ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರ್ಕಬದ್ಧವೇ ಜಿಎಸ್‌ಟಿ ವರ್ಗೀಕರಣ?

Last Updated 12 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕೆಲವು ವಸ್ತುಗಳ ಮೇಲಿನ ಪರೋಕ್ಷ ತೆರಿಗೆಯನ್ನು ಕಳೆದ ವಾರ ಮತ್ತೆ ಕಡಿಮೆ ಮಾಡಲಾಯಿತು. ಹೀಗೆ ಆಗುವುದು ಸಾಮಾನ್ಯವಾಗಿ ಮೂರು ಕಾರಣಗಳಿಂದಾಗಿ. ಮೊದಲನೆಯದು, ರಾಜಕೀಯವಾಗಿ ಸೂಕ್ಷ್ಮವಾದ ಕೆಲವು ವಸ್ತುಗಳು. ಗುಜರಾತಿನ ಖಾಕ್ರಾ ಅಂಥವುಗಳಲ್ಲಿ ಒಂದು. ಇದರ ಮೇಲಿನ ಹೆಚ್ಚಿನ ತೆರಿಗೆ ನಕಾರಾತ್ಮಕವಾಗಿ ಪರಿಣಮಿಸಬಲ್ಲದು. ಕೆಲವು ವಸ್ತುಗಳ ಮೇಲಿನ ತೆರಿಗೆ ಹೆಚ್ಚಿರುವ ಕಾರಣ ಅವು ದುಬಾರಿಯಾಗಿ, ಅವುಗಳ ಮಾರಾಟ ಕುಸಿದು, ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗಬಹುದು ಎಂದು ಸರ್ಕಾರಕ್ಕೆ ಅನಿಸಿರಬಹುದು ಎನ್ನುವುದು ಎರಡನೆಯ ವಿಚಾರ. ಕೆಲವು ವಸ್ತುಗಳನ್ನು ತಪ್ಪಾಗಿ ವರ್ಗೀಕರಣ ಮಾಡಿ, ಹೆಚ್ಚು ತೆರಿಗೆ ವಿಧಿಸಲಾಯಿತು ಎನ್ನುವುದು ಮೂರನೆಯದು.

ಬಡವ ಹಾಗೂ ಶ್ರೀಮಂತನಿಂದ ಒಂದೇ ರೀತಿಯಲ್ಲಿ ತೆರಿಗೆ ವಸೂಲಿ ಮಾಡುವ ಕಾರಣ ಪರೋಕ್ಷ ತೆರಿಗೆಗಳು ಉತ್ತಮವಲ್ಲ. ಕೋಕಾ ಕೋಲಾ ಖರೀದಿಸಲು ನಾನು ಮತ್ತು ನನ್ನ ವಾಹನ ಚಾಲಕ ಒಂದೇ ಪ್ರಮಾಣದ ತೆರಿಗೆ ಪಾವತಿಸುತ್ತೇವೆ. ಆದಾಯ ತೆರಿಗೆಯಂತಹ ನೇರ ತೆರಿಗೆಗಳ ವಿಚಾರದಲ್ಲಿ ಪ್ರಭುತ್ವ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಏಳು ಹಂತಗಳಿವೆ: ಶೇಕಡ 0, ಶೇ 0.25, ಶೇ 3, ಶೇ 5, ಶೇ 12, ಶೇ 18 ಮತ್ತು ಶೇ 28. ಯಾವ ವಸ್ತುವಿಗೆ ಯಾವ ಪ್ರಮಾಣದಲ್ಲಿ ತೆರಿಗೆ ವಿಧಿಸಬೇಕು ಎಂಬುದನ್ನು ಜಿಎಸ್‌ಟಿ ಮಂಡಳಿ ತೀರ್ಮಾನಿಸುತ್ತದೆ. ಈ ಮಂಡಳಿಯಲ್ಲಿ ರಾಜ್ಯಗಳು ಹಾಗೂ ಕೇಂದ್ರದ ಪ್ರತಿನಿಧಿಗಳು ಇರುತ್ತಾರೆ. ರಾಜ್ಯಗಳ ಹಣಕಾಸು ಸಚಿವರು ಅಲ್ಲಿ ಆಯಾ ರಾಜ್ಯದ ಪ್ರತಿನಿಧಿಯಾಗಿರುತ್ತಾರೆ. ಆದರೆ ಎಲ್ಲ ಸಂದರ್ಭಗಳಿಗೂ ಈ ಮಾತು ಅನ್ವಯವಾಗದು. ಉದಾಹರಣೆಗೆ, ಕರ್ನಾಟಕದ ಪ್ರತಿನಿಧಿಯಾಗಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಮಂಡಳಿಯಲ್ಲಿದ್ದಾರೆ.

ಯಾವ ವಸ್ತುಗಳಿಗೆ, ಸೇವೆಗಳಿಗೆ ಶೂನ್ಯ ತೆರಿಗೆ, ಯಾವುದಕ್ಕೆ ಶೇ 28ರಷ್ಟು ತೆರಿಗೆ ಎಂಬುದು ಹಾಗೂ ಅವುಗಳಿಗೆ ಏಕೆ ಅಷ್ಟು ತೆರಿಗೆ ನಿಗದಿ ಮಾಡಲಾಗಿದೆ ಎಂಬುದು ನನಗೆ ಆಸಕ್ತಿಯ ವಿಚಾರ. ಶೇ 28ರಷ್ಟು ತೆರಿಗೆ ವಿಧಿಸುವ ಪಟ್ಟಿಯಲ್ಲಿ ಶುಕ್ರವಾರದವರೆಗೂ ಒಟ್ಟು 227 ಸರಕು, ಸೇವೆಗಳಿದ್ದವು. ಚ್ಯೂಯಿಂಗ್‌ ಗಮ್‌ನಿಂದ ಆರಂಭವಾಗಿ ಬಟ್ಟೆ ಅಂಗಡಿಗಳಲ್ಲಿ ಬಟ್ಟೆಗಳನ್ನು ಪ್ರದರ್ಶನಕ್ಕೆ ಇರಿಸಲು ಬಳಸುವ ಬೊಂಬೆಗಳವರೆಗಿನ ವಸ್ತುಗಳು ಆ ಪಟ್ಟಿಯಲ್ಲಿದ್ದವು.

ಜಿಎಸ್‌ಟಿ ಮಂಡಳಿಯ ಸಭೆಯ ನಂತರ, ಈ ಪ್ರಮಾಣದ ತೆರಿಗೆ ಪಟ್ಟಿಯಲ್ಲಿ ಕೇವಲು 50 ಹೆಸರುಗಳು ಉಳಿದುಕೊಳ್ಳುತ್ತವೆ ಎಂದು ಭಾಸವಾಗುತ್ತಿದೆ. ನಾವು ಯಾವುದಕ್ಕೆ ಅತಿ ಹೆಚ್ಚು ತೆರಿಗೆ ನೀಡಬೇಕು ಎಂಬುದನ್ನು ಮಂಡಳಿ ಹೇಗೆ ತೀರ್ಮಾನ ಮಾಡುತ್ತದೆ? ಇದನ್ನು ಸರ್ಕಾರ ಅಭಿಪ್ರಾಯಗಳನ್ನು ಆಧರಿಸಿ ತೀರ್ಮಾನಿಸುತ್ತದೆ. ಅದು ವಸ್ತುಗಳನ್ನು ಸಮಾಜಕ್ಕೆ ಮಾರಕವಾಗುವ (sinful goods) ಅಥವಾ ಆರೋಗ್ಯಕ್ಕೆ ಒಳ್ಳೆಯದಲ್ಲದ್ದು (demerit goods) ಎಂದು ವರ್ಗೀಕರಿಸುತ್ತದೆ.

ಶೇಕಡ 28ರಷ್ಟು ತೆರಿಗೆ ಪಟ್ಟಿಯಿಂದ ಶೇ 18ರಷ್ಟು ತೆರಿಗೆಯ ಪಟ್ಟಿಗೆ ಬರುವ ವಸ್ತುಗಳಲ್ಲಿ ಚ್ಯೂಯಿಂಗ್ ಗಮ್, ಚಾಕೊಲೆಟ್, ಶೇವಿಂಗ್‌ ಸಾಮಗ್ರಿಗಳು, ಬಟ್ಟೆ ತೊಳೆಯಲು ಬಳಸುವ ಪೌಡರ್ ಕೂಡ ಸೇರಿವೆ ಎಂದು ಮಂಡಳಿಯ ತೀರ್ಮಾನವನ್ನು ಪ್ರಕಟಿಸುವ ವೇಳೆ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದರು. ‘ಸಮಾಜಕ್ಕೆ ಮಾರಕವಾಗುವ ಹಾಗೂ ಆರೋಗ್ಯಕ್ಕೆ ಒಳ್ಳೆಯದಲ್ಲದ ವಸ್ತುಗಳನ್ನು ಮಾತ್ರ ಶೇ 28ರ ತೆರಿಗೆ ಪಟ್ಟಿಯಲ್ಲಿ ಇರಿಸಬೇಕು ಎಂಬ ವಿಚಾರದಲ್ಲಿ ಮಂಡಳಿಯಲ್ಲಿ ಒಮ್ಮತ ವ್ಯಕ್ತವಾಯಿತು’ ಎಂದು ಅವರು ಹೇಳಿದರು. ‘ಸಮಾಜಕ್ಕೆ ಒಳಿತಲ್ಲದ’ ಹಾಗೂ ‘ಆರೋಗ್ಯಕ್ಕೆ ಒಳ್ಳೆಯದಲ್ಲದ’ ಎಂದು ದೇಶದ ಪ್ರಭುತ್ವ ಹಾಗೂ ಇಲ್ಲಿನ ರಾಜಕಾರಣಿಗಳು ಯಾವುದನ್ನು ಪರಿಗಣಿಸುತ್ತಾರೆ ಎಂಬುದು ಆಸಕ್ತಿಕರ ವಿಚಾರ.

ಕ್ರೈಸ್ತ ಸಂಪ್ರದಾಯದಲ್ಲಿ ವಿವರಿಸಿರುವ ‘ಪಾಪ’ದ ಪರಿಕಲ್ಪನೆ ಹಿಂದೂ ನಂಬಿಕೆಗಳಲ್ಲಿ ಇಲ್ಲ ಎಂಬುದನ್ನು ಒಪ್ಪಿಕೊಂಡು ನಾವು ಮುಂದಡಿ ಇಡಬೇಕು. ಬೈಬಲ್‌ ಹೇಳಿರುವಂತೆ ಪಾಪ ಅಂದರೆ, ದೇವರ ಇಚ್ಛೆಗೆ ವಿರುದ್ಧವಾಗಿ ಅಪರಾಧ ಎಸಗುವುದು. ಉದಾಹರಣೆಗೆ, ತಮ್ಮಲ್ಲಿ ಕಾಮ ಪ್ರಜ್ಞೆಯನ್ನು ಜಾಗೃತಗೊಳಿಸುವ ಹಣ್ಣನ್ನು ದೇವರ ಮಾತಿಗೆ ವಿರುದ್ಧವಾಗಿ ಆಡಂ ಮತ್ತು ಈವ್ ತಿಂದಿದ್ದು ಮೊದಲ ಪಾಪ ಕೃತ್ಯ ಎಂಬುದು ಕ್ರೈಸ್ತ ನಂಬಿಕೆ. ಸೋಮಾರಿತನ ಹಾಗೂ ಲಾಲಸೆ ಕ್ರೈಸ್ತ ನಂಬಿಕೆಗಳ ಪ್ರಕಾರ ಪಾಪ ಕೃತ್ಯಗಳು. ಇವುಗಳನ್ನು ಆಧರಿಸಿ ದೇವರು ವ್ಯಕ್ತಿ ಹೇಗೆ ಎಂದು ತೀರ್ಮಾನಿಸುತ್ತಾನೆ. ಆದರೆ ಇವೆರಡೂ ನೈಸರ್ಗಿಕ. ಇಂತಹ ನಂಬಿಕೆ ನಮ್ಮಲ್ಲಿ ಇಲ್ಲ. ನಾವು ‘ಪಾಪ’ ಎಂಬುದನ್ನು ಅದರ ಸಾಮಾನ್ಯ ಅರ್ಥವನ್ನು ಬಳಸಿ ಪರಿಶೀಲಿಸೋಣ. ಪಾಪ ಅಂದರೆ, ಅನೈತಿಕ ಅಥವಾ ಅನೈತಿಕ ಕೆಲಸಗಳನ್ನು ಉತ್ತೇಜಿಸುವುದು. ಇದಕ್ಕೆ ಒಂದು ಉದಾಹರಣೆ ಮದ್ಯ.

ಮದ್ಯವು ಜಿಎಸ್‌ಟಿ ವ್ಯಾಪ್ತಿಯಲ್ಲೇ ಇಲ್ಲ ಎಂಬುದು ನಿಜ. ರಾಜ್ಯಗಳು ತಮಗೆ ಸರಿ ಅನಿಸಿದ ರೀತಿಯಲ್ಲಿ ಮದ್ಯದ ಮೇಲೆ ತೆರಿಗೆ ವಿಧಿಸಬಹುದು (ಗುಜರಾತ್‌ನಂತಹ ರಾಜ್ಯಗಳು ಮದ್ಯದ ಮೇಲೆ ತೆರಿಗೆ ವಿಧಿಸುವುದಿಲ್ಲ. ಏಕೆಂದರೆ ಅಲ್ಲಿ ಜನಸಾಮಾನ್ಯರಿಗೆ ಮದ್ಯದ ಅಧಿಕೃತ ಮಾರಾಟ ಇಲ್ಲ. ಅನಧಿಕೃತವಾಗಿ ಅಲ್ಲಿನ ಕಥೆ ಬೇರೆಯದೇ ಇದೆ). ವಿಚಿತ್ರವೆಂದರೆ, ಮದ್ಯ ಜಿಎಸ್‌ಟಿ ವ್ಯಾಪ್ತಿಯಲ್ಲಿ ಇಲ್ಲದ ಕಾರಣಕ್ಕೇ ಸೋವಿಯೂ ಆಗಿದೆ.

ಮುಂಬೈನ ರೆಸ್ಟೊರೆಂಟ್‌ಗಳಲ್ಲಿ ಮದ್ಯ ಸೇವಿಸಿ, ಊಟ ಮಾಡಿದರೆ, ಊಟಕ್ಕೆ ಶೇ 18ರಷ್ಟು ತೆರಿಗೆ ಪಾವತಿಸಬೇಕು. ಮದ್ಯಕ್ಕೆ ಶೇ 10ರಷ್ಟು (ಮೌಲ್ಯವರ್ಧಿತ ತೆರಿಗೆ) ಮಾತ್ರ ತೆರಿಗೆ ಪಾವತಿಸಿದರೆ ಸಾಕು. ಇದರ ಬಗ್ಗೆ ಹೆಚ್ಚು ದೂರುವಂತಿಲ್ಲ. ಆದರೆ ಒಂದು ವ್ಯವಸ್ಥೆ ಪರಿಪೂರ್ಣವಾಗಿಲ್ಲದಿರುವುದರ ಸಂಕೇತ ಇದು.

ಆರೋಗ್ಯಕ್ಕೆ ಮಾರಕವಾಗುವ ವಸ್ತುಗಳಿಗೆ ಸಂಬಂಧಿಸಿದ ವಿಚಾರ ಇನ್ನೂ ಸಂಕೀರ್ಣವಾಗಿದೆ. ಯಾವ ವಸ್ತುಗಳ ಸೇವನೆಯು ಸಾಮಾಜಿಕವಾಗಿ ಸ್ವೀಕಾರಾರ್ಹ ಅಲ್ಲವೋ, ಅವು ಈ ಪಟ್ಟಿಯಲ್ಲಿ ಬರುತ್ತವೆ. ಮದ್ಯ ಕೂಡ ಈ ವರ್ಗಕ್ಕೇ ಸೇರುತ್ತದೆ ಎಂಬುದು ನಿಜ. ಅದೇ ರೀತಿ, ತಂಬಾಕು ಹಾಗೂ ಜಂಕ್‌ ಫುಡ್‌ಗಳೂ ಸೇರಿಕೊಂಡಿವೆ. ಈ ಕಾರಣದಿಂದಾಗಿಯೇ ನಾವು ಸಮಾಜಕ್ಕೆ ಮಾರಕವಾಗುವ ಹಾಗೂ ಆರೋಗ್ಯಕ್ಕೆ ಒಳ್ಳೆಯದಲ್ಲದ ವಸ್ತುಗಳ ಪಟ್ಟಿಯನ್ನು ಒಮ್ಮೆ ಪರಿಶೀಲಿಸಬೇಕು.

ಈ ಪಟ್ಟಿಯಲ್ಲಿ ಬಣ್ಣಗಳು (ಮನೆ ಅಥವಾ ಕಚೇರಿಗೆ ಬಳಿಯಲು ಬಳಸುವುದು), ಕಲಾವಿದರು ಹಾಗೂ ಶೂ ಪಾಲಿಶ್ ಮಾಡುವವರು ಬಳಸುವ ಬಣ್ಣಗಳು (ಅತ್ಯಂತ ಬಡ, ಬೀದಿ ಬದಿಯ ಕೆಲಸಗಾರರು ಬಳಸುವ ವಸ್ತುಗಳು ಇವು) ಇವೆ. ಇಂಥ ವ್ಯಕ್ತಿಗಳಿಗೆ ಏಕೆ ಶಿಕ್ಷೆ? ಇಂತಹ ವಸ್ತುಗಳು ಸಮಾಜಕ್ಕೆ ಮಾರಕ ಅಥವಾ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಯಾವ ಆಧಾರದಲ್ಲಿ ವರ್ಗೀಕರಿಸಲಾಯಿತು ಎಂಬುದನ್ನು ಊಹಿಸಿಕೊಳ್ಳುವುದೂ ಕಷ್ಟ.

ದುಬಾರಿಯಾಗಿರುವ ಹಾಗೂ ಬಡವರಿಗೆ ಎಟುಕದ ಪಟಾಕಿಗಳೂ ಈ ಪಟ್ಟಿಯಲ್ಲಿವೆ. ಅದೇ ರೀತಿ, ಅಗ್ನಿ ಶಾಮಕಗಳೂ ಸೇರಿಕೊಂಡಿವೆ. ನನಗೆ ವಿಚಿತ್ರ ಅನಿಸುತ್ತಿದೆ. ಸುರಕ್ಷತಾ ಗುಣಮಟ್ಟ ಅತ್ಯಂತ ಕಡಿಮೆ ಇರುವ ರಾಷ್ಟ್ರದಲ್ಲಿ, ಸುರಕ್ಷತೆಗೆ ಬೇಕಿರುವ ವಸ್ತುಗಳನ್ನು ದುಬಾರಿ ಮಾಡುವುದು ಏಕೆ?

ಯಾಂತ್ರೀಕೃತ ಕಿರು ದೋಣಿಗಳು ಹಾಗೂ ಖಾಸಗಿ ವಿಮಾನಗಳನ್ನೂ ದ್ವಿಚಕ್ರ ವಾಹನಗಳು ಮತ್ತು ಕಾರುಗಳ ಜೊತೆ ಶೇ 28ರಷ್ಟರ ತೆರಿಗೆ ಪಟ್ಟಿಯಲ್ಲಿ ಇರಿಸಲಾಗಿದೆ. ಬಡ ರಾಷ್ಟ್ರವೊಂದರಲ್ಲಿ ಕಾರುಗಳು ಲಕ್ಷುರಿ ಎನ್ನುವುದನ್ನು ಒಪ್ಪಬಲ್ಲೆ. ಆದರೆ ದ್ವಿಚಕ್ರ ವಾಹನಗಳ ಕಥೆ? ದ್ವಿಚಕ್ರ ವಾಹನಗಳನ್ನು ಹೊಂದುವುದು ಹೇಗೆ ಸಮಾಜಕ್ಕೆ  ಮಾರಕ ಹಾಗೂ ಆರೋಗ್ಯಕ್ಕೆ ಒಳ್ಳೆಯದಲ್ಲ? ಟೈರ್‌ಗಳ ಮೇಲೆಯೂ ಇದೇ ಪ್ರಮಾಣದ ತೆರಿಗೆ ವಿಧಿಸಲಾಗಿದೆ. ಅಂದರೆ, ಎಸ್‌ಯುವಿಯ ಟೈರ್‌ ಬದಲಾವಣೆಗೂ, ಸೈಕಲ್ಲಿನ ಟೈರ್‌ ಬದಲಾವಣೆಗೂ ಒಂದೇ ಪ್ರಮಾಣದ ತೆರಿಗೆ ಪಾವತಿಸಬೇಕು.

ಹವಾ ನಿಯಂತ್ರಕಗಳು, ರೆಫ್ರಿಜರೇಟರ್‌ಗಳು, ಬಟ್ಟೆ ತೊಳೆಯುವ ಯಂತ್ರಗಳು ಮತ್ತು ನೀರು ಕಾಯಿಸುವ ಸಾಧನಗಳು ಕೂಡ ಇದೇ ವರ್ಗದಲ್ಲಿ ಬರುತ್ತವೆ. ನಮ್ಮಂತಹ ದೇಶಗಳಲ್ಲಿ ಇವೆಲ್ಲ ಲಕ್ಷುರಿ ವಸ್ತುಗಳು ಎಂದು ವಾದಿಸಬಹುದು. ಆದರೆ ಇವುಗಳನ್ನೆಲ್ಲ ವರ್ಗೀಕರಿಸುವಾಗ ಸರಿಯಾಗಿ ಆಲೋಚನೆ ಮಾಡಿಲ್ಲ ಎಂದು ನನಗೆ ಅನಿಸುತ್ತಿದೆ. ಪಾನ್‌ ಮಸಾಲಾ ಶೇ 28ರಷ್ಟು ತೆರಿಗೆ ಪಟ್ಟಿಯಲ್ಲಿ, ಪಾನ್‌ (ಅಂದರೆ ವೀಳ್ಯದೆಲೆ) ಶೂನ್ಯ ತೆರಿಗೆ ಪಟ್ಟಿಯಲ್ಲಿ ಇವೆ. ಇವೆರಡೂ ಉತ್ತೇಜಿಸುವುದು ಒಂದೇ ಬಗೆಯ ಚಟವನ್ನು. ಹಾಗಾಗಿ ಇವೆರಡರಲ್ಲಿ ಒಂದು ಮಾತ್ರ ಆರೋಗ್ಯಕ್ಕೆ ಪೂರಕವಲ್ಲದ ವಸ್ತುವಾಗಿ ಪರಿಗಣಿತವಾಗಿದ್ದು ಹೇಗೆ ಎಂಬುದು ಅಸ್ಪಷ್ಟ.

ಜಿಎಸ್‌ಟಿ ವ್ಯವಸ್ಥೆಯಲ್ಲಿನ ತೆರಿಗೆ ಪ್ರಮಾಣದ ವರ್ಗೀಕರಣವು ತರ್ಕಬದ್ಧವಾಗಿ ಇದೆಯೇ ಇಲ್ಲವೇ ಎಂಬುದನ್ನು ಜನ ಆ ಪಟ್ಟಿಯನ್ನು ಪರಿಶೀಲಿಸಿ (cbec.gov.inನಂತಹ ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಇದು ಲಭ್ಯ) ತೀರ್ಮಾನಿಸಬಹುದು. ಇಂದಿನ ಸರ್ಕಾರವನ್ನು ದೂಷಿಸುವುದು ಇದರ ಉದ್ದೇಶವಲ್ಲ. ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳೂ ಸೇರಿದಂತೆ ಎಲ್ಲ ರಾಜ್ಯಗಳ ಸರ್ಕಾರಗಳು ಜಿಎಸ್‌ಟಿ ಮಂಡಳಿಯಲ್ಲಿ ಪ್ರಾತಿನಿಧ್ಯ ಹೊಂದಿವೆ. ವಸ್ತುಗಳನ್ನು ವರ್ಗೀಕರಣ ಮಾಡುವಾಗ, ಜನರನ್ನು ಗಂಭೀರವಾಗಿ ಪರಿಗಣಿಸದೆಯೇ, ಸೂಕ್ತ ಚರ್ಚೆ ನಡೆಸದೆಯೇ ತೀರ್ಮಾನಿಸಲಾಗುತ್ತಿದೆಯೇ ಎಂಬುದು ಇಲ್ಲಿರುವ ಪ್ರಶ್ನೆ. ಅಂಕಣಕಾರರು ಹಾಗೂ ಸ್ವತಂತ್ರ ಪತ್ರಕರ್ತರು ಸಂಪಾದಿಸುವ ಹಣಕ್ಕೆ ಜಿಎಸ್‌ಟಿ ಇಲ್ಲ ಎಂದು ಹೇಳಿ ನಾನು ಮಾತು ಮುಗಿಸುತ್ತೇನೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT