ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರ್ಕಾತೀತ ಉಪಾಯ

Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬ್ಬ ಮನುಷ್ಯನಿಗೆ ಭಾರಿ ಸಮಸ್ಯೆಯಾಯಿತು. ಒಂದು ದಿನ ಮಧ್ಯಾಹ್ನ ಮಲಗಿದ್ದ. ಸಾಮಾನ್ಯವಾಗಿ ಬಾಯಿ ತೆಗೆದುಕೊಂಡೇ ಮಲಗುವುದು ಅವನ ಅಭ್ಯಾಸ. ಅಂದು ಒಂದು ನೊಣ ಅವನ ಬಾಯಿಯನ್ನು ಸೇರಿಬಿಟ್ಟಿತು. ಅಂದಿನಿಂದ ಅವನಿಗೆ ಸದಾ ಅದರದೇ ಚಿಂತೆ. ಅದು ಅವನ ದೇಹದಲ್ಲೆಲ್ಲ ಓಡಾಡಿದಂತೆ ಭಾಸವಾಗುವುದು.

ಒಂದು ಕ್ಷಣ ಮಿದುಳಿನಲ್ಲಿದ್ದರೆ ಅದು ಸರಕ್ಕನೇ ಹಾರಿ ಹೃದಯಕ್ಕೆ ಬರುವುದು. ನಂತರ ರಕ್ತನಾಳಗಳಲ್ಲಿ ಸರಿದಾಡಿ ಪಾದದ ಬಳಿಗೆ ಬರುವುದು. ಈಗ ಆ ನೊಣ ದೇಹದ ಯಾವ ಭಾಗದಲ್ಲಿದೆ ಎಂಬುದನ್ನು ಗುರುತಿಸುವುದೇ ದೊಡ್ಡ ಕೆಲಸವಾಯಿತು ಆತನಿಗೆ. ಅವನನ್ನು ವೈದ್ಯರ ಬಳಿಗೆ ಕರೆದೊಯ್ದರು. ಅವರು, ‘ಇದೆಲ್ಲ ಭ್ರಾಂತಿ, ಬಾಯಿಯೊಳಗೆ ಸೇರಿಕೊಂಡ ನೊಣ ಇಷ್ಟು ದಿನ ಬದುಕೀತೇ?’ ಎಂದು ನಿರಾಕರಿಸಿದರು.

ಅವರನ್ನು ಮನಃಶಾಸ್ತ್ರಜ್ಞರ ಕಡೆಗೆ ಕರೆದುಕೊಂಡು ಹೋದರು. ಅವರು ಪರೀಕ್ಷೆ ಮಾಡಿ, ‘ಇದು ದೈಹಿಕ ಸಮಸ್ಯೆ ಅಲ್ಲವೇ ಅಲ್ಲ. ಕೇವಲ ಮಾನಸಿಕ ಸಮಸ್ಯೆ. ನಿಮ್ಮ ದೇಹದಲ್ಲಿ ನೊಣ ಇಲ್ಲ. ಅದು ಹೇಗೆ ರಕ್ತನಾಳಗಳಲ್ಲಿ, ಹೃದಯದಲ್ಲಿ, ಪುಪ್ಪುಸದಲ್ಲಿ ಓಡಾಡೀತು? ಈಗಾಗಲೇ ಘಟನೆ ನಡೆದು ಆರು ತಿಂಗಳಾಗಿದೆ. ಆದ್ದರಿಂದ ನಿಮ್ಮ ದೇಹದಲ್ಲಿ ನೊಣ ಇದೆ ಎಂಬುದನ್ನೇ ಮರೆತು ಬಿಡಿ’ ಎಂದರು. ಇದರಿಂದ ರೋಗಿಗೆ ಸಮಾಧಾನವಾಗುವುದರ ಬದಲು ಸಿಟ್ಟು ಬಂತು.

‘ನನ್ನ ದೇಹದಲ್ಲಿ ನೊಣ ಇದೆ, ಅದು ಎಲ್ಲೆಲ್ಲೂ ಓಡಾಡುತ್ತಿದೆ ಎಂಬ ಅನುಭವಕ್ಕಿಂತ ಅವರ ಪರೀಕ್ಷೆಯೇ ಹೆಚ್ಚಾಯಿತೇ? ನನ್ನ ಅನುಭವವನ್ನೇ ನಿರಾಕರಿಸುವ ವೈದ್ಯರ ಬುದ್ಧಿಯೇ ಸರಿಯಿಲ್ಲ’ ಎಂಬ ನಿರ್ಧಾರಕ್ಕೆ ಬಂದ. ತಿಂಗಳಿನಿಂದ ತಿಂಗಳಿಗೆ ಪರಿಸ್ಥಿತಿ ಬಿಗಡಾಯಿಸುತ್ತಲೇ ಹೋಯಿತು. ಅವನ ನಿದ್ರೆ ಮಾಯವಾಯಿತು, ಊಟದ ರುಚಿ ಕೆಟ್ಟು ಹೋಯಿತು.

ಪ್ರತಿ ಕ್ಷಣಕ್ಕೂ, ‘ನೊಣ ಅಲ್ಲಿದೆ, ನೊಣ ಇಲ್ಲಿದೆ’ ಎಂದು ಹುಡುಕಾಡುತ್ತಲೇ ಇರುತ್ತಿದ್ದ. ಕೊನೆಗೆ ಅವನನ್ನು ಒಬ್ಬ ಸಂತನ ಕಡೆಗೆ ಕರೆದು ತಂದರು. ರೋಗಿಗೆ ಅಷ್ಟೇನೂ ಉತ್ಸಾಹವಿರಲಿಲ್ಲ. ದೊಡ್ಡ ದೊಡ್ಡ ವೈದ್ಯರಿಂದಾಗದ್ದು ಈ ಸನ್ಯಾಸಿಯಿಂದ ಆದೀತೇ ಎಂದು ಯೋಚಿಸುತ್ತಿದ್ದ. ಸನ್ಯಾಸಿ ಈತನನ್ನು ಒಂದು ಮಂಚದ ಮೇಲೆ ಮಲಗಿಸಿದರು. ಆತನ ಕಣ್ಣಿಗೆ ಬಟ್ಟೆ ಕಟ್ಟಿದರು. ಅವನ ಪಕ್ಕದಲ್ಲಿ ಕುಳಿತು, ‘ಈಗ  ನೊಣ ಎಲ್ಲಿದೆ ಹೇಳಿ?’ ಎಂದು ಕೇಳಿದರು.

ಆತ ತಕ್ಷಣ ‘ಅದು ಮಿದುಳಿನಲ್ಲಿ ಓಡಾಡುತ್ತಿದೆ. ಈಗ ಅದು ನಿಧಾನಕ್ಕೆ ಸರಿದು ಹೊಟ್ಟೆಯ ಭಾಗಕ್ಕೆ ಬರುತ್ತಿದೆ’ ಎಂದ. ಸನ್ಯಾಸಿ ಅವನ ಹೊಟ್ಟೆಯ ಮೇಲೆ ಕೈಯಿಟ್ಟು, ‘ಹೌದು, ನೊಣ ಇಲ್ಲಿಯೇ ಇದೆ. ಅದು ಸರಿದಾಡುತ್ತಿದೆ’ ಎಂದರು. ರೋಗಿಗೆ ಸಂತೋಷ, ಆಶ್ಚರ್ಯ ಎರಡೂ ಆದವು. ಥಟ್ಟನೇ ಎದ್ದು ಕುಳಿತು ಹೆಂಡತಿಗೆ ಹೇಳಿದ, ‘ಇವರೇ ಸರಿಯಾದ ವೈದ್ಯರು. ಅವರಿಗೆ ನೊಣ ಇರುವುದು ಗೊತ್ತಾಗಿದೆ.

ಉಳಿದವರೆಲ್ಲ ಮೂರ್ಖರು, ನನ್ನ ಮಾತನ್ನೇ ಕೇಳುತ್ತಿರಲಿಲ್ಲ’. ಸನ್ಯಾಸಿ ಹೇಳಿದರು, ‘ನಿಮ್ಮ ಮಾತು ಸತ್ಯ. ನೊಣ ಬದುಕಿದೆ. ಅಷ್ಟೇ ಅಲ್ಲ ಅದು ಈಗ ಹೊಟ್ಟೆಯ ಭಾಗದಲ್ಲಿ ಕುಳಿತಿದೆ. ನೀವು ದಯವಿಟ್ಟು ಗಟ್ಟಿಯಾಗಿ ಕಣ್ಣುಮುಚ್ಚಿ ಮಲಗಿಕೊಳ್ಳಿ. ನಾನು ಆ ನೊಣವನ್ನು ಐದೇ ನಿಮಿಷದಲ್ಲಿ ಹೊರಗೆ ತೆಗೆದು ಬಿಡುತ್ತೇನೆ’.

ಆತ ಮಲಗಿದ. ಅವನ ಹೊಟ್ಟೆಯ ಮೇಲೆ ಸನ್ಯಾಸಿ ಕೈ ಇಟ್ಟು ಕುಳಿತರು. ತಮ್ಮ ಶಿಷ್ಯನಿಗೆ ಸನ್ನೆ ಮಾಡಿ ಮೊದಲೇ ಒಂದು ನೊಣವನ್ನು ಹಿಡಿದಿಟ್ಟಿದ್ದ ಬಾಟಲಿಯನ್ನು ಇಸಿದುಕೊಂಡರು. ನಂತರ ರೋಗಿಗೆ ಅಗಲವಾಗಿ ಬಾಯಿ ತೆರೆಯುವಂತೆ ಹೇಳಿ ಹೊಟ್ಟೆಯನ್ನು ಮೇಲ್ಮುಖವಾಗಿ ಒತ್ತುತ್ತ ಬಂದರು. ಜೋರಾಗಿ ಬಾಯಿಯಿಂದ ಉಸಿರು ಬಿಡಿ ಎಂದು ಕೂಗಿದರು.

ಆತ ಉಸಿರು ಬಿಟ್ಟೊಡನೆ ಜೋರಾಗಿ ‘ಬಂತು, ಬಂತು, ನೊಣ ಬಂತು’ ಎಂದು ಹೇಳಿ ಅವನ ಕಣ್ಣು ಬಿಚ್ಚಿ ಬಾಟಲಿಯಲ್ಲಿಯ ನೊಣವನ್ನು ತೋರಿದರು. ಅವನಿಗೆ ಭಾರಿ ಸಂತೋಷವಾಯಿತು. ಮುಂದೆಂದೂ ನೊಣ ಅವನನ್ನು ಕಾಡಲಿಲ್ಲ. ಅದೊಂದು ಉಪಾಯ. ಮನಸ್ಸಿನ ರೋಗಕ್ಕೆ ಮನಸ್ಸಿಗೇ ಚಿಕಿತ್ಸೆ ನೀಡಬೇಕು. ಅಲ್ಲಿ ತರ್ಕಕ್ಕೆ ಅವಕಾಶವಿಲ್ಲ. ಮೊದಲು ನಂಬಿಕೆಯನ್ನು ಪಡೆದು ಅದರ ಮೂಲಕವೇ ಪರಿಣಾಮವನ್ನುಂಟು ಮಾಡಬೇಕು. ಬಹುಶಃ ಅದಕ್ಕೇ ಇರಬೇಕು, ಎಷ್ಟೋ ವೈದ್ಯಕೀಯ ಪ್ರಯೋಗಗಳು ನೀಡದ ಫಲವನ್ನು ಧಾರ್ಮಿಕ ಕ್ರಿಯೆಗಳು ನೀಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT