್ತದೆ. ಇನ್ನೊಂದಕ್ಕೆ ಚಾಟಿಯನ್ನು ತೋರಿಸಬೇಕಾಗುತ್ತದೆ, ಮೂರನೆಯದಕ್ಕೆ ಚಾಟಿಯ ಪ್ರಯೋಗ ಮಾಡಬೇಕಾಗುತ್ತದೆ. ಮನುಷ್ಯರಲ್ಲೂ ಹಾಗೆಯೇ, ಕೆಲವರಿಗೆ ಸರಿಯಾದ ಸ್ಥಳದಲ್ಲಿ, ಕಾಲದಲ್ಲಿ ಪೆಟ್ಟು ಬೀಳದೇ ಪಾಠ ಕಲಿಯುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT