ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಡೂಲ್ಕರ್ ನಿವೃತ್ತಿಯಾದರೆ ಪ್ರಳಯ ಆಗುವುದಿಲ್ಲ

Last Updated 30 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಇಂದು ವರ್ಷದ ಕೊನೆಯ ದಿನ. ಚುಟುಕು ಕ್ರಿಕೆಟ್‌ನಂತೆ ದಿನಗಳು ಉರುಳುತ್ತಿವೆ. ದೇಶದಲ್ಲಿ ಯಾವ ಕ್ರೀಡಾಪಟುವಿಗೂ ಸಿಗದ ಸಕಲ ವೈಭೋಗಗಳಲ್ಲಿ ಮೆರೆಯುವ ಭಾರತದ ಕ್ರಿಕೆಟ್‌ಪಟುಗಳಿಗೆ, 2012 ಈ ರೀತಿ ಅಂತ್ಯಗೊಳ್ಳುವ ನಿರೀಕ್ಷೆ ಇರಲಿಲ್ಲ. ಸಚಿನ್ ತೆಂಡೂಲ್ಕರ್ ಅವರಿಗೂ ತಾವು ಒಂದು ದಿನದ ದಿಢೀರ್ ಕ್ರಿಕೆಟ್‌ನಿಂದ ನಿವೃತ್ತಿಯಾಗಬೇಕಾಗಬಹುದು ಎಂಬ ಕಲ್ಪನೆ ಇದ್ದಿರಲಿಕ್ಕಿಲ್ಲ.

ಅವರು ಕ್ರಿಕೆಟ್‌ನ ದೇವರಲ್ಲವೇ! ಅವರನ್ನು ಯಾರಾದರೂ ಬೈಯಲು ಅಥವಾ ಟೀಕಿಸಲು ಸಾಧ್ಯವೇ? ವಯಸ್ಸು 40 ಸಮೀಪಿಸುತ್ತಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಅವರ ಆಟದಲ್ಲಿ ಸೊಗಸು ಕಡಿಮೆಯಾಗಿರುವುದರಿಂದ ಅವರು ನಿವೃತ್ತಿಯಾಗಬೇಕು ಎಂದು ಅವರ ಅಭಿಮಾನಿಗಳ ಮುಂದೆ ಹೇಳಿದರೆ ನೀವು ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತೀರಿ. ದೇವರು ಮೌನಿಯಲ್ಲವೇ? ಹಾಗೆಯೇ ಸಚಿನ್ ಕೂಡ ಜಾಣ ಮೌನದಿಂದಲೇ ಇದ್ದವರು.
 
ನಾನಿಲ್ಲಿ ಸಚಿನ್ ಅವರನ್ನು ಬೈಯುತ್ತಿಲ್ಲ ಅಥವಾ ಯಾವುದೇ ಅಸೂಯೆಯಿಂದ ಟೀಕಿಸುತ್ತಿಲ್ಲ. ಎರಡು ದಶಕಗಳ ಕಾಲ ಅವರ ಆಟವನ್ನು ಆನಂದಿಸಿದವನು. ಅವರು ಆಡಿರುವ ಟೆಸ್ಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳ ವರದಿ ಮಾಡಿದವನು. ಅವರ ನಗುಮುಖದಲ್ಲಿನ ವಿಶ್ವಾಸವನ್ನು ಮೆಚ್ಚಿಕೊಂಡವನು. ಅವರ ಬಾಲ್ಯದ ಗೆಳೆಯ, ಆಟಗಾರ ವಿನೋದ್ ಕಾಂಬ್ಳಿ ಅವರಿಗಿಂತ ಹೆಚ್ಚು ವರ್ಷ ಸಚಿನ್ ಆಡುತ್ತಾರೆ ಎಂದು ಬಹಳ ಹಿಂದೆಯೇ ಹೇಳಿದವನು.2011 ರ ವಿಶ್ವ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಎಲ್ಲ ಪಂದ್ಯಗಳನ್ನು ವರದಿ ಮಾಡುವಾಗ ಅವರ ಆಟವನ್ನು ವಿಶೇಷ ಆಸಕ್ತಿಯಿಂದ ಗಮನಿಸಿದವನು. ಅವರ ಕ್ರಿಕೆಟ್ ದಿನಗಳು ಮುಗಿಯುತ್ತಿವೆ ಎಂಬ ಅನಿಸಿಕೆ ಮೂಡಿತ್ತು.
 
ಆದರೆ ಅವರು ಆಡುವುದನ್ನು ಬಿಡಲಿಲ್ಲ. ತಾನಿರುವ ಭಾರತ ತಂಡ ವಿಶ್ವ ಕಪ್ ಗೆಲ್ಲಬೇಕೆಂಬ ಅವರ ಕನಸೂ ನನಸಾಯಿತು. ಟೆಸ್ಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳೆರಡೂ ಸೇರಿ `ನೂರನೇ ಶತಕ' ಗಳಿಸುವ ಗುರಿಯೂ ಈಡೇರಿತು. (ಅದು ಬಾಂಗ್ಲಾದೇಶ ವಿರುದ್ಧ ಬಂದರೇನಂತೆ, ಶತಕ ಶತಕವೇ). ಅವರು ಸತತವಾಗಿ ವಿಫಲವಾಗತೊಡಗಿದಾಗ, `ಸಚಿನ್ ಸಾಕಿನ್ನು' ಎಂಬ ಗುಸುಗುಸು ಕೇಳಿಬಂತೇ ಹೊರತು ಯಾರೊಬ್ಬರೂ ಎಂದರೆ ಕ್ರಿಕೆಟ್ ಪಂಡಿತರು ಗಟ್ಟಿಯಾಗಿ ಏನೂ ಹೇಳಲಿಲ್ಲ. ಹೇಳಲು ಹೊರಟವರ ದನಿ ಅಡಗಿಸುವ ಯತ್ನಗಳು ನಡೆದವು.

ಸಚಿನ್ ವಿರುದ್ಧ ಮಾತನಾಡುವವರು ಕ್ರಿಕೆಟ್‌ದ್ವೇಷಿಗಳು ಎಂದರು. ರಾಹುಲ್ ದ್ರಾವಿಡ್ ಹಾಗೂ ವಿ.ವಿ.ಎಸ್. ಲಕ್ಷ್ಮಣ್ ನಿವೃತ್ತಿಯಾದಾಗ, `ಚೆನ್ನಾಗಿ ಆಡುತ್ತಿರುವಾಗಲೇ ನಿವೃತ್ತಿಯಾಗುವುದು ಸೂಕ್ತ ನಿರ್ಧಾರ' ಎಂದು ಹೊಗಳಿದವರೇ ಸಚಿನ್ ಮೇಲೆ ಯಾಕೋ ಕುರುಡುಪ್ರೇಮ ತೋರಿಸುತ್ತಿದ್ದಾರೆ ಎಂದೆನಿಸುತ್ತದೆ. ಸಚಿನ್ ನಿವೃತ್ತಿಯಾದರೆ ಭಾರತ ಕ್ರಿಕೆಟ್‌ನಲ್ಲಿ ಯಾವ ಪ್ರಳಯವೂ ಆಗುವುದಿಲ್ಲ.
 
ಸಚಿನ್ ಅಸಾಮಾನ್ಯ ಆಟಗಾರರಲ್ಲಿ ಅದ್ವಿತೀಯ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಾಗೆಂದು ಅವರು ಆಟದಿಂದ ನಿವೃತ್ತಿಯಾಗಲೇಬಾರದೇ? ಅವರು ಇನ್ನೂ ಎಷ್ಟು ದಿನ ಆಡಬಹುದಿತ್ತು? ಈಗಲೂ ಅವರು ಟೆಸ್ಟ್ ಆಟಕ್ಕೆ ವಿದಾಯ ಹೇಳಿಲ್ಲ. ಮುಂಬರುವ ಸರಣಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಒಂದು ಕೈ ನೋಡೇಬಿಡೋಣ ಎಂಬ ಹುಮ್ಮಸ್ಸು ಅವರಲ್ಲಿದ್ದಂತಿದೆ. ಆಸ್ಟ್ರೇಲಿಯ ವಿರುದ್ಧ ಆಡುವುದು ನಿಜಕ್ಕೂ ದೊಡ್ಡ ಸವಾಲು. ನಾಲ್ಕು ಟೆಸ್ಟ್‌ಗಳ ಆ ಸರಣಿಯಲ್ಲಿ ಅವರು ಒಂದೆರಡು ಶತಕಗಳನ್ನು ಹೊಡೆದರೆ, ಅವರನ್ನು 200 ಟೆಸ್ಟ್ (ಈಗವರು 194 ಟೆಸ್ಟ್ ಆಡಿದ್ದಾರೆ) ಆಡುವವರೆಗೂ ತಂಡದಲ್ಲಿ ಉಳಿಸಿಕೊಳ್ಳುವುದರಲ್ಲಿ ಯಾವ ತಪ್ಪೂ ಕಾಣುವುದಿಲ್ಲ. ಅವರು ವಿಫಲರಾದರೆ ಎಲ್ಲರೂ ಮೈಮೇಲೆ ಬೀಳುವ ಪ್ರಸಂಗ ಎದುರಾಗುತ್ತದೆ.
 
ಕ್ರಿಕೆಟ್‌ನಲ್ಲಿ ಎಲ್ಲವನ್ನೂ ಸಾಧಿಸಿರುವ ಸಚಿನ್ ಅವರಂಥ ಆಟಗಾರ ನಿವೃತ್ತಿಯ ವಿಷಯದಲ್ಲಿ  ತಪ್ಪು ನಿರ್ಧಾರ ತೆಗೆದುಕೊಳ್ಳಬಾರದು. ಅವರು ಔಟಾಗಬಾರದ ರೀತಿಯಲ್ಲಿ ಔಟ್ ಆದಾಗ ಮನಸ್ಸಿಗೆ ಕಿರಿಕಿರಿಯಾಗುತ್ತದೆ. ಅವರ ಮೇಲೆ ಅಪಾರ ಅಭಿಮಾನ ಮತ್ತು ನಿರೀಕ್ಷೆ ಇಟ್ಟುಕೊಂಡಿದ್ದರಿಂದಲೇ ನೋವು ಹೆಚ್ಚಾಗುತ್ತದೆ. ಭಾರತದ ಕ್ರಿಕೆಟ್‌ನಲ್ಲಿ ಮತ್ತೊಬ್ಬ ಸಚಿನ್ ಬರಬಾರದೆಂದೇನೂ ಇಲ್ಲ. ಅವರ ಮಗನೇ ಅಪ್ಪನ ಸಾಧನೆ ಮೀರಿ ನಿಲ್ಲಬಹುದಲ್ಲವೇ? ಆದರೆ ಸಚಿನ್ ಅವರ ಎಲ್ಲ ದಾಖಲೆಗಳನ್ನು ಮುರಿಯುವ ಆಟಗಾರನನ್ನು ನನ್ನ ಪೀಳಿಗೆಯ ಜನರಂತೂ ನೋಡುವುದಿಲ್ಲ ಎಂಬುದಂತೂ ಖಾತ್ರಿ. ಆದರೆ ಸದ್ಯಕ್ಕೆ ಸಚಿನ್ ಅವರಂತೆಯೇ ರನ್ ಗಳಿಸುವ ಬ್ಯಾಟ್ಸಮನ್ ಒಬ್ಬ ಬೇಕಿರುವುದಂತೂ ನಿಜ. ಸೂಕ್ತ ಅವಕಾಶ ಕೊಟ್ಟರೆ ಚೇತೇಶ್ವರ ಪೂಜಾರ ಅವರಂತೆಯೇ ಮತ್ತೊಬ್ಬ ಬ್ಯಾಟ್ಸಮನ್ ಸಿಕ್ಕೇಸಿಗುತ್ತಾನೆ.
 
ನಿವೃತ್ತಿಯೆಂಬುದು ಜೀವನದ ಅಂತ್ಯವೇನೂ ಅಲ್ಲ. `ಕಣ್ಣಿಗೆ ಕಾಣುವುದು ಮಾರಾಟವಾಗುತ್ತದೆ' ಎಂದು ಮಾರುಕಟ್ಟೆಯಲ್ಲಿ ಹೇಳುವಂತೆ ಸಚಿನ್ ಈಗ ನಿವೃತ್ತರಾದರೆ ಅವರ ಜಾಹೀರಾತು ಆದಾಯ ಕಡಿಮೆಯಾಗಬಹುದಷ್ಟೇ. ಅಭಿಮಾನಿಗಳು ಅವರ ಮೇಲಿಟ್ಟಿರುವ ಪ್ರೀತಿ ಎಂದೂ ಕಡಿಮೆಯಾಗುವುದೇ ಇಲ್ಲ. ಕ್ರಿಕೆಟ್ ಮಾತು ಬಂದಾಗಲೆಲ್ಲ ಅವರು `ನಮ್ಮ ಸಚಿನ್' ಎಂದೇ ನೆನಪಾಗುತ್ತಾರೆ. ಈಗಂತೂ ಮಾಜಿ ಆಟಗಾರರಿಗೆಲ್ಲ ಟಿವಿಯಲ್ಲಿ ವೀಕ್ಷಕ ವಿವರಣೆಗಾರರಾಗುವ, ಕ್ರಿಕೆಟ್ ಅಕಾಡೆಮಿಗಳಲ್ಲಿ ತರಬೇತುದಾರರಾಗುವ, ರಾಜ್ಯ ಸಂಸ್ಥೆಗಳ ಪದಾಧಿಕಾರಿಗಳಾಗುವ ಅವಕಾಶಗಳಿವೆ. ಮೋಜಿನಾಟದ ಐಪಿಎಲ್ ಅಂತೂ ಇದ್ದೇ ಇದೆ. ಇವುಗಳಿಗೆಲ್ಲ `ಕ್ರಿಕೆಟ್ ಸೇವೆ' ಎಂದು ಕರೆಯುತ್ತಾರೆ! ಭಾರತದ ಕ್ರಿಕೆಟ್‌ನಲ್ಲಿ ಹಣ ತುಂಬಿತುಳುಕುತ್ತಿರುವುದರಿಂದ ಖ್ಯಾತ ಆಟಗಾರರೆನಿಸಿಕೊಂಡವರು ಖಾಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. 
 
ಕಳೆದ ವಾರ ಹುಬ್ಬಳ್ಳಿಯಲ್ಲಿ ಕರ್ನಾಟಕ ಹರಿಯಾಣ ನಡುವೆ ರಣಜಿ ಟ್ರೋಫಿ ಪಂದ್ಯ ನಡೆಯುತ್ತಿದ್ದಾಗ ಸ್ನೇಹಿತರೊಬ್ಬರು, `ದೋನಿ 2015 ರ ವಿಶ್ವ ಕಪ್ ವರೆಗೆ ತಂಡದ ನಾಯಕರಾಗಿ ಅಥವಾ ಆಟಗಾರನಾಗಿ ಮುಂದುವರಿಯುತ್ತಾರೆಯೇ' ಎಂದು ಕೇಳಿದರು. `ಅದು ಗೊತ್ತಿಲ್ಲ, ಆದರೆ ಅವರ ತಲೆ ಹಾರಿಸುವ ಕತ್ತಿ ಮಾತ್ರ ತಯಾರಾಗುತ್ತಿದೆ' ಎಂದು ವಿನೋದವಾಗಿ ಹೇಳಿದೆ. ಬೇರೆ ತಂಡಗಳು ಟೆಸ್ಟ್ ಮತ್ತು ನಿಗದಿಯ ಓವರುಗಳ ಪಂದ್ಯಗಳಿಗೆ ಬೇರೆ ಬೇರೆ ನಾಯಕರನ್ನು ಆಡಿಸಿ ಯಶಸ್ವಿಯಾಗಿವೆ. ಭಾರತ ತಂಡದಲ್ಲೂ ಅಂಥ ಪ್ರಯೋಗ ಆದರೆ ದೋನಿಗೆ ಒಳ್ಳೆಯದಾಗಬಹುದು.

ಅಂದರೆ ಅವರನ್ನು ಟೆಸ್ಟ್ ಪಂದ್ಯದ ಒತ್ತಡದಿಂದ ಬಿಡಿಸಿ, ಬರೀ ನಿಗದಿಯ ಓವರುಗಳ ಪಂದ್ಯಗಳಿಗೆ ನಾಯಕನನ್ನಾಗಿ ಮಾಡಿದರೆ, ಅವರು ಇನ್ನೂ ಎರಡು ವರ್ಷ ಚೆನ್ನಾಗಿ ಆಡಿ, ಭಾರತ ವಿಶ್ವ ಕಪ್ ಉಳಿಸಿಕೊಳ್ಳುವ ಯತ್ನಕ್ಕೆ ಕೈಹಾಕಬಹುದು. ಇಲ್ಲದಿದ್ದರೆ ಆಸ್ಟ್ರೇಲಿಯ ವಿರುದ್ಧ ಅವರು ಪರದಾಡುವ ಸ್ಥಿತಿ ಎದುರಾಗಬಹುದು. ಒಮ್ಮೆ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡರೆ ಅದರಿಂದ ಹೊರಬರುವುದು ಕಷ್ಟ. ಯಾಕೆಂದರೆ ಎಲ್ಲರೂ ಸೇರಿ ಕೆಳಗೆ ದೂಡುತ್ತಲೇ ಇರುತ್ತಾರೆ. ನಾಯಕತ್ವ ಹೋಗಲಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದೇ ಕಷ್ಟವಾಗಬಹುದು. ನಾಯಕನೂ ತಂಡದ ಒಬ್ಬ ಆಟಗಾರನೇ ಆಗಿರುವುದರಿಂದ, ಆತ ತಂಡದ ಯಶಸ್ಸಿನ ಜೊತೆ ಸ್ವತಃ ರನ್ ಗಳಿಸಬೇಕಾಗುತ್ತದೆ. ಇದಕ್ಕೆ ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧದ 50 ಓವರುಗಳ ಪಂದ್ಯಗಳ ಸರಣಿಯಲ್ಲಿ ಉತ್ತರ ಸಿಗಬಹುದು.
 
ಕ್ರೀಡೆಯಲ್ಲಿ ಸೋಲು-ಗೆಲುವು ಇದ್ದದ್ದೇ ಎಂಬುದು ಇಂದು ಕ್ಲೀಷೆಯಾಗಿದೆ. ನೀವು ಹೇಗೆ ಗೆಲ್ಲುತ್ತೀರಿ ಮತ್ತು ಹೇಗೆ ಸೋಲುತ್ತೀರಿ ಎಂಬುದು ಮುಖ್ಯವಾಗುತ್ತದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹಾಗೂ ಪಾಕಿಸ್ತಾನ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಅದರ ಕಾಗದದ ಖ್ಯಾತಿಗೆ ತಕ್ಕಂತಿರಲಿಲ್ಲ. ಆಟಗಾರರ ಮನೋಭಾವವೇ ಬದಲಾದಂತಿದೆ. ಹರಿಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಆಟಗಾರರ ಮನೋಭಾವವೂ ಹಾಗೆಯೇ ಇತ್ತು. ಅಂದರೆ ಎಲ್ಲರಿಗೂ ಐಪಿಎಲ್‌ನಲ್ಲಿ ಆಡುವುದೊಂದೇ ಪರಮೋಚ್ಚ ಗುರಿಯಾದಂತಿದೆ.

ಅದರಲ್ಲಿ ಕೋಟಿಗಟ್ಟಲೇ ಹಣ ಸಂಪಾದಿಸಬಹುದು. ಇದರಿಂದಾಗಿ ಅವರೆಲ್ಲರೂ 20 ಓವರುಗಳ ಆಟಕ್ಕೆ ತಮ್ಮ ಮನೋಭಾವವನ್ನು ಹೊಂದಿಸಿಕೊಂಡುಬಿಟ್ಟಿದ್ದಾರೆ. ಇದಕ್ಕೆ ಆಟಗಾರರಷ್ಟೇ ಕಾರಣರಲ್ಲ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೇ ಮೂಲ ಅಪರಾಧಿ. ಹಣಕ್ಕಾಗಿ ಕ್ರಿಕೆಟ್ ಆಟವನ್ನು ಸಂಪೂರ್ಣವಾಗಿ ಮಾರಿಬಿಟ್ಟಿರುವ ಮಂಡಳಿ ಉತ್ತಮ ಕ್ರಿಕೆಟ್‌ನ ಯೋಚನೆಯನ್ನೇ ಮಾಡುತ್ತಿಲ್ಲ. ಟೆಸ್ಟ್ ಕ್ರಿಕೆಟ್ ಮಾತ್ರ ಪರಿಪೂರ್ಣ ಆಟ ಎಂಬುದನ್ನು ಎಲ್ಲರೂ ಮರೆತುಹೋಗಿದ್ದಾರೆ. ಆದರೆ ಕುರುಡು ಕಾಂಚಾಣ ಕುಣಿಯುತ್ತಿರುವಾಗ ಅವನತಿ ಯಾರ ಕಣ್ಣಿಗೂ ಬೀಳುವುದಿಲ್ಲ. 
 
ನಾಳೆಯಿಂದ ಹೊಸ ವರ್ಷ ಆರಂಭ. ಒಂದು ದಿನದ ಕ್ರಿಕೆಟ್ ಸಾಕೆಂದಿರುವ ನಮ್ಮ ಸಚಿನ್‌ಗೆ ಸಂತೋಷದಿಂದ ಸಲಾಮ್ ಹೊಡೆಯುತ್ತೇನೆ. 2013ರಲ್ಲಿ ಉಳಿದಿರುವ ಅವರ ಟೆಸ್ಟ್ ಜೀವನಕ್ಕೆ ಶುಭ ಹಾರೈಸೋಣ. ಹಾಗೆಯೇ ವರ್ಷದ ಕೊನೆಯಲ್ಲಿ ವಿಶ್ವ ಕಪ್ ಗೆದ್ದು ಮನಸ್ಸಿಗೆ ಮುದ ನೀಡಿದ ಭಾರತದ ಅಂಧರ ಕ್ರಿಕೆಟ್ ತಂಡಕ್ಕೆ ಹಾರ್ದಿಕ ಶುಭಾಶಯಗಳು. 2011 ರಲ್ಲಿ ವಿಶ್ವ ಕಪ್ ಗೆದ್ದ ದೋನಿ ತಂಡದ ಆಟಗಾರರಿಗೆ ಇಡೀ ದೇಶವೇ ಬಹುಮಾನಗಳ ಮಳೆ ಸುರಿಸಿತ್ತು. ಅಷ್ಟು ಬೇಡ. ಶೇಕಡಾ ಒಂದರಷ್ಟು ಬಹುಮಾನವನ್ನಾದರೂ 2012 ರಲ್ಲಿ ವಿಶ್ವ ಕಪ್ ಗೆದ್ದ ಅಂಧ ಕ್ರಿಕೆಟ್‌ಪಟುಗಳಿಗೆ ಕೊಟ್ಟರೆ ಅವರು ಧನ್ಯರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT